ಹಾಸ್ಯ ಬರಹ: ಗೌರಿ ಗಂಟೆ
ಅದು ಪಿಯುಸಿ ಕಲಿಕೆಯ ದಿನಗಳು, ಎಕಾನಾಮಿಕ್ಸ್ ಲೆಕ್ಚರರ್ ಪುಟ್ಟ ಸ್ವಾಮಿ ಹಳ್ಳಿ ಸೊಗಡಿನ ವಿಚಾರ ಹಾಗೂ ಉದಾರತೆಯ ಮನುಶ್ಯ. ಸಿಟ್ಟು ಸದಾ ಮೂಗಿನ ಮೇಲೆ. ಪಾಟವೇನೋ ಬಹಳ ಸಿನ್ಸಿಯರ್ ಆಗಿ ಮಾಡುತ್ತಾರೆ, ಆದರೆ ಕೇಳುವ ವಿದ್ಯಾರ‍್ತಿಗಳಿಗೆ ಮಾತ್ರ ಏನು ಸರಿಯಾಗಿ ಅರ‍್ತವಾಗುವುದಿಲ್ಲ ಅತವಾ ಅವರ ಪ್ರಕಾರ ಈ ವಿದ್ಯಾರ‍್ತಿಗಳಿಗೆ ಕಲಿಕೆಯಲ್ಲಿ ಸಿನ್ಸಿಯಾರಿಟಿ ಇಲ್ಲ. ಅವರ ನಲವತ್ತೈದು ನಿಮಿಶದ ಪೀರಿಯಡ್ಡಿನಲ್ಲಿ ಇಪ್ಪತ್ತು ನಿಮಿಶ ಉಡಾಳ ವಿದ್ಯಾರ‍್ತಿಗಳಿಗೆ ತಿದ್ದಿತೀಡುವ, ಬುದ್ದಿವಾದ ಹೇಳುವ, ಇಲ್ಲ ಉಗಿದು ಉಪ್ಪಿನಕಾಯಿ ಹಾಕುವುದಕ್ಕೆ ಮೀಸಲು. ಉಳಿದ ಮೂವತ್ತೈದು ನಿಮಿಶದಲ್ಲಿ ಹದಿನೈದು ನಿಮಿಶ ನೋಟ್ಸ್ ಬರೆಯುವುದಕ್ಕೆ ಮೀಸಲು. ಇನ್ನೂ ಇಪ್ಪತ್ತು ನಿಮಿಶದಲ್ಲಿ ಬ್ರಹ್ಮಾಂಡ ವಿಸ್ಮಯದ ಬೇಕುಬೇಡಗಳ, ಏರಿ ಇಳಿಯುವ ದೇಶ ವಿದೇಶಗಳ ಅರ‍್ತ ವ್ಯವಸ್ತೆಯ ಬಗ್ಗೆ ಅಸ್ತೆಯಿಂದ ಪಾಟ ಹೇಳುತ್ತಿದ್ದೇನೆ ಎಂದುಕೊಳ್ಳುತ್ತಾರೆ. ಆದರೆ ಕೇಳುವ ವಿದ್ಯಾರ‍್ತಿಗಳ ಅವ್ಯವಸ್ತೆ ಅವರ ಮುಕ ನೋಡಿದರೆ ತಿಳಿದು ಬಿಡುತಿತ್ತು. ಹಾಗಾಗಿ ಆ ತರಗತಿಯ ಎತ್ತರದ, ಬಲವಾದ ತೋಳಿನ, ಎದೆ ಸೀಳಿದರೆ ಎಕಾನಾಮಿಕ್ಸ್ ಗಂದವೆ ಸೂಸದ ವಿದ್ಯಾರ‍್ತಿ ಮಕ್ಕಳಿಗೆ ಎಕಾನಾಮಿಕ್ಸ್ ಪಿರಿಯಡ್ ಬೋರ್, ಎಕಾನಾಮಿಕ್ಸ್ ಲೆಕ್ಚರರ್ ಬಾಯಿ ತೆಗೆದರೆ ಇವರ ಕಣ್ಣು ಮುಚ್ಚುತಿತ್ತು.
ನಿದ್ದೆ ತಡೆಯುವ ಸಾಹಸದಲ್ಲಿ ಆಕಳಿಕೆ ದಾರಾಳವಾಗಿ ಸದ್ದು ಮಾಡುತಿತ್ತು, ಆಗಾ ಶಾಲಾ ಸಮಿತಿಯ ವೆಚ್ಚದಲ್ಲಿ(ಅಲ್ಲಲ್ಲ.. ಮಕ್ಕಳು ಪೀಸು ತುಂಬಿದ ಹಣದಲ್ಲಿ) ತಂದ ಚಾಕ್ ಪೀಸ್, ಪೀಸ್ ಪೀಸ್ ಮಾಡಿ ಗೂಗ್ಲಿ ಬಾಲಿನಂತೆ ನೂರಿನ್ನೂರು ಕಿಲೋಮೀಟರ್ ಸ್ಪೀಡ್ನಲ್ಲಿ ರಪ್ ಅಂತ ನಿದ್ದೆ ಮಾಡುವ, ತೂಕಡಿಸುವ, ಆಕಳಿಸುವ ವಿದ್ಯಾರ‍್ತಿ ಮಕ್ಕಳ ತಲೆಗೆ ರಾಚುತಿತ್ತು. ಅವರನ್ನು ಎಬ್ಬಿಸಿ ಇನ್ನಿಲ್ಲದ ಅರ‍್ತ ಶಾಸ್ತ್ರದ ಅನರ‍್ತ ಪ್ರಶ್ನೆಗಳನ್ನು ಕೇಳಿ ಅವಮಾನಿಸುತ್ತಿದ್ದರು. ಅವರ ಬರೆಯದೆ ಅಪೂರ‍್ಣಗೊಳಿಸಿದ ಇಂಗ್ಲೀಶ್ ಅಂದುಕೊಂಡ ಕಂಗ್ಲೀಶ್ ನೋಟ್ಸ್ಗಳನ್ನು ಕಂಡು ಕೆಂಡಮಂಡಲರಾಗಿ “ವಾಟ್ ಈಸ್ ದಿಸ್?” ಎಂದು ನೋಟ್ ಬುಕ್ಕನ್ನು ಪ್ಲೈಯಿಂಗ್ ಸಾಸರ್ ತರ ರೊಯ್ ಎಂದು ಹೊರಕ್ಕೆ ಎಸೆಯುತಿದ್ದರು. ಒಟ್ಟಾರೆಯಾಗಿ ಉಡಾಳ ವಿದ್ಯಾರ‍್ತಿ ಮಕ್ಕಳಿಗೂ ಇವರ ಪೀರಿಯಡ್ ಎಂದರೆ ತಲೆನೋವು, ಲೆಕ್ಚರರ‍್ಗೂ ಅವರ ಪೀರಿಯಡ್ ನಲ್ಲಿ ಇವರನ್ನು ಎದುರಿಸಿವುದು ದೊಡ್ಡ ಕಿರಿಕಿರಿ.
ಅಂದು ಬೆಳಿಗ್ಗೆ ಮೊದಲ ಕ್ಲಾಸೆ ಎಕಾನಾಮಿಕ್ಸ್, ಅವತ್ತೆ ಉಡಾಳ ವಿದ್ಯಾರ‍್ತಿ ವೀರಣ್ಣನ ಮನೆಯ ಕೊಟ್ಟಿಗೆಯಲ್ಲಿ ತನ್ನ ಹಸು ಗೌರಿ ಕುತ್ತಿಗೆಗೆ ಕಟ್ಟಿದ ಸದ್ದು ಮಾಡುವ ಗಂಟೆ ಗೆಜ್ಜೆ ಬಿಚ್ಚಿತ್ತು ಅದನ್ನು ಮರೆತು ತನ್ನ ಪ್ಯಾಂಟ್ ಜೇಬಲ್ಲಿ ಇಟ್ಟುಕೊಂಡು ತರಗತಿಗೆ ಹಾಜಾರಾಗಿದ್ದ. ಅಕಸ್ಮಾತ್ ಆ ಗಂಟೆ ಇತರ ಉಡಾಳ ವಿದ್ಯಾರ‍್ತಿ ಮಕ್ಕಳ ಕೈಗೆ ಸಿಕ್ಕಿ ಅವರಿಗೊಂದು ಕಿಣಿ ಕಿಣಿ ನಾದ ಹೊಮ್ಮಿಸುವ ಅಸ್ತ್ರವಾಗಿತ್ತು. ಅಶ್ಟರಲ್ಲೆ ಎಕಾನಾಮಿಕ್ಸ್ ಲೆಕ್ಚರರ್ ಪುಟ್ಟಸ್ವಾಮಿಯವರು ತರಗತಿಗೆ ಎಂಟ್ರಿ ಕೊಟ್ರು. ಇಡೀ ತರಗತಿಯೇ ಗಂಬೀರ ಮೌನಕ್ಕೆ ತಿರುಗಿತು. ಮುಕದಲ್ಲಿ ಕೊಂಚ ಸಿಟ್ಟೂ ಇತ್ತು. ಉಡಾಳ ವಿದ್ಯಾರ‍್ತಿ ಮಕ್ಕಳು “ಬಹುಶಹ ಇವತ್ತು ಮನೆಯಲ್ಲಿ ಹೆಂಡ್ತಿ ನಾಶ್ಟ ಮಾಡಿ ಹಾಕಿರಲಿಕ್ಕಿಲ್ಲ ಅದಕ್ಕೆ ಸೆಟುಗೊಂಡಿದ್ದಾರೆ” ಎಂದು ಪಿಸಿ ಪಿಸಿ ಮಾತನಾಡತೊಡಗಿದರು. ಈ ಪಿಸಿ ಪಿಸಿ ಮಾತಿನಿಂದ ಮತ್ತಶ್ಟು ಸಿಟ್ಟಿಗೆದ್ದ ಲೆಕ್ಚರರ್ “ಯಾವನವನು ಪಿಸಿ ಪಿಸಿ ಮಾತಾಡೋನು ಗೆಟ್ ಔಟ್ ಪ್ರಂ ಮೈ ಕ್ಲಾಸ್ ಎಂದು ಗುಡುಗುತ್ತ ಒಂದೆರಡು ಟೇಬಲ್ ದಾಟಿದ್ದರು ಅಶ್ಟೇ, ಹಿಂದುಗಡೆ ಬೆಂಚಿಂದ ಅದ್ಯಾರ‍್ದೋ ಕೈಯಲ್ಲಿ ಇದ್ದ ಗಂಟೆ ಕಿಣಿ ಕಿಣಿ ಎಂದು ಸದ್ದು ಮಾಡಿತು, ಇಡೀ ತರಗತಿಯೇ ಮೌನವಾಗಿದ್ದಾಗ ಆ ಸದ್ದು ಕಿವಿಗೆ ಅವಡುಗಚ್ಚುವಂತಿತ್ತು. ಇದರಿಂದ ಸಂಪೂರ‍್ಣ ರಾವಾಣಾಸುರನ ರೂಪ ತಾಳಿದ ಲೆಕ್ಚರರ್ “ಯಾವನೋ ಅವನು ಬ್ಲಡಿ ಬಾಸ್ಟರ‍್ಡ” ಎಂದು ಹಿಂದುಗಡೆ ವಿದ್ಯಾರ‍್ತಿಗಳ ಬೆಂಚಿನತ್ತ ನುಗ್ಗಿದರು. ಆ ಬೆಂಚಿನವರು ಅಂಜಿ ಅದನ್ನು ಮುಂದಿನ ಬೆಂಚಿಗೆ ದಾಟಿಸಿದರು ಅಲ್ಲಿಯೂ ಗಡಿಬಿಡಿಯಲ್ಲಿ ಕಿಣಿಕಿಣಿ ಸದ್ದಾಯ್ತು. ಇದರಿಂದ ಮತ್ತೂ ಹುಚ್ಚರಂತಾದ ಲೆಕ್ಚರರ್ ಸಾಹೇಬರು ಸದ್ದು ಬಂದ ಬೆಂಚಿನತ್ತ ದಾವಿಸಿ ಬರುವವರೆಗೆ ವಿದ್ಯಾರ‍್ತಿ ಮಕ್ಕಳು ಅದನ್ನು ಮುಂದಿನ ಬೆಂಚಿಗೆ ಸಾಗ ಹಾಕಿದರು. ಮತ್ತೇ ಮತ್ತೇ ಆ ಬೆಂಚಿನಿಂದ ಮತ್ತೊಂದು ಬೆಂಚಿಗೆ, ಮತ್ತೊಂದು ಬೆಂಚಿನಿಂದ ಇನ್ನೊಂದು ಬೆಂಚಿಗೆ ಸಾಗುತ್ತಲೇ ಕಿಣಿ ಕಿಣಿ ಸದ್ದು ಮಾಡುತ್ತಲೇ ಮುಂದೆ ಮುಂದೆ ಸಾಗಿ ಒಮ್ಮೆಲೆ ಶಬ್ದ ಸ್ತಬ್ದವಾಯ್ತು. ಬಹುಶಹ ಯಾರೋ ಅದನ್ನು ಕಿಟಕಿಯ ಹೊರಗೆ ಹುಲ್ಲು ಹಾಸಿನ ಮೇಲೆ ಎಸೆದಿರಬೇಕು. ಆದರೆ ಸಿಟ್ಟು ಅತಿರೇಕಕ್ಕೆ ಹೋಗಿದ್ದ ಲೆಕ್ಚರರ್ ಮಾತ್ರ ಅದರ ತಪಾಸಣೆ ನಿಲ್ಲಿಸಲಿಲ್ಲ. ಮತ್ತು ವಿದ್ಯಾರ‍್ತಿಗಳ ಮೇಲೆ ಕೂಗಾಡುವುದು ರೇಗಾಡುವುದು ನಿಲ್ಲಲಿಲ್ಲ. ಕಡೆಗೆ ಯಾರದೋ ತಪ್ಪಿಗೆ ಇಡೀ ತರಗತಿಯ ಗಂಡು ವಿದ್ಯಾರ‍್ತಿ ಮಕ್ಕಳು ಡ್ರಿಲ್ ಮಾಡಿಸಿಕೊಂಡು ತರಗತಿಯಿಂದ ಹೊರದಬ್ಬಿಸಿಕೊಳ್ಳ ಬೇಕಾಯ್ತು. ಇದು ಮೌನ ತರಗತಿಯ ಶಾಂತಿ ಕದಡಿ ಕದನ ರೂಪಕ್ಕೆ ತಿರುಗಿದ ಗಂಟೆ ಕತೆ.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು