ಪರಂಗಿ ಹಣ್ಣಿನ ಬಗ್ಗೆ

– ಶ್ಯಾಮಲಶ್ರೀ.ಕೆ.ಎಸ್.

ಪರಂಗಿ ಹಣ್ಣು ಅತವಾ ಪಪ್ಪಾಯಿ ಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಚಿರಪರಿಚಿತ. ಇದೊಂದು ಸಾರ‍್ವಕಾಲಿಕ ಹಣ್ಣಾಗಿದ್ದು, ಎಲ್ಲಾ ರುತುಗಳಲ್ಲೂ ಸಿಗುವಂತದ್ದು. ಇಂಗ್ಲೀಶ್ ನ ಪಪ್ಪಾಯ (Papaya) ಹಣ್ಣು ಕನ್ನಡದಲ್ಲಿ ‘ಪರಂಗಿ ಹಣ್ಣು’ ಎಂದೇ ಹೆಸರು ವಾಸಿ. ಪರ ಎಂದರೆ ಪರಕೀಯ ಅತವಾ ವಿದೇಶ. ಅಂಗಿ ಎಂದರೆ ದೇಹ ಎಂಬ ಅರ‍್ತ ಬರುತ್ತದೆ. ಪರದೇಶದಿಂದ ಬಂದ ಹಣ್ಣು ಎಂಬ ಕಾರಣಕ್ಕೆ ಪರಂಗಿ ಹಣ್ಣು ಎಂಬ ಹೆಸರಾಗಿರಬಹುದು.

ಕ್ಯಾರಿಕೇಸೀ (caricasae) ಕುಟುಂಬಕ್ಕೆ ಸೇರಿರುವುದರಿಂದ ಕ್ಯಾರಿಕ ಪಪ್ಪಾಯ (carica papaya) ಎಂದು ವೈಜ್ನಾನಿಕವಾಗಿ ಕರೆಯಲಾಗುತ್ತದೆ. ಆಯುರ‍್ವೇದದಲ್ಲಿ ಪರಂಗಿ ಹಣ್ಣನ್ನು ‘ಎರಂಡಕರ‍್ಟಿ’ ಎಂಬ ಹೆಸರಿನಿಂದ ಸೂಚಿಸಲಾಗಿದೆ. ಯೂರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಪಪ್ಪಾಯಿಯನ್ನು ‘ಪಾವ್ ಪಾವ್’, ಕ್ಯೂಬಾದಲ್ಲಿ ‘ಪ್ರುಟಾ ಬೊಂಬಾ’, ಬ್ರೆಜಿಲ್ ನಲ್ಲಿ ‘ಮಾಮಾವೊ’ ಎಂದೆಲ್ಲಾ ಕರೆಯುತ್ತಾರೆ. ಈ ಹಣ್ಣಿನ ಸುವಾಸನೆ, ರುಚಿ, ಬಣ್ಣ, ವಿಶೇಶವಾದ ರಚನೆಯನ್ನು ಕಂಡು ಕೊಂಡ ಕ್ರಿಸ್ಟೋಪರ್ ಕೊಲಂಬಸ್, ಇದನ್ನು ದೇವಮಾನವರ ಹಣ್ಣು (fruit of angels) ಎಂದು ಕರೆದಿದ್ದಾನೆ. ಇದು ಮೆಕ್ಸಿಕೊ ಮತ್ತು ಮದ್ಯ ಅಮೆರಿಕಾ ಬಾಗಗಳಲ್ಲಿ ಮೊದಲಬಾರಿ ಕಂಡುಬಂದಿರುವ ಮಾಹಿತಿ ಇದ್ದು, ಬಾರತಕ್ಕೆ 16ನೇ ಶತಮಾನದಲ್ಲಿ ಪರಿಚಯಿಸಲ್ಪಟ್ಟಿದೆ ಎನ್ನುವ ಅಬಿಪ್ರಾಯವಿದೆ. ಕರ‍್ನಾಟಕ, ಆಂದ್ರಪ್ರದೇಶ, ತಮಿಳುನಾಡು, ಮಹಾರಾಶ್ಟ್ರ, ಗುಜರಾತ್, ಪಶ್ಚಿಮ ಬಂಗಾಳ ಇವು ಪಪ್ಪಾಯಿ ಬೆಳೆಯುವ ಪ್ರಮುಕ ರಾಜ್ಯಗಳು.

ಪಪ್ಪಾಯಿ ಸದಾ ಹಸಿರಾಗಿರುವ ಸಣ್ಣ ಮರ. ಇದರ ಕಾಂಡ ತುಸು ಟೊಳ್ಳು. ಇದರ ಎಲೆಗಳು ಹಸ್ತಾಕಾರದಲ್ಲಿವೆ. ಪ್ರತಿ ಎಲೆಗೂ ಟೊಳ್ಳಾದ ತೊಟ್ಟುಂಟು. ಕಾಂಡಕ್ಕೆ ಅಂಟಿಕೊಂಡಂತೆ ಹಣ್ಣುಗಳು ಬಿಡುತ್ತವೆ. ಸಾಮಾನ್ಯವಾಗಿ ಹಳ್ಳಿಗಳ ಕಡೆ ಮನೆಯ ಹಿತ್ತಲುಗಳಲ್ಲಿ ಪರಂಗಿ ಮರಗಳು ಕಾಣಸಿಗುತ್ತವೆ. ನೀರು ಬಸಿದು ಹೋಗುವ ಮಣ್ಣಿದ್ದಲ್ಲಿ ಸುಲಬವಾಗಿ ಇದನ್ನು ಬೆಳೆಯಬಹುದು. ಇದೊಂದು ಉಶ್ಣವಲಯದ ಬೆಳೆ. ನಾಟಿ ಮಾಡಿದ ವರ‍್ಶದೊಳಗೆ ಇದರ ಪಲವನ್ನು ಪಡೆಯಬಹುದಾಗಿದೆ. ಸರಿ ಸುಮಾರು 15 ರಿಂದ 20 ಅಡಿ ಎತ್ತರದವರೆಗೂ ಇದು ಬೆಳೆಯುವ ಸಾಮರ‍್ತ್ಯ ಹೊಂದಿದೆ. ಈ ಮರದ ಆಯಸ್ಸು ಕಡಿಮೆ. ಅಂದರೆ ಕೇವಲ 4 ರಿಂದ 5 ವರ‍್ಶವಶ್ಟೇ ಇದರ ಜೀವಿತಾವದಿ. ಪಲವತ್ತತೆಯಿಂದ ಕೂಡಿದ ಕೆಲ ಮರಗಳಶ್ಟೇ 10, 20 ವರ‍್ಶಗಳ ಕಾಲದವರೆಗೆ ಬದುಕಿರುವ ಉದಾಹರಣೆಗಳಿವೆ.

ಪರಂಗಿ ಇದರ ಪೌಶ್ಟಿಕಾಂಶದ ಮೌಲ್ಯ ಮತ್ತು ಔಶದೀಯ ಗುಣಗಳಿಗೆ ಮನೆಮಾತಾದ ಜನಪ್ರಿಯ ಹಣ್ಣು. ಇದರ ಹೊರಗಿನ ಪದರ ಹಸಿರು, ಒಳಗಿನ ತಿರುಳು ಹಳದಿ ಮತ್ತು ಕಪ್ಪನೆಯ ಬೀಜಗಳಿಂದ ಕೂಡಿರುತ್ತದೆ. ಮಾಗಿದ ಹಣ್ಣು ನೋಡಲು ಹಳದಿ ಪದರ, ತಿರುಳು ಹಳದಿ ಕಿತ್ತಳೆ ಮಿಶ್ರಿತ, ತಿನ್ನಲು ಸಿಹಿಯಾಗಿರುತ್ತದೆ. ನಮ್ಮ ಪೂರ‍್ವಿಕರು ಪಪ್ಪಾಯಿ ಹಣ್ಣಿನ ಸೇವನೆಯಿಂದ ಅದೆಶ್ಟೋ ರೋಗಗಳಿಂದ ದೂರವಿರುತ್ತಿದ್ದರು. ವಿಟಮಿನ್ ಸಿ ಮತ್ತು ಎ ಯ ಕಣಜವಾಗಿರುವ ಪಪ್ಪಾಯಿ ಕಣ್ಣಿನ ಆರೋಗ್ಯಕ್ಕೆ ಬಹಳ ಪರಿಣಾಮಕಾರಿ. ಪಪ್ಪಾಯಿಯಲ್ಲಿರುವ ನಾರಿನಂಶ ಜೀರ್‍ಣಕ್ರಿಯೆಗೆ ಬಹಳ ಉಪಯೋಗಕಾರಿ. ತಿಂಗಳಿಗೋ, ಮೂರು ತಿಂಗಳಿಗೋ ಒಮ್ಮೆ ಇದರ ಬೀಜಗಳನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಜಂತುಹುಳುಗಳ ಶಮನವಾಗುತ್ತದೆಂಬುದು ತಜ್ನರ ಸಲಹೆ

ಮಾಂಸಾಹಾರವನ್ನು ಸುಲಬವಾಗಿ ಜೀರ‍್ಣ ಮಾಡಲು ಈ ಪಪಾಯಿನ್ ಅಂಶ ತುಂಬಾ ಸಹಕಾರಿಯಂತೆ. ಬೊಜ್ಜು ನಿವಾರಣೆಗೆ ಪಪ್ಪಾಯಿ ಹಣ್ಣು ಬಹಳ ಅನುಕೂಲಕಾರಿ. ಆದರೆ ಪಪ್ಪಾಯಿಯಲ್ಲಿರುವ ಪಪೈನ್ ಅಂಶ ಗರ‍್ಬಿಣಿ ಸ್ತ್ರೀಯರಿಗೆ ಮಾರಕವಾಗಿದೆ. ಕಿಡ್ನಿ ಕಲ್ಲಿನ ತೊಂದರೆ ಇರುವವರು ಪಪ್ಪಾಯಿಯಿಂದ ದೂರ ಇರುವುದು ಒಳಿತು, ಇದರಲ್ಲಿರುವ ವಿಟಮಿನ್ ಸಿ ಕಿಡ್ನಿ ಕಲ್ಲಿನ ಗಾತ್ರವನ್ನು ಹೆಚ್ಚಿಸಲು ಕಾರಣವಾಗಬಹುದು.

ನೈಸರ‍್ಗಿಕವಾಗಿ ಸಿಗುವಂತಹ ಪಪ್ಪಾಯಿ ಇನ್ನಿತರ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಕೆಲ ಕಾಲವಾದರೂ ರೋಗಗಳಿಂದ ಮುಕ್ತವಾಗಿರಬಹುದು.

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications