ನಿಸ್ವಾರ‍್ತತೆಯಿಂದ ಸಹಾಯ ಮಾಡುವವರೇ ದೇವರು
ನಾವು ಕಾಣದ ದೇವರನ್ನು ಎಲ್ಲೆಲ್ಲೊ ಹುಡುಕುವ ಹರಸಾಹಸ ಮಾಡುತ್ತೇವೆ. ಕೆಲವೊಮ್ಮೆ ಆ ಕಾಣದ ದೇವರು ದೈವ ಸ್ವರೂಪಿಯಾಗಿ ನಮ್ಮ ಬಗಲಲ್ಲಿಯೇ ಇರುತ್ತಾನೆ ಎಂಬುದು ಸುಳ್ಳಲ್ಲ! ಆದರೆ ಅದನ್ನು ಕಾಣುವ ವಿಶಾಲ ಹ್ರುದಯ ನಮಗೆ ಬೇಕಶ್ಟೆ. ಅಂತಹ ಔದಾರ‍್ಯದ ಮನಸ್ಸು ಒಳ್ಳೆಯ ಸಂಸ್ಕಾರದಿಂದಲೇ ಒದಗಿ ಬರಬೇಕು!
ನಲವತ್ತು ದಶಕಗಳ ಹಿಂದಿನ ಸಂಗತಿಯಿದು. ಬಾಳೆಹೊನ್ನೂರು ಎಂಬ ಒಂದು ಸಣ್ಣ ಗ್ರಾಮ. ಈಗಿನಂತೆ ಅತ್ಯುತ್ತಮ ಸಂಪರ‍್ಕ ಸಾದನಗಳಿಲ್ಲದ ಕಾಲ. ಸಾರಿಗೆ ವ್ಯವಸ್ತೆಯೂ ಶೂನ್ಯವೇ. ನಮ್ಮ ಮನೆಯಲ್ಲಿ ಆಗಿನ್ನೂ ಸೀಮೆಎಣ್ಣೆ ಬುಡ್ಡಿಯೇ ರಾತ್ರಿ ಬೆಳಕು. ಓದು ಬರಹ ಎಲ್ಲವೂ ಆ ಸೀಮೆಣ್ಣೆ ಬುಡ್ಡಿಯ ಬೆಳಕಿನ ಬುಡದಲ್ಲೆ. ಆ ಬಡತನದಲ್ಲಿಯೂ ಪ್ರಾತಮಿಕ ಪ್ರೌಡ ಶಿಕ್ಶಣ ಪಡೆದದ್ದು ಒಂದು ಕದನವೇ ಸರಿ. ಮುಂದಿನ ಓದಿಗೆ ದೂರದ ತಾಲ್ಲೂಕು ಕೇಂದ್ರವನ್ನು ಆಶ್ರಯಿಸಬೇಕಿತ್ತು. ಆರ‍್ತಿಕ ಅನುಕೂಲತೆ ಇಲ್ಲದ ಕಾಲದಲ್ಲಿ ಬ್ಯಾಂಕುಗಳ ಶಿಕ್ಶಣ ಸಾಲ ನೆರವಿಗೆ ಬಂದು ಪದವಿಯನ್ನೇನೊ ಪಡೆದುಕೊಂಡೆವು. ನಾವು ಪಡೆದ ಪದವಿಗೆ ನಮ್ಮಂತಹ ಸಣ್ಣ ಗ್ರಾಮದಲ್ಲಿ ಯಾವ ಉತ್ತಮ ಉದ್ಯೋಗವಕಾಶ ಕಾಣಲು ಸಾದ್ಯ? ಆಗಲೆ ನಮಗೆ ನಿರುದ್ಯೋಗ ಸಮಸ್ಯೆ ಬಿಸಿ ಕಾಡತೊಡಗಿತ್ತು! ಆದರೂ ಚಲ ಬಿಡದೆ ಮಕ್ಕಳಿಗ ಟ್ಯೂಶನ್ ಹೇಳುತ್ತ, ನಮ್ಮ ಗ್ರಾಮದ ಪುಟ್ಟ ಅಂಚೆ ಕಚೇರಿಯಲ್ಲಿ ಸಾರ‍್ವಜನಿಕ ಉಳಿತಾಯಗಳ ಏಜೆನ್ಸಿ ಪಡೆದುಕೊಂಡು ಕೊಂಚ ಮಟ್ಟಿನ ನಿರುದ್ಯೋಗದ ಬಿಸಿ ತಣಿಸಿಕೊಂಡಿದ್ದೆವು. ಸಣ್ಣ ಗಳಿಕೆಯ ಹರಿವು ಶುರುವಾಗಿ ಸ್ವಲ್ಪ ಮಟ್ಟಿಗೆ ನಮ್ಮ ಆರ‍್ತಿಕ ಕೊರತೆ ನೀಗಿಸಿಕೊಳ್ಳುತಿದ್ದೆವು. ತಾಲ್ಲೂಕು ಕೇಂದ್ರದ ಜೀವ ವಿಮಾ ನಿಗಮದ ಕಚೇರಿಯ ಕ್ಶೇತ್ರಾದಿಕಾರಿ ಉದ್ಯೋಗಿ ಏಜೆಂಟರನ್ನು ನೇಮಿಸಿಕೊಳ್ಳುವ ಹುಡುಕಾಟದಲ್ಲಿ ಆ ಸಣ್ಣ ಗ್ರಾಮದ ಪದವೀದರನಾದ ನಾನು ಅವರ ಕಣ್ಣಿಗೆ ಬಿದ್ದು ನಾನೂ ಒಬ್ಬ ವಿಮಾ ಏಜೆಂಟಾಗಿ ಸೇರ‍್ಪಡೆಗೊಂಡೆ. ಜೀವ ವಿಮಾ ಪಾಲಿಸಿಗಳ ಮಾರಾಟದಿಂದ ಮತ್ತಶ್ಟು ನಮ್ಮ ಆರ‍್ತಿಕ ಕೊರತೆ ನೀಗತೊಡಗಿತು. ವಿಮಾ ಕಚೇರಿಯ ಕ್ಶೇತ್ರಾದಿಕಾರಿಗಳು “ನೋಡಿ ನೀವು ಪದವೀದರರಾಗಿರುವುದರಿಂದ ನಮ್ಮಂತೆ ನೀವು ಉದ್ಯೋಗಕ್ಕೆ ಸೇರಬಹುದು. ಆ ಹುದ್ದೆಗೆ ಪತ್ರಿಕೆಯಲ್ಲಿ ಜಾಹಿರಾತು ನೀಡುತ್ತಾರೆ ಅದಕ್ಕೂ ಪ್ರವೇಶ ಪರೀಕ್ಶೆಗಳಿರುತ್ತವೆ ನೀವು ಅದನ್ನು ಅನುಸರಿಸಿ ಉದ್ಯೋಗಸ್ತರಾಗಬಹುದು” ಎಂದು ಮಾತಿನಲ್ಲಿ ಹುರಿದುಂಬಿಸುತಿದ್ದರು. ಬಹುಶಹ ಅವರು ಹೇಳಿದಂತೆ ಕಾಲ ಬಂತೇನೋ?
ಏನೇ ಮಾಡಿದರೂ ಕೈತುಂಬ ಗಳಿಕೆಯಂತು ಇಲ್ಲ. ಇವೆಲ್ಲದರಿಂದ ಬರುವ ಒಟ್ಟು ಹಣ ಹಸಿದವನಿಗೆ ಅರೆಕಾಸಿನ ಮಜ್ಜಿಗೆ ಎನ್ನುವ ಸ್ತಿತಿ. ಅಂದು ಸಂಜೆ ನಾನು ವಿಶಣ್ಣ ವದನನಾಗಿ ನನ್ನ ಆಪ್ತ ಸ್ನೇಹಿತ ಪೈ ಅವರ ಸಣ್ಣ ಕಿರಾಣಿ ಅಂಗಡಿಗೆ ನಿತ್ಯ ಬೇಟಿಯಂತೆ ಅಂದು ಬೇಟಿ ಕೊಟ್ಟೆ. ಅದು ಮಳೆಗಾಲ ಸಮಯವಾದ್ದರಿಂದ ಪಿರಿಪಿರಿ ಮಳೆ ಬರುತಿತ್ತು. ಪೈಯವರು ನನ್ನ ಮುಕ ನೋಡುತ್ತಲೆ “ಅಯ್ಯೋ ಮಾರಾಯ್ರೆ ಮೊನ್ನೆ ‘ದ ಹಿಂದೂ’ ಪತ್ರಿಕೆಲಿ ನಿಮ್ಮ ಎಲ್ ಐ ಸಿ ಪೀಲ್ಡ್ ಆಪೀಸರ್ ಪೋಸ್ಟ್ ಕಾಲಾಗಿತ್ತಲ್ಲ ಮಾರಯ್ರೆ” ಎಂದರು. ನಾನು “ಸರಿ ಆ ಪತ್ರಿಕೆ ಕೊಡಿ ನಾನು ನೋಡಿ ಅಪ್ಲೈ ಮಾಡುತ್ತೇನೆ” ಎಂದೆ. ಪೈ ಅವರು ಪದವೀದರರಾಗಿದ್ದರಿಂದ ಅವರು ‘ದ ಹಿಂದೂ’ ಇಂಗ್ಲಿಶ್ ಪತ್ರಿಕೆ ಜಿಲ್ಲಾ ಕೇಂದ್ರದಿಂದ ತರಿಸಿಕೊಂಡು ಓದುತ್ತಿದ್ದರು. ಅವರು ಪತ್ರಿಕೆಯನ್ನು ಅಲ್ಲಿ ಇಲ್ಲಿ ಹುಡುಕಿ “ಅಯ್ಯೋ ಮಾರಾಯ್ರೆ ಅದು ಬಹುಶ ಹರಿದು ಕಿರಾಣಿ ಸಾಮಾನು ಕಟ್ಟಿಕೊಟ್ಟೆ ಅಂತ ಅನ್ಸುತ್ತೆ…? ತಡೀರಿ ನಮ್ಮ ಪೆಟ್ರೋಲ್ ಬಂಕ್ ಅನಂತಣ್ಣ ಪತ್ರಿಕೆ ತರಸ್ತಾರೆ ಅವರು ಪತ್ರಿಕೆ ಓದಿದ ಮೇಲೆ ನೀಟಾಗಿ ಜೋಡಿಸಿಡೋ ಅಬ್ಯಾಸ ಇದೆ, ನಾಳೆ ಅವರು ಮನೆ ಮುಂದೆ ಹಾದು ಬರುವಾಗ ಇಸಿದುಕೊಂಡು ಬಂದು ಕೊಡ್ತೇನೆ” ಎಂದರು. ಪಾಪ ನನಗಾಗಿ ಪೈಯವರು ಅವರ ಮನೆಗೆ ಎಡತಾಕಿದರು ಆದರೆ ಅವರ ಮನೆಗೆ ಬೀಗ ಜಡಿದಿತ್ತು. ಪಕ್ಕದವರನ್ನು ವಿಚಾರಿಸಿದಾಗ “ಅವರು ಕುಟುಂಬ ಸಮೇತ ಬೆಂಗಳೂರಿಗೆ ಹೋಗಿರುವುದಾಗಿಯೂ ಅವರು ಬರವುದು ಒಂದೆರಡು ದಿನವಾಗುವುದಾಗಿಯೂ” ತಿಳಿಸಿದರು. ಆ ಪತ್ರಿಕೆ ಆ ಗ್ರಾಮಕ್ಕೆ ಒಂದೆರಡು ಬಿಟ್ಟರೆ ಇನ್ನೊಂದೆರಡು ದೂರದ ಕಾಪಿ, ಟೀ ಎಸ್ಟೇಟ್ ಮಾಲೀಕರು, ಮ್ಯಾನೇಜರುಗಳು ತರಿಸುತಿದ್ದರು. ಹಾಗಾಗಿ ಆ ಪತ್ರಿಕೆ ನಮಗೆಲ್ಲೂ ಸುಲಬವಾಗಿ ಸಿಗುವ ಬಾಬತ್ತಾಗಿರಲಿಲ್ಲ. ಆ ಪತ್ರಿಕೆಯೊಳಗಿನ ಉದ್ಯೋಗ ಜಾಹಿರಾತನ್ನು ಪಡೆಯುವ ಸಲುವಾಗಿ ನಾನು ನಿತ್ಯ ಪೈ ಅವರ ಕಿರಾಣಿ ಅಂಗಡಿಗೆ ಎಡತಾಕತೊಡಗಿದೆ. ಪೈಯವರು ಕೂಡ ಪತ್ರಿಕೆಯ ಸಲುವಾಗಿ ನಿತ್ಯ ಅನಂತಣ್ಣನ ಮನೆಗೂ ಬಂಕಿಗೂ ಲಾಳಿ ಹೊಡೆಯತೊಡಗಿದರು. ಎರಡು ಮೂರು ದಿನವಾದರೂ ಆ ಪತ್ರಿಕೆ ನನ್ನ ಕೈ ಸೇರದಿದ್ದರಿಂದ ಆ ಉದ್ಯೋಗಕ್ಕೆ ಅಪ್ಲೈ ಮಾಡುವ ಆಸೆ ಬಿಟ್ಟುಬಿಟ್ಟಿದ್ದೆ.
ನನಗೆ ಏಜೆನ್ಸಿ ಕೊಟ್ಟ ಕ್ಶೇತ್ರಾದಿಕಾರಿಗಳಿಗೆ ಸಂಪರ‍್ಕಿಸಲು ಈಗಿನಂತೆ ಮೊಬೈಲ್ ಪೋನುಗಳಿಲ್ಲ. ಲ್ಯಾಂಡ್ ಲೈನಿನ ಟ್ರಂಕಾಲ್ ಸೇವೆ ನಮ್ಮ ಗ್ರಾಮಗಳಲ್ಲಿ ಅಯೋಮಯ. ಇದ್ದರೂ ಮಳೆಗಾಲದಲ್ಲಿ ಕೆಲಸ ಮಾಡುವುದಿಲ್ಲ. ಅಲ್ಲದೆ ನಮ್ಮ ಅದಿಕಾರಿಗಳು ದೀರ‍್ಗ ರಜೆಯ ಮೇಲೆ ದೂರದ ಕುಂದಾಪುರಕ್ಕೆ ಹೋಗಿದ್ದಾರೆ ಎಂಬ ಸುದ್ದಿಯೂ ತಿಳಿಯುತು. ನಮ್ಮ ಕ್ಶೇತ್ರಾದಿಕಾರಿಯಿಂದ ಸಹಾಯ ಸಿಗಬಹುದು ಎಂಬ ಸಣ್ಣ ಆಸೆಯೂ ಮಣ್ಣು ಪಾಲಾಯ್ತು. ಆದರೆ ದೈವೆಚ್ಚೆಯೋ ಅತವಾ ಪೈಗಳೆ ನಮ್ಮ ಪಾಲಿನ ದೇವರೋ ತಿಳಿಯಲಿಲ್ಲ! ಪೈಗಳು ಆ ಪತ್ರಿಕೆಗಾಗಿ ಅನಂತಣ್ಣನ ಮನೆಗೆ ಎಡತಾಕುವುದು ಬಿಡಲಿಲ್ಲ. ಅಂದು ಮುಂಜಾನೆ ಅನಂತಣ್ಣನ ಮನೆ ಕಡೆ ಹಾದಾಗ ಅವರ ಮನೆ ಬಾಗಿಲು ತೆಗೆದಿತ್ತು. ಅವರು ಬೆಳಗಿನ ಜಾವ ಬೆಂಗಳೂರಿಂದ ಹಿಂತಿರುಗಿದ್ದರು. “ಅನಂತಣ್ಣ ಒಂದು ವಾರ ಹಿಂದಿನ ‘ದ ಹಿಂದೂ’ ಪತ್ರಿಕೆ ಬೇಕಿತ್ತು” ಎಂದಾಗ ” ಪೈಗಳೆ ಅದೋ ಅಲ್ಲಿ ಜೋಡಿಸಿಟ್ಟಿದ್ದೇನೆ ನೀವೆ ಹುಡುಕಿಕೊಳ್ಳಿ” ಎಂದರು. ಕಡೆಗೂ ಆ ಜಾಹಿರಾತಿನ ಪತ್ರಿಕೆ ಸಿಕ್ಕಿತು. ಪೈಗಳು ಒಂದೇ ಉಸಿರಿಗೆ ಸೈಕಲ್ ಏರಿ ಬಂದು ನನಗೆ ಆ ಪತ್ರಿಕೆ ತಲುಪಿಸಿದರು. ನಾನು ಪತ್ರಿಕೆ ಬಿಡಿಸಿ ಜಾಹಿರಾತು ಓದಿದಾಗ ಆ ಉದ್ಯೋಗಕ್ಕೆ ಅಪ್ಲೈ ಮಾಡಲು ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿತ್ತು. ಆ ಪತ್ರಿಕೆ ಎತ್ತಿಕೊಂಡು ಓಡಿ ನಮ್ಮ ಬಲ್ಲವರ ಮನೆಯ ಟೈಪರೇಟರನಲ್ಲಿ ನಾನೇ ಸ್ವತಹ ಅರ‍್ಜಿ ಟೈಪಿಸಿ ಅಂದು ಮದ್ಯಾಹ್ನದ ಒಳಗೆ ಅಂಚೆಯ ಮೂಲಕ ಜೀವ ವಿಮಾ ನಿಗಮದ ವಿಬಾಗಿಯ ಕಚೇರಿಗೆ ರವಾನಿಸಿದೆ. ಆ ಅರ‍್ಜಿ ಕಚೇರಿಗೆ ಬಹುಶಹ ಅಂತಿಮ ದಿನದ ಸಂಜೆಯೇ ತಲುಪಿರಬೇಕು. ಅಂತೂ ಇಂತೂ ಒಂದು ದಿನ ಪ್ರವೇಶ ಪರೀಕ್ಶೆಗೆ ಹಾಜರಾಗಲು ಕಚೇರಿಯಿಂದ ಪತ್ರ ಬಂತು. ದೂರದ ಉಡುಪಿಯ ಎಂ ಜೆ ಎಂ ಕಾಲೇಜಿನಲ್ಲಿ ಪ್ರವೇಶ ಪರೀಕ್ಶೆಯೂ ಬರೆದೆ, ಉತ್ತೀರ‍್ಣವೂ ಆಯ್ತು. ಮೌಕಿಕ ಪರೀಕ್ಶೆಗೂ ಹಾಜರಾದೆ, ಕಡೆಗೂ ನಾನು ವಿಮಾ ಕಚೇರಿಯ ಕ್ಶೇತ್ರಾದಿಕಾರಿಯಾಗಿ ಆಯ್ಕೆಗೊಂಡೆ. ಇದು ನಾಲ್ಕು ದಶಕಗಳ ಹಿಂದಿನ ಕತೆ! ನಾನು ಜೀವ ವಿಮಾ ನಿಗಮದ ಕ್ಶೇತ್ರಾದಿಕಾರಿಯಾಗಿ ದೀರ‍್ಗ ಕಾಲ ಸೇವೆ ಸಲ್ಲಿಸಿ ತದನಂತರ ಸಹಾಯಕ ಶಾಕಾದಿಕಾರಿ, ಆಡಳಿತಾದಿಕಾರಿಯಾಗಿ ಬಡ್ತಿ ಪಡೆದು ಈಗ ನಿವ್ರುತ್ತಿಗೊಂಡು ಪಿಂಚಣಿ ಎಣಿಸುತಿದ್ದೇನೆ. ಈಗ ನೀವೇ ಹೇಳಿ ನಮ್ಮ ಪಾಲಿನ ದೇವರು ಪೈಗಳೊ, ಅನಂತಣ್ಣನೋ, ಜೀವವಿಮಾ ಕಚೇರಿಯೋ?
ಒಟ್ಟಾರೆಯಾಗಿ ಹೇಳುವುದಾದರೆ ನಿಶ್ಕಲ್ಮಶ ಮನದ ಸಹಾಯ ಮಾಡಬೇಕೆನ್ನುವ ಮನಸ್ಸಿನ ಸ್ನೇಹಿತರೆ ನಮ್ಮ ದೇವರು, ದೇವರು ನಮಗೆ ಮನುಶ್ಯರ ರೂಪದಲ್ಲೆ ಬಂದು ಸಹಾಯ ಮಾಡುತ್ತಾರೆ ಎಂದರೂ ತಪ್ಪಿಲ್ಲ!
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು