ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ – ನೋಟ – 1

ಸಿ. ಪಿ. ನಾಗರಾಜ.

ಕುಮಾರವ್ಯಾಸ ಬಾರತ ಓದು – ವಿರಾಟಪರ್‍ವ – ಉತ್ತರಕುಮಾರನ ಪ್ರಸಂಗ

(ಕುಮಾರವ್ಯಾಸ ಬಾರತ ಕಾವ್ಯದಲ್ಲಿನ  ವಿರಾಟಪರ್‍ವದ ಅಯ್ದನೆಯ ಸಂದಿಯಿಂದ 47 ಪದ್ಯಗಳನ್ನು, ಆರನೆಯ ಸಂದಿಯಿಂದ 66 ಪದ್ಯಗಳನ್ನು, ಒಂಬತ್ತನೆಯ ಸಂದಿಯಿಂದ 41 ಪದ್ಯಗಳನ್ನು ಮತ್ತು 10 ನೆಯ ಸಂದಿಯಿಂದ 27 ಪದ್ಯಗಳನ್ನು ಆಯ್ಕೆ ಮಾಡಿಕೊಂಡು ಒಟ್ಟು 181 ಪದ್ಯಗಳನ್ನು  ನಾಟಕ ರೂಪದಲ್ಲಿ  ಜೋಡಿಸಲಾಗಿದೆ.)

ಪಾತ್ರಗಳು

ಗೋಪಾಲಕ: ವಿರಾಟರಾಜನ ಗೋವುಗಳನ್ನು ಸಾಕಿ ಸಲಹುವ ಗೊಲ್ಲ.
ವಿರಾಟರಾಜ: ಮತ್ಸ್ಯದೇಶದ ರಾಜ.
ಸುದೇಶ್ಣೆ: ವಿರಾಟರಾಜನ ಹೆಂಡತಿ. ಪಟ್ಟದ ರಾಣಿ. ಕೀಚಕನ  ಅಕ್ಕ.
ಉತ್ತರಕುಮಾರ: ವಿರಾಟರಾಜ ಮತ್ತು ಸುದೇಶ್ಣೆ  ದಂಪತಿಯ ಮಗ.
ಉತ್ತರೆ: ವಿರಾಟರಾಜ ಮತ್ತು ಸುದೇಶ್ಣೆ ದಂಪತಿಯ ಮಗಳು.
ಸೈರಂಧ್ರಿ /ದ್ರೌಪದಿ: ಪಾಂಡವರ ಹೆಂಡತಿ. ಈಗ ವಿರಾಟನಗರಿಯ ಪಟ್ಟದ ರಾಣಿ ಸುದೇಶ್ಣೆಯ  ರಾಣಿವಾಸದಲ್ಲಿ ದಾಸಿಯಾಗಿದ್ದಾಳೆ.
ವಲಲ/ಬೀಮ: ಪಾಂಡುರಾಜ ಮತ್ತು ಕುಂತಿಯ ಮಗ. ಈಗ ವಿರಾಟರಾಜನ  ಅರಮನೆಯ ಅಡುಗೆಮನೆಯಲ್ಲಿ ಬಾಣಸಿಗನಾಗಿದ್ದಾನೆ.
ಕಂಕಬಟ್ಟ/ದರ್ಮರಾಯ: ಪಾಂಡುರಾಜ ಮತ್ತು ಕುಂತಿಯ ಮಗ. ಈಗ  ವಿರಾಟರಾಜನ ಆಪ್ತ  ಪರಿಚಾರಕನಾಗಿದ್ದಾನೆ.
ಬೃಹನ್ನಳೆ/ಅರ್ಜುನ: ಪಾಂಡುರಾಜ ಮತ್ತು ಕುಂತಿಯ ಮಗ. ಈಗ ವಿರಾಟರಾಜನ  ರಾಣಿವಾಸದಲ್ಲಿ ಹೆಣ್ಣುಮಕ್ಕಳಿಗೆ ನಾಟ್ಯವಿದ್ಯೆಯನ್ನು ಕಲಿಸುವ ಗುರುವಾಗಿದ್ದಾನೆ.
ಕರ್ಣ: ಅಂಗರಾಜ್ಯದ ಒಡೆಯ. ದುರ್‍ಯೋದನನ ಸೇನಾಪಡೆಯ ನಾಯಕರಲ್ಲಿ ಒಬ್ಬ.
ಕಂಚುಕಿ: ವಿರಾಟರಾಜನ ರಾಣಿವಾಸದ  ಮೇಲ್ವಿಚಾರಕ.
ವಿರಾಟನಗರದ ಪ್ರಜೆಗಳು—ದುರ್‍ಯೋದನನ ಸೇನಾಪಡೆಯವರು—ವಿರಾಟರಾಜನ ರಾಣಿವಾಸದ ದಾಸಿಯರು.

*** ಉತ್ತರಕುಮಾರನ ಪ್ರಸಂಗ: ನೋಟ-1 ***

ಕೇಳು ಜನಮೇಜಯ, ಸುಯೋಧನನ ಆಳು ತುರುಗಳನು ಮುತ್ತಿತು. ಭೀಷ್ಮ ಕರ್ಣ ದ್ರೋಣ ಮೊದಲಾಗಿ ಮೇಲಾಳು ಕವಿದುದು. ಕೋಲ ಸೂಟಿಯ ಸರಿವಳೆಗೆ ಗೋಪಾಲ ಪಡೆ ಮುಗ್ಗಿದುದು. ಕರ್ಣ ದುಶ್ಶಾಸನ ಜಯದ್ರಥರು ಗೋವರ ಸಾಲ ಹೊಯ್ದರು. ರಾಯ ಚೂಣಿಯ ಚಾತುರಂಗದ ನಾಯಕರು ಸಮರೋಪಾಯದಲಿ ಮೇಳವಿಸಿ ಕವಿದರು. ಗರುವ ಗೋವರು ಹುಯ್ಯಲಿಗೆ ಹರಿಹರಿದು ಕೆಡೆದರು. ಅಮರರ ರಾಜಧಾನಿಗಳ ಧೂಳಿಗೋಟೆಯಗೊಂಡರು. ಸಾಯಲು ಅಲಸದ ಗೋವರನು ಕೋಡಕೈಯವರು ಕೈಗಾಯದೆ ಎಸುತವೆ ಹಿಂದಿಕ್ಕಿ ಸೆರೆಯಕೊಂಡರು. ತುರುಹರ ಕಾಳಗದೊಳು ಮೇಲುದಳಕೆ ಇದಿರಾಗಿ ಗೋವರು ಒಡೆಮುರಿದು ಸಾಲರಿದು ಕೆಟ್ಟೋಡಿದರು…

ರಣದೊಳಗೆ ಹರಿಬಕಾರರ ಸೇನೆ ಮಾಯವಾಯಿತು. ರಾಯ ಮೋಹರ ತೆರಳಿ ತುರುಗಳ ಹಿಡಿದು ಹಿಂದಿಕ್ಕಿದರು. ಗೋಪಾಲನೊಬ್ಬನ ಹಿಡಿದು ಮೂಗಿನ ಮೇಲೆ ಸುಣ್ಣವ ಬರೆದು ಹಗೆಯ ಪಟ್ಟಣಕೆ ಬಿಟ್ಟರು.

ದುರ್ಯೋಧನನ ಸೇನಾನಿ: ಕಾಳಗಕೆ  ಬಿರುದರನು  ಬರಹೇಳು  ಹೋಗು.

(ಎನೆ ಕರದ ಬಿಲ್ಲನು ಬಿಸುಟು ಬದುಕಿದ ಶಿರವ ತಡವುತ ಗೋವನೊಬ್ಬನು ಪುರಕೆ   ಹರಿತಂದ.)

ಪದ ವಿಂಗಡಣೆ ಮತ್ತು ತಿರುಳು

ಜನಮೇಜಯ=ಈಗ ಹಸ್ತಿನಾವತಿಯನ್ನು ಆಳುತ್ತಿರುವ ಪಾಂಡುವಂಶದ ರಾಜ. ಅಬಿಮನ್ಯುವಿನ ಮೊಮ್ಮಗ.

ಅರ್‍ಜುನ ಮತ್ತು ಸುಬದ್ರೆಯ ಮಗ ಅಬಿಮನ್ಯು. ಉತ್ತರೆ ಮತ್ತು ಅಬಿಮನ್ಯುವಿನ ಮಗ ಪರೀಕ್ಶಿತ. ಮದ್ರಾವತಿ ಮತ್ತು ಪರೀಕ್ಶಿತ ದಂಪತಿಯ ಮಗ ಜನಮೇಜಯ;

ಕೇಳು ಜನಮೇಜಯ=ವೈಶಂಪಾಯನ ಮುನಿಯು ವ್ಯಾಸರು ರಚಿಸಿದ ಮಹಾಬಾರತದ ಕತೆಯನ್ನು ಮತ್ತೊಮ್ಮೆ ಪಾಂಡುವಂಶದ ಅರಸನಾದ ಜನಮೇಜಯನಿಗೆ ಹೇಳತೊಡಗಿದ್ದಾನೆ;

ಸುಯೋಧನ=ದುರ್‍ಯೋದನನಿಗೆ ಇದ್ದ ಮತ್ತೊಂದು ಹೆಸರು; ಆಳು=ಆನೆ/ಕುದುರೆ/ತೇರು/ಕಾಲ್ದಳದ ಯೋದರು; ತುರು=ದನ/ಗೋವು; ಮುತ್ತು=ಸುತ್ತುವರಿ/ಲಗ್ಗೆಹಾಕು;

ಸುಯೋಧನನ  ಆಳು ತುರುಗಳನು ಮುತ್ತಿತು=ದುರ್‍ಯೋದನನ ಸೇನೆಯು ಮತ್ಸ್ಯರಾಜ್ಯದ ರಾಜದಾನಿಯಾದ ವಿರಾಟನಗರದ ಹೊರವಲಯದಲ್ಲಿದ್ದ ವಿರಾಟರಾಯನ ಗೋಸಂಪತ್ತನ್ನು ವಶಪಡಿಸಿಕೊಳ್ಳಲೆಂದು ಮುತ್ತಿಗೆಯನ್ನು ಹಾಕಿತು; ಈಗ ದುರ್‍ಯೋದನನಿಗೆ ಬೇಕಾಗಿರುವುದು ಗೋವುಗಳಲ್ಲ. ಗೋವುಗಳ  ನೆಪದಲ್ಲಿ ವಿರಾಟರಾಯನ ಮೇಲೆ ಕಾಳೆಗವನ್ನು ಹೂಡಿ, ವಿರಾಟನಗರಿಯಲ್ಲಿ ಪಾಂಡವರು ಏನಾದರೂ ಮಾರುವೇಶದಲ್ಲಿ ಅಡಗಿಕೊಂಡು ಅಜ್ನಾತವಾಸದ ಒಂದು ವರುಶವನ್ನು ಕಳೆಯುತ್ತಿದ್ದಾರೆಯೇ ಎಂಬುದನ್ನು  ಕಂಡುಹಿಡಿಯಬೇಕೆಂದು ದುರ್‍ಯೋದನನು ಸೇನೆಯೊಡನೆ ಬಂದಿದ್ದಾನೆ. ಏಕೆಂದರೆ  ಹನ್ನೆರಡು ವರುಶ ವನವಾಸದ ನಂತರ ಒಂದು ವರುಶ  ಯಾರಿಗೂ ತಿಳಿಯದಂತೆ ಅಜ್ನಾತವಾಸದಲ್ಲಿರಬೇಕು. ಒಂದು ವೇಳೆ ವರುಶ ಮುಗಿಯುವುದರ ಒಳಗೆ ಗುಟ್ಟು ರಟ್ಟಾದರೆ, ಮತ್ತೆ ಹನ್ನೆರಡು ವರುಶ ವನವಾಸ ಮತ್ತು ಒಂದು ವರುಶ ಅಜ್ನಾತವಾಸವನ್ನು ಸೋತವರು ಅನುಬವಿಸಬೇಕು ಎಂಬುದು ದುರ್ಯೋದನ ಮತ್ತು ದರ್ಮರಾಯನ ನಡುವೆ ನಡೆದಿದ್ದ ಜೂಜಾಟದ ನಿಯಮವಾಗಿತ್ತು;

ಮೇಲ್+ಆಳು; ಮೇಲು=ಉತ್ತಮ; ಮೇಲಾಳು=ವೀರರು/ಪರಾಕ್ರಮಿಗಳು; ಕವಿ=ಎರಗು/ಆಕ್ರಮಣ;

ಭೀಷ್ಮ ಕರ್ಣ  ದ್ರೋಣ ಮೊದಲಾಗಿ  ಮೇಲಾಳು  ಕವಿದುದು=ಬೀಶ್ಮ, ಕರ್‍ಣ, ದ್ರೋಣ ಮೊದಲಾದ ವೀರರು ದನಗಳ ಗುಂಪಿನ ಮೇಲೆ ಆಕ್ರಮಣ ಮಾಡಿದರು; ಕೋಲು=ಬಾಣ; ಸೂಟಿ=ವೇಗ/ರಬಸ; ಸರಿವಳೆ=ಎಡೆಬಿಡದೆ ಒಂದೇ ಸಮನೆ ಹುಯ್ಯುತ್ತಿರುವ ಮಳೆ; ಗೋಪಾಲ=ದನಗಳನ್ನು ಮೇಯಿಸುವವನು ಮತ್ತು ಕಾಪಾಡುವವನು/ಗೊಲ್ಲ; ಪಡೆ=ಗುಂಪು; ಮುಗ್ಗು=ಮಣಿ/ಕುಗ್ಗು/ಕುಸಿ;

ಕೋಲ ಸೂಟಿಯ ಸರಿವಳೆಗೆ ಗೋಪಾಲ ಪಡೆ ಮುಗ್ಗಿದುದು=ಒಂದೇ ಸಮನೆ ತಮ್ಮ ಮೇಲೆ ಪ್ರಯೋಗಗೊಳ್ಳುತ್ತಿರುವ ಬಾಣಗಳ ಸುರಿಮಳೆಗೆ ವಿರಾಟರಾಯನ ಗೋಪಾಲಕರ ಪಡೆಯು ತತ್ತರಿಸಿಹೋಯಿತು; ಗೋವರು=ಗೋಪಾಲಕರು; ಸಾಲು=ಗುಂಪು; ಹೊಯ್=ಹೊಡೆ/ಕತ್ತರಿಸು;

ಕರ್ಣ ದುಶ್ಶಾಸನ ಜಯದ್ರಥರು ಗೋವರ ಸಾಲ ಹೊಯ್ದರು=ಕರ್‍ಣ, ದುಶ್ಶಾಸನ , ಜಯದ್ರತರು ಗೋಪಾಲಕರ  ಪಡೆಯನ್ನು ಹತಾರಗಳಿಂದ ಹೊಡೆದರು; ಚೂಣಿ=ಮುಂದಿನ ಸಾಲು/ಕಾಳೆಗದ ಕಣದಲ್ಲಿ ಸೇನೆಯ ಮುಂದಿರುವ ಪಡೆ; ಚಾತುರಂಗ=ಕಾಳಗದಲ್ಲಿ ಹೋರಾಡುವ ನಾಲ್ಕು ಬಗೆಯ ಯೋದರ ಪಡೆ. ಆನೆಯ ಮೇಲೆ,  ಕುದುರೆಯ ಮೇಲೆ ಹಾಗೂ ತೇರಿನಲ್ಲಿ ಕುಳಿತು ಯುದ್ದಮಾಡುವ ಪಡೆ ಮತ್ತು  ನೆಲದಲ್ಲಿ ಮುನ್ನಡೆಯುತ್ತ ಹೋರಾಡುವ ಕಾಲ್ದಳ; ಸಮರ+ಉಪಾಯದಲಿ; ಸಮರ=ಯುದ್ದ/ಕಾಳೆಗ; ಉಪಾಯ=ಯುಕ್ತಿ/ಯೋಜನೆ; ಮೇಳವಿಸು=ಒಟ್ಟುಗೂಡು;

ರಾಯ ಚೂಣಿಯ ಚಾತುರಂಗದ ನಾಯಕರು ಸಮರೋಪಾಯದಲಿ ಮೇಳವಿಸಿ ಕವಿದರು=ದುರ್‍ಯೋದನನ ಸೇನೆಯ ಮುಂಚೂಣಿಯಲ್ಲಿದ್ದ ಚತುರಂಗ ಬಲದ ನಾಯಕರು ದೊಡ್ಡ ಯುದ್ದದಲ್ಲಿ ಹೋರಾಡುವಂತೆಯೆ ಜತೆಗೂಡಿ ವ್ಯೂಹವನ್ನು ರಚಿಸಿಕೊಂಡು ಗೋಪಡೆಯ ಮೇಲೆ ಲಗ್ಗೆಹಾಕಿದರು;

ಗರುವ=ಬಲಶಾಲಿ/ಶೂರ; ಹುಯ್ಯಲು=ಕದನ; ಹರಿಹರಿದು=ಮುನ್ನುಗ್ಗಿ; ಕೆಡೆದರು=ಕೆಳಕ್ಕೆ ಉರುಳಿದರು;

ಗರುವ ಗೋವರು ಹುಯ್ಯಲಿಗೆ ಹರಿಹರಿದು ಕೆಡೆದರು=ಪರಾಕ್ರಮಿಗಳಾದ ಗೋಪಾಲಕರು ರಣರಂಗಕ್ಕೆ ಮುನ್ನುಗ್ಗಿ ಹೋರಾಡಿ ಕೆಳಕ್ಕೆ ಉರುಳಿದರು; ಅಮರ=ದೇವತೆ; ಅಮರರ ರಾಜಧಾನಿ=ದೇವೇಂದ್ರನ ಅಮರಾವತಿ ಪಟ್ಟಣ; ಧೂಳಿಗೋಟೆ=ಮುರಿದುಬಿದ್ದ ಕೋಟೆ/ನಾಶಗೊಂಡ ಕೋಟೆ;ಧೂಳಿಗೋಟೆಯಗೊಂಡರು=ಹಾಳಾದರು/ಸಾವನ್ನಪ್ಪಿದರು;

ಅಮರರ ರಾಜಧಾನಿಗಳ ಧೂಳಿಗೋಟೆಯಗೊಂಡರು =ಇದೊಂದು ರೂಪಕದ ನುಡಿಗಟ್ಟು. ಕಾಳೆಗದಲ್ಲಿ ಹೋರಾಡಿದ ಗೋಪಾಲಕರಲ್ಲಿ ಕೆಲವರು ಸತ್ತು ದೇವಲೋಕವನ್ನು ಸೇರಿದರು ; ಕಾಳೆಗದಲ್ಲಿ ಹೋರಾಡುತ್ತ ಮಡಿದವರು ದೇವಲೋಕದಲ್ಲಿ ವೀರಸ್ವರ್‍ಗವನ್ನು ಪಡೆಯುತ್ತಾರೆ ಎಂಬುದು ಜನಮನದಲ್ಲಿರುವ ಒಂದು ನಂಬಿಕೆ;

ಅಲಸು=ದಣಿ/ಆಯಾಸಗೊಳ್ಳು; ಗೋವರು=ಗೋಪಾಲಕರು;  ಕೋಡಕೈ=ಕಾಳಗದಲ್ಲಿ ಬಳಸುವ ಒಂದು ಬಗೆಯ ಹತಾರದ ಹೆಸರು; ಕೋಡುಕೈಯವರು=ಆಯುದಗಳನ್ನು ಹಿಡಿದ ದುರ್‍ಯೋದನನ ಸೇನಾಪಡೆಯವರು ; ಕಯ್+ಕಾಯ್; ಕೈಗಾಯ್=ಕಾಪಾಡು; ಎಸು=ಬಾಣ ಪ್ರಯೋಗ ಮಾಡು; ಸೆರೆ=ಬಂದನ/ಕಟ್ಟು;

ಸಾಯಲು ಅಲಸದ ಗೋವರನು ಕೋಡಕೈಯವರು ಕೈಗಾಯದೆ,  ಹಿಂದಿಕ್ಕಿ ಎಸುತವೆ ಸೆರೆಯಕೊಂಡರು=ಸಾಯಲು ಅಂಜದೆ ಮುನ್ನುಗ್ಗಿಬಂದ ಗೋಪಾಲಕರನ್ನು  ದುರ್‍ಯೋದನನ ಸೇನೆಯವರು ಕಾಪಾಡದೆ ಆಯುದಗಳನ್ನು ಪ್ರಯೋಗಿಸಿ ಅವರನ್ನು ಹಿಮ್ಮೆಟ್ಟಿಸುತ್ತ  ಗೋಪಡೆಯನ್ನು ವಶಪಡಿಸಿಕೊಂಡರು; ತುರುಹರಿ=ದನಗಳನ್ನು ಅಪಹರಿಸುವುದು; ಮೇಲುದಳ=ಸೇನಾಬಲದಲ್ಲಿ ದೊಡ್ಡದಾಗಿರುವ ಪಡೆ; ಒಡೆಮುರಿ=ಹೋಳಾಗಿ ಸೀಳು/ಚೂರಾಗುವುಂತೆ ಮುರಿ; ಸಾಲ್+ಅರಿದು; ಸಾಲು=ಗುಂಪು/ಸಮೂಹ/ಹಿಂಡು ; ಅರಿ=ಕತ್ತರಿಸು/ಕಡಿದುಹಾಕು; ಸಾಲರಿದು=ಗುಂಪು ಚಿದ್ರಗೊಂಡು; ಕೆಟ್ಟು+ಓಡಿದರು;

ತುರುಹರ ಕಾಳಗದೊಳು ಮೇಲುದಳಕೆ ಇದಿರಾಗಿ ಗೋವರು ಒಡೆಮುರಿದು ಸಾಲರಿದು ಕೆಟ್ಟೋಡಿದರು=ಗೋವುಗಳ ಅಪಹರಣಕ್ಕಾಗಿ ನಡೆದ ಕಾಳಗದಲ್ಲಿ ದುರ್‍ಯೋದನನ ಸೇನೆಗೆ ಎದುರಾಗಿ ಹೋರಾಡಿದ ಗೋಪಾಲಕರ ಗುಂಪು ಚದುರಿಹೋಗಿ ಸಾವುನೋವಿಗೆ ಗುರಿಯಾಗಿ, ಗೋವುಗಳನ್ನು ಬಿಟ್ಟು ಓಡಿದರು ;

ಹರಿಬ=ಪಾಲನೆ/ಹೊಣೆಗಾರಿಕೆ;  ಹರಿಬಕಾರರು=ದನಗಳನ್ನು ಕಾಪಾಡುವ ಹೊಣೆಯನ್ನು ಹೊತ್ತವರು; ಮಾಯ=ಕಾಣದಾಗುವಿಕೆ/ಮರೆಯಾಗುವಿಕೆ;

ರಣದೊಳಗೆ ಹರಿಬಕಾರರ ಸೇನೆ ಮಾಯವಾಯಿತು=ದನಗಳನ್ನು ಕಾಪಾಡುವ ಹೊಣೆಹೊತ್ತಿದ್ದ ಗೋಪಾಲಕರ ಪಡೆಯು ಯುದ್ದರಂಗದಲ್ಲಿ ಕಾಣದಂತಾಯಿತು. ಗೋಪಾಲಕರೆಲ್ಲರೂ ಅಲ್ಲಿಂದ ಪಲಾಯನಮಾಡಿದರು;   ಮೋಹರ=ಸೇನೆ/ದಂಡು; ರಾಯ ಮೋಹರ ತೆರಳಿ ತುರುಗಳ ಹಿಡಿದು ಹಿಂದಿಕ್ಕಿದರು=ದುರ್‍ಯೋದನನ ಸೇನೆಯು ಮುನ್ನುಗ್ಗಿ ಗೋವುಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು;

ಮೂಗಿನ ಮೇಲೆ ಸುಣ್ಣವನ್ನು ಬರೆಯುವುದು=ಎದುರಾಳಿಯನ್ನು ಸದೆಬಡಿದು ಕೊಲ್ಲದೆ, ಅವನಿಗೆ ಅಪಮಾನಮಾಡಲೆಂದು ಮೂಗಿನ ಮೇಲೆ ಸುಣ್ಣವನ್ನು ಬಳಿಯುವ ಒಂದು ಪದ್ದತಿಯು ಆಚರಣೆಯಲ್ಲಿತ್ತು. ಎದುರಾಳಿಯ ತಲೆಗೂದಲನ್ನು ತೆಗೆಸುವ / ಮೀಸೆಯನ್ನು ಬೋಳಿಸುವ /ಹಣೆಗೆ ನಾಮಗಳನ್ನು ಬಳಿಯುವ ಆಚರಣೆಗಳೆಲ್ಲವೂ ಅಪಮಾನದ ಸಂಕೇತಗಳಾಗಿದ್ದವು ;

ಹಗೆ=ಶತ್ರು; ಹಗೆಯ ಪಟ್ಟಣ=ವಿರಾಟನಗರ;

ಗೋಪಾಲನೊಬ್ಬನ ಹಿಡಿದು ಮೂಗಿನ ಮೇಲೆ ಸುಣ್ಣವ ಬರೆದು ಹಗೆಯ ಪಟ್ಟಣಕೆ ಬಿಟ್ಟರು=ಸೆರೆ ಹಿಡಿದ ಒಬ್ಬ ಗೋಪಾಲಕನ ಮೂಗಿನ ಮೇಲೆ ಸುಣ್ಣವನ್ನು ಬರೆದು ಹಗೆಯಾಗಿದ್ದ ವಿರಾಟರಾಯನ ಬಳಿಗೆ ಹೋಗೆಂದು ದುರ್‍ಯೋದನನ ಸೇನಾಪಡೆಯವರು ಕಳುಹಿಸಿದರು;

ಬಿರುದರು=ಹೆಸರಾಂತ ಶೂರರು/ಮಹಾಪರಾಕ್ರಮಿಗಳು;

ಕಾಳಗಕೆ  ಬಿರುದರನು ಬರಹೇಳು ಹೋಗು ಎನೆ=ನಮ್ಮೊಡನೆ ಹೋರಾಡಲು ವಿರಾಟರಾಜನ ಚತುರಂಗಬಲದ ಹೆಸರಾಂತ ಶೂರರು ಯುದ್ದರಂಗಕ್ಕೆ ಬರಬೇಕು ಎಂಬ ಸುದ್ದಿಯನ್ನು  ನಿಮ್ಮ ರಾಜನಿಗೆ ತಿಳಿಸು ಎನ್ನಲು ;

ಕರ=ಕಯ್/ಹಸ್ತಿ; ಶಿರ=ತಲೆ; ತಡವು=ಮುಟ್ಟಿಮುಟ್ಟಿ ಸವರಿಕೊಳ್ಳುವುದು; ಹರಿತಂದ=ಓಡೋಡಿ ಬಂದ;

ಕರದ ಬಿಲ್ಲನು ಬಿಸುಟು ಬದುಕಿದ ಶಿರವ ತಡವುತ ಗೋವನೊಬ್ಬನು ಪುರಕೆ ಹರಿತಂದ=ಒಬ್ಬ ಗೋಪಾಲಕನು  ತನ್ನ ಕಯ್ಯಲ್ಲಿದ್ದ ಬಿಲ್ಲನ್ನು ಎಸೆದು,  ತಾನು ಸಾಯದೆ ಉಳಿದುಕೊಂಡಿದ್ದೇನೆ ಎಂಬುದನ್ನು ಕಚಿತಪಡಿಸಿಕೊಳ್ಳುವಂತೆ  ತನ್ನ ತಲೆಯನ್ನು ಮತ್ತೆಮತ್ತೆ ಮುಟ್ಟಿಮುಟ್ಟಿ ಸವರಿಕೊಳ್ಳುತ್ತ ವಿರಾಟನಗರದತ್ತ  ಓಡೋಡಿ ಬಂದ;

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications