ಅಮೆರಿಕಾದ ಅದ್ಯಕ್ಶೀಯ ಚುನಾವಣೆ: ಕೆಲ ಸೋಜಿಗದ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ.

ಇತ್ತೀಚೆಗಶ್ಟೇ ಅಮೆರಿಕಾದ ಅದ್ಯಕ್ಶೀಯ ಚುನಾವಣೆಗಳು ಮುಗಿದವು.  ಇಡೀ ಜಗತ್ತೇ ಅಮೇರಿಕಾದ ಅದ್ಯಕ್ಶರ ಚುನಾವಣೆಯನ್ನು ಕುತೂಹಲದಿಂದ ಗಮನಿಸುತ್ತದೆ. ಅಮೆರಿಕಾದ ಈ ಚುನಾವಣೆಗಳ ಹಾಗೂ ಅಲ್ಲಿನ ಅದ್ಯಕ್ಶರ ಬಗ್ಗೆ ಕೆಲ ಸೋಜಿಗದ ಸಂಗತಿಗಳು ಇಲ್ಲಿವೆ.

  • ಕುದುರೆಗಾಡಿಯನ್ನು ವೇಗವಾಗಿ ಓಡಿಸಿದ್ದಕ್ಕಾಗಿ 1872 ರಲ್ಲಿ ಅಂದಿನ ಅಮೆರಿಕಾದ 18 ನೇ ಅದ್ಯಕ್ಶರಾಗಿದ್ದ ಯುಲಿಸೆಸ್ ಎಸ್ ಗ್ಯ್ರಾಂಟ್ ಅವರನ್ನು ಬಂದಿಸಲಾಯಿತು. ಅವರಿಗೆ $20 ದಂಡದ ಟಿಕೆಟ್ ಕೂಡ ನೀಡಲಾಗಿತ್ತು.
  • ಅಮೆರಿಕಾದ ಮೊದಲ ಅದ್ಯಕ್ಶ, ಜಾರ‍್ಜ್ ವಾಶಿಂಗ್ಟನ್ ಯಾವುದೇ ರಾಜಕೀಯ ಪಕ್ಶವನ್ನು ಪ್ರತಿನಿದಿಸಿರಲಿಲ್ಲ, ಅವರು ಅವಿರೋದವಾಗಿ ಆಯ್ಕೆಯಾದ ಏಕೈಕ ಅದ್ಯಕ್ಶರೂ ಕೂಡ ಆಗಿದ್ದಾರೆ.
  • ರಾಜಕೀಯ ವ್ಯಂಗ್ಯಚಿತ್ರಕಾರ ತಾಮಸ್ ನ್ಯಾಶ್ 1874 ರಲ್ಲಿ ಮೊದಲ ಬಾರಿಗೆ ಆನೆ ಮತ್ತು ಕತ್ತೆಗಳನ್ನು ವಿಡಂಬನಾತ್ಮಕ ಕಾರ‍್ಟೂನ್‌ಗಳಾಗಿ ಪರಿಚಯಿಸಿದ್ದರು. ಈ ಚಿಹ್ನೆಗಳು ಹೆಸರುವಾಸಿಯಾಗಿ, ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಶದ ಗುರುತುಗಳಾಗಿ ಇಂದಿಗೂ ಬಳಸಲ್ಪಡುತ್ತಿವೆ.
  • ಅಮೆರಿಕಾದ 26 ನೇ ಅದ್ಯಕ್ಶರಾಗಿದ್ದದ ಟೆಡ್ಡಿ ರೂಸ್ವೆಲ್ಟ್ ಅವರು ಕಾರಿನಲ್ಲಿ ಸವಾರಿ ಮಾಡಿದ ಮೊದಲ ಅದ್ಯಕ್ಶರಾಗಿದ್ದರು. ಅವರ ಸೋದರಸಂಬಂದಿ ಮತ್ತು 32 ನೇ ಅದ್ಯಕ್ಶ, ಪ್ರಾಂಕ್ಲಿನ್ ರೂಸ್ವೆಲ್ಟ್, ವಿಮಾನದಲ್ಲಿ ಸವಾರಿ ಮಾಡಿದ ಮೊದಲಿಗರು.
  • ಅಮರಿಕಾದಲ್ಲಿ ಅದ್ಯಕ್ಶೀಯ ಚುನಾವಣೆಗಳು ಶುರುವಾದ ಮೇಲೆ ಸುಮಾರು 130 ವರುಶಗಳವರೆಗೆ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ. 1920 ರ ಅದ್ಯಕ್ಶೀಯ ಚುನಾವಣೆಯು ಅಮೆರಿಕಾದ ಇತಿಹಾಸದಲ್ಲೇ ಮಹಿಳೆಯರಿಗೆ ಮತದಾನದ ಹಕ್ಕನ್ನು ಅನುಮತಿಸಿದ ಮೊದಲ ಚುನಾವಣೆ ಆಯಿತು.
  • ಇಂದಿಗೂ ಮಹಿಳೆಯೊಬ್ಬರು ಅಮೆರಿಕಾದ ಅದ್ಯಕ್ಶರಾಗಿಲ್ಲ.
  • 1872ರಲ್ಲಿ ಅಮೆರಿಕಾದ ಅದ್ಯಕ್ಶ ಸ್ತಾನಕ್ಕೆ ಸ್ಪರ‍್ದಿಸಿದ ಮೊದಲ ಮಹಿಳೆ ವಿಕ್ಟೋರಿಯಾ ವುಡ್‌ಹುಲ್, ಇವರು ಮಹಿಳೆಯರಿಗೆ ಮತದಾನದ ಹಕ್ಕಿಗಾಗಿ ಹೋರಾಡಿದವರಲ್ಲಿ ಮುಂಚೂಣಿಯಲ್ಲಿದ್ದರು. ಚುನಾವಣೆಯಲ್ಲಿ ಪಾಲ್ಗೊಳ್ಳಲು, ದೊಡ್ಡ ಪಕ್ಶವೊಂದರ ಪರವಾಗಿ (2016 ರಲ್ಲಿ) ಆಯ್ಕೆಯಾದ ಮೊದಲ ಮಹಿಳೆ ಹಿಲರಿ ಕ್ಲಿಂಟನ್.
  • 1997 ರಲ್ಲಿ, ಟೆಕ್ಸಾಸ್ ಶಾಸಕಾಂಗವು ಹೊರಬಾನಿನಲ್ಲಿರುವವರಿಗೆ ಮತ ಚಲಾಯಿಸಲು ಅನುಮತಿಸುವ ಮಸೂದೆಯನ್ನು ಅಂಗೀಕರಿಸಿತು. ಅದೇ ವರುಶ, NASA ಹೊರಬಾನಾಡಿಗ ಡೇವಿಡ್ ವುಲ್ಪ್ ಮತ ಚಲಾಯಿಸಿದ ಮೊದಲ ಅಮೇರಿಕನ್ ಆದರು
  • ಮತಪತ್ರದಲ್ಲಿ ಹೆಸರಿಲ್ಲದಿದ್ದರೂ ತಮ್ಮಿಶ್ಟದ ಅಬ್ಯರ‍್ತಿಯ ಹೆಸರನ್ನು ಬರೆದು ಮತ ಹಾಕುವ ರೈಟ್-ಇನ್ (write-in) ಆಯ್ಕೆ ಅಮೆರಿಕಾದಲ್ಲಿದೆ. 1932 ಚುನಾವಣೆಗಯಲ್ಲಿ ಮೊದಲುಗೊಂಡು ಇತ್ತೀಚಿನ ವರುಶಗಳಲ್ಲಿ ಮಿಕ್ಕಿ ಮೌಸ್ ಪಡೆಯುತ್ತಿರುವ ರೈಟ್-ಇನ್ ಮತಗಳ ಎಣಿಕೆ ಹೆಚ್ಚುತ್ತಲೇ ಬಂದಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: cnbctv18.com, outsidethebeltway.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *