ಕಿರುಬರಹ: ವರುಶದ ಮೊದಲ ಪುಟ – ಒಂದು ಸಂದೇಶ
ತಳಪಾಯವಿಲ್ಲದೆ ಮನೆಯಿಲ್ಲ, ಹಳೆಯ ವರ‍್ಶ ದಾಟದೆ ಹೊಸವರ‍್ಶ ಬರಲು ಸಾದ್ಯವಿಲ್ಲ. ನಾವೆಲ್ಲರೂ ವರ‍್ತಮಾನದ 2024ಕ್ಕೆ ವಿದಾಯ ಹೇಳಿ, 2025ಕ್ಕೆ ಕಾಲಿಟ್ಟಿದ್ದೇವೆ. ಮನುಶ್ಯ ಹೊಸ ಬಟ್ಟೆ ತೊಟ್ಟು, ಅದೇ ಹಳೆಯ ಮನುಶ್ಯನಾಗಿ ಉಳಿಯುವಂತೆ, ಹಳೆಯ ವರ‍್ಶ ಕಳೆದು ಹೊಸವರ‍್ಶ ಬರಮಾಡಿಕೊಳ್ಳುವ ನಮ್ಮ ಮುಕದಲ್ಲಿ ಅದ್ಯಾವ ಸಂತಸ ಕಾಣದೆ ನಿರ‍್ಲಿಪ್ತ ಬಾವ ಮೂಡಲು ಕಾರಣ,
- ನಮ್ಮ ಗಳಿಕೆಯಲ್ಲಿ ಯಾವ ಬದಲಾವಣೆ ಆಗದಿರುವುದೇ?
- ಬೆಲೆ ಏರಿಕೆಯ ಬಿಸಿಯಲ್ಲಿ ನಮ್ಮ ಆದಾಯ ಅಲ್ಲೆ ನಿಂತ ನೀರಾಗಿರುವುದೇ?
- ಮಕ್ಕಳ ಓದಿಗೆ ತಕ್ಕ ಉದ್ಯೋಗವಿಲ್ಲದೇ ಪರದಾಡುತ್ತಿರುವುದೇ?
- ಮಕ್ಕಳಿಗೆ ತಕ್ಕ ಮದುಮಗ/ಮದುಮಗಳು ಸಿಗದೆ ಉಳಿಯುತ್ತಿರುವುದೇ?
- ವ್ಯಾಪಕ ಬ್ರಶ್ಟಾಚಾರದಿಂದ ರೋಸಿ ಹೋದ ಮನಸ್ಸಿನ ರೋದಿತ ಜೀವನವೇ?
- ಪ್ರತ್ಯಕ್ಶ, ಪರೋಕ್ಶ ತೆರಿಗೆ ಕಟ್ಟಿ ಸಾಕಾಗಿ, ಅದೇ ಗುಂಡಿ ಬಿದ್ದ ರಸ್ತೆಗಳಲ್ಲಿ ಓಡಾಡಿ ಬಿದ್ದು ಕಾಲು ಮುರಿದುಕೊಳ್ಳುವ ದೌರ‍್ಬಾಗ್ಯಕ್ಕೆ?
ಈ ಮೇಲಿನ ಪ್ರಶ್ನೆಗಳ ಪಟ್ಟಿ ಅತಿ ಉದ್ದವಾಗಿದ್ದು, ಹೊಸ ವರ‍್ಶವನ್ನು ಸ್ವಾಗತಿಸುವುದಕ್ಕೆ ಮನಸ್ಸು ಕಿನ್ನವಾಗಿ, ಹತಾಶೆ ಮನೆ ಮಾಡಿಕೊಂಡಿರುವಾಗ ಹೊಸ ವರ‍್ಶದ ಸಂತಸವೆಂತು? ಎಂಬ ನಿರಾಶೆಗೆ ನಾವೇ ಸಂತೈಸಿಕೊಂಡು, ಮನ ಹದಮಾಡಿಕೊಂಡು ಎದ್ದು ನಿಂತು ಹೊಸ ವರ‍್ಶವನ್ನು ಸ್ವಾಗತಿಸಿದ್ದೇವೆ.
ಕಶ್ಟಗಳು, ವಿರೋದಗಳು, ವಿಶಯ ವೈರುದ್ಯಗಳು, ಸಮಸ್ಯೆಗಳು ಬಾರದೆ ಜೀವನವೆಂದರೆ ಅದು ಜೀವಂತಿಕೆಯ ಕುರುಹಲ್ಲ, ಅದು ಸತ್ತ ಜೀವನವೇ ಸರಿ. ಎಲ್ಲ ಸಮಸ್ಯೆ, ಸಂಕಶ್ಟ, ವೈರುದ್ಯಗಳ ನಡುವೆ ಜೀವನ ನಡೆಸಲು ಮಾಡುವ ಸಂಗರ‍್ಶವೇ ನಿಜವಾದ ಜೀವನ, ಈ ಸಂಗರ‍್ಶ ಜೀವನದ ನಿಜವಾದ ಅರ‍್ತ ತಿಳಿಸಿಕೊಡುತ್ತದೆ.
ಹೊಸ ವರುಶದ ಆಗಮನಕ್ಕೆ ನಮ್ಮ ಹೊಸ ಸಂಕಲ್ಪಗಳು ಯೋಜನೆಗೊಳ್ಳದಿದ್ದರೇ ಹೇಗೆ? ಹೊಸ ಸಂಕಲ್ಪಗಳು ಅನುಶ್ಟಾನಕ್ಕೆ ತರುವ ಸಾದ್ಯಾಸಾದ್ಯತೆಗಳನ್ನು ಬದಿಗಿರಿಸಿ, ಮೊದಲು ಆದ್ಯತೆಯ ಬಕೇಟಿನಲ್ಲಿ ಹೊಸ ಸಂಕಲ್ಪಗಳು ಇರುವಂತೆ ನೋಡಿಕೊಳ್ಳುವುದು ಕ್ರೀಯಾಶೀಲತೆಯ ಮೊದಲ ಹೆಜ್ಜೆ ಎಂದುಕೊಳ್ಳೋಣ.
ಹೊಸ ವರ‍್ಶದ ಸಂಕಲ್ಪಗಳು
1) ಸುಳ್ಳು ಹೇಳುವ ಅಬ್ಯಾಸವಿದ್ದರೆ, ಅದನ್ನು ಬಿಟ್ಟು ನಿಜ ಹೇಳುವ ಪರಿಪಾಟ ಬೆಳೆಸಿಕೊಳ್ಳೋಣ.
2) ಹೆಚ್ಚು ಸಾಲ ಮಾಡದೆ, ಚಾಪೆಯಿದ್ದಶ್ಟು ಕಾಲು ಚಾಚಿ ಮಿತವಾಗಿ ಕರ್‍ಚುಮಾಡೋಣ.
3) ತಿನ್ನುವ ಆಹಾರ ತರಕಾರಿ ಎಲ್ಲವೂ ರಸಗೊಬ್ಬರ, ಮತ್ತು ಕ್ರಿಮಿನಾಶಕ ಔಶದಿ ಸಹಿತವಾಗಿರುವುದರಿಂದ, ಕೆಡುವ ಆರೋಗ್ಯದ ವೆಚ್ಚ ಬರಿಸಲು ಆರೋಗ್ಯ ವಿಮೆ ಮಾಡಿಸೋಣ.
4) ಪರಿಸರ ಮಾಲಿನ್ಯದಿಂದಾಗಿ ಕಾರ‍್ಬನ್ ಡೈ ಆಕ್ಸೈಡಿನಿಂದ ಕೊಂಚವಾದರೂ ಮುಕ್ತವಾಗಲು ಮನೆಯ ಮುಂದಿರುವ ಒಂದೆರಡು ಮರವನ್ನಾದರೂ ಕತ್ತರಿಸದೆ ಉಳಿಸಿಕೊಳ್ಳೊಣ, ಮರ ಗಿಡಗಳನ್ನು ಬೆಳೆಸೋಣ.
5) ಆದುನಿಕತೆಯ ಹೆಸರಲ್ಲಿ ಸ್ಮಾರ‍್ಟ್ ಪೋನ್, ಟ್ಯಾಬ್, ಲ್ಯಾಪ್‌ಟಾಪ್, ಉಜ್ಜಿ ಉಜ್ಜಿ, ನರಗಳು ಸಾಯದಂತೆ ನೋಡಿಕೊಳ್ಳಲು ಇವುಗಳ ಬಳಕೆ ಆದಶ್ಟೂ ಕಡಿಮೆ ಮಾಡೋಣ.
6) ಮೊಬೈಲ್ ಪೋನ್ ಹಾವಳಿಯಿಂದ ಇರುವ ಮನೆಯ ಒಂದೆರಡು ಸದಸ್ಯರು ಪೋನಿನೊಳಗೆ ಮುಳುಗಿ ಪರಸ್ಪರ ಮಾತನಾಡದೆ ಒಬ್ಬೊಬ್ಬರು ಒಂದೊಂದು ಮೂಲೆ ಹಿಡಿಯುವುದನ್ನು ಕಡಿಮೆ ಮಾಡಲು, ಕಡೆಯ ಪಕ್ಶ ರಾತ್ರಿ ಎಲ್ಲರೂ ಒಂದೆಡೆ ಸೇರಿ ಊಟ ಮಾಡುವ ಮಟ್ಟಿಗಾದರೂ ಸುದಾರಿಸೋಣ.
7) ಸಣ್ಣ ಪುಟ್ಟ ಕೆಲಸಕ್ಕೂ ಮೋಟಾರು ವಾಹನ ಬಳಸದೆ, ನಡೆದು ಹೋಗಿ ಮಾಡಿ ನಮ್ಮ ಆರೋಗ್ಯ ಸುದಾರಣೆಗೆ ನಾವೆ ಮುನ್ನುಡಿ ಬರೆಯೋಣ ಮತ್ತು ಇಂದನ ಉಳಿಸೋಣ.
8) ಎಶ್ಟು ಬೇಕೋ ಅಶ್ಟೇ ಆಹಾರ ತಟ್ಟೆಗೆ ಬಡಿಸಿಕೊಂಡು ತಿನ್ನೋಣ, ಆಸೆಗೆ ಬಿದ್ದು ಹೆಚ್ಚು ಬಡಿಸಿಕೊಂಡು ತಿನ್ನದೆ ಬಿಟ್ಟು ಇನ್ನೊಬ್ಬರ ಪಾಲಿನ ಅನ್ನ ವ್ಯರ‍್ತ ಮಾಡದಿರೋಣ ಮತ್ತು ರೈತನ ಶ್ರಮವನ್ನು ಗೌರವಿಸೋಣ.
9) ದುಡಿದ ಹಣವೆಲ್ಲ ಮೋಜಿಗಾಗಿ ಉಡಾಯಿಸದೆ ನಾಳಿನ ಸಂಕಶ್ಟಕ್ಕೂ ಸ್ವಲ್ಪ ಹಣ ಉಳಿಸೋಣ.
10) ಆದುನಿಕ ಆರ‍್ತಿಕ ನೀತಿಯಲ್ಲಿ ಸಾಕಶ್ಟು ಹಣ ಗಳಿಸಲು ಅವಕಾಶವಿದೆಯೆಂದು ನಮ್ಮನ್ನು ನಾವು ಮರೆಯುವಶ್ಟು ಗಳಿಸಿ, ಅಹಂಕಾರಿಗಳಾಗದೆ, ಔದಾರ‍್ಯ ಹೊಂದಿ ಸಹಾನೂಬೂತಿ, ಕರುಣೆಯ ಗುಣಗಳೊಂದಿಗೆ ಮನುಶ್ಯರಾಗಿ ಬದುಕೋಣ.
ಹೀಗೆ ಸಂಕಲ್ಪಗಳ ಪಟ್ಟಿ ಮಾಡುತ್ತಾ ಹೋದರೆ, ಸಾವಿರಾರು ಸಂಕಲ್ಪಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಕೇವಲ ಹೊಸ ವರ‍್ಶಕ್ಕೆ ಸಂಕಲ್ಪಗಳನ್ನಶ್ಟೆ ಮಾಡಿ ಅವುಗಳಲ್ಲಿ ಕೆಲವನ್ನಾದರೂ ಅನುಶ್ಟಾನಗೊಳಿಸದಿದ್ದರೆ ಸಂಕಲ್ಪ ಮಾಡುವುದು ವ್ಯರ್‍ತವಾದಂತೆ. ಕಾಲ ಬದಲಾಗುತ್ತಿರುವಾಗ, ಹಾಗೇ ಉಳಿಯದೆ ನಾವು ಕೂಡ ಬದಲಾಗುವ ಪ್ರಯತ್ನ ಮಾಡೋಣ. ನಾವು ಹೊಸ ವರ‍್ಶಕ್ಕೆ ಕಾಲಿಡುವ ಸಂದರ‍್ಬದಲ್ಲಿ ಏನಾಗದಿದ್ದರೂ ಪರವಾಗಿಲ್ಲ, ಕಡೆಯ ಪಕ್ಶ ಮನುಶ್ಯರಾಗಿ ಬಾಳೋಣ.
ಎಲ್ಲರಿಗೂ ಹೊಸ ವರ‍್ಶ 2025 ರ ಹಾರ‍್ದಿಕ ಶುಬಾಶಯಗಳು
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು