ತಟ್ಟನೆ ಮಾಡಿ ನೋಡಿ ಹೆಸರು ಬೇಳೆ ಪಾಯಸ
– ನಿತಿನ್ ಗೌಡ.
ಏನೇನು ಬೇಕು?
- ಹೆಸರು ಬೇಳೆ – ಅರ್‍ದ ಕಪ್ಪು
- ತುಪ್ಪ – ಅರ್‍ದ ಚಮಚ
- ಉಪ್ಪು – ಒಂದು ಚಿಟಿಗೆ
- ಏಲಕ್ಕಿ ಪುಡಿ – ಸ್ವಲ್ಪ
- ಗೋಡಂಬಿ – 8
- ಬಾದಮಿ – 5
- ದ್ರಾಕ್ಶಿ – 10
- ಬೆಲ್ಲ – ಅರ್‍ದ ಕಪ್ಪು
ಮಾಡುವ ಬಗೆ:
ಮೊದಲಿಗೆ ಹೆಸರುಬೇಳೆಯನ್ನು ಒಂದು ಬಾಣಲೆಗೆ ಹಾಕಿ, ಅದರ ಬಣ್ಣ ಬದಲಾಗುವವರೆಗೆ ನಡು ಉರಿಯಲ್ಲಿ ಹುರಿದು ಎತ್ತಿಟ್ಟುಕೊಳ್ಳಿರಿ. ಈಗ ಬಾಣಲೆಗೆ ಅರ್‍ದ ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ, ಬಾದಾಮಿ ಮತ್ತು ದ್ರಾಕ್ಶಿಯನ್ನು ಹುರಿದುಕೊಳ್ಳಿರಿ. ಈಗ ಹೆಸರುಬೇಳೆಯನ್ನು ನೀರಿನಲ್ಲಿ ತೊಳೆದಿಟ್ಟುಕೊಳ್ಳಿರಿ. ಆಮೇಲೆ ಕುಕ್ಕರ್ ಗೆ ಒಂದೂವರೆ ಕಪ್ಪು ನೀರು ಹಾಕಿ, ನೀರು ಕುದಿಸಿ. ನೀರು ಕುದಿಯುತ್ತಿದ್ದಂತಯೇ, ಅದಕ್ಕೆ ಬೇಳೆ ಹಾಕಿ ಎರಡು ಸೀಟಿ ಹೊಡಿಸಿ ಒಲೆ ಆರಿಸಿ.
ಈಗ ಒಂದು ಪಾತ್ರೆಗೆ ಅರ್‍ದ ಕಪ್ಪು ಬೆಲ್ಲ ಮತ್ತು ಅರ್‍ದ ಕಪ್ಪು ನೀರನ್ನು ಹಾಕಿ, ಬೆಲ್ಲ ಕರಗುವ ವರೆಗೆ ಕುದಿಸಿ. ಈಗ ಇದನ್ನು ಬೇಳೆಯೊಂದಿಗೆ ಬೆರೆಸಿ, ಎರಡು ನಿಮಿಶ ಬೇಯಿಸಿ. ನಂತರ ಒಂದು ಚಿಟಿಗೆ ಉಪ್ಪು ಹಾಕಿರಿ. ಆಮಲೆ ಇದಕ್ಕೆ ಏಲಕ್ಕಿ ಪುಡಿ ಹಾಕಿರಿ. ಆಮೇಲೆ ಇದಕ್ಕೆ ಹುರಿದಿಟ್ಟುಕೊಂಡ ಒಣಹಣ್ಣುಗಳಾದ ಗೋಡಂಬಿ, ದ್ರಾಕ್ಶಿ ಮತ್ತು ಬಾದಮಿಯನ್ನು ಹಾಕಿ ಒಂದೈದು ನಿಮಿಶ ಬೇಯಿಸಿ ಒಲೆ ಆರಿಸಿ. ಈಗ ಬಿಸಿ ಬಿಸಿ ಹೆಸರು ಬೇಳೆ ಪಾಯಸ ತಯಾರಾಗಿದ್ದು, ಇದನ್ನು ದೇವರಿಗೆ ನೈವೇದ್ಯವಾಗಿ ಕೂಡ ನೀಡಬಹುದು.
( ಚಿತ್ರಸೆಲೆ: ಬರಹಗಾರರು )
ಇತ್ತೀಚಿನ ಅನಿಸಿಕೆಗಳು