ಕುವೆಂಪು ಕವನಗಳ ಓದು – 14ನೆಯ ಕಂತು

– ಸಿ.ಪಿ.ನಾಗರಾಜ.

ಕುವೆಂಪು, kuvempu

ಬೆಕ್ಕು – ಇಲಿ

ಊರಿನ ಕೊಳೆಯನೆಲ್ಲ ತೊಳೆವ ನಿನಗೆಯೆ ತೊಳೆಯೆ
ನೀರಿಲ್ಲ ಓ ತೋಟಿ ಹಣವಂತರಿಗೆ ತೊಟ್ಟಿ
ಮನೆಗಳನು ಕಟ್ಟುವ ನಿನಗೆ ಮಲಗೆ ಬಡಹಟ್ಟಿ
ಗತಿಯಿಲ್ಲ ಓ ಕೂಲಿಗಾರ ಪೈರನು ಬೆಳೆಯೆ
ನೀನು ಲೋಕಕೆ ಕೂಳು ಆದರುಣ್ಣಲು ನಿನಗೆ
ಕಾಳಿಲ್ಲ ಓ ರೈತ ತಿಂದು ಧನಿಕರ ಬುತ್ತಿ
ತೇಗುತಿದೆ ಬಡಜನರೊ ಹೊಟ್ಟೆ ಬೆನ್ನಿಗೆ ಹತ್ತಿ
ನರಳಿ ಹೊರಳುತ್ತುರುಳುತಿರುವರು ಜವನ ಮನೆಗೆ
ಕೈಗೆ ಕೈದುಗಳಿಲ್ಲ ಬಾಯ್ಗೆ ವಾಗ್ಮಿತೆಯಿಲ್ಲ
ಮೈಲಿ ರಕ್ತದ ಬಿಂದುವಿಲ್ಲ ರಾಜ್ಯದ ಭಾರ
ನಿಮ್ಮ ಮೂಳೆಯ ಮೇಲೆ ರಾಜ್ಯಭಾರದ ಸೂತ್ರ
ಪಾತ್ರ ನಿಮಗಿಲ್ಲ ಶ್ರೀಮಂತ ಬೆಕ್ಕುಗಳೆಲ್ಲ
ಸಭೆಸೇರ್ದರಾದಂತೆ ಬಡ ಇಲಿಗಳುದ್ಧಾರ
ಕೊಬ್ಬಿದರು ಕುರಿಗಲ್ಲ ಹಬ್ಬ ಕುರುಬಗೆ ಮಾತ್ರ

‘ಬೆಕ್ಕು – ಇಲಿ’ ಎಂಬ ಕವನದ ಹೆಸರು ಒಂದು ರೂಪಕವಾಗಿದೆ. ಇಲಿಯನ್ನು ಬೇಟೆಯಾಡಿ ಕೊಲ್ಲುವ ಬೆಕ್ಕಿನಂತೆ ಸಿರಿವಂತರು ದುಡಿಯುವ ಶ್ರಮಜೀವಿಗಳಾದ ಬಡಜನರ ಬದುಕನ್ನು ಹೇಗೆ ಸಂಕಟಕ್ಕೆ ಗುರಿಮಾಡಿದ್ದಾರೆ ಎಂಬುದನ್ನು ಈ ಕವನದಲ್ಲಿ ಹೇಳಲಾಗಿದೆ.

“ಸಿರಿವಂತರು” ಎಂದರೆ ಜಾತಿ ಬಲ, ತೋಳ್ಬಲ, ರಾಜಕೀಯ ಗದ್ದುಗೆಯ ಆಡಳಿತ ಬಲ, ಬೂಮಿಯ ಒಡೆತನದ ಜಮೀನ್ದಾರಿಕೆಯ ಬಲ ಮತ್ತು ಹಣದ ಬಲವುಳ್ಳವರು.

(ಊರು=ಜನವಸತಿಯಿರುವ ನೆಲೆ; ಕೊಳೆ+ಅನ್+ಎಲ್ಲ; ಕೊಳೆ=ಗಲೀಜು/ಕೊಚ್ಚೆ/ಹೊಲಸು; ಅನ್=ಅನ್ನು; ತೊಳೆ=ಶುಚಿ ಮಾಡು/ತೊಡೆದು ಹಾಕು/ತೆಗೆದುಹಾಕು; ಓ=ವ್ಯಕ್ತಿಯು ಮತ್ತೊಬ್ಬನ ಗಮನವನ್ನು ತನ್ನತ್ತ ಸೆಳೆದು ಮಾತನಾಡಿಸುವಾಗ ಬಳಸುವ ಶಬ್ದ/ಏನಪ್ಪ/ಏನಯ್ಯ/ಏನಣ್ಣ; ತೋಟಿ=ಜಾಡಮಾಲಿ;

ಊರಿನ ಕೊಳೆಯನೆಲ್ಲ ತೊಳೆವ ನಿನಗೆಯೆ ತೊಳೆಯೆ ನೀರಿಲ್ಲ ಓ ತೋಟಿ=ಇಂಡಿಯಾ ದೇಶದಲ್ಲಿ ಸಾವಿರಾರು ವರುಶಗಳಿಂದಲೂ ಇದ್ದ ಬ್ರಾಹ್ಮಣ, ಕ್ಶತ್ರಿಯ, ವೈಶ್ಯ, ಶೂದ್ರ ಎಂಬ ವರ‍್ಣಗಳ ಮತ್ತು ಈ ವರ‍್ಣಗಳಿಂದ ಕವಲುಗೊಂಡು ಬಳಕೆಗೆ ಬಂದ ನೂರೆಂಟು ಬಗೆಯ ಜಾತಿಗಳ ಕಟ್ಟುಪಾಡುಗಳು ಇದಕ್ಕೆ ಕಾರಣವಾಗಿವೆ. ಮೇಲು ವರ್ಣದವರು ಮತ್ತು ಮೇಲು ಜಾತಿಯವರು ಊರಿನ ಕೆರೆಕಟ್ಟೆಬಾವಿಗಳ ನೀರನ್ನು ಮುಟ್ಟಲು ಕೆಳಜಾತಿಗೆ ಸೇರಿದ ತೋಟಿಯನ್ನು ಬಿಡುತ್ತಿರಲಿಲ್ಲ. ಊರಿನ ಹಾದಿಬೀದಿಗಳಲ್ಲಿ ಚೆಲ್ಲಾಡಿದ್ದ ಕಸಕಡ್ಡಿಯನ್ನು, ಕೊಳೆತು ನಾರುತ್ತಿರುವ ವಸ್ತುವನ್ನು ಮತ್ತು ಚರಂಡಿಯಲ್ಲಿ ತುಂಬಿರುವ ಕೊಚ್ಚೆಯನ್ನು ತೋಟಿಯು ಹೊರತೆಗೆದು ಶುಚಿಗೊಳಿಸುವಾಗ, ಅವನ ಕಯ್ ಮಯ್ ಎಲ್ಲವೂ ಕೊಳೆಯಾಗುತ್ತಿತ್ತು. ಆದರೆ ಆತ ಅದನ್ನು ತೊಳೆದುಕೊಳ್ಳಲು ಊರಿಂದ ದೂರದಲ್ಲಿ ಮೇಲು ವರ‍್ಣದವರ ಮತ್ತು ಮೇಲುಜಾತಿಯವರ ಒಡೆತನಕ್ಕೆ ಸೇರಿರದ ನೀರಿನ ತಾಣದತ್ತ ಹೋಗಬೇಕಿತ್ತೇ ಹೊರತು, ಊರಿನ ಒಳಗಡೆ ಆತನಿಗೆ ನೀರು ದೊರೆಯುತ್ತಿರಲಿಲ್ಲ;

ಹಣವಂತ=ಸಿರಿವಂತ; ತೊಟ್ಟಿ=ಮನೆಯ ನಡುವಣ ಜಾಗದಲ್ಲಿ ಮೇಲಿನ ಚಾವಣಿಯಿಲ್ಲದೆ ಗಾಳಿ ಬೆಳಕು ಮಳೆಹನಿಗೆ ತೆರೆದುಕೊಂಡಿರುವ ನಾಲ್ಕು ಮೂಲೆಗಳನ್ನುಳ್ಳ ಚಚ್ಚೌಕವಾದ ಜಾಗ; ಮಲಗು=ನಿದ್ರಿಸು; ಹಟ್ಟಿ=ಮನೆ; ಬಡಹಟ್ಟಿ=ಗುಡಿಸಲು; ಗತಿ+ಇಲ್ಲ; ಗತಿ=ಆಶ್ರಯ; ಕೂಲಿಗಾರ=ದಿನ ಬೆಳಗಾದರೆ ಉಳ್ಳವರ ಬಳಿಯಲ್ಲಿ ದುಡಿಮೆಯನ್ನು ಮಾಡಿ ಅಂದಂದಿನ ಹೊಟ್ಟೆಪಾಡನ್ನು ನೀಗಿಸಿಕೊಳ್ಳವವನು;

ಹಣವಂತರಿಗೆ ತೊಟ್ಟಿ ಮನೆಗಳನು ಕಟ್ಟುವ ನಿನಗೆ ಮಲಗೆ ಬಡಹಟ್ಟಿ ಗತಿಯಿಲ್ಲ ಓ ಕೂಲಿಗಾರ=ಸಿರಿವಂತರಿಗೆ ದೊಡ್ಡದೊಡ್ಡ ಮನೆಗಳನ್ನು ಕಟ್ಟಿಕೊಡುವ ಕೂಲಿಯವನಿಗೆ ನೆಮ್ಮದಿಯಿಂದ ಬದುಕಲು ಬೇಕಾದ ಸ್ವಂತ ಮನೆಯಿರುವುದಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಹಣಕಾಸಿನ ವ್ಯವಹಾರವು ಸಿರಿವಂತರು ಹೆಚ್ಚು ಹೆಚ್ಚು ಹಣವನ್ನು ಗೋರಿ ಗುಡ್ಡೆ ಹಾಕಿಕೊಳ್ಳುವಂತಹ ರೀತಿಯಲ್ಲಿ ಮತ್ತು ದೇಹವನ್ನು ದಂಡಿಸಿ ದುಡಿಯುವ ಶ್ರಮಜೀವಿಗಳಾದ ಕೂಲಿಕಾರರು ಅತಿ ಕಡಿಮೆ ಹಣವನ್ನು ಪಡೆಯುವಂತಹ ರೀತಿಯಲ್ಲಿ ರಚನೆಗೊಂಡಿದೆ. ಆದ್ದರಿಂದ ಕೂಲಿಕಾರರಲ್ಲಿ ಬಹುತೇಕ ಮಂದಿ ಜೀವನವಿಡೀ ದುಡಿದರೂ ತಮ್ಮದೇ ಆದ ಒಂದು ಸೂರನ್ನು ಹೊಂದಲಾಗದೆ ನರಳುತ್ತಿರುತ್ತಾರೆ;

ಪೈರು=ಹೊಲಗದ್ದೆಗಳಲ್ಲಿ ಬೆಳೆಯುವ ಬೆಳೆ; ಲೋಕ=ಜಗತ್ತು/ಜನಸಮುದಾಯ; ಕೂಳು=ಅನ್ನ/ಉಣಿಸು ತಿನಸು/ಆಹಾರ; ಆದರೆ+ಉಣ್ಣಲು; ಉಣ್ಣು=ತಿನ್ನು/ಸೇವಿಸು; ಕಾಳು+ಇಲ್ಲ; ಕಾಳು=ದವಸ/ದಾನ್ಯ;

ಪೈರನು ಬೆಳೆಯೆ ನೀನು ಲೋಕಕೆ ಕೂಳು ಆದರುಣ್ಣಲು ನಿನಗೆ ಕಾಳಿಲ್ಲ ಓ ರೈತ=ಹೊಲಗದ್ದೆತೋಟಗಳಲ್ಲಿ ದುಡಿಯುವ ಬೇಸಾಯಗಾರರಲ್ಲಿ ಹೆಚ್ಚಿನವರು ಬೂಮಿಯ ಒಡೆತನವಿಲ್ಲದ ಕೂಲಿಯವರಾಗಿರುತ್ತಾರೆ. ಇಂತಹ ಕೂಲಿಕಾರರ ಬೆವರಿನ ದುಡಿಮೆಯಿಂದ ಬೆಳೆದ ಬೆಳೆಯಲ್ಲಿ ಬಹುದೊಡ್ಡ ಪಾಲು ಜಮೀನ್ದಾರನ ಮನೆಯ ಕಣಜವನ್ನು ಸೇರುತ್ತದೆ. ಜಮೀನ್ದಾರಿಕೆಯ ವ್ಯವಸ್ತೆಯಿಂದಾಗಿ ಕೂಲಿಯಾಳಾಗಿ ದುಡಿದ ಬೇಸಾಯಗಾರನು ಹಸಿವಿನ ಸಂಕಟದಿಂದ ಜೀವನದ ಉದ್ದಕ್ಕೂ ನರಳುತ್ತಿರುತ್ತಾನೆ;

ಧನಿಕ=ಸಿರಿವಂತ/ಹಣವಂತ; ಬುತ್ತಿ=ದೂರದ ಊರಿಗೆ ಹೋಗುವವರು ಹಾದಿಯ ನಡುವೆ ತಂಗಿದಾಗ ಉಣಲೆಂದು ಜತೆಯಲ್ಲಿ ತೆಗೆದುಕೊಂಡು ಹೋಗುವ ತಿನಿಸು ಉಣಿಸಿನ ಗಂಟು; ತೇಗು=ಹೊಟ್ಟೆಯ ತುಂಬಾ ಉಂಡ ನಂತರ, ಕೆಲವೊಮ್ಮೆ ಗಂಟಲಿಂದ ಹೊರಹೊಮ್ಮುವ ದನಿ; ಬಡಜನ=ಉಣಲು ಅನ್ನವಿಲ್ಲದೆ, ತೊಡಲು ಬಟ್ಟೆಯಿಲ್ಲದೆ, ವಾಸಿಸಲು ಮನೆಯಿಲ್ಲದೆ ಹಸಿವು ಮತ್ತು ಅಪಮಾನದಿಂದ ನರಳುತ್ತಿರುವ ಮಂದಿ; ಹೊಟ್ಟೆಗೆ ಬೆನ್ನು ಹತ್ತಿ=ಇದೊಂದು ನುಡಿಗಟ್ಟು. ಹಸಿವಿನ ಸಂಕಟದಿಂದ ಬಹುಕಾಲ ನರಳುತ್ತಿರುವ ವ್ಯಕ್ತಿಯ ಹೊಟ್ಟೆಯ ಕರುಳುಗಳೆಲ್ಲ ಸುಂಡುಹೋದಂತಾಗಿ ಹೊಟ್ಟೆಯು ತೆಳ್ಳಗಾಗುತ್ತದೆ. ಹೊಟ್ಟೆ ಮತ್ತು ಬೆನ್ನು ಒಂದೇ ಏನೋ ಎನ್ನುವಂತೆ ಕಾಣುತ್ತದೆ. ವ್ಯಕ್ತಿಯು ತುಂಬ ಹಸಿವಿನಿಂದ ನರಳುತ್ತ ಜೀವನ ಸಾಗಿಸುತ್ತಿರುವುದನ್ನು ಈ ನುಡಿಗಟ್ಟು ಸೂಚಿಸುತ್ತದೆ; ಹೊರಳುತ್ತ+ಉರುಳುತ+ಇರುವರು; ಹೊರಳು=ಪಕ್ಕಕ್ಕೆ ತಿರುಗು; ಉರುಳು=ಕೆಳಕ್ಕೆ ಬೀಳು; ಜವ=ಯಮ; ಜವನ ಮನೆ=ಸಾವಿನ ಮನೆ;

ತಿಂದು ಧನಿಕರ ಬುತ್ತಿ ತೇಗುತಿದೆ ಬಡಜನರೊ ಹೊಟ್ಟೆ ಬೆನ್ನಿಗೆ ಹತ್ತಿ ನರಳಿ ಹೊರಳುತ್ತುರುಳುತಿರುವರು ಜವನ ಮನೆಗೆ=ಕೋಟಿಗಟ್ಟಲೆ ಸಂಪತ್ತುಳ್ಳ ಸಿರಿವಂತರು ಉಂಡು ತಿಂದು ತೇಗಿ ಮೆರೆಯುತ್ತಿದ್ದರೆ, ಅಂತಹ ಸಂಪತ್ತೆಲ್ಲವನ್ನೂ ತಮ್ಮ ದುಡಿಮೆಯಿಂದ ನಾಡಿಗೆ ನೀಡಿದ ಬಡಜನತೆಯು ಹಸಿವಿನ ಸಂಕಟದಲ್ಲಿ ಬೆಂದು ನೊಂದು ಹೊರಳಾಡಿ ನರಳುತ್ತ ಸಾವನ್ನಪ್ಪುತ್ತಿದ್ದಾರೆ. ದೇಶದಲ್ಲಿರುವ ಜನರೆಲ್ಲರ ನೆಮ್ಮದಿಯ ಜೀವನಕ್ಕೆ ಆಗಿ ಮಿಗುವ ಮೊತ್ತದ ಸಂಪತ್ತು ನಮ್ಮ ದೇಶದಲ್ಲಿದ್ದರೂ , ನಾಡಿನ ಜನರೆಲ್ಲರಿಗೂ ಸಮಾನವಾಗಿ ಸಂಪತ್ತು ಹಂಚಿಕೆಯಾಗದಂತಹ ಸಾಮಾಜಿಕ ರಚನೆ ಮತ್ತು ಹಣಕಾಸಿನ ವ್ಯವಸ್ತೆಯು ಇರುವುದರಿಂದ ದುಡಿಯುವ ಶ್ರಮಜೀವಿಗಳು ಅಕಾಲ ಮರಣಕ್ಕೆ ತುತ್ತಾಗುತ್ತಿದ್ದಾರೆ;

ಕೈದುಗಳ್+ಇಲ್ಲ; ಕೈದು=ಹತಾರ/ಶಸ್ತ್ರ; ವಾಗ್ಮಿತೆ+ಇಲ್ಲ; ಬಾಯ್ಗೆ=ಬಾಯಿಗೆ; ವಾಗ್ಮಿತೆ=ಚೆನ್ನಾಗಿ ಮಾತನಾಡುವ ಕುಶಲತೆ/ಮಾತುಗಾರಿಕೆ; ಮೈಲಿ=ದೇಹದಲ್ಲಿ; ಬಿಂದು+ಇಲ್ಲ; ಬಿಂದು=ಒಂದು ಹನಿ/ತೊಟ್ಟು;

ಕೈಗೆ ಕೈದುಗಳಿಲ್ಲ ಬಾಯ್ಗೆ ವಾಗ್ಮಿತೆಯಿಲ್ಲ ಮೈಲಿ ರಕ್ತದ ಬಿಂದುವಿಲ್ಲ=ಜೀವನಕ್ಕೆ ಅಗತ್ಯವಾದ ಅನ್ನ ಬಟ್ಟೆ ವಸತಿ ವಿದ್ಯೆ ಆರೋಗ್ಯದಿಂದ ವಂಚಿತರಾಗಿ ಕಡುಬಡತನದ ಬೇಗೆಯಲ್ಲಿ ಬೇಯುತ್ತಿರುವ ದುಡಿಯುವ ಶ್ರಮಜೀವಿಗಳೆಲ್ಲ ಒಂದಾಗಿ ಜತೆಗೂಡಿ ತಮ್ಮನ್ನು ಇಂತಹ ಸಂಕಟಕ್ಕೆ ಗುರಿಮಾಡಿರುವ ವ್ಯವಸ್ತೆ ಮತ್ತು ಸಿರಿವಂತರ ಎದುರಾಗಿ ಹೋರಾಡಲು ಬೇಕಾದ ಶಕ್ತಿಯು ಬಡವರ ದೇಹದಲ್ಲಿಲ್ಲ; ಎದುರಾಳಿಗಳನ್ನು ಮಾತಿನಲ್ಲಿ ಮಣಿಸಬಲ್ಲ ಚಾಕಚಕ್ಯತೆಯು ಬಡವರಿಗೆ ಗೊತ್ತಿಲ್ಲ; ಹಗೆಗಳನ್ನು ಸದೆಬಡಿಯಲು ಬಡವರ ಬಳಿ ಯಾವುದೇ ಹತಾರಗಳಿಲ್ಲ;

ರಾಜ್ಯ=ರಾಜನ ಇಲ್ಲವೇ ಆಡಳಿತದ ಗದ್ದುಗೆಯಲ್ಲಿರುವವರ ನಿಯಂತ್ರಣಕ್ಕೆ ಒಳಪಟ್ಟ ಪ್ರದೇಶ; ಭಾರ=ಹೊರೆ/ಹೊಣೆಗಾರಿಕೆ/ಜವಾಬ್ದಾರಿ; ರಾಜ್ಯದ ಭಾರ=ರಾಜ್ಯದ ಜನಸಮುದಾಯದ ಹಿತವನ್ನು ಕಾಪಾಡುವ ಹೊಣೆಗಾರಿಕೆ;

ರಾಜ್ಯದ ಭಾರ ನಿಮ್ಮ ಮೂಳೆಯ ಮೇಲೆ=ರಾಜ್ಯದ ಜನಸಮುದಾಯದ ನೆಮ್ಮದಿಯ ಜೀವನಕ್ಕೆ ಬೇಕಾದ ದವಸದಾನ್ಯಗಳನ್ನು ಬೆಳೆಯುವ ಮತ್ತು ಸಮಾಜಕ್ಕೆ ಅಗತ್ಯವಾದುದೆಲ್ಲವನ್ನೂ ನಿರ‍್ಮಿಸುವ ಹೊರೆಯೆಲ್ಲವೂ ಕೋಟಿಗಟ್ಟಲೆ ಶ್ರಮಜೀವಿಗಳ ಮಯ್ ಮನಗಳನ್ನೇ ಅವಲಂಬಿಸಿದೆ; ಹೆದ್ದಾರಿಗಳು, ಅಣೆಕಟ್ಟೆಗಳು, ದೊಡ್ಡ ದೊಡ್ಡ ಕಟ್ಟಡಗಳು ಮೊದಲುಗೊಂಡು ನಾಡನ್ನು ಕಟ್ಟುವ ಎಲ್ಲ ಬಗೆಯ ಕೆಲಸಗಳ ಹೊರೆಯು ಬಡಜನರ ಮೇಲೆಯೆ ಬಿದ್ದಿದೆ;

ರಾಜ್ಯಭಾರ=ರಾಜ್ಯವನ್ನು ಆಳುವುದು; ಸೂತ್ರ=ಯಾವುದೇ ವಸ್ತುವಿಗೆ ನೂಲನ್ನು ಪೋಣಿಸಿ, ಅದನ್ನು ನಮ್ಮ ಇಚ್ಚೆಗೆ ತಕ್ಕಂತೆ ಆಡಿಸಲು ಇಲ್ಲವೇ ನಿಯಂತ್ರಿಸಲು ಬಳಸುವುದು; ಪಾತ್ರ=ಯಾವುದೇ ಒಂದು ಕೆಲಸವನ್ನು ಮಾಡುವಾಗ ವ್ಯಕ್ತಿಯ ತಾನು ಅದರಲ್ಲಿ ಸಕ್ರಿಯವಾಗಿ ತೊಡಗುವುದು; ನಿಮಗೆ+ಇಲ್ಲ;

ರಾಜ್ಯಭಾರದ ಸೂತ್ರ ಪಾತ್ರ ನಿಮಗಿಲ್ಲ=ರಾಜ್ಯವನ್ನು ಆಳುವ ಅಂಗಗಳಾದ ಶಾಸಕಾಂಗ, ಕಾರ‍್ಯಾಂಗ ಮತ್ತು ನ್ಯಾಯಾಂಗಗಳಲ್ಲಿ ದುಡಿಯುವ ಶ್ರಮಜೀವಿಗಳಾದ ಬಡಜನತೆಗೆ ಯಾವೊಂದು ಅವಕಾಶವೂ ಇಲ್ಲ;

ಶ್ರೀಮಂತ=ಸಿರಿವಂತ/ಹಣವಂತ; ಬೆಕ್ಕುಗಳ್+ಎಲ್ಲ; ಶ್ರೀಮಂತ ಬೆಕ್ಕುಗಳು=ಇದೊಂದು ರೂಪಕ. ಜಾತಿ ಬಲ, ತೋಳ್ಬಲ, ರಾಜಕೀಯ ಗದ್ದುಗೆಯ ಆಡಳಿತ ಬಲ, ಬೂಮಿಯ ಒಡೆತನದ ಜಮೀನ್ದಾರಿಕೆಯ ಬಲ ಮತ್ತು ಹಣದ ಬಲವುಳ್ಳ ವ್ಯಕ್ತಿಗಳು; ಸಭೆಸೇರ್ದರೆ+ಆದ+ಅಂತೆ; ಸಭೆಸೇರ್ದರೆ=ಒಟ್ಟಾಗಿ ಜತೆಗೂಡಿ ಮಾತನಾಡತೊಡಗಿದರೆ/ಚಿಂತಿಸತೊಡಗಿದರೆ/ಯೋಜನೆಗಳನ್ನು ಹಾಕತೊಡಗಿದರೆ; ಆದಂತೆ=ಆದ ಹಾಗೆಯೇ ಎಂಬ ವ್ಯಂಗ್ಯದ ದನಿ/ನಿಶ್ಚಯವಾಗಿ ಆಗುವುದಿಲ್ಲ; ಇಲಿಗಳ+ಉದ್ಧಾರ; ಬಡ ಇಲಿಗಳು=ಜಾತಿಬಲವಿಲ್ಲದ, ರಾಜಕೀಯ ಗದ್ದುಗೆಯ ಆಡಳಿತ ಬಲವಿಲ್ಲದ, ಬೂಮಿ ಒಡೆತನವಿಲ್ಲದ ಮತ್ತು ಸಂಪತ್ತಿಲ್ಲದ ದುಡಿಯುವ ಶ್ರಮಜೀವಿಗಳಾದ ಬಡಜನರು; ಉದ್ಧಾರ=ಏಳಿಗೆ;

ಶ್ರೀಮಂತ ಬೆಕ್ಕುಗಳೆಲ್ಲ ಸಭೆಸೇರ್ದರಾದಂತೆ ಬಡ ಇಲಿಗಳುದ್ಧಾರ=ಯಾರು ನಾಡಿನ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆಯೋ, ಯಾರು ಜಾತಿ ಮತ ದೇವರ ಹೆಸರಿನಲ್ಲಿ ಜನಸಮುದಾಯಗಳಲ್ಲಿ ಪರಸ್ಪರ ಅಪನಂಬಿಕೆ, ಅಸೂಯೆ, ಹಗೆತನವನ್ನುಂಟು ಮಾಡಿ ಸಮಾಜದ ನೆಮ್ಮದಿಯ ಬದುಕನ್ನು ಹಾಳು ಮಾಡುತ್ತಿದ್ದಾರೆಯೋ, ಯಾರು ಬಡಜನರ ದುಡಿಮೆಯಿಂದ ಉತ್ಪನ್ನವಾದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗದಂತೆ ತಡೆಯೊಡ್ಡುತ್ತಿದ್ದಾರೆಯೋ ಅಂತಹ ವ್ಯಕ್ತಿಗಳು ಜತೆಗೂಡಿ ನಡೆಸುವ ಚಿಂತನೆಯಾಗಲಿ ಇಲ್ಲವೇ ನಡೆಸುವ ಆಡಳಿತವಾಗಲಿ ಎಂದೆಂದಿಗೂ ಬಡಜನರ ಬದುಕಿನ ಬವಣೆಗಳನ್ನು ನಿವಾರಿಸಿ, ಅವರಿಗೆ ಒಳ್ಳೆಯ ಬದುಕನ್ನು ನೀಡುವುದಿಲ್ಲ ಎಂಬ ವ್ಯಂಗ್ಯದ ದನಿಯಲ್ಲಿ ಈ ನುಡಿಗಳು ಬಳಕೆಯಾಗಿವೆ;

ಕೊಬ್ಬು=ದಪ್ಪನಾಗುವುದು/ಬಲಿಯುವುದು/ದೇಹದಲ್ಲಿ ನೆಣ ಹೆಚ್ಚಾಗುವುದು; ಹಬ್ಬ=ಉತ್ಸವ/ಆನಂದ; ಕುರುಬ=ಕುರಿಯನ್ನು ಮೇಯಿಸುವವನು;

ಕೊಬ್ಬಿದರು ಕುರಿಗಲ್ಲ ಹಬ್ಬ ಕುರುಬಗೆ ಮಾತ್ರ=“ಕುರಿ ಕೊಬ್ಬಿದಶ್ಟು ಕುರುಬನಿಗೆ ಲಾಬ” ಎಂಬ ಗಾದೆಯು ಇಲ್ಲಿ ಒಂದು ರೂಪಕವಾಗಿ ಬಳಕೆಯಾಗಿದೆ. ದುಡಿಯುವ ಶ್ರಮಜೀವಿಗಳಾದ ಬಡಜನತೆಗೆ ಅನ್ನ, ಬಟ್ಟೆ, ವಸತಿ, ವಿದ್ಯೆ ಮತ್ತು ಆರೋಗ್ಯ ದೊರಕುವಂತಾಗಬೇಕೆಂದು ಸರ‍್ಕಾರದ ವತಿಯಿಂದ ಕಯ್ಗೊಳ್ಳುವ ದೊಡ್ಡ ದೊಡ್ಡ ಯೋಜನೆಗಳ ಕೋಟಿಗಟ್ಟಲೆ ಹಣದಲ್ಲಿ ಬಹುದೊಡ್ಡ ಮೊತ್ತವನ್ನು ನಾಡನ್ನಾಳುವ ಗದ್ದುಗೆಯಲ್ಲಿ ಕುಳಿತಿರುವ ವ್ಯಕ್ತಿಗಳೇ ಲಪಟಾಯಿಸಿ, ಇನ್ನೂ ಹೆಚ್ಚಿನ ಸಿರಿವಂತರಾಗಿ ಮೆರೆಯತೊಡಗುತ್ತಾರೆ. ಶ್ರಮಜೀವಿಗಳಾದ ಬಡವರ ಪಾಲಿಗೆ ದೊರೆಯಬೇಕಾಗಿದ್ದ ಸಂಪತ್ತು ಕೊನೆಗೂ ಸಿರಿವಂತರಿಗೆ ಸೇರುತ್ತದೆ ಎಂಬ ತಿರುಳಿನಲ್ಲಿ ಈ ನುಡಿಗಳು ಬಳಕೆಯಾಗಿವೆ.)

(ಚಿತ್ರಸೆಲೆ : karnataka.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Raghuramu N.V. says:

    ತುಂಬ ಚೆನ್ನಾಗಿದೆ ಸರ್. ಕುವೆಂಪುರವರನ್ನು ಈ ರೀತಿ ಎಲ್ಲರಿಗೂ ಪರಿಚಯ ಮಾಡಿಸುತ್ತಿರುವುದು ಬಹಳ ಒಳ್ಳೆಯ ಕೆಲಸ.

ಅನಿಸಿಕೆ ಬರೆಯಿರಿ:

%d bloggers like this: