ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 1

shabdamanidarpanaಹಳೆಗನ್ನಡದ ಮೇಲೆ ಕೇಶಿರಾಜನು 13ನೇ ಶತಮಾನದಲ್ಲಿ ಬರೆದಿದ್ದ ಶಬ್ದಮಣಿದರ‍್ಪಣವೆಂಬ ವ್ಯಾಕರಣ ಒಂದು ಒಳ್ಳೆಯ ಕನ್ನಡ ವ್ಯಾಕರಣವೆಂಬುದಾಗಿ ನಂಬಿಕೊಂಡಿರುವವರು ಇವತ್ತಿಗೂ ಹಲವು ಮಂದಿ ಇದ್ದಾರೆ. ಆದರೆ, ಈ ನಂಬಿಕೆಗೆ ಆದಾರವೇನಿಲ್ಲ.

ಸಂಸ್ಕ್ರುತ ವ್ಯಾಕರಣದ ಕಟ್ಟಲೆಗಳನ್ನು ಕನ್ನಡಕ್ಕೆ ಎಶ್ಟು ಸಾದ್ಯವೋ ಅಶ್ಟರ ಮಟ್ಟಿಗೆ ಅಳವಡಿಸುವಂತಹ ಒಂದು ಪ್ರಯತ್ನವನ್ನಶ್ಟೇ ಆತ ಈ ವ್ಯಾಕರಣದಲ್ಲಿ ನಡೆಸಿದ್ದ. ಕನ್ನಡ ವ್ಯಾಕರಣ, ಅದು ಹಳೆಗನ್ನಡದ್ದಿರಲಿ, ಹೊಸಗನ್ನಡದ್ದಿರಲಿ, ಸಂಸ್ಕ್ರುತ ವ್ಯಾಕರಣಕ್ಕಿಂತ ತೀರಾ ಬೇರಾದುದು; ಹಲವು ತಳಮಟ್ಟದ ವಿಶಯಗಳಲ್ಲೇನೇ ಈ ಎರಡು ವ್ಯಾಕರಣಗಳ ಕಟ್ಟಲೆಗಳ ನಡುವೆ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನೆಲ್ಲ ಗಮನಿಸಿ, ಹಳೆಗನ್ನಡಕ್ಕೆ ಅದರದೇ ಆದ ವ್ಯಾಕರಣವೊಂದನ್ನು ಬರೆದಲ್ಲಿ ಮಾತ್ರ ಅದನ್ನೊಂದು ಒಳ್ಳೆಯ ಹಳೆಗನ್ನಡ ವ್ಯಾಕರಣವೆಂದು ಕರೆಯಲು ಬರುತ್ತದೆ.

ಹಳೆಗನ್ನಡ ವ್ಯಾಕರಣಕ್ಕೂ ಸಂಸ್ಕ್ರುತ ವ್ಯಾಕರಣಕ್ಕೂ ನಡುವೆ ಇರುವ ಇಂತಹ ತಳಮಟ್ಟದ ವ್ಯತ್ಯಾಸಗಳಲ್ಲಿ ಮುಕ್ಯವಾದ ಕೆಲವನ್ನು ಕೆಳಗೆ ಪರಿಶೀಲಿಸಲಾಗಿದೆ, ಮತ್ತು ಇವನ್ನು ಗಮನಿಸುವಲ್ಲಿ ಕೇಶಿರಾಜನ ಶಬ್ದಮಣಿದರ‍್ಪಣ ಹೇಗೆ ಸೋತುಹೋಗಿದೆ, ಮತ್ತು ಆ ರೀತಿ ಸೋತುಹೋದುದರಿಂದಾಗಿ ಅದು ಹೇಗೆ ಒಂದು ಒಳ್ಳೆಯ ಹಳೆಗನ್ನಡ ವ್ಯಾಕರಣವಾಗಲಾರದು ಎಂಬುದನ್ನು ಕೆಳಗೆ ವಿವರಿಸಲಾಗಿದೆ:

(1) ಪದಗಳ ಬಗೆಗಳು:

ಹಳೆಗನ್ನಡದಲ್ಲಿ ಮುಕ್ಯವಾಗಿ ಮೂರು ಬಗೆಯ ಪದಗಳು ಬಳಕೆಯಾಗುತ್ತವೆ; ಇವನ್ನು ಹೆಸರುಪದ (ಕೊಳ, ಬಿಲ್, ಕೋಂಟೆ, ತುಂಬಿ), ಎಸಕಪದ (ಎಱಗು, ಮೊಱೆ, ನೋಡು, ಎನ್), ಮತ್ತು ಪರಿಚೆಪದ (ಬಡ, ಚೆನ್ನ, ಎಳ, ನಲ್, ಪೊಸ) ಎಂಬುದಾಗಿ ಇವನ್ನು ಕರೆಯಬಹುದು. ಇದಕ್ಕೆ ಬದಲು, ಸಂಸ್ಕ್ರುತದಲ್ಲಿ ಹೆಸರು(ನಾಮ)ಪದ ಮತ್ತು ಎಸಕ(ಕ್ರಿಯಾ)ಪದ ಎಂಬುದಾಗಿ ಎರಡು ಬಗೆಯ ಪದಗಳು ಮಾತ್ರ ಇವೆ.

ಹಳೆಗನ್ನಡದಲ್ಲಿ ಪರಿಚೆಪದಗಳಿಗೂ ಉಳಿದ ಎರಡು ಬಗೆಯ ಪದಗಳಿಗೂ ನಡುವಿರುವ ಮುಕ್ಯವಾದ ವ್ಯತ್ಯಾಸವೇನೆಂದರೆ, ಪರಿಚೆಪದಗಳನ್ನು ನೇರವಾಗಿ ಹೆಸರುಪದಗಳೊಂದಿಗೆ ಅವುಗಳ ವಿಶೇಶಣಗಳಾಗಿ ಬಳಸಲು ಬರುತ್ತದೆ (ಬಡ ಪಾರ‍್ವಂ, ನಲ್ಲಂಬು, ಬೆಳ್ಮುಗಿಲ್); ಆದರೆ, ಹೆಸರುಪದ ಇಲ್ಲವೇ ಎಸಕಪದಗಳನ್ನು ಆ ರೀತಿ ನೇರವಾಗಿ ಹೆಸರುಪದಗಳೊಂದಿಗೆ ಅವುಗಳ ವಿಶೇಶಣಗಳಾಗಿ ಬಳಸಲು ಬರುವುದಿಲ್ಲ; ಇದಕ್ಕಾಗಿ ಅವಕ್ಕೆ ಪತ್ತುಗೆಯ ಅ ಒಟ್ಟನ್ನು (ಪ್ರತ್ಯಯವನ್ನು) ಸೇರಿಸಬೇಕಾಗುತ್ತದೆ (ಕೊಳನ ತಡಿ, ಬಿಲ್ಲ ಗೊಲೆ, ತುಂಬಿಯ ಬಂಬಲ್ಗಳ್; ಎಱಗಿದ ತರುಗಳ್, ಮೊರೆವ ತುಂಬಿಗಳ್, ಅಱಿಯದ ಮಾತು). ಇದಲ್ಲದೆ, ಪರಿಚೆಪದಗಳನ್ನು ಹೆಸರುಪದಗಳ ಜಾಗದಲ್ಲಿ ಬಳಸಬೇಕಿದ್ದರೆ ಅವಕ್ಕೆ ಒಟ್ಟುಗಳನ್ನು ಸೇರಿಸಿ ಹೆಸರುಪದವನ್ನಾಗಿ ಮಾರ‍್ಪಡಿಸಬೇಕಾಗುತ್ತದೆ (ಬಡವನ್ ವೇಡಿದನ್, ಇನಿಯಳ್ಗೆ ಅರಿಪಿದೊಡೆ, ಪೊಸತಂ ಮಾಡಿದುದು). ಇಂತಹ ಬೇರೆಯೂ ಹಲವು ವ್ಯತ್ಯಾಸಗಳು ಹೆಸರುಪದ ಮತ್ತು ಎಸಕಪದಗಳಿಗೂ ಪರಿಚೆಪದಗಳಿಗೂ ನಡುವೆ ಹಳೆಗನ್ನಡದಲ್ಲಿವೆ.

ಸಂಸ್ಕ್ರುತದಲ್ಲಿ ಪರಿಚೆಪದಗಳೆಂಬ ಮೂರನೇ ಬಗೆಯ ಪದಗಳಿಲ್ಲ; ಹಳೆಗನ್ನಡದಲ್ಲಿ ಪರಿಚೆ ಪದಗಳು ಎಂತಹ ಕೆಲಸವನ್ನು ನಡೆಸಬೇಕಾಗಿದೆಯೋ ಅವನ್ನು ಸಂಸ್ಕ್ರುತದಲ್ಲಿ ಹೆಸರು(ನಾಮ)ಪದಗಳೇ ನಡೆಸುತ್ತವೆ. ಎತ್ತುಗೆಗಾಗಿ, ಸಂಸ್ಕ್ರುತದಲ್ಲಿ ಹೆಸರುಪದಗಳ ವಿಶೇಶಣಗಳಾಗಿ ಹೆಸರುಪದಗಳನ್ನೇ ಬಳಸಲಾಗುತ್ತದೆ, ಮತ್ತು ಈ ಕಾರಣಕ್ಕಾಗಿ ಅವಕ್ಕೂ ವಿಬಕ್ತಿಪ್ರತ್ಯಯಗಳನ್ನು ಸೇರಿಸಬೇಕಾಗುತ್ತದೆ (ಕೃಷ್ಣಃ ಸರ್ಪಃ, ಕೃಷ್ಣಂ ಸರ್ಪಂ, ಕೃಷ್ಣೇನ ಸರ್ಪೇಣ). ಅವೆರಡನ್ನೂ ಸಮಾಸದ ಮೂಲಕ ಒಂದೇ ಪದವನ್ನಾಗಿ ಮಾಡಲಾಗಿದೆಯಾದರೆ ಮಾತ್ರ ಈ ರೀತಿ ಎರಡು ಬಾರಿ ವಿಬಕ್ತಿ ಪ್ರತ್ಯಯಗಳನ್ನು ಬಳಸಬೇಕಾಗುವುದಿಲ್ಲ.

ಹಳೆಗನ್ನಡಕ್ಕೂ ಸಂಸ್ಕ್ರುತಕ್ಕೂ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸುವಲ್ಲಿ ಕೇಶಿರಾಜನ ಶಬ್ದಮಣಿದರ‍್ಪಣ ಸೋತುಹೋಗಿದೆ, ಮತ್ತು ಇದರಿಂದಾಗಿ ಅದು ಹಲವಾರು ಕಡೆಗಳಲ್ಲಿ ಗೊಂದಲಕ್ಕೊಳಗಾಗಿರುವುದನ್ನು ಕಾಣಬಹುದು.

ಎತ್ತುಗೆಗಾಗಿ, ಹಳೆಗನ್ನಡದಲ್ಲಿ ಎಸಕಪದಗಳ ಪರಿಚೆರೂಪ(ಕೃದಂತ)ಗಳಿಗೂ ಹೆಸರುರೂಪ(ಕೃಲ್ಲಿಂಗ)ಗಳಿಗೂ ನಡುವೆ ವ್ಯತ್ಯಾಸವಿದೆ; ಇರ‍್ದ, ಈಯದ ಎಂಬಂತಹವು ಪರಿಚೆರೂಪಗಳು, ಮತ್ತು ಇರ‍್ದನ್, ಇರ‍್ದರ್, ಈಯದನ್, ಈಯದುದು ಎಂಬಂತಹವು ಹೆಸರುರೂಪಗಳು. ಆದರೆ, ಸಂಸ್ಕ್ರುತದಲ್ಲಿ ಇಂತಹ ವ್ಯತ್ಯಾಸವಿಲ್ಲ. ಇದನ್ನು ಗಮನಿಸಲಾಗದ ಶಬ್ದಮಣಿದರ‍್ಪಣದಲ್ಲಿ ಕೃದಂತ ಮತ್ತು ಕೃಲ್ಲಿಂಗಗಳ ಕುರಿತಾಗಿ ಕೊಡುವ ಹೇಳಿಕೆಗಳೆಲ್ಲ ಸಿಕ್ಕಲು ಸಿಕ್ಕಲಾಗಿವೆ.

ಕೊಳನ, ಮರದ, ಅರಸಿನ ಎಂಬಂತಹವು ಹಳೆಗನ್ನಡದಲ್ಲಿ ಹೆಸರುಪದಗಳ ಪರಿಚೆರೂಪಗಳಲ್ಲದೆ ವಿಬಕ್ತಿರೂಪಗಳಲ್ಲ; ಅವು ಬೇರೆ ಪರಿಚೆಪದಗಳ ಹಾಗೆ ಗುರ‍್ತ (ಲಿಂಗ) ಮತ್ತು ಎಣಿಕೆ (ವಚನ) ಒಟ್ಟುಗಳೊಂದಿಗೆ ಬಳಕೆಯಾಗಬಲ್ಲುವು (ಮನೆಯನ್ ಬಂದನ್, ರಥದನ್ ಅಶ್ವತ್ಥಾಮನ್), ಮತ್ತು ಅವುಗಳ ಹೆಸರುರೂಪಗಳ ಬಳಿಕ ಪತ್ತುಗೆ (ವಿಬಕ್ತಿ) ಒಟ್ಟುಗಳನ್ನು ಬಳಸಲು ಬರುತ್ತದೆ (ಬರ‍್ದಿನಂಗೆ ಸೆರಪು ಗೆಯ್ದರ್ – ಬರ‍್ದಿನನ್+ಗೆ). ಈ ವ್ಯತ್ಯಾಸವನ್ನು ಗಮನಿಸುವಲ್ಲಿ ಶಬ್ದಮಣಿದರ‍್ಪಣ ಸೋತುಹೋಗಿದೆ.

ಸಂಸ್ಕ್ರುತದಲ್ಲಿ ಮೃತ, ಕೃತ ಎಂಬಂತಹ ಕೃದಂತಗಳು, ಕೃಷ್ಣ, ಶ್ವೇತ ಎಂಬಂತಹ ಪರಿಚೆಯನ್ನು ತಿಳಿಸಬಲ್ಲ ಹೆಸರುಪದಗಳು, ಏಕ, ದ್ವಿ, ತ್ರಿ ಎಂಬಂತಹ ಎಣಿಕೆಪದಗಳು, ಸ, ತತ್ ಎಂಬಂತಹ ತೋರುಪದ(ಸರ‍್ವನಾಮ)ಗಳು ಇವೆಲ್ಲವೂ ಹೆಸರುಪದಗಳ ಹಾಗೆ ಬಳಕೆಯಾಗುತ್ತವೆ; ಅವನ್ನು ಇನ್ನೊಂದು ಹೆಸರುಪದದೊಂದಿಗೆ ಬಳಸಬೇಕಿದ್ದಲ್ಲಿ ಹೆಸರುಪದಗಳಿಗೆ ಮಾತ್ರವಲ್ಲದೆ ಅವಕ್ಕೂ ವಚನ-ವಿಬಕ್ತಿ ಒಟ್ಟುಗಳನ್ನು ಸೇರಿಸಬೇಕಾಗುತ್ತದೆ (ಮೃತಂ ಸರ‍್ಪಂ, ಕೃಷ್ಣಂ ಸರ‍್ಪಂ, ಏಕಂ ಸರ‍್ಪಂ, ತಂ ಸರ‍್ಪಂ); ಹಾಗಾಗಿ, ಹೆಸರುಪದಗಳೊಂದಿಗೆ ಅವನ್ನು ವಚನ-ವಿಬಕ್ತಿ ಒಟ್ಟುಗಳಿಲ್ಲದೆ ಬಳಸಿದಾಗ (ಮೃತಸರ‍್ಪಂ, ಕೃಷ್ಣಸರ‍್ಪಂ, ಏಕಸರ‍್ಪಂ) ಅಂತಹ ಬಳಕೆಗಳಲ್ಲಿ ಸಮಾಸ ನಡೆದಿದೆಯೆಂದು ಹೇಳಲು ಬರುತ್ತದೆ.

ಆದರೆ, ಹಳೆಗನ್ನಡದಲ್ಲಿ ಕೃದಂತಗಳು, ಪರಿಚೆಪದಗಳು, ಎಣಿಕೆಪದಗಳು ಇಲ್ಲವೇ ತೋರುಪದಗಳು ಹೆಸರುಪದಗಳೊಂದಿಗೆ ಬರುವಾಗ ಅವಕ್ಕೆ ವಿಬಕ್ತಿ ಒಟ್ಟುಗಳನ್ನು ಸೇರಿಸಲು ಬರುವುದಿಲ್ಲ; ಅವು ನೇರವಾಗಿ ಹೆಸರುಪದಗಳೊಂದಿಗೆ ಬರುತ್ತವೆ, ಮತ್ತು ಆ ರೀತಿ ನೇರವಾಗಿ ಬರುವವುಗಳೇ ಹಳೆಗನ್ನಡದ ಪದಕಂತೆಗಳಾಗಿರುತ್ತವೆ (ಬಂದ ಬಟ್ಟೆ, ಪೊಸ ಗೊಂಚಲು, ಓರಡಿ, ಆ ಪೂಗಳ್). ಸಂಸ್ಕ್ರುತಕ್ಕೂ ಹಳೆಗನ್ನಡಕ್ಕೂ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಗಮನಿಸದೆ ಶಬ್ದಮಣಿದರ‍್ಪಣ ಈ ಎಲ್ಲಾ ಪದಕಂತೆಗಳನ್ನೂ ಸಮಾಸಗಳೆಂದು ಹೇಳುವ ಮೂಲಕ ಒಂದು ದೊಡ್ಡ ಗೊಂದಲವನ್ನೇ ಉಂಟುಮಾಡಿದೆ.

ಇಂತಹ ಬೇರೆಯೂ ಹಲವು ವಿಶಯಗಳಲ್ಲಿ ಮೇಲಿನ ಪರಿಚೆಪದ-ಹೆಸರುಪದ ವ್ಯತ್ಯಾಸವನ್ನು ಗಮನಿಸದಿರುವುದರಿಂದಾಗಿ ಶಬ್ದಮಣಿದರ‍್ಪಣ ಗೊಂದಲದ ಗೂಡಾಗಿದೆ.

ಡಿ. ಎನ್. ಶಂಕರ ಬಟ್

(ಮುಂದಿನ ವಾರ ಮುಂದುವರೆಯಲಿದೆ)

ನಿಮಗೆ ಹಿಡಿಸಬಹುದಾದ ಬರಹಗಳು

24 Responses

  1. cmariejoseph says:

    ಹೊಸ ವಿಶಯಗಳನ್ನು ತಿಳಿದಂತಾಯ್ತು. ಆದರೂ ಕೇಶಿರಾಜನೇ ಹೇಳಿದ ಹಾಗೆ ’ಶಬ್ಬಪಾರಮಾರ್ಗಂ ಅಶಕ್ಯಂ’.

  2. Mahesh Bhat says:

    ನಿಜ, ಶಂಕರ ಭಟ್ಟರ ಬರಹ ವೈಜ್ಞಾನಿಕವಾಗಿದೆ. ಹೈಸ್ಕೂಲಿನಲ್ಲಿ ಕಲಿಯಬೇಕಾದರೆ ಸಂಸ್ಕೃತದಲ್ಲಿ ವಿಶೇಷಣಗಳಿಗೆ ವಿಭಕ್ತಿ ಪ್ರತ್ಯಯಗಳನ್ನು ಸೇರಿಸಬೇಕಿರುವುದು ಕನ್ನಡ ತಾಯ್ನುಡಿಯವರಾದ ನಮಗೆಲ್ಲಾ ಸ್ವಲ್ಪ ವಿಚಿತ್ರವಾಗಿ ಕಾಣಿಸಿತ್ತು

  3. ಈ ‘ಹಳೆಗನ್ನಡ’ ಎನ್ನುವಂಥದ್ದನ್ನು ಬಿಡಿಸುವ ಬಗೆ ಹೇಗೆ?

  4. ybharath77 says:

    ನಲ್ಮೆಯ ಕೆಪಿ ಬೊಳುಂಬು,

    ಕಿಟ್ಟೆಲ್ ಕನ್ನಡ ಪದನೆರಕೆಯ ಪುಟ. 1646 ನಲ್ಲಿ ಕೊಟ್ಟಿರುವ ಹಾಗೆ
    ಹೞೆ+ಗನ್ನಡ => ಹೞೆಗನ್ನಡ ಮತ್ತು ಹೞಗನ್ನಡ ಎರಡನ್ನೂ ಕೊಡಲಾಗಿದೆ. ಹೊಸಬರಹದಲ್ಲಿ ಇದು ’ಹಳೆಗನ್ನಡ’ ಆಗುತ್ತದೆ.

    -ಬರತ್

  5. ybharath77 says:

    ಕಯ್ತಪ್ಪು….. ’ಹೞೆ+ಕನ್ನಡ’ ಆಗಬೇಕಿತ್ತು

  6. ಪ್ರೀತಿಯ ಬರತ್,
    ಕಿಟ್ಟೆಲ್ ಅವರು “ಹೞೆ+ಗನ್ನಡ => ಹೞೆಗನ್ನಡ” ಎಂಬಂತೆ ಸಂಧಿ ತೋರಿಸಿದ್ದಾರೋ ಎಂಬ ಅನುಮಾನ. ಪುಟ ಸಂಖ್ಯೆ 1646ರಲ್ಲಿ ಏನು ಕೊಟ್ಟಿದ್ದಾರೆಂದು ವಿವರಿಸಿರಿ.

    • Kiran Batni says:

      ಅನುಮಾನ ನಿಮಗಿರುವುದರಿಂದ ಕಿಟೆಲ್ ಪದನೆರಕೆಯನ್ನು ನೀವೇ ತೆಗೆದು ನೋಡುವುದು ಒಳ್ಳೆಯದು.

  7. ಅಲ್ಲಿ ಬಿಡಿಸುವ ಬಗೆಯ ಕುರಿತಾದ ಅನುಮಾನವೊಂದೇ ಪ್ರಸ್ತುತ. ಅಲ್ಲದೆ ಕಿಟ್ಟೆಲ್ ಅವರು ಆ ಬಗೆಯಲ್ಲಿ ಸಂಧಿ ಬಿಡಿಸಿರುವ ಬಗ್ಗೆ ಅನುಮಾನ ಬರತ್ ಅವರು ಈ ಕುರಿತು ಸೂಚಿಸಿದ ನಂತರ ಬಂದಿತು. ವಾಸ್ತವದಲ್ಲಿ ನನಗೆ ಈ ಮಿನ್ಬರಹದಲ್ಲಿ ಕೊಟ್ಟಿರುವ ಸಂಧಿ ಬಿಡಿಸುವಿಕೆಯ ಬಗೆಗಿನ ಅನುಮಾನವೇ ಇರುವಂಥದ್ದು.

  8. ಈ ಮಿನ್ಬರಹದಲ್ಲಿ ‘ಹಳೆಗನ್ನಡ’ ಬಿಡಿಸುವ ಬಗೆಯ ಕುರಿತಾದ ಅನುಮಾನವೊಂದೇ ಪ್ರಸ್ತುತ ಎಂದುದಾಯಿತು. ಆ ಅನುಮಾನಕ್ಕೆ ಬರತ್ ಉತ್ತರಿಸಿದರೆ ಸ್ವೀಕರಿಸುವೆನು. ಇಲ್ಲವಾದರೂ ತೊಂದರೆಯಿಲ್ಲ. ನಿಮ್ಮಿಂದ ಈ ಮಿನ್ಬರಹದಲ್ಲಿ ಬಳಕೆಯಾಗಿರುವ ಸಂಧಿ ಬಿಡಿಸುವಿಕೆಯ ಕುರಿತಾದ ಸಮರ್ಥನೆಯ ನಿರೀಕ್ಷೆಯೊಂದಿಗೆ.

  9. Kiran Batni says:

    ನನ್ನ ಸಮರ‍್ತನೆಯೂ ಇದೇ: ಹಳೆ + ಕನ್ನಡ = ಹಳೆಗನ್ನಡ. ಇದು ಬರತ್ ಅವರು ಹೇಳಿದಂತೆ ಕಿಟೆಲ್ ನಲ್ಲಿ ಇದೆ.

  10. 🙂 ಇದು ನನ್ನ ಸಮರ್ಥನೆ ಎನ್ನುವಂಥ ಸಮರ್ಥನೆಯ ನಿರೀಕ್ಷೆಯಲ್ಲ.

  11. ಹಳೆ+ಕನ್ನಡ = ಹಳೆಗನ್ನಡ ಅಲ್ಲ.
    ಹಳತು + ಕನ್ನಡ = ಹಳಗನ್ನಡ.
    ಹಳೆಯ + ಕನ್ನಡ = ಹಳೇ ಕನ್ನಡ.

    ಸಾಮಾನ್ಯವಾಗಿ ಮಾತಿನ ನಡುವೆ ದೀರ್ಘಕ್ಕೆ ಪ್ರಾಶಸ್ತ್ಯವಿಲ್ಲವೆಂದು ತಿಳಿಯುತ್ತೇವೆ. ಆದರೆ ಅದು ಹಾಗಲ್ಲ, ನಾವು ಉಚ್ಚರಿಸುವ ಹ್ರಸ್ವ-ದೀರ್ಘಗಳಲ್ಲಿ ಮಾತಿನ ಎನನ್ಸಿಯೇಟಿವ್ ಅಡಗಿರುತ್ತದೆ.

    ‘ಹಳೆಗನ್ನಡ’ ಎನ್ನುವಂಥದ್ದು ಕರಾವಳಿಯ ಪ್ರಭೇದಗಳಲ್ಲಿ ರೂಢಿಗೆ ಬಂದಿರುವ ಪ್ರಯೋಗ. ರೂಢಿಯಲ್ಲಿರುವ ಪ್ರಯೋಗಗಳೆಲ್ಲವೂ ಸರಿಯಾಗಬೇಕಾದುದಿಲ್ಲ. ನಿತ್ಯಜೀವನದ ಬಳಕೆಯಲ್ಲಿ ಅದನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. ಆದರೆ ಒಂದು ಅರಿಮೆಯ ಹಿನ್ನೆಲೆಯಲ್ಲಿ ರೂಪುಗೊಳ್ಳುವ ಉದ್ದೇಶದೊಂದಿಗೆ ಬಳಕೆಯಾಗುತ್ತಿರುವ ಎಲ್ಲರ ಕನ್ನಡದಲ್ಲಿ ಈ ಬಗೆಯ ಪ್ರಯೋಗಗಳು ಹೇಗೆ ಸಮರ್ಥನೀಯವೆನಿಸಿಕೊಳ್ಳಬಲ್ಲುವು?

    • Kiran Batni says:

      ನಿಮ್ಮ ಬಳಿ ಕಿಟೆಲ್ ಪದನೆರಕೆ ಇದ್ದರೆ ತೆಗೆದು ನೋಡಿ. ಅದರಲ್ಲಿ ಇನ್ನೂ‌ ಹಲವು ‘ಹಳೆಗನ್ನಡ’ದಂತಹ ಪದಗಳಿವೆ… ‘ಹಳೆಮಾತು’, ‘ಹಳೆಬಟ್ಟೆ.’…

      // ‘ಹಳೆಗನ್ನಡ’ ಎನ್ನುವಂಥದ್ದು ಕರಾವಳಿಯ ಪ್ರಭೇದಗಳಲ್ಲಿ ರೂಢಿಗೆ ಬಂದಿರುವ ಪ್ರಯೋಗ. //

      ಹೇಗೆ ಹೇಳುತ್ತೀರಿ ಇದನ್ನು? ನಾನು ಮಯ್ಸೂರಿನವನು. ಇಲ್ಲಿ ಹಲವರು ಹೇಳುವುದೂ‌ ಹೀಗೇ, ಬರೆಯುವುದೂ ಹೀಗೇ.

      // ರೂಢಿಯಲ್ಲಿರುವ ಪ್ರಯೋಗಗಳೆಲ್ಲವೂ ಸರಿಯಾಗಬೇಕಾದುದಿಲ್ಲ… ಸಮರ್ಥನೀಯವೆನಿಸಿಕೊಳ್ಳಬಲ್ಲುವು? //

      ಇಲ್ಲಿ ಸರಿ-ತಪ್ಪಿನ ಮಾತೇ ಬೇಕಿಲ್ಲ. ಯಾವುದೇ ಹಿಂಜರಿಕೆಯಿಲ್ಲದೆ ಕನ್ನಡದ ಬೇರೆ ಬೇರೆ ಒಳನುಡಿಗಳಿಂದ ಪದಗಳನ್ನು ಮತ್ತು ಪದಗಳನ್ನು ಜೋಡಿಸುವ ಬಗೆಗಳನ್ನು ಎಲ್ಲರಕನ್ನಡ ಬರಮಾಡಿಕೊಳ್ಳುತ್ತದೆ. ಏನು ನೆಲೆನಿಲ್ಲುತ್ತದೆ, ಏನು ನಿಲ್ಲುವುದಿಲ್ಲ ಎಂಬುದನ್ನು ಕಾಲವೇ ಹೇಳಬೇಕು.

  12. ಎಲ್ಲರ ಕನ್ನಡ ಒಂದು ಅರಿಮೆಯ ತಳಗಟ್ಟಿನ ಮೇಲೆ ನೆಲೆಗೊಳ್ಳುವಂಥದಾಗಿದ್ದರೆ ಅದಕ್ಕೆ ಕೆಲ ಕಟ್ಟುಪಾಡುಗಳು ಇರಬೇಕೆನ್ನುವ.

  13. ಎಲ್ಲರ ಕನ್ನಡ ಒಂದು ಅರಿಮೆಯ ತಳಗಟ್ಟಿನ ಮೇಲೆ ನೆಲೆಗೊಳ್ಳುವರೆ ಅದಕ್ಕೆ ಕೆಲ ಕಟ್ಟುಪಾಡುಗಳು ಇರಬೇಕೆನ್ನುವಾಗ ಅಂಥ ಕಟ್ಟುಪಾಡುಗಳನ್ನು ರೂಪುಗೊಳ್ಳಿಸಬೇಕಾದ ಉತ್ತರವಾದಿತ್ವ ಎಲ್ಲರ ಕನ್ನಡದ ಪ್ರತಿಪಾದಕರದ್ದಾಗಿದೆ. ಕಟ್ಟುಪಾಡುಗಳನ್ನು ಕಾಲ ತೀರ್ಮಾನಿಸುವಂಥದ್ದಲ್ಲ, ಶಿಷ್ಟತೆ ರೂಪುಗೊಳ್ಳುವ ಹಂತದಲ್ಲಿಯೇ ಕಟ್ಟುಪಾಡುಗಳು ಆ ಶಿಷ್ಟತೆಯ ಭಾಗವಾಗಿ ರೂಪುಗೊಳ್ಳುವಂಥದ್ದು.

    • Kiran Batni says:

      ಮನ್ನಿಸಿ, ನಮ್ಮ ನಿಲುವು ಇದಲ್ಲ. ಕಾರಣ: ಇದರಿಂದ ಜನರ ಹೊಸ ಪದವನ್ನು ಕಟ್ಟುವ ಅಳವನ್ನು ಮೊಟಕಿಸಿದಂತಾಗುತ್ತದೆ.

  14. ಭಾವೋದ್ವೇಗವಿಲ್ಲದ ಮರುನುಡಿಗಳಿಗಾಗಿ ನನ್ದಿ. ನನ್ನ ಅನಿಸಿಕೆ ತಿಳಿಸಿದ್ದಾಯಿತು. ಇನ್ನೊಮ್ಮೆ ಸಿಗುವ.

  15. ಈ ಲೇಖನ ಮಾಲೆ ಪುಸ್ತಕ ರೂಪದಲ್ಲಿ ಪ್ರಕಟವಾಗಿದೆಯೆ ?

    • Kiran Batni says:

      ಇಲ್ಲ. ಹೊಚ್ಚ ಹೊಸ ಬರಹಗಳಿವು (ಆದರೆ ಇದೇ ನಿಟ್ಟಿನಲ್ಲಿ ಬಟ್ಟರು ಹಲವೆಡೆ ಬರೆದಿದ್ದಾರೆ).

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *