ನಮ್ಮ ಉದ್ದಿಮೆದಾರರಿಂದ ನಮಗೆ ಸಿಕ್ಕಿರುವುದೇನು?

ಸಿದ್ದೇಗವ್ಡ

Infosys_mysore_campus_02

ಹವ್ದು, ಅವರಿಂದ ನಮಗಾಗಿರುವ ಲಾಬವಾದರೂ ಏನು? ಅವರನ್ನೇಕೆ ಅಶ್ಟು ತಲೆಯ ಮೇಲೆ ಕೂರಿಸಿಕೊಳ್ಳುತ್ತಿದ್ದೇವೆ ನಾವು? ನಾರಾಯಣಮೂರ‍್ತಿಯವರಿಂದ ವಿಶ್ವಕನ್ನಡ ಸಮ್ಮೇಳನವನ್ನು ಉದ್ಗಾಟನೆ ಮಾಡಿಸಿದ್ದಕ್ಕೆ ನನ್ನ ವಿರೋದವಿದೆ. ಕಾರಣ ಇಶ್ಟೇ. ನನ್ನ ದ್ರುಶ್ಟಿಯಲ್ಲಿ ನಾರಾಯಣಮೂರ‍್ತಿಯೇನೂ ಅಸಾಮಾನ್ಯರೇನಲ್ಲ ಅತವಾ ಅವರನ್ನುಳಿದು ಮಿಕ್ಕ ಕೋಟ್ಯಾನುಕೋಟಿ ಕನ್ನಡಿಗರೆಲ್ಲ ಅಸಮರ‍್ತರೂ, ಅಯೋಗ್ಯರೂ ಅಲ್ಲ. ವಿಶ್ವ ಕನ್ನಡ ಸಮ್ಮೇಳನದಂತಹ ಸಮಾರಂಬವನ್ನು ಇಂತಹ ವ್ಯಕ್ತಿ ಉದ್ಗಾಟಿಸಿದರಶ್ಟೇ ಅದಕ್ಕೊಂದು ಬೆಲೆ, ಅದರಿಂದಲೇ ವಿಶ್ವ ಮಟ್ಟದಲ್ಲಿ ಮನ್ನಣೆ ಎಂಬ ತಪ್ಪು ತಿಳವಳಿಕೆ ಏಕೆ ನಮ್ಮ ಸ್ವಾಬಿಮಾನಿ ಕನ್ನಡಿಗರಲ್ಲಿ ಎಂದು ನನಗೆ ಅರ‍್ತವಾಗುತ್ತಿಲ್ಲ.

ವಿಶ್ವ ಕನ್ನಡ ಸಮ್ಮೇಳನವೇನೂ ಸಾಹಿತಿಗಳ ಆಸ್ತಿಯೇ ಅತವಾ ಬರೀ ಸಾಹಿತಿಗಳಶ್ಟೇ ಕನ್ನಡೋದ್ದಾರಕರೇ ಎಂಬ ಪ್ರಶ್ನೆಗೆ ನಾನಿಲ್ಲಿ ಉತ್ತರಿಸಲು ಹೋಗುವುದಿಲ್ಲ. ಆದರೆ, ಸಾಹಿತಿಗಳೂ ಅತೀ ಅಹಂಕಾರದಿಂದ ವರ‍್ತಿಸುವುದಾದರೆ, ಅದಕ್ಕೂ ನನ್ನ ವಿರೋದವಿದ್ದೇ ಇದೆ. ಕನ್ನಡ ಕಯಿಂಕರ‍್ಯದ ಕಂಕಣ ತೊಟ್ಟು ಹೋರಾಡಿದ ಮಹನೀಯರನೇಕರು ನಮ್ಮ ನೋಡಿ ನಕ್ಕಾರು ಎಂಬ ಸಾಮಾನ್ಯ ಜ್ನಾನ ನಮ್ಮೆಲ್ಲರಿಗೂ ಇಲ್ಲದೆ, ನನಗೆ ನಾನೇ ದೊಡ್ಡವನೆಂಬ ಒಣ ಪ್ರತಿಶ್ಟೆ, ಅಲ್ಪ ಜ್ನಾನ, ಮೂರ‍್ಕತನಗಳನ್ನು ಮಯ್ಗೂಡಿಸಿಕೊಂಡು, ನಮ್ಮ ಸುತ್ತಲಿನ ಪ್ರಪಂಚವನ್ನು ಹೇಗೆ ಮರೆಯುತ್ತೇವೆ ಎಂಬುದಕ್ಕೆ ವಿಶ್ವ ಕನ್ನಡ ಸಮ್ಮೇಳನಕ್ಕಿಂತ ಒಳ್ಳೆ ಉದಾಹರಣೆ ಬೇಕಾಗಿಲ್ಲ. ಅದೆಲ್ಲ ಇರಲಿ. ನಮ್ಮ ಮುಕ್ಯ ವಿಶಯ ಇಲ್ಲಿ, ನಾರಾಯಣಮೂರ‍್ತಿ ಮತ್ತು ಕನ್ನಡ ಹಾಗೂ ಕನ್ನಡಕ್ಕಾಗಿ ಅವರ ಕೊಡುಗೆ. ಇವುಗಳತ್ತ ಒಮ್ಮೆ ನೋಡಿದರೆ, ನನಗೆ ನಾರಾಯಣಮೂರ‍್ತಿಯವರಲ್ಲಿ ಅಂತಹ ವಿಶೇಶತೆಯೇನೂ ಕಾಣಿಸುವುದಿಲ್ಲ.

ವಿಶ್ವ ಬೂಪಟದಲ್ಲಿ ಬೆಂಗಳೂರನ್ನು ತಂದಿರಿಸಿದ ಕೀರ‍್ತಿ ಕೇವಲ ನಾರಾಯಣಮೂರ‍್ತಿಯವರಿಗೇ ಸಲ್ಲಬೇಕು ಎಂಬ ಉದ್ದಟತನದ ಪ್ರದರ‍್ರ‍್ಶನ ನಡೆಯುತ್ತಿರುವುದು, ಮಾಹಿತಿ ತಂತ್ರಜ್ನಾನ ಕ್ಶೇತ್ರದಲ್ಲಿ ಗಣನೀಯ ಸೇವೆಮಾಡಿ ಕೀರ‍್ತಿತಂದವರಿಗೆಲ್ಲರೂ ಮಾಡುತ್ತಿರುವ ಅವಮಾನ. ಇನ್ಪೋಸಿಸ್ ಬೆಂಗಳೂರಿನಲ್ಲಿ ಕಾತೆ ತೆರೆದ ಕ್ಶಣದಿಂದಲೇ ಬೆಂಗಳೂರು ವಿಶ್ವವಿಕ್ಯಾತವಾಗಿ ಹೋಯಿತೇ ಎನ್ನುವ ಅನುಮಾನ. ಇನ್ಪೋಸಿಸ್ ಒಂದು ನೆಲೆಯಿಲ್ಲದ, ಕೇವಲ ಅಮೇರಿಕಾ, ಯುರೋಪ್ ಅತವಾ ಇನ್ನಿತರ ದೇಶಗಳನ್ನಶ್ಟೇ ಅವಲಂಬಿಸಿ ಬದುಕುತ್ತಿರುವ ಒಂದು ಮಾಹಿತಿ ತಂತ್ರಜ್ನಾನ ಸೇವಾ ಕಂಪನಿ ಅಂದರೆ ಸರ‍್ವಿಸಸ್ ಕಂಪನಿ.

ವಿಶ್ವ ವಾಣಿಜ್ಯೋದ್ಯಮದಲ್ಲಿ ಏರುಪೇರಾದರೆ ನಲುಗಿಹೋಗುವ ಅಶ್ಟೇಕೆ ಡಾಲರಿನಿಂದ ಕೇವಲ ಒಂದು ರೂಪಾಯಿ ಕುಸಿದರೂ ಸಾವಿರಾರು ಕೋಟಿ ಕಳೆದುಕೊಳ್ಳುವ ಕಂಪನಿ. ದೇಶದ ಜ್ನಾನ ಸಂಪತ್ತನ್ನೆಲ್ಲಾ ಕ್ರೋಡಿಕರಿಸಿ, ತನ್ನದೇ ಆದ ಅತವಾ ಬಾರತ ದೇಶವನ್ನು ಬಿಂಬಿಸುವ ಒಂದೇ ಒಂದು ಪ್ರಾಡಕ್ಟ್ ಕೂಡ ನೀಡಲಾಗದ ಅಸಮರ‍್ತ ಕಂಪನಿ. ದೇಶದ ಹೆಮ್ಮಯಾದ ಟಾಟಾಗಿಂತ ಇನ್ಪೋಸಿಸ್ ಯಾವ ರೀತಿಯಲ್ಲಿ ಮಾದರಿ ಎಂದು ಅರ‍್ತವಾಗುತ್ತಿಲ್ಲ. ವಿದೇಶಗಳಲ್ಲಿ ಟಾಟಾ ತಯಾರಿಕೆಯ ವಸ್ತುಗಳನ್ನು ಕಾಣುವಂತೆ ಇನ್ಪೋಸಿಸ್ ತಯಾರಿಸಿದ ಯಾವುದೇ ಸಾಪ್ಟ್ ವೇರ್ ಚಾಲಿತ ಅತವಾ ನಿಯಂತ್ರಿತ ಪ್ರಾಡಕ್ಟ್ ಒಂದಿದ್ದರೂ ಬಹುಶ ಇನ್ಪೋಸಿಸ್ ದೇಶದ ಹೆಮ್ಮೆ ಎಂದು ಹೇಳಬಹುದಿತ್ತು.

ಕಂಪನಿ ಬಲಿತ ನಂತರವಾದರೂ ಅಂತ ಒಂದು ಪ್ರಯತ್ನಕ್ಕೆ ಕಯ್ ಹಾಕದೇ, ಇರುವಶ್ಟು ದಿನ, ಬಂದಶ್ಟೇ ದೋಚಿಕೊಂಡರಾಯಿತೆಂಬ ದೋರಣೆಯಲ್ಲಿ ಬದುಕುತ್ತಿರುವ ಇನ್ಪೋಸಿಸ್ ಕಂಪನಿಯಿಂದ ಒಂದಶ್ಟು ತೆರಿಗೆ ಹೊರತಾಗಿ ಬೇರೆ ಯಾವ ಲಾಬವೂ ಕರ‍್ನಾಟಕ್ಕಾಗಲೀ ಅತವಾ ಬಾರತಕ್ಕಾಗಲಿ ಇಲ್ಲ. ಸರ‍್ಕಾರದಿಂದ ಪಡೆದಿರುವ ಸವಲತ್ತುಗಳನ್ನೂ ಹಾಗೂ ಇನ್ಪೋಸಿಸ್ ನೀಡಿರುವ ಕಾಣಿಕೆಯನ್ನೂ ತೂಗಿ ನೋಡಿದರೆ ಯಾವುದೇ ಲಾಬ ಕಾಣಿಸುವುದಿಲ್ಲ. ಅಶ್ಟೇ ಏಕೆ? ಇದೊಂದು ರೀತಿಯ ನಾಜೂಕಿನ, ನಯವಾದ ರೀತಿಯ ವಂಚನೆ ಎಂದೆನಿಸದೆ ಇರುವುದಿಲ್ಲ.

ನಮ್ಮ ನೆರೆಯ ಉತ್ತರ ಕೋರಿಯಾದೆಡೆಗೊಮ್ಮೆ ನೋಡಿಯಾದರೂ ನಮ್ಮ ಮಾಹಿತಿ ತಂತ್ರಜ್ನಾನ ದಿಗ್ಗಜರಿಗೆ ನಾಚಿಕೆಯಾಗಲಿ ಅತವಾ ಸ್ವಾಬಿಮಾನವಾಗಲಿ ಆಗುತ್ತಿಲ್ಲ ಎಂದರೆ, ಇವರ ವ್ಯವಹಾರದ ಹಿನ್ನಲೆಯ ಅರ‍್ತ ಬಹುಬೇಗ ನಮಗೆ ಆಗಿಹೋಗುತ್ತದೆ. ಬಾರತೀಯರು ಬೇರೆಯವರಿಗಾಗಿ ಜೀತಮಾಡುವುದಕ್ಕಶ್ಟೇ ಲಾಯಕ್ಕು ಎಂದು ನಿರ್‍ದರಿಸಿಯೇ ಇಂತ ಕಂಪನಿಗಳನ್ನು ಸ್ತಾಪಿಸಿದಂತಿದೆ. ಸರ‍್ಕಾರದ ಎಲ್ಲಾ ರೀತಿಯ ಪ್ರಯೋಜನಗಳನ್ನೂ ಪಡೆದೂ, ನಾವು ಏನೋ ಮಾಡಿ ನಿಮ್ಮನ್ನು ಉಳಿಸುತ್ತಿದ್ದೇವೆ, ಉಣ್ಣಲು, ಉಡಲು ಕೋಡುತ್ತಿದ್ದೇವೆ ಎಂಬಂತೆ ಜನಮನದಲ್ಲಿ ಸ್ತಾಪಿಸ ಹೊರಟಿರುವ ಅವರ ನಿಲುವನ್ನು ಪ್ರತಿಪಾದಿಸ ಹೊರಟಿರುವ, ಹೇಸಿಗೆಗೆಟ್ಟ ಸರ‍್ಕಾರಕ್ಕೂ, ಕೆಲವೇ ಕೆಲವು ಶ್ರೀಮಂತ ವರ್‍ಗದ ಅನಾಗರೀಕರನ್ನು ನೆನೆಸಿಕೊಂಡರೆ ನನಗೆ ಅತ್ಯಂತ ಕೋಪಾವೇಶ ಬರುತ್ತದೆ. ಯಾವುದೇ ಪ್ರಯೋಜನದ ಲಾಬ ಪಡೆಯದೇ, ಸರ‍್ಕಾರವನ್ನೋ ಅತವಾ ಇನ್ನಿತರರನ್ನೋ ವಂಚಿಸದೇ, ತಾನಾಯಿತು ತನ್ನ ಕೆಲಸವಾಯಿತು ಎಂದು ಎಲ್ಲೋ ಎಲೆಮರೆಕಾಯಿಯಾಗಿ ನಿರಂತರ ಸೇವೆಗಯ್ದು ಸಾರ‍್ತಕ ಜೀವನ ಮಾಡುವ ನೇಗಿಲಯೋಗಿಗಿಂತ ನಾರಾಯಣಮೂರ‍್ತಿ ಎಂಬ ವ್ಯಕ್ತಿ ಯಾವ ರೀತಿಯಲ್ಲಿ ಉತ್ಕ್ರುಶ್ಟ ಅತವಾ ಉತ್ತಮ? ಎಂದೆನಿಸುತ್ತದೆ.

ಇನ್ನು ಕನ್ನಡಿಗರಿಗೆ ಉದ್ಯೋಗ ಎನ್ನುವ ವಿಶಯಕ್ಕೆ ಬಂದರೆ, ಇನ್ಪೋಸಿಸ್ ಬಣ್ಣ ಬಯಲಾಗುತ್ತದೆ. ಇದೊಂದು ಕನ್ನಡ ಕಳಕಳಿ ಹೊಂದಿರುವ ಕನ್ನಡಿಗನ ಕಂಪನಿಯಾಗಿದ್ದರೆ, ಕನ್ನಡಿಗರಿಗಾಗಿ ಅದೆಶ್ಟು ಉದ್ಯೋಗಗಳನ್ನು ಈ ಕಂಪನಿ ಮೀಸಲಾಗಿಟ್ಟಿದೆ? ಅತವಾ ಸಂದರ‍್ಶನಗಳಲ್ಲಿ ಕನ್ನಡಿಗರಿಗೆ ಅದೆಶ್ಟು ಸಡಿಲತೆ ತೋರಿದೆ? ಇಂತಹ ಕಂಪನಿಗಳಲ್ಲಿ ಸಂದರ‍್ಶನ ಮಾಡುವವರೆಲ್ಲಾ ಹೊರ ರಾಜ್ಯದವರು. ಅವರವರ ಬಾಶಿಕರನ್ನು ತಂದು ತುಂಬಿಕೊಳ್ಳುತ್ತಿರುವ ಕನ್ನಡ ವಿರೋದಿಗಳು. ನಾವಿಲ್ಲದಿದ್ದರೆ, ನಿಮ್ಮ ಬೆಂಗಳೂರು, ಕರ‍್ನಾಟಕ ಏನೂ ಇಲ್ಲ ಎಂದು ದುರಹಂಕಾರದ ಮಾತುಗಳನ್ನು ನಮ್ಮವರಿಗೇ ಎಸೆದು ಚುಚ್ಚಿ ನೋಯಿಸುವ ಅಹಂಕಾರಿಗಳು.

ಕೇರಳಿಗ ಕೇರಳದವರನ್ನೂ, ತಮಿಳಿಗ ತಮಿಳಿಗರನ್ನೂ, ತೆಲುಗಿನವ ತೆಲುಗಿನವರನ್ನೇ, ಉತ್ತರ ಬಾರತೀಯ ತನ್ನ ಕಡೆಯವರನ್ನೇ ತುಂಬಿಕೊಳ್ಳುತ್ತಿರುವ ದಂದೆಗೆ ಕಡಿವಾಣ ಹಾಕಲೂ ಅಸಮರ‍್ತರಾಗಿರುವ ಇಂತಹ ಕಂಪನಿಗಳಿಂದ ಕನ್ನಡಿಗರಿಗೆ ಉಪಯೋಗವಾಗಿದೆ ಎಂದು ನಂಬಿದರೆ ಅದೊಂದು ಮೂರ‍್ಕತನ. ಕನ್ನಡ, ಕನ್ನಡಿಗರಿಗೆ ಮೀಸಲು ಬೇಕು ಎಂಬ ಮಾತುಗಳನ್ನು ಕೇಳುತ್ತಿದ್ದಂತೆ, ಜಾಗತೀಕರಣವೆಂಬ ಬೂತದ ಕಯ್ಗೊಂಬೆಗಳಾಗಿರುವ ಇಂತಹ ಕಂಪನಿಗಳಿಂದ ಬರುವುದು “ಗ್ಲೋಬಲ್ ಟ್ಯಾಲೆಂಟ್ ಪೂಲ್” ಎಂಬ ಸಾಮಾನ್ಯನಿಗೆ ಅರ‍್ತವಾಗದ ರೀತಿಯಲ್ಲಿ ಬಾಯಿಮುಚ್ಚಿಸುವ ಉತ್ತರ.

ಇನ್ಪೋಸಿಸ್ ಅತವಾ ಈ ರೀತಿಯ ಕಂಪನಿಗಳಲ್ಲಿ ಕ್ಯಾಂಪಸ್ ಸೆಲೆಕ್ಸನ್ ಮಾಡುವಾಗಲಾಗಲೀ, ಸಂದರ‍್ಶನ ಅತವಾ ಲಿಕಿತ ಪರೀಕ್ಶಾ ವಿದಾನಗಳಿಂದ ಆಯ್ಕೆ ಮಾಡುವಾಗಲಾಗಲೀ ಕನ್ನಡಿಗ ಅತವಾ ಕನ್ನಡಿಗನ ಮಗ/ಮಗಳು ಎಂಬ ಯಾವುದೇ ಮುಲಾಜಿರುವುದಿಲ್ಲ. ಪ್ರಮುಕ ಹುದ್ದೆಗಳನ್ನು ಕನ್ನಡಿಗರು ಅಲಂಕರಿಸಿರುವುದಿಲ್ಲ. ಸೆಕ್ಯೂರಿಟಿ, ಹವ್ಸ್ ಕೀಪಿಂಗ್ ಇಂತಹ ಕಡೆಗಳಲ್ಲಿ ಹೇರಳವಾಗಿ ಕನ್ನಡಿಗರನ್ನು ದುಡಿಸಿಕೊಳ್ಳುವ ಇಂತಹ ಕಂಪನಿಗಳು ಕನ್ನಡ ಎಂಬ ಹೆಸರಿನಲ್ಲಿ ಕರ‍್ನಾಟಕವನ್ನು ತಿಂದು ಹಾಕದೆ ನಮ್ಮ ಕಂಪನಿಗಳಲ್ಲಿ ಕೆಲಸ ತೆಗೆದುಕೊಳ್ಳಬಲ್ಲ ಕನ್ನಡದ ಪ್ರತಿಬೆಗಳು ವಿಶ್ವದ ಯಾವುದೇ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬಲ್ಲ ಹಾಗೂ ಮಾಡಬಲ್ಲವರಾಗಿರುತ್ತಾರೆ ಎಂಬ ಸತ್ಯವನ್ನು ತಿಳಿದುಕೊಂಡು ನಮ್ಮದೇನೂ ಹೆಚ್ಚುಗಾರಿಕೆಯಿಲ್ಲ ಎಂದು ಬಾಯಿಮುಚ್ಚಿಕೊಂಡರೆ ಎಲ್ಲರಿಗೂ ಒಳ್ಳೆಯದು.

(ಚಿತ್ರ: forwards4all.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *