ನೋಟ : ಒಂದು ಕಿರುಬರಹ
ಅಂದುಕೊಂಡಂತೆ ನಡೆದರೆ ಹಾದಿಯೂ ಸುಗಮ ,ಸುತ್ತಲೂ ಕಂಡಿದ್ದೆಲ್ಲ ಸ್ವಚ್ಚಂದ. ಎಲ್ಲಿಲ್ಲದ ಉತ್ಸಾಹ ಅದಾಗದೇ ದೇಹವನ್ನೆಲ್ಲ ಅವರಿಸುತ್ತಲ್ಲೇ ಇರುತ್ತದೆ. ಪ್ರಶ್ನೆಗಳು ಒಡ್ಡುವ ಪರೀಕ್ಶೆ ಎದುರಾದಾಗಲೇ ಕಾಲಿನ ಸಮತೋಲನ ತಪ್ಪುವಂತ ಸ್ತಿತಿ. ಕುಳಿತು ಒಂದಿಶ್ಟು ಯೋಚನೆಗಳಿಗೆ, ಸೂಕ್ಶ್ಮವಾದ ವಿಮರ್ಶೆಗೆ ನಮ್ಮನ್ನೇ ಒಡ್ಡಿಕೊಂಡರೆ ಎಶ್ಟೊಂದು ಸಮಾದಾನ ದೊರಕೀತು. ಆದರೆ ಒಂದರ ಬಗ್ಗೆಯೂ ಚಿಂತಿಸದೆ ಹಾಗೆ ಮುನ್ನಡೆದರೆ, ಹಿಂದಿನ ಹೆಜ್ಜೆಯ ಬಾರ ಮುಂದಿನದರ ಮೇಲೆ. ಅದು ಹೆಚ್ಚಿದಂತೆಲ್ಲ ದಾರಿ ಅಂಕುಡೊಂಕಾಗಿ ಕಂಡೀತು. ಎಲ್ಲ ಕಡೆಯೂ ಗೋಡೆಗಳಿಂದಲೇ ದಾರಿಯ ಅಂತ್ಯವಾಗಲಿಕ್ಕಿಲ್ಲ. ಅಶ್ಟುದ್ದ ಕಣ್ಣಿಗೆ ಕಂಡರೂ ಕಾಲು ಸೋತು ಬಂದು ಅಲ್ಲೇ ಕೂರುವುದರಿಂದ ಕ್ರಮಿಸುವುದು ಕೇವಲ ಮನಸಿನ ಮಾತಾಗಿ ಬಿಡುತ್ತದೆ. ಅನುಬವದ ಪ್ರತಿ ವಿಶಯದೊಡನೆ ಸ್ಪಂದನೆ ಸಾದ್ಯವಾದಾಗ ಬದುಕುವುದು ಬಾರವಾಗಲಿಕ್ಕಿಲ್ಲ. ಉಸಿರಾಡುವ ಅರಿವು ಜ್ನಾನದ ಪ್ರತಿಶ್ಟೆ ಆಗಬಾರದು, ಆದರೆ ಪ್ರತಿ ಕ್ಶಣದ ಕಾಣುವ ನೋಟಕ್ಕೆ ಕೇಳುವ ಸದ್ದಿಗೆ – ನೀಡುವ ಕ್ರುತಜ್ನತೆಯಾಗಬೇಕು.
ನಿಜ – ಸಮಯ ದಾಟಿದೊಡನೆ ಎಶ್ಟೊಂದು ಸಮಸ್ಯೆಗಳು ತಾವಾಗೇ ಪರಿಹಾರ ಕಂಡುಕೊಳ್ಳುತ್ತವೆ. ಅದರ ಅರ್ತ ಸಮಸ್ಯೆಯ ಪ್ರಶ್ನೆಗಳಿಗೆ ನಮಗೆ ಸಮಾದಾನ ಆಗುವ ಉತ್ತರ ದೊರಕಿತು ಎನ್ನುವುದು ಒಂದಾದರೆ, ಪ್ರಶ್ನೆಯೇ ಮಾಯವಾಗಿ ಕರಗುವುದು ಇನ್ನೊಂದು ವಿಶ್ಲೇಶಣೆ. ಪರಿಹಾರ ನೀಡುವುದು ಹೇಳುವುದು ಮಿತಿಯ ಲೆಕ್ಕದಲ್ಲಿ ಬೆಸೆದುಕೊಂಡಿದೆ. ಅಂದರೆ ಕಂಡಿದ್ದಕ್ಕೆಲ್ಲ ನಾವೇ ಕುದ್ದಾಗಿ ನಿಂತು ಬಗೆ ಹರಿಸಬೇಕೆಂಬುದಲ್ಲ. ಮೊದಲು ನಮ್ಮಿಂದ, ನಾವು ಸ್ಪಶ್ಟವಾದಂತೆ ಸುತ್ತಲಿನ ಜಗತ್ತು ಸರಳವಾಗತೊಡಗುತ್ತದೆ. ಚಿಂತೆಗಳು ಸ್ಪಶ್ಟತೆಯ ಅಶ್ಟೇ ಬದ್ದ ವೈರಿಗಳು. ಚಿಂತೆಯ ಯೋಜನೆಗಳ ಪ್ರತಿ ಆಯಾಮದ ಮೇಲೆ ನಮ್ಮ ಆಲೋಚನೆಯ ಒಂದಿಶ್ಟು ಬೆಳಕು ಬೀಳತೊಡಗಿದಂತೆ ಅದು ದುರ್ಬಲವಾಗತೊಡಗುತ್ತದೆ.
ನಮ್ಮ ಮಿತಿ ಏನು ಎಂಬ ನಿರ್ದಾರ ಬಹಳ ಕಶ್ಟವೇ. ಬಹಳಶ್ಟು ವಿಶಯಗಳೊಂದಿಗೆ ಅದು ಬೆಸೆದುಕೊಂಡಿರಬಹುದು, ಆದರೆ ಕನಿಶ್ಟ ಪಕ್ಶ ಆ ಕ್ಶಣಕ್ಕಾದರೂ ಒಂದರ ಬಗ್ಗೆ ಏನು ಮಾಡಬಹುದು ಮತ್ತು ಅದನ್ನು ಮಾಡುವ ಮನೋನಿರ್ದಾರ ನಮ್ಮದಾಗಬಲ್ಲದೇ ಎಂಬುದಶ್ಟೇ ಮುಕ್ಯ. ಉತ್ತರಗಳ ಬೆನ್ನತ್ತಿ ಸಮಾದಾನ ಹುಡುಕುವುದು ತಾರ್ಕಿಕ ರೀತಿ. ಅದು ಹಾದಿ ತಪ್ಪಬಹುದು ಇಲ್ಲವೇ ಎಲ್ಲ ಸರಿ ಎನಿಸಿದರೂ ನಿರ್ದಿಶ್ಟ ಕೊನೆ ಮುಟ್ಟದೆ ಹೋಗಬಹುದು. ಆದರೆ ಅದಕ್ಕಾದ ಪ್ರಯತ್ನಕ್ಕೆ ನಮ್ಮ ಮನಸ್ಸಿನ ಸಮಾದಾನ ಮುಕ್ಯವಾಗುತ್ತದೆ. ನಮ್ಮೊಡನೆ ನಾವು ಶಾಂತಿಯಿಂದ ಇರಲು ಕಲಿತರೆ , ನಾವೇ ನಮ್ಮ ಅತಿ ಆಪ್ತ ವ್ಯಕ್ತಿಯಾದರೆ, ಮನಸ್ಸು ಅಂತೆಯೇ ಸುತ್ತಲಿನ ವಾತಾವರಣ ನಮ್ಮ ದ್ರುಶ್ಟಿಯಲ್ಲಾದರೂ ಸಹಜವಾಗೇ ಸುಂದರವಾಗಿ ಕಾಣತೊಡಗುತ್ತದೆ. ಒಂದೊಂದೇ ದ್ರುಶ್ಟಿಗಳು ಕಡೆಗೊಮ್ಮೆ ಬ್ರುಹತ್ತಾಗಿ ಒಟ್ಟಿಗೆ ನಿಂತು ನೋಡಿದಾಗ ಜೀವನದ ಒಟ್ಟು ದ್ರುಶ್ಟಿಕೋನ ಬದಲಾಗುವ ಸಾದ್ಯತೆ ಇದೆ.
( ಚಿತ್ರ ಸೆಲೆ : steemit.com )
ಇತ್ತೀಚಿನ ಅನಿಸಿಕೆಗಳು