ಪೆಡರರ್ ರ ಗ್ರಾಂಡ್ ಸ್ಲಾಮ್ ಸಾದನೆ

 ರಾಮಚಂದ್ರ ಮಹಾರುದ್ರಪ್ಪ.

ಕಳೆದ ವಾರ ಲಂಡನ್ ನಲ್ಲಿ ನಡೆದ ಲ್ಯಾವರ್ ಕಪ್ ನಲ್ಲಿ ತಮ್ಮ ಕಟ್ಟ ಕಡೆಯ ವ್ರುತ್ತಿಪರ ಪಂದ್ಯ ಆಡಿದ ಟೆನ್ನಿಸ್ ದಂತಕತೆ ರೋಜರ್ ಪೆಡರರ್ ಅವರ ಅಬಿಮಾನಿಗಳನ್ನು ಹಾಗೂ ಟೆನ್ನಿಸ್ ಒಲವಿಗರನ್ನು ಬಾವುಕರಾಗಿ ಮಾಡಿದ್ದು ಆಟದ ಅವಿಸ್ಮರಣೀಯ ಕ್ಶಣಗಳಲ್ಲೊಂದು. ಆ ಹೊತ್ತಿನಲ್ಲಿ ಅವರ ದಶಕಗಳ ಕಡು ಎದುರಾಳಿ ರೆಪೆಲ್ ನಡಾಲ್ ರ ಕಣ್ಣಾಲೆಗಳು ಕೂಡ ಒದ್ದೆಯಾಗಿದ್ದು ಟೆನ್ನಿಸ್ ಗೆ ರೋಜರ್ ಪೆಡರರ್ ರ ಕೊಡುಗೆ ಏನು ಎಂಬುದನ್ನು ಸಾರಿ ಹೇಳಿತು. 22ರ ಹರೆಯದ ಹುಡುಗನಾಗಿ 2003ರ ವಿಂಬಲ್ಡನ್ ಗೆದ್ದು ತಮ್ಮ ಗ್ರಾಂಡ್ ಸ್ಲಾಮ್ ಕಾತೆ ತೆರೆದ ಸ್ವಿಟ್ಜರ‍್ಲ್ಯಾಂಡ್ ನ ಪೆಡರರ್ ಅಲ್ಲಿಂದ ಕೇವಲ ಆರೇ ವರುಶಗಳಲ್ಲಿ ದಿಗ್ಗಜ ಪೀಟ್ ಸಾಂಪ್ರಸ್ ರ ಅತಿಹೆಚ್ಚು 14 ಗ್ರಾಂಡ್ ಸ್ಲಾಮ್ ಗೆಲುವುಗಳ ದಾಕಲೆ ಮುರಿದಿದ್ದು ಬೆಕ್ಕಸಬೆರಗಾಗುವಂತಹ ಸಾದನೆ ಎಂಬುದರಲ್ಲಿ ಎರಡು ಮಾತಿಲ್ಲ! ಆ ನಂತರ ಸುಮಾರು ಒಂದು ದಶಕದ ಬಳಿಕ 2018ರಲ್ಲಿ ತಮ್ಮ ಆರನೇ ಆಸ್ಟ್ರೇಲಿಯಾ ಓಪನ್ ಗೆದ್ದು ತಮ್ಮ ಗ್ರಾಂಡ್ ಸ್ಲಾಮ್ ಗೆಲುವುಗಳ ಎಣಿಕೆಯನ್ನು ಅತ್ಯದಿಕ 20ಕ್ಕೆ ಏರಿಸಿಕೊಂಡ ಪೆಡರರ್ ಆ ಕಾಲಕ್ಕೆ ಈ ಸಾದನೆ ಮಾಡಿದ ಮೊದಲ ಆಟಗಾರ ಎಂಬ ಹಿರಿಮೆ ಕೂಡ ಪಡೆದಿದ್ದರು. ಇಂದಿಗೆ ಅವರಿಗಿಂತ ನಡಾಲ್ ಮತ್ತು ಜೋಕೋವಿಚ್ ಹೆಚ್ಚು ಗ್ರಾಂಡ್ಸ್ಲಾಮ್ ಗಳನ್ನು ಗೆದ್ದಿದ್ದರೂ ಪೆಡರರ್ ರ ಗೆಲುವುಗಳ ದಾಕಲೆಯನ್ನು ತಳ್ಳಿಹಾಕುವಂತಿಲ್ಲ. ಎಲ್ಲಾ ಬಗೆಯ ಅಂಗಳಗಳಲ್ಲೂ ಪ್ರಾಬಲ್ಯ ಮೆರೆದು ವಿಶಿಶ್ಟ ಚಾಪು ಮೂಡಿಸಿರುವ ಒಬ್ಬ ಪರಿಪೂರ‍್ಣ ಟೆನ್ನಿಸ್ ಆಟಗಾರ ಎಂದು ವಿಮರ‍್ಶಕರ ಮೆಚ್ಚುಗೆ ಗಳಿಸಿರುವ ಪೆಡರರ್, ದೇಶ, ಬಾಶೆಗಳನ್ನು ಮೀರಿ ಪ್ರಪಂಚದಾದ್ಯಂತ ಆಟವನ್ನು ಹೆಚ್ಚು ಜನಪ್ರಿಯಗೊಳಿಸಿದರು ಎನ್ನುವುದು ಅಕ್ಶರಶಹ ದಿಟ. ಈ ನಿಟ್ಟಿನಲ್ಲಿ ನಿಸ್ಸಂದೇಹವಾಗಿ ಟೆನ್ನಿಸ್ ಇತಿಹಾಸದ ಅತೀ ಪ್ರಮುಕ ಆಟಗಾರ ಪೆಡರರ್ ಎನ್ನಬಹುದು. ಒಟ್ಟು 310 ವಾರಗಳು (ಸತತ 237 ವಾರಗಳ) ಕಾಲ ಅಗ್ರಶ್ರೇಯಾಂಕಿತ ಆಟಗಾರನಾಗಿದ್ದ ಅವರು ಬರೋಬ್ಬರಿ 103 ATP ಪಂದ್ಯಾವಳಿಗಳನ್ನು ಗೆದ್ದಿರುವುದು ಅವರ ವ್ರುತ್ತಿಬದುಕಿನ ಒಟ್ಟಾರೆ ಸಾದನೆ.

ಆಸ್ಟ್ರೇಲಿಯಾ ಓಪನ್ ಸಾದನೆ

2004ರಲ್ಲಿ ತಮ್ಮ ಚೊಚ್ಚಲ ಆಸ್ಟ್ರೇಲಿಯಾ ಓಪನ್ ಗೆದ್ದ ಪೆಡರರ್ ಅಲ್ಲಿಂದ ಸ್ತಿರ ಪ್ರದರ‍್ಶನದಿಂದ ಹೆಚ್ಚೆಚ್ಚು ಪಂದ್ಯಗಳನ್ನು ಗೆಲ್ಲುತ್ತಲ್ಲೇ ಹೋದರು. ಮೊದಲ ಬಾರಿ ಅವರು ಅಗ್ರಶ್ರೇಯಾಂಕಿತ ಪಟ್ಟಕ್ಕೆ ಏರಿದ್ದು ಕೂಡ 2004ರ ಆಸ್ಟ್ರೇಲಿಯಾ ಓಪನ್ ಗೆಲುವಿನೊಂದಿಗೆ ಎಂಬುದು ವಿಶೇಶ. ಮೆಲ್ಬರ‍್ನ್ ನ ರಾಡ್ ಲ್ಯಾವರ್ ಅರೆನಾದ ಹಾರ‍್ಡ್ ಕೋರ‍್ಟ್(ಗಟ್ಟಿ ನೆಲ) ನಲ್ಲಿ ಹಲವಾರು ರೋಚಕ ಗೆಲುವುಗಳನ್ನು ಪಡೆದರು. 2015 ಹಾಗೂ 2019 ಅನ್ನು ಹೊರತುಪಡಿಸಿ ಅವರು ಮುನ್ನೆಲೆಗೆ ಬಂದ ಬಳಿಕ ಪಾಲ್ಗೊಂಡ ಒಟ್ಟು 17 ಆಸ್ಟ್ರೇಲಿಯಾ ಓಪನ್ ಗಳಲ್ಲಿಯೂ ಕನಿಶ್ಟ ಸೆಮಿಪೈನಲ್ ತಲುಪಿರುವುದು ಅವರ ಶ್ರೇಶ್ಟತೆಗೆ ಸಾಕ್ಶಿ. ಒಟ್ಟು ಆರು ಬಾರಿ – 2004, 2006, 2007, 2010, 2017 ಮತ್ತು 2018 ರಲ್ಲಿ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಪೆಡರರ್ ಇಲ್ಲಿ ಆಡಿರುವ 117 ಪಂದ್ಯಗಳಲ್ಲಿ 102 ರಲ್ಲಿ ಗೆಲುವುಕಂಡು 15 ಪಂದ್ಯಗಳಲ್ಲಿ ಸೋಲುಂಡಿದ್ದಾರೆ. ಅವರ ಗೆಲುವಿನ ಸರಾಸರಿ 87% ಇರುವುದು ಆಸ್ಟ್ರೇಲಿಯಾ ಓಪನ್ ಅವರ ನೆಚ್ಚಿನ ಪಂದ್ಯಾವಳಿಗಳಲ್ಲೊಂದು ಎಂಬುದನ್ನು ಸಾರಿ ಹೇಳುತ್ತದೆ. ಅದರಲ್ಲೂ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡು ಹಿಂದಿರುಗಿ 35ರ ಹರೆಯದಲ್ಲಿ 2017 ರ ಗ್ರಾಂಡ್ ಸ್ಲಾಮ್ ಗೆದ್ದು ಬಳಿಕ ಅದನ್ನು 2018 ರಲ್ಲಿ ಯಶಸ್ವಿಯಾಗಿ ತಮ್ಮಲ್ಲೇ ಉಳಿಸಿಕೊಂಡಿದ್ದು ಪೆಡರರ್ ರ ವ್ರುತ್ತಿಬದುಕಿನ ಮರೆಯಲಾಗದ ಗಳಿಗೆ.

ಪ್ರೆಂಚ್ ಓಪನ್ ಸಾದನೆ

ತಮ್ಮ ಆಟದ ಉತ್ತುಂಗದಲ್ಲಿರುವಾಗಲೂ ಪೆಡರರ್ ರ ಕೈಗೆಟುಕದೆ ಗಗನಕುಸುಮವಾಗಿದ್ದ ಒಂದೇ ಒಂದು ಗ್ರಾಂಡ್ಸ್ಲಾಮ್ ಎಂದರೆ ಅದು ಪ್ರೆಂಚ್ ಓಪನ್. ಕ್ಲೇ ಕೋರ‍್ಟ್ ನಲ್ಲೂ ಒಳ್ಳೆ ಆಟವಾಡುತ್ತಿದ್ದ ಪೆಡರರ್ ರಿಗೆ ಹಲವಾರು ಬಾರಿ ಪ್ರತಿರೋದ ಒಡ್ಡಿದ್ದು ಕಿಂಗ್ ಆಪ್ ಕ್ಲೇ ಎಂದೇ ಪ್ರಕ್ಯಾತರಾಗಿರುವ ರಪೇಲ್ ನಡಾಲ್. ಇಲ್ಲಿಯ ನಿದಾನ ಗತಿಯ ಮೇಲ್ಮೈ ಹೊಂದಿರುವ ಅಂಗಳದಲ್ಲಿ ದಣಿವರಿಯದ ನಡಾಲ್ ರನ್ನು ಮಣಿಸಲು ಪವಾಡವೇ ಮಾಡಬೇಕಿತ್ತು. ದುರದ್ರುಶ್ಟವಶಾತ್ ಪೆಡರರ್ ಎಂದೂ ನಡಾಲ್ ರನ್ನು ಪ್ರೆಂಚ್ ಓಪನ್ ನಲ್ಲಿ ಸೋಲಿಸಲು ಆಗಲೇ ಇಲ್ಲ. ಆದರೆ 2009ರಲ್ಲಿ ನಡಾಲ್ ನಾಲ್ಕನೇ ಸುತ್ತಿನಲ್ಲಿ ಸಾಡರ‍್ಲಿಂಗ್ ಎದುರು ಸೋತು ಹೊರನಡೆದದ್ದು ಪೆಡರರ್ ರಿಗೆ ವರವಾಯಿತು. ಆಗ ಎಚ್ಚೆತ್ತುಕೊಂಡ ಪೆಡರರ್ ಪ್ರಶಸ್ತಿ ಗೆಲ್ಲುವ ಇಂತಹ ಸದವಕಾಶ ಮತ್ತೆಂದೂ ದೊರೆಯದು ಎಂದು ಮನಗಂಡು ಯಾವುದೇ ಬಗೆಯ ತಪ್ಪಿಗೆ ಆಸ್ಪದ ನೀಡಲಿಲ್ಲ. ನಾಲ್ಕನೇ ಸುತ್ತಿನಲ್ಲಿ ಟಾಮಿ ಹಾಸ್ ಎದುರು ಮೊದಲ ಎರಡು ಸೆಟ್ ಸೋತು ಹಿನ್ನಡೆ ಅನುಬವಿಸಿದ್ದರೂ ಪೀನಿಕ್ಸ್ ನಂತೆ ಮೇಲೆದ್ದು ಕಡೇ ಮೂರು ಸೆಟ್ ಗಳನ್ನು ನಿರಾಯಾಸವಾಗಿ ಗೆದ್ದು ಮುನ್ನಡೆದದ್ದು ಆ ಸಾಲಿನ ಅವರ ರೋಚಕ ಗೆಲುವಾಗಿತ್ತು. ಬಳಿಕ ಪೈನಲ್ ನಲ್ಲಿ ಸಾಡರ‍್ಲಿಂಗ್ ರನ್ನು ನೇರ ಸೆಟ್ ಗಳಿಂದ ಸೋಲಿಸಿ ರೋಲ್ಯಾಂಡ್ ಗ್ಯಾರೋಸ್ ನಲ್ಲಿ ತಮ್ಮ ಮೊದಲ ಹಾಗೂ ಏಕೈಕ ಪ್ರೆಂಚ್ ಓಪನ್ ಗೆದ್ದ ಪೆಡರರ್ ಪ್ರತಿಶ್ಟಿತ ನಾಲ್ಕೂ ಗ್ರಾಂಡ್ ಸ್ಲಾಮ್ ಗೆದ್ದ ಆರನೇ ಆಟಗಾರ ಎಂದೆನಿಸಿಕೊಂಡರು. ಬಹುಶಹ ಈ ಗೆಲುವು ನೀಡಿದಶ್ಟು ನಲಿವು ಬೇರೆ ಯಾವ ಗ್ರಾಂಡ್ ಸ್ಲಾಮ್ ಕೂಡ ಅವರಿಗೆ ನೀಡಿರದು. ನಂತರ 2011 ರ ಸೆಮಿಪೈನಲ್ ನಲ್ಲಿ ಉತ್ತುಂಗದಲ್ಲಿದ್ದ ಜೋಕೋವಿಚ್ ರನ್ನು ಸೋಲಿಸಿ ಅವರ ನಿರಂತರ 43 ಗೆಲುವುಗಳ ನಾಗಾಲೋಟಕ್ಕೆ ಅಂತ್ಯ ಹಾಡಿದ್ದು ಪ್ರೆಂಚ್ ಓಪನ್ ಲೀಗ್. ಇದು ಪೆಡರರ್ ರ ಶ್ರೇಶ್ಟ ಗೆಲುವುಗಳಲ್ಲೊಂದು. ಒಟ್ಟು ಐದು ಬಾರಿ ಪೈನಲ್ ತಲುಪಿ ಒಮ್ಮೆ ಗೆಲುವು ಪಡೆದಿರುವ ಅವರು, ಇಲ್ಲಿ 90 ಪಂದ್ಯಗಳನ್ನಾಡಿ 73 ರನ್ನು ಗೆದ್ದು 17 ಪಂದ್ಯಗಳನ್ನು ಸೋತಿದ್ದಾರೆ. ಇಲ್ಲಿ ಕೂಡ 81% ಗೆಲುವಿನ ಸರಾಸರಿ ಅವರ ಸ್ತಿರ ಪ್ರದರ‍್ಶನಕ್ಕೆ ಎತ್ತುಗೆಯಾಗಿದೆ.

ವಿಂಬಲ್ಡನ್ ಸಾದನೆ

ವಿಂಬಲ್ಡನ್ ನ ಸೆಂಟರ್ ಕೋರ‍್ಟ್ ನ ಹುಲ್ಲು ಹಾಸಿಗೂ ರೋಜರ್ ಪೆಡರರ್ ರಿಗೂ ಅವಿನಾಬಾವ ಸಂಬಂದವಿದೆ ಎಂಬುದು ಅಲ್ಲಿ ಅವರ ದಾಕಲೆಯನ್ನು ನೋಡಿದರೆ ಡಾಳಾಗಿ ಕಾಣುತ್ತದೆ. ಟೆನ್ನಿಸ್ ಇತಿಹಾಸದಲ್ಲೇ ಅತಿಹೆಚ್ಚು ಎಂಟು ಬಾರಿ ವಿಂಬಲ್ಡನ್ ಗೆದ್ದಿರುವ ಪೆಡರರ್ ಅದರಲ್ಲಿ 2003 ರಿಂದ 2007 ರ ವರೆಗೂ ಸತತ ಐದು ಬಾರಿ ಗೆದ್ದಿರುವುದು ಕೂಡ ಒಂದು ವಿಶಿಶ್ಟ ದಾಕಲೆ. ಆ ಬಳಿಕ 2009, 2012 ಮತ್ತು 2017 ರಲ್ಲೂ ವಿಂಬಲ್ಡನ್ ಪ್ರಶಸ್ತಿಯನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿರುವ ಅವರು, ಅಲ್ಲಿನ ಪ್ರೇಕ್ಶಕರ ನೆಚ್ಚಿನ ಆಟಗಾರ. ಅದಲ್ಲದೆ 2003 ರಿಂದ 2009 ರ ತನಕ ಸತತ ಏಳು ಪೈನಲ್ ತಲುಪಿರುವುದು ಪೆಡರರ್ ರ ಇನ್ನೊಂದು ಹೆಗ್ಗಳಿಕೆ. ಬಿಳಿ ಅಂಗಿಯನ್ನು ತೊಟ್ಟ ಪೆಡರರ್ ರ ಆಟವನ್ನು ರಬಸದ ಹುಲ್ಲು ಹಾಸಿನ ಅಂಗಳದಲ್ಲಿ ಕಣ್ತುಂಬಿಸಿಕೊಂಡವರೇ ಪುಣ್ಯವಂತರು ಎಂದು ಟೆನ್ನಿಸ್ ಪಂಡಿತರು ಬಣ್ಣಿಸುವುದು ಅತಿಶಯವೇನಲ್ಲ. ಈ ಗೆಲುವುಗಳಿಂದಾಚೆ ಇಲ್ಲಿ 2008 ರ ರೋಚಕ ಪೈನಲ್ ನಲ್ಲಿ ನಡಾಲ್ ಎದುರು ಮುಗ್ಗುರಿಸಿದ್ದು ಮತ್ತು 2019 ರ ಪೈನಲ್ ನಲ್ಲಿ ಜೋಕೋವಿಚ್ ಎದುರು ಎರಡು ಮ್ಯಾಚ್ ಪಾಯಿಂಟ್ ಇದ್ದೂ ಪಂದ್ಯವನ್ನು ಕೈಚೆಲ್ಲಿದ್ದು ಪೆಡರರ್ ರ ಅತೀ ನೋವಿನ ಗಳಿಗೆಗಳು. ಆದರೆ 36ರ ಹರೆಯದ ಪೆಡರರ್ 2017 ರ ವಿಂಬಲ್ಡನ್ ನಲ್ಲಿ ಒಂದೂ ಸೆಟ್ ಸೋಲದೆ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದು ಅವರ ವಿಶೇಶ ಅಳವಿಗೆ ಸಾಕ್ಶಿ ಎಂದೇ ಹೇಳಬೇಕು. ಇಲ್ಲಿ ಒಟ್ಟು 119 ಪಂದ್ಯಗಳನ್ನಾಡಿ 105 ಪಂದ್ಯಗಳನ್ನು ಗೆದ್ದು 14 ರಲ್ಲಿ ಮಾತ್ರ ಸೋಲು ಕಂಡಿರುವುದರೊಂದಿಗೆ ಅತೀ ಹೆಚ್ಚು ಗೆಲುವಿನ ಸರಾಸರಿ (88%) ಹೊಂದಿರುವುದರಿಂದ ವಿಂಬಲ್ಡನ್ ಪೆಡರರ್ ರ ನೆಚ್ಚಿನ ಅಂಗಳ ಎಂಬುದನ್ನು ಅನುಮಾನವಿಲ್ಲದೆ ಹೇಳಬಹುದು.

ಯೂ.ಎಸ್ ಓಪನ್ ಸಾದನೆ

ನ್ಯೂಯಾರ‍್ಕ್ ನ ತೆರೆದ ಅಂಗಳದ ಪ್ಲಶಿಂಗ್ ಮೆಡೋಸ್ ನ ಹಾರ‍್ಡ್ ಕೋರ‍್ಟ್ ನಲ್ಲೂ ಪೆಡರರ್ ರ ರಾಕೆಟ್ ಸುಮಾರು ವರುಶಗಳ ಕಾಲ ಸದ್ದು ಮಾಡಿತು. 2004 ರಲ್ಲಿ ಮೊದಲ ಬಾರಿಗೆ ಯೂ.ಎಸ್ ಓಪನ್ ಜಯಿಸಿದ ಪೆಡರರ್ ಆ ಗೆಲವಿನ ನಾಗಾಲೋಟವನ್ನು 2008ರ ವರೆಗೂ ಮುಂದುವರೆಸಿ, ಸತತ ಐದು ಬಾರಿ ಯೂ.ಎಸ್ ಓಪನ್ ಗ್ರಾಂಡ್ ಸ್ಲಾಮ್ ಗೆದ್ದು ಬೀಗಿದರು. 2009ರಲ್ಲೂ ಗೆಲುವಿನ ಸನಿಹವಿದ್ದು ಪೈನಲ್ ನಲ್ಲಿ ಡೆಲ್ ಪೊಟ್ರೊ ಎದುರು ಎರಡು ಮ್ಯಾಚ್ ಪಾಯಿಂಟ್ ಗಳನ್ನು ಬಳಸಿಕೊಳ್ಳದೆ ಮಣಿದರು. ಇಲ್ಲಿ ಪೆಡರರ್ ರ ಸತತ ಐದು ಗೆಲುವು ಹಾಗೂ ಆರು ಬಾರಿ ಪೈನಲ್ ತಲುಪಿರುವುದು ಇಂದಿಗೂ ಮುರಿಯದ ಒಂದು ದಾಕಲೆಯೇ! 2010 ಮತ್ತು 2011 ರ ಎರಡೂ ಸೆಮಿಪೈನಲ್ ಗಳಲ್ಲಿ ಜೋಕೋವಿಚ್ ಎದುರು ಮ್ಯಾಚ್ ಪಾಯಿಂಟ್ ಗಳನ್ನು ಕೈಚೆಲ್ಲಿ ಸೋತಿರುವುದು ಪೆಡರರ್ ಮತ್ತವರ ಅಬಿಮಾನಿಗಳಿಗೆ ನುಂಗಲಾರದ ತುತ್ತು. ಈ ಬಗೆಯಲ್ಲಿ ನೋಡಿದಾಗ ಏಕೋ ಯೂ.ಎಸ್ ಓಪನ್ ನ ರೋಚಕ ಹಾಗೂ ನಿರ‍್ಣಾಯಕ ಗಟ್ಟಗಳಲ್ಲಿ ಪೆಡರರ್ ರಿಗೆ ಅದ್ರುಶ್ಟ ಕೈಕೊಡುವುದರ ಜೊತೆಗೆ ಅವರು ಒತ್ತಡಕ್ಕೊಳಗಾದರು ಎಂದೆನಿಸದೆ ಇರದು. ಇದರಿಂದಾಚೆಗೂ ಇಲ್ಲಿ ಪೆಡರರ್ ರ ನಿರಂತರತೆಯನ್ನು ಕೊಂಡಾಡಲೇ ಬೇಕು. ಒಟ್ಟು 103 ಪಂದ್ಯಗಳಲ್ಲಿ 86% ನ ಸರಾಸರಿಯೊಂದಿಗೆ 89 ಪಂದ್ಯಗಳನ್ನು ಗೆದ್ದು 14 ಪಂದ್ಯಗಳನ್ನು ಸೋತಿದ್ದಾರೆ.

ಒಟ್ಟು 24 ವರುಶಗಳ ವ್ರುತ್ತಿ ಬದುಕಿನಲ್ಲಿ ಪ್ರಪಂಚದೆಲ್ಲೆಡೆ ಗೆಲುವು ದಾಕಲಿಸಿ ಅಬಿಮಾನಿಗಳನ್ನು ಸಂಪಾದಿಸಿರುವ ಪೆಡರರ್ ಟೆನ್ನಿಸ್ ನ ಅನರ‍್ಗ್ಯ ರತ್ನ ಎಂದರೆ ತಪ್ಪಾಗಲಾರದು. ಅಂಕಿ-ಸಂಕ್ಯೆಗಳಿಂದಾಚೆಗೆ ಅವರ ರಾಕೆಟ್ ಚಳಕದಿಂದ ನಮ್ಮನ್ನು ಮಂತ್ರಮುಗ್ದವಾಗಿಸಿ ಆ ಸೊಬಗನ್ನು ನಮಗೆ ನೋಡಲೇಬೇಕೆನಿಸುವಂತೆ ಮಾಯೆ ಮಾಡಿರುವ ಮಾಂತ್ರಿಕ ಈ ಪೆಡರರ್! ಕೋರ‍್ಟ್ ನಲ್ಲಿ ಅವರ ಆಟದ ಸೆಳೆತವೇ ಅಂತಹುದು. ತಮ್ಮ ಆಟದ ಸಂದ್ಯಾಕಾಲದಲ್ಲೂ ಶಸ್ತ್ರಚಿಕಿತ್ಸೆಯ ಬಳಿಕ ಮರಳಿ ಮೂರು ಗ್ರಾಂಡ್ ಸ್ಲಾಮ್ ಗಳನ್ನು ಗೆದ್ದ ಪೆಡರರ್ ವ್ರುತ್ತಿಬದುಕಿನಾದ್ಯಂತ ಆಡಿದ 1526 ಪಂದ್ಯಗಳಲ್ಲಿ ಒಮ್ಮೆಯೂ ನಿವ್ರುತ್ತನಾಗದ ಒಬ್ಬ ಗಟ್ಟಿಗ. ಸನ್ನಡತೆಯನ್ನು ಮೈಗೂಡಿಸಿಕೊಂಡಿರುವ ಪೆಡರರ್ ಮುಂಬರುವ ಆಟಗಾರರಿಗೆ ಮಾದರಿ. ಅವರನ್ನು ಟೆನ್ನಿಸ್ ಜಗತ್ತು ಎಂದಿಗೂ ಮರೆಯಲಾಗದು. ಅವರ ಆಟವನ್ನು ನೋಡಿ ಸವೆದ ನಮ್ಮ ಪೀಳಿಗೆಯೇ ದನ್ಯ. ಪೆಡರರ್ ರ ಮುಂದಿನ ಬದುಕಿಗೆ ಶುಬ ಹಾರೈಸುತ್ತಾ ಆಟದೊಂದಿಗೆ ಯಾವುದಾದರೂ ಬಗೆಯಲ್ಲಿ ಅವರು ತಮ್ಮ ನಂಟು ಉಳಿಸಿಕೊಳ್ಳಲಿ ಎಂದು ಬಯಸೋಣ.

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *