ಟೆನ್ನಿಸ್ ಅಂಕಣಗಳು : ಒಂದು ನೋಟ

– ರಾಮಚಂದ್ರ ಮಹಾರುದ್ರಪ್ಪ.

tennis court, ಟೆನ್ನಿಸ ಅಂಕಣ

ಬಹುತೇಕ ಎಲ್ಲಾ ಹೊರಾಂಗಣ ಆಟಗಳಲ್ಲಿಯೂ ಆಟದ ಅಂಕಣ ಬಹು ಮುಕ್ಯ ಪಾತ್ರ ವಹಿಸಿ ಪಂದ್ಯದ ಪಲಿತಾಂಶದ ಮೇಲೆ ಪ್ರಬಾವ ಬೀರುತ್ತದೆ ಎಂದರೆ ತಪ್ಪಾಗಲಾರದು. ಟೆನ್ನಿಸ್ ಆಟ ಕೂಡ ಇದಕ್ಕೆ ಹೊರತಲ್ಲ. ಆಯತ ಆಕಾರದಲ್ಲಿ 23.77 ಮೀಟರ್ ಉದ್ದ ಹಾಗೂ 8.23 ಮೀಟರ್ ಅಗಲ ಇರುವ ಟೆನ್ನಿಸ್ ಕೋರ‍್ಟ್ ನ ಮೇಲ್ಮಯ್(surface) ಆಟದ ವೇಗವನ್ನು ತೀರ‍್ಮಾನಿಸೋ ಪ್ರಮುಕ ಅಂಶ. ನಾಲ್ಕು ಮೇರು ಗ್ರ್ಯಾಂಡ್ ಸ್ಲಾಮ್ ಗಳು ಮೂರು ಬೇರೆ-ಬೇರೆ ಬಗೆಯ ಮೇಲ್ಮಯ್ ಅಂಕಣದಲ್ಲಿ ಆಡಲಾಗುತ್ತದೆ. ಆಸ್ಟ್ರೇಲಿಯಾ ಓಪನ್ ಮತ್ತು ಯು.ಎಸ್ ಓಪನ್ ಹಾರ‍್ಡ್ ಕೋರ‍್ಟ್ ನಲ್ಲಿ ನಡೆದರೆ, ಪ್ರೆಂಚ್ ಓಪನ್ ಕ್ಲೇ ಕೋರ‍್ಟ್ ಮತ್ತು ಐತಿಹಾಸಿಕ ವಿಂಬಲ್ಡನ್ ಹುಲ್ಲು ಹಾಸಿನ ಗ್ರಾಸ್ ಕೋರ‍್ಟ್ ನಲ್ಲಿ ನಡೆಯುತ್ತದೆ. ಹಾಗಾಗಿ ಎಲ್ಲಾ ಬಗೆಯ ಅಂಕಣಗಳಿಗೂ ತಕ್ಕಂತೆ ತಮ್ಮ ಆಟವನ್ನು ಮಾರ‍್ಪಡಿಸಿಕೊಂಡು ಕಣಕ್ಕಿಳಿಯುವ ಸವಾಲು ಹಾಗೂ ಒತ್ತಡ ಟೆನ್ನಿಸ್ ಆಟಗಾರರ ಮೇಲೆ ಸದಾ ಇದ್ದೇ ಇರುತ್ತದೆ. ಗ್ರ್ಯಾಂಡ್ ಸ್ಲಾಮ್ ಗಳಲ್ಲದೆ ATP ಪೈನಲ್ಸ್, ATP ಮಾಸ್ಟರ‍್ಸ್ -1000 ದ 9 ಪಂದ್ಯಾವಳಿಗಳು, ATP ಟೂರ್ -500 ರ 13 ಪಂದ್ಯಾವಳಿಗಳು, ATP ಟೂರ್ -100 ರ 39 ಪಂದ್ಯಾವಳಿಗಳು ಹಾಗೂ ಹೆಂಗಸರ ಹಲವಾರು WTA ಪಂದ್ಯಾವಳಿಗಳು ಹೆಚ್ಚಾಗಿ ಹಾರ‍್ಡ್ ಕೋರ‍್ಟ್, ಆ ಬಳಿಕ ಕ್ಲೇ ಕೌರ‍್ಟ್ ಹಾಗೂ ಕಡೆಯದಾಗಿ ಹುಲ್ಲು ಹಾಸಿನ ಕೋರ‍್ಟ್ಗಳ ಮೇಲೆ ಆಡಲಾಗುತ್ತದೆ.

ಹುಲ್ಲು ಹಾಸಿನ ಕೋರ‍್ಟ್ (ಗ್ರಾಸ್ ಕೋರ‍್ಟ್)

ಗ್ರಾಸ್ ಕೋರ‍್ಟ್ ಗಳಿಗೆ ಸಾಂಪ್ರದಾಯಿಕ ಕೋರ‍್ಟ್ ಗಳೆಂಬ ಹೆಚ್ಚುಗಾರಿಕೆ ಇದೆ. ಈ ಅಂಕಣದಲ್ಲಿ ಆಡುವ ಟೆನ್ನಿಸ್ ಗೆ ‘ಲಾನ್ ಟೆನ್ನಿಸ್’ ಎಂದು ಕೂಡ ಕರೆಯುವುದುಂಟು. ಪ್ರತಿಶ್ಟಿತ ವಿಂಬಲ್ಡನ್ ನಡೆಯುವ ಈ ಗ್ರಾಸ್ ಕೋರ‍್ಟ್ ಗಳಲ್ಲಿ ಚೆಂಡು ಹೆಚ್ಚು ವೇಗದಿಂದ ಸಂಚರಿಸುವುದಲ್ಲದೆ ಏರಿಳಿತದ ಪುಟಿತದಿಂದ ಆಟಗಾರರಿಗೆ ಸವಾಲೊಡ್ಡುತ್ತದೆ. ಅತ್ಯಂತ ವೇಗದ ಕೋರ‍್ಟ್ ಎಂದು ಗುರುತಿಸಲ್ಪಡುವ ಗ್ರಾಸ್ ಕೋರ‍್ಟ್ ಗಳು ಬಲಾಡ್ಯ ಸರ‍್ವ್ ಹೊಂದಿರುವ ಮತ್ತು ವಾಲೀ ಶೈಲಿಯ ಆಟಗಾರರಿಗೆ ನೆರವಾಗುತ್ತದೆ. ರೋಜರ್ ಪೆಡರರ್, ಪೀಟ್ ಸಾಂಪ್ರಾಸ್, ಜೋಕೋವಿಚ್, ಸೆರೆನಾ ವಿಲಿಯಮ್ಸ್ ಹಾಗೂ ಮಾರ‍್ಗರೆಟ್ ಕೋರ‍್ಟ್ ಹುಲ್ಲು ಹಾಸಿನ ಕೋರ‍್ಟ್ ಗಳಲ್ಲಿ ಪ್ರಾಬಲ್ಯ ಮೆರೆದಿದ್ದಾರೆ.

ಕ್ಲೇ ಕೋರ‍್ಟ್ (ಜೇಡಿ ಮಣ್ಣಿನ ಕೋರ‍್ಟ್)

ಮಣ್ಣು ಹಾಗೂ ಶೇಲ್ ಕಲ್ಲುಗಳ ಹದವಾದ ಬೆರಕೆಯಿಂದ ಮಾಡಲ್ಪಡುವ ಕ್ಲೇ ಕೋರ‍್ಟ್ ಗಳಲ್ಲಿ ಚೆಂಡು ನಿದಾನ ಗತಿಯಲ್ಲಿ ಸಂಚರಿಸಿ ಎತ್ತರಕ್ಕೆ ಪುಟಿಯುತ್ತದೆ. ಹಾಗಾಗಿ ಸುಳುವಾಗಿ ವಿನ್ನರ್ ಗಳಿಸಲಾಗದೆ ಆಟಗಾರರು ದೊಡ್ಡ ರಾಲಿಗಳಲ್ಲಿ ಕಾದಾಡಬೇಕಾಗುತ್ತದೆ. ಪ್ರೆಂಚ್ ಓಪನ್ ನಡೆಯುವ ಈ ಕ್ಲೇ ಕೋರ‍್ಟ್ ಗಳು ಟಾಪ್ ಸ್ಪಿನ್ ಹೊಡೆತಗಳನ್ನು ಆಡುವ ಬೇಸ್ ಲೈನ್ ಆಟಗಾರರಿಗೆ ಹೆಚ್ಚು ಸಹಕಾರಿಯಾಗಿದ್ದು ಸತತ ರಾಲಿಗಳಿಂದ ಆಟಗಾರರ ಮೈ ಅಳವು ಕೂಡ ಪರೀಕ್ಶಿಸುತ್ತದೆ. ಕಿಂಗ್ ಆಪ್ ಕ್ಲೇ ಎಂದೇ ಜನಪ್ರಿಯರಾಗಿರುವ ರಪೇಲ್ ನಡಾಲ್, ಜಸ್ಟಿನ್ ಹೆನಿನ್ ಹಾರ‍್ಡಿನ್, ಕ್ರಿಸ್ ಎವರ‍್ಟ್ ಹಾಗೂ ಬೋರ‍್ಗ್ ಕ್ಲೇ ಕೋರ‍್ಟ್ ಗಳಲ್ಲಿ ಹೆಚ್ಚು ಯಶಸ್ಸು ಕಂಡಿದ್ದಾರೆ.

ಹಾರ‍್ಡ್ ಕೋರ‍್ಟ್

ಸಿಂತೆಟಿಕ್, ರೇಸಿನ್ ಮತ್ತು ರಬ್ಬರ್ ಗಳ ಮಿಶ್ರಣದಿಂದ ತಯಾರಾಗುವ ಈ ಕ್ರುತಕ ಹಾರ‍್ಡ್ ಕೋರ‍್ಟ್ ಗಳಲ್ಲಿ ಚೆಂಡು ಕ್ಲೇ ಕೋರ‍್ಟ್ ಗಳಿಗಿಂತ ಹೆಚ್ಚು ವೇಗದಲ್ಲಿ ಸಂಚರಿಸಿದರೂ ಗ್ರಾಸ್ ಕೋರ‍್ಟ್ ಗಳಿಗಿಂತ ಕಡಿಮೆ ವೇಗದಲ್ಲಿ ಸಂಚರಿಸುತ್ತದೆ. ಆಸ್ಟ್ರೇಲಿಯಾ ಓಪನ್ ಮತ್ತು ಯು.ಎಸ್ ಓಪನ್ ನಡೆಯುವ ಹಾರ‍್ಡ್ ಕೋರ‍್ಟ್ ಗಳಲ್ಲಿ ಚೆಂಡು ಏರಿಳಿತವಿಲ್ಲದೆ ಸಮನಾಗಿ ಹೆಚ್ಚು ಎತ್ತರಕ್ಕೆ ಪುಟಿಯುತ್ತದೆ. ನೋವಾಕ್ ಜೋಕೋವಿಚ್ ಹಾರ‍್ಡ್ ಕೋರ‍್ಟ್ ಗಳಲ್ಲಿ ಅತಿ ಹೆಚ್ಚು ಯಶಸ್ಸು ಕಂಡಿದ್ದಾರೆ.

ಟೆನ್ನಿಸ್ ಆಟಗಾರರಿಗೆ ಪರಿಪೂರ‍್ಣ ಆಟಗಾರರೆನಿಸಿಕೊಳ್ಳಲು ಎಲ್ಲಾ ಬಗೆಯ ಕೋರ‍್ಟ್ ಗಳಲ್ಲಿ ಗೆಲುವು ಕಾಣಲೇಬೇಕಾದ ದೊಡ್ಡ ಸವಾಲಿದೆ. ಈ ಬಗೆಬಗೆಯ ಕೋರ‍್ಟ್ ಗಳ ಮೇಲ್ಮಯ್ ನ ಮರ‍್ಮ ಅರಿತರಶ್ಟೇ ಆಟಗಾರರು ಗೆಲುವಿನ ಕನಸು ಕಾಣಬಹುದು. 90ರ ದಶಕದ ದಿಗ್ಗಜ ಪೀಟ್ ಸಾಂಪ್ರಾಸ್ ಒಟ್ಟು 13 ಗ್ರಾಂಡ್ಸ್ಲಾಮ್ ಗಳನ್ನು ಗೆದ್ದರೂ ಕ್ಲೇ ಕೋರ‍್ಟ್ ನ ಪ್ರೆಂಚ್ ಓಪನ್ ನಲ್ಲಿ ಒಮ್ಮೆಯೂ ಪೈನಲ್ ಕೂಡ ತಲುಪದೇ ಇದ್ದದ್ದು ದೊಡ್ಡ ಅಚ್ಚರಿಯೇ ಸರಿ. 70 ರ ದಶಕದ ದಿಗ್ಗಜ ಬೋರ‍್ಗ್ ವಿಂಬಲ್ಡನ್ ಹಾಗೂ ಪ್ರೆಂಚ್ ಓಪನ್ ಅನ್ನು ತಲಾ 6 ಬಾರಿ ಗೆದ್ದರೂ ಹಾರ‍್ಡ್ ಕೋರ‍್ಟ್ ನ ಒಂದೂ ಗ್ರ್ಯಾಂಡ್ ಸ್ಲಾಮ್ ಗೆಲ್ಲದದ್ದು ದುರಂತವೆಂದೇ ಹೇಳಬೇಕು. 80 ರ ದಶಕದಲ್ಲಿ ಪ್ರಾಬಲ್ಯ ಮೆರೆದಿದ್ದ ಜಾನ್ ಮೆಕೆನ್ರೋ 3 ಬಾರಿ ವಿಂಬಲ್ಡನ್ ಹಾಗೂ 4 ಬಾರಿ ಯು.ಎಸ್ ಓಪನ್ ಗೆದ್ದರೂ ಒಂದೂ ಪ್ರೆಂಚ್ ಓಪನ್ ಗೆಲ್ಲದದ್ದು ಇನ್ನೊಂದು ನಂಬಲಸಾದ್ಯವೆಂಬಂತ ವಾಸ್ತವ. ಈ ಮೇಲ್ಕಂಡ ಎತ್ತುಗೆಗಳಿಂದ ಮೂರೂ ದಿಗ್ಗಜ ಆಟಗಾರರ ಶ್ರೇಶ್ಟತೆಗೇನೂ ಕುಂದು ಬಾರದೆ ಹೋದರೂ ಅವರ ವ್ರುತ್ತಿ ಬದುಕು ಅಪರಿಪೂರ‍್ಣ ಎಂಬುದು ಟೆನ್ನಿಸ್ ವಿಮರ‍್ಶಕರ ಅಂಬೋಣ. ಟೆನ್ನಿಸ್ ಅಂಕಣದ ಬಗೆಬಗೆಯ ಮೆಲ್ಮಯ್ ಆಟಗಾರರ ಅಳವನ್ನು ಪರೀಕ್ಶಿಸಿ ವಿದವಿದವಾದ ಸವಾಲೊಡ್ಡಿ ಪಂದ್ಯದಲ್ಲಿ ನಿರ‍್ಣಾಯಕ ಪಾತ್ರ ವಹಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಹ ಸವಾಲುಗಳಿಂದಲೇ ಟೆನ್ನಿಸ್ ಆಟ ಹೆಚ್ಚು ಜನಪ್ರಿಯಗೊಂಡು ಅಬಿಮಾನಿಗಳನ್ನು ದಶಕಗಳಿಂದ ರಂಜಿಸುತ್ತಾ ಬಂದಿದೆ. ಈ ಸೊಗಸಾದ ಸ್ಪರ‍್ದಾತ್ಮಕ ಆಟ ಹೀಗೇ ಮುಂದುವರೆಯಲಿ ಎಂದು ಬಯಸೋಣ!

(ಚಿತ್ರ ಸೆಲೆ: pixabay.com, wikipedia, pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: