ಪ್ರಪಂಚದ ಅತಿ ದೊಡ್ಡ ನದಿ ದ್ವೀಪ ಜಿಲ್ಲೆ – ಮಜುಲಿ

– .

ಈಶಾನ್ಯ ರಾಜ್ಯವಾದ ಅಸ್ಸಾಮಿನಲ್ಲಿರುವ ಮಜುಲಿ ಜಿಲ್ಲೆ ತನ್ನದೇ ಆದ ವೈಶಿಶ್ಟ್ಯತೆಯಿಂದ ಹೆಸರುವಾಸಿಯಾಗಿದೆ. ಇದು ದರಣಿಯಲ್ಲೇ ಅತ್ಯಂತ ದೊಡ್ಡ ನದಿ ದ್ವೀಪವೆಂಬ ಕ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಬ್ರಹ್ಮಪುತ್ರ ನದಿಯ ದಡದ ಮೇಲಿರುವ ಈ ಜಿಲ್ಲೆ, ತನ್ನ ವಿಸ್ತೀರ‍್ಣದಲ್ಲಿ ಏರುಪೇರನ್ನು ಕಾಣುವ ದ್ವೀಪ ಸಹ ಆಗಿದೆ. ಮುಂಗಾರು ಮತ್ತು ಹಿಂಗಾರಿನ ಸಮಯದಲ್ಲಿ ಉಕ್ಕಿ ಹರಿಯುವ ಬ್ರಹ್ಮಪುತ್ರ ನದಿಯು ಮಜುಲಿ ದ್ವೀಪ ಜಿಲ್ಲೆಯ ಸಾಕಶ್ಟು ಕಡಲನ್ನು ಆಕ್ರಮಿಸಿಕೊಳ್ಳುತ್ತದೆ. ಮನೆ ಮಟಗಳನ್ನು ನುಂಗುತ್ತದೆ. ಮಳೆಯ ಮಾರುತ ಕಡಿಮೆಯಾದಂತೆ, ಹಿಂದಕ್ಕೆ ಸರಿದು ಜಿಲ್ಲೆಯ ವಿಸ್ತೀರ‍್ಣವನ್ನು ಹೆಚ್ಚಿಸುತ್ತದೆ.ಇಶ್ಟೆಲ್ಲಾ ಪ್ರಾಕ್ರುತಿಕ ಅನಾಹುತ ಪ್ರತಿವರ‍್ಶವೂ ಆಗುತ್ತಿದ್ದರೂ ಸಹ ಮಜುಲಿ ಜಿಲ್ಲೆ ತನ್ನದೇ ಆದ ರೋಮಾಂಚಕ ಸಂಸ್ಕ್ರುತಿ ಮತ್ತು ದ್ರುಶ್ಯ ಸೌಂದರ‍್ಯದ ಆಗರವಾಗಿ ಉಳಿದಿದೆ. ಸಮ್ಮೋಹನಗೊಳಿಸುವ ರಮಣೀಯ ಸ್ತಳದ ಜಿಲ್ಲೆಯಾಗಿದೆ.ಮಜುಲಿಯಲ್ಲಿ ಸೂರ‍್ಯಾಸ್ತ ಅಲೌಕಿಕವಾಗಿದೆ. ಆ ಸಮಯದಲ್ಲಿ ನಾವು ನಮ್ಮ ಅಸ್ತಿತ್ವವನ್ನೇ ಮರೆಯುವಶ್ಟು ಮನಸ್ಸು ಉಲ್ಲಾಸದಿಂದ ಕೂಡಿರುತ್ತದೆ! ಇಲ್ಲಿ ನಿರ‍್ಮಿಸಿರುವ ಮನೆಗಳನ್ನು, ಮಾನ್ಸೂನ್ ಸಮಯದಲ್ಲಿ ನೀರು ಒಳ ಹರಿಯದಂತೆ ತಡೆಯಲು ನೆಲದಿಂದ ಎರೆಡು ಅಡಿ ಎತ್ತರದಲ್ಲಿ ಕಾಕ್ರೀಟ್ ಕಂಬಗಳ ಮೇಲೆ ಕಟ್ಟಲಾಗುತ್ತದೆ.

ಮಜುಲಿಯ ಮನಸೆಳೆಯುವ ಸಂಗತಿಗಳು

ಮಜುಲಿ ದ್ವೀಪದಲ್ಲಿ ಅನೇಕ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಇದು ಮಿಶಿಂಗ್ ಬುಡಕಟ್ಟು, ಡಿಯೋರಿಸ್, ಸೋನೋವಾಲ್ ಕಚಾರಿಸ್ ಮತ್ತು ಅಹೋಮ್ಸ್ ಬುಡಕಟ್ಟು ಜನಾಂಗದವರ ನೆಲೆಯಾಗಿದೆ. ಇವರುಗಳದ್ದು ಸರಳ ಜೀವನ. ಇಲ್ಲಿಗೆ ಬರುವ ಪ್ರವಾಸಿಗರನ್ನು ಬಹಳ ಆತ್ಮೀಯತೆಯಿಂದ ಸ್ವಾಗತಿಸಲು ಮಿಶಿಂಗ್ ಬುಡಕಟ್ಟಿನ ಜನಾಂಗದವರು ತುದಿಗಾಲಲ್ಲಿ ನಿಂತಿರುತ್ತಾರೆ. ಅವರುಗಳು ಪ್ರವಾಸಿಗರನ್ನು ತಮ್ಮ ಮನೆಗೆ ಆಹ್ವಾನಿಸಿ, ಅಕ್ಕಿಯಿಂದ ತಯಾರಿಸಿದ ತಾಜಾ ಬಿಯರ್ ನೀಡಿ ಸತ್ಕರಿಸುತ್ತಾರೆ. ಇಲ್ಲಿನ ಪರಂಪರೆಯ ಪ್ರಮುಕ ಬಾಗ, ಮುಕವಾಡಗಳು. ಸ್ತಳೀಯ ಕುಶಲ ಕರ‍್ಮಿಗಳು ಸಾಮಾನ್ಯವಾಗಿ ಹತ್ತಿ ಬಟ್ಟೆ, ಜೀಡಿಮಣ್ಣು ಮತ್ತು ಹಸುವಿನ ಸಗಣಿಯಿಂದ ಮುಚ್ಚಿದ ಬಿದಿರು ಚೌಕಟ್ಟಿನ ಮುಕವಾಡವನ್ನು ತಯಾರಿಸುತ್ತಾರೆ. ವಿವಿದ ಮುಕವಾಡಗಳನ್ನು ಇಲ್ಲಿನ ಸಮಗುರಿಯ ಕಾರ‍್ಯಾಗಾರಗಳಲ್ಲಿ ಕಾಣಬಹುದು. ಪ್ರಾಣಿಗಳ, ಮನುಶ್ಯರ ಮತ್ತು ಪೌರಾಣಿಕ ಪಾತ್ರಗಳ ವರ‍್ಣರಂಜಿತ ಮತ್ತು ಬಯಾನಕ ಮುಕವಾಡಗಳಿಂದ ಗೋಡೆಗಳು ಅಲಂಕರಿಸಲ್ಪಟ್ಟಿವೆ.

ಮಜುಲಿ ಪ್ರಕ್ರುತಿಯ ವರದಾನ. ಇಲ್ಲಿನ ಹಸಿರು ಗದ್ದೆಗಳು ಹಸಿರು ರತ್ನಗಂಬಳಿಯನ್ನು ಹಾಸಿದಂತೆ ಕಾಣುತ್ತದೆ. ಇದು ಕಣ್ಣಿಗೆ ಹಬ್ಬ. ಹಯಸಿಂತ್ ಹೂವುಗಳಿಂದ ತುಂಬಿದ ಕೊಳಗಳು, ನಿಶ್ಯಬ್ದ ರಸ್ತೆಗಳು, ಇಕ್ಕೆಲಗಳಲ್ಲಿ ಬಿದಿರಿನ ಮರಗಳ ನೆರಳು, ಸಮತಟ್ಟಾದ ಬೂ ಪ್ರದೇಶ, ಇವು ಪ್ರವಾಸಿಗರನ್ನು ಪಕ್ರುತಿಯ ಮಡಿಲಿಗೆ ಆಹ್ವಾನಿಸುತ್ತದೆ. ಸೈಕಲ್ ಇಲ್ಲಿನ ಜನರ ಅಚ್ಚುಮೆಚ್ಚಿನ ವಾಹನ. ಇದರ ಮೇಲೆ ಮನೆಯ ಅಗತ್ಯ ವಸ್ತುಗಳನ್ನು ಸೈಕಲ್ ಮೇಲೆ ಹೇರಿ ಮನೆ ಮನೆಗೂ ಮಾರಾಟ ಮಾಡುವ ಪರಿಪಾಟ ಇಲ್ಲಿನವರದು. ದಕ್ಶಿಣದ ಬಾಗದಲ್ಲಿ ಸುಗ್ಗಿಯ ಕಾಲದಲ್ಲಿ ಆಚರಿಸುವ ಸಂಕ್ರಾಂತಿಯಂತೆ, ಇಲ್ಲೂ ಸಹ ಉತ್ತಮ ಪಸಲನ್ನು ನೀಡುವಂತೆ ಹಾಗೂ ನೀಡಿರುವ ಪಸಲಿಗೆ ಗೌರವ ಸೂಚಕವಾಗಿ ‘ಅಲಿ ಐ ಲಿಗಾಂಗ್’ ಎಂಬ ವಸಂತ ಹಬ್ಬವನ್ನು ಆಚರಿಸುತ್ತಾರೆ. ಈ ದ್ವೀಪ ಜಿಲ್ಲೆಯಲ್ಲಿ ಯುವಕ ಯುವತಿಯರು ಸಾಂಪ್ರದಾಯಿಕ ನ್ರುತ್ಯ ಪ್ರದರ‍್ಶನ ಮಾಡಿ ಬಿತ್ತನೆ ಕೆಲಸವನ್ನು ಮೊದಲು ಮಾಡುತ್ತಾರೆ. ಶರತ್ಕಾಲದಲ್ಲಿ ನಡೆಯುವ ‘ರಾಸ್’ ಮಹೋತ್ಸವದಲ್ಲಿ ಸಾಂಪ್ರದಾಯಿಕ ಪದಗಳನ್ನು ಹಾಡುತ್ತಾರೆ. ಶ್ರೀ ಕ್ರಿಶ್ಣನ ಜನ್ಮ ದಿನವನ್ನು ಆಚರಿಸುವ ಸಮಯದಲ್ಲಿ ನ್ರುತ್ಯ, ನಾಟಕ, ಸಾಮೂಹಿಕ ಪಟಣಗಳು ನಡೆಯುತ್ತವೆ.

ಮಜುಲಿಯನ್ನು ಪಕ್ಶಿ ವೀಕ್ಶಕರ ಸ್ವರ‍್ಗ ಎಂದು ಕರೆಯಲಾಗುತ್ತದೆ. ಸ್ತಳೀಯ ಮತ್ತು ವಲಸೆ ಹಕ್ಕಿಗಳನ್ನು ಇಲ್ಲಿ ಕಾಣಬಹುದು. ಪಕ್ಶಿಗಳು ಇಲ್ಲಿ ಸ್ವಚ್ಚಂದವಾಗಿ ನಲಿದಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ದೊಡ್ಡ ದೊಡ್ಡ ಪಕ್ಶಿಗಳು ಹಿಂಡು ಹಿಂಡಾಗಿ ಮರದಿಂದ ನದಿಗೆ ಆಹಾರವನ್ನು ಹುಡುಕುತ್ತಾ ದುಮುಕುವ ದ್ರುಶ್ಯ ಕಣ್ಣಿಗೆ ಮುದ ನೀಡುತ್ತದೆ. ಮಜುಲಿ ನದಿ ದ್ವೀಪವಾದ ಕಾರಣ ಇಲ್ಲಿನ ದ್ವೀಪವಾಸಿಗಳು ಮೀನುಗಾರಿಕೆ ಮತ್ತು ಮುಕ್ಯ ಬೂಬಾಗವನ್ನು ತಲುಪಲು ಸಣ್ಣ ಮರದ ದೋಣಿಗಳ ಮೇಲೆ ಅವಲಂಬಿತರಾಗಿದ್ದಾರೆ. ನದಿಯ ಮತ್ತೊಂದು ಬದಿಯಲ್ಲಿರುವ ಲಕಿಂಪುರ ತಲುಪಲು ಮರದ ಹಲಗೆಗಳನ್ನು ಜೋಡಿಸಿ ತಯಾರಿಸಲಾದ ತೆಪ್ಪಗಳನ್ನು ಬಳಸುತ್ತಾರೆ. ಈ ತೆಪ್ಪಗಳಲ್ಲಿ ಜನ, ಬೈಸಿಕಲ್ಲು, ದನ, ಕರು, ಸರಕು ಸರಂಜಾಮುಗಳನ್ನು ತುಂಬಿ ಸಾಗಿಸುತ್ತಾರೆ.

ಮಜುಲಿ ಆದ್ಯಾತ್ಮಿಕ ಹಿನ್ನೆಲೆ

ಮಜುಲಿ ನವ ವೈಶ್ಣವ ಪಂತದ ಪುರಾತನ ಆದ್ಯಾತ್ಮಿಕ ಸ್ತಾನವಾಗಿದೆ. ಶ್ರೀಮಂತ ಶಂಕರದೇವ 15ನೇ ಶತಮಾನದಲ್ಲಿ ಹಿಂದೂ ದರ‍್ಮ ಸತ್ರಗಳನ್ನು ಸ್ತಾಪಿಸಿದರು. ಔನಿಯಾತಿ ಸತ್ರವು ಸನ್ಯಾಸಿಗಳ ಪಲ್ನಾಮ್ ಮತ್ತು ಅಪ್ಸರಾ ನ್ರುತ್ಯಕ್ಕೆ ಪ್ರಸಿದ್ದಿಯಾಗಿದೆ, ದಕಿನ್ಪತ್ ಸತ್ರವು ರಾಸಲೀಲಾಕ್ಕೆ, ಕಮಲಾಬರಿ ಸತ್ರವು ದೋಣಿ ತಯಾರಿಕೆಗೆ ಮತ್ತು ಗರಮೂರ್ ಸತ್ರವು ಮದ್ಯಕಾಲೀನ ಆಯುದಗಳ ಸಂಗ್ರಹಣೆಗೆ ಪ್ರಸಿದ್ದಿಯಾಗಿದೆ. ಕರಕುಶಲತೆಗೆ ಸಹ ಮಜುಲಿ ಪ್ರಸಿದ್ದವಾಗಿದೆ. ಇಲ್ಲಿ ಬಿದಿರಿನಿಂದ ಸಂಗೀತ ಉಪಕರಣಗಳ, ಮೀನುಗಾರಿಕಾ ಉಪಕರಣಗಳ, ಮರದ ಪೀಟೋಪಕರಣಗಳ ತಯಾರಿಕೆ ಮತ್ತು ನೇಯ್ಗೆಯ ಕೆಲಸ, ಇಲ್ಲಿನ ಜನರ ಪ್ರಮುಕ ಕಸುಬುಗಳಲ್ಲಿ ಸೇರಿವೆ. ಬ್ರಹ್ಮಪುತ್ರ ನದಿಯ ದಡದಲ್ಲಿರುವ ಜೇಡಿಮಣ್ಣಿನಿಂದ ಮಡಿಕೆಗಳನ್ನು ತಯಾರಿಸುವ ವಿಶಿಶ್ಟ ಕಲೆ ಸಹ ಇಲ್ಲಿನವರಿಗೆ ಕರಗತವಾಗಿದೆ.

ಒಟ್ಟಾರೆ ಮಜುಲಿ ದ್ವೀಪ ಜಿಲ್ಲೆಯೂ ತನ್ನ ಅವಶ್ಯಕತೆಗಳಿಗೆ ಸ್ವಾವಲಂಬಿಯಾಗಿದೆ. ಕ್ರುಶಿ ಇಲ್ಲಿನ ಜನರ ಮುಕ್ಯ ಕಸುಬಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: paradiseunexplored.com, wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *