ಕವಿತೆ: ಮನಗೆಲ್ಲೋ ನಲ್ಲೆ

– ಕಿಶೋರ್ ಕುಮಾರ್.

ನಗುವಿಂದಲೇ ಮನಗೆಲ್ಲೋ ನಲ್ಲೆ
ನಗಲಾರದ ಆ ದಿನಗಳ ಕೊಲ್ಲೆ
ನಗುನಗುತಲೆ ತಲೆ ಕೆಡಿಸಿದೆಯಲ್ಲೇ
ನಿನಗಾಗಿ ಕರೆತರುವೆ ಚಂದಿರನ ನಾನಿಲ್ಲೆ

ನಕ್ಕಾಗ ಉದುರಿದವೋ ಮುತ್ತು
ಹಸಿವಿಗೆ ಆ ಮುತ್ತೆ ಸಿಹಿಯಾದ ತುತ್ತು
ಕಳೆಯುತಿಹೆ ನಿನ ನೆನಪಲೇ ಹೊತ್ತು
ನೀನಂತೂ ಬಿಡದಂತೆ ಆವರಿಸಿದ ಮತ್ತು

ಬಿಸಿಲೇನು ಮಳೆಯೇನು ಲೆಕ್ಕವೇ ನನಗೆ
ಲೆಕ್ಕಿಸದೆ ಕಾದಿರುವೆ ನೀ ಬರುವವರೆಗೆ
ದಿನವೂ ಕಾಡುವುದು ಸರಿಯೇನು ನಿನಗೆ
ತುಸು ಯೋಚಿಸು ನೀನು ಈ ಬಾಳು ನಮಗೆ

ನೀನಿರುವೆ ಜೊತೆಯೆಂದರೆ ಬಾಳೆಲ್ಲಾ ನಗುವೆ
ಎದೆಗುಂದದೆ ನಿಲ್ಲುವೆ ಎದುರಾದರೂ ಜಗವೆ
ನಿನ ಒಲವಿನ ಸಿಹಿಯುಂಡು ನಾ ನಲಿಯುತಲಿರುವೆ
ಈ ಜನ್ಮವ ನಿನಗಾಗಿಯೇ ಮುಡಿಪಾಗಿಡುವೆ

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *