ನಿ‍ರ‍್ಲಕ್ಶೆ

– ಹರ‍್ಶಿತ್ ಮಂಜುನಾತ್.

ullala
ಚೇ ! ಎಂತಾ ಕೆಟ್ಟ ಸುದ್ದಿ ನೋಡಿ. ಪ್ರವಾಸಕ್ಕೆಂದು ತೆರಳಿದ್ದ ಹಯ್ದರಾಬಾದಿನ ಬಿಣಿಗೆಯರಿಮೆಯ ಕಲಿಗ(Engineering Students)ರಲ್ಲಿ 24 ಮಂದಿ ಬಿಯಾಸ್ ನದಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಆ ಕಲಿಗರ ನಿರ‍್ಲಕ್ಶವೋ ಅತವಾ ನಿರ‍್ವಹಣೆಯವರ ನಿರ‍್ಲಕ್ಶವೋ ಎಂಬುದು ಇನ್ನಶ್ಟೇ ತಿಳಿದುಬರಬೇಕಿದೆ. ಆದರೆ ಕೆಲವೊಮ್ಮೆ ನಿರ‍್ಲಕ್ಶೆ ಎಂಬ ಬೂತ ಮನುಶ್ಯನ ವಾಸ್ತವಿಕ ಅವನತಿಗೆ ಕಾರಣವಾಗುವುದಂತೂ ವಿಪರ‍್ಯಾಸವೇ ಸರಿ. ಇದನ್ನು ನೋಡಿದಾಗ ನನ್ನ ಪರಿಚಯಸ್ತರೊಬ್ಬರು ನನಗೆ ಹೇಳಿದ್ದ ಕತೆಯೊಂದು ನೆನಪಾಗುತ್ತಿದೆ. ಅದನ್ನೀಗ ನಿಮ್ಮೊಂದಿಗೆ  ಹಂಚಿಕೊಳ್ಳಲು ಬಯಸುತ್ತೇನೆ.

ಬಟ್ಕಳ !, ಕರ‍್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ಊರು. ಕೆಲದಿನಗಳ ಹಿಂದೆ ಕೆಲಸದ ನಿಮಿತ್ತ ನಾನು ಬಟ್ಕಳಕ್ಕೆ ಹೋಗಿದ್ದೆ. ಪ್ರತಿಬಾರಿ ಬಟ್ಕಳಕ್ಕೆ ಹೋದಾಗಲೂ ಮಂದಿಬಂಡಿ(Bus) ಯಲ್ಲಿಯೇ ಪ್ರಯಾಣಿಸುವುದು ನನ್ನ ಅಬ್ಯಾಸ.ಆದರೆ ಆ ಬಾರಿ ಹಳಿಬಂಡಿ(Train)ಯಲ್ಲಿ ಹೋಗಲು ನಿರ‍್ದರಿಸಿ, ನನ್ನ ಕೆಲಸ ಮುಗಿಸಿದವನೇ ಬಟ್ಕಳ ಹಳಿಬಂಡಿ ನಿಲ್ದಾಣದಿಂದ ಮಂಗಳೂರು ಕಡೆಗೆ ಹಳಿಬಂಡಿಯನ್ನೇರಿದೆ. ನನ್ನ ಪಕ್ಕದಲ್ಲಿ ಸುಮಾರು ಮದ್ಯ ವಯಸ್ಸಿನ ವ್ಯಕ್ತಿಯೊಬ್ಬರು ಕುಳಿತ್ತಿದ್ದರು. ಅವರನ್ನು ನೋಡುವಾಗಲೇ ಅವರು ಜಗತ್ತಿನ ವಿದ್ಯಾಮಾನಗಳ ಬಗೆಗಿನ ಅರಿವಿನ ಹಿಡಿತ ಹೊಂದಿರುವಂತೆ ಕಂಡುಬರುತ್ತಿದ್ದರು. ಕೊನೆಗೂ ಅವರ ಪರಿಚಯವಾಯ್ತು. ಮೂಲತಹ ಮಂಗಳೂರಿಗರಾದ ಹರೀಶ್ ರವರು ಕೆಲಸದ ನಿಮಿತ್ತ ಗೋವಾಕ್ಕೆ ತೆರಳಿದ್ದರೆಂಬುದು ಪರಿಚಯದ ನಂತರ ನನಗೆ ತಿಳಿಯಿತು. ನಿಜ, ಅವರ ಪ್ರತಿ ಮಾತು ಅವರ ಅನುಬವಕ್ಕೆ ಹಿಡಿದ ಕನ್ನಡಿಯಂತ್ತಿದ್ದು.  ಏಕೆಂದರೆ ಕೇವಲ ಎರಡು ಗಂಟೆಗಳ ಪ್ರಯಾಣದಲ್ಲಿ ಆ ವ್ಯಕ್ತಿ, ನನ್ನೊಂದಿಗೆ ಬಹಳಶ್ಟು ಅನುಬವಗಳನ್ನು, ನೆನಪುಗಳನ್ನು, ವಿಶಯಗಳನ್ನು ಹಂಚಿಕೊಂಡಿದ್ದರು.  ಮಾತು ಮುಂದುವರಿಯುತ್ತಿತ್ತು. ಹಳಿಬಂಡಿ ಕುಂದಾಪುರ ಸಮೀಪದ ಪಂಚಗಂಗಾವಳಿ ಹೊಳೆಯ ಹಿನ್ನೀರಿ(Back water)ನ ಬಳಿ ಬರುತ್ತಿದ್ದಂತೆ ಅವರು ನನ್ನ ಬಳಿ ತನ್ನ ಬಾಲ್ಯದ ಗಟನೆಯೊಂದನ್ನು ಬಿಚ್ಚಿಟ್ಟರು.

ಸುಮಾರು ನಲವತ್ತು ವರುಶಗಳ ಹಿಂದಿನ ಕತೆಯಿದು. ಅವರ ನೆನಪಿನ ಮಟ್ಟಿಗೆ ಅದೊಂದು ಕರಾಳ ದಿನ. ಅಂದು ಅವರ ಮನೆಯ ಸುತ್ತ ಮುತ್ತ ಬಹಳಶ್ಟು ಸಂಕ್ಯೆಯಲ್ಲಿ ಮಂದಿ ಸೇರಿದ್ದರು. ಆತಂಕದ ಬಿಸಿ ಆರದೆ ಅದಾಗಲೆ ಸೂತಕದ ವಾತಾವರಣ ಆವರಿಸಿಯಾಗಿತ್ತು. ಏನಾಯಿತು ?, ಎಂದು ಕೇಳುವಶ್ಟರಲ್ಲಿ ಹಲವರ ಕಣ್ಣುಗಳಿಂದ ಕಂಬನಿ ಜಾರತೊಡಗಿತ್ತು. ಆಗತಾನೆ ದೂರದೂರಿನಿಂದ ಬಂದಿದ್ದ ಅವರಿಗೆ, ದಾರಿಮದ್ಯೆ ಕೇಳಿಬಂದಿದ್ದ ಸುದ್ದಿ ನಿಜ ಎಂದು ಅರಿವಾಗುತ್ತಿತ್ತು. ಅಂತೂ ಕೊಂಚ ಅಳುಕಿನಿಂದಲೇ ಇಣುಕಿ ನೋಡಿದಾಗ ಅವರು ಕೇಳಿದ ಸುದ್ದಿ ಕಾತರಿಯಾಗಿತ್ತು, ಅವರೂರಿನ ಹಿನ್ನೀರಿನಲ್ಲಿ ಈಜ ಹೋದ ತನ್ನ ಗೆಳೆಯರು, ಈಜುತ್ತಾ ಈಜುತ್ತಾ ಇಹಲೋಕವನೇ ದಾಟಿ ಹೋಗಿದ್ದರೆಂದು.

ಮೊದಲಿನಿಂದಲೂ ಅವರದು ಬಹುಗೆಳೆಯರ ಒಂದು ದೊಡ್ಡಗುಂಪು. ಕಲಿಕೆಮನೆ (School)ಗೆ ರಜೆ ಬಂತೆಂದರೆ ಸಾಕು, ಮನೆಯವರ ಬಯ್ಗುಳಗಳನ್ನೆಲ್ಲ ಬೆನ್ನಿಗೆ ಕಟ್ಟಿಕೊಂಡು, ಎಲ್ಲಾ ಗೆಳೆಯರ ಜೊತೆ ಕೂಡಿಕೊಂಡು ತುಳಿಬಂಡಿ (Cycle)ಯಲ್ಲಿ ಪಕ್ಕದ ಊರುಗಳಿಗೆ, ನದಿ, ಕಡಲ ತೀರಗಳಿಗೆ ಹೋಗಿ ಆಟವಾಡಿ ರವಿ ಮುಳುಗುವ ಹೊತ್ತಲ್ಲಿ ಮನೆ ಸೇರುವುದು ಅವರ ಗೆಳೆಯರ ಬಳಗದ ಚಾಳಿ. ಹೀಗಿರುವಾಗ ಪರೀಕ್ಶೆಗಳು ಮುಗಿದು ಬೇಸಿಗೆಯ ರಜೆ ಬಂತು. ದೂರದ ತನ್ನ ಚಿಕ್ಕಮ್ಮನ ಮನೆಯಲಿ ರಜೆ ಕಳೆಯಲು ಹರೀಶ್ ಅವರು ಆಗಲೇ ಅಣಿಯಾಗಿ ಹೊರಟುಹೋಗಿದ್ದರು. ಇತ್ತ ಅವರ ಗೆಳೆಯರೂ ಬೇರೆ ಬೇರೆ ಊರಿಗೆ ಹೋಗಿದ್ದರಿಂದ ಕೆಲದಿನಗಳ ಕಾಲ ತುಳಿಬಂಡಿಗೂ ವಿರಾಮ ಸಿಕ್ಕಿತ್ತು. ಹೀಗೇ ಒಂದು ತಿಂಗಳು ಕಳೆಯಿತು. ಪರ ಊರಿಗೆ ಹೋಗಿದ್ದ ಗೆಳೆಯರ ದಂಡು ತಿಂಗಳ ಬಳಿಕ ಮತ್ತೆ ಜೊತೆಸೇರಿತು. ಈ ಕುಶಿಗೆ ಹಿನ್ನೀರಿಗೆ ಈಜಲು ಹೋಗಲು ಎಲ್ಲಾ ನಿರ್‍ದರಿಸಿದರು. ಇತ್ತ ಹರೀಶ್ ಅವರಿಗೂ ಚಿಕ್ಕಮ್ಮನ ಮನೆ ಬೇಸರವಾಗಿ ಮತ್ತೆ ತಮ್ಮ ಮನೆಯತ್ತ ಮುಕ ಮಾಡಿದ್ದರು. ಅದೇ ದಿನ ಅವರೂರಿನ ಕೊನೆಯಲ್ಲಿರುವ ಹೊಳೆಯ ಹಿನ್ನೀರಿನಲ್ಲಿ ಈಜಾಡಲು ಅವರ ಅಯ್ವರು ಗೆಳೆಯರೂ ಸಜ್ಜಾಗಿದ್ದರು. ಅಯ್ವರೂ ಕೂಡಿಕೊಂಡು ಹರೀಶರನ್ನು ಹುಡುಕುತ್ತಾ ಅವರ ಮನೆವರೆಗೆ ಬಂದಾಗ ಹರೀಶ್ ಅವರು ಇನ್ನೂ ಊರಿಗೆ ಬಾರದ ಸುದ್ದಿ ಕೇಳಿ ಈ ಅಯ್ವರೇ ಹಿನ್ನೀರಿನ ಕಡೆಗೆ ಹೊರಟುಹೋಗಿದ್ದರು.

ನೇತ್ರಾವತಿ ಹೊಳೆ ಮಂಗಳೂರಿನ ಉಳ್ಳಾಲದ ಬಳಿ ಅರಬ್ಬೀ ಸಮುದ್ರ ಸೇರುವ ಮುನ್ನ ಕವಲಾಗಿ ಒಡೆದು ಹಿನ್ನೀರಾಗಿ ಬೇರ‍್ಪಡುತ್ತದೆ. ಇಲ್ಲಿನ ಹಿನ್ನೀರುಗಳು ಬೆಳಗ್ಗಿನ ಸಮಯದಲ್ಲಿ ಇಳಿಕೆ (ತುಳು ನುಡಿಯಲ್ಲಿ ‘ಜಪ್ಪೆಲ್’ ಎನ್ನುವರು) ಇದ್ದರೆ ಮದ್ಯಾಹ್ನದ ಬಳಿಕ ಏರಿಕೆ ( ತುಳು ನುಡಿಯಲ್ಲಿ ‘ಜಿಂಜೆಲ್’ ಎನ್ನುವರು) ಇರುತ್ತದೆ. ಮತ್ತೆ ಕೆಲವೊಮ್ಮೆ ಬೆಳಿಗ್ಗೆ ಏರಿಕೆ ಇದ್ದರೆ ಮದ್ಯಾಹ್ನದ ಬಳಿಕ ಇಳಿಕೆ ಇರುತ್ತದೆ. ಈ ವಿದ್ಯಾಮಾನ ಪ್ರತಿ ಹುಣ್ಣಿಮೆ ಮತ್ತು ಅಮವಾಸ್ಯೆಗೆ ಬದಲಾಗುತ್ತಿರುತ್ತದೆ (ಈ ವಿದ್ಯಾಮಾನಕ್ಕೆ ಸಂಬಂದಿಸಿದಂತೆ ವಯ್ಗ್ನಾನಿಕ ಕಾರಣದ ಮಾಹಿತಿ ಇಲ್ಲ). ಮದ್ಯಾಹ್ನ ಸುಮಾರು ಒಂದು ಗಂಟೆಯ ಸಮಯಕ್ಕೆ ಅಯ್ವರೂ ಕೂಡಿಕೊಂಡು ನೀರಿಗಿಳಿದಾಗ, ನೀರು ಇಳಿಕೆ ಇದ್ದರೂ ಬಳಿಕ ಏರಿಕೆಯಾಗಲು ಆಗಶ್ಟೇ ಅಣಿಯಿಡುತ್ತಿತ್ತು. ವಿಶೇಶವೆಂದರೆ ನೀರಿನ ಈ ಎಲ್ಲಾ ಬದಲಾವಣೆಗಳ ಬಗ್ಗೆ ಅಯ್ವರೂ ಚೆನ್ನಾಗೇ ಅರಿತಿದ್ದರು. ಆದರೂ ಆಡುತ್ತಾ ಆಡುತ್ತಾ ಹಿನ್ನೀರು ಕಡಲು ಸೇರುವ ಜಾಗ ತಲುಪಿದ್ದರು. ಇತ್ತ ಸಮಯ ಕಳೆದ ಹಾಗೆ ನೀರು ತನ್ನಶ್ಟಕ್ಕೆ ಏರುತ್ತಾ ಬಂದಿತ್ತು.ಈ ಅಯ್ವರೂ ಈ ಬದಲಾವಣೆಗಳನ್ನು ಗಮನಿಸಿದ್ದರೂ ಅವನ್ನೆಲ್ಲ ನಿರ‍್ಲಕ್ಶಿಸಿ ಈಜು ಬರುತ್ತದೆಂಬ ದರ್‍ಯದಿಂದ ನೀರಿನ ನಡುವಲ್ಲೇ ಕಾಲ ಕಳೆದರು. ಆದರೆ ಆಪಾಯದ ಅರಿವಿದ್ದ ಅಲ್ಲಿನ ಮೀನುಗಾರ ವಾಸಿಗಳು ಇವರಿಗೆ ನೀರಿನಿಂದ ಮೇಲೆ ಬರುವಂತೆ ಸಲಹೆ ನೀಡಿದ್ದರು. ಅಲ್ಲಿನ ರಕ್ಶಕ ದಳದವರೂ ಕೂಡ ಸೆಳೆತದ ಕಡೆ ಹೋಗದಂತೆ ಬುದ್ದಿ ಹೇಳಿದ್ದರು. ಆದರೆ ನಿರ‍್ಲಕ್ಶೆ ಎಂಬ ಬೂತ ಹೆಗಲೇರಿದಾಗ ಈ ಎಲ್ಲಾ ಕೂಗುಗಳು ಹೇಗೆ ಕೇಳುತ್ತವೆ ಹೇಳಿ ?. ಸಮಯ ಸುಮಾರು ನಾಲ್ಕಾಗುತ್ತಿದ್ದಂತೆ ಹಿನ್ನೀರು ತುಂಬಿ ಸಮುದ್ರದತ್ತ ನೀರಿನ ಸೆಳೆತ ಶುರುವಾಯಿತು. ಅಪಾಯದ ಸುಳಿವರಿತ ಈ ಅಯ್ವರೂ ಹಿಂದೆ ಬರಲು ತೀರ್‍ಮಾನಿಸಿ ದಡದತ್ತ ಮುಕ ಮಾಡಿದ್ದರು. ಆದರೆ ಅದಾಗಲೇ ಸಮಯ ಮಿಂಚಿ ಹೋಗಿತ್ತು. ನೀರಿನ ಸೆಳೆತಕ್ಕೆ ಈಜಿನರಿಮೆ ಕಯ್ ತಪ್ಪಿತ್ತು. ಹೋದ ಅಯ್ವರಲ್ಲಿ ನಾಲ್ವರು ಕಡಲು ಸೇರಿದರೆ, ಒಬ್ಬ ಕೊನೇ ಗಳಿಗೆಯಲ್ಲಿ ಸಾವನ್ನು ಗೆದ್ದು ದಡ ಸೇರಿದ್ದ.

(ಚಿತ್ರ: www.seeandsay.in)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *