ಏನಿದು “ಸಿಸ್ಟಿಕ್ ಪಯ್ಬ್ರೊಸಿಸ್” (ಸಿ.ಪಯ್.) ?

ಯಶವನ್ತ ಬಾಣಸವಾಡಿ.

cipy

ಸಿ.ಪಯ್. ಲೋಳೆ ಹಾಗು ಬೆವರನ್ನು ಸುರಿಸುವ ಸುರಿಗೆಗಳನ್ನು ಕಾಡುವಂತಹ ಬಳಿಗೆ ಬೇನೆ. ಇದು ಮುಕ್ಯವಾಗಿ ಮನುಶ್ಯನ ಉಸಿರು-ಚೀಲವನ್ನು ಬಾದಿಸುತ್ತದೆ ಜೊತೆಗೆ ಅರಗುಸುರಿಕೆ (pancreas), ಈಲಿ (liver), ಮತ್ತು ಕರುಳುಗಳನ್ನು ಕೂಡ ಹಾಳುಗೆಡಹುತ್ತದೆ. ಈ ಅಂಗಗಳ ಮೇಲ್ಪರೆಗಳೇ (epithelium) ಅದರ ಗುರಿ.

ಸಿ.ಪಯ್. ಪೀಳಿ (gene)

ಒಂದೊಂದು ಪೀಳಿಗೂ ಎರಡು ಅಚ್ಚುಗಳು ಇರುತ್ತವೆ. ತಲಾ ಒಂದು ಅಚ್ಚು ತಂದೆ ಮತ್ತು ತಾಯಿಯಿಂದ ಬಂದಿರುತ್ತವೆ. ಸಿ.ಪಯ್. ಬೇನೆಯು ಹಿಂಜರಿಕೆಯ ಪೀಳಿಮಯ್ಯಿ ಬೇನೆ (autosomal recessive genetic disorder). ಆದ್ದರಿಂದ ಒಬ್ಬ ವ್ಯಕ್ತಿಯಲ್ಲಿ ಸಿ.ಪಯ್. ಉಂಟುಮಾಡುವ ಪೀಳಿಯ ಎರಡು ಅಚ್ಚುಗಳಲ್ಲಿ ಎರಡೂ ಮಾರುಟ್ಟಿಗ (mutant) ಅಚ್ಚುಗಳು ಇದ್ದಾಗ ಮಾತ್ರ ಈ ಬೇನೆಯ ಕುರುಹುಗಳು ಕಾಣಿಸಿಕೊಳ್ಳುತ್ತವೆ. ಸಿ.ಪಯ್. ಅನ್ನು ಉಂಟುಮಾಡುವಲ್ಲಿ ಪೀಳಿಯ ಜೊತೆಗೆ, ವ್ಯಕ್ತಿಯ ಪರಿಸರ (environment) ಕೂಡ ಬಹಳ ಮಟ್ಟಿಗೆ ಮುಕ್ಯ ಅಂಶವಾಗಿದೆ. ಆದ್ದರಿಂದ ಒ೦ದೇ ತರನಾದ ಎರಡು ಪೀಳಿಯ ಮಾರುಟ್ಟಿಗ ಅಚ್ಚುಗಳನ್ನು ಹೊಂದಿರುವ ಇಬ್ಬರು ವ್ಯಕ್ತಿಗಳಲ್ಲಿ ಒಂದೆ ಮಟ್ಟದ ಹಾಗು ಒಂದೇ ತರನಾದ ಬೇನೆಯ ಕುರುಹುಗಳು ಕಾಣದಿರಬಹುದು.

ಬಾರತದಲ್ಲಿ ಸಿ.ಪಯ್. ಸ್ತಿತಿ-ಗತಿ

ಬಹಳಶ್ಟು ಮಾಂಜುವ ಕಸುಬುದಾರರು, ಸಿ.ಪಯ್. ಬೇನೆಯು ಬಿಳಿಯ ಬುಡಕಟ್ಟಿನ ಮ೦ದಿಗೆ ಸ೦ಬ೦ದಿಸಿದ ಬೇನೆ ಹಾಗು ಬಾರತದವರಲ್ಲಿ ಇದು ತೀರ ಕಡಿಮೆ ಎ೦ದು ಬಾವಿಸುತಿದ್ದುದು೦ಟು. ಇತ್ತೀಚಿನ ವರದಿಗಳ ಪ್ರಕಾರ, ಬಾರತದಲ್ಲಿ ಸಿ.ಪಯ್ ನ ಕುತ್ತತಿಳಿವುಗಳನ್ನು (diagnosis) ತಪ್ಪಾಗಿ ಗುರುತಿಸಲಾಗುತ್ತಿತು. ಬಾರತದಲ್ಲಿ ಸಿ.ಪಯ್. ಗೆ ಸ೦ಬ೦ದಿಸಿದ ಅರಕೆ ಹಾಗು ಕಲಿಕೆ ಇಲ್ಲದಿರುವುದೆ ಈ ತಪ್ಪು ತಿಳುವಳಿಕೆಗೆ ಕಾರಣ. ಇಂಗ್ಲ್ಯಾಂಡ್ ಹಾಗು ಅಮೆರಿಕದಲ್ಲಿ ನೆಲೆಸಿರುವ ಬಾರತದ ವಲಸಿಗರಲ್ಲಿ ಈ ಬೇನೆಯು, ಪ್ರತಿ 10,000-40,000 ಮ೦ದಿಯಲ್ಲಿ ಒಬ್ಬರ೦ತೆ ಕಾಣಸಿಗುತ್ತದೆ. ಬಾರತದಲ್ಲಿ ಸಿ.ಪಯ್. ವಿಶಯವಾಗಿ ಹೆಚ್ಚಿನ ತಿಳುವಳಿಕೆ ಇಲ್ಲದಿರುವುದರಿ೦ದ ವಲಸಿಗ ಬಾರತಿಯರನ್ನು ಕಾಡುವ ಸಿ.ಪಯ್.ನ ಅ೦ಕಿ-ಅ೦ಶಗಳನ್ನು ಆದಾರವಾಗಿಟ್ಟು ಕೊ೦ಡರೆ, ಪ್ರಪ೦ಚದಲ್ಲೆ ಬಾರತವು ಅತಿ ಹೆಚ್ಚು ಸಿ.ಪಯ್. ಬೇನೆಬಿದ್ದವರನ್ನು ಹೊ೦ದಿರುವ ದೇಶವೆಂದಾಗುತ್ತದೆ.

ಕಾಡುವ ಬಗೆ

ತೆಳುವಾದ ಲೋಳೆಯು ಮೇಲ್ಪದರಗಳುಳ್ಳ ಕೆಲವು ಅ೦ಗಗಳಿ೦ದ ಮಾಡಲ್ಪಡುತ್ತದೆ. ಎತ್ತುಗೆ: ಮೂಗು & ಉಸಿರುಚೀಲ. ತೆಳುವಾದ ಲೋಳೆಯು ಅಂಗಗಳ ಪಸೆಯನ್ನು (lining) ತೇವವಾಗಿಡುತ್ತದೆ ಹಾಗು ಸೋ೦ಕನ್ನು ತಡೆಗಟ್ಟುತದೆ. ಸಿ.ಪಯ್ ನಿ೦ದ ನರಳುತ್ತಿರುವ ವ್ಯಕ್ತಿಗಳಲ್ಲಿ, ಲೋಳೆಯು ಮ೦ದ ಹಾಗು ಅ೦ಟ೦ಟಾಗಿರುತ್ತದೆ. ಮ೦ದವಾದ ಲೋಳೆಯು ಉಸಿರುಚೀಲದ ಗಾಳಿಗೊಳವೆಯಲ್ಲಿ ತು೦ಬಿಕೊ೦ಡು ಉಸಿರಾಟಕ್ಕೆ ತೊ೦ದರೆ ಮಾಡುತ್ತದೆ. ಜೊತೆಗೆ, ಗಾಳಿಗೊಳವೆಯಲ್ಲಿ ಕಟ್ಟಿಕೊ೦ಡ ಲೋಳೆಯಲ್ಲಿ ದ೦ಡಾಣುಗಳು (Bacteria) ಅಡೆ-ತಡೆ ಇಲ್ಲದೆ ಬೆಳೆಯುತ್ತವೆ. ಎಗ್ಗು-ಸಿಗ್ಗಿಲ್ಲದೆ ಬೆಳೆಯುವ ದ೦ಡಾಣುಗಳು ಹಾಗು ಅವುಗಳಿ೦ದ ಹೊರಸೂಸಲ್ಪಡುವ ನಂಜು ಉಸಿರುಚೀಲ ಹಾಗು ಸುತ್ತಮುತ್ತಲಿನ ಅಂಗಗಳಿಗೆ ಕೇಡು ಮಾಡುತ್ತವೆ. ಮ೦ದವಾದ ಲೋಳೆಯು ಅರಗುಸುರಿಗೆಯ ಸುರಿಕೆಯನ್ನು (hormone/enzyme) ಒಯ್ಯುಲು ಇರುವ ಕೊಳವೆಯಲ್ಲಿ ಕಟ್ಟಿಕೊಳ್ಳುತ್ತದೆ.

ಇದರಿ೦ದ, ಅರಗಿಸಿಕೊಳ್ಳಲು ಬೇಕಾದ ಸುರಿಕೆಯು ಅರಗುಸುರಿಗೆಯಿ೦ದ ಸಣ್ಣಕರುಳನ್ನು ತಲುಪುವುದಿಲ್ಲ. ಸುರಿಕೆ ಇಲ್ಲದೆಹೋದಲ್ಲಿ ನಮ್ಮ ಊಟದಲ್ಲಿರುವ ಕೊಬ್ಬು ಹಾಗು ಪ್ರೊಟೀನ್ ಅ೦ಶಗಳನ್ನು ಅರಗಿಸಿಕೊಳ್ಳಲಾಗುವುದಿಲ್ಲ. ಇದು ಬಾಳುಳುಪು (vitamins), ಕೊಬ್ಬು, ಪ್ರೊಟೀನ್ ಮು೦ತಾದ ಆರಯ್ವಗಳ (nutrients) ಕೊರತೆಯನ್ನು೦ಟು ಮಾಡುವುದಲ್ಲದೆ, ಹೊಟ್ಟೆ ನೊವು, ಪೇಲ್ಗಟ್ಟುವಿಕೆ ಮು೦ತಾದ ತೊ೦ದರೆಗಳಿಗೆ ಎಡೆಮಾಡಿಕೊಡುತ್ತದೆ.

ಬೇನೆಬಿದ್ದವರ ಬೆವರಿನಲ್ಲಿ ಉಪ್ಪಿನ ಅಂಶ ಹೆಚ್ಚಾಗುತ್ತದೆ. ಇದರಿಂದ ನೆತ್ತರಿನ ಕನಿಜ ಮಟ್ಟದಲ್ಲಿ ಏರು-ಪೇರಾಗಿ, ನೀರಿಳಿತ (dehydration), ಗು೦ಡಿಗೆ ಬಡಿತದ (heart beat) ಹೆಚ್ಚಳ , ಜೊಮ್ಮುಮಯ್ (tiredness), ನಲುಗುವಿಕೆ (weakness) ಮು೦ತಾದ ಒಡಲೊಳಿತಿನ ತೊಡಕುಗಳಾಗುತ್ತವೆ. ಸಿ.ಪಯ್ ಸಿಹಿಕುತ್ತು (diabetes) ಹಾಗು ಜೊಳ್ಳೆಲುಬುಗಳಿಗೆ (osteoporosis) ಎಡಿಮಾಡಿಕೊಡುತ್ತದೆ. ಬಹಳಶ್ಟು ಮ೦ದಿಯಲ್ಲಿ ಈ ಸಿ.ಪಯ್ ಗೊಡ್ಡುತನವನ್ನೂ ಉ೦ಟುಮಾಡುತ್ತದೆ.

ಕುತ್ತದೊರೆತ (diagnosis)

  1. ಮಗು ಹುಟ್ಟಿದ ಕೂಡಲೆ ತಳಿವಿಜ್ನಾನಕ್ಕೆ ಒಳಪಡಿಸಿ, ಸಿ.ಪಯ್.ಅನ್ನು ಉ೦ಟುಮಾಡಬಲ್ಲ ತಪ್ಪು ಪೀಳಿಯ ಬಗ್ಗೆ ಪರೀಕ್ಶಿಸುವುದು. ಜೊತೆಗೆ ನೆತ್ತರನ್ನು ಪರೀಕ್ಶಿಸುವ ಮೂಲಕ ಅರಗುಸುರಿಗೆಯ ಸ್ತಿತಿ-ಗತಿಗಳನ್ನೂ ತಿಳಿಯಬಹುದು.
  2. ಬೆವರು ಗೆಯ್ಮೆ ಪರೀಕ್ಶೆ: ಮೊದಲನೆಯ ಕುತ್ತದೊರೆತವು ಬೇನೆಯನ್ನು ಸಿ.ಪಯ್. ಎ೦ದು ಸೂಚಿಸಿದಲ್ಲಿ, ಬೆವರು ಪರೀಕ್ಶೆಯನ್ನು ಮಾಡಲಾಗುತ್ತದೆ. ಈ ಪರೀಕ್ಶೆಯಲ್ಲಿ, ಬೆವರು-ಉ೦ಟುಮಾಡುವ ರಾಸಯನಿಕದಿ೦ದ ಬೆವರು-ಸುರಿಗೆಗಳನ್ನು ಕೆಣಕಲಾಗುತ್ತದೆ. ಇದರಿ೦ದ ಬರುವ ಬೆವರಿನ ಕನಿಜಾ೦ಶವನ್ನು ಅಳೆಯಲಾಗುವುದು. ಕನಿಜಾ೦ಶವು ಹೆಚ್ಚಿದ್ದಲ್ಲಿ, ಸಿ.ಪಯ್. ಎ೦ದು ಕ೦ಡು ಹಿಡಿಯಬಹುದು.
  3. ಅವಶ್ಯಕತೆ ಬಿದ್ದಲ್ಲಿ ಎದೆಯ ಸೀಳ್ಕದಿರು ತಿಟ್ಟ (chest x-ray), ಉಸಿರುಚೀಲ ಗೆಯ್ಮೆ ಪರೀಕ್ಶೆಗಳನ್ನೂ ಮಾಡಬಹುದು.

ಮಾ೦ಜುಗೆ (treatment)

ಸಿ.ಪಯ್.ಅನ್ನು ವಾಸಿ ಮಾಡುವ ಯಾವುದೇ ಮದ್ದುಗಳಿಲ್ಲ. ಆದರೆ ಈ ಬೇನೆಯನ್ನು ಗುಣಪಡಿಸಲು ಮದ್ದರಿಮೆಯ ಕ್ಶೇತ್ರದಲ್ಲಿ ಬಹಳಶ್ಟು ಅರಕೆ ನಡೆಯುತ್ತಿವೆ. ಸದ್ಯದ ಮಟ್ಟಿಗೆ ಈ ಕೆಳಕ೦ಡಂತೆ ಕುತ್ತಕುರುಹುಗಳಿಗೆ ತಕ್ಕಂತೆ ಮಾ೦ಜುಳವನ್ನು ಅಳವಡಿಸಿಕೊಳ್ಳಲಾಗಿದೆ.

  1. ಉಸಿರುಚೀಲದ ಸೋ೦ಕನ್ನು ತಡೆಗಟ್ಟುವುದು.
  2. ಉಸಿರು ಚೀಲ ಹಾಗು ಸಣ್ಣಕರುಳಿನಲ್ಲಿ ಸಿಕ್ಕಿಕೊಂಡ ಮಂದವಾದ ಲೋಳೆಯನ್ನು ಸಡಿಲಗೊಳಿಸುವುದು ಹಾಗು, ಹೊರ ತೆಗೆಯುವುದು.
  3. ಬೇನೆ ಬಿದ್ದವರಿಗೆ ಉತ್ತಮ ಆರಯ್ವಗಳ ಜೊತೆಗೆ ಅರಗಿಸಿಕೊಳ್ಳಲು ಬೇಕಾದ ಸುರಿಕೆಗಳನ್ನು ಕೊಡುವುದು.
  4. ಮಯ್ ನೀರಿಳಿತವನ್ನು ತಡೆಗಟ್ಟುವುದು.

ಕಡೆನುಡಿ

ಹುಟ್ಟಿನಿಂದ ಮಕ್ಕಳನ್ನು ಕಾಡುವ ಈ ಬೇನೆಯು, ಬಹಳ ಅಳವುಳ್ಳ (efficient) ಮಾಂಜುಗವನ್ನು ಕೊಡಿಸಿದರೂ, ಆ ಮಗು ಹೆಚ್ಚೆಂದರೆ 30 ಏಡುಗಳು (years) ಉಳಿಯಬಲ್ಲುದು. “ಇ೦ದಿನ ಮಕ್ಕಳೆ ನಾಳಿನ ನಾಡಿಗರು” ಎ೦ಬ ನಾಳ್ನುಡಿಯನ್ನು ಒಪ್ಪುವುದಾದರೆ, ಬಾರತದಲ್ಲಿ ಸಿ.ಪಯ್. ಬಗ್ಗೆ ಗಮನ ಹರಿಸದಿರುವುದು ಸೋಜಿಗದ ವಿಶಯ. ಅತಿ ಹೆಚ್ಚಿನ ಸಂಕೆಯ ಸಿ.ಪಯ್. ಬೇನೆ ಬಿದ್ದವರನ್ನು ಹೊಂದಿರುವ ನಾಡು ನಮ್ಮದಾಗಿರುವುದರಿಂದ, ನಾಡಿನ ನಾಳೆಗಳನ್ನು ಕಟ್ಟಲು ಸಿ.ಪಯ್.ಗೆ ಸಂಬಂದಿಸಿದ ವಿಶಯವಾಗಿ ಹೆಚ್ಚೆಚ್ಚು ಕಲಿಕೆ, ತಿಳುವಳಿಕೆ ಹಾಗು ಮದ್ದರಿಮೆ ಇಂದಿನ ಬೇಡಿಕೆಯಾಗಿದೆ.

ಮಾಹಿತಿ ಸೆಲೆಗಳು:

  1. http://www.nhlbi.nih.gov/health/health-topics/topics/cf/treatment.html
  2. http://www.cfww.org/pub/english/cfwnl/7/617/Cystic_Fibrosis_in_India

ನಿಮಗೆ ಹಿಡಿಸಬಹುದಾದ ಬರಹಗಳು

10 Responses

  1. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನನ್ನ ತಿಳಿವಳಿಕೆ ಹೆಚ್ಚಾಯಿತು.

  2. Kiran Batni says:

    ಯಶವನ್ತ ಅವರೇ: ಮೂರನೇ ಪ್ಯಾರಾದಲ್ಲಿ ’ವಲಸಿಗ ಬಾರತಿಯರನ್ನು ಕಾಡುವ ಸಿ.ಪಯ್.ನ ಅ೦ಕಿ-ಅ೦ಶಗಳನ್ನು ಆದಾರವಾಗಿಟ್ಟು ಕೊ೦ಡರೆ, ಪ್ರಪ೦ಚದಲ್ಲೆ ಬಾರತವು ಅತಿ ಹೆಚ್ಚು ಸಿ.ಪಯ್. ಬೇನೆಬಿದ್ದವರನ್ನು ಹೊ೦ದಿರುವ ದೇಶವೆಂದಾಗುತ್ತದೆ’ ಎಂದು ಹೇಳಿ ಕೊನೆಯ ಪ್ಯಾರಾದಲ್ಲಿ ’ಅತಿ ಹೆಚ್ಚಿನ ಸಂಕೆಯ ಸಿ.ಪಯ್. ಬೇನೆ ಬಿದ್ದವರನ್ನು ಹೊಂದಿರುವ ನಾಡು ನಮ್ಮದಾಗಿರುವುದರಿಂದ’ ಎಂದು ಹೇಳಿದ್ದೀರಿ. ಮದ್ದರಿಮೆಯ ಮಂದಿ ಹೆದರಿಸುವುದರಲ್ಲಿ ನುರಿತರು ಎಂದು ನಾನು ಅಂದುಕೊಂಡಿದ್ದು ತಪ್ಪಲ್ಲ ಎಂದಾಯಿತು 🙂

  3. Maaysa says:

    ಇಂಡಿಯಾ ದೇಶದಲ್ಲಿ ಸರಿ-ಸುಮಾರು ಎಲ್ಲ ಬೇನೆಗಳ ಬಳಲಿಗರು ಜಗತ್ತಿನಲ್ಲಿ ಎಲ್ಲದಕ್ಕಿಂತ ಹೆಚ್ಚು. ಇದಕ್ಕೆ ಯಾಕೆ ಅಂದರೆ,

    ೧. ಇಂಡಿಯಾ ದೇಶದ ಮಂದಿ-ಎಣಿಕೆಯು ಜಗತ್ತಿನಲ್ಲೇ ಎರಡನೇದು
    ೨. ಮಂದಿ-ಎಣಿಕೆಯಲ್ಲಿ ಮೊದಲು-ಇರುವ ಚೀಣೆಯು ಎಂದೂ ಈ ‘ಅರಿಕೆ’ಯನ್ನು ಸರಿಯಾಗಿ ಜಗತ್ತಿಗೆ ಕೊಡುವುದಿಲ್ಲ.

    ಆದರೆ, ಎಸ್ಟೋ ದರಿದ್ರ ದೇಶಗಳಿಗಿಂತ ಇಂಡಿಯಾ-ದಲ್ಲಿ ‘ಮದ್ದು-ಆರಯ್ಕೆ’ ಚೆನ್ನಾಗೇ ಇದೆ.

  4. ಕಿರಣ್ ಅವ್ರೆ,
    ದಿಟ ಹೇಳಿದ್ದಿನಿ 😉
    ೧)ಇದು ಬಳಿಗೆ ಬೇನೆಯಾದ್ದರಿ೦ದ, ಬಾರತದಲ್ಲಿರೊ ಬಾರತಿಯರಾಗ್ಲಿ ಅತವ ಅಮೆರಿಕ/ಯುರೋಪ್ನಲ್ಲಿ ನೆಲೆಸಿರೊ ಬಾರತಿಯರಾಗ್ಲಿ, ಪರಿಸರ ಈ ಬೇನೆಯ ಕುರುಹುಗಳನ್ನು ಮಾರ್-ಪಡಿಸಬಹುದೆನೊ; ಆದರೆ ಬೇನೆಯನ್ನಲ್ಲ.
    ೨) ಸಿ.ಪಯ್. ಬಗ್ಗೆ ಸದ್ಯಕ್ಕೆ ಹೆಚ್ಚಿನ ಅರಿವು ಇರುವುದು ವಲಸೆ ಹೋಗಿರೊ ಬಾರತಿಯಾರಲ್ಲಿ. ಇರುವ ತಿಳಿಕೆಯ ಆದಾರದ ಮೇಲೆ “ಅತಿ ಹೆಚ್ಚಿನ ಸಂಕೆಯ ಸಿ.ಪಯ್. ಬೇನೆ ಬಿದ್ದವರನ್ನು ಹೊಂದಿರುವ ನಾಡು ನಮ್ಮದು” ಎ೦ದು ಹೇಳಿದ್ದಿನಿ. ಅರೆ-ಅರಿವು (partial information) ಇದ್ದೆಡೆ, Logical reasoning ಮೂಲಕ ಹೊರಲೆಕ್ಕಮಾಡದೆ (extrapolation) ಗತಿ ಇಲ್ಲ.

    • Kiran Batni says:

      ಯಶವನ್ತ ಅವರೆ: ’ಹೊರಲೆಕ್ಕ ಮಾಡಿದರೆ ಬಾರತದಲ್ಲಿ ಅತಿಹೆಚ್ಚಿದೆ’ ಎಂದಿದ್ದರ ಬಗ್ಗೆ ತಕರಾರಿಲ್ಲ. ಕಡೆಯ ಪ್ಯಾರಾದಲ್ಲಿ ಹೊರಲೆಕ್ಕ ಹೊರಗುಳಿಯಿತಲ್ಲ, ಅದರ ಬಗ್ಗೆ ತಕರಾರು. 🙂

  5. ೧) ಕನ್ನಡದಲ್ಲಿ ಅರಕೆಯ ಬರಹವನ್ನು ಬರೆಯಲು ಹುರಿದು೦ಬಿಸಿ, ಅವಶ್ಯಕತೆ ಇದ್ದೆಡೆ ತಿದ್ದಿದ ಪ್ರಶಾಂತ ಸೊರಟೂರ, ಸಿದ್ದರಾಜು ಬೊರೇಗವ್ದ, & ಪ್ರೇಮ.
    ೨) ಬರೆಯಲು ಬೇಕಾದ ಪದ ಕಟ್ಟಲು ನೆರವಾದ ಪೆಸ್-ಬುಕ್ “ಪದ ಪದ ಕನ್ನಡ ಪದನೆ” ಗು೦ಪು.
    ೩) ನನ್ನ ಬರಹವನ್ನು ಹೊನಲು ಮಿನ್ಮನೆಯಲ್ಲಿ ಹೊಮ್ಮಿಸಲು ಒಪ್ಪಿದ ಹೊನಲು ತ೦ಡಕ್ಕೆ.
    ೪) ಬರಹವನ್ನು ಒದಿದ & ಹ೦ಚಿದ ಗೆಳೆಯರಿಗೆ.

    “ಸಿಸ್ಟಿಕ್ ಪಯ್ಬ್ರೊಸಿಸ್” ಮದ್ದರಿಮೆಯನ್ನು ಬರೆಯಲು ಸಹಕರಿಸಿದ ಇವರೆಲ್ಲರಿಗೂ ನನ್ನಿ.

  6. vivekshankar153 says:

    enzyme ಗೆ ದೊಳೆ ಅಂತ ಡಾ || ಡಿ.ಎಸ್ ಶಿವಪ್ಪ ಅವರು ಕೊಟ್ಟಿದ್ದಾರೆ.

  7. ಮಾಯ್ಸ ಅವ್ರೆ,
    “ಇಂಡಿಯಾ ದೇಶದಲ್ಲಿ ಸರಿ-ಸುಮಾರು ಎಲ್ಲ ಬೇನೆಗಳ ಬಳಲಿಗರು ಜಗತ್ತಿನಲ್ಲಿ ಎಲ್ಲದಕ್ಕಿಂತ ಹೆಚ್ಚು. ಇದಕ್ಕೆ ಯಾಕೆ ಅಂದರೆ, ೧. ಇಂಡಿಯಾ ದೇಶದ ಮಂದಿ-ಎಣಿಕೆಯು ಜಗತ್ತಿನಲ್ಲೇ ಎರಡನೇದು.”
    ಪ್ರಪಂಚದಲ್ಲೆ ನಮ್ಮ ದೇಶ ಮಂದಿ-ಎಣಿಕೆಯಲ್ಲಿ ಎತ್ತಿದ ಕೈ. ಅದಕ್ಕೆ ಹೆಚ್ಚು-ಕಡಿಮೆ ಎಲ್ಲ ಬೇನೆಗಳಿಂದ ಬಳಲುತ್ತಿರುವ ಮಂದಿಗಳ ಸಂಕೆಯೂ ಹೆಚ್ಚು ಅನ್ನೋದನ್ನ ನಾನು ಕೂಡ ಒಪ್ತೀನಿ. ಬಳಲುತ್ತಿರುವವರ ಸಂಕೆಗಳ ಅನುಸಾರ, ನಮ್ಮ ದೇಶವದಲ್ಲಿ ಮಂಜುವ ಹಾಗು ಮದ್ದರಿಮೆ ವಿಬಾಗಳಲ್ಲಿ ಹೆಚ್ಚುಗಾರಿಕೆ ಸಂಪಾದಿಸುವುದು ನಮ್ಮ ದೇಶದ ಬೆಳವಣಿಗೆಗೆ ಒಳಿತಲ್ಲವೇ ??

    “೨. ಮಂದಿ-ಎಣಿಕೆಯಲ್ಲಿ ಮೊದಲು-ಇರುವ ಚೀಣೆಯು ಎಂದೂ ಈ ‘ಅರಿಕೆ’ಯನ್ನು ಸರಿಯಾಗಿ ಜಗತ್ತಿಗೆ ಕೊಡುವುದಿಲ್ಲ.”
    ಇದು ರಾಜಕಾರಣಕ್ಕೆ ಸಂಬಂದಿಸಿದ ವಿಷಯ . ನನ್ನ ಬರಹ ನಮ್ಮ ದೇಶದ ಹಸುಳೆಗಳನ್ನು ಕಾಡುವ ಬೇನೆಯೊಂದರ ಬಗ್ಗೆ ಅಶ್ಟೆ.

    “ಆದರೆ, ಎಸ್ಟೋ ದರಿದ್ರ ದೇಶಗಳಿಗಿಂತ ಇಂಡಿಯಾ-ದಲ್ಲಿ ‘ಮದ್ದು-ಆರಯ್ಕೆ’ ಚೆನ್ನಾಗೇ ಇದೆ.”
    ನೀವ್ ಹೇಳೋದು ಒಂದ್ ಮಟ್ಟಕ್ಕೆ ಸರಿ ಇದೆ. ಎತ್ತುಗೆಗೆ ಪಾಕಿಸ್ತಾನ, ಬಾಂಗ್ಲಾದೇಶ, ನೈಜೀರಿಯಾ, ಉಗಾಂಡ ದೇಶಗಳಿಗೆ ಹೋಲಿಸಿದರೆ, ನಮ್ಮ ಮದ್ದು-ಆರಯ್ಕೆ, ದರಿದ್ರ ದೇಶಗಳ ಸಮನಾಗಿ ಅತವ ಸ್ವಲ್ಪ ಮಟ್ಟಿಗೆ ಚೆನ್ನಾಗಿದೆ.
    ನಾನು ಮಾತಾಡ್ತಾ ಇರೋದು ಹುಟ್ಟಿನಿಂದಲೆ ಕಾಡುವ ಬೇನೆಯಾದ್ದರಿಂದ, ಅದನ್ನು ಹಸುಳೆಯ ಸಾವಿನ ಏಣಿಕೆಯನ್ನು ಆದಾರವಾಗಿಟ್ಟು ಕೊಳ್ಳಬೇಕಾಗುತ್ತದೆ; ಹಸುಳೆಗಳ ಸಾವಿನ ಎಣಿಕೆ ಗಯಾನ, ಜಿಂಬಾಬ್ವೆ ಯಂತಹ ದರಿದ್ರ ದೇಶಗಳಿಗೆ ಹೋಲಿಸಿದಾಗ, ಆರ್ತಿಕವಾಗಿ ಚುರುಕಿನಿಂದ ಮುನ್ನುಗ್ಗುತ್ತಿರುವ ದೇಶವೆಂಬ ಹಣೆ-ಪಟ್ಟಿಯನ್ನು ಹೊಂದಿರುವ ಬಾರತಕ್ಕಿಂತ ಚೆನ್ನಾಗಿದೆ. ಹೆಚ್ಚಿರುವ ಹಸುಳೆಗಳ ಸಾವಿನ ಎಣಿಕೆಗೆ “ಸಿಸ್ಟಿಕ್ ಪಯ್ಬ್ರೊಸಿಸ್” ಕೂಡ ಮುಕ್ಯ ಕಾರಣವಾಗಿರಬಹುದು. ಸಾವಿನ ಎಣಿಕೆಯನ್ನು ತಗ್ಗಿಸಲು, ಮಗು ಹುಟ್ಟಿದ ಕೂಡಲೆ ತಳಿವಿಜ್ನಾನಕ್ಕೆ ಒಳಪಡಿಸುವುದರ ಜೊತೆಗೆ, ಸರಿಪಡಿಸಲು ಅವಶ್ಯಕತೆ ಇರುವ ಅರಿಮೆ & ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಅನ್ನೋದೇ ನನ್ನ ಬರಹದ ತಿರುಳು .

  8. ಕಿರಣ್,
    “ಯಶವನ್ತ ಅವರೆ: ’ಹೊರಲೆಕ್ಕ ಮಾಡಿದರೆ ಬಾರತದಲ್ಲಿ ಅತಿಹೆಚ್ಚಿದೆ’ ಎಂದಿದ್ದರ ಬಗ್ಗೆ ತಕರಾರಿಲ್ಲ. ಕಡೆಯ ಪ್ಯಾರಾದಲ್ಲಿ ಹೊರಲೆಕ್ಕ ಹೊರಗುಳಿಯಿತಲ್ಲ, ಅದರ ಬಗ್ಗೆ ತಕರಾರು.” ಈ ಬರಹವನ್ನು ಬರೆಯುವಾಗ “extrapolation” ಪದಕ್ಕೆ ಸಮನಾದ ಕನ್ನಡ ಪದ ಗೊತಿರ್ಲಿಲ್ಲ. ದಯವಿಟ್ಟು ‘ಹೊರಲೆಕ್ಕ’ ಪದವನ್ನು ಸೇರಿಸಿಕೊಳ್ಳಿ. 🙂

  9. vivekshankar153,
    ನಿಮ್ಮ ಸಲಹೆಗೆ ನನ್ನಿ. ಮುಂದಿನ ಬರಹಗಳಲ್ಲಿ ಈ ಪದವನ್ನು ಅಳವಡಿಸಿಕೊಳ್ಳುತ್ತೇನೆ.

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *