ಬದಲಾಗುತ್ತಿರುವ ಜಗತ್ತಿನಿಂದ ಟೆಕಿಗಳಿಗೆ ತಲೆನೋವು

ದಿನಕ್ಕೊಂದು ಹೊಸ ಚಳಕು (ಟೆಕ್ನಾಲಜಿ) ಮಾರುಕಟ್ಟೆಗೆ ಬರುತ್ತಿರುವ ಈ ಕಾಲದಲ್ಲಿ, ಹೊಸ ಚಳಕುಗಳನ್ನು ಕಲಿತು ಕೆಲಸ ಮಾಡಬೇಕಾದ ಟೆಕಿಗಳ ಪಾಡೇನು? ಅಂದರೆ ಒಂದು ಹೊಸ ಚಳಕನ್ನು ಸುಮಾರಾಗಿ ಕಲಿಯಲು ಹಲವು ತಿಂಗಳುಗಳೇ ಬೇಕಾದೀತು. ಇನ್ನು ಅದರಲ್ಲಿ ನಯ್ಪುಣ್ಯತೆಯನ್ನು ಪಡೆಯಲು ಹಲವು ವರ್‍ಶಗಳೇ ಬೇಕಾದೀತು. ಇಂತಹದರಲ್ಲಿ ಕೆಲವೇ ಕೆಲವು ತಿಂಗಳುಗಳಲ್ಲಿ ಹೊಸ ಚಳಕೊಂದು ಬಂದರೆ ವರ್‍ಶಗಟ್ಟಲೆ ಕಲಿತು ಅರಿತ ಚಳಕು ಬಳಕೆಗೆ ಬಾರದಂತಾಗುತ್ತದೆ. ಅದಲ್ಲದೇ ಹೊಸದನ್ನು ಕಲಿತುಕೊಳ್ಳುವ ತಲೆನೋವು ಬೇರೆ!

ಇಂತಹ ಟೆಕಿಗಳಿಗಾಗೇ ಜಾಬ್ಸ್ ಟ್ರ್‍ಯಾಕ್ಟರ್‍ ಎಂಬ ಕೂಟವು ಯಾವ ಯಾವ ಚಳಕುಗಳಿಗೆ 2012ರಲ್ಲಿ ಮಾರುಕಟ್ಟೆಯಲ್ಲಿ ಎಶ್ಟು ಬೇಡಿಕೆಗಳಿದ್ದವು ಮತ್ತು ಈ ಬೇಡಿಕೆಗಳು ವರ್‍ಶದ ಕೊನೆಯವರೆಗೆ ಯಾವ ರೀತಿಯ ಬದಲಾವಣೆಯ ಒಲವುಗಳನ್ನು ತೋರಿದವು ಎಂಬುದರ ಬಗ್ಗೆ ಗಮನಸೆಳೆಯುವ ಮಾಹಿತಿಯನ್ನು ಹೊರ ತಂದಿದೆ. ಈ ಮಾಹಿತಿಯನ್ನು ಟ್ವಿಟ್ಟರ್‍ನಲ್ಲಿ ಮೂಡಿ ಬಂದ ಡೆವಲಪರ್‍ ಹುದ್ದೆಗಳ ಬಯಲರಿಕೆಗಳಿಂದ ಕಲೆಹಾಕಲಾಗಿದೆ. ಈ ಕೆಳಗಿನ ಕೋಲುಪಟವನ್ನು ಗಮನಿಸಿ.

1san

ಸರ್‍ವರ್‍ಗಳನ್ನು ಕಟ್ಟಿ ಹಮ್ಮುವುದರಲ್ಲಿ ಸದ್ಯಕ್ಕೆ ಪಿ.ಎಚ್.ಪಿ. ಮತ್ತು ಜಾವಾಗಳದ್ದೇ ಮೇಲುಗಯ್. ರೂಬಿ ಈಗೀಗ ಹೆಚ್ಚು ಮಂದಿಮೆಚ್ಚುಗೆಯನ್ನು ಪಡೆಯುತ್ತಿದೆಯಾದರೂ ಇವೆರಡೂ ಚಳಕುಗಳನ್ನು ಅಲುಗಾಡಿಸಲು ಅದಕ್ಕೆ ಹಲವು ವರ್‍ಶಗಳೇ ಬೇಕಾದೀತು. ಇನ್ನು ಏ.ಎಸ್.ಪಿ.ಯನ್ನಂತೂ ಕೇಳುವವರೇ ಇಲ್ಲದಂತಾಗಿದೆ. ಜಾವಾ ಮತ್ತು ಪಿ.ಎಚ್.ಪಿ. ಸರ್‍ವರ್‍ಗಳ ಜೊತೆ ಡೇಟಾಬೇಸ್ ಬೇಕಾಗುವುದರಿಂದ ಸೀಕ್ವೆಲ್ಗೂ ಬೇಡಿಕೆ ಸಾಕಶ್ಟು ಇದೆ. ಆಪಲ್ ಅವರ ಮ್ಯಾಕ್, ಅಯ್-ಪೋನ್, ಅಯ್-ಪ್ಯಾಡ್ಗಳು ಹಿಟ್ ಆದ ಕಾರಣ ‘ಆಬ್ಜೆಕ್ಟಿವ್-ಸಿ’ಗೆ ಕೂಡ ತೀರಾ ಹೆಚ್ಚಿನ ಬೇಡಿಕೆಯು ಬಂದಿದೆ.

ಇದು ಬೇಡಿಕೆಗಳ ಅಂಕಿಗಳಾದರೆ ಬೇಡಿಕೆಗಳು ಹೇಗೆ ಬದಲಾವಣೆಯ ಒಲವುಗಳನ್ನು ತೋರಿಸುತ್ತಿವೆ ಎಂಬುದು ಇನ್ನೂ ಗಮನ ಸೆಳೆಯುವ ಮಾಹಿತಿಯನ್ನು ಕೊಡಬಲ್ಲುದು. 2012ರ ಮೊದಲಿಂದ ಕೊನೆಯವರೆಗೆ ಈ ಬೇಡಿಕೆಗಳ ಅಂಕಿಗಳು ಎಶ್ಟು ಬದಲಾದವು ಎಂದು ಈ ಕೆಳಗಿನ ಕೋಲುಪಟವು ತೋರಿಸುತ್ತದೆ.

2san

ಎಣಿಸಿದಂತೆ ಏ.ಎಸ್.ಪಿ., ಆಕ್ಶನ್ ಸ್ಕ್ರಿಪ್ಟ್ ಮತ್ತು ‘ಸಿ’ಗಳಿಗೆ ಬೇಡಿಕೆ ಕುಸಿಯುತ್ತಿದ್ದರೆ ರೂಬಿ, ಜಾವ (ಆಂಡ್ರಾಯ್ದ್) – ಆಂಡ್ರಾಯ್ದ್ ಪೋನುಗಳ ಮಾರಾಟದ ಹೆಚ್ಚಳದ ಕಾರಣಕ್ಕಾಗಿ – ಮತ್ತು ‘ಆಬ್ಜೆಕ್ಟಿವ್ ಸಿ’ಗಳಿಗೆ ಮಾರುಕಟ್ಟೆ ಹೆಚ್ಚಾಗುತ್ತಿದೆ. ಜಾವಾ (ಸರ್‍ವರ್‍) ಮತ್ತು ಪಿ.ಎಚ್.ಪಿ.ಗಳು ಸದ್ಯ ತೀರಾ ಹೆಚ್ಚು ಮಾರುಕಟ್ಟೆ ಹೊಂದಿದ್ದರೂ ಅವುಗಳ ಮಾರುಕಟ್ಟೆ ಕುಸಿಯುತ್ತಿರುವುದು ನಿಜ. ಆದರೆ ಈ ಎರಡೂ ಚಳಕುಗಳು ಮಾರುಕಟ್ಟೆಯನ್ನು ಎಶ್ಟು ಸುತ್ತುವರೆದಿವೆ ಎಂದರೆ ಇವನ್ನು ನಂಬಿಕೊಂಡ ಟೆಕಿಗಳು ಹೆಚ್ಚಗೆ ತಲೆ ಕೆಡಿಸಿಕೊಳ್ಳ ಬೇಕಾಗಿಲ್ಲ. ಇವು ನೆಲಕ್ಕೆ ಕುಸಿಯಲು ಹಲವು ವರ್‍ಶಗಳೇ ಬೇಕಾದೀತು.

ಇನ್ನು ತೀರಾ ಗಮನ ಸೆಳೆಯುವ ಅಂಕಿ ಎಂದರೆ ಜಾವಾಸ್ಕ್ರಿಪ್ಟಿನ +1.6%. ಪೇಸ್ಬುಕ್ಕಿನಂತಹ ಜನಪ್ರಿಯ ನೆಲೆಗಳೂ ಅಜಾಕ್ಸ್ ಚಳುಕನ್ನು ಬಳಸುತ್ತಿವೆ ಮತ್ತು ಇದರಲ್ಲಿ ಜಾವಾಸ್ಕ್ರಿಪ್ಟ್ ತೀರಾ ಮುಕ್ಯವಾಗಿದೆ. ಆದ್ದರಿಂದ ಜಾವಾಸ್ಕ್ರಿಪ್ಟಿಗೆ ಬೇಡಿಕೆ ಈಗ ಎಲ್ಲಕ್ಕಿಂತಲೂ ಬಿರುಸಾಗಿ ಏರುತ್ತಿದೆ.

ಹಾಗಾದರೆ ಟೆಕಿಗಳು ಯಾವ ಹೊಸ ಚಳಕುಗಳನ್ನು ಕಲಿಯಬೇಕು? ಇಳಿತ ಕಾಣುತ್ತಿರುವ ಚಳಕುಗಳನ್ನು ಬಿಟ್ಟು ಬೆಳೆಯುತ್ತಿರುವ ಚಳಕುಗಳ ಕಡೆಗೆ ನಡೆಯಬೇಕೇ? ಈ ಪ್ರಶ್ನೆಗೆಗಳಿಗೆ ಉತ್ತರ ಹೇಳುವುದು ಕೊಂಚ ಕಶ್ಟವೇ. ಬದಲಾಗುತ್ತಿದೆ ಎಂದ ಮಾತ್ರಕ್ಕೆ ಸಿಕ್ಕ ಹೊಸ ಚಳಕುಗಳನ್ನೆಲ್ಲಾ ಕಲಿಯ ಹೊರಡುವುದು ಹೆಡ್ಡತನವಾಗುತ್ತದೆ. ಇಂದು ನೀವು ಕೆಲಸ ಮಾಡುತ್ತಿರುವುದು ಯಾವುದರಲ್ಲಿ ಮತ್ತು ಮುಂದೆ ಯಾವ ಚಳಕು ಈಗಿನದರ ಜಾಗ ಪಡೆದುಕೊಳ್ಳುತ್ತದೆ, ಮತ್ತು ನಿಮಗೆ ಯಾವುದರಲ್ಲಿ ಆಸಕ್ತಿ ಕಳಕಳಿಗಳಿವೆ ಎಂದೆಲ್ಲ ಯೋಚಿಸಿ ಮುಂದುವರೆಯುವುದು ಒಳಿತು.

ಚಳಕುಗಳು ಬದಲಾಗುತ್ತಿದ್ದರೂ ಅವುಗಳ ಹಿಂದಿನ ಅಡಿಪಾಯದ ಅರಿಮೆ ಎಂದೆನಿಸಿಕೊಂಡ ಕಂಪ್ಯೂಟರ್‍ ಸಯನ್ಸ್ ಅಡಿಕಟ್ಟಲೆಗಳು ಎಂದಿಗೂ ಬದಲಾಗುವುದಿಲ್ಲ. ಈ ಅಡಿಕಟ್ಟಲೆಗಳನ್ನು ಚೆನ್ನಾಗಿ ತಿಳಿದು ಅರಿತುಕೊಂಡಿದ್ದರೆ ಸಾಕು, ಮುಂದೆ ಕಾಲ ಬದಲಾದಂತೆ ಬರುವ ಹೊಸ ಚಳಕುಗಳನ್ನು ಕಲಿಯಲು ಸಲೀಸಾಗುತ್ತದೆ. ಕೆಲಸ ಕೊಡುವವರಿಗೂ ಕೂಡ ಚಳಕು ಬದಲಾಗುವುದು ತಿಳಿದಿರುವ ವಿಶಯವೇ. ಹಾಗಾಗಿ ಅವರು ನಿಮ್ಮ ಒಂದು ಚಳಕದ ನಯ್ಪುಣ್ಯತೆಗಿಂತ ನಿಮ್ಮ ಅಡಿಕಟ್ಟಲೆಗಳ ಅರಿವನ್ನು ಹೆಚ್ಚು ಒರೆಗೆ ಹಚ್ಚುವ ಸಾದ್ಯತೆಯೇ ಹೆಚ್ಚು. ಇದರಿಂದ ಕೆಲಸದ ಮಾರುಕಟ್ಟೆಯಲ್ಲಿ ನಿಮ್ಮ ಬೆಲೆಯೂ ಹೆಚ್ಚುತ್ತದೆ.

ಸಂದೀಪ್ ಕಂಬಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications