ಅಂಗ ಕೊಡುಗೆ ಜೀವ ಕೊಡುಗೆ

ಸಿದ್ದರಾಜು ಬೋರೇಗವ್ಡ

1.12791_NM

‘ಮಸಾಚುಸೆಟ್ಸಿನ ಎಲ್ಲರ ಆಸ್ಪತ್ರೆಯ’ ಅರಿಮೆಗಾರರು ತಮ್ಮ ಅರಕೆಕೋಣೆಯಲ್ಲಿ ಜೀವಚಳಕವನ್ನು (bioengineering) ಬಳಸಿ ಬೆಳೆದ ಹುರುಳಿಗೆಯನ್ನು (ಹುರುಳಿಕಾಯಿ> ಹುರುಳಿಗೆ = kidney) ಇಲಿಯೊಂದಕ್ಕೆ ಕಸಿಮಾಡಿದರು. ಹೀಗೆ ಕಸಿ ಮಾಡಿದ ಹುರುಳಿಗೆ ಇಲಿಯ ರಕ್ತವನ್ನು ಸೋಸಿ ಉಚ್ಚೆಯನ್ನು ತಯಾರಿಸಿದೆ! ಜೀವಚಳಕದ ಮಾಳದಲ್ಲಿ ಇದೊಂದು ದೊಡ್ಡ ಹೆಜ್ಜೆ. ಅಂಗಗಳನ್ನು ಮರುಹುಟ್ಟಿಸುವ ಮಾಳದಲ್ಲಿ ನಿಪುಣರಾದ ಡಾ. ಹೆರಾಲ್ಡ್ ಓಟ್ ತಂಡ ಈ ಚಳಕವನ್ನ ಕರಗತ ಮಾಡಿಕೊಂಡಿದೆ. ಇವರ ಚಳಕವನ್ನ ಬೇರೆಯವರು ಕಲಿತುಕೊಂಡು ತಾವೂ ಮಾಡಿ ತೋರಿಸುವಂತಾದಲ್ಲಿ ಇದು ಹಲವು ರೋಗಿಗಗಳಿಗೆ ವರವಾಗಲಿದೆ. ಓಟ್ ತಂಡದವರು ಈ ದಾಟಿಯನ್ನು 2008ರಿಂದಲೇ ಅಬಿವ್ರುದ್ದಿಪಡಿಸಿದ್ದು ಗುಂಡಿಗೆ (heart) ಮತ್ತು ಉಸಿರುಚೀಲಗಳನ್ನ (lung) ತಯಾರಿಸಿದ್ದರು.

ಮೊದಲಿಗೆ ಅವರು ಈಗತಾನೇ ಸತ್ತಿದ್ದ ಇಲಿಯಿಂದ ಹುರುಳಿಗೆಯನ್ನು ಕುಯ್ಲು ಮಾಡಿದರು. ಅದರಿಂದ ಒಂದು ಬಗೆಯ ಸೋಪನ್ನು ಬಳಸಿ ಜೀವಕಣಗಳನ್ನು ತೊಳೆದುಹಾಕಿದರು. ತೊಳೆದಮೇಲೆ ಉಳಿದುಕೊಂಡಿದ್ದು ಕೊಂಡಿಹೀರಿ (connective tissue) ಯಿಂದ ಮಾಡಿದ ಪಂಜರದಂತಾ ಚಪ್ಪರ. ಇದು ಹೇಗೆಂದರೆ ಕಬ್ಬಿಣ, ಸಿಮೆಂಟು, ಮತ್ತು ಜಲ್ಲಿಕಲ್ಲುಗಳಿಂದ ಮಾಡಿದ ಕಂಬವೊಂದರಿಂದ ಸಿಮೆಂಟು ಮತ್ತು ಜಲ್ಲಿಕಲ್ಲುಗಳನ್ನು ತೆಗೆದುಬಿಟ್ಟರೆ ಉಳಿದುಕೊಳ್ಳುವ ಕಬ್ಬಿಣದ ಕಟ್ಟಣೆಯ ಹಾಗೆ. ಕೊಂಡಿಹೀರಿಯು ಯಾವುದೇ ಅಂಗಗಳಲ್ಲಿರುವ ಜೀವಕಣಗಳನ್ನು ಅವುಗಳು ಇರಬೇಕಾದ ಎಡೆಗಳಲ್ಲಿ ಹಿಡಿದಿಟ್ಟುಕೊಂಡಿರುತ್ತದೆ. ಓಟ್ ತಂಡದವರು ಮುಚ್ಚರವನ್ನು (vacuum) ಬಳಸಿ ಹೊಸ ಜೀವಕಣಗಳನ್ನು ಎಳೆದು ಅವುಗಳು ಇರಬೇಕಾದ ಕೊಂಡಿಹೀರಿಯ ಎಡೆಗೆ ಕೂರಿಸಿ ಒಂದು ಜಾರ್‍ನಲ್ಲಿ ಹಲವು ದಿನಗಳು ಇಟ್ಟರು. ನಂತರ ಹುರುಳಿಗೆಯು ಜೀವ ಪಡೆದು ಕೆಲಸ ಮಾಡತೊಡಗಿತು.

ನಾನು ನನ್ನ ಅಂಗಗಳನ್ನು ದಾನ ಮಾಡಿದ್ದೇನೆ. ನಮ್ಮಲ್ಲಿ ಅಂಗವನ್ನು ದಾನ ಮಾಡುವವರು ತೀರಾ ಕಡಿಮೆ. ಮಿಗಿಲಾಗಿ, ಅಂಗದಾನಿಗಳು ಸತ್ತಾಗ ಅವರ ಅಂಗಗಳು ಬೇಗ ಆಸ್ಪತ್ರೆಯವರಿಗೆ ಕುಯ್ಲು ಮಾಡಲು ಸಿಗುತ್ತವೆ ಅನ್ನುವಂತೆಯೂ ಇಲ್ಲ. ಕುಯ್ಲು ಮಾಡುವಶ್ಟರಲ್ಲಿ ಸತ್ತುಹೋದ ದಾನಿಗಳ ಅಂಗಗಳೂ ಹಲವು ಬಾರಿ ಸತ್ತುಹೋಗಿರುತ್ತವೆ. ಅವುಗಳನ್ನ ಬೇಡಿಕೆಯಿರುವ ರೋಗಿಗಳಿಗೆ ಕಸಿ ಮಾಡಲು ಆಗುವುದಿಲ್ಲ. ಹೀಗೆ ಹಲವು ದಾನಿಗಳ ಅಂಗಗಳೂ ಪೋಲಾಗುತ್ತವೆ. ಆದರೆ ಆ ಅಂಗಗಳಲ್ಲಿರುವ ‘ಕೊಂಡಿಹೀರಿಯ ಚಪ್ಪರವನ್ನು’ ಬಳಕೆ ಮಾಡಿಕೊಳ್ಳಬಹುದು! ಈ ಕೊಂಡಿಹೀರಿಯಲ್ಲಿ ರೋಗಿಯದೇ ಆದ ಜೀವಕಣಗಳನ್ನ ಬಿತ್ತನೆ ಮಾಡಿ ರೋಗಿಗೆ ಸರಿಹೊಂದುವ ಹೊಸ ಅಂಗವನ್ನೇ ಬೆಳಯಬಹುದು! ಈ ಬಗೆಯಲ್ಲಿ ಬೆಳೆದು ಕಸಿ ಮಾಡಿದ ಹೊಸ ಹುರುಳಿಗೆಯನ್ನು ರೋಗಿಯ ಮಯ್ಯಿ ತನ್ನದೆಂದೇ ತಿಳಿಯುತ್ತದೆ. ಹಾಗಾಗಿ, ರೋಗಿಯ ಮಯ್ಯಿ ಕಸಿ ಮಾಡಿದ ಅಂಗವನ್ನು ಒಪ್ಪದಿರುವ ಸಾದ್ಯತೆ ಕಡಿಮೆ! ಬಾರತದಲ್ಲಿ, ಅದರಲ್ಲೂ ತೆಂಕಣ ಬಾರತದಲ್ಲಿ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಯಿಂದಾಗಿ ಹುರುಳಿಗೆ ಕೆಟ್ಟುಹೋದ ರೋಗಿಗಳ ಎಣಿಕೆ ಲಕ್ಶಗಳಲ್ಲಿದೆ.

ನಮ್ಮ ಸಂಸ್ಕ್ರುತಿಯಲ್ಲಿ ಅಂಗಗಳನ್ನು ದಾನ ಮಾಡುವುದು ಇಲ್ಲದಿರುವುದರಿಂದ ಮತ್ತು ಹಲವಾರು ಮೂಡನಂಬಿಕೆಗಳು ಅಡ್ಡಬರುವುದರಿಂದ ಅಂಗಗಳ ಬೇಡಿಕೆಗೂ ಸರಬರಾಜಿಗೂ ತುಂಬಾ ಅಂತರವಿದೆ. ಇವತ್ತು ಬಾರತದಾದ್ಯಂತ ಸುಮಾರು ಒಂದುವರೆ ಲಕ್ಶ ಮಂದಿ ಹುರುಳಿಗೆಯ ದಾನಕ್ಕಾಗಿ ಕಾಯುತ್ತಿದ್ದಾರೆ. ಅವರಲ್ಲಿ ಕೇವಲ ಮೂರು ಸಾವಿರ ಮಂದಿಗೆ ಮಾತ್ರ ಹುರುಳಿಗೆಯ ಕಸಿ ಮಾಡಲಾಗುತ್ತದೆ. ಮಿಕ್ಕವರು, ಅಂದರೆ ಪ್ರತಿ ಮೂವತ್ತು ರೋಗಿಗಳಲ್ಲಿ 29 ರೋಗಿಗಳು ಕೊಡುಗೆಯ ಅಂಗಗಳಿಲ್ಲದೇ ಅಸುನೀಗುತ್ತಾರೆ! ಡಾ. ಓಟ್ ಅವರ ಅರಕೆ ಇಂತಾ ರೋಗಿಗಳಿಗೆ ಆಶಾವಾದ ನೀಡುತ್ತಿದೆ. ಡಾ. ಓಟ್ ಹೀಗೆ ಹೇಳುತ್ತಾರೆ: ‘ಎಲ್ಲವೂ ಸರಿಯಾಗಿ ನಡೆದಲ್ಲಿ, ಒಬ್ಬ ರೋಗಿಯು ಆಸ್ಪತ್ರೆಗೆ ಬಂದು ತನಗೆ ಬೇಕಾದ ಹಾಗೇ ತನ್ನದೇ ಜೀವಕಣಗಳಿರುವ ಹುರುಳಿಗೆಯನ್ನು ಆಸ್ಪತ್ರೆಯವರಿಂದ ಬೆಳೆಸಿ ಕಸಿ ಮಾಡಿಸಿಕೊಳ್ಳುಬಹುದು. ಆಗ, ದಾನ ಮಾಡಿದ ಅಂಗಗಳಿಗಾಗಿ ಆಹಾಕಾರವಿರುವುದಿಲ್ಲ. ಕಸಿ ಮಾಡಿದ ಹೊಸ ಅಂಗಗಳು ರೋಗಿಯ ಮಯ್ಯಿಗೆ ಚೆನ್ನಾಗಿಯೇ ಒಗ್ಗಿಕೊಳ್ಳುತ್ತವೆ.”

ಓಟ್ ತಂಡದವರು ಅಂಗಗಳನ್ನು ಬೆಳೆಯುವ ಹಾದಿಯಲ್ಲಿ ಇನ್ನೂ ಹಲವು ತೊಡರುಗಳಿವೆ. ಅವರ ತಂಡದವರು ತಯಾರಿಸಿದ ಹುರುಳಿಗೆಯು ಇಲಿಗೆ ಕಸಿ ಮಾಡಿದ ಮೇಲೆ ಹುಟ್ಟಿನಿಂದಲೇ ಇದ್ದ ಹುರುಳಿಗೆಗಿಂತ ಮೂರು ಪಟ್ಟು ನಿದಾನವಾಗಿ ಉಚ್ಚೆಯನ್ನು ಉತ್ಪಾದಿಸಿತ್ತು. ಡಾ. ಓಟ್ ಹೇಳುವಂತೆ ‘ಅಂಗವು ಸಂಪೂರ್‍ಣವಾಗಿ ಬಲಿತಿಲ್ಲದಿರುವುದೇ’ ಅದಕ್ಕೇ ಕಾರಣ. ಜೊತೆಗೆ, ಕೊಂಡಿಹೀರಿಗೆ ಜೀವಕಣಗಳ ಬಿತ್ತನೆ ಮಾಡುವಾಗ ಹುರುಳಿಗೆಯಲ್ಲಿ ಕಂಡುಬರುವಂತಾ ಬಗೆಬಗೆಯ ಜೀವಕಣಗಳನ್ನ ಬಿತ್ತಬೇಕಾಗುತ್ತದೆ. ಆದರೆ, ಅವರ ತಂಡ ಬಿತ್ತಿದ ಜೀವಕಣಗಳಲ್ಲಿ ಹುರುಳಿಗೆಯಲ್ಲಿರುವ ಎರಡು-ಮೂರು ಬಗೆಯ ಜೀವಕಣಗಳನ್ನು ಮಾತ್ರ ಬಳಸಿದ್ದರು. ಇದು ಹೇಗೆಂದರೆ, ನಮ್ಮ ಪಡುವಣಗಟ್ಟದ ಕಾಡುಗಳನ್ನ ನೆಲಸಮ ಮಾಡಿ, ಎರಡು-ಮೂರು ಬಗೆಯ ಗಿಡಗಳನ್ನು ನಾಟಿಹಾಕಿ ಬೆಳೆಸಿದ ಕಾಡು ಹಿಂದೆ ಇದ್ದ ಕಾಡಿಗೆ ಹೇಗೆ ಹೋಲುವುದಿಲ್ಲವೋ ಹಾಗೆ. ಒಂದು ಸಮಾದಾನವೆಂದರೆ, ಕಾಡಿನಲ್ಲಿನ ಒಂದು ಬಗೆಯ ಗಿಡ ಇನ್ನೊಂದು ಬಗೆಯ ಗಿಡವಾಗಿ ಬದಲಾಗದು.

ಆದರೆ, ಜೀವಕಣಗಳಲ್ಲಿ ಅದರಲ್ಲೂ ಬುಡಕಣ (stem cells)ಗಳಲ್ಲಿ ಬೇರೆ ಬೇರೆ ಬಗೆಯ ಜೀವಕಣಗಳಾಗಿ ಮಾರ್‍ಪಾಡಾಗುವ ಪರಿಚೆ ಇದೆ. ಮುಂದೆ ಇನ್ನೂ ಹೆಚ್ಚು ಅರಕೆ ಮಾಡಿದಂತೆ ಡಾ.ಓಟ್ ತಂಡವಾಗಲಿ ಬೇರ್‍ಯಾವುದೇ ತಂಡವಾಗಲಿ ಇನ್ನೂ ಚೆನ್ನಾಗಿ ಕೆಲಸ ಮಾಡುವ ಅಂಗಗಳನ್ನು ಬೆಳೆಯುವುದುರಲ್ಲಿ ಎರಡು ಮಾತಿಲ್ಲ. ಡಾ. ಓಟ್ ಹೇಳುವಂತೆ ರೋಗಿಗಳಲ್ಲಿ ಹುರುಳಿಗೆಯ ಕೆಲಸ 15%ಗೆ ಇಳಿದರೆ ರಕ್ತಸೋಸು (hemodialysis) ಮಾಡಿಸಬೇಕಾಗುತ್ತದೆ. ಅವರ ತಂಡದವರು ಬೆಳೆದಿರುವ ಹುರುಳಿಗೆಯು ಈಗಾಗಲೇ 20-30% ರಶ್ಟು ಕೆಲಸ ಮಾಡಬಲ್ಲದು!

ಆದರೆ, ತಂಡದ ಏಳಿಗೆಗೇಯ್ದ ವಿದಾನ ಇನ್ನೂ ಇಲಿಗಳಿಗೆ ಮಾತ್ರ ಸೀಮಿತ. ಸದ್ಯದಲ್ಲಿ ಹಂದಿ ಹಾಗೂ ಮಾನವರ ಹುರುಳಿಗೆಗಳನ್ನ ಪರೀಕ್ಶೆ ಮಾಡಲಾಗುತ್ತಿದೆ. ಅವುಗಳು ಹೇಗೆ ಕೆಲಸ ಮಾಡುತ್ತವೆ ಎಂಬುದ ಕಾದು ನೋಡಬೇಕು. ಇಲಿಗಳಲ್ಲಿ ಕಂಡು ಹಿಡಿದಿದ್ದನ್ನು ಮಾನವರಿಗೆ ತಲುಪಿಸುವುದಕ್ಕೆ ಬಹಳ ಸಮಯ ಇಡಿಯುತ್ತದೆ. ಆದರೂ ಆಶಾವಾದದಿಂದರಬಹುದು!!

ನಿಮಗಿದು ತಿಳಿದಿರಲಿ: ನೀವು ಅಂಗ-ಕೊಡುಗೆ ಮಾಡಿದರೆ 50ಕ್ಕೂ ಹೆಚ್ಚು ಮಂದಿಯ ಹದುಳ ಕಾಯಬಹುದು ಇಲ್ಲಾ ಅವರಿಗೆ ಜೀವ ಕೊಡಬಹುದು. ಮಿಗಿಲಾಗಿ, ಸತ್ತಮೇಲೂ ಬದುಕಬಹುದು! ಮಾತಿಗೆ ಹೇಳುತ್ತಿಲ್ಲ. ದಿಟವಾಗಿಯೂ ಬದುಕಬಹುದು!

ದೊಡ್ಡದಾದ ತಿಟ್ಟ ಹಾಗೂ ಹೆಚ್ಚಿನ ತಿಳಿವಿಗಾಗಿ: http://www.nature.com/news/lab-grown-kidneys-transplanted-into-rats-1.12791

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಅಂಗ ಕಟ್ಟುವವರ ಅರಕೆಯ ಬಗ್ಗೆ ತಿಳಿದುಕೊಳ್ಳಲು ಇಲ್ಲಿಗೆ ಹೋಗಿ:
    https://www.youtube.com/watch?v=ZlvPF6Cn-2g

ಅನಿಸಿಕೆ ಬರೆಯಿರಿ: