ಹೋಮಿಯೋಪತಿಗೆ ಅರಿಮೆಯ ಅಡಿಪಾಯವಿದೆಯೇ?

(ಎಂದಿನಂತೆ ಉತ್ತರಗಳಿಗೆ ಬಾಗಿಲು ತೆರೆದಿದೆ. ನಿಮ್ಮ ಬರಹವನ್ನು ಕಳುಹಿಸುವ ಮುನ್ನ ಇದನ್ನೊಮ್ಮೆ ಓದಿಕೊಳ್ಳಿ. – ಹೊನಲು ತಂಡ)

Homeopathy medicine centre

ಹೋಮಿಯೋಪತಿ ಎಂಬ ಸುಳ್ಳು ಮಾಂಜುಗ ಪದ್ದತಿ ಕರ್‍ನಾಟಕದಲ್ಲಿ ಬೇರೂರುತ್ತಿದೆ ಎಂದು ನನಗೆ ತಿಳಿದಿತ್ತು. ಆದರೂ, 04/30/2013 ರಲ್ಲಿ ಪ್ರಜಾವಾಣಿಯಲ್ಲಿ ಅಚ್ಚಾಗಿ ಬಂದ ಸುದ್ದಿ ನನಗೆ ದಂಗು ಬಡಿಸಿತ್ತು! ಅದಕ್ಕೆ ಕಾರಣ ಆ ಸುದ್ದಿಯ ಪ್ರಕಾರ ‘ಬಗವಾನ್ ಬುದ್ದ ಹೋಮಿಯೋಪತಿಕ್ ವಿದ್ಯಾಲಯ ಮತ್ತು ಆಸ್ಪತ್ರೆ‘ಯು ಬೆಂಗಳೂರಿನಲ್ಲಿ ತಲೆಯೆತ್ತಿದೆ ಎಂಬುದಲ್ಲ. ಪ್ರಜಾವಾಣಿ ವರದಿಯ ಹಿಂದಿನ ದಿನ ಬಾರತೀಯ ವಿದ್ಯಾಬವನದಲ್ಲಿ ‘ಪದವಿ ಪ್ರದಾನ ಸಮಾರಂಬ’ ಏರ್‍ಪಡಿಸಿತ್ತು ಎಂಬುದಕ್ಕೂ ಅಲ್ಲ.

ನನ್ನನ್ನು ದಂಗು ಬಡಿಸಿದ್ದು ಆ ಸಮಾರಂಬದ ಅದ್ಯಕ್ಶತೆಯನ್ನು ರಾಜೀವ್ ಗಾಂದಿ ಹದುಳ ಅರಿಮೆಗಳ ಕಲಿಕೆವೀಡಿನ ಕುಲಪತಿ ಡಾ.ಕೆ.ಎಸ್.ಶ್ರೀಪ್ರಕಾಶ್ ಅವರು ವಹಿಸಿದ್ದರು ಎಂಬುದು! ಅಶ್ಟೇ ಅಲ್ಲ. ಪದವಿ ಪಡೆದ ಹೋಮಿಯೋಪತಿ ಮಾಂಜುಗರನ್ನು ಹಾರಯ್ಸಿ ಅವರು ಆಡಿದ ಮಾತು! ಪ್ರಜಾವಾಣಿಯ ಸುದ್ದಿಹಾಳೆಯು ಅವರ ಮಾತುಗಳನ್ನು ಹೀಗೆ ವರದಿ ಮಾಡಿದೆ: “ಹೋಮಿಯೋಪತಿ ಜನಪ್ರಿಯ ವಯ್ದಿಯ  ಪದ್ದತಿಯಾಗಿದ್ದು, ಎರಡು ಶತಮಾನಗಳಿಗೂ ಅದಿಕ ಇತಿಹಾಸವನ್ನು ಹೊಂದಿದೆ. ಹಲವು ಗುಣವಾಗದ ಕಾಯಿಲೆಗಳಿಗೆ ಹೋಮಿಯೋಪತಿಯಲ್ಲಿ ಚಿಕಿತ್ಸೆ ಲಬ್ಯವಿದೆ ಎಂದರು.”

ಹೋಮಿಯೋಪತಿಯಂತಾ ಅಡ್ಡಪದ್ದತಿಗಳಿಂದ ಕನ್ನಡಿಗರನ್ನು ಕಾಯುವ ಹೊಣೆ ಎಲ್ಲರಿಗಿಂತ ಮೇಲಾಗಿ ಡಾ. ಶ್ರೀಪ್ರಕಾಶ್ ಮೇಲೆ ಇದೆ ಎಂದರೆ ತಪ್ಪಾಗಲಾರದು. ಅವರು ಅರಿಮೆ ಅಡಿಪಾಯದ ಆದುನಿಕ ಮಾಂಜರಿಮೆಯನ್ನು ಓದಿದವರು. ಮಾಂಜುಗ ಅರಿಮೆಗಳಿಗೆ ನಂಟಿದ ಕಲಿಕೆವೀಡಿನ ಕುಲಪತಿ ಆಗಿರುವವರು. ಬೇಲಿಯೇ ಎದ್ದು ಹೊಲವನ್ನೇಕೆ ಮೇಯುತ್ತಿದೆ ಎಂದೆಣಿಸಿ ಇದರ ಬಗ್ಗೆ ಇನ್ನಶ್ಟು ತಿಳಿಯಲು ಹೊರಟಾಗ ನನಗೆ ಇನ್ನೂ ಸಾಕಶ್ಟು ಅಚ್ಚರಿ ಕಾದಿತ್ತು. ಮೇಲೆ ತಿಳಿಸಿದ ಹೋಮಿಯೋಪತಿ ಕಾಲೇಜು ಮತ್ತು ಆಸ್ಪತ್ರೆಯು ಡಾ.ಶ್ರೀಪ್ರಕಾಶ್ ಅವರು ಕುಲಪತಿ ಆಗಿರುವ ರಾಜೀವ್ ಗಾಂದಿ ಹದುಳ ಅರಿಮೆಗಳ ಕಲಿಕೆವೀಡಿನ ಅಡಿಯಲ್ಲೇ ಬರುತ್ತದೆ!

ಅಂದರೆ, “ಕರ್‍ನಾಟಕದಲ್ಲಿ ಹೋಮಿಯೋಪತಿಗೆ ಅರಿಮೆಯ ಮಾಂಜುಗ ಪದ್ದತಿ ಎಂಬ ಮಾನ್ಯತೆ ಇದೆ”! ಮಿಗಿಲಾಗಿ, ಕರ್‍ನಾಟಕದಲ್ಲಿ ಮೇಲ್ಮಟ್ಟದ ಕಲಿಕೆಯನ್ನು ಒದಗಿಸುವ ಸರಕಾರೀ ಕಾಲೇಜುಗಳೇ ಇವೆ! ಒಮ್ಮೆ ಯೋಚಿಸಿ, ಜೋತಿಶ್ಯವನ್ನು ಬಾನರಿಮೆಯಂತೆಯೇ (astronomy) ಒಂದು ಅರಿಮೆ ಎಂದು ಗುರುತಿಸಿ, ಅಕ್ಕ-ಪಕ್ಕದಲ್ಲಿ ಒಂದೇ ಕಲಿಕೆವೀಡಿನ ಸೂರಿನಡಿ ಕಾಲೇಜುಗಳನ್ನು ಕಟ್ಟಿ, ಅದರಿಂದ ಹೊರಬಂದ ಜೋತಿಶಿಗಳನ್ನು ಗಣಕದ ಮುಂದೆ ಕುಳ್ಳರಿಸಿ ಬಾನಿನಲ್ಲಿ ಕೆಟ್ಟು ಕುಳಿತಿರುವ ಉಪಗ್ರಹವನ್ನು ಸರಿಪಡಿಸಲು ಹೇಳಿದರೆ ಹೇಗಿರುತ್ತದೆ? ಉಪಗ್ರಹ ಹಾಳಾಗಲಿ, ಹೋಮಿಯೋಪತಿಯವರು ರಿಪೇರಿ ಮಾಡಲು ಹೋಗುವುದು ಕನ್ನಡಿಗರ ಮಯ್ಯನ್ನ!

ಹೋಮಿಯೋಪತಿ ಎಂಬ ಪದವು ತಿರುಪತಿ, ಸೀತಾಪತಿ, ಹೋಮಿಬಾಬ ಮುಂತಾದ ಪದಗಳನ್ನು ಬೆರೆಸಿ ತೆಗೆದಂತೆ ಕೇಳಿಸಿದರೂ ಅದೊಂದು ಅಪ್ಪಟ ವಿದೇಶೀ ಮೂಡನಂಬಿಕೆ. ಈ ಅಡ್ಡಮಾಂಜುಗ ಪದ್ದತಿಯು  ‘ಸಾಮುಯೇಲ್ ಹಾನ್ಮನ್‘ ಎಂಬುವವನಿಂದ 1796ರರಲ್ಲಿ ಆರಂಬವಾಯಿತು. ಬೇನೆಯೂ, ಬೇನೆಯ ಅವ್ಶದವೂ ಒಂದೇ ತೆರನಾದ ಕುರುಹುಗಳನ್ನು ಉಂಟುಮಾಡುತ್ತದೆ ಎಂದು ಅವನು ತಿಳಿದುಕೊಂಡಿದ್ದ. ಅಂದರೆ, ಮಲೇರಿಯಾಗೆ ತುತ್ತಾದವರಲ್ಲಿ ಜ್ವರ, ನಡುಕ, ಕೀಲುನೋವು ಮುಂತಾದ ಕುರುಹುಗಳು ಕಾಣುತ್ತವೆ. ಸಾಮುಯೆಲ್ ಪ್ರಕಾರ ಹದುಳವಾದವರು ಮಲೇರಿಯಾರೋಗದ ಅವ್ಶದಿಯನ್ನು ತೆಗೆದುಕೊಂಡರೆ ಇವೇ ಕುರುಹುಗಳು ಕಾಣುತ್ತವೆ!  ಅಂದರೆ, ಹದುಳವಾಗಿರುವವರು ಹೋಮಿಯೋಪತಿ ಪದ್ದತಿಯು ಕೊಡುವ ಮಲೇರಿಯ ಅವ್ಶದ ತೆಗೆದುಕೊಂಡರೆ ಜ್ವರ, ನಡುಕ, ಕೀಲು ನೋವು ಬರುತ್ತದೆ. ಆದರೆ ಅದೇ ಅವ್ಶದವನ್ನು ರೋಗಿ ತೆಗೆದುಕೊಂಡರೆ ಅದು ಮಲೇರಿಯಾವನ್ನು ವಾಸಿ ಮಾಡುತ್ತದೆ!

ಹೋಮಿಯೋಪತಿ ಆರಂಬಕಾರ ಸಾಮುಯೇಲ್ಲನು ಮಸಾಲೆಗಾಗಿ ಬಳಸುವ ಚಕ್ಕೆಯನ್ನು (cinchona bark) ತಿಂದು ತನಗೆ ಜ್ವರ, ನಡುಕ, ಕೀಲು ನೋವು ಬಂದಿತೆಂದೂ, ಆದ್ದರಿಂದ ಅದನ್ನು ಮಲೇರಿಯಾ ವಾಸಿ ಮಾಡಲು ಬಳಸಬೇಕು ಎಂದೂ ಹೇಳಿದ್ದ. ಅದು ನಂತರದಲ್ಲಿ ಸುಳ್ಳೆಂದು ಸಾಬೀತಾಗಿತ್ತು. ಅಶ್ಟೆ ಅಲ್ಲ, ಅವ್ಶದವೂ ಬೇನೆಯೂ ಒಂದೇ ಬಗೆಯ ಕುರುಹುಗಳನ್ನು ಉಂಟುಮಾಡುವುದರಿಂದ ಅವ್ಶದಿಯನ್ನು ಆದಶ್ಟೂ ಕಡಿಮೆ ಪ್ರಮಾಣದಲ್ಲಿ ಬಳಸಬೇಕು ಎಂದು ಹೇಳಿದ್ದ. ಹಾಗೆ ಮಾಡಲು ನೀರಿನಿಂದ ತಿಳಿಯಾಗಿಸಿ ಅವ್ಶದಿಯ ಸಾರ ಕುಂದಿಸಬೇಕು. ಹಲವಾರು ಬಾರಿ ನೀರಿನಿಂದ ಎಶ್ಟರ ಮಟ್ಟಿಗೆ ಸಾರ ಕುಂದಿಸುತ್ತಾರೆ ಅಂದರೆ ಕೊನೆಗೆ ತಿನ್ನುವ/ಕುಡಿಯುವ ಅವ್ಶದಿಯಲ್ಲಿ ನೀರು ಮಾತ್ರ ಉಳಿದುಕೊಂಡಿರುತ್ತದೆ. ಅದರಲ್ಲಿ ಯಾವ ಅವ್ಶದವೂ ಇರುವುದಿಲ್ಲ. ಹೋಮಿಯೋಪತಿಯವರು ಕೊಡುವ ಗುಳಿಗೆಗಳೂ ಹೆಚ್ಚಾಗಿ ಸಕ್ಕರೆಯಿಂದ ಮಾಡಲ್ಪಟ್ಟಿರುತ್ತವೆ. ಹೋಮಿಯೋಪತಿಯ ತತ್ವಗಳು ಮಾಂಜರಿಮೆ ಬಿಡಿ, ಪುರುಳರಿಮೆಯ ಕಟ್ಟಳೆಗಳನ್ನೇ ಮೀರುತ್ತವೆ. ಹಾಗಾಗಿ, ಇದನ್ನು ಚೂಮಂತ್ರಕಾಳಿ ಎಂದು ಮಾತ್ರ ಅನ್ನಬಹುದು.

ಹೋಮಿಯೋಪತಿ ಅವ್ಶದಗಳಲ್ಲಿ ಹೆಚ್ಚಾಗಿ ನೀರು, ಹೆಂಡ, ಸಕ್ಕರೆ ಮಂತಾದ ಪದಾರ್‍ತಗಳು ಮಾತ್ರ ಇರುತ್ತವೆ. ಕೆಲವು ಅವ್ಶದಗಳಲ್ಲಿ ಆರ್‍ಸೆನಿಕ್, ಜಿಂಕ್ ಮುಂತಾದ ಕನಿಜಗಳೂ ಇರುತ್ತವೆ. ಅವುಗಳ ಪ್ರಮಾಣವನ್ನು ಹೋಮಿಯೋಪತಿಯವರು ಅರಿಮೆಯ ಅಳತೆಗೋಲುಗಳಿಂದ ಅಳೆದಿರುವುದಿಲ್ಲ. ಸಣ್ಣ ಪ್ರಮಾಣದಲ್ಲಿ ಅವ್ಶದಿ ಎಂದು ತಿಳಿದಿ ತೆಗೆದುಕೊಳ್ಳುವ ನೀರು, ಹೆಂಡ, ಸಕ್ಕರೆಗಳಿಂತ ತಾನಾಗೇ ಯಾವುದೇ ರೋಗ ಬರುವುದಿಲ್ಲ. ಆದರೆ, ರೋಗಿಯಲ್ಲಿ ಈಗಾಗಲೇ ಇರುವ ಬೇನೆ ಉಲ್ಬಣಿಸಬಹುದು. ಇನ್ನು, ಹೋಮಿಯೋಪತಿ ಅವ್ಶದಿಗಳಲ್ಲಿರುವ ಆರ್‍ಸೆನಿಕ್ ಮತ್ತು ಜಿಂಕ್ ಮುಂತಾದ ಕನಿಜಗಳು ಹಲವಾರು ಬಾರಿ ರೋಗಿಗಳ ಮಯ್ಯಲ್ಲಿ ನಂಜೇರಿಸಿವೆ. ಪಡುವಣ ದೇಶಗಳಲ್ಲಿ ಇವು ಕೋರ್‍ಟಿನ ಮೆಟ್ಟಿಲು ಹತ್ತಿವೆ.

ಅಮೇರಿಕಾದಲ್ಲಿ ಈ ಪದ್ದತಿಯನ್ನು ಅರಿಯಮೆ (non-science) ಮತ್ತು ಅನಯ್ತಿಕವಾದುದು ಎಂದು ಪರಿಗಣಿಸಲಾಗಿದೆ. ಮುಂದುವರಿದ ದೇಶಗಳು ಹೋಮಿಯೋಪತಿಯ ಬಗ್ಗೆ ಎಚ್ಚೆತ್ತುಕೊಳ್ಳುತ್ತಿವೆ. ಹಲವಾರು ದೇಶಗಳು ಸರಕಾರದ ಬೆಂಬಲವನ್ನು ನಿಲ್ಲಿಸಿವೆ. ಕಳೆದ ಸಾಲಿನಲ್ಲಿ (2012) ಬ್ರಿಟನ್ನಿನ ಮೂರು ಕಲಿಕೆವೀಡುಗಳು ಹೋಮಿಯೋಪತಿ ಕಾಲೇಜುಗಳನ್ನು ಮುಚ್ಚಿವೆ. ಹೋಮಿಯೋಪತಿಯು ಇಡೀ ನೆಲದ ಮಟ್ಟದಲ್ಲಿ ನಡೆಯುತ್ತಿರುವ ಮೋಸದ ದಂದೆ ಎಂದು ತಿಳಿದುಕೊಳ್ಳಬೇಕು. ಹೋಮಿಯೋಪತಿ ಅರಿಮೆಯಲ್ಲ ಎಂದು ಮನಗಾಣಬೇಕು. ಅರಿಮೆಯೆಂದು ತಿಳಿದು ತಂದೆತಾಯಂದಿರು ಮಕ್ಕಳನ್ನು ಹೋಮಿಯೋಪತಿ ಓದಿನಲ್ಲಿ ತೊಡಗಿಸುತ್ತಿದ್ದಾರೆ. ನಮ್ಮ ಮಕ್ಕಳು ಹೋಮಿಯೋಪತಿ ಪದ್ದತಿಯಲ್ಲಿ ಸಿಕ್ಕಿಹಾಕಿಕೊಳ್ಳದಂತೆ ನೋಡಿಕೊಳ್ಳಬೇಕು. ರೋಗಿಗಳು ಆದುನಿಕ ಮಾಂಜರಿಮೆಯನ್ನೇ ಆರಿಸಿಕೊಳ್ಳಬೇಕು. ಆದುನಿಕ ಅರಿಮೆಯ ಮಾಂಜರಿಮೆಯಲ್ಲಿ ಓದಿದವರು ಹೋಮಿಯೋಪತಿಯ ಬಗ್ಗೆ ಕನ್ನಡಿಗರಲ್ಲಿ ಅರಿವು ಮತ್ತು ಎಚ್ಚರಿಕೆ ಕೊಡಬೇಕು. ಕರ್‍ನಾಟಕ  ಸರಕಾರ ಹೋಮಿಯೋಪತಿಯನ್ನು ಅರಿಯಮೆಯೆಂದು ಗುರುತಿಸಬೇಕು. ಸರಕಾರಿ ಕಾಲೇಜುಗಳನ್ನು ಮುಚ್ಚಬೇಕು.

ಸಿದ್ದರಾಜು ಬೋರೇಗವ್ಡ

ನಿಮಗೆ ಹಿಡಿಸಬಹುದಾದ ಬರಹಗಳು

49 Responses

  1. Kiran Batni says:

    // ‘ಅಮೇರಿಕಾದಲ್ಲಿ ಈ ಪದ್ದತಿಯನ್ನು ಅರಿಯಮೆ (non-science) ಮತ್ತು ಅನಯ್ತಿಕವಾದುದು ಎಂದು ಪರಿಗಣಿಸಲಾಗಿದೆ.’ //

    ಅದೇ ಅಮೇರಿಕಾದಲ್ಲಿ ಈ ಪದ್ದತಿಯನ್ನು ಅರಿಮೆ ಎಂದು ಕರೆಯುವವರೂ ಇದ್ದಾರೆ (ಕೆಳಗಿನ ಕೊಂಡಿಗಳನ್ನು ನೋಡಿ). ’ಅಮೇರಿಕ’ ಎಂದರೆ ಯಾವುದೋ ಒಂದು ಸಂಸ್ತೆಯಲ್ಲ 🙂

    http://www.homeopathy.org/
    http://www.homeopathyusa.org/
    http://en.wikipedia.org/wiki/Regulation_and_prevalence_of_homeopathy#United_States

    ಹಾಗೆಯೇ, ಯಾವುದು ಅನಯ್ತಿಕ ಯಾವುದು ನಯ್ತಿಕ ಎಂಬುದು ಬಹಳ ಕಡೆ (ಅಮೇರಿಕದಲ್ಲಂತೂ) ಯಾರ ಕಯ್ಯಲ್ಲಿ ಹಣವಿದೆ, ಯಾರ ಕಯ್ಯಲ್ಲಿ ಇಲ್ಲ ಎಂಬುದನ್ನು ಅವಲಂಬಿಸಿದೆ ಕೂಡ!

  2. Guru RT says:

    ನೀವು ಬಹುಶ: ಎಲ್ಲೋ ಕೆಲವು ಸುದ್ದಿ ಪತ್ರಿಕೆಗಳಲ್ಲಿ ಓದಿ ಮತ್ತು ಗೂಗಲ್ ನಲ್ಲಿ ಹುಡುಕಿ ಈ ಲೇಖನ ಬರೆದಂತೆ ಇದೆ. ನಮ್ಮ ಮನೆಯಲ್ಲಿ ನಾವು ಕಳೆದ ೨೦ ವರ್ಷಗಳಿಂದ ಹೋಮಿಯೋ ಪತಿಯನ್ನು ಉಪಯೋಗಿಸುತ್ತಿದ್ದೇವೆ ಮತ್ತು ನಾವೆಲ್ಲಾ ಆರೋಗ್ಯವಾಗೇ ಇದ್ದೇವೆ. ಕೆಲವರಿಗೆ ಈ ಪಧ್ಧತಿ ಅರ್ಥವಾಗಿಲ್ಲ ಎಂದು ಸಾರಾಸಗಟಾಗಿ ಅದನ್ನು ಅವೈಜ್ಞಾನಿಕ ಎನ್ನುವುದರಲ್ಲಿ ಹುರುಳಿಲ್ಲ.

    ನಿಮ್ಮ ಆಧುನಿಕ ಅಲೋಪತಿ ವೈದ್ಯ ಪಧ್ಧತಿ ಒಂದು ರೀತಿಯಲ್ಲಿ ರೋಗದ ಲಕ್ಷಣವನ್ನು ಮಾತ್ರ ಗುಣಪಡಿಸುತ್ತದೆಯೇ ಹೊರತು ರೋಗವನ್ನು ಆಮೂಲಾಗ್ರವಾಗಿಕಿತ್ತು ಎಸೆಯುವದಿಲ್ಲ.

    ಅರೆ ಬರೆ ಅರಿತು ಏನನ್ನೂ ಬರೆಯಬಾರದಾಗಿ ತಮ್ಮಲ್ಲಿ ವಿನಂತಿ.

    ಗುರುಪ್ರಸಾದ

    • Kiran Batni says:

      ಗುರು ಅವರೇ: ನಮ್ಮ ಮನೆಯಲ್ಲೂ ಹೋಮಿಯೋಪತಿಯಿಂದ ಬಹಳ ಒಳ್ಳೆಯದಾಗಿದೆ.

  3. ಕಿರಣ್,
    ಡಾ.ಶ್ರೀಪ್ರಕಾಶ್ ಅವರ ಹೊಣೆಗೇಡಿತನದ ಹೇಳಿಕೆಯಿಂದಾಗಿ, ಕರ್ನಾಟಕದಲ್ಲಿ ಹೊಮಿಯೋಪತಿ ಕಾಲೇಜುಗಳು ‘ಹದುಳ ಅರಿಮೆಗಳ ಕಲಿಕೆವೀಡಿನ’ ಅಡಿಯಲ್ಲೇ ಬರುವುದರಿಂದಾಗಿ ನಾನು ಅಮೇರಿಕಾದ ಮಾಂಜುಗ ಕೂಟದ ನಿಲುವಿಗೆ ಹೋಲಿಸಬೇಕಾಯಿತು.

    >>ಯಾವುದು ಅನಯ್ತಿಕ ಯಾವುದು ನಯ್ತಿಕ ಎಂಬುದು ಬಹಳ ಕಡೆ (ಅಮೇರಿಕದಲ್ಲಂತೂ) ಯಾರ ಕಯ್ಯಲ್ಲಿ ಹಣವಿದೆ, ಯಾರ ಕಯ್ಯಲ್ಲಿ ಇಲ್ಲ ಎಂಬುದನ್ನು ಅವಲಂಬಿಸಿದೆ ಕೂಡ!<<
    ದಿಟ! ಹೋಮಿಯೋಪತಿಯವರ ಕಯ್ಯಲ್ಲಿ ಕಾಸಿಲ್ಲದಿದ್ದಲ್ಲಿ, ಹೋಮಿಯೋಪತಿ ವಯ್ದಿಯನೊಬ್ಬ ಸೆನೆಟರ್ ಆಗಿರದೇ ಹೋಗಿದ್ದಲ್ಲಿ, FDA ಕಟ್ಟಲೆಗಳಲ್ಲಿ ಹೋಮಿಯೋಪತಿ ಅವ್ಶದಿಗಳಿಗಾಗಿ ತೂತುಗಳು ಇರುತ್ತಿರಲಿಲ್ಲ. ಆದುನಿಕೆ ಮಾಂಜುಗ ಪದ್ದತಿಯ ಅಳೆಗೋಲನ್ನೇ ಹೋಮಿಯೋಪತಿಗೆ ಅಳವಡಿಸಿದರೆ ಅಮೇರಿಕಾದ ತುಂಬಾ ಬಾರತದ ತುಂಬಾ ಹೋಮಿಯೋಪತಿ ಅವ್ಶದಿ ತಯಾರಿಸುವವರಿಗಾಗಿ ಮತ್ತು ಮಾಂಜುಗರಿಗಾಗಿ ಹೊಸ ಜಯ್ಲುಗಳನ್ನೇ ಕಟ್ಟಬೇಕಾಗುತ್ತದೆ! ಇಲ್ಲಾ ಅವರ ಆಸ್ಪತ್ರೆಗಳನ್ನೇ ಜಯ್ಲುಗಳಾಗಿ ಮಾರ್ಪಡಿಸಬೇಕಾಗುತ್ತದೆ! ಹೋಮಿಯೋಪತಿ ಅರಿಮೆಯಾಗಿದ್ದಲ್ಲು FDAನಲ್ಲಿ ಅದಕ್ಕಾಗಿ ತೂತುಗಳು ಇರಬೇಕಿರಲಿಲ್ಲ.
    ನೀವು ಕಳುಹಿಸಿರುವ ಹೋಮಿಯೋಪತಿಯವರ ಕೊಂಡಿಗಳನ್ನ ನಾನು ಗವ್ರವಿಸುವುದಿಲ್ಲ. ಅವರು ಅರಿಮೆಯ ಬಗ್ಗೆ ಮಾತಾಡುವುದು ಕೆಟ್ಟ ವಿದ್ಯಾರ್ತಿಯೊಬ್ಬ ಅರೆಬರೆ ನೆನಪಿನಲ್ಲಿರುವ ಕೆಲವು ಅರಿಮೆಯ ಪದಗಳನ್ನ ಸಿಕ್ಕಾಪಟ್ಟೆ ಪೋಣಿಸಿ ಹರಿಯಬಿಟ್ಟ ಹಾಗಿರುತ್ತದೆ. ಅದು ಹೇಗೆ ಅರಿಮೆಯೆಂದು ತಾವೇ ಹೇಳುವುದಾದರೆ ಕೇಳುತ್ತೇನೆ.

    • Kiran Batni says:

      ಸಿದ್ದರಾಜು: ಅರಿಮೆಯೆಂದರೆ ಏನೆಂದು ಮೊದಲು ಹೇಳಿಬಿಡಿ. ಚಿಕ್ಕದಾಗಿ.

  4. ಗುರು ಅವರೇ,
    >>ನೀವು ಬಹುಶ: ಎಲ್ಲೋ ಕೆಲವು ಸುದ್ದಿ ಪತ್ರಿಕೆಗಳಲ್ಲಿ ಓದಿ ಮತ್ತು ಗೂಗಲ್ ನಲ್ಲಿ ಹುಡುಕಿ ಈ ಲೇಖನ ಬರೆದಂತೆ ಇದೆ<>ನಮ್ಮ ಮನೆಯಲ್ಲಿ ನಾವು ಕಳೆದ ೨೦ ವರ್ಷಗಳಿಂದ ಹೋಮಿಯೋ ಪತಿಯನ್ನು ಉಪಯೋಗಿಸುತ್ತಿದ್ದೇವೆ ಮತ್ತು ನಾವೆಲ್ಲಾ ಆರೋಗ್ಯವಾಗೇ ಇದ್ದೇವೆ<>ಕೆಲವರಿಗೆ ಈ ಪಧ್ಧತಿ ಅರ್ಥವಾಗಿಲ್ಲ ಎಂದು ಸಾರಾಸಗಟಾಗಿ ಅದನ್ನು ಅವೈಜ್ಞಾನಿಕ ಎನ್ನುವುದರಲ್ಲಿ ಹುರುಳಿಲ್ಲ<>ನಿಮ್ಮ ಆಧುನಿಕ ಅಲೋಪತಿ ವೈದ್ಯ ಪಧ್ಧತಿ ಒಂದು ರೀತಿಯಲ್ಲಿ ರೋಗದ ಲಕ್ಷಣವನ್ನು ಮಾತ್ರ ಗುಣಪಡಿಸುತ್ತದೆಯೇ ಹೊರತು ರೋಗವನ್ನು ಆಮೂಲಾಗ್ರವಾಗಿಕಿತ್ತು ಎಸೆಯುವದಿಲ್ಲ<<
    ಇದು ತಪ್ಪು ತಿಳುವಳಿಕೆ. ಮೊದಲಾಗಿ 'ಆದುನಿಕೆ ಮಾಜರಿಮೆ' ತನ್ನನ್ನ ತಾನು ಅಲೋಪತಿ ಎಂದು ಕರೆದುಕೊಳ್ಳುವುದಿಲ್ಲ. ಎರಡನೆಯದಾಗಿ, ಆದುನಿಕ ಮಾಂಜರಿಮೆಯಲ್ಲಿ ಕಾಯಿಲೆಯ ಮೂಲಕ್ಕೇ ಕೊಡಲಿ ಹಾಕಿ ಗುಣಪಡಿಸಲಾಗುತ್ತದೆ (Empirical Treatment). ಕಾಲರಾಕ್ಕೆ ಕಾಲರದ ಬ್ಯಾಕ್ಟೀರಿಯಾಗೂ, ಸಕ್ಕರೆ ಕಾಯಿಲೆಗೆ ಸಕ್ಕರೆಯನ್ನು ಜೀವಕಣಗಳ ಒಳಗೆ ತೆಗೆದುಕೊಳ್ಳುವ ಏರ್ಪಾಟನ್ನೂ ಗುರಿಮಾಡಲಾಗುತ್ತದೆ. ಗುಣಪಡಿಸಲಾಗದ ಕಾಯಿಲೆಗಳನ್ನ ಗುಣಪಡಿಸಲಾಗದು ಎಂದೇ ಒಪ್ಪಿಕೊಳ್ಳಲಾಗುತ್ತದೆ. ಎತ್ತುಗೆಗೆ, ಸೀ.ಪಯ್ ರೋಗಕ್ಕೆ ಮದ್ದಿಲ್ಲ. (ಇಲ್ಲಿ ನೋಡಿ: http://tinyurl.com/bpcka98). ಆದ್ದರಿಂದ ರೋಗಿಯ ಜೀವನ ಮಟ್ಟವನ್ನ ಸುದಾರಿಸಲು ಕುತ್ತುಕುರುಹುಗಳಿಗೆ ಅವ್ಶದಗಳನ್ನ ಕೊಡಲಾಗುತ್ತದೆ. ಅದನ್ನ 'ಕುತ್ತುಕುರುಹುಗಳಿಗಾಗಿ ಮಾಂಜುಳ' (Symptomatic Treatment) ಎಂದೇ ಕರೆಯಲಾಗುತ್ತದೆ. ಆದುನಿಕ ಮಾಂಜರಿಮೆ ಏನು ಮಾಡುತ್ತದೋ ಅದನ್ನೇ ಹೇಳಿಕೊಳ್ಳುತ್ತದೆ. ಹೋಮಿಯೋಪತಿಯು ರೋಗಿಗಳ ಅಸಹಾಯಕತೆಯನ್ನು ಬಳಸಿಕೊಂಡು ಮೋಸ ಮಾಡುತ್ತದೆ.

  5. ಗುರು ಅವರೇ, (ಮೇಲಿನ ಮರುಮಾತಿನಲ್ಲಿ ನಾನು ಹೇಳಿದ್ದೆಲ್ಲವೂ ಬಂದಿಲ್ಲ. ಅದರ ಬದಳಾಗಿ ಇದನ್ನ ಓದಿಕೊಳ್ಳಿರಿ).
    “ನೀವು ಬಹುಶ: ಎಲ್ಲೋ ಕೆಲವು ಸುದ್ದಿ ಪತ್ರಿಕೆಗಳಲ್ಲಿ ಓದಿ ಮತ್ತು ಗೂಗಲ್ ನಲ್ಲಿ ಹುಡುಕಿ ಈ ಲೇಖನ ಬರೆದಂತೆ ಇದೆ”
    ಹವ್ದು!

    “ನಮ್ಮ ಮನೆಯಲ್ಲಿ ನಾವು ಕಳೆದ ೨೦ ವರ್ಷಗಳಿಂದ ಹೋಮಿಯೋ ಪತಿಯನ್ನು ಉಪಯೋಗಿಸುತ್ತಿದ್ದೇವೆ ಮತ್ತು ನಾವೆಲ್ಲಾ ಆರೋಗ್ಯವಾಗೇ ಇದ್ದೇವೆ”
    ಒಳ್ಳೆಯದು. ಆರೋಗ್ಯವಾಗೇ ಇರಿ. ಆದರೆ, ಹೋಮಿಯೋಪತಿಯವರು ಅವ್ಶದವೆಂದು ಕೊಡುವ ಅವ್ಶದದಲ್ಲಿ ಹಲವು ಬಾರಿ ಅವ್ಶದವೇ ಇರುವುದಿಲ್ಲ ಎಂದು ತಿಳಿದಿರಿ. ಕೆಲವು ಬಾರಿ ನೆಗಡಿಗೆ ಬಳಸುವ ಅವ್ಶದಗಳಲ್ಲಿ ಅತಿಯಾದ ಮಟ್ಟದಲ್ಲಿ ಜಿಂಕ್ ಬಳಸಿರುತ್ತಾರೆ. ಇದು ನಂಜೇರಿಸಬಹುದು. ಮತ್ತೆ ನಿಮ್ಮ ಮನೆಯಲ್ಲಿ ಹುಡುವ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ. ದಮ್ಮಯ್ಯ!

    “ಕೆಲವರಿಗೆ ಈ ಪಧ್ಧತಿ ಅರ್ಥವಾಗಿಲ್ಲ ಎಂದು ಸಾರಾಸಗಟಾಗಿ ಅದನ್ನು ಅವೈಜ್ಞಾನಿಕ ಎನ್ನುವುದರಲ್ಲಿ ಹುರುಳಿಲ್ಲ”
    ನನಗೆ ಹೋಮಿಯೋಪತಿ ಬಗ್ಗೆ ತಿಳಿವಿದೆ. ಅರಿಮೆಯ ಬಗ್ಗೆಯೂ ತಿಳಿವಿದೆ. ಹೋಮಿಯೋಪತಿ ಅರಿಮೆಯಲ್ಲ.

    “ನಿಮ್ಮ ಆಧುನಿಕ ಅಲೋಪತಿ ವೈದ್ಯ ಪಧ್ಧತಿ ಒಂದು ರೀತಿಯಲ್ಲಿ ರೋಗದ ಲಕ್ಷಣವನ್ನು ಮಾತ್ರ ಗುಣಪಡಿಸುತ್ತದೆಯೇ ಹೊರತು ರೋಗವನ್ನು ಆಮೂಲಾಗ್ರವಾಗಿಕಿತ್ತು ಎಸೆಯುವದಿಲ್ಲ”
    ಇದು ತಪ್ಪು ತಿಳುವಳಿಕೆ. ಮೊದಲಾಗಿ ‘ಆದುನಿಕೆ ಮಾಜರಿಮೆ’ ತನ್ನನ್ನ ತಾನು ಅಲೋಪತಿ ಎಂದು ಕರೆದುಕೊಳ್ಳುವುದಿಲ್ಲ. ಎರಡನೆಯದಾಗಿ, ಆದುನಿಕ ಮಾಂಜರಿಮೆಯಲ್ಲಿ ಕಾಯಿಲೆಯ ಮೂಲಕ್ಕೇ ಕೊಡಲಿ ಹಾಕಿ ಗುಣಪಡಿಸಲಾಗುತ್ತದೆ (Empirical Treatment). ಕಾಲರಾಕ್ಕೆ ಕಾಲರದ ಬ್ಯಾಕ್ಟೀರಿಯಾಗೂ, ಸಕ್ಕರೆ ಕಾಯಿಲೆಗೆ ಸಕ್ಕರೆಯನ್ನು ಜೀವಕಣಗಳ ಒಳಗೆ ತೆಗೆದುಕೊಳ್ಳುವ ಏರ್ಪಾಟನ್ನೂ ಗುರಿಮಾಡಲಾಗುತ್ತದೆ. ಗುಣಪಡಿಸಲಾಗದ ಕಾಯಿಲೆಗಳನ್ನ ಗುಣಪಡಿಸಲಾಗದು ಎಂದೇ ಒಪ್ಪಿಕೊಳ್ಳಲಾಗುತ್ತದೆ. ಎತ್ತುಗೆಗೆ, ಸೀ.ಪಯ್ ರೋಗಕ್ಕೆ ಮದ್ದಿಲ್ಲ. (ಇಲ್ಲಿ ನೋಡಿ: http://tinyurl.com/bpcka98). ಆದ್ದರಿಂದ ರೋಗಿಯ ಜೀವನ ಮಟ್ಟವನ್ನ ಸುದಾರಿಸಲು ಕುತ್ತುಕುರುಹುಗಳಿಗೆ ಅವ್ಶದಗಳನ್ನ ಕೊಡಲಾಗುತ್ತದೆ. ಅದನ್ನ ‘ಕುತ್ತುಕುರುಹುಗಳಿಗಾಗಿ ಮಾಂಜುಳ’ (Symptomatic Treatment) ಎಂದೇ ಕರೆಯಲಾಗುತ್ತದೆ. ಆದುನಿಕ ಮಾಂಜರಿಮೆ ಏನು ಮಾಡುತ್ತದೋ ಅದನ್ನೇ ಹೇಳಿಕೊಳ್ಳುತ್ತದೆ. ಹೋಮಿಯೋಪತಿಯು ರೋಗಿಗಳ ಅಸಹಾಯಕತೆಯನ್ನು ಬಳಸಿಕೊಂಡು ಮೋಸ ಮಾಡುತ್ತದೆ.

  6. Kiran Batni says:

    // ಹೋಮಿಯೋಪತಿಯವರು ಅವ್ಶದವೆಂದು ಕೊಡುವ ಅವ್ಶದದಲ್ಲಿ ಹಲವು ಬಾರಿ ಅವ್ಶದವೇ ಇರುವುದಿಲ್ಲ //

    ತಪ್ಪು. ಅದರಲ್ಲಿ ಅವ್ಶದವೆಂದರೆ ಏನೆಂದು ನೀವು ತಿಳಿದುಕೊಂಡಿರುವಿರೋ, ಅದು ನೀವು ಕಾಣಲು ಬಳಸುವ ಕಣ್ಣುಗಳಿಗೆ ಕಾಣಿಸುತ್ತಿಲ್ಲ, ಅಶ್ಟೇ.

  7. Kiran Batni says:

    // ಆದುನಿಕ ಮಾಂಜರಿಮೆಯಲ್ಲಿ ಕಾಯಿಲೆಯ ಮೂಲಕ್ಕೇ ಕೊಡಲಿ ಹಾಕಿ ಗುಣಪಡಿಸಲಾಗುತ್ತದೆ //

    ತಪ್ಪು. ಕಾಯಿಲೆ ಎಂದು ಯಾವುದನ್ನು ಅದು ತಿಳಿದಿರುತ್ತದೆಯೋ ಅದರ, ಮೂಲ ಎಂದು ಯಾವುದನ್ನು ಅದು ತಿಳಿದಿರುತ್ತದೆಯೋ ಅದನ್ನು, ಕೊಡಲಿ ಎಂದು ಯಾವುದನ್ನು ತಿಳಿದಿರುತ್ತದೆಯೋ ಅದರಿಂದ, ಗುಣಪಡಿಸುವಿಕೆ ಎಂದು ಯಾವುದನ್ನು ತಿಳಿದಿರುತ್ತದೆಯೋ ಅದನ್ನು ಮಾಡಲಾಗುತ್ತದೆ.

  8. ಕಿರಣ್,
    ಅರಿಮೆಯೆಂದರೆ ಏನು ಎಂದು ಚಿಕ್ಕದಾಗಿ ಹೇಳುವುದು ತೊಡರಾದುದು. ಆದರೂ ಒಂದು ಕಯ್ ನೋಡುತ್ತೇನೆ. “ಅರಿಮೆಯು ಅರಿವನ್ನು ಬೆಳೆಸುವ ಮತ್ತು ಅಚ್ಚುಕಟ್ಟು ಮಾಡುವ ಬಗೆ. ಅಂತಾ ಅರಿವನ್ನ ಅಳೆಯಬಲ್ಲ, ಪರೀಕ್ಶಿಸಬಲ್ಲ ಹೇಳಿಕೆಗಳಿಂದ ಹಿಡಿದಿಡಬಹುದು, ಹೇಳಬಹುದು”.
    ನಾನು ಮೇಲಿನ ಅಂಕಣದಲ್ಲಿ ಮತ್ತು ಮಾರುತ್ತರಗಳಲ್ಲಿ ಬಳಸಿರುವ ‘ಅವ್ಶದ/ಮಾಂಜಳ’ ಬಹಳ ಸುಲಬವಾದುದು. ಅದು ‘Pharmacological Drug’. ಕನ್ನಡದಲ್ಲಿ “ಮದ್ದರಿಮೆಯ ಅವ್ಶದ/ಮದ್ದರಿಮೆಯ ಮಾಂಜಳ/ಮದ್ದರಿಮೆಯ ಮದ್ದು” ಅನ್ನಬಹುದು. ಒಂದು ರೋಗವನ್ನ ಗುರಿಯಾಗಿಸಿಕೊಂಡು ಅದನ್ನು ಕೊಡಲಾಗುತ್ತದೆ. ರೋಗಿಯು ಸೇವಿಸುತ್ತಾನೆ. ಹೋಮಿಯೋಪತಿ ಬಗ್ಗೆ ಮಾತಾಡುವಾಗ ಮದ್ದಿನ ಇನ್ನೂ ವಿಸ್ತಾರವಾದ ವಾಕ್ಯಾನದ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ, ಹೋಮಿಯೋಪತಿಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು, ಸತ್ತ ವಯ್ರಸ್ಗಳು, ಲಸಿಕೆಗಳು, ಕುಯ್ಯಾರಯ್ಕೆ ಮುಂತಾದವನ್ನ ಬಳಸುವುದಿಲ್ಲ. ಅಲ್ಲಿರುವುದೆಲ್ಲಾ ರೋಗಿಯು ಸೇವಿಸುವಂತದ್ದೆ. ಆದರೆ ಅವರು ಒಂದು ರೋಗಕ್ಕೆ ಮದ್ದು ಎಂದು ಕೊಡುವ ಮದ್ದಿನಲ್ಲಿ ಮದ್ದೇ ಇರುವುದಿಲ್ಲ. ಸಕ್ಕರೆಯ ಚೂರು, ನೀರು, ಹೆಂಡ ಮುತಾದುವು ಮಾತ್ರ ಇರುತ್ವೆ. ಅವರು ಇನ್ಸುಲಿನ್ ಎಂದು ಕೊಡುವ ಅವ್ಶದದಲ್ಲಿ ಇನ್ಸುಲಿನ್ ಇರುವುದಿಲ್ಲ. (ಅವರು ಇನ್ಸುಲಿನ್ ಕೊಡುವುದೂ ತಪ್ಪು. ಅವರಿಗೆ ಆ ಪರಿಣಿತಿ ಇರುವುದಿಲ್ಲ). ನೀರು ಮಾತ್ರ ಇರುತ್ತದೆ. ಇನ್ಸುಲಿನ್ ಬಾಯಿಂದ ತೆಗೆದುಕೊಂಡರೆ ರಕ್ತಕ್ಕೆ ಹತ್ತುವುದಿಲ್ಲ. ಹೊಟ್ಟೆ ಮತ್ತು ಕರಳುಗಳಲ್ಲಿ ಅರಗಿಹೊಗುತ್ತದೆ. ನಾನು ಇನ್ಸುಲಿನ್ ಇಲ್ಲವೇ ಇನ್ಯಾವುದೇ ಮದ್ದಿನ ಪ್ರಮಾಣವನ್ನ ಆದುನಿಕ ಪುರುಳರಿಮೆಯ ಅಡಿಪಾಯದಲ್ಲಿ ಮಾಡಿದ ಯಂತ್ರಗಳನ್ನ ಬಳಸಿ ಅಳೆಯಬಲ್ಲೆ. ಇದು ಅವ್ಶದವನ್ನ ನಾನು ನೋಡುವ ಕಣ್ಣು.

    ಕಾಲರ ಒಂದು ಕಾಯಿಲೆ. ಅದರ ಮೂಲ ವಿಬ್ರಿಯೋ ಕಾಲೆರೆ ಎಂಬ ಬ್ಯಾಕ್ಟೀರಿಯಾ. ರೋಗದ ಕುರುಹುಗಳು ವಾಂತಿ, ಬೇದಿ, ನೀರಿಳಿತ ಮುಂತಾದುವು. ರೋಗದ ಮೂಲಕ್ಕೆ ಮತ್ತು ಕುರುಹುಗಳಿಗೆ ಎರಡಕ್ಕೂ ಮದ್ದು ಕೊಡಬೇಕಾಗುತ್ತದೆ. ಏಕೆಂದರೆ ಬ್ಯಾಕ್ಟೀರಿಯಾವನ್ನ ಪೂರ್ತಿ ಕೊಂದುಹಾಕಿದರೂ ರೋಗಿಯು ನೀರಿಳಿತದಿಂದ ಸಾಯಬಲ್ಲ. ಆದ್ದರಿಂದ ನೀರಿನ ಅಂಶವನ್ನೂ ಕೊಡಬೇಕಾಗುತ್ತದೆ. ಎಲ್ಲಾ ಅವ್ಶದಗಳನ್ನ ಕೊಟ್ಟಮೇಲೆ ರೋಗಿಯ ಮಯ್ಯಲ್ಲಿ ಬ್ಯಾಕ್ಟೀರಿಯಾ ಇರುವುದಿಲ್ಲ, ವಾಂತಿ ಬೇದಿ ನಿಂತಿರುತ್ತದೆ, ಮಯ್ಯಲ್ಲಿ ಸರಿಯಾದ ಅಳತೆಯಲ್ಲಿ ನಿರಾಡುತ್ತಿರುತ್ತದೆ ಮತ್ತು ರೋಗಿಯು ತನ್ನ ದಿನನಿತ್ಯದ ಕೆಲಸವನ್ನ ಮೊದಲಿನಂತೆಯೇ ಮಾಡಬಲ್ಲವನಾಗಿರುತ್ತಾನೆ. ಆ ರೋಗದಿಂದ ಅವನಿಗ್ಯಾವ ಕುತ್ತೂ ಇರುವುದಿಲ್ಲ.

  9. ಗುರು ಅವರೇ,
    ಗೂಗಲ್ ಮಾಡಿ ತೆಗೆದಿದ್ದು. ನಗೆ ದಿವಸದ ಮಾರನೇ ದಿನದ ನಗೆ ತೆರಪಿಗಾಗಿ!: http://www.youtube.com/watch?v=HMGIbOGu8q0

    • Kiran Batni says:

      ನಗೆತಿಟ್ಟ ಚೆನ್ನಾಗಿದೆ! ಆದರೆ ಅದರಲ್ಲಿರುವ ರೋಗಿಯ ಸ್ತಿತಿಯನ್ನು ಸರಿಪಡಿಸುತ್ತೇವೆ ಎಂದು ಯಾವ ಹೋಮಿಯೋಪತಿಯ ಡಾಕ್ಟರೂ ಹೊರಡುವುದಿಲ್ಲ. ಅದಕ್ಕೆ ಅಲೋಪತಿಯ ಅವ್ಶದಗಳನ್ನೇ ಅವರೂ ಕೊಡುತ್ತಾರೆ ಇಲ್ಲವೇ ಕೊಡಿಸುತ್ತಾರೆ. ಒಮ್ಮೆ ಹೋಮಿಯೋಪತಿ ಎಂಬುದು ಅರಿಯಮೆ ಎಂಬ ಅನಿಸಿಕೆ ತಲೆಯಲ್ಲಿ ಕುಳಿತುಬಿಟ್ಟರೆ ಈ ರೀತಿಯ ಆಡಿಕೊಳ್ಳುವಿಕೆ ಸುಲಬ.

  10. Kiran Batni says:

    // “ಅರಿಮೆಯು ಅರಿವನ್ನು ಬೆಳೆಸುವ ಮತ್ತು ಅಚ್ಚುಕಟ್ಟು ಮಾಡುವ ಬಗೆ. ಅಂತಾ ಅರಿವನ್ನ ಅಳೆಯಬಲ್ಲ, ಪರೀಕ್ಶಿಸಬಲ್ಲ ಹೇಳಿಕೆಗಳಿಂದ ಹಿಡಿದಿಡಬಹುದು, ಹೇಳಬಹುದು”. //

    ತಪ್ಪು. ಇದರಲ್ಲಿ ’ಅಳೆಯಬಲ್ಲ’ ಎಂಬುದು ನಿಮ್ಮ ತೂರಿಕೆ. ’ಈ ಗಿಡ ಬೀಜವಾಗಿತ್ತು’ ಎಂಬ ಹೇಳಿಕೆಯನ್ನು ಗಮನಿಸಿ. ಇದಕ್ಕೆ ಅರಿಮೆಯ ಅಡಿಪಾಯ ಇದೆ, ಆದರೆ ಇದರಲ್ಲಿ ಯಾವ ’ಅಳತೆ’ಯೂ ಇಲ್ಲ. ಅಳತೆ ಮಾಡಲು ಸಲಕರಣೆಗಳಿವೆ ಎಂದು ಪ್ರತಿಯೊಂದನ್ನೂ ಅಳೆಯಲು ಮನುಶ್ಯ ಹೊರಡಬಹುದು, ಅಶ್ಟೆ.

    ನಾನು ಇನ್ನೂ ಎರಡು ಸವಾಲುಗಳನ್ನು ಹಾಕಿದ್ದೆ. ಅವುಗಳಿಗೆ ಆಮೇಲೆ ಬರೋಣ.

  11. Guru RT says:

    ಸಿದ್ದರಾಜುರವರೇ, ತಮ್ಮ ಉತ್ತರಕ್ಕೆ ಧನ್ಯವಾದಗಳು.

    ಅಂದ ಹಾಗೆ ಕೆಲ ಸಾರಿ ನಾವು ಮನೆಯಲ್ಲಿಯೇ ಔಷಧವನ್ನು ತಯಾರಿಸಿಕೊಳ್ಳುತ್ತೇವೆ. ಆದ್ದರಿಂದ ಹೋಮಿಯೋಪತಿಯಲ್ಲಿ ಕೆಲ ಸಾರಿ ಔಷಧವೇ ಇರುವುದಿಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ.

    ಅಂದಹಾಗೆ ನಾವು ಈ ಔಷಧವನ್ನು ಕೇವಲ ಮನುಷ್ಯರ ಮೇಲೆ ಮಾತ್ರ ಬಳಸಿಲ್ಲ ಬದಲಾಗಿ ಪಕ್ಷಿ ಪ್ರಾಣಿಗಳ ಮೇಲೋ ಬಳಸಿದ್ದೇವೆ. ಒಮ್ಮೆ ಕೀಟನಾಶಕದಿಂದ ರೋಗಗ್ರಸ್ಥವಾದ ನವಿಲಿಗೆ arsenic album ಎನ್ನುವ ಅವ್ಶಧದಿಂದ ಸಂಪೂರ್ಣವಾಗಿ ಗುಣವಾಗಿ ಎರಡೇ ದಿನದಲ್ಲಿ ಮೊದಲಿನಂತಾಯಿತು. ಇದೇ ಅವ್ಶಧವನ್ನು ಬುಲ್ ಬುಲ್ ಹಕ್ಕಿಗಳ ಮೇಲೋ ಪ್ರಯೋಗಿಸಲಾಗಿದೆ.

    ಅಲೋಪತಿಯಲ್ಲಿ ರೋಗವನ್ನು ಬೇರು ಸಮೇತ ಕಿತ್ತು ಹಾಕುವುದಿಲ್ಲ ಎನ್ನುವದನ್ನು ಕೆಲ ಉದಾಹರಣೆಗಳೊಂದಿಗೆ ಹೇಳಬಯಸುತ್ತೇನೆ. ಈ ವೈದ್ಯ ಪಧ್ಧತಿಯಲ್ಲಿ ಪಿತ್ತೋದ್ರೇಕವಾದರೆ ಅದಕ್ಕೆ ಕ್ಷಾರೀಯ ಔಷಧವನ್ನು ಕೊಡಲಾಗುತ್ತದೆ. ಇದು ಪಿತ್ತವನ್ನು ಕೆಲ ಕಾಲದ ಮಟ್ಟಿಗೆ ಮಾತ್ರ ತಡೆಯಬಲ್ಲದು. ಇದೇ ರೀತಿ ಚರ್ಮ ರೋಗಗಳಲ್ಲೂ ಕೇವಲ ಲಕ್ಷಣಗಳನ್ನು ಮಾತ್ರ ಗುಣಪಡಿಸಲಾಗುತ್ತದೆ. ಇವಕ್ಕೆ ಹೋಮೊಯೊಪತಿ ಮತ್ತು ಆಯುರ್ವೇದದಲ್ಲಿ ಒಳ್ಳೆಯ ಔಷಧಿಗಳಿವೆ.

    ಇನ್ನೊಂದು ಮುಖ್ಯ ಅಂಶವೆಂದರೆ ಹೋಮಿಯೋಪತಿಯಲ್ಲಿ ರೋಗವನ್ನು ಮತ್ತೆಹಚ್ಚುವಿಕೆ ಮತ್ತು ಔಷಧದ ಆಯ್ಕೆ ಬಹುಮುಖ್ಯ. ಇಬ್ಬರು ಬೇರೆ ಬೇರೆ ವ್ಯಕ್ತಿಗಳಿಗೆ ನೆಗಡಿಯಾಗಿದ್ದರೆ ಅವರಿಗೆ ಒಂದೇ ಔಷಧವನ್ನು ಕೊಡಲಾಗದು. ಅವರ ವಯಕ್ತಿಕ ದೇಹಸ್ಥಿತಿಯನ್ನು ಅರಿತು ಅದಕ್ಕೆ ತಕ್ಕಂತೆ ಔಷಧವನ್ನು ಕೊಡಲಾಗುತ್ತದೆ. ಆದ್ದರಿಂದ ಯಾವಾಗಲೂ ನುರಿತ ವೈದ್ಯರನ್ನುಕಾಣುವುದರಿಂದ ಉತ್ತಮ ಮತ್ತು ನಿಖರ ಫಲಿತಾಂಶದ ಸಾಧ್ಯತೆ ಹೆಚ್ಚಾಗಿರುತ್ತದೆ.

    ತಾವು ಒಳ್ಳೆಯ ವೈದ್ಯರನ್ನು ಕಂಡದ್ದೇ ಆದಲ್ಲಿ ಫಲಿತಾಂಶ ಬಹುಪಾಲು ಖಚಿತ

    -ಗುರು

  12. Guru RT says:

    ಅಂದಹಾಗೆ ತಾವು ಹಾಕಿದ ನಗೆ’ಹೊನಲಿ’ನ ಲಿಂಕ್ ಅನ್ನು ಆಮೇಲೆ ನೋಡುತ್ತೇನೆ. ಮತ್ತು ನಾವು ಕೆಲಸಾರಿ ಅಲೋಪತಿ ಔಷಧವನ್ನೂ ತೆಗೆದುಕೊಳ್ಳುತ್ತೇವೆ ಮತ್ತು ಮನೆಯಲ್ಲಿ ಮಕ್ಕಳಿಗೆ ಲಸಿಕೆಯನ್ನೂ ಕೊಡಿಸುತ್ತೇವೆ. ತಮ್ಮ ಕಾಳಜಿಗೆ ಧನ್ಯವಾದಗಳು 🙂

  13. “ಆದರೆ ಅದರಲ್ಲಿರುವ ರೋಗಿಯ ಸ್ತಿತಿಯನ್ನು ಸರಿಪಡಿಸುತ್ತೇವೆ ಎಂದು ಯಾವ ಹೋಮಿಯೋಪತಿಯ ಡಾಕ್ಟರೂ ಹೊರಡುವುದಿಲ್ಲ.”
    ಏಕೆ ಹೇಳಿ? ತನ್ನಿಂತಾನೇ ವಾಸಿ ಆಗುವ, ವಾಸಿ ಆಗಿದೆಯೋ ಇಲ್ಲವೋ ಎಂದು ಸುಲಬವಾಗಿ ಹೇಳಲಾಗದ ‘ರೋಗಗಳಿಗೆ’ ಮಾತ್ರ ಏಕೆ ಅವ್ಶದ ಕೊಡುತ್ತಾರೆ? ಅಶ್ಟೆ ಅಲ್ಲ. ಈಗೀಗ ಹೋಮಿಯೋಪತಿಯವರಿಗೆ ಹೆಚ್ಚೆಚ್ಚು ದಯ್ರಿಯ ಬರುತ್ತಿದೆ. ಇಲ್ಲಿ ನೋಡಿ. ‘ತಲೆಪೆಟ್ಟಿನ ಕೊಂಚ-ಗಾಯ’ಕ್ಕೆ (ದೊಡ್ದಗಾಯಕ್ಕಲ್ಲ) (mild traumatic head injury) ಹೋಮಿಯೋಪತಿಯವರು ಅವ್ಶದ ಕೊಡುತ್ತಾರೆ! http://www.naturalnews.com/026057_injury_homeopathic_medicines.html ಇದನ್ನ ನಂಬಬೇಡಿ. ತಲೆ ಪೆಟ್ಟಾದವರಿಗೆ ಹೋಮಿಯೋಪತಿ ಅವ್ಶದವನ್ನ ಕೊಡಿಸಬೇಡಿ ಎಂದು ಕೇಳಿಕೊಳ್ಳುತ್ತೇನೆ.

    “ಅದಕ್ಕೆ ಅಲೋಪತಿಯ ಅವ್ಶದಗಳನ್ನೇ ಅವರೂ ಕೊಡುತ್ತಾರೆ ಇಲ್ಲವೇ ಕೊಡಿಸುತ್ತಾರೆ.”
    ಆದುನಿಕ ಅವ್ಶದಗಳನ್ನ ಹೋಮಿಯೋಪತಿಯವರು ಕೊಡುವುದು ಅನಯ್ತಿಕ. ಕೆಲವರು ಹೋಮಿಯೋಪತಿ ಅವ್ಶದ ಎಂದು ಹೇಳಿ ಆದುನಿಕ ಅವ್ಶದಗಳನ್ನ ಕಲಬೆರಕೆ ಮಾಡಿ ಕೊಡುತ್ತಾರೆ ಎಂಬ ಆರೋಪವಿದೆ. ಅದು ದಿಟವಾದಲ್ಲಿ ಅದೊಂದು ಅಪರಾದ.
    ನಿಮ್ಮ ಇನ್ನೂ ಎರಡು ಸವಾಲುಗಳು ಯಾವುವು?

  14. ಕಿರಣ್,
    “ತಪ್ಪು. ಇದರಲ್ಲಿ ’ಅಳೆಯಬಲ್ಲ’ ಎಂಬುದು ನಿಮ್ಮ ತೂರಿಕೆ. ’ಈ ಗಿಡ ಬೀಜವಾಗಿತ್ತು’ ಎಂಬ ಹೇಳಿಕೆಯನ್ನು ಗಮನಿಸಿ. ಇದಕ್ಕೆ ಅರಿಮೆಯ ಅಡಿಪಾಯ ಇದೆ, ಆದರೆ ಇದರಲ್ಲಿ ಯಾವ ’ಅಳತೆ’ಯೂ ಇಲ್ಲ. ಅಳತೆ ಮಾಡಲು ಸಲಕರಣೆಗಳಿವೆ ಎಂದು ಪ್ರತಿಯೊಂದನ್ನೂ ಅಳೆಯಲು ಮನುಶ್ಯ ಹೊರಡಬಹುದು, ಅಶ್ಟೆ.” ಅಂದಿರಿ….
    ಅಳೆದು ಪರೀಕ್ಶೆ ಮಾಡಲಾಗದ ಯಾವುದೇ ಅರಿಮೆಯ ಹೇಳಿಕೆಗಳನ್ನ ನಾ ಕಾಣೆ. “ಈ ಗಿಡ ಬೀಜವಾಗಿತ್ತು” ಎಂಬುದು ಅರಿಮೆಯ ಹೇಳಿಕೆ ಅಲ್ಲ. ಅದು ಯಾವ ಗಿಡ ಎಂದು ಹೆಸರಿಸಬೇಕು. ಯಾವ ಎಡೆಯಲ್ಲಿದೆ ಎಂದು ತಿಳಿಸಬೇಕು. ಬೀಜವಾಗದೆ ಹುಟ್ಟಿ ಬೆಳೆವ ಗಿಡಗಳೂ ಇವೆ. ಶ್ರೀಲಂಕಾದಲ್ಲಿರುವ ಬೋದಿ ಮರ (ಅರಳೀಮರ)ದ ಕಡೆ ಕಯ್ ತೋರಿಸಿ ನೀವು ‘ಈ ಮರ ಬೀಜವಾಗಿತ್ತು’ ಎಂದು ಹೇಳುವುದೂ ಗೊಂದಲದ ಹೇಳಿಕೆ. ಇತಿಯಾಸದ ಮಾಹಿತಿಯ ಪ್ರಕಾರ ಅದು ಬೋದಗಯಾದ ಅರಳೀಮರದ ಕೊಂಟಿನಿಂದ (ರೆಂಬೆ) ಹುಟ್ಟಿದ್ದು. ಈ ಮರ ಬೀಜವಾಗಿತ್ತು / ಈ ಮರ ಕೊಂಟಾಗಿತ್ತು ಎಂಬುದ ತೀರ್ಮಾನಿಸಲು ಹಲವಾರು ಅಳತೆಗೋಲುಗಳಿವೆ. ಇತಿಯಾಸದ ಅಳತೆಗೋಲುಗಳು (ಅವುಗಳ ನಂಬಲರ್ಹತೆಯ ಅಳತೆಗೋಲು), ಮರಗಿಡದರಿಮೆಯ ಅಳತೆಗೋಲುಗಳೂ ಇರುತ್ತವೆ.
    ಅದು ನೀವೇ ಹಾಕಿ ಬೆಳೆಸಿದ ಗಿಡವಾದರೆ ನಿಮ್ಮ ಸಾಕ್ಶಿಯೇ ಅಳತೆ. ನೀವು ಈ ವಿಶಯದಲ್ಲಿ ನಂಬಲರ್ಹರಾಗಿದ್ದಲ್ಲಿ. ಅರಕೆಗಾರರ ಅರಕೆಗಳ ನಂಬಲರ್ಹತೆಗೂ ಅಳತೆಗೊಲುಗಳಿವೆ.
    ಅರಿಮೆ ತೀರಾ ಸರಳ. ನೀವು ನಿಮ್ಮ ಹಿತ್ತಲಿಗೆ ನನ್ನನ್ನ ಕರೆದುಕೊಂಡು ಹೋಗಿ ಈ ಗಿಡ ಬೀಜವಾಗಿತ್ತು ಅಂದರೆ ನಾನು ಸರಿ ಕಿರಣ್ ಅನ್ನುತ್ತೇನೆ. ಅದು ದೊಡ್ಡ ಹೇಳಿಕೆ ಅಲ್ಲ. ಅದು ಅರಿಮೆಯ ಹೇಳಿಕೆಯೇ ಇಲ್ಲವೇ, ಇದಕ್ಕೆ ಇವರು ಬಳಸಿದ ಅಳತೆಗೋಲು ಯಾವುವು, ಸರಿಯಾದವೇ ಎಂದು ಯೋಚಿಸುತ್ತಾ ಕೂರಬೇಕಿಲ್ಲ. ಆದರೆ, ‘ಬೀದಿಯಲ್ಲಿರುವ ನಾಯಿ ಬೀಜವಾಗಿತ್ತು’ ಅಂದರೆ ಅದು ಅರಿಮೆಯಲ್ಲ ಅನ್ನುತ್ತೇನೆ. ಹೋಮಿಯೋಪತಿಯ ಹೇಳಿಕೆ, ಆಚರಣೆಗಳೂ ಹಾಗೆಯೇ ಅರಿಮೆಯಲ್ಲ.

    • Kiran Batni says:

      // ಯಾವ ಗಿಡ ಎಂದು ಹೆಸರಿಸಬೇಕು. ಯಾವ ಎಡೆಯಲ್ಲಿದೆ ಎಂದು ತಿಳಿಸಬೇಕು. //

      ಇದನ್ನು ಬಿಡಿಸಿ ಹೇಳಬೇಕಿರಲಿಲ್ಲ ಎಂದುಕೊಂಡಿದ್ದೆ. ಇರಲಿ. ಆದರೆ ಇದರಲ್ಲೂ ಅಳತೆ ಇಲ್ಲ.

      // ಅಳೆದು ಪರೀಕ್ಶೆ ಮಾಡಲಾಗದ ಯಾವುದೇ ಅರಿಮೆಯ ಹೇಳಿಕೆಗಳನ್ನ ನಾ ಕಾಣೆ. //

      ‘ಕಡಲಿನ ನೀರು ಉಪ್ಪುಪ್ಪು.’
      ’ಮಂಜು ಕರಗಿದರೆ ನೀರಾಗುತ್ತದೆ.’
      ’ಬೆಂಕಿ ಬಿಸಿ.’
      ’ಬಿಸಿಲಲ್ಲಿ ಬಟ್ಟೆ ಒಣಗುತ್ತದೆ.’
      ’ಬ್ಯಾಟರಿ ಇಲ್ಲದೆ ಮೊಬಯ್ಲು ಕೆಲಸ ಮಾಡುವುದಿಲ್ಲ.’

  15. ಅಳತೆಯಿದೆ. ಮೇಲೆ ತೋರಿಸಿದ್ದೇನೆ ನೋಡಿ.

    “ಕಡಲಿನ ನೀರು ಉಪ್ಪುಪ್ಪು” ಅಳೆಯಲಾಗದು ಅಂದಿರಿ…
    ನೀವೇಳಿದ್ದರ ಅರ್ತ ‘ಮಂದಿಗೆ ಕಡಲ ನೀರು ಉಪ್ಪು ಅನಿಸುತ್ತದೆ’ ಎಂದೇ ಅಂದುಕೊಳ್ಳುತ್ತೇನೆ. (ತಿಮಿಂಗಲಕ್ಕೆ ಅದು ಉಪ್ಪಲ್ಲ)
    ನಿಮ್ಮ ಹೇಳಿಕೆಯನ್ನ ಅಳೆದು ತೂಗಿ ಪರೀಕ್ಶಿಸಬಹುದು! ‘Randomized double blind trial’ ಮೂಲಕ. ನೂರು ಜನರನ್ನ ಕೂಡಿ ಹಾಕಿ, ಕಣ್ಣಿಗೆ ಬಟ್ಟೆ ಕಟ್ಟಿ ಅಯ್ವತ್ತು ಮಂದಿಗೆ ಕಡಲ ನೀರನ್ನೂ, ಇನ್ನಯ್ವತ್ತು ಮಂದಿಗೆ ನದಿ ನೀರನ್ನೂ ರುಚಿ ನೋಡುವಂತೆ ಹೇಳಬೇಕು. ಯಾವ ನೀರು ಎಲ್ಲಿಯದು ಎಂದು ಅವರಿಗೆ ಹೇಳಬಾರದು. ಯಾರ್ಯಾರು ಎಷ್ಟು ಮಂದಿ ನೀರನ್ನು ಉಪ್ಪು ಎನ್ನುತ್ತಾರೆ, ಯಾರ್ಯಾರು ಎಶ್ಟು ಮಂದಿ ನೀರನ್ನು ಸಿಹಿ ಅನ್ನುತ್ತಾರೆ ಎಂದು ಬೇರೊಬ್ಬರು ಬರೆದುಕೊಳ್ಳಬೇಕು. ಆಮೇಲೆ ‘ಕಡಲ ನೀರು ಕುಡಿದವರನ್ನೂ’ ‘ನೀರು ಉಪ್ಪು ಅಂದವರನ್ನೂ’ ತಾಳೆ ಹಾಕಿ ಅಂಕಿಯರಿಮೆ ಬಳಸಿ ಲೆಕ್ಕ ಹಾಕಬೇಕು. ಅಂಕಿಯರಿಮೆಯ ತಕ್ಕ ಸಲಕರಣೆ (Statistical tool) ಬಳಸಿ ಲೆಕ್ಕ ಹಾಕಿದ ಮೇಲೆ, p<or=0.05 ಇದ್ದಲ್ಲಿ 'ಮಂದಿಗೆ ಕಡಲಿನ ನೀರು ಉಪ್ಪು ಅನಿಸುತ್ತದೆ' ಎಂದು ತೀರ್ಮಾನಿಸಬಹುದು. ಅರಿಮೆಗಾರರು 'ಕಡಲ ನೀರು ಉಪ್ಪುಪ್ಪು' ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಏಕೆಂದರೆ ಅದು ಎಲ್ಲರಿಗೂ ಗೊತ್ತಿರುವ ವಿಚಾರ. 'ಕಡಲ ನೀರು ಸಿಹಿ' ಅಂದಾಗ ಅದು ಅರಿಮೆಯಲ್ಲ ಅನ್ನಬೇಕಾಗುತ್ತದೆ. (ಹಾಗೆನ್ನುವವನು ರೋಗಿಯಾಗಿರದಿದ್ದಲ್ಲಿ). Randomized double blind trial ಮಾಡಿ ನಿರೂಪಿಸಿ ಎಂದು ಕೇಳಬೇಕಾಗುತ್ತದೆ. Randomized double blind trial ಅನ್ನು ಪಾಸು ಮಾಡದ ಅವ್ಶದಗಳು ಮಾರುಕಟ್ಟೆಗೆ ಬರಲು ಆರಂಬಿಸಿದರೆ ಇಂದಿನ ನಾಗರೀಕತೆ ಪಂಗನಾಮ ಹಾಕಿಸಿಕೊಂಡಂತೆಯೇ.
    ನಿಮ್ಮ ಹೇಳಿಕೆಯನ್ನ 'ನನಗೆ ಕಡಲ ನೀರು ಉಪ್ಪು ಅನಿಸುತ್ತದೆ' ಎಂದು ಅಂದುಕೊಂಡರೂ ಅದು ಮೇಲಿನ ಲೆಕ್ಕಕ್ಕೆ ಸರಿಹೊಂದುತ್ತದೆ. 'ಕಡಲಿನ ನೀರು ಉಪ್ಪುಪ್ಪು' ಎಂಬುದನ್ನ ಅಳೆಯುವುದಶ್ಟೆ ಅಲ್ಲ ಕೆಲವೊಮ್ಮೆ ಅಳೆಯಲೇಬೇಕಾಗುತ್ತದೆ. Amilioride ಎಂಬ ಮದ್ದನ್ನು ತಿನ್ನುವ ರೋಗಿಗಳಿಗೆ ಕಡಲಿನ ನೀರು ನಿಮಗೆ ಅನಿಸುವಶ್ಟು ಉಪ್ಪುಪ್ಪು ಅನಿಸುವುದಿಲ್ಲ! ಬಾಯಲ್ಲಿರುವ ಮೇಲ್ಪದರು ಕಣಗಳಲ್ಲಿ ಸೋಡಿಯಂ ಕಾಲುವೆಗಳು ಎಶ್ಟಿವೆ, ಅದು ಯಾವ ಪೀಳಿಯಿಂದ ತಯಾರಾಗಿದೆ, ಅವು ಉಪ್ಪಿನಲ್ಲಿರುವ ಸೋಡಿಯಂ ಅನ್ನು ಇಶ್ಟೆ ಎಂದು ಹೇಗೆ ಗುರುತಿಸುತ್ತವೆ ಎಂದು ಅಳೆದೂ ಅಳೆದೂ ತಿಳಿದುಕೊಳ್ಳಲಾಗಿದೆ, ತಿಳಿದುಕೊಳ್ಳಲಾಗುತ್ತಿದೆ!

    "MBBS + PG (alternative medicine) ಮಾಡಿರುವ ಬಹಳ ಡಾಕ್ಟರುಗಳು ಇದ್ದಾರೆ." ಅಂದಿರಿ…
    ಇದು ಇನ್ನೂ ಆತಂಕಕಾರಿ ಸುದ್ದಿ.
    ನಿಮ್ಮ ಇನ್ನೆರಡು ಸವಾಲುಗಳಿಗೆ ಮೇಲೆಯೇ ಬರೆದಿದ್ದೇನೆ. ಇಲ್ಲಿ ನೋಡಿ:
    http://128.199.25.99/2013/05/06/%E0%B2%B9%E0%B3%8B%E0%B2%AE%E0%B2%BF%E0%B2%AF%E0%B3%8B%E0%B2%AA%E0%B2%A4%E0%B2%BF/comment-page-1/#comment-171

  16. ’ಮಂಜು ಕರಗಿದರೆ ನೀರಾಗುತ್ತದೆ.’
    ’ಬೆಂಕಿ ಬಿಸಿ.’
    ’ಬಿಸಿಲಲ್ಲಿ ಬಟ್ಟೆ ಒಣಗುತ್ತದೆ.’
    ’ಬ್ಯಾಟರಿ ಇಲ್ಲದೆ ಮೊಬಯ್ಲು ಕೆಲಸ ಮಾಡುವುದಿಲ್ಲ.’
    ಇವೆಲ್ಲಾ ಹೇಳಿಕೆಗಳನ್ನೂ ತಕ್ಕುದಾದ statistical tool ಬಳಸಿ ಅಳೆಯಬಹುದು. ಅಳೆಯುವುದಕ್ಕಾಗಿಯೆಂದು ಮಾಡುವುದಕ್ಕೆ ಬೇರೆ ಕೆಲ್ಸ ಇಲ್ಲದವರನ್ನ ನೇಮಿಸಬೇಕು ಅಶ್ಟೆ.

  17. Kiran Batni says:

    // ಇವೆಲ್ಲಾ ಹೇಳಿಕೆಗಳನ್ನೂ ತಕ್ಕುದಾದ statistical tool ಬಳಸಿ ಅಳೆಯಬಹುದು. ಅಳೆಯುವುದಕ್ಕಾಗಿಯೆಂದು ಮಾಡುವುದಕ್ಕೆ ಬೇರೆ ಕೆಲ್ಸ ಇಲ್ಲದವರನ್ನ ನೇಮಿಸಬೇಕು ಅಶ್ಟೆ. //

    ಅದನ್ನೇ ನಾನೂ‌ ಹೇಳುತ್ತಿರುವುದು. ಅಳೆಯುವುದಕ್ಕೇನು, ಏನನ್ನು ಬೇಕಾದರೂ‌ ಅಳೆಯಬಹುದು. ಆದರೆ ಎಲ್ಲಾ ಕಡೆಯೂ‌ ಬೇಕಾಗಿಲ್ಲ ಎಂದು ನೀವು ಒಪ್ಪುವುದಾದರೆ ‘ಅರಿಮೆ’ ಎಂಬುದಕ್ಕೆ ನೀವು ಕೊಟ್ಟ ಹುರುಳನ್ನ್ನು ಬದಲಿಸಿ ಬರೆಯಿರಿ. ಆಗ ವಾದವನ್ನು ಮುಂದುವರೆಸಬಹುದು.

  18. ಅರಿಮೆ ಅರಿಮೆಯೇ. ಅದರ ಹುರುಳನ್ನು ಅನುಕೂಲಕ್ಕಾಗಿ ಬದಲಾಯಿಸಲಾಗದು. ನಾನು ಮೇಲೆ ಬಳಸಿದ ಉಪಮೆಯಾದ ‘ಆ ನಾಯಿ ಬೀಜವಾಗಿತ್ತು’ ಎಂಬು ಹೇಳಿಕೆ ಅರಿಮೆಯದಲ್ಲ. ಹೋಮಿಯೋಪತಿಯ ತಿಯರಿಯೂ ಅದರ ಆಚರಣೆಯೂ ಅರಿಮೆಯವಲ್ಲ. ಇದರಲ್ಯಾವ ಗೊಂದಲವೂ ಇಲ್ಲ. Statistical Tool ಬಳಸಿ ಆಳೆದಾಗಲೆಲ್ಲಾ ಹೋಮಿಯೋಪತಿ ಕೆಲಸ ಮಾಡುವುದಿಲ್ಲವೆಂದು ಗೊತ್ತಾಗಿದೆ. ಇದರಲ್ಲಿ ಅಚ್ಚರಿ ಪಡುವಂತದ್ದೇನೂ ಇಲ್ಲ. ಬೀಜವೊಂದನ್ನು ನೆಟ್ಟು ನೀರೆರೆದರೆ ನಾಯಿ ಹುಟ್ಟಿ ಬರುವುದಿಲ್ಲ. ಹೋಮಿಯೋಪತಿಯು ಅದುನಿಕ ಮಾಂಜುಗೆಯ ಬೆಳೆಯ ನಡುವೆ ಬೆಳೆವ ಕಳೆ ಅಶ್ಟೇ. ಯಾವ ಯಾವ ದೇಶಗಳಲ್ಲಿ ಎಚ್ಚರಿಕೆಯಿಂದ ಕಳೆಕೀಳುವುದಿಲ್ಲವೋ ಅಲ್ಲಲ್ಲಿ ಅದು ಹುಲುಸಾಗಿ ಬೆಳೆಯುತ್ತದೆ.

    • Kiran Batni says:

      ಇಲ್ಲಿ ನೋಡಿ. ಇದರಲ್ಲಿ ಅರಿಮೆಯೆಂದರೆ ಏನು ಎಂದು ಇದೆ. ಅದರಲ್ಲಿ ಅಳತೆಗೆ ನೀವು ಕೊಡುವ ಸ್ತಾನ ಇಲ್ಲ.: http://en.wikipedia.org/wiki/Science

      Science (from Latin scientia, meaning “knowledge”) is a systematic enterprise that builds and organizes knowledge in the form of testable explanations and predictions about the universe.

      (Sorry, no measurement in the main definition.)

  19. No. ‘Testable’ is lot more broader than and includes ‘measurable’. ಆಳೆಯದೇ ಹೇಗೆ ಪರೀಕ್ಶೆ ಮಾಡಲಿಕ್ಕಾದೀತು? ಪದಬಳಕೆಯ ಬಗ್ಗೆಯೇ ಮಾತಾಡೋಣವೋ ಇಲ್ಲಾ ವಿಶಯಕ್ಕೆ ಬರೋಣವೋ? 🙂

    • Kiran Batni says:

      testable includes measurable ಎಂದು ಇಂಗ್ಲಿಶಿನಲ್ಲಿ ಬರೆಯುತ್ತೀರಿ. ಕನ್ನಡದಲ್ಲಿ ‘ಅಳೆಯದೇ ಹೇಗೆ ಪರೀಕ್ಶೆ ಮಾಡಲಿಕ್ಕಾದೀತು’ ಎನ್ನುತ್ತೀರಿ. ಅದನ್ನು ಇಂಗ್ಲಿಶಿಗೆ ನುಡಿಮಾರಿದರೆ ‘how can you test without measuring?’ ಎಂದಾಗುತ್ತದೆ. ಒಂದು ಮಾತಿಗೆ ಗಟ್ಟಿಯಾಗಿ ಕಚ್ಚಿಕೊಳ್ಳಿ. ಇದು ಬರೀ‌ ಪದಗಳ ಬಗೆಗಿನ ಮಾತಲ್ಲ. ಹೇಗೆ ಎಂದು ಆಮೇಲೆ.

      ಅಳತೆ ಪರೀಕ್ಶೆ ಮಾಡುವ ಒಂದು ಬಗೆ ಮಾತ್ರ. ಅದನ್ನು ನೀವೂ‌ ಒಪ್ಪುತ್ತೀರಿ. ಹೀಗಿರುವಾಗ ಅಳತೆ ಮಾಡದೆ ಪರೀಕ್ಶಿಸುವುದು ಹೇಗೆ ಎಂದರೆ ಹೇಗೆ?

  20. ಪುರುಳಿನ ಹೇಳಿಕೆಗಳನ್ನ (Physical claims) ಅಳೆದೇ ಪರೀಕ್ಶಿಸಬೇಕು. ‘ಹೋಮಿಯೋಪತಿ ಬೇನೆಯನ್ನು ವಾಸಿಮಾಡುತ್ತದೆ’ ಎನ್ನುವುದು ಪುರುಳಿನ ಹೇಳಿಕೆ.

  21. Kiran Batni says:

    ಈಗ ಅರಿಮೆ ಎಂಬುದನ್ನು “ಅರಿವನ್ನು ಬೆಳೆಸುವ ಮತ್ತು ಅಚ್ಚುಕಟ್ಟು ಮಾಡುವ ಬಗೆ. ಅಂತಹ ಅರಿವನ್ನು ಪರೀಕ್ಶಿಸಬಲ್ಲ ಹೇಳಿಕೆಗಳಿಂದ ಹಿಡಿದಿಡಬಹುದು, ಹೇಳಬಹುದು” ಎಂದು ‘ಅಳೆಯಬಲ್ಲ’ ಎಂಬುದನ್ನು ಬಿಟ್ಟು ಹುರುಳಿಸುವುದಾದರೆ ಚರ್ಚೆ ಮುಂದುವರೆಸುತ್ತೇನೆ.

  22. Kiran Batni says:

    ಒಳ್ಳೆಯದು. ಅಳತೆಗೆ ಅರಿಮೆಯಲ್ಲಿ ನೀವು ಈ ಮುಂಚೆ ಕೊಟ್ಟಿದ್ದ ಸ್ತಾನ ಇಲ್ಲವಾದುದರಿಂದ ‘ಹೋಮಿಯೋಪತಿಗೆ ಅರಿಮೆಯ ಅಡಿಪಾಯವಿಲ್ಲ’ ಎಂಬ ಹೇಳಿಕೆಯಲ್ಲಿ ಅಳತೆಯಿಲ್ಲದೆ ಅರಿಮೆಯಿಲ್ಲ ಎಂಬ ತಪ್ಪು ನಂಬಿಕೆಯಿಂದ ಹೊರಟಿದ್ದೆಲ್ಲವೂ ಬಿದ್ದುಹೋಯಿತು ಎಂದಾಯಿತು. ಅದರಲ್ಲಿ ಮೊದಲನೆಯದು ನಿಮ್ಮ ಈ‌ ಕೆಳಗಿನ ಹೇಳಿಕೆ:

    ===

    // ಹೋಮಿಯೋಪತಿಯವರು ಅವ್ಶದವೆಂದು ಕೊಡುವ ಅವ್ಶದದಲ್ಲಿ ಹಲವು ಬಾರಿ ಅವ್ಶದವೇ ಇರುವುದಿಲ್ಲ //

    ===

    ನಿಮ್ಮ ಈ ಮೇಲಿನ ಸೊಲ್ಲಿನಲ್ಲಿ ನೀವು ‘ಅವ್ಶದವೇ‌ ಇರುವುದಿಲ್ಲ’ ಎಂದು ಹೇಳುತ್ತಿರುವುದು ಅಳತೆಯ ಆದಾರದ ಮೇಲೆ. ಹೋಮಿಯೋಪತಿಯ ಅವ್ಶದಗಳನ್ನು ಅವೊಗಾಡ್ರೋ ಮಿತಿಯನ್ನು ಮೀರಿ ತೆಳುವಾಗಿಸಿರುತ್ತಾರೆ, ಆದುದರಿಂದ ಅದರಲ್ಲಿ ಹಲವು ಬಾರಿ ಅವ್ಶದವೇ‌ ಇರುವುದಿಲ್ಲ ಎಂಬ ಟೀಕೆ ಬಹಳ ಹಳೆಯದು. ಆದರೆ ಆ ಟೀಕೆ ಹೊರಟಿರುವುದೇ‌ ಅಳತೆಯಿಲ್ಲದೆ ಅರಿಮೆಯಿಲ್ಲ ಎಂಬ ತಪ್ಪು ನಂಬಿಕೆಯಿಂದ.

    ರೋಗವನ್ನು ಏನು ವಾಸಿ ಮಾಡುತ್ತದೆಯೋ ಅದೇ ಅವ್ಶದ. ಅದು ಹೋಮಿಯೋಪತಿಯವರು ಕೊಡುವ ಗುಳಿಗೆಗಳಲ್ಲಿ ಇದೆ ಎಂಬುದಕ್ಕೆ ಅದು ವಾಸಿಮಾಡಿರುವ ರೋಗಿಗಳೇ‌ ಪುರಾವೆ. ಅವರಿಗೆಲ್ಲ ರೋಗ ಹೇಗೆ ವಾಸಿಯಾಯಿತು ಎಂಬುದನ್ನು ಅರಿತುಕೊಳ್ಳುವುದು ಅರಿಗನ ಕೆಲಸ. ಅದು ಬಿಟ್ಟು ಅವರಿಗೆ ವಾಸಿ ಆಗಲೇ ಆರದು ಎಂದು ವಾದಿಸುವುದು ಅರಿಮೆಗೇಡು.

    “ಎಣಿಕೆಗೆ ತೆಗೆದುಕೊಳ್ಳಬೇಕಾದುದೆಲ್ಲವನ್ನೂ ಎಣಿಸಲಾಗುವುದಿಲ್ಲ” – ಆ. ಅಯ್ನ್ ಸ್ಟಯ್ನ್.

  23. “ಪರೀಕ್ಶೆಯಲ್ಲಿ ಅಳತೆ ಸೇರಿಕೊಂಡಿದೆ”. ನೀವು ಏನು ಇರಿಸಿಕೊಳ್ಳಬೇಕು ಅಂದುಕೊಂಡಿರುವಿರೋ ಅದನ್ನ ಇರಿಸಿಕೊಳ್ಳಬಹುದು. ಏನನ್ನು ಬೀಳಿಸಿಕೊಳ್ಳಬೇಕು ಅಂದುಕೊಂಡಿರುವಿರೋ ಅದನ್ನ ಬೀಳಿಸಿಕೊಳ್ಳಬಹುದು. ಆದರೆ ಇರುವುದೇನೆಂದರೆ, ಯಾವುದಾದರೂ ಅರಿಮೆ ಅನ್ನಿಸಿಕೊಳ್ಳಬೇಕಾದರೆ ಅದು ಪರೀಕ್ಶೆಗೊಳಪಡಬಲ್ಲದಾಗಿರಬೇಕು ಮತ್ತು ಪರೀಕ್ಶೆಯಲ್ಲಿ ಗೆಲ್ಲುವಂತದ್ದಾಗಿರಬೇಕು. ನಾನು ಹೋಮಿಯೋಪತಿ ಅರಿಮೆಯಲ್ಲ ಅಂದಿದ್ದು ‘ಅವ್ಶದದಲ್ಲಿ ಅವ್ಶದ ಇರುವುದಿಲ್ಲ’ ಎನ್ನುವ ಕಾರಣಕ್ಕಲ್ಲ. ಅಲ್ಲವೇ ಅಲ್ಲ. ‘ಒಲಿಸಿಕೆ ಪರಿಣಾಮ’ವನ್ನ (Placebo effect) ಬಳಸಿಕೊಳ್ಳಲು ಆದುನಿಕ ಮಾಂಜರಿಮೆಯಲ್ಲಿ ಹಲವಾರು ಅರಕೆಗಳು ನಡೆದಿವೆ ನಡೆಯುತ್ತಿವೆ. ಅದರಲ್ಲೂ ಬಗೆಯರಿಮೆ (Psychology)ಯಲ್ಲಿ ಮಾಂಜುಗರು ಹಲವು ಬಾರಿ ‘ಒಲಿಸಿಕೆ ಅವ್ಶದದ’ (Placebo) ಬಳಕೆ ಮಾಡ್ತಾರೆ. ಎಲ್ಲೆಲ್ಲಿ ‘ಒಲಿಸಿಕೆ ಪರಿಣಾಮ’ ಕೆಲಸ ಮಾಡಬಲ್ಲದು, ಎಲ್ಲೆಲ್ಲಿ ಮಾಡಲಾಗದು ಎಂಬ ಅರಿವನ್ನು ಅಚ್ಚುಕಟ್ಟು ಮಾಡಲಾಗುತ್ತಿದೆ. ನಾನು ಅರಿಮೆಯಲ್ಲ ಅಂದಿದ್ದು ಹೋಮಿಯೋಪತಿಯ ತಿಯರಿಗೆ ಮತ್ತು ಹೋಮಿಯೋಪತಿ ರೋಗವನ್ನು ವಾಸಿ ಮಾಡಬಲ್ಲದು ಎಂಬ ಹೇಳಿಕೆಗೆ. ನೆನಪಿಡಿ. ಹಲವಾರು ರೋಗಗಳು ತಾನು ತಾನಾಗೇ ವಾಸಿಯಾಗುತ್ತವೆ. ದೇವಸ್ತಾನಕ್ಕೆ ಹೋಗಿ ಮಲಗಿದರೂ ವಾಸಿಯಾಗುತ್ತವೆ, ಮನೆಯಲ್ಲೇ ಕುಳಿತು ನರಳಿದರೂ ವಾಸಿಯಾಗುತ್ತವೆ, ಬೆಳೆದು ದೊಡ್ಡವರಾಗುವುದರಿಂದಲೇ ವಾಸಿಯಾಗಿಬಿಡುತ್ತವೆ. ಇನ್ನು, ಯಾವುದೇ ರೋಗವು ಕೊಟ್ಟ ಅವ್ಶದದಿಂದ ವಾಸಿಯಾಯಿತೋ ಇಲ್ಲಾ ತನ್ನಿಂತಾನೇ ವಾಸಿಯಾಯಿತೋ ಎಂದು ತಿಳಿದುಕೊಳ್ಳುವುದು ಹೇಗೆ? ಅಳೆದು ಪರೀಕ್ಶಿಸಿ! ‘ಹೋಮಿಯೋಪತಿ ಅವ್ಶದ’ ಮತ್ತು ‘ಒಲಿಕೆಯ ಅವ್ಶದ’ಗಳ (Placebo) ನಡುವೆ ಎಶ್ಟೆಶ್ಟು ರೋಗಿಗಳು ಹದುಳವಾದರು ಎಂದು Double blind trial ಮೂಲಕ ಪರೀಕ್ಶಿಸಿದಾಗಲೆಲ್ಲಾ ಹೋಮಿಯೋಪತಿಯು ಟುಸ್ಪಟಾಕಿ ಎಂದು ಗೊತ್ತಾಗಿದೆ. ನೀವು ಜೇಮ್ಸ್ ರಾಂಡಿ’ ಅವರ ಸವಾಲನ್ನು ಕಯ್ಗೆತ್ತುಕೊಂಡು ‘ಹೋಮಿಯೋಪತಿ ವಾಸಿಮಾಡುತ್ತದೆ’ ಎಂದು ನಿರೂಪಿಸಿದರೆ ಒಂದು ಮಿಲಿಯನ್ ಡಾಲರ್ ಗೆಲ್ಲಬಹುದು! ಅವಗಾಡ್ರೋ ಮಿತಿಯನ್ನು ಮೀರಿದ ಅವ್ಶದ ಏನೋ ಮಾಡಬಲ್ಲದು ಅಂದುಕೊಳ್ಳುವುದು ಮಾಟಮಂತ್ರದ ಚಿಂತನೆ. ಯಾವುದೇ ಗಂಬೀರ ಅರಕೆಗಾರನನ್ನ ಅರಕೆಗೆ ಹಚ್ಚುವ ಆಗುಹವಲ್ಲ. ಹೋಮಿಯೋಪತಿ ಅವ್ಶದ ‘ಸಕ್ಕರೆ ಬೇನೆಯನ್ನು’ ವಾಸಿ ಮಾಡಬಲ್ಲದು ಎಂಬ ಹೇಳಿಕೆ ಅಸಮಾನ್ಯವಾದ ಹೇಳಿಕೆ. ನನಗದು ಮನವರಿಕೆಯಾದಲ್ಲಿ ನನ್ನ ಬದುಕನ್ನೇ ಅದರ ಅರಕೆಗೆ ಮುಡುಪಾಗಿಡಬಲ್ಲೆ. ಇರುವುದೆನೆಂದರೆ, ಹೋಮಿಯೋಪತಿ ಅವ್ಶದ ಹೆಚ್ಚೆಂದರೆ ಒಲಿಕೆಯ ಅವ್ಶದದಂತೆ ಕೆಲಸ ಮಾಡಬಲ್ಲದು. ವಾಸಿಯಾದ ರೋಗಿಗಳು ನಿಮಗೆ ಗೊತ್ತಿರುತ್ತಾರೆ. ಆದರೆ, ಅರಿಮೆಯ ಅಳತೆಗೋಲು ವಾಸಿಯಾಗದ ರೋಗಿಗಳನ್ನೂ ಬೆನೆಯನ್ನು ಹೆಚ್ಚಿಸಿಕೊಂಡ ರೋಗಿಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ನನ್ನ ತಾಯಿಗೆ ‘ಸಕ್ಕರೆಯ ಮುಂಬೇನೆ’ (pre-diabetes) ಇದೆ. ಅವರು ಅದಕ್ಕೆ ತಕ್ಕ ಅವ್ಶದ ತೆಗೆದುಕೊಳ್ಳುತ್ತಿದ್ದಾರೆ. ನಾನು ಅವರಿಗೆ ಹೋಮಿಯೋಪತಿಯ ಸಕ್ಕರೆ ಗುಳಿಗೆಗಳನ್ನೂ ತಿನ್ನಿಸಬಲ್ಲೆ. ನಿಮ್ಮ ರೋಗ ವಾಸಿಯಾಯಿತು ಎಂದು ಹೋಮಿಯೋಪತಿಯವರು ನಂಬಿಸಬಲ್ಲರು. ಅವಳಿಗೆ ಸಂತಸವಾಗುತ್ತದೆ. ಸಂತಸದಿಂದ ಅವಳಿಗೆ ರೋಗ ಕೊಂಚ ಕಡಿಮೆಯಾಗಬಹುದು, ಇಲ್ಲಾ ಉಲ್ಬಣಿಸಬಹುದು. ಅವಳಂತೂ ವಾಸಿಯಾಯಿತು ಅಂದುಕೊಂಡೇ ಇರುತ್ತಾಳೆ. ಇದು ಮಾಟ ಮಂತ್ರದ ಚಿಂತನೆ. ಒಂದು ವರ್ಶದ ನಂತರ ಅವ್ಶದವನ್ನೇ ತೆಗೆದುಕೊಳ್ಳುವಂತಿಲ್ಲ! ಇದಕ್ಕಿಂತ ಏನು ಬೇಕು?! ಆದರೆ, ಸಣ್ಣ ಹಲ್ಲುನೋವು ಉಸಿರಾಟಕ್ಕೆ ತೊಂದರೆಕೊಡುವಶ್ಟು ಕೀತು ಊದಿಕೊಂಡಾಗ, ಕಾಲಿನ ಗಾಯ ಕೊಳೆಯಲು ಆರಂಬಿಸಿದಾಗ ಹೋಮಿಯೋಪತಿಯವರು ನೆಪವೊಂದನ್ನು ತಯಾರಿಟ್ಟು ರೋಗಿಗಳನ್ನು ಆದುನಿಕ ಮಂಜುಗರ ಬಳಿ ಸಾಗಹಾಕುತ್ತಾರೆ. ಕೀತುಕೊಂಡವರು, ಕೊಳೆತುಕೊಂಡವರು, ಊದುಕೊಂಡವರು ಇಲ್ಲದೇ ತಮ್ಮ ‘ಆಸ್ಪತ್ರೆ’ಯನ್ನು ಚೊಕ್ಕವಾಗೇ ಇಟ್ಟುಕೊಳ್ಳುತ್ತಾರೆ. ಒಳಗೆಬರುವ ಹೊಸ ರೋಗಿಗಳಿಗೆ ರೋಗಿಗಳೇ ಇಲ್ಲದ ಆಶ್ಪತ್ರೆಯ ಅನುಬವವನ್ನ ಅಳೆಯಲಾದೀತೆ?! ಒಲಿಸಿಕೆಯ ಪರಿಣಾಮದ ತುತ್ತತುದಿ!
    ಹೋಮಿಯೋಪತಿ ಬಾರತದಲ್ಲಿ ಹೆಚ್ಚು ಹುಲುಸಾಗಿ ಬೆಳೆಯಲು ಕಾರಣವಿದೆ: ನಮ್ಮಲ್ಲಿ ಹದುಳದೇರ್ಪಾಟು ಆದುನಿಕ ಮಟ್ಟದಲ್ಲಿಲ್ಲ. ಇರದ ರೋಗಗಳು ಇರುವುವೆಂದೂ, ವಾಸಿಯಾಗದ ರೋಗಗಳು ವಾಸಿಯಾದುವೆಂದೂ ಕಂಡುಕೊಳ್ಳುವುದು ಮಾಮೂಲು. ನಮ್ಮಲ್ಲಿ ಮಾಟಮಂತ್ರದ ಆಲೋಚನೆ ಬಹಳ ಹೆಚ್ಚು. ಇವುಗಳೆಲ್ಲವೂ ಸೇರಿ ಹುಟ್ಟುಹಾಕುವ ಗೊಂದಲ ಹೋಮಿಯೋಪತಿಯ ಕಳೆಗೆ ಗೊಬ್ಬರವಿದ್ದಂತೆ.
    “ಎಣಿಕೆಗೆ ತೆಗೆದುಕೊಳ್ಳಲೇಬೇಕಾದ್ದನ್ನು ಎಣಿಸಲೇಬೇಕು”
    ರೋಗ ವಾಸಿಯಾಗದವರನ್ನೂ, ರೋಗ ಉಲ್ಬಣಿಸಿದವರನ್ನೂ ಎಣಿಕೆಗೆ ತೆಗೆದುಕೊಳ್ಳಲೇಬೇಕು.

    • Kiran Batni says:

      // “ಪರೀಕ್ಶೆಯಲ್ಲಿ ಅಳತೆ ಸೇರಿಕೊಂಡಿದೆ” //
      ತಪ್ಪು. ಪರೀಕ್ಶೆಯಲ್ಲಿ ಅಳತೆ ಒಂದು ಬಗೆ ಮಾತ್ರ. ಅಳತೆ ಮಾಡಿ ಪರೀಕ್ಶೆ ಮಾಡಬಹುದು, ಆದರೆ ಪ್ರತಿಯೊಂದು ಪರೀಕ್ಶೆಯಲ್ಲೂ ಅಳತೆ ಇರಲೇ ಬೇಕು ಎಂದಿಲ್ಲ. ಈ ಮಾತು ನಿಮಗೆ ಇನ್ನೂ ತಿಳಿದಿಲ್ಲದೆ ಹೋದರೆ ಇಲ್ಲಿಗೇ ಚರ‍್ಚೆ ನಿಲ್ಲಿಸಿಬಿಡೋಣ. ಮುಂದುವರೆಸಿ ಪ್ರಯೋಜನವಿಲ್ಲ.

      // ಯಾವುದೇ ರೋಗವು ಕೊಟ್ಟ ಅವ್ಶದದಿಂದ ವಾಸಿಯಾಯಿತೋ ಇಲ್ಲಾ ತನ್ನಿಂತಾನೇ ವಾಸಿಯಾಯಿತೋ ಎಂದು ತಿಳಿದುಕೊಳ್ಳುವುದು ಹೇಗೆ? ಅಳೆದು ಪರೀಕ್ಶಿಸಿ! //
      ಅಳತೆಯ ಬೂತ ಇಲ್ಲೂ ಓಡಾಡುತ್ತಿದೆ. ನಾನು ಪರೀಕ್ಶಿಸುವುದು ಬೇಡ ಎನ್ನಲಿಲ್ಲ. ರೋಗಿ ಅವ್ಶದ ತೆಗೆದುಕೊಂಡನೇ ಎಂದು ’ಪರೀಕ್ಶಿಸಿ’. ಆಮೇಲೆ ಅವನಿಗೆ ರೋಗ ವಾಸಿಯಾಯಿತೇ ಎಂದು ’ಪರೀಕ್ಶಿಸಿ’. ಹವ್ದು, ವಾಸಿ ಆಗಿದೆ ಎನ್ನುವುದಾದರೆ ಅಲ್ಲಿಗೆ ಮುಗಿಯಿತು. ನಿಮ್ಮ ಅಳತೆಗೋಲುಗಳನ್ನೆಲ್ಲ ಕಸದಬುಟ್ಟಿಗೆ ಎಸೆಯಿರಿ.

      // ನಾನು ಅರಿಮೆಯಲ್ಲ ಅಂದಿದ್ದು ಹೋಮಿಯೋಪತಿಯ ತಿಯರಿಗೆ ಮತ್ತು ಹೋಮಿಯೋಪತಿ ರೋಗವನ್ನು ವಾಸಿ ಮಾಡಬಲ್ಲದು ಎಂಬ ಹೇಳಿಕೆಗೆ. ನೆನಪಿಡಿ. //
      ಗೊತ್ತು. ಇಲ್ಲೇ ನೀವು ಅಳತೆ, ಅಳತೆ ಎಂದುಕೊಂಡು ದಾರಿ ತಪ್ಪುತ್ತಿರುವುದು. ಅವ್ಶದಿ ತೆಗೆದುಕೊಂಡವರಿದ್ದಾರೆ, ವಾಸಿಯಾದವರಿದ್ದಾರೆ. ನಿಮ್ಮದೇನು ನಡುವೆ ತಕರಾರು? ಏತಕ್ಕೆ ಕೆಲಸ ಮಾಡಿತು ಎಂದು ತಿಳಿಯಲು ಪ್ರಯತ್ನ ಮಾಡಿ. ಹಿಂದಿನ ತಿಯರಿಗಳನ್ನೆಲ್ಲ ಒರೆಗೆ ಹಚ್ಚಿ. ಹಿಂದಿನ ತಿಯರಿಗಳ ಆದಾರದ ಮೇಲೆ ನಿಮಗೆ ಇದು ಏತಕ್ಕೆ ಕೆಲಸ ಮಾಡುತ್ತದೆ ಎಂದು ವಿವರಿಸಲು ಆಗುತ್ತಿಲ್ಲ ಎಂದರೆ ಒಪ್ಪಿಕೊಳ್ಳುತ್ತೇನೆ. ಅದು ಬಿಟ್ಟು ಕೆಲಸ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವಾಗ ’ಇಲ್ಲ, ಮಾಡುತ್ತಿಲ್ಲ’ ಎನ್ನುವುದು ನಿಮ್ಮ ’ಆದುನಿಕ’ ಮದ್ದರಿಮೆಯ ವಿದಾನವೇನು?

      // ಒಲಿಸಿಕೆ…ಮಾಟಮಂತ್ರ… //
      ಇವುಗಳೂ ಏತಕ್ಕೆ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಅರಿಗನ ಕೆಲಸ. ಒಲಿಸಿಕೆ ಮತ್ತು ಮಾಟಮಂತ್ರಗಳಿಂದ ರೋಗ ವಾಸಿಯಾಗುವುದಾದರೆ ಅವ್ಶದ ಎಂಬ ಹೆಸರಿನಲ್ಲಿ ’ಆದುನಿಕ ಪದ್ದತಿಯ’ ಡಾಕ್ಟರುಗಳು ಮಾರುವ ರೋಗದ ಬೀಜಗಳನ್ನು ಎಲ್ಲಾ ಒಟ್ಟಗೆ ಸುಟ್ಟುಬಿಡುವುದು ವಾಸಿ. ಒಲಿಸಿಕೆ ಮತ್ತು ಮಾಟಮಂತ್ರಗಳು ಕೆಲವರ ಮೇಲೆ ಮಾತ್ರ ಏಕೆ ಕೆಲಸ ಮಾಡುತ್ತದೆ, ಕೆಲವರ ಮೇಲೆ ಏಕೆ ಮಾಡುವುದಿಲ್ಲ ಎಂದು ಅರಕೆ ನಡೆಯಬೇಕು, ಎಲ್ಲರ ಮೇಲೂ ಇವುಗಳು ಕೆಲಸ ಮಾಡಬೇಕಾದರೆ ಜನರು ಹೇಗೆ ಬದಲಾಗಬೇಕು ಎಂದು ಅರಕೆ ನಡೆಯಬೇಕು. ಅದು ಅರಿಮೆಯ ಕೆಲಸ. ಸುಮ್ಮನೆ ಇವುಗಳನ್ನು ತೆಗಳುವುದಲ್ಲ.

      // ರೋಗ ವಾಸಿಯಾಗದವರನ್ನೂ, ರೋಗ ಉಲ್ಬಣಿಸಿದವರನ್ನೂ ಎಣಿಕೆಗೆ ತೆಗೆದುಕೊಳ್ಳಲೇಬೇಕು. //
      ಸ್ವಾಮಿ, ನಿಮ್ಮ ’ಆದುನಿಕ’ ಪದ್ದತಿ ರೋಗ ವಾಸಿ ಮಾಡುವುದಕ್ಕಿಂತ ಹೆಚ್ಚಿಸುವುದೇ ಜಾಸ್ತಿ. ಹಲವು ಮನುಶ್ಯ ತಳಿಗಳಿಗೆ ರೋಗವನ್ನು ಪರಿಚಯಿಸಿದ್ದೇ ನಿಮ್ಮ ಈ ಪದ್ದತಿ ಮತ್ತು ಅದರ ಹಿಂದಿನ ಒಟ್ಟಾರೆ ಚಿಂತನೆ.

      // ಜೇಮ್ಸ್ ರಾಂಡಿ… //
      ನೋಡಿದೀನಿ ಈ ವಯ್ಯನ ನಾಟಕವನ್ನು. ಈತನ ಮೇಲೂ ಅಳತೆಯ ಬೂತ ಕೂತಿದೆ. ಯಾವುದೋ ಒಬ್ಬ ರೋಗಿಯನ್ನು ಕರೆದುಕೊಂಡು ಬಂದು, ಅವನಿಗೆ ಒಂದು ಹೋಮಿಯೋಪತಿ ಅವ್ಶದಿಯನ್ನು ಕೊಟ್ಟು ಅವನಿಗೆ ವಾಸಿಯಾಗುತ್ತದೆ ಎಂದು ತೋರಿಸು ಎಂದು ಕೇಳುವುದೇ ಹೋಮಿಯೋಪತಿಯ ಪದ್ದತಿಯಲ್ಲಿ ಪೆದ್ದತನದ ಪ್ರಶ್ನೆ. ಈ ಪದ್ದತಿಯಲ್ಲಿ ಎಲ್ಲರಿಗೂ ಒಂದೇ ಅವ್ಶದಿ ಎಂಬುದಿಲ್ಲ, ಮತ್ತು ಬರೀ ಮಯ್ಗೆ ಮಾತ್ರ ಅವ್ಶದಿ ಎಂಬುದೂ ಇಲ್ಲ. ರೋಗಿಯ ಮನಸ್ತಿತಿಯೂ ಅವ್ಶದವನ್ನು ತೀರ‍್ಮಾನಿಸುವ ಕೆಲಸದಲ್ಲಿ ಸೇರಿರುತ್ತದೆ. ಇದೆಲ್ಲವೂ ಈತನಿಗೆ ಅರ‍್ತವಾಗುವುದಿಲ್ಲ.

  24. //ಹವ್ದು, ವಾಸಿ ಆಗಿದೆ ಎನ್ನುವುದಾದರೆ ಅಲ್ಲಿಗೆ ಮುಗಿಯಿತು//
    ಇಲ್ಲೇ ನೀವು ಎಡವುತ್ತಿರುವುದು. ಅಲ್ಲಿಗೇ ಮುಗಿಯುವುದಿಲ್ಲ. ರೋಗ ತಾನಾಗಿಯೇ ವಾಸಿಯಾಯಿತೋ ಅವ್ಶದದಿಂತ ವಾಸಿಯಾಯಿತೋ ಎಂದು ತೀರ್ಮಾನವಾಗಲೇಬೇಕು. ಅದಕ್ಕಾಗೇ double blind clinical trial ಇರೋದು. ಸರಿ, ನಿಮ್ಮ ಪರೀಕ್ಶೆಯನ್ನೇ ತೆಗೆದುಕೊಳ್ಳೋಣ (ನೀವೆಳುತ್ತಿರುವ ಪರೀಕ್ಶೆಗೂ double blind clinical trialಗೂ ಅಂತ ಬೇರ್ಮೆ ಏನಿಲ್ಲ. ಒಬ್ಬರಿಗಿಂತ ಹೆಚ್ಚು ಮಂದಿಯನ್ನು ಪರೀಕ್ಶಿಸಬೇಕು ಅಶ್ಟೆ): ರೋಗಿಯು ಅವ್ಶದ ತೆಗೆದುಕೊಂಡನೇ ಎಂದು ’ಪರೀಕ್ಶಿಸೋಣ’. ಆಮೇಲೆ ಅವನಿಗೆ ರೋಗ ವಾಸಿಯಾಯಿತೇ ಎಂದು ’ಪರೀಕ್ಶಿಸೋಣ’. ಇಲ್ಲ ಎಂದಾದರೆ? ರೋಗ ಉಲ್ಬಣಿಸಿತು ಎಂದಾದರೆ? ಸಕ್ಕರೆ ರೋಗಕ್ಕೆ ಹೋಮಿಯೋಪತಿ ಅವ್ಶದ ತೆಗೆದುಕೊಂಡ ನೂರರಲ್ಲಿ ೩೩ ಮಂದಿಗೆ ವಾಸಿಯಾಯಿತು, ೩೩ ಮಂದಿಗೆ ವಾಸಿಯಾಗಲಿಲ್ಲ, ೩೪ ಮಂದಿಗೆ ಉಲ್ಬಣಿಸಿತು ಎಂದಾದರೆ? ಹೋಮಿಯೋಪತಿ ಅವ್ಶದದ ಬದಲು ಕಲ್ಲುಸಕ್ಕರೆ ತಿಂದರೂ ಇದೇ ಪಾಡು ಎಂದಾದರೆ? ಇದೇ ನನ್ನ ತಕರಾರು.

    //ಕೆಲಸ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವಾಗ//
    ಕೆಲಸ ಮಾಡುವುದಿಲ್ಲ ಎಂಬುದು ಹಲವರಿಗೆ ಗೊತ್ತಿಲ್ಲ. ಅದೇ ತೊಂದರೆ.

    //ಇವುಗಳೂ (ಒಲಿಸಿಕೆ) ಏತಕ್ಕೆ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಅರಿಗನ ಕೆಲಸ. ಒಲಿಸಿಕೆ ಮತ್ತು ಮಾಟಮಂತ್ರಗಳಿಂದ ರೋಗ ವಾಸಿಯಾಗುವುದಾದರೆ//
    ಕೆಲಸ ನಡೆಯುತ್ತಿದೆ. ಒಲಿಸಿಕೆಯ indicationsಗಳು ಅಚ್ಚುಕಟ್ಟಾಗುತ್ತಿವೆ. ಅದರ ಬಗ್ಗೆ ದೊಡ್ಡ ಬರವಸೆಯೇನೂ ಇಟ್ಟುಕೊಳ್ಳಬೇಕಿಲ್ಲ. ಹೆಚ್ಚೆಂದರೆ psychosomatic (ರೋಗವಿಲ್ಲದೆಯೂ ರೋಗವಿದೆ ಎಂದುಕೊಳ್ಳುವ ರೋಗಿಗಳ) ರೋಗಗಳಿಗೆ ಬಳಕೆಯಾಗಬಲ್ಲದು. ಹಣ್ಣಿನ ವಾಸನೆಗೆ ಬೆಲೆ ನಾಣ್ಯದ ಸದ್ದು.

    //ಡಾಕ್ಟರುಗಳು ಮಾರುವ ರೋಗದ ಬೀಜಗಳನ್ನು…..ನಿಮ್ಮ ’ಆದುನಿಕ’ ಪದ್ದತಿ ರೋಗ ವಾಸಿ ಮಾಡುವುದಕ್ಕಿಂತ ಹೆಚ್ಚಿಸುವುದೇ ಜಾಸ್ತಿ. ಹಲವು ಮನುಶ್ಯ ತಳಿಗಳಿಗೆ ರೋಗವನ್ನು ಪರಿಚಯಿಸಿದ್ದೇ ನಿಮ್ಮ ಈ ಪದ್ದತಿ ಮತ್ತು ಅದರ ಹಿಂದಿನ ಒಟ್ಟಾರೆ ಚಿಂತನೆ.//
    ರವಶ್ಟೂ ಒಪ್ಪತಕ್ಕ ಮಾತಲ್ಲ. ಆದುನಿಕ ಮಾಂಜರಿಮೆಯ ಸಾದನೆಗಳನ್ನು ಬರೆಯುತ್ತಾ ಕೂರಬಲ್ಲೆ. ಆದರೆ ಕಣ್ಣಿಗೆ ರಾಚುವ ಸತ್ಯವನ್ನು ಸಾದಿಸಬೇಕಿಲ್ಲ.

    //ಈತನ ಮೇಲೂ ಅಳತೆಯ ಬೂತ ಕೂತಿದೆ//
    ನಿಮ್ಮ ಪರೀಕ್ಶೆಗೂ ಅರಿಮೆಯ ಪರೀಕ್ಶೆಗೂ ಅಂತಾ ಬೇರ್ಮೆಯಿಲ್ಲ ಎಂದು ಮೇಲೆ ತಿಳಿಸಿದ್ದೇನೆ. ಇನ್ನೂರು ರೋಗಿಗಳನ್ನಿಟ್ಟುಕೊಂಡು ಕಲ್ಲುಸಕ್ಕರೆಗಿಂತ ಹೋಮಿಯೋಪತಿಯ ಅವ್ಶದ ಮೇಲು ಎಂದು ತೋರಿಸಿದರಾಯಿತು. ನೂರು ಮಂದಿಗೆ ಯಾವ ಹೋಮಿಯೋಪತಿ ಅವ್ಶದವಾದರೂ ಕೊಡಿ. ಬೇರೆ ನೂರು ಮಂದಿಗೆ ಕಲ್ಲುಸಕ್ಕರೆ ಕೊಡಿ. ಎಶ್ಟು ಮಂದಿಗೆ ವಾಸಿಯಾಯಿತು ಎಂದು ಪರೀಕ್ಶಿಸಿ. ಅಯ್ದು ಕೋಟಿ ರುಪಾಯಿ ಗೆಲ್ಲಿರಿ.

    //ಈ ಪದ್ದತಿಯಲ್ಲಿ ಎಲ್ಲರಿಗೂ ಒಂದೇ ಅವ್ಶದಿ ಎಂಬುದಿಲ್ಲ, ಮತ್ತು ಬರೀ ಮಯ್ಗೆ ಮಾತ್ರ ಅವ್ಶದಿ ಎಂಬುದೂ ಇಲ್ಲ. ರೋಗಿಯ ಮನಸ್ತಿತಿಯೂ ಅವ್ಶದವನ್ನು ತೀರ‍್ಮಾನಿಸುವ ಕೆಲಸದಲ್ಲಿ ಸೇರಿರುತ್ತದೆ.//
    ಅಲ್ಲಿ ಅವ್ಶದವೇ ಇಲ್ಲ! ಅವ್ಶದವಿದ್ದಿದ್ದಲ್ಲಿ ರೋಗಿಯ ಮಯ್ಯಿಗೇ ಕೊಡುತ್ತಿದ್ದರು. ಉಳಿದುಕೊಂಡಿದ್ದು ಕಲ್ಲುಸಕ್ಕರೆ ಮತ್ತು ರೋಗಿಯ ಮನಸ್ತಿತಿ ಮಾತ್ರ. ಅಂದಹಾಗೆ, ಆದುನಿಕ ಮಾಂಜರಿಮೆಯಲ್ಲಿ ಎಲ್ಲರಿಗೂ ಒಂದೇ ಅವ್ಶದ ಎಂಬುದಿಲ್ಲ. ಆದುದರಿಂದ ಸಾವಿರಗಟ್ಟಲೆ ಅವ್ಶದಗಳಿವೆ. ಹೋಮಿಯೋಪತಿಯ ಆಚರಣೆಯಲ್ಲಿ ಎಲ್ಲರಿಗೂ ಒಂದೇ ಅವ್ಶದ. ಕಲ್ಲುಸಕ್ಕರೆ.
    ಹೋಮಿಯೋಪತಿಯವರಿಂದ ‘ಹದುಳದೇರ್ಪಾಟು’ ಕಟ್ಟುವವರು ಕಲಿಯುವುದಿದೆ. ರೋಗಿಗೆ ಹೆಚ್ಚು ಸಮಯ ಕೊಡಬೇಕು. ಕರ್ನಾಟಕಕ್ಕೆ ಒಳ್ಳೆಯ ಹದುಳದೇರ್ಪಾಟಿನ ಅವಶ್ಯಕತೆಯಿದೆ. ಹೋಮಿಯೋಪತಿಯಲ್ಲ.

  25. Kiran Batni says:

    // ರೋಗಿಯು ಅವ್ಶದ ತೆಗೆದುಕೊಂಡನೇ ಎಂದು ’ಪರೀಕ್ಶಿಸೋಣ’. ಆಮೇಲೆ ಅವನಿಗೆ ರೋಗ ವಾಸಿಯಾಯಿತೇ ಎಂದು ’ಪರೀಕ್ಶಿಸೋಣ’. ಇಲ್ಲ ಎಂದಾದರೆ? ರೋಗ ಉಲ್ಬಣಿಸಿತು ಎಂದಾದರೆ? ಸಕ್ಕರೆ ರೋಗಕ್ಕೆ ಹೋಮಿಯೋಪತಿ ಅವ್ಶದ ತೆಗೆದುಕೊಂಡ ನೂರರಲ್ಲಿ ೩೩ ಮಂದಿಗೆ ವಾಸಿಯಾಯಿತು, ೩೩ ಮಂದಿಗೆ ವಾಸಿಯಾಗಲಿಲ್ಲ, ೩೪ ಮಂದಿಗೆ ಉಲ್ಬಣಿಸಿತು ಎಂದಾದರೆ? //

    ಏಕೆ ಹೀಗಾಯಿತು ಎಂದು ಅರಕೆ ನಡೆಸಿ. ಹೋಮಿಯೋಪತಿ ವಾಸಿ ಮಾಡುವುದು ಬರೀ ಮಯ್ಯನ್ನಲ್ಲ. ಆ‌ ಎಲ್ಲಾ ರೋಗಿಗಳ ಮನಸ್ತಿತಿಯೂ ಒಂದೇ‌ ಇತ್ತೇ ಎಂದೂ‌ ಕೇಳಿಕೊಳ್ಳಿ. ನಿಮ್ಮ ‘ಆದುನಿಕ’ ಪದ್ದತಿಯಲ್ಲಿ ಎಲ್ಲ ರೋಗಿಗಳೂ‌ ಒಂದೇ ಎಂಬ ತಪ್ಪು ನಂಬಿಕೆ ಇರುವುದರಿಂದಲೇ‌ 33 ಮಂದಿಗೆ ವಾಸಿಯಾದರೆ ಏನು ಮಾಡುವುದು ಎಂಬ ಕೇಳ್ವಿ ಏಳುವುದು.

    // ಕೆಲಸ ಮಾಡುವುದಿಲ್ಲ ಎಂಬುದು ಹಲವರಿಗೆ ಗೊತ್ತಿಲ್ಲ. ಅದೇ ತೊಂದರೆ. //
    ಮಾಡುವುದಿಲ್ಲ ಎಂಬುದು ನಿಮ್ಮ ಆದಾರವಿಲ್ಲದ ಆರೋಪ ಮಾತ್ರ. ಕೆಲಸ ಮಾಡುವುದಿಲ್ಲ ಎಂದುಕೊಳ್ಳುವುದು ಒಂದು ಮನಸ್ತಿತಿ. ಆ ಮನಸ್ತಿತಿಯನ್ನು ಜನರಲ್ಲಿ ಮೂಡಿಸಿದರೆ ಅದರಿಂದ ಕೆಲಸ ಮಾಡದೆ ಹೋದರೆ ಸೋಜಿಗವೇನಿಲ್ಲ. ಆಗ ನೀವೇ‌ ಕಟ್ಟಿದ ಮುಂಬೊತ್ತಿನಲ್ಲಿ ನಿಮ್ಮ ಈ ‘ಕೆಲಸ ಮಾಡುವುದಿಲ್ಲ’ ಎಂಬ ತಿಯರಿ ಮೆರೆಯಬಹುದಶ್ಟೆ. ಹಾಗೆ ಮೆರೆದರೆ ಅದು ಹೋಮಿಯೋಪತಿ ಕೆಲಸ ಮಾಡುವುದಿಲ್ಲ ಎಂಬುದರ ಪುರಾವೆಯಲ್ಲ, ನೀವೇ‌ ಕೆಲಸ ಮಾಡಲು ಬಿಡಲಿಲ್ಲ ಎಂಬುದಕ್ಕೆ ಪುರಾವೆ.

    // ಅದರ ಬಗ್ಗೆ ದೊಡ್ಡ ಬರವಸೆಯೇನೂ ಇಟ್ಟುಕೊಳ್ಳಬೇಕಿಲ್ಲ. //
    ಬರವಸೆಯೆಬುದೂ ಒಂದು ಮನಸ್ತಿತಿ. ಮನಸ್ಸು ಎಂಬುದು ರೋಗಿಗಳಲ್ಲಿ ಇರುತ್ತದೆ. ನಿಮ್ಮ ‘ಆದುನಿಕ’ ಮದ್ದರಿಮೆಗೆ ಇದು ಅಶ್ಟು ತಲೆಗೆ ಹತ್ತಿಲ್ಲ.

    // ರವಶ್ಟೂ ಒಪ್ಪತಕ್ಕ ಮಾತಲ್ಲ. //
    http://www.youtube.com/watch?v=7tu9nJmr4Xs

    // ಇನ್ನೂರು ರೋಗಿಗಳನ್ನಿಟ್ಟುಕೊಂಡು ಕಲ್ಲುಸಕ್ಕರೆಗಿಂತ ಹೋಮಿಯೋಪತಿಯ ಅವ್ಶದ ಮೇಲು ಎಂದು ತೋರಿಸಿದರಾಯಿತು. //
    ಅದೇ ಹೆಳಿದೆನಲ್ಲ, ‘ಇನ್ನೂರು’ ಎಂಬ ಮಾತು ಬರುವುದೇ ಅದರೊಳಗಿರುವವರು ಎಲ್ಲರೂ ಒಂದೇ ಎಂಬ ನಂಬಿಕೆಯಿಂದ. ಇದೇ‌ ನಿಮ್ಮ ಅರಿಮೆಯ ‘ಆದುನಿಕತೆ’. ಇದರಿಂದ ಹೊರಬರಲು ಆದರೆ ಮಾತ್ರ ನಿಮಗೆ ಹೋಮಿಯೋಪತಿ ಎಂದರೆ ಏನು ಎಂದು ಅರಿವಾಗಲು ಬಲ್ಲುದು.

    // ಹೋಮಿಯೋಪತಿಯ ಆಚರಣೆಯಲ್ಲಿ ಎಲ್ಲರಿಗೂ ಒಂದೇ ಅವ್ಶದ. ಕಲ್ಲುಸಕ್ಕರೆ. //
    ನಿಮಗೆ ಅದು ಕಲ್ಲುಸಕ್ಕರೆ ಎಂಬ ಮುನ್ನೆಣಿಕೆಯಿದೆ. ಆದುದರಿಂದ ಅದರಲ್ಲಿ ನಿಮಗೆ ಅದನ್ನು ಬಿಟ್ಟು ಬೇರೇನೂ‌ ಕಾಣಿಸುವುದಿಲ್ಲ.

  26. Anand Enguru says:

    ನನಗೆ ಸಿದ್ದರಾಜು ಅವರ ಮಾತುಗಳು ಕಿರಣ್ ಮಾತುಗಳಿಗಿಂತ ಹೆಚ್ಚು ಸರಿಯೆನ್ನಿಸುತ್ತಿದೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಒಂದು ಅಂಗದಿಯಿದೆ. ದೇವಿ ಪೂಜೆ ಮಾಡಿ ಮಕ್ಕಳಿಗೆ ತಾಯತ ಕಟ್ಟುವ ಅಂಗಡಿ. ಅಲ್ಲಿಗೆ ಕರೆದೊಯ್ಯುವ ಒಟ್ಟು ಮಕ್ಕಳಲ್ಲಿ ನೂರಕ್ಕೆ ಹತ್ತರಷ್ತು ಮಕ್ಕಳಿಗೆ ಗುಣವಾದರೂ “ಮಾತಿನ ಪ್ರಚಾರ”ದ ಬಲದಿಂದ ಅದು ಹೆಚ್ಚು ಹೆಚ್ಚು ಜನರನ್ನು ಮುಟ್ಟುತ್ತದೆ. ಯಾಕೆಂದರೆ ಉಳಿದ ೯೦% ಮಂದಿ ನಮಗೆ ಈ ತಾಯಿತದಿಂದ ಗುಣವಾಗಲಿಲ್ಲಾ ಎಂದೇನು ಪ್ರಚಾರ ಮಾಡುವುದಿಲ್ಲ!! ಆದ್ದರಿಂದ ತಾಯಿತ ಪರಿಣಾಮಕಾರಿ ಎಂದು ಸಾರಲು ಪರೀಕ್ಶೆ ಮಾಡಲೇ ಬೇಕಾಗುತ್ತದೆ. ಇದು ರಿಪೀಟಬಿಲಿಟಿ ಮತ್ತು ರಿಲಯಬಿಲಿಟಿ ಪರೀಕ್ಶೆಯಾಗಿರುತ್ತದೆ. ಈ ಎರಡನ್ನೂ ಮಾಡಬೇಕಾದರೆ ಎಣಿಕೆಯೇ ಮುಖ್ಯವಾಗಿರುತ್ತದೆ. ಎಷ್ಟು ಜನರಲ್ಲಿ ಎಷ್ಟು ಜನರಿಗೆ ವಾಸಿಯಾಗಿದೆ ಎನ್ನುವುದೇ ವೈಜ್ಞಾನಿಕವಾಗಿ “ಪರಿಣಾಮಕಾರಿ” ಎನ್ನುವದನ್ನು ಸಾರಲು ಇರುವ ಅಳತೆಗೋಲು.

    • Kiran Batni says:

      // ರಿಪೀಟಬಿಲಿಟಿ… ರಿಲಯಬಿಲಿಟಿ… //

      ರೋಗಿಗಳ ’ರೋಗ’ದಲ್ಲಿ ಮೊದಲು ರಿಪೀಟಬಿಲಿಟಿ ಮತ್ತು ರಿಲಯಬಿಲಿಟಿಯನ್ನು ಪರೀಕ್ಶೆ ಮಾಡಿ. ಆ ’ರೋಗ’ದಲ್ಲಿ ಅವರ ಮನಸ್ತಿತಿಯೂ ಸೇರಿರುತ್ತದೆ – ರೋಗಿ ಎಶ್ಟು ಹೆದರಿಕೊಂಡಿದ್ದಾನೆ/ಳೆ, ಎಶ್ಟು ಕನವರಿಸುತ್ತಾನೆ/ಳೆ, ಎಶ್ಟು ಬೇರೆಯವರೊಡನೆ ಬೆರೆಯುತ್ತಾನೆ/ಳೆ, ಎಶ್ಟು ತನ್ನ ಮೇಲೆ ತನಗೆ ನಂಬಿಕೆಯಿದೆ, ಎಶ್ಟು ಒಬ್ಬೊಬ್ಬನೆ ಮಾತನಾಡುತ್ತಾನೆ/ಳೆ, ಎಂತಹ ಕನಸುಗಳು ಬೀಳುತ್ತವೆ…

      ಇವನ್ನೆಲ್ಲ ’ಅಳೆ’ದು ಆಮೇಲೆ ರಿಪೀಟಬಿಲಿಟಿ ಮತ್ತು ರಿಲಯಬಿಲಿಟಿಯ ಬಗ್ಗೆ ಮಾತನಾಡಿ.

  27. Anand Enguru says:

    ಹೌದು ಕಿರಣ್,
    ರೋಗಿಗಳ ರೋಗದ ಬಗೆ ಏನು ಎನ್ನುವುದನ್ನೂ ಇದರಿಂದಲೇ ಕಂಡುಕೊಂಡಿರುತ್ತಾರೆ. ಇಡೀ ಭೂಮಿಯ ಮೇಲೆ ಒಂದರ ಹಾಗೇ ಮತ್ತೊಂದು ಇರುವುದು ಸಾಧ್ಯವೇ ಇಲ್ಲಾ ಎನ್ನುತ್ತದೆ “ಸ್ಟ್ಯಾಟಿಸ್ಟಿಕಲ್” ವಿಜ್ಞಾನ. ಹಾಗೇ ಒಬ್ಬರ ಹಾಗೇ ಇನ್ನೊಬ್ಬರ ದೇಹವೂ ಕೂಡಾ! ಮನಸ್ಸಂತೂ ಹೇಳಲೇ ಆಗದಷ್ಟು ಬೇರೆ ಬೇರೆ!! ಈ ವ್ಯತ್ಯಾಸಗಳು ಕಣಕಣಕ್ಕೂ ಇರುತ್ತದೆ. ಹಾಗೇ ಸಾಮಾನ್ಯವಾದದ್ದೂ ಇದೆಯೆನ್ನುವುದು ಕೂಡಾ ದಿಟವೇ! ಪಿನ್ ತೊಗೊಂಡು ಚುಚ್ಚಿದರೆ ನನಗೂ ನೋಯುತ್ತದೆ… ಇನ್ನೊಬ್ಬನಿಗೂ ನೋಯುತ್ತದೆ. ಕಾಲರಾ ರೋಗ ಬಂದರೆ ನನಗೇನಾಗುತ್ತದೋ ಅದೇ ಇನ್ನೊಬ್ಬರಿಗೂ ಆಗುತ್ತದೆ. ನೆಗಡಿ ಬಂದರೆ ನನಗೇನಾಗಾಗುತ್ತದೋ ಅದೇ ಇನ್ನೊಬ್ಬರಿಗೂ ಆಗುತ್ತದೆ. ಹಾಗಾಗಿ ರೋಗಕ್ಕೆ ಅವ್ಶದ ಕೊಡುವಾಗ ಒಂದೇ ಬಗೆಯ ಅವ್ಶದ ಕೊಡುತ್ತಾರೆ. ಆಗ ಕಾಲರಾ ಬಂದ ನನ್ನ ಮನಸ್ಥಿತಿ/ ಮತ್ತೊಬ್ಬರ ಮನಸ್ಥಿತಿ ಒಂದೇ ಆಗಿರುವುದಿಲ್ಲಾ ಮತ್ತು ಅವ್ಶದದ ಪರಿಣಾಮವೂ ಒಂದೇ ಪ್ರಮಾಣದಲ್ಲಿ ಸಮನಾಗಿರುವುದಿಲ್ಲಾ! ಇವೆಲ್ಲಾ ಸರಿಯೇ… ಆದರೆ ನೀವು ಮಾಡುತ್ತಿರುವ ವಾದದ ಪ್ರಕಾರವೂ ಕೂಡಾ ಈ ಮದ್ದುಗಳು ಮನಶ್ಯರ ನಡುವಿನ ದೈಹಿಕ/ ಮಾನಸಿಕ ವ್ಯತ್ಯಾಸದ ಕಾರಣದಿಂದ ಸಂಪೂರ್ಣ ಬೇರೆಯೇ ಆಗುವುದಿಲ್ಲವಲ್ಲಾ!!

  28. Anand Enguru says:

    ಕಿರಣ್
    ಆರೋಗ್ಯ ಮತ್ತು ಅವ್ಶದ ಕ್ಷೇತ್ರಗಳಲ್ಲಿ ಈ ರಿಪೀಟೆಬಿಲಿಟಿ, ರಿಲೆಯಬಿಲಿಟಿ, ಡಬಲ್ ಬ್ಲೈಂಡ್ ಕ್ಲಿನಿಕಲ್ ಟೆಸ್ಟ್ – ಮುಂತಾದವುಗಳಿಗೆ ಯಾವ ಮಹತ್ವವೇ ಇಲ್ಲವೇ?

  29. Kiran Batni says:

    // ನೆಗಡಿ ಬಂದರೆ ನನಗೇನಾಗಾಗುತ್ತದೋ ಅದೇ ಇನ್ನೊಬ್ಬರಿಗೂ ಆಗುತ್ತದೆ. ಹಾಗಾಗಿ ರೋಗಕ್ಕೆ ಅವ್ಶದ ಕೊಡುವಾಗ ಒಂದೇ ಬಗೆಯ ಅವ್ಶದ ಕೊಡುತ್ತಾರೆ. //

    ಈ ಮಾತನ್ನು ಹೋಮಿಯೋಪತಿಯವರೂ‌ ಒಪ್ಪುವುದಿಲ್ಲ, ಅಲೋಪತಿಯವರೂ‌ ಒಪ್ಪುವುದಿಲ್ಲ.

    // ಮದ್ದುಗಳು ಮನಶ್ಯರ ನಡುವಿನ ದೈಹಿಕ/ ಮಾನಸಿಕ ವ್ಯತ್ಯಾಸದ ಕಾರಣದಿಂದ ಸಂಪೂರ್ಣ ಬೇರೆಯೇ ಆಗುವುದಿಲ್ಲವಲ್ಲಾ!! //

    ಹೋಮಿಯೋಪತಿಯಲ್ಲಿ ಮಾನಸಿಕ ಸ್ತಿತಿಯನ್ನು ಎಣಿಸಿಯೇ ಮದ್ದು/ಅವ್ಶದಿ ಕೊಡಬೇಕೆಂಬುದಿದೆ. ಅಲೋಪತಿಯವರು ಇದನ್ನು ಅಶ್ಟು ತಲೆಗೆ ಹಚ್ಚಿಕೊಳ್ಳುವುದಿಲ್ಲ.

    // ಆರೋಗ್ಯ ಮತ್ತು ಅವ್ಶದ ಕ್ಷೇತ್ರಗಳಲ್ಲಿ ಈ ರಿಪೀಟೆಬಿಲಿಟಿ, ರಿಲೆಯಬಿಲಿಟಿ, ಡಬಲ್ ಬ್ಲೈಂಡ್ ಕ್ಲಿನಿಕಲ್ ಟೆಸ್ಟ್ – ಮುಂತಾದವುಗಳಿಗೆ ಯಾವ ಮಹತ್ವವೇ ಇಲ್ಲವೇ? //

    ಒಬ್ಬನಿಗೆ ಬಂದ ರೋಗಕ್ಕೂ ಇನ್ನೊಬ್ಬನಿಗೆ ಬಂದ ರೋಗಕ್ಕೂ (ಆ ರೋಗದ ಹೆಸರು ನಮ್ಮನ್ನು ನಂಬಿಸುವಂತೆ) ಅಂತರ ಇಲ್ಲ ಎನ್ನುವವರಿಗೆ ಮಹತ್ವ ಇದೆ. ಹೋಮಿಯೋಪತಿಯವರು ಹಾಗನ್ನುವುದಿಲ್ಲ.

  30. Anand Enguru says:

    ಕಿರಣ್,
    ಸರಿ… ಇಂಥಂಥ ಮನಸ್ಥಿತಿಗೆ ಇಂಥಿಂಥ ಅವ್ಶದಿ ಎಂದು ಹೋಮಿಯೋಪತಿಯವರು ಬರೆದಿಟ್ಟಿದ್ದಾರೆಯೇ? ಹೀಗೆ ಮನಸ್ತಿತಿಗೂ ಅವ್ಶದಿಗೂ ಇರುವ ಸಂಬಂಧವನ್ನು ಬರೆದಿಟ್ಟಿದ್ದರೆ, ಅಥವಾ ಅಂತಂದೊಂದು ಸಂಬಂದ ಇದ್ದರೆ ಅದನ್ನು establish ಮಾಡಿರುವುದು ಯಾವ ಬಗೆಯನ್ನು ಬಳಸಿ? ಅಂಥದ್ದೊಂದು ಬಗೆಯಿದ್ದರೆ ಅದು ಎಣಿಕೆಯನ್ನು ಅವಲಂಬಿಸಿಯೇ ಇರಬೇಕಲ್ಲವೇ? ಇಲ್ಲದಿದ್ದರೆ ಇಂಥಾ ಮನಸ್ಥಿತಿ + ಇಂಥಾ ರೋಗಲಕ್ಷಣಕ್ಕೆ ಇಂಥಾ ಮದ್ದು ಎಂದು ಹೇಗೆ ತೀರ್ಮಾನಿಸುವುದು?

    • Kiran Batni says:

      ಮಯ್ ಸ್ತಿತಿ ಮತ್ತು ಮನಸ್ತಿತಿ ಎರಡನ್ನೂ ಸೇರಿಸಿ ಇಂತದ್ದಕ್ಕೆ ಇಂತದ್ದು ಮದ್ದಾಗಬಹುದು ಎಂದು ಬರೆದಿಟ್ಟಿದೆ (ಆದರೆ ಅದು ನೀವು ತಿಳಿದಿರುವಂತೆ ಯಾವ ರೋಗಕ್ಕೆ ಯಾವ ಮದ್ದು ಎಂಬ ಕೇಳ್ವಿಗೆ ಹೇಳ್ವಿಯನ್ನು ಹುಡುಕಿ ಅಲ್ಲ – ಅದರ ಬಗ್ಗೆ ನೀವೇ ಓದಿಕೊಳ್ಳಿ). ಅದರಲ್ಲಿ ಎಣಿಕೆಯೂ ಇದೆ, ನಿಮಗೆ ಬೇಕಾದ ರಿಪೀಟೆಬಿಲಿಟಿ ಮತ್ತು ರಿಲಯಬಿಲಿಟಿಗಳ ಪರೀಕ್ಶೆಗಳೂ ಇರುತ್ತವೆ. ಅದಕ್ಕೇನಂತೆ? ನಾನೇನು ಹೋಮಿಯೋಪತಿಯವರು ಅಳತೆಯನ್ನೇ ಮಾಡುವುದಿಲ್ಲ ಎಂದೆನೇ? ಅದನ್ನು ಅರಿಮೆಯಲ್ಲ ಎನ್ನುವ ಸಿದ್ದರಾಜು ಅವರಿಗೆ ಅರಿಮೆಯಲ್ಲಿ ಅಳತೆಯ ಪಾತ್ರ ಎಶ್ಟಿದೆ, ಎಶ್ಟಿಲ್ಲ ಎಂದು ತೋರಿಸಿದೆ, ಅಶ್ಟೇ. ನೀವೂ ಮನಸ್ತಿತಿಗಳನ್ನು ’ಅಳೆ’ದೇ ರಿಪೀಟೆಬಿಲಿಟಿ ಮತ್ತು ರಿಲಯಬಿಲಿಟಿಗಳ ಬಗ್ಗೆ ಮಾತನಾಡಿ ಎಂದು ಕರೆಯೋಲೆಯನ್ನು ಆಗಲೇ ಕೊಟ್ಟೆನಲ್ಲ? ಅಲೋಪತಿಯವರು ಈ ಕರೆಯೋಲೆಯನ್ನು ಅಶ್ಟು ಗಂಬೀರವಾಗಿ ಎಣಿಸುವುದಿಲ್ಲ ಎನ್ನುವುದು ಇಲ್ಲಿಯ ಪಾಯಿಂಟು.

  31. //ಏಕೆ ಹೀಗಾಯಿತು ಎಂದು ಅರಕೆ ನಡೆಸಿ//
    ಸಕ್ಕರೆ ಕಾಯಿಲೆಯ ವಿಶಯದಲ್ಲಿ ಏಕೆ ಹೀಗಾಗುತ್ತದೆ ಗೊತ್ತೇ? 33 ಮಂದಿಗೆ ಸಕ್ಕರೆ ಕಾಯಿಲೆ ಇರದಿದ್ದರೂ ಇದೆ ಎಂದು ಹೇಳಿರುತ್ತಾರೆ. ಅವರನ್ನು ಹೋಮಿಯೋಪತಿಯವರು ಕಲ್ಲುಸಕ್ಕರೆ ತಿನ್ನಿಸಿ ಗುಣಪಡಿಸುತ್ತಾರೆ. 33 ಮಂದಿಗೆ ಸಣ್ಣ ಪ್ರಮಾಣದ ಕಾಯಿಲೆ ಇರುತ್ತದೆ. ಒಂದೆರಡು ವರ್ಶ ಕಲ್ಲುಸಕ್ಕರೆಯನ್ನು ಅವ್ಶದವೆಂದು ತಿಂದರೆ ಅವರಿಗೆ ಕಾಯಿಲೆ ಕಮ್ಮಿಯಾಗುವುದೂ ಇಲ್ಲ ಅಶ್ಟಾಗಿ ಹೆಚ್ಚಾಗುವುದೂ ಇಲ್ಲ. ಮಿಕ್ಕ 33 ಮಂದಿಗೆ ಪೂರ್ತಿ ಪ್ರಮಾಣದ ಸಕ್ಕರೆ ಕಾಯಿಲೆ ಇರುತ್ತದೆ. ಅವರು ಕಲ್ಲು ಸಕ್ಕರೆಯನ್ನು ಅವ್ಶದವೆಂದು ತಿಂದರೆ ರೋಗ ಉಲ್ಬಣಿಸುತ್ತದೆ. ಅಲ್ಯಾವ ಮನಸ್ತಿತಿಯೂ ಇಲ್ಲ.

    //ಹೋಮಿಯೋಪತಿ ಕೆಲಸ ಮಾಡುವುದಿಲ್ಲ ಎಂಬುದರ ಪುರಾವೆಯಲ್ಲ, ನೀವೇ‌ ಕೆಲಸ ಮಾಡಲು ಬಿಡಲಿಲ್ಲ ಎಂಬುದಕ್ಕೆ ಪುರಾವೆ//
    ಆದುನಿಕ ಮತ್ತಿನ ಅವ್ಶದವನ್ನು ತೆಗೆದುಕೊಳ್ಳಿರಿ. ಅದನ್ನು ನಿಮ್ಮ ಮನಸ್ತಿತಿ ಬಳಸಿ ಕೆಲಸ ಮಾಡಲು ಬಿಡಬೇಡಿ. ಎಚ್ಚರವಾಗೇ ಇರಿ. ನೋಡೋಣ. ಇನ್ನೂ ಹೋಮಿಯೋಪತಿಯ ಯಾವುದೇ 15x ಅವ್ಶದವನ್ನು ಕೊಡಿ. ಕಾಪಿ-ಟೀಗೆ ಹಾಕಿಕೊಂಡು ಕುಡಿಯುತ್ತೇನೆ.

    //ಮನಸ್ಸು ಎಂಬುದು ರೋಗಿಗಳಲ್ಲಿ ಇರುತ್ತದೆ. ನಿಮ್ಮ ‘ಆದುನಿಕ’ ಮದ್ದರಿಮೆಗೆ ಇದು ಅಶ್ಟು ತಲೆಗೆ ಹತ್ತಿಲ್ಲ//
    ತಪ್ಪು. ಬಗೆಯರಿಮೆ (Psychology) ಬಗೆಹರಿಮೆ (Psychiatry) ಎಂಬ ದೊಡ್ಡ ಅರಿಮೆಯ ಮಾಳಗಳೇ ಇವೆ. ಹೋಮಿಯೋಪತಿಯಲ್ಲಿ ಏನೂ ಇಲ್ಲ. ಕಾಯಿಲೆ ಬಿದ್ದವರ ತಿಳುವಳಿಕೆಗೆ ತಕ್ಕ ಸುಳ್ಳು ಮತ್ತು ಬಣ್ಣದ ಮಾತು ಅಶ್ಟೆ.

    //ಓಡುತಿಟ್ಟ//
    ಅದರಲ್ಲಿ ನೀವೆಳಿದ ಸಾರ ಇಲ್ಲ. ಅವ್ಶದಗಳನ್ನ ರೋಗದ ಬೀಜಗಳು ಅನ್ನಲಿಲ್ಲ. ಅವುಗಳು ಬಹಳ ಮುಕ್ಯ, ಬಿಡುವಂತೆಯೇ ಇಲ್ಲ. ಅವುಗಳೇ ಅಡಿಪಾಯ ಅಂತಲೇ ಹೇಳಿದ್ದಾರೆ. ಅವರು ಅದರಲ್ಲಿ ಹೇಳಿದ್ದೆಲ್ಲವೂ ಆದುನಿಕ ಮಾಂಜರಿಮೆ ಹೇಳುವುದನ್ನೇ. ಆದುನಿಕ ಪದ್ದತಿ ರೋಗಗಳನ್ನು ಹೆಚ್ಚಿಸಿದೆ ಅಂದಿಲ್ಲ. ಡಾಕ್ಟರು ರೋಗಿಯ ಬಳಿ 7.5 ನಿಮಿಶಕ್ಕಿಂತ ಹೆಚ್ಚು ಕಾಲ ಕಳೆಯಬೇಕು ಅಂತ ಹೇಳಿದ್ದಾರೆ ಅಶ್ಟೆ. ಮಾಂಜರಿಮೆಯೂ ಅದನ್ನೇ ಹೇಳುತ್ತದೆ. ಅಂತಾ ಏರ್ಪಾಟು ಕಟ್ಟಬೇಕು ಅಶ್ಟೆ. ಅದು ಎಲ್ಲರ ಕೆಲಸ. ಅವರ ಬಗ್ಗೆ ನೋಡಿ ಬಂದೆ. ‘ಆಸ್ಪತ್ರೆ ಏರ್ಪಾಟನ್ನು’ ಸರಿಪಡಿಸುವ ಮಾತಾಡುತ್ತಿದ್ದಾರೆ. ಇನ್ನೂ ಆಳಕ್ಕೆ ನೋಡಿದಾಗ ಮಾಟ-ಮಂತ್ರದ ಗಡಿಯಲ್ಲೇ ಓಡಾಡುತ್ತಿರುವಂತೆಯೇ ಅನಿಸುತ್ತಿದೆ. ‘ಅವ್ಶದ ಮೀರಿ ಮನಸ್ತಿತಿ’ ಎಂಬ ಪುಸ್ತಕದ ತಲೆಬರಹ ಇಡುತ್ತಾರೆ. ಓದಿ ನೋಡಿದರೆ ಅವ್ಶದವೇ ಮುಕ್ಯ, ಮನಸ್ತಿತಿಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಿ ಅನ್ನುತ್ತದೆ. ಇದು ಪುಸ್ತಕ ಪ್ರಕಟಿಸುವವರ ಆಟ. ಲಿಸ್ಸ ರಾಂಕಿನ್ ಅವರು ‘ಆಸ್ಪತ್ರೆಯ ಏರ್ಪಾಟನ್ನು’ ಸರಿಪಡಿಸುವ ಮೊದಲು ಇವರ ಹತ್ತಿರ ಹೊಬಬೇಕಿತ್ತು: http://www.ted.com/talks/meg_jay_why_30_is_not_the_new_20.html
    ಆದುನಿಕ ಅವ್ಶದ ಇರದಿದ್ದರೆ ನಾನು ಈಗಾಗಲೇ ಎರಡು ಬಾರಿ ಸತ್ತಿರಬೇಕಿತ್ತು. 10 ತಿಂಗಳ ಮಗುವಾಗಿದ್ದಾಗೊಮ್ಮೆ ಹಿಂದೆ-ಮುಂದೆಯಾಗಿ ಸಾಯಬೇಕಿತ್ತು. ಚಿಟಿಕಿ ಉಪ್ಪು, ಚಿಟಿಕಿ ಸಕ್ಕರೆ ಬೆರೆಸಿದ ನೀರು ಇಲ್ಲದೇ ಸಾವಿರಾರು ಮಕ್ಕಳು ಸಾಯುತ್ತವೆ. ಎರಡು ವರ್ಶಗಳ ಹಿಂದೆ ಅಪೆಂಡಿಕ್ಸ್ ಆಗಿ ಸಾಯಬೇಕಿತ್ತು. ಹೋಮಿಯೋಪತಿ ತೊಲಗಿದರೆ ಕೆಲವು ಮಂದಿ ಮೋಸ ಹೋಗುವುದು ತಪ್ಪುತ್ತದೆ. ಆದುನಿಕ ಮಾಂಜರಿಮೆ ತೊಲಗಿದರೆ ನಾಗರೀಕತೆಯೇ ಕಾಕಾಉಸ್. ‘ಹದುಳ ಅರಿಮೆಗಳ ಕಲಿಕೆವೀಡಿನವರು’ ಹೋಮಿಯೋಪತಿಯನ್ನ ತಮ್ಮೊಳಗೆ ಬಿಟ್ಟುಕೊಂಡಿರುವುದು ನಮ್ಮಲ್ಲಿ ಅರಿಮೆಯ ಬಗ್ಗೆ ತಿಳುವಳಿಕೆ ಎಶ್ಟು ಕಡಿಮೆಯಿದೆ ಎಂಬುದ ತಿಳಿಸುತ್ತದೆ.

    //‘ಇನ್ನೂರು’ ಎಂಬ ಮಾತು ಬರುವುದೇ ಅದರೊಳಗಿರುವವರು ಎಲ್ಲರೂ ಒಂದೇ ಎಂಬ ನಂಬಿಕೆಯಿಂದ.//
    ಸಲುವು 180 ಡಿಗ್ರೀ ತಿರುಗಮರುಗಾಗಿದೆ. ‘ಇನ್ನೂರು’ ಎಂಬ ಮಾತು ಬರುವುದೇ ಅದರೊಳಗಿರುವ ಎಲ್ಲರೂ ಬೇರೆ ಬೇರೆ ಎಂಬ ತಿಳುವಳಿಕೆಯಿಂದ. ನನ್ನ ತಂದೆ ತಾಯಿ ಇಬ್ಬರಿಗೂ ಸಕ್ಕರೆ ಕಾಯಿಲೆಯಿದೆ. ಬೇರೆ ಬೇರೆ ಪ್ರಮಾಣದಲ್ಲಿದೆ. ಬೇರೆ ಬೇರೆ ಅವ್ಶದ ತೆಗೆದುಕೊಳ್ಳುತ್ತಾರೆ. ತಿಂಗಳಿಗೊಮ್ಮೆ ಪರೀಕ್ಶೆ ಮಾಡಿಸುತ್ತಾರೆ. ಕಾಯಿಲೆ ಹತೋಟಿಗೆ ಬಂದಾಗ ಅವ್ಶದವನ್ನೇ ನಿಲ್ಲಿಸುತ್ತಾರೆ. ನನ್ನ ತಂದೆಯವರು ಮದುವೆ-ಬೀಗರೂಟಗಳಿಗೆ ಓಡಾಡಿ ಸಕ್ಕರೆಯನ್ನು ಕೊಂಚ ಹೆಚ್ಚಿಸಿಕೊಂಡಾಗ ಮತ್ತೆ ಆರಂಬಿಸುತ್ತಾರೆ. ಮದುವೆಯ ಸುಗ್ಗಿಯಲ್ಲಿ ಎಚ್ಚರವಾಗಿರಿ ಎಂದು ಡಾಕ್ಟರು ಹೇಳುತ್ತಾರೆ. ನನ್ನ ತಂದೆ ಕೇಳುವುದಿಲ್ಲ.

    //ನಿಮಗೆ ಅದು ಕಲ್ಲುಸಕ್ಕರೆ ಎಂಬ ಮುನ್ನೆಣಿಕೆಯಿದೆ. ಆದುದರಿಂದ ಅದರಲ್ಲಿ ನಿಮಗೆ ಅದನ್ನು ಬಿಟ್ಟು ಬೇರೇನೂ‌ ಕಾಣಿಸುವುದಿಲ್ಲ//
    ಅದು ಕಲ್ಲು ಸಕ್ಕರೆ ಎಂದು ನನಗೆ ಗೊತ್ತಿದೆ. ಅದರಲ್ಲಿ ಬೇರೆ ಏನಾದರೂ ಇದ್ದರೆ ನಾನದನ್ನ ಕಾಣಬಲ್ಲೆ. ನನಗೆ ಅದನ್ನು ಕಾಣುವ ಚಳಕಗಳು ಗೊತ್ತಿವೆ. ಆದರೆ, ನಿಮಗೆ ಅದರಲ್ಲಿ ಅವ್ಶದ ಇದೆ ಎಂಬ ಎಣಿಕೆ ಇದೆ. ರೋಗಿಗಳಿಗೆ ದಿಟ ತಿಳಿಸಿಕೊಡುವುದು ಅರಿಮೆಗಾರರ ಹೊಣೆ.

    //ಮಯ್ ಸ್ತಿತಿ ಮತ್ತು ಮನಸ್ತಿತಿ ಎರಡನ್ನೂ ಸೇರಿಸಿ ಇಂತದ್ದಕ್ಕೆ ಇಂತದ್ದು ಮದ್ದಾಗಬಹುದು ಎಂದು ಬರೆದಿಟ್ಟಿದೆ//
    ಜೋತಿಶ್ಯ ಶಾಸ್ತ್ರವನ್ನೂ ಬರೆದಿಟ್ಟಿದ್ದಾರೆ.

    ಅವ್ಶದ ಕಂಡುಹಿಡಿಯುವುದರ ಬಗ್ಗೆ ಇಲ್ಲಿ ಕೊಂಚ ವಿವರವಿದೆ: http://www.ted.com/talks/francis_collins_we_need_better_drugs_now.html

  32. ಗುರು ಅವರೇ,
    //ಅಂದ ಹಾಗೆ ಕೆಲ ಸಾರಿ ನಾವು ಮನೆಯಲ್ಲಿಯೇ ಔಷಧವನ್ನು ತಯಾರಿಸಿಕೊಳ್ಳುತ್ತೇವೆ. ಆದ್ದರಿಂದ ಹೋಮಿಯೋಪತಿಯಲ್ಲಿ ಕೆಲ ಸಾರಿ ಔಷಧವೇ ಇರುವುದಿಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ.//
    30c ಎಂದು ಇರುವ ಅವ್ಶದಗಳಲ್ಲಿ ಅವ್ಶದ ಇರುವುದಿಲ್ಲ.

    //ಒಮ್ಮೆ ಕೀಟನಾಶಕದಿಂದ ರೋಗಗ್ರಸ್ಥವಾದ ನವಿಲಿಗೆ arsenic album ಎನ್ನುವ ಅವ್ಶಧದಿಂದ ಸಂಪೂರ್ಣವಾಗಿ ಗುಣವಾಗಿ ಎರಡೇ ದಿನದಲ್ಲಿ ಮೊದಲಿನಂತಾಯಿತು. ಇದೇ ಅವ್ಶಧವನ್ನು ಬುಲ್ ಬುಲ್ ಹಕ್ಕಿಗಳ ಮೇಲೋ ಪ್ರಯೋಗಿಸಲಾಗಿದೆ.//
    Arsenic Album ಅನ್ನು ತಿನ್ನದೇ ಇದ್ದಿದ್ದರೆ ನವಿಲು ಏನಾಗುತ್ತಿತ್ತು ಗೊತ್ತಿದೆಯೇ? ಆದುನಿಕ ಮಾಂಜರಿಮೆಯಲ್ಲಿ ಯಾವ ಕೀಟನಾಶಕ ತಿನ್ನಲಾಗಿದೆ ಎನ್ನುವ ಆದಾರದ ಮೇಲೆ ನಂಜುಮುರಿ ಹಾರಯ್ಕೆಗಳಿವೆ. Arsenic Album ಕೂಡ ಒಂದು ನಂಜು. ಅದನ್ನು 30C ನಲ್ಲಿ ಕುಡಿಸಿದಿರಿ ಅಂದರೆ ನೀರನ್ನು ಕುಡಿಸಿದಿರಿ ಎಂದೇ ಹುರುಳು. ಆದರೆ 1C ಪ್ರಮಾಣದಲ್ಲಿ ಬಳಸಿದಲ್ಲಿ ಅದೇ ಮಯ್ಯಿಗೆ ನಂಜೇರಿಸುವುದು. ಹಲವು ಹೋಮಿಯೋಪತಿ ವಯ್ದಿಯರುಗಳು ಅದನ್ನು ರೋಗಿಗಳ ಮೇಲೆ ಬಳಸಿ ನಂಜೇರಿಸಿದ್ದಾರೆ. ಇಲ್ಲಿ ನೋಡಿ: https://www.ncbi.nlm.nih.gov/pubmed/14705842. ನಾನೇನಾದರೂ ಆ ರೋಗಿಯಾಗಿದ್ದಲ್ಲಿ ಕೋರ್ಟಿಗೆಳೆದು ದಂಡ ಕಕ್ಕಿಸುತ್ತಿದ್ದೆ. ನೀವು ನಂಜಿನ ವಸ್ತುಗಳನ್ನು ಹಕ್ಕಿ-ಪಕ್ಕಿಗಳಿಗೆ ಕುಡಿಸುವಾಗ ಎಚ್ಚರದಿಂದಿರುವುದು ಒಳಿತು. ಇಂದಿನ ಕಾಲದಲ್ಲಿ ಅವುಗಳ ರಕ್ಶಣೆಗಾಗಿ ಹಲವು ಕಾಯ್ದೆಗಳಿವೆ.

    //ಈ ವೈದ್ಯ ಪಧ್ಧತಿಯಲ್ಲಿ ಪಿತ್ತೋದ್ರೇಕವಾದರೆ ಅದಕ್ಕೆ ಕ್ಷಾರೀಯ ಔಷಧವನ್ನು ಕೊಡಲಾಗುತ್ತದೆ. ಇದು ಪಿತ್ತವನ್ನು ಕೆಲ ಕಾಲದ ಮಟ್ಟಿಗೆ ಮಾತ್ರ ತಡೆಯಬಲ್ಲದು.//
    ಇದೇನೆಂದು ತಿಳಿಯಲಿಲ್ಲ.
    //ಇದೇ ರೀತಿ ಚರ್ಮ ರೋಗಗಳಲ್ಲೂ ಕೇವಲ ಲಕ್ಷಣಗಳನ್ನು ಮಾತ್ರ ಗುಣಪಡಿಸಲಾಗುತ್ತದೆ. ಇವಕ್ಕೆ ಹೋಮೊಯೊಪತಿ ಮತ್ತು ಆಯುರ್ವೇದದಲ್ಲಿ ಒಳ್ಳೆಯ ಔಷಧಿಗಳಿವೆ.//
    ಆದುನಿಕ ಮಾಂಜರಿಮೆಯಲ್ಲಿ ಬುಡಕ್ಕೇ ಅವ್ಶದ (Specific treatment) ಮತ್ತು ಕುರುಹುಗಳಿಗೆ ಅವ್ಶದ (Symptomatic Treatment) ಎಂಬ ಬಗೆಗಳಿವೆ. ಕೆಲವು ಬಾರಿ ಅವುಗಳಲ್ಲಿ ಒಂದು ಬಗೆಯ, ಕೆಲವು ಬಾರಿ ಎರಡೂ ಬಗೆಯ ಅವ್ಶದಗಳನ್ನು ಬಳಸಬೇಕಾಗುತ್ತದೆ. ಹೋಮಿಯೋಪತಿಯವರಿಗೆ ರೋಗದ ಕುರುಹು ಯಾವುದು, ಮೂಲ ಯಾವುದು ಎಂಬುದೂ ಗೊತ್ತಿರುವುದಿಲ್ಲ. ಏನೋ ಗೊಣಗುತ್ತಿರುತ್ತಾರೆ. ಇಲ್ಲಿ ನೋಡಿ: http://www.youtube.com/watch?v=kA6rUU0K9xE

    ಇನ್ನೊಂದು ಮುಖ್ಯ ಅಂಶವೆಂದರೆ ಹೋಮಿಯೋಪತಿಯಲ್ಲಿ ರೋಗವನ್ನು ಮತ್ತೆಹಚ್ಚುವಿಕೆ ಮತ್ತು ಔಷಧದ ಆಯ್ಕೆ ಬಹುಮುಖ್ಯ. ಇಬ್ಬರು ಬೇರೆ ಬೇರೆ ವ್ಯಕ್ತಿಗಳಿಗೆ ನೆಗಡಿಯಾಗಿದ್ದರೆ ಅವರಿಗೆ ಒಂದೇ ಔಷಧವನ್ನು ಕೊಡಲಾಗದು. ಅವರ ವಯಕ್ತಿಕ ದೇಹಸ್ಥಿತಿಯನ್ನು ಅರಿತು ಅದಕ್ಕೆ ತಕ್ಕಂತೆ ಔಷಧವನ್ನು ಕೊಡಲಾಗುತ್ತದೆ. ಆದ್ದರಿಂದ ಯಾವಾಗಲೂ ನುರಿತ ವೈದ್ಯರನ್ನುಕಾಣುವುದರಿಂದ ಉತ್ತಮ ಮತ್ತು ನಿಖರ ಫಲಿತಾಂಶದ ಸಾಧ್ಯತೆ ಹೆಚ್ಚಾಗಿರುತ್ತದೆ.

    ತಾವು ಒಳ್ಳೆಯ ವೈದ್ಯರನ್ನು ಕಂಡದ್ದೇ ಆದಲ್ಲಿ ಫಲಿತಾಂಶ ಬಹುಪಾಲು ಖಚಿತ

  33. ತಿದ್ದುಪಡಿ: ಮೇಲಿನ ನನ್ನ ಮರುಮಾತಿನಲ್ಲಿ ಕೊನೆಯ ಎರಡು ಪ್ಯಾರಾಗಳು ‘ಗುರು ಆರ್ ಟಿ’ ಅವರದ್ದು. ನನ್ನ ಮಾತು ಓಡುತಿಟ್ಟದ ಕೊಂಡಿಯೊಂದಿಗೆ ಮುಗಿಯುತ್ತದೆ.

  34. Kiran Batni says:

    // ಸಕ್ಕರೆ ಕಾಯಿಲೆಯ ವಿಶಯದಲ್ಲಿ ಏಕೆ ಹೀಗಾಗುತ್ತದೆ ಗೊತ್ತೇ?… //
    ಇದೆಲ್ಲವೂ ಕಟ್ಟಕತೆ. ನಮ್ಮ ತಾಯಿಗೇ ಸಕ್ಕರೆಕಾಯಿಲೆಗೆ ಅಲೋಪತಿ ಕೊಡಿಸುತ್ತಿದ್ದೆವು. ಅದರಿಂದ ಅವಳಿಗೆ ಆ ರೋಗ ಹೋಗುವುದಿರಲಿ, ಬೇರೆ ಅಡ್ಡಪರಿಣಾಮಗಳು ಎಶ್ಟಿದ್ದವು ಎಂದರೆ ಆಕೆಗೆ ಬದುಕಲೇ ತೊಂದರೆಯಾಗಿತ್ತು – ತಡೆಯಲಾರದಶ್ಟು ಮಯ್ಕಯ್ ನೋವು, ಆಗಾಗ ವಾಂತಿ, ಬಳಲಿಕೆ. ಹೋಮಿಯೋಪತಿ ಕೊಡಿಸಲು ಶುರು ಮಾಡಿದಾಗಿನಿಂದ ಸಕ್ಕರೆಕಾಯಿಲೆಯೂ ಪೂರ‍್ತಿ ಹಿಡಿತದಲ್ಲಿದೆ, ಯಾವ ಅಡ್ಡಪರಿಣಾಮಗಳೂ ಇಲ್ಲ. ಸತ್ತು ಬದುಕಿದ್ದಾಳಾಕೆ.

    // ಬಗೆಯರಿಮೆ (Psychology) ಬಗೆಹರಿಮೆ (Psychiatry) ಎಂಬ ದೊಡ್ಡ ಅರಿಮೆಯ ಮಾಳಗಳೇ ಇವೆ. //
    ಯಾರಿಲ್ಲ ಎಂದವರು? ಅದನ್ನು ಆಯಾ ಅರಿಗರಿಗೆ ಬಿಟ್ಟು ಅಲೋಪತಿಯವರು ಸಕ್ಕರೆ ಕಾಯಿಲಿ ಮುಂತಾದವಕ್ಕೆ ಅವ್ಶದ ಕೊಡುತ್ತಾರಲ್ಲ, ಅದರ ಬಗ್ಗೆ ಮಾತನಾಡಿದ್ದು.

    // ಲಿಸ್ಸಾ ರ‍್ಯಾಂಕಿನ್ ಅವರ ಓಡುತಿಟ್ಟದ ಬಗ್ಗೆ ನೀವು ಹೇಳಿರುವುದು //
    ಅದರಲ್ಲಿ ಅಲೋಪತಿಯು ಎಶ್ಟೋ ರೋಗಗಳಿಗೆ ಸರಿಯಾಗಿ ಅವ್ಶದಿ ಕೊಡಲಾಗುತ್ತಿಲ್ಲ, ಏಕೆಂದರೆ ಅದು ಬರೀ ಮಯ್ಮೇಲೆ ಗಮನ ಹರಿಸುತ್ತದೆ ಎಂದು ಲಿಸ್ಸಾ ಹೇಳಿದ್ದು ಕೇಳಿಸಲಿಲ್ಲವೋ ಹೇಗೆ? ಆಕೆಯ ಇದರ ಬಗ್ಗೆ “Mind Over Medicine” ಎಂಬ ಒಂದು ಹೊತ್ತಗೆಯನ್ನೂ ಬರೆದಿದ್ದಾಳೆ, ಓದಿ ನೋಡಿ.

    // ‘ಇನ್ನೂರು’ ಎಂಬ ಮಾತು ಬರುವುದೇ ಅದರೊಳಗಿರುವ ಎಲ್ಲರೂ ಬೇರೆ ಬೇರೆ ಎಂಬ ತಿಳುವಳಿಕೆಯಿಂದ. //
    ತಪ್ಪು. ಒಂದೇ ಬಗೆಯವನ್ನೇ ’ಎಣಿಸು’ವುದು, ಅದರ ಬಗ್ಗೆ ಸ್ಟಾಟಿಸ್ಟಿಕಲ್ ಹೇಳಿಕೆಗಳನ್ನು ಹೇಳಲಾಗುವುದು.

    // ಅದು ಕಲ್ಲು ಸಕ್ಕರೆ ಎಂದು ನನಗೆ ಗೊತ್ತಿದೆ. ಅದರಲ್ಲಿ ಬೇರೆ ಏನಾದರೂ ಇದ್ದರೆ ನಾನದನ್ನ ಕಾಣಬಲ್ಲೆ. //
    ತಪ್ಪು. ನಿಮ್ಮ ಕಾಣುವಿಕೆ ನಿಮ್ಮ ಸಲಕರಣೆಗಳ ಮಿತಿಯನ್ನು ಮೀರಲಾರದು, ಮತ್ತು ನೀವು ಪರೀಕ್ಶಿಸುತ್ತಿರುವ ವಸ್ತುವಿನಲ್ಲಿ ನೀವು ಏನನ್ನು ಹುಡುಕುತ್ತಿದ್ದೀರಿ ಎನ್ನುವ ಮನಸ್ತಿತಿಯನ್ನು ಮೀರಲಾರದು. ಕ್ವಾಂಟಮ್ ಪಿಸಿಕ್ಸ್ ಎನ್ನುವುದು ಒಂದು ಇದೆ. ಗೊತ್ತೇ? ಅದರಲ್ಲಿ ನೋಟವೆಂಬುದು ನೋಡುಗನೊಂದಿಗೆ ಎಶ್ಟು ಬೆಸೆತುಕೊಂಡಿದೆ ಎಂದು ತಿಳಿಸುತ್ತಾರೆ, ಓದಿ ನೋಡಿ.

    // ರೋಗಿಗಳಿಗೆ ದಿಟ ತಿಳಿಸಿಕೊಡುವುದು ಅರಿಮೆಗಾರರ ಹೊಣೆ. //
    ನಿಜ. ಆದರೆ ದಿಟವೆಂದರೆ ನಾನು ತಿಳಿದಿರುವುದೇ ಎಂದುಕೊಳ್ಳುವುದು ಅರಿಮೆಯ ಬಗೆಯಲ್ಲ. ಹೀಗೆ ತಿಳಿದುಕೊಂಡಿದ್ದರೆ ಅರಿಮೆ ಎಂದಿಗೂ ಬೆಳೆಯುತ್ತಿರಲಿಲ್ಲ.

    ಇನ್ನು ಹೆಚ್ಚು ನಾನು ಈ ವಿಶಯವನ್ನು ಮುಂದುವರೆಸಲಾರೆ. ಅಲೋಪತಿ ಪ್ರಾಣವನ್ನೇ ತೆಗೆದುಕೊಳ್ಳಲು ಹೊರಟಿತ್ತು ಹಾಗೂ ಹೋಮಿಯೋಪತಿ ಕೆಲಸ ಮಾಡುತ್ತದೆ ಎನ್ನುವುದಕ್ಕೆ ನಮ್ಮ ಮನೆಯಲ್ಲೇ ಎತ್ತುಗೆಗಳಿವೆ. ಆ ಕಣ್ಪುರಾವೆಯನ್ನು ನಾನು ಎಂದಿಗೂ ಕಯ್ಬಿಡಲಾರೆ. ನಿಮ್ಮ ದಾರಿ ನಿಮಗೆ. ಆದರೆ ಹೋಮಿಯೋಪತಿಯನ್ನು ಅರಿಮೆಯಲ್ಲ ಎಂದು ನಾನು ಎಂದಿಗೂ ಒಪ್ಪಲಾರೆ. ಅರಿಮೆಯು ಹೋಮಿಯೋಪತಿ ಏತಕ್ಕೆ ಕೆಲಸ ಮಾಡುತ್ತದೆಯೆಂದು ತಿಳಿದುಕೊಳ್ಳುವಶ್ಟು ಬೆಳೆದಿಲ್ಲ.

    ನಮಸ್ಕಾರ.

  35. ಕಿರಣ್,
    //ನಿಮ್ಮ ತಾಯಿಯ ಹದುಳದ ಕಿರುಕತೆ//
    ನಿಮ್ಮ ತಾಯಿ ಈಗ ಕುತ್ತಿನಿಂದ ಪಾರಾಗಿರುವುದು ಒಳ್ಳೆಯ ಸುದ್ದಿ. ಅವರು ಹದುಳವಾಗಿರಲಿ ಎಂದು ಹಾರಯ್ಸುತ್ತೇನೆ. ನೀವು ಹೆಚ್ಚಿನ ಮಾಹಿತಿ ಕೊಟ್ಟಿದ್ದಲ್ಲಿ ಆದದ್ದೆಲ್ಲಾ ಏಕಾಯಿತು ಎಂದು ಕಂಡುಕೊಳ್ಳಬಹುದು. ನಿಮ್ಮ ತಾಯಿಗೆ ಸಕ್ಕರ ಕಾಯಿಲೆ ಇದೆ ಎಂದು ಹೇಗೆ ಕಂಡುಕೊಳ್ಳಲಾಗಿತ್ತು? ಯಾವ ಯಾವ ಪರೀಕ್ಶೆ ಮಾಡಿದ್ದರು? ಯಾವ ಯಾವ ಅವ್ಶದಗಳನ್ನು ಕೊಟ್ಟಿದ್ದರು? ಅವ್ಶದಗಳನ್ನು ಕೊಟ್ಟನಂತರ ಸಕ್ಕರೆಯು ಹೇಗಿತ್ತು? ಮುಂತಾದ ಮಾಹಿತಿಗಳು ಇದ್ದಲ್ಲಿ ‘ಕೇಸ್ ಸ್ಟಡಿ’ಗೆ ನೆರವಾಗುತ್ತದೆ. ನಿಮ್ಮ ತಾಯಿಯು ಪಡಬೇಕಾಗಿ ಬಂದ ಪಾಡಿನಿಂದ ಆದುನಿಕ ಮಾಜರಿಮೆಯು ಕಲಿಯುವುದಿದ್ದರೆ ಕಲಿಯಲೇ ಬೇಕು. ಅದು ಮಾಂಜುಗರ ತಪ್ಪಾಗಿದ್ದಲ್ಲಿ ಅವರನ್ನ ಕೋರ್ಟಿಗೆ ಎಳೆಯಲೇ ಬೇಕು. ಅವ್ಶದ ತಯಾರಿಸುವವರು ತಪ್ಪು ಮಾಡಿದ್ದಲ್ಲಿ ಅವರೂ ಜಯ್ಲಿಗೆ ಹೋಗಲೇಬೇಕು. ದಿಟ ಗೊತ್ತಾಗಲೇಬೇಕು.
    ನೀವು ನಿಮ್ಮ ತಾಯಿಯ ಪಾಡು ಹೇಳಿದಿರಿ. ನಾನು ನನ್ನ ತಾಯಿ, ತಂದೆ ಮತ್ತು ಮಾವನವರ ಪಾಡು ಹೇಳುತ್ತೇನೆ. ಅವರುಗಳು ಆದುನಿಕ ಮಾಂಜರಿಮೆಯ ಅವ್ಶದಗಳಿಂದ ಗೆಲುವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    //ಆಯಾ ಅರಿಗರಿಗೆ ಬಿಟ್ಟು ಅಲೋಪತಿಯವರು ಸಕ್ಕರೆ ಕಾಯಿಲಿ ಮುಂತಾದವಕ್ಕೆ ಅವ್ಶದ ಕೊಡುತ್ತಾರಲ್ಲ//
    ಮೊದಲಿಗೆ, ಅಲೋಪತಿ ಅಂದರೇನೆಂದು ನನಗೆ ಗೊತ್ತಿಲ್ಲ. ನಾನು ಮಾತಾಡುತ್ತಿರುವುದು ಆದುನಿಕ ಮಾಂಜರಿಮೆಯ ಬಗ್ಗೆ. ಆಸ್ಪತ್ರೆಗಳಲ್ಲಿ specialistಗಳು ಇರುವುದರಿಂದ ತೊಡರುಗಳಿವೆ ದಿಟ. ಆದರೆ, ಒಟ್ಟಾರೆಯಾಗಿ ಅದರಿಂದ ಒಳಿತೇ ಹೆಚ್ಚಿದೆ. ಹಲವು Specialistಗಳು ಒಂದೇ ಸೂರಿನಡಿ ಇರುವ ಏರ್ಪಾಟನ್ನು ಆಸ್ಪತ್ರೆಯ ಪಾರುಪತ್ತೆದಾರರು ಮಾಡಬೇಕು. ಮಾಡುತ್ತಿದ್ದಾರೆ. ಇದು ಆಸ್ಪತ್ರೆಯ ಪಾರುಪತ್ತೆಯ ತಾಪತ್ರೆ. ಮಾಂಜರಿಮೆಯದಲ್ಲ.

    //Mind over medicine//
    ಅದರ ಬಗ್ಗೆ ಮೇಲೆಯೇ ಮಾತಾಡಿದ್ದೇನೆ ನೋಡಿ.

    //statistics ಬಗ್ಗೆ ನಿಮ್ಮಲ್ಲಿರುವ ಅನಿಸಿಕೆಯ ಬಗ್ಗೆ//
    ತಿಳಿಹದರಿಮೆ (Statistics) ಇರುವುದೇ ‘ಬೇರ್ಮೆಗಳನ್ನ’ (variables) ಎಣಿಕೆಯರಿಮೆಯ ಮಾದರಿಗಳಲ್ಲಿ (Mathematical Models) ಹಿಡಿದಿಡಲು.

    //ಕ್ವಾಂಟಮ್ ಪಿಸಿಕ್ಸ್//
    ಗಮನಿಸುತ್ತಿದ್ದೇನೆ. ಇದು ಇತ್ತೀಚಿಗೆ ಹೆಚ್ಚು ದುರ್ಬಳಕೆಯಾಗುತ್ತಿರುವ ಪದ. ನನಗೆ ಗೊತ್ತಿರುವ ಕ್ವಾಂಟಮ್ ಪುರುಳರಿಮೆಯನ್ನೇ ಬಳಸಿ ‘ಕ್ವಾಂಟಮ್ ಚಿಕತ್ಸೆ’ಯ ಮುಂದಾಳುಗಳು ಆಡುವ ಮಾತು ಕೇಳಿದಾಗೆಲ್ಲಾ ನಗು ಮಾತ್ರ ಬಂದಿದೆ. ಕ್ವಾಂಟಮ್ ಮಟ್ಟದಲ್ಲಿ ಪೋಟಾನ್ಗಳು ಕಬ್ಬಡ್ಡಿ ಆಟಗಾರನ ಚರ್ಮಕ್ಕೆ ಬಡಿದರೆ ಚರ್ಮ ವಸಿ ಕಪ್ಪಾಗಬಹುದು. ಆದರೆ, ಒಬ್ಬ ಕಬ್ಬಡ್ಡಿ ಆಟಗಾರನ ಜೊತೆ ಪೊಟಾನ್ಗಳು ಕ್ವಾಂಟಮ್ ಮಟ್ಟದಲ್ಲಿ ಕಬ್ಬಡ್ಡಿ ಆಡಲಾರವು. ಅವನ ಜೊತೆ ಕಬ್ಬಡಿಯಾಡಲು ಇನ್ನೊಬ್ಬ ಕಬ್ಬಡ್ಡಿ ಆಟಗಾರನೇ ಬೇಕು. ಕ್ವಾಂಟಮ್ಮರು ಪೋಟಾನ್ ಮತ್ತು ಕಬ್ಬಡ್ಡಿ ಆಟಗಾರರ ನಡುವೆ ಕಬ್ಬಡ್ಡಿ ಆಡಿಸಿ ಸ್ಕೋರ್ ಕೂಡಾ ಹೇಳುತ್ತಾರೆ (ಉಪಮೆಯ ಮಾತು).

    //ದಿಟವೆಂದರೆ ನಾನು ತಿಳಿದಿರುವುದೇ ಎಂದುಕೊಳ್ಳುವುದು ಅರಿಮೆಯ ಬಗೆಯಲ್ಲ//
    ದಿಟ.
    -ನನ್ನಿ.

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *