MERS-COV ಎಂಬ ವಯ್ರಸ್ ಹರಡುತ್ತಿದೆ

2003ರಲ್ಲಿ ಸಾರ್ಸ್ ಎಂಬ ನಂಜುಳ (virus) ರೋಗವು ಹರಡಿ ಸುದ್ದಿಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಸಾರ್ಸ್ ರೋಗವು ಕರೋನಾ ನಂಜುಳ (corona virus) ಎಂಬ ವಯ್ರಸ್ ಕುಲಕ್ಕೆ ಸೇರಿದ ನಂಜುಳದಿಂದ ಬರುತ್ತದೆ. ಇತ್ತೀಚೆಗೆ ಅದಕ್ಕೆ ಹೋಲುವ ಇನ್ನೊಂದ ನಂಜುಳವು ಹಬ್ಬುತ್ತಿದೆ ಗೊತ್ತೇ? ಆ ಹೊಸ ನಂಜುಳದ ಹೆಸರು ‘ನಡು-ಮೂಡಲಿನ ಉಸಿರಾಟ ಬೇನೆಯ-ಕರೋನಾ ವಯ್ರಸ್’, ಮೆರ್ಸ್-ಕೋವ್ (Middle Eastern Respiratory Syndrome-Corona Virus, MERS-COV) ಎಂದು. ಸುತ್ತಲೂ ಸಿಂಗರಿಸಿಕೊಂಡಿರುವ ಕಿರೀಟದಂತೆ ಕಾಣುವುದರಿಂದ ಇದರ ಕುಲಕ್ಕೆ ಕರೋನಾ ನಂಜುಳ ಎಂಬ ಹೆಸರು ಬಂದಿದೆ. ಲ್ಯಾಟಿನ್ನಿನಲ್ಲಿ ಕರೋನಾ ಎಂದರೆ ಕಿರೀಟ/ಮುಡಿ ಎಂದು ಹುರುಳು.

ಕರೋನಾ ನಂಜುಳ

ಹೊಸದಾಗಿ ಕಂಡುಬಂದಿರುವ ಈ ಕರೋನಾ ನಂಜುಳವು ಮೊದಲಿಗೆ  ಸೆಪ್ಟೆಂಬರ್ 2012ರಲ್ಲಿ ಸವ್ದಿ ಅರೇಬಿಯಾ ನಾಡಿನಲ್ಲಿ ಆರಂಬವಾಗಿ ನಿದಾನವಾಗಿ ಇಡೀ ನೆಲಕ್ಕೆಲ್ಲಾ ಹಬ್ಬುತ್ತಿದೆ. ನಡು-ಮೂಡಲಿನ ನಾಡುಗಳಾದ ಕತಾರ್, ಟುನಿಶಿಯಾ, ಜೋರ್ಡನ್ ದೇಶಗಳಿಗೆ ಮೊದಲು ಹಬ್ಬಿತು. ಇತ್ತೀಚೆಗೆ ಬ್ರಿಟನ್, ಜೆರ್ಮನಿ, ಪ್ರಾನ್ಸ್ ಮತ್ತು ಇಟಲಿ ಸೇರಿದಂತೆ ಯುರೋಪಿನ ಹಲವು ದೇಶಗಳಿಗೆ ಹಬ್ಬುತ್ತಿದೆ. ಸೊಂಕು ತಗುಲಿದ ರೋಗಿಗಳಲ್ಲಿ ನಂಜುಳವು ಉಸಿರು-ಚೀಲವನ್ನು ಆಕ್ರಮಿಸುತ್ತದೆ. ಉಸಿರುಚೀಲ ಹದಗೆಟ್ಟು ರೋಗಿಗಲು ಸಾವನ್ನಪ್ಪುತ್ತಾರೆ.

ಹೊಸ ನಂಜುಳದ ಬಗ್ಗೆ ಎರಡು ಮಾತುಗಳನ್ನು ನೆನಪಿಡಬೇಕು:

1. ಇದು ಬಹುಬೇಗ ಸಾವು ತರಬಲ್ಲ ನಂಜುಳ. ಇದುವರೆಗೆ ಅರಕೆ-ಕೋಣೆಯಲ್ಲಿ ನಿಕ್ಕಿಯಾಗಿ ಕಂಡುಹಿಡಿದಿರಲಾಗಿರುವ ರೋಗಿಗಳ ಎಣಿಕೆ 51. ಇವರುಗಳಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. ಅಂದರೆ ಈ ನಂಜುಳದಿಂದಾಗುವ ಸಾವಿನ ಮಟ್ಟ (mortality) ಬಹಳ ಹೆಚ್ಚಿದೆ. ಅರ್ದಕ್ಕಿಂತ ಹೆಚ್ಚು ರೋಗಿಗಳು ಸವ್ದಿ ಅರೇಬಿಯಾದಲ್ಲೇ ಕಂಡುಬಂದಿದ್ದಾರೆ. ನಂಜುಳವು ಮೊದಲು ಯಾರಲ್ಲಿ ಕಾಣಿಸಿಕೊಂಡಿತು. ಅವರಿಗೆ ಹೇಗೆ ತಗುಲಿತು ಎಂದು ತಿಳಿದುಕೊಳ್ಳುವುದು ಬಹಳ ಅದಿರಾದುದು. ಇದರಿಂದ ಲಸಿಕೆಯನ್ನು ಕಂಡುಹಿಡಿಯಲು, ನಂಜುಳವು ಹುಡದಂತೆ ತಡೆಗಟ್ಟುವ ಹಮ್ಮುಗೆಗಳನ್ನು ಏರ್ಪಡಿಸಲು ಅನುವಾಗುತ್ತದೆ.

ನಂಜುಳವು ಮೊದಲು ಹುಟ್ಟಿದ್ದೇ ಆಸ್ಪತ್ರೆಯೊಂದರಲ್ಲಿ ಎಂಬ ಗುಮಾನಿ ಇದೆ. ಅದರಲ್ಲೂ ಕುಯ್ಯಾರಯ್ಕೆ ಮಾಡಲು ಮಂಪರು ಬರಿಸಿದ ರೋಗಿಯ ಉಸಿರಾಟಕ್ಕಾಗಿ ಬಳಸುವ ಒಂದು ಉಸಿರಾಟದ ಯಂತ್ರವೇ ಹಲವು ಮಂದಿಗೆ ರೋಗ ಹರಡಿರುವಂತೆ ತೋರುತ್ತಿದೆ. ಅದೇ ಆಸ್ಪತ್ರೆಯಲ್ಲಿ ಹಲವಾರು ಮಂದಿ ನರ್ಸ್ಗಳು ಕೂಡ ರೋಗಕ್ಕೆ ತುತ್ತಾಗಿದ್ದಾರೆ. ರೋಗ ಹೇಗೆ ಹುಟ್ಟಿತು, ಹೇಗೆ ಹರಡಿತು ಎಂಬವುಗಳ ಬಗ್ಗೆ ಇದುವರೆಗೂ ಹೆಚ್ಚಿನ ಅರಕೆಯನ್ನು ಮಾಡಲಾಗಿಲ್ಲ. ರೋಗವು ಸವ್ದಿ ಅರೇಬಿಯಾದಲ್ಲೇ ಹೆಚ್ಚು ಇದ್ದಿದ್ದು ಅದಕ್ಕೆ ಸಲುವಾಗಿರಬೇಕು.

2. ಮೆರ್ಸ-ಕೋವ್ ನಂಜುಳವು ಸಾರ್ಸ್ ನಂಜುಳದಶ್ಟು ಸುಲಬವಾಗಿ ಹಬ್ಬುವುದಿಲ್ಲ. ಇದು ಒಳ್ಳೆಯ ಸುದ್ದಿ. ಹಾಗಾಗಿ ಓದುಗರು ಆಶ್ಟು ತಲೆಕೆಡಿಸಿಕೊಳ್ಳಬೇಕಿಲ್ಲ. ಸುಲಬವಾಗಿ ಹರಡುವ ನಂಜುಳಗಳ ಸೊಂಕು ತಗುಲಿದ ಮೇಲೆ ರೋಗದ ಕುರುಹುಗಳು ಕಾಣಿಸಿಕೊಳ್ಳಲು ತಳಾರವಾಗುತ್ತದೆ. ಅಂತಾ ರೋಗಿಯು ಹದುಳವಾಗೇ ಕಂಡರೂ ನಂಜುಳಗಳನ್ನು ಹರಡುತ್ತಿರುತ್ತಾರೆ. ಮೆರ್ಸ್-ಕೋವ್ ನಂಜುಳದ ಸೊಂಕು ತಗುಲಿದ ಕೂಡಲೇ ರೋಗದ ಕುರುಹುಗಳು ಕಾಣಿಸಿಕೊಳ್ಳುವುದರಿಂದ ರೋಗಿಗಳು ನಂಜುಳವನ್ನು ಹರಡುವುದಕ್ಕೆ ಮುನ್ನ ಆಸ್ಪತ್ರೆಗಳಿಗೆ ಹೋಗಿಬಿಡುವ ಸಾದ್ಯತೆ ಹೆಚ್ಚು. ನಂಜುಳವು ಹೊಸದಾದುದರಿಂದ ಅದರ ಬಗೆಗಿನ ಮಾಹಿತಿ ಮಬ್ಬು ಮಬ್ಬಾಗಿದೆ.

ಮೆರ್ಸ್-ಕೋವ್ ನಂಜುಳವು ಹೆಚ್ಚು ರೋಗಿಗಳಲ್ಲಿ ಸಾವು ತರುತ್ತದೆಯಾದರೂ ಇದು ಮಂದಿಯಲ್ಲಿ ತಳಾರವಾಗಿ (slowly) ಹಬ್ಬುವುದರಿಂದ ಇಡೀ ನೆಲದ ಹದುಳ ಕೂಟವು (WHO) ಇದನ್ನು ಇಡೀ ನೆಲದ ಕುತ್ತು (global threat) ಎಂದು ಸಾರಬೇಕೋ ಬೇಡವೋ ಎಂಬ ಗೊಂದಲದಲ್ಲಿದೆ. ಆದರೆ, ನಂಜುಳಗಳು ಯಾವುದೇ ಗಳಿಗೆಯಲ್ಲಿ ಬದಲಾಗಬಲ್ಲವು. ಬಿರುಸಾಗಿ ಹಬ್ಬುವಂತಾ ನಂಜುಳವಾಗಿ ಅರಳಬಲ್ಲವು. ಹಾಗಾಗಿ ಹೊಸ ನಂಜುಳದ ಹರಡುವಿಕೆ ಮತ್ತು ಹರಡುವ ಬಿರುಸಿನ ಮೇಲೆ ಅರಿಮೆಗಾರರು ಕಣ್ಣಿಟ್ಟಿದ್ದಾರೆ.

ನಂಜುಳದ ಸೊಂಕಿನಿಂದ ತಪ್ಪಿಸಿಕೊಳ್ಳಲು ನಡು-ಮೂಡಲಿನ ನಾಡುಗಳಿಂದ ಬಂದ ನಂಟರಲ್ಲಿ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಲ್ಲಿ ಒಡನೆಯೇ ಆಸ್ಪತ್ರೆಗೆ ಕೊಂಡಯ್ಯಬೇಕು ಮತ್ತು ಯಾವ ದೇಶದಿಂದ ಯಾವಾಗ ಬಂದರು ಎಂಬ ವಿವರವನ್ನು ಮಾಂಜುಗರಿಗೆ ಕೊಡಬೇಕು. ಮನೆಯಲ್ಲಿ ಮತ್ತು ಆಸ್ಪತ್ರೆಯಲ್ಲಿ ಬೇರೆಯದೇ ಕೊಣೆಯಲ್ಲಿ ರೋಗಿಗಳನ್ನು ಇಡಬೇಕು.

ಆಸ್ಪತ್ರೆಗಳಲ್ಲಿ ರೋಗಿಗಳನ್ನು ಇಡುವ ಕೋಣೆಯಲ್ಲಿ ಗಾಳಿಯು ಎಳೆ-ಒತ್ತಡದಲ್ಲಿರಬೇಕು (negative pressure) ಅಂದರೆ, ಆ ಕೋಣೆಯಿಂದ ಗಾಳಿಯು ಹೊರಗೆ ಬರುವಂತಿರಬಾರದು. ತಮ್ಮ-ತಮ್ಮ ಮಟ್ಟದಲ್ಲಿ ಮಂದಿಯು ಕಯ್ ತೊಳೆದುಕೊಳ್ಳುವುದು, ವಿಟಮಿನ್ ಡಿ ತಿನ್ನುವುದು (ಕನ್ನಡಿಗರು ಇದರಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ) ಮತ್ತು ಕಣ್ತುಂಬಾ ನಿದ್ದೆ ಮಾಡಿದರೆ ಇಂತಾ ನಂಜುಳಗಳ ಸೊಂಕನ್ನು ತಕ್ಕ ಮಟ್ಟಗೆ ಎದುರಿಸಬಹುದು.

ನಂಜುಳವನ್ನು ಕೊಲ್ಲುವ ಯಾವುದೇ ಮದ್ದು ಮಾರುಕಟ್ಟೆಯಲ್ಲಿ ಇಲ್ಲ. ರೋಗದ ಕುರುಹುಗಳು ಮಿತಿಮೀರದಂತೆ ಮಾಂಜುಗರು ಅವುಗಳಿಗೆ ತಕ್ಕ ಮಾಂಜುಳವನ್ನು ಕೊಡುತ್ತಾರೆ.

ಮಾಹಿತಿ ಕೊಂಡಿ: http://www.who.int/csr/don/2013_06_02_ncov/en/index.html

ತಿಟ್ಟ: http://www.nature.com/news/receptor-for-new-coronavirus-found-1.12584  

 – ಸಿದ್ದರಾಜು ಬೋರೇಗವ್ದ

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಸಿದ್ದರಾಜು…ಒಳ್ಳೆಯ ಬರಹ. ಆದರೆ, ಓದುವಾಗ ನನಗೆ ಒಂದೆರಡು ಪದಗಳು ತೊಡಕೆನಿಸಿದವು.
    ೧) “ಕುಯ್ಯಾರಯ್ಕೆ” ಅಂದರೆ ” Surgery” ಅಲ್ವೇ?
    ೨) “ಸುಲಬವಾಗಿ ಹರಡುವ ನಂಜುಳಗಳ ಸೊಂಕು ತಗುಲಿದ ಮೇಲೆ ರೋಗದ ಕುರುಹುಗಳು ಕಾಣಿಸಿಕೊಳ್ಳಲು ತಳಾರವಾಗುತ್ತದೆ”… ಇಲ್ಲಿ “ತಳಾರ” ಪದವನ್ನು ಯಾವ ಅರ್ತದಲ್ಲಿ ಬಳಸಲಾಗಿದೆ?

  2. ಕುಯ್ಯಾರಯ್ಕೆ ಅಂದರೆ Surgery ಹವ್ದು.
    ತಳಾರ ಪದವನ್ನ ನಾನು ‘slowly’ ಎಂಬ ಹುರುಳಿನಲ್ಲಿ ಬಳಸಿದ್ದೇನೆ. ನಮ್ಮೂರ ಕಡೆ ಈ ಪದ ಬಳಕೆಯಲ್ಲಿದೆ. ‘ತಳಾರವಾಗಿ ನಡೆಯಬೇಡ ಬಿರಬಿರನೆ/ಬಿರುಸಾಗಿ ನಡೆ’ ಎನ್ನುತ್ತೇವೆ.

ಅನಿಸಿಕೆ ಬರೆಯಿರಿ:

%d bloggers like this: