ಉಕ್ಕಿನ ಹಕ್ಕಿಗಳ ಅರಿಮೆಯ ಬೆಳವಣಿಗೆ – 3

– ಕಾರ‍್ತಿಕ್ ಪ್ರಬಾಕರ್

3_Picture_1

ಕಳೆದ ಬರಹದಲ್ಲಿ ತಿಳಿಸಿದಂತೆ ಹಾರು-ಮಿನ್ನರಿಮೆಯ (avionics) ಏರ‍್ಪಾಡುಗಳೊಂದಿಗೆ ಶುರುವಾದದ್ದು ಮೂರನೆ ತಲೆಮಾರಿನ ಯುದ್ದ ವಿಮಾನಗಳು. ಮೊದ ಮೊದಲಿಗೆ ಮಿನ್ನರಿಮೆಯ (electronics) ಸಣ್ಣ ಪುಟ್ಟ ಸಲಕರಣೆಗಳನ್ನು ಅಳವಡಿಸಲಾಯಿತು ಆಮೇಲೆ ಗಾಳಿ-ಇಂದ-ಗಾಳಿಗೆ ಹಾರಿಸುವ ಬಿಟ್ಟೇರುಗಳನ್ನು (air to air missiles) ಹಿಡಿತದಲ್ಲಿಡಲು, ವಿಮಾನದ ರೆಕ್ಕೆಗಳ ಆಕಾರವನ್ನು ವೇಗಕ್ಕೆ ಹೊಂದುವಂತೆ ’ಮಾರ‍್ಪಡಿಸಬಹುದಾದ ಹಿಂದೂಡಿದ ರೆಕ್ಕೆ’ (variable swept wings) ಅಳವಡಿಸಲು ಮಿನ್ನರಿಮೆಯ ಚಳಕಗಳನ್ನು ಬಳಸಲಾಯಿತು. ಚಿತ್ರ 1 ರಲ್ಲಿ ತೋರಿಸಿರುವ ನಿಂತಲ್ಲಿಂದಲೇ ಹಾರಾಡಿ ಇಳಿಯುವ ’ನೆಟ್ಟಗೆ ಏರಿಳಿಯುವ’ (vertical take-off and landing-VTOL) ಚಳಕವು ಕಾಳಗದ ಹಕ್ಕಿಗೆ ಹಾರಲು ಬೇಕಾಗಿದ್ದ ನೆಲದ ಹಂಗನ್ನು ಕಡಿಮೆ ಮಾಡಿತು. ಒಂದರ ಮೇಲೊಂದು ಚಳಕಗಳು ಹುಟ್ಟಿಕೊಳ್ಳುವುದರೊಂದಿಗೆ, ಯುದ್ದ ವಿಮಾನಗಳ ಬಳಕೆಯ ರೀತಿಯೂ ಕೂಡ ಬದಲಾಗಲಾರಂಬಿಸಿತು. ಕರಾರುವಕ್ಕಾದ ಅಲೆಗಾವಲು, ಚುರುಕುತನದ ಮಿನ್ನರಿಮೆಯು ’ಗಾಳಿ-ಇಂದ-ನೆಲಕ್ಕೆ’ ಹಾರಿಸುವ ಬಿಟ್ಟೇರುಗಳನ್ನು (air to surface missiles)  ಯುದ್ದ ವಿಮಾನಗಳಲ್ಲಿ ಏರ‍್ಪಡಿಸಲು ಅಣಿಮಾಡಿಕೊಟ್ಟವು. ಮೂರನೇ ತಲೆಮಾರಿನ ಹಂತ ಮುಗಿಯುವ ಹೊತ್ತಿಗೆ ಯುದ್ದ ವಿಮಾನಗಳ ಬಳಕೆಯ ರೀತಿ ಬಹಳಶ್ಟು ಬದಲಾಗಿದ್ದಿತು. ಗಾಳಿಯಲ್ಲಿ ಕಾದಾಡುವ ಕೆಲಸದಿಂದ ಹಿಡಿದು ವಯ್ರಿಗಳು ಹಾರಿಸುವ ಬಿಟ್ಟೇರುಗಳನ್ನು ನಡುವಲ್ಲಿಯೇ ಹೊಡೆದು ಹಾಕುವವರೆಗೂ ಬಾನ ಕಾಳಗ ನಡೆಯುವಂತಾದರೆ, ಗುರುತೇ ಸಿಗದಂತೆ ಬಾನಿನ ಎಲ್ಲೆ ಮೀರಿ ಹಾರಾಡುತ್ತ ಕರಾರುವಕ್ಕಾಗಿ ವಯ್ರಿಯ ನೆಲೆಯಮೇಲೆ ಸಿಡಿಗುಂಡುಗಳನ್ನು ಎಸೆಯುವವರೆಗೂ ಹರಡಿತ್ತು.

3_Picture_2

ನಾಲ್ಕನೇ ತಲೆಮಾರಿನ ಅವಶ್ಯಕತೆಯಂತೆ ತೋರ‍್ಪಟ್ಟ ಹಲವು-ಕೆಲಸದ (multi role) ಯುದ್ದ ವಿಮಾನಗಳು ಇಂದಿನ ಬೆರಗುಗೊಳಿಸುವ ಯುದ್ದ ವಿಮಾನಗಳನ್ನು ಹುಟ್ಟಿಸಿ ಕೊಟ್ಟಿದೆ. ನೋಟಕ್ಕೆ ಮೀರಿದ ವೇಗ, ಹಿಡಿತಕ್ಕೆ ಸವಾಲೊಡ್ಡುವ ಚುರುಕುತನ ನಾಲ್ಕನೆ ತಲೆಮಾರಿನ ಯುದ್ದ ವಿಮಾನಗಳಲ್ಲಿ ಕಂಡುಬರುತ್ತದೆ. ಎಲ್ಲಕ್ಕಿಂತ ಮುಕ್ಯವಾಗಿ ಈ ತಲೆಮಾರಿನ ವಿಮಾನಗಳಲ್ಲಿ ಅಳವಡಿಸಿದ ಚಳಕವೆಂದರೆ ಗಾಳಿಯಲ್ಲಿ ವಿಮಾನದ ವೇಗ ಮತ್ತು ದಿಕ್ಕನ್ನು ಸ್ತಿರತೆಯೊಂದಿಗೆ ಅತಿ ವೇಗದಿಂದ ಬದಲಿಸುವ, ಬಿಣಿಗೆಯಿಂದ ಚಿಮ್ಮುವ ಉರಿಗಾಳಿಯ ನೂಕು ಕಸುವಿನ ದಿಕ್ಕನ್ನು ಬೇಕಿರುವಂತೆ ಮಾರ‍್ಪಡಿಸುವ ಚಳಕ ’ನೂಕು ಹಿಡಿತ’ (thrust vectoring). ಬರಿ ರೆಕ್ಕೆಗಳಿಂದ ಹಿಡಿತಕ್ಕೆ ಸಿಗದ ಪರಿಸ್ತಿತಿಯಲ್ಲಿ ’ನೂಕು ಹಿಡಿತ’ದಿಂದಾಗಿ (ಚಿತ್ರ 2 ನೋಡಿ) ಉಕ್ಕಿನ ಹಕ್ಕಿಗಳ ಹಾರಾಟಕ್ಕೆ ಹೊಸ ದಾರಿ ದೊರೆಯಿತು. ಈ ತಲೆಮಾರಿನ ಯುದ್ದ ವಿಮಾನಗಳಲ್ಲಿ ವಿಮಾನ ಓಡಿಸುವವರನ್ನು ಕಾಪಾಡಲು ಹಲವಾರು ರೀತಿಯ ಸಲಕರಣೆಗಳನ್ನೂ ಅಳವಡಿಸಲಾಯಿತು. ನಾಲ್ಕನೆ ತಲೆಮಾರಿನ ಯುದ್ದ ವಿಮಾನಗಳಲ್ಲಿನ ಚಳಕಗಳನ್ನು ಮುಂದಿನ ಹಂತಕ್ಕೆ ಬದಲಾಯಿಸಬಲ್ಲಶ್ಟು ವಿಸ್ತಾರವಾಗಿ ಅಣಿಗೊಳಿಸಿದ್ದರಿಂದ ಅವುಗಳನ್ನು ನಾಲ್ಕುವರೆ ತಲೆಮಾರಿನ ಯುದ್ದ ವಿಮಾನಗಳು ಅಂತಾನೂ ಕರೆಯಲಾಗುತ್ತದೆ. (ಎತ್ತುಗೆ: ರಪೆಲ್ ಮತ್ತು ಸುಕೋಯ್ ಎಸ್ ಯು 27).

ಇಲ್ಲಿಯವರೆಗೆ ನಡೆದು ಬಂದ ಉಕ್ಕಿನ ಹಕ್ಕಿಗಳ ಬೆಳವಣಿಗೆಯಲ್ಲಿ ಇತ್ತೀಚಿನ ಬೆಳವಣಿಗೆ ಎಂದರೆ ವಯ್ರಿಗೆ ತಿಳಿಯದ ಹಾಗೆ, ಗುರುತು ತೋರದ ಹಾಗೆ ಅಚ್ಚರಿಯಿಂದ ದಾಳಿಮಾಡಲು ನೆರವಾಗುವಂತಹ “ಅಡಗು ಚಳಕರಿಮೆ” (stealth technology) ಬಳಸಿ ವಿಮಾನಗಳ ತಯಾರಿಕೆ. ಅಲೆಗಾವಲಿನ (radar) ಕಣ್ಣು ತಪ್ಪಿಸಲು ಈ ವಿಮಾನಗಳ ಆಕಾರ ಮತ್ತು ಅಲೆಗಳನ್ನು ಹೀರಿಕೊಳ್ಳವಂತ ವಸ್ತುಗಳಿಂದ ಈ ವಿಮಾನಗಳನ್ನು ಮಾಡಲಾಗುತ್ತದೆ. ಯುದ್ದ ವಿಮಾನಗಳ ಅರಿಮೆಯಲ್ಲಿ ಮುಂಚೂಣಿಯಲ್ಲಿರುವ ಅಮೇರಿಕಾ ಮತ್ತು ರಶ್ಯಾ ತಮ್ಮ ತಮ್ಮ ಕಸುವಿನ ಎಲ್ಲೆ ದಾಟಿ ಚಳಕರಿಮೆಯ ಪ್ರಯೋಗಗಳನ್ನು ಮಾಡುತ್ತಿವೆ. ಇಂದಿಗೆ ನಮ್ಮ ಮುಂದೆ ಇರುವ ಕೆಲವೇ ಕೆಲವು ಅಯ್ದನೇ ತಲೆಮಾರಿನ ಯುದ್ದ ವಿಮಾನಗಳು ಹಿಂದಿನ ಎಲ್ಲಾ ಚಳಕರಿಮೆಗಳೊಂದಿಗೆ ಅಡಗು ಚಳಕರಿಮೆಯನ್ನು ಹೊಂದಿವೆ.

ಚಳಕದಲ್ಲಿ ಮುಂದಿರುವ ನಾಡುಗಳು ಆರನೇ ತಲೆಮಾರಿನ ಯುದ್ದ ವಿಮಾನಗಳ ಬೇಕು-ಬೇಡಗಳನ್ನು ಬರೆಯ ತೊಡಗಿವೆ. ಆರನೇ ತಲೆಮಾರಿನಡಿ ಮೊಟ್ಟಮೊದಲಿಗೆ ಹೊರ ಬರಲಿರುವ ರಶ್ಯಾದ ಸುಕೋಯ್ PAK FA ಉಕ್ಕಿನ ಹಕ್ಕಿಯಲ್ಲಿ ಹೊಸ ಚಳಕು ಏನಿರಬಹುದೆಂದು ತಿಳಿದುಕೊಳ್ಳಲು ಇಡೀ ಜಗತ್ತು ಕಾಯುತ್ತಿದೆ. ಅಮೇರಿಕಾದಂತ ಎದುರಾಳಿಯ ಎದೆಯಲ್ಲಿ ಈಗಾಗಲೇ ನಡುಕ ಉಂಟಾಗಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. 03/07/2013

    […] (aerodynamics) ದೊಡ್ಡ ಕಾಣಿಕೆ ನೀಡಿದೆ. ಉಕ್ಕಿನ ಹಕ್ಕಿಗಳನ್ನು ಬಾನೆತ್ತರಕ್ಕೆ ತೇಲಿಸುವ ಈ ಅರಿಮೆಯ […]

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *