ಕಸದ ಬಗ್ಗೆ ಬೆಂಗಳೂರು ಆಸ್ಲೋನಿಂದ ಕಲಿಯಬೇಕು
“ಕಸ” ಅನ್ನುವ ಪದ ಕೇಳಿದ ಕೂಡಲೇ ನಮಗೆ ಹೊಲಸಿನ ಬಾವನೆ ಬಂದುಬಿಡುತ್ತದೆ. ನಮ್ಮ ಸುತ್ತಮುತ್ತಲ್ಲೂ ಕಸ ನೋಡಿ ನೋಡಿ ನಮಗೆ ಸಾಕಾಗಿ ಹೋಗಿದೆ. ಆದರೆ ಬಡಗಣ ಯುರೋಪಿನ ಊರು ಆಸ್ಲೊದಲ್ಲಿ (Oslo) ಬೇರೆಯದೇ ಕತೆ. ಇಲ್ಲಿ ಕಸ-ಬೇಕು-ಕಸ ಅನ್ನುವಂತ ಕೂಗು ಕೇಳಿ ಬರುತ್ತದೆ. ಇಲ್ಲಿ ಇಂಗ್ಲೆಂಡ್, ಸ್ವೀಡನ್ನನಿಂದ ದುಡ್ಡು ಕೊಟ್ಟು ಕಸ ತರಸಲಾಗುತ್ತಿದೆ. ಅಚ್ಚರಿ ಅಲ್ವೇ ? ಈಗ ಕಸಕ್ಕಂತ ಅಮೇರಿಕಾದ ಮೇಲೂ ಕಣ್ಣು ಬಿದ್ದಿದೆ. ಇದು ಬರಿ ಆಸ್ಲೋ ಊರಿನ ನಡೆಯೊಂದೇ ಅಲ್ಲ, ಬಡಗಣ ಯುರೋಪಿನಲ್ಲಿ ಹಲವು ಊರುಗಳಲ್ಲಿ ಇದು ಇತ್ತೀಚಿಗೆ ಕಂಡುಬರುತ್ತಿದೆ.
ಕಸ ಏತಕ್ಕೆ?
ಕಸದ ಬೇಡಿಕೆ ಯಾಕೆ? ಆಸ್ಲೊ ಅಂತಹ ಊರುಗಳಲ್ಲಿ ಕಾವಳತೆ (temperature) ಬಾರತದಂತ ನಾಡುಗಳಿಗಿಂತ ತುಂಬಾ ಕಡಿಮೆ ಇರುತ್ತದೆ. ಕಸವನ್ನು ಸುಟ್ಟು ಅದರಿಂದ ಹೊಮ್ಮುವ ಬಿಸಿಯಿಂದ ಆಸ್ಲೋ ಊರಿನವರನ್ನು ಚಳಿಯಿಂದ ಕಾಪಾಡಲಾಗುತ್ತಿದೆ, ಜೊತೆಗೆ ಈ ಕಸದಿಂದ ಮಿಂಚನ್ನು (electricity) ಕೂಡಾ ತಯಾರಿಸಲಾಗುತ್ತಿದೆ. ಇದಕ್ಕಾಗಿ ಮನೆ ಕಸ, ಕಯ್ಗಾರಿಕೆಯ ಕಸ, ಕೆಲವೊಮ್ಮೆ ನಂಜಿನ (toxic) ಕಸವನ್ನೂ ಬಳಸಲಾಗುತ್ತದೆ. ಆದರೆ ಈ ಬೇಡಿಕೆಯನ್ನು ಪೂರಯ್ಸುವುದಕ್ಕೆ ಈಗ ಕಸದ ಕೊರತೆ ಎದುರಾಗಿದೆ.
ಕಸ ಬೇರ‍್ಪಡಿಕೆ ಹಾಗು ಸುಡುವಿಕೆ
ಇಲ್ಲಿ ಕಸದ ಕೆಲಸ ಕೂಡ ಮೇಲ್ಚಳಕದ (hi-tech) ಕೆಲಸ. ಈ ಊರಿನಲ್ಲಿ ಕಸವನ್ನು ಬೇರ‍್ಪಡಿಸಲಾಗುತ್ತದೆ. ಮನೆಯ ಕಸವನ್ನು ಹಲವು ಬಣ್ಣದ ಚೀಲಗಳಲ್ಲಿ ಹಾಕುತ್ತಾರೆ. ಎತ್ತುಗೆಗೆ, ಊಟದ ಕಸವನ್ನು ಹಸಿರು ಚೀಲದಲ್ಲಿ, ಪ್ಲಾಸ್ಟಿಕ್ ಕಸವನ್ನು ನೀಲಿ ಚೀಲದಲ್ಲಿ, ಹೀಗೆ ಕಸವನ್ನು ಬೇರ‍್ಪಡಿಸಿ ಬೇರೆ ಬೇರೆ ಬಣ್ಣದ ಚೀಲಗಳಲ್ಲಿ ಹಾಕುತ್ತಾರೆ. ಮುಂದೆ ಅದನ್ನು ಕಸದಿಂದ-ಕಸುವು ಹೊಮ್ಮಿಸುವ ನೆಲೆಗೆ (waste-to-energy plants) ಸಾಗಿಸಲಾಗುತ್ತದೆ. ಅಲ್ಲಿ ಎಣಿಕದ ತಿಳಿಕಗಳನ್ನು (computerized sensors) ಬಳಕೆ ಮಾಡಿ ಚೀಲಗಳ ಬಣ್ಣದ ಮೇಲೆ ಬೇರ‍್ಪಡಿಸಿ ಸುಡುವುದಕ್ಕೆ ಕಳುಹಿಸಲಾಗುತ್ತದೆ. ಒಳಗೆ ಇಂತಹ ಕೆಲಸಗಳು ನಡೆಯುತ್ತಿದ್ದರೂ ಹೊರಗಿನಿಂದ ನೋಡಿದರೆ ಈ ಕಟ್ಟಡ ಯಾವುದೋ ಸಾಪ್ಟವೇರ್ ಕಂಪನಿ ಎಂಬಂತೆ ಕಾಣಿಸುತ್ತದೆ.
ಕಸವೇ ಒಂದು ಮಾರುಕಟ್ಟೆ
ಹೂಂ, ಈ ಮಾತು ಕೇಳಿದರೆ ಅಚ್ಚರಿ ಮೂಡಿಸುತ್ತದೆ ಆದರೆ ಯೂರೋಪನಲ್ಲಿ ಕಸಕ್ಕಾಗಿಯೇ ಮಾರುಕಟ್ಟೆಯೊಂದಿದೆ, ಇದು ಬೆಳೆಯುತ್ತಿರುವ ಮಾರುಕಟ್ಟೆ. ಹಲವು ಮಂದಿ ಹೇಳುವುದೇನೆಂದರೆ ಕಸವನ್ನು ಸುಡುವುದರಿಂದ ಕಾವು ಉಂಟು ಮಾಡಿ ಮನೆಯಲ್ಲಿ ಬಳಸುವುದು ಒಳ್ಳೆಯ ಹೊಳಹು ಅಂತ.
ಕಸ ಉಂಟುಮಾಡಿ
ನಾರ‍್ವೇ ನಾಡು ಯುರೋಪಿನ ನೆಲದಲ್ಲಿ ಹೆಚ್ಚು ಎಣ್ಣೆ ಹಾಗೂ ಆವಿ ಹೊರಕಳುಹಿಸುವ ನಾಡುಗಳಲ್ಲಿ ಒಂದು. ಈ ನಾಡಿನಲ್ಲಿ ಇದ್ದಲು ಮಿಗಿತೆಯಲ್ಲಿದೆ (abundance). ಇಲ್ಲಿ ಹಲವು ನೀರ‍್ಮಿಂಚಿನ ಪೆರ‍್ಚೂಟಿಗಳಿವೆ (hydro-electric plants). ಹೀಗಿದ್ದರೂ ಕಸವನ್ನು ಸುಡುವಿಕೆಯಿಂದ ಕಸುವಿನ ಮರುಬಳಕೆ, ಹಾಗೂ ಪಳೆಯುಳಿಕೆ ಉರುವಲು (fossil fuel) ಬಳಕೆಯನ್ನು ಕಡಿಮೆ ಮಾಡುತ್ತದೆ ಅಂತ ಮಿಕ್ಕೇಲ್ಸೆನ್ (ಎಂ.ಡಿ, ವೇಸ್ಟ್ ಟೂ ಎನರ‍್ಜಿ ಕಂಪನಿ) ಹೇಳಿದ್ದಾರೆ. ಪರಿಸರದ ಅರಿಗರು, ಕಸವನ್ನು ಕಡಿಮೆ ಮಾಡುವ ಕೆಲಸವು ಮುಂಚೂಣಿಯಲ್ಲಿದ್ದು ಕಸದಿಂದ ಕಸುವು ಪಡೆಯುವ ಕೆಲಸ ಆಮೇಲೆ ಇರಬೇಕು ಎನ್ನುವ ಅನಿಸಿಕೆ ಮುಂದಿಟ್ಟಿದ್ದಾರೆ. ಆದರೆ ಎಲ್ಲರಿಗೆ ಈ ಹೊಳಹು ಮೆಚ್ಚುಗೆ ಆಗಿಲ್ಲ. ಅವರಿಗೆ ಕಸದಿಂದ ಕಸುವು ಉಂಟು ಮಾಡುವುದೇ ಹೆಚ್ಚು ಸೂಕ್ತ ಅನಿಸುತ್ತದೆ, ಹಾಗಾಗಿ ಹೆಚ್ಚು ಹೆಚ್ಚು ಕಸ ಉಂಟುಮಾಡುವುದಕ್ಕೆ ಎಲ್ಲರ ಮೇಲೆ ಒತ್ತಡವೂ ಇದೆ. ಬೆಂಗಳೂರಿನಂತಹ ದೊಡ್ಡ ಊರುಗಳಲ್ಲಿ ಕಸವನ್ನು ಬೇರೊಂದು ಕಡೆ ಸಾಗಿಸಲು ಕೋಟಿ-ಕೋಟಿ ರೂಪಾಯಿಗಳ ಗುತ್ತಿಗೆ ಕೊಡಲಾಗುತ್ತಿದ್ದರೆ, ಆಸ್ಲೋದಂತಹ ಊರುಗಳಲ್ಲಿ ಕಸದಿಂದ ಕಸುವು ಪಡೆದು ಆ ಕೋಟಿ-ಕೋಟಿ ಕಾಸು ಪೋಲಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಮಾಹಿತಿ ಸೆಲೆ: ನ್ಯೂ ಯಾರ‍್ಕ್ ಟಾಯಮ್ಸ್
Oslo ಅನ್ನು ಆ ದೇಶದ ಭಾಷೆಯಲ್ಲಿ ‘ಉಶ್ಳೊ ‘ ಎಂದು ಉಚ್ಚರಿಸುತ್ತಾರೆ. ಇನ್ನು ಅಮೇರಿಕದವರ ಉಚ್ಚಾರವನ್ನು ಪಾಲಿಸಿದರೆ ಅದನ್ನು ಕನ್ನಡದಲ್ಲಿ ‘ಯಾಜ್ಲೋ’ ಎಂದು ಬರೆಯಬೇಕು . Norwegianಅಲ್ಲಿ ಳ ಕಾರವಿದೆ.
Norway ಒಂದೇ ಅಲ್ಲ Sweden ಕೂಡ ಕಸವನ್ನು ಆಮದುಮಾಡಿಕೊಳ್ಳುತ್ತಿದೆ.