‘ಸಿಕ್ಕಿದವರಿಗೆ ಸೀರುಂಡೆ’ ಚುನಾವಣೆಗಳ ಹುಳುಕು

ಕಿರಣ್ ಬಾಟ್ನಿ.

ಬಾರತದಲ್ಲಿ ಚುನಾವಣೆಗಳು ಒಂದಾನೊಂದು ‘ಸಿಕ್ಕಿದವರಿಗೆ ಸೀರುಂಡೆ’ ಎಂದು ಕರೆಯಬಹುದಾದ ಪದ್ದತಿಯನ್ನು ಪಾಲಿಸುತ್ತವೆ. ಇದನ್ನು ಇಂಗ್ಲಿಶಿನಲ್ಲಿ first past the post (FPTP) ಪದ್ದತಿ ಎಂದು ಕರೆಯಲಾಗುತ್ತದೆ. ಈ ಪದ್ದತಿಯಲ್ಲಿ ಪ್ರತಿ ಕ್ಶೇತ್ರದಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದವರನ್ನೇ ಗೆದ್ದ ಪಟುವೆಂದು ಕರೆಯಲಾಗುತ್ತದೆ. ಇದು ಹೀಗೇ ಇರಬೇಕಲ್ಲವೇ ಎಂದು ನಿಮಗೆ ಅನಿಸಿದರೆ ಅದರಲ್ಲಿ ಸೋಜಿಗವೇನಿಲ್ಲ. ಆದರೆ ಕೊಂಚ ಈ ‘ಸಿಕ್ಕಿದವರಿಗೆ ಸೀರುಂಡೆ’ ಪದ್ದತಿ ಹೇಗೆ ಕೆಲಸ ಮಾಡುತ್ತದೆ ಎಂದು ಸೀಳ್ನೋಟ ನಡೆಸಿದರೆ ಇದರಲ್ಲಿ ಕೆಲವು ತೊಂದರೆಗಳು ಕಂಡು ಬರುತ್ತವೆ.

ಎತ್ತುಗೆಗೆ, 10 ಪಟುಗಳು ಮತಕೇಳುಗರಾಗಿ ನಿಂತಿರುವ ಒಂದಾನೊಂದು ಕ್ಶೇತ್ರದಲ್ಲಿ 101 ಮತಗಳನ್ನು ಹಾಕಲಾಗಿದೆ ಎಂದುಕೊಳ್ಳೋಣ. ಮತದಾನ ನಡೆದ ಮೇಲೆ ಇವರಲ್ಲಿ ಒಂಬತ್ತು ಪಟುಗಳಿಗೆ ತಲಾ 10 ಮತಗಳು ಮತ್ತು ಹತ್ತನೆಯ ಪಟುವಿಗೆ 11 ಮತಗಳು ಸಿಕ್ಕವು ಎಂದುಕೊಳ್ಳೋಣ. ನಮ್ಮ ‘ಸಿಕ್ಕವರಿಗೆ ಸೀರುಂಡೆ’ ಪದ್ದತಿಯಂತೆ ಈ ಹತ್ತನೆಯ ಪಟುವನ್ನು ಗೆದ್ದ ಪಟುವೆಂದು ಕರೆಯಲಾಗುತ್ತದೆ. ಆದರೆ ನಿಜಕ್ಕೂ ಈತ/ಈಕೆ ‘ಸೋತ’ ಪಟುಗಳಿಗಿಂತ ಅಂತಹ ದೊಡ್ಡದೇನನ್ನೂ ಗಳಿಸಿಲ್ಲ ಎಂಬುದು ನಮಗೆಲ್ಲ ಗೊತ್ತಿರುವ ವಿಶಯ ತಾನೇ? ಅಶ್ಟೇ ಅಲ್ಲ, ಈ ‘ಗೆದ್ದ’ ಪಟು ನಿಜಕ್ಕೂ ಪಡೆದುಕೊಂಡಿರುವುದು 10.89% ಮತಗಳನ್ನು ಮಾತ್ರ.

ಮಿಕ್ಕೆಲ್ಲ ಪಟುಗಳೂ 9.9% ಮತಗಳನ್ನು ಪಡೆದುಕೊಂಡಿರುವುದರಿಂದ ಇವರಿಗೂ ‘ಗೆದ್ದ’ ಪಟುವಿಗೂ ಹೇಳಿಕೊಳ್ಳುವಂತಹ ವ್ಯತ್ಯಾಸವೇನೂ ಇಲ್ಲ. ಆದರೂ ಒಂದು ಪಟುವನ್ನು ಗೆಲ್ಲಿಸಲೇ ಬೇಕು ಎಂದು ಪಟ್ಟು ಹಿಡಿದಿರುವುದರಿಂದ ಬೇರೆಲ್ಲ ಪಟುಗಳಿಗಿಂತ ಬರೀ 1% ಹೆಚ್ಚು ಮತವನ್ನು ಪಡೆದ ಪಟುವೊಬ್ಬನನ್ನು ‘ಸಿಕ್ಕಿದವರಿಗೆ ಸೀರುಂಡೆ’ ಪದ್ದತಿ ಗೆಲ್ಲಿಸುತ್ತದೆ. ಈ ಕೆಳಗಿನ ಚಿತ್ರದಲ್ಲಿ ಹತ್ತನೆಯ ಪಟು ಗಿದ್ದಿದ್ದಾನೆ/ಳೆ ಎಂದು ಯಾತಕ್ಕೆ ಹೇಳಲಾಗುತ್ತದೆ ಎಂಬುದೇ ಒಂದು ದೊಡ್ಡ ಕೇಳ್ವಿ. ಹೇಳ್ವಿ ಇಶ್ಟೇ: ಯಾರಾದರೂ ಒಬ್ಬರು ಗೆಲ್ಲಲೇ ಬೇಕಲ್ಲ, ಅದಕ್ಕಾಗಿ.

pic1k

ಇಲ್ಲಿ ಮುಕ್ಯವಾದ ಪ್ರಶ್ನೆಯೇನೆಂದರೆ: ನಿಜಕ್ಕೂ ಕಮ್ಮಿಯೆಣಿಕೆಯ ಮತಗಳನ್ನು ಪಡೆದಿರುವ ಪಟುವನ್ನು ‘ಗೆದ್ದ’ ಪಟುವೆಂದು ಕರೆಯುವುದು ಮಂದಿಯಾಳ್ವಿಕೆಯ ತುತ್ತತುದಿಯೇನು? ಕಂಡಿತ ಅಲ್ಲ. ಇನ್ನು ನಿನ್ನೆ ಬಯಲಾದ ಕರ್‍ನಾಟಕ ವಿದಾನಸಬಾ ಚುನಾವಣೆಯ ಪಲಿತಾಂಶಕ್ಕೆ ಬರೋಣ. ಕೆಳಗಿನ ಚಿತ್ರದಲ್ಲಿ ಬೇರೆ ಬೇರೆ ಪಕ್ಶಗಳು ಪಡೆದಿರುವ ಶೇಕಡ ಮತಗಳು ಮತ್ತು ಸೀಟುಗಳನ್ನು ತೋರಿಸಿದ್ದೇನೆ. ಸದ್ಯಕ್ಕೆ ಡೊಂಕುಗೆರೆಗಳನ್ನು ಮರೆತು ನೀಲಿ ಮತ್ತು ಹಸಿರು ಕಂಬಗಳ ಮೇಲೆ ಮಾತ್ರ ಗಮನ ಹರಿಸಿ.

pic2k

ಇದರಲ್ಲಿ ತೋರಿಸಿರುವ ಅಯ್ದು ಪಕ್ಶಗಳಲ್ಲಿ (ಇತರೆ = OTH ಎಂಬುದನ್ನೂ ಒಂದು ಪಕ್ಶ ಎನ್ನೋಣ) ಶೇಕಡ ಮತಗಳಿಗಿಂತ ಹೆಚ್ಚು ಶೇಕಡ ಸೀಟುಗಳನ್ನು ಪಡೆದಿರುವುದು ಒಂದೇ ಪಕ್ಶ: ಅದುವೇ ಗೆದ್ದ ಪಕ್ಶ ಕಾಂಗ್ರೆಸ್ ಎಂಬುದು ಸ್ಪಶ್ಟ. ಹೀಗೇಕಾಯಿತು? ಮಿಕ್ಕ ಪಕ್ಶಗಳೆಲ್ಲ ತಂತಮ್ಮ ಶೇಕಡ ಮತಗಳಿಗಿಂತ ಕಡಿಮೆ ಶೇಕಡ ಸೀಟುಗಳನ್ನೇಕೆ ಪಡೆದುಕೊಂಡಿವೆ? ಗೆದ್ದ ಪಕ್ಶ ಮಾತ್ರ ಏತಕ್ಕೆ ಶೇಕಡ ಮತಗಳಿಗಿಂತ ಮೋಸವೆನಿಸುವಶ್ಟು ಹೆಚ್ಚು ಶೇಕಡ ಸೀಟುಗಳನ್ನು ಪಡೆದುಕೊಂಡಿದೆ?

ಈ ಕೇಳ್ವಿಗೆ ಉತ್ತರ ಇಶ್ಟೇ: ನಿಜಕ್ಕೂ ಈ ‘ಸಿಕ್ಕಿದವರಿಗೆ ಸೀರುಂಡೆ’ ಪದ್ದತಿಯಲ್ಲಿ ಯಾರು ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ ಎಂಬುದಶ್ಟೇ ಮುಕ್ಯ. ಮೇಲೆ ಹೇಳಿದಂತೆ ಮಿಕ್ಕೆಲ್ಲ ಪಕ್ಶಗಳಿಗಿಂತ ಒಂದೇ ಒಂದು ಹೆಚ್ಚು ಮತವನ್ನು ಪಡೆದುಕೊಂಡಿದ್ದರೂ ಆ ಪಟುವನ್ನು ‘ಗೆದ್ದ’ ಪಟು ಎಂದು ಕರೆಯಲಾಗುತ್ತದೆ. ಒಟ್ಟಾರೆ 55% ಸೀಟುಗಳನ್ನು ಪಡೆದುಕೊಂಡಿರುವುದರಿಂದ ಕಾಂಗ್ರೆಸ್ಸಿಗೆ ‘ಸ್ಪಶ್ಟ ಬಹುಮತ’ ಸಿಕ್ಕಿದೆ ಎಂದು ಹೇಳಲಾಗುತ್ತದೆ. ಆದರೆ ನಿಜಕ್ಕೂ ಆ ‘ಸ್ಪಶ್ಟ ಬಹುಮತ’ಕ್ಕೆ ಕಾರಣ ಕಾಂಗ್ರೆಸ್ಸು ಮತ ಗಳಿಸುವುದರಲ್ಲೇನು ‘ಸ್ಪಶ್ಟ ಬಹುಮತ’ ತೋರಿಸಿರುವುದಲ್ಲ, ನಮ್ಮ ‘ಸಿಕ್ಕಿದವರಿಗೆ ಸೀರುಂಡೆ’ ಪದ್ದತಿಯಶ್ಟೇ.

ಈಗ ಮೇಲಿನ ಚಿತ್ರದಲ್ಲಿನ ಡೊಂಕುಗೆರೆಗಳ ಕಡೆ ಗಮನ ಹರಿಸಿ. ಇದರಲ್ಲಿ ಕಂಬಗಳಲ್ಲಿರುವ ಮಾಹಿತಿಗೆ ಮೂರನೇ ದರ‍್ಜೆಯ ಹಲಪದವನ್ನು (3rd order polynomial) ಅಳವಡಿಸಿದ್ದೇನೆ. ಇದರಿಂದ ಚೆನ್ನಾಗಿ ತಿಳಿದು ಬರುವುದೇನೆಂದರೆ, ಹಸಿರು ಗೆರೆಯು ನೀಲಿ ಗೆರೆಗಿಂತ ಮೊದಲು ಮೇಲಿದ್ದು, ಆಮೇಲೆ ಕೆಳಗೆ ಹೋಗುತ್ತದೆ. ಅದು ಮೇಲಿರುವುದು ಒಂದು ಪಕ್ಶದ ಮಟ್ಟಿಗೆ ಮಾತ್ರ (ಕಾಂಗ್ರೆಸ್). ಮಿಕ್ಕೆಲ್ಲ ಪಕ್ಶಗಳ ಮಟ್ಟಿಗೆ ಹಸಿರು ಗೆರೆ ನೀಲಿ ಗೆರೆಗಿಂತ ಕೆಳಗಿದೆ. ಇದು ಏನನ್ನು ತೋರಿಸುತ್ತದೆಯೆಂದರೆ, ನಮ್ಮ ‘ಸಿಕ್ಕಿದವರಿಗೆ ಸೀರುಂಡೆ’ ಪದ್ದತಿಯಿಂದ ಒಂದು ಪಕ್ಶಕ್ಕೆ ಬಿಟ್ಟು ಮಿಕ್ಕೆಲ್ಲ ಪಕ್ಶಗಳಿಗೂ ಒಂದು ರೀತಿಯಲ್ಲಿ ಮೋಸವಾಗಿದೆ: ಶೇಕಡ ಮತಗಳಿಗಿಂತ ಕಡಿಮೆ ಶೇಕಡ ಸೀಟುಗಳು ಅವುಗಳಿಗೆ ಸಿಕ್ಕಿವೆ. ಹಾಗೆಯೇ, ‘ಗೆದ್ದ’ ಒಂದು ಪಕ್ಶಕ್ಕೆ ಮಾತ್ರ ಶೇಕಡ ಮತಗಳಿಗಿಂತ ಹೆಚ್ಚು ಶೀಕಡ ಸೀಟುಗಳು ಸಿಕ್ಕಿವೆ.

ಈ ಪದ್ದತಿಯಿಂದ ಆಗುತ್ತಿರುವ ತೊಂದರೆಗಳು ಹಲವು. ಮೊದಲಿಗೆ, ಮತಗಳಿಸುವಲ್ಲಿ ಬಹುಮತ ಇಲ್ಲದಿರುವ ಪಕ್ಶಗಳು ‘ಗೆದ್ದಿವೆ’ ಎನಿಸಿಕೊಳ್ಳುತ್ತವೆ. ಈ ವಿಶಯಗಳ ಬಗ್ಗೆಯೆಲ್ಲ ಹುಲುಜನರಿಗೆ ಅರಿವಿಲ್ಲದಿರುವುದರಿಂದ ಎಲ್ಲೋ ಆ ‘ಗೆದ್ದಿರುವ’ ಪಕ್ಶ ನಿಜಕ್ಕೂ ಮತ ಗಳಿಸುವಲ್ಲಿ ‘ಬಹುಮತ’’ ಸಾದಿಸಿದೆ ಎಂಬ ಅನಿಸಿಕೆ ಮೂಡುತ್ತದೆ. ಹಾಗೆ ಮೂಡಿದ್ದು ಜನರ ನೆನಪಿನಲ್ಲಿ ಉಳಿಯುತ್ತದೆ, ಮತ್ತು ಮುಂದಿನ ಚುನಾವಣೆಯ ಪಲಿತಾಂಶದ ಮೇಲೆ ಪ್ರಬಾವ ಬೀರುತ್ತದೆ. ಎರಡನೆಯದಾಗಿ, ‘ಗೆದ್ದ’ ಪಕ್ಶಕ್ಕಿಂತ ಕಡಿಮೆ ಮತಗಳನ್ನು ಪಡೆದಿರುವ ಪಕ್ಶಗಳು ಇನ್ನೂ ಕಡಿಮೆ ಸೀಟುಗಳನ್ನು ಪಡೆಯುತ್ತವೆ. ಜನರಿಗೆ ಶೇಕಡ ಮತಗಳಿಗಿಂತ ಶೇಕಡ ಸೀಟುಗಳ ಬಗ್ಗೆಯೇ ಗಮನವಿರುವುದರಿಂದ ಈ ‘ಸೋತ’ ಪಕ್ಶಗಳ ‘ಸೋಲಿ’ನ ನಿಜವಾದ ಸ್ವರೂಪ ಏನೆಂದು ತಿಳಿದು ಬರುವುದಿಲ್ಲ. ಎಲ್ಲೋ ಇವುಗಳು ಶೇಕಡ ಮತಗಳಿಸುವಲ್ಲೂ ತುಂಬಾ ‘ಸೋತು’ಬಿಟ್ಟಿವೆ ಎಂದುಕೊಳ್ಳುತ್ತಾರೆ.

ಮತ್ತೊಂದೇನೆಂದರೆ, ಈ ಪದ್ದತಿಯು ಮೆಲ್ಲನೆ ಎರಡೇ ಪಕ್ಶಗಳ ಕಡೆಗೆ ತನ್ನ ಒಲವನ್ನು ತೋರಿಸುತ್ತ ಹೋಗುತ್ತದೆ. ಇದನ್ನು ಡುವೆರ‍್ಜರ‍ನ ಕಟ್ಟಲೆ ಎನ್ನಲಾಗುತ್ತದೆ. ಇದರಿಂದ ತೊಂದರೆಯೇನೆಂದರೆ, ಇನ್ನೂ ಎಳವೆಯಲ್ಲಿರುವ ಕನ್ನಡ-ಕನ್ನಡಿಗ-ಕರ‍್ನಾಟಕ ಕೇಂದ್ರಿತವಾದ ಆಳ್ಮೆಬದಿಗಳಿಗೆ ಈ ಏರ‍್ಪಾಡಿನಲ್ಲಿ ಬದುಕುಳಿಯುವುದೇ ಕಶ್ಟವಾಗಬಲ್ಲುದು. ಇದು ನಿನ್ನೆ ಬಯಲಾದ ಚುನಾವಣಾ ಪಲಿತಾಂಶದಲ್ಲೂ ಸ್ಪಶ್ಟವಾಗಿ ಕಂಡುಬರುತ್ತಿದೆ. ಆದುದರಿಂದ, ಜೆಡಿಎಸ್, ಕೆಜೆಪಿ ಮುಂತಾದ ನಾಡಬದಿಗಳು ತಮ್ಮ ರಾಜಕೀಯವನ್ನು ಇನ್ನಶ್ಟು ನಾಡಪರವಾಗಿ ಮಾಡಿಕೊಳ್ಳುವುದಶ್ಟೇ ಅಲ್ಲ, ಈ ‘ಸಿಕ್ಕಿದವರಿಗೆ ಸೀರುಂಡೆ’ ಪದ್ದತಿಯ ಎದುರಾಗಿ ನಿಲ್ಲಲೂ ಬೇಕೆಂಬುದು ನನ್ನ ಅನಿಸಿಕೆ. ಇಲ್ಲದಿದ್ದರೆ, ಎಶ್ಟು ಒಳ್ಳೆಯ ಕೆಲಸ ಮಾಡಿದರೂ ಕೊನೆಗೆ ಮತಗಳನ್ನು ಸೀಟುಗಳಾಗಿ ಮಾರ‍್ಪಡಿಸುವ ಸಮೀಕರಣವೇ ಅವುಗಳನ್ನು ಸೋಲಿಸಿ ಬಿಡುತ್ತವೆ – ಯಾವ ಸಮೀಕರಣವು ಇಲ್ಲಿಯವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ಸುಗಳಿಗೆ ಒಲವನ್ನು ತೋರಿದೆಯೋ ಅದು.Categories: ನಾಡು

ಟ್ಯಾಗ್ ಗಳು:, , , , , , , , , , , ,

9 replies

 1. ಕಿರಣ್, ಒಳ್ಳೆಯ ಬರೆಹ. ಯಾರೇ ಆದರೂ ಯೋಚಿಸಲೇಬೇಕಾದ ವಿಶಯ. ನಮ್ಮ ಪ್ರಗ್ನಾವಂತ ನಾಗರಿಕರು ಈ ಬಗ್ಗೆ ಯೋಚಿಸಬೇಕು. ಹಾಗೆಯೇ, ನಾಡನಾಳುವ ಮಂದಿ ಕೂಡ.

 2. Kiran avare ondu prashne. JDS swalpa hindina dinagaLa varegu adu ‘National Party’ anta heLkotittu. adakka idu inna yeLe paksha antirodu neevu ? 🙂

  Matte KJP paksha hosade adru,adralli iro sumaru nayakaru haLe BJP navre alve ? adakke alve KJP istondu geddirodu ? KJP ‘Some of the Old wine in brand new bottle’ thara 😀

  Lokasatta party nodi, hege hoge adskontu anta. adu hosa pakshagaLa kate iratte samanyavaagi. KJP thara yavdu hosa paksha perform maadalla.

  Inna ee pakshagaLu jana ee thara yochisodrinda uliyatta anta atanka padode beda. Yaake andre nam rajakaarigaLu yelli ticket sikkatto aa pakshakke hogthare. Munde idu badakkatte annodakke yenu guarantee illa sari, adakke janara apanambikegaLiginta namma rajakarinigaLa nirdarane jaasthi mukhya.

  dhanyavaadagaLu

  • ಜೆಡಿಎಸ್ ಏನೆಂದು ಹೇಳಿಕೊಂಡರೂ ಅದರ ಹಯ್ಕಮಾಂಡ್ ಬೆಂಗಳೂರಿನಲ್ಲೇ ಇರುವುದರಿಂದ ಅದು ನಾಡಬದಿಯೇ.

   ಕೆಜೆಪಿಯವರು ಚುನಾವಣೆ ಪ್ರಚಾರ ಮಾಡಿದ್ದೇ ತಾವು ನಾಡಬದಿಯೆಂದು ಹೇಳಿಕೊಳ್ಳುತ್ತ, ರಾಶ್ಟ್ರೀಯ ಪಕ್ಶಗಳಿಂದ ಕರ‍್ನಾಟಕಕ್ಕೆ ಒಳ್ಳೆಯದಾಗುವುದಿಲ್ಲ ಎನ್ನುತ್ತ.

 3. ಆದರೆ ಇದಕ್ಕೆ ಪರಿಹಾರ ಏನಿದೆ ?

 4. ಪರಿಹಾರ ಈ ಪದ್ದತಿಯನ್ನು ತೆಗೆದುಹಾಕುವುದು. ಯಾರು ಮಾಡಬೇಕು? ಹೇಗೆ ಮಾಡಬೇಕು? ಇವೆಲ್ಲ ಯೋಚಿಸಬೇಕಾದ ವಿಶಯ.

 5. ಒಳ್ಳೆಯ ವಿಶ್ಲೇಷಣೆ. ವೋಟೆಣಿಕೆಯ ಕಣ್ಕಟ್ಟೇ ಅಂಥದ್ದು. ಇದು ಮತ್ತು ಇನ್ನೂ ಇಂಥ ಅನೇಕ ವಿಷಯಗಳನ್ನು ಚುನಾವಣಾ ಸುಧಾರಣೆಯಲ್ಲಿ ತರಬೇಕು. ಅಭ್ಯರ್ಥಿಯನ್ನು ಬೇಡವೆನ್ನುವ ಹಕ್ಕೇನೋ ಇದೆ, ಆದರೆ ಆ ಹಕ್ಕಿಗೆ ಹಲ್ಲೇ ಇಲ್ಲ. ಒಂದು ಚುನಾವಣೆ ಕ್ಷೇತ್ರದಲ್ಲಿ ಇಂತಿಷ್ಟು ಶೇಕಡಾ ಜನ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದಾರೆಂದರೆ, ಆ ಎಲ್ಲ ಅಭ್ಯರ್ಥಿಗಳು ಆ ಕ್ಷೇತ್ರದಿಂದ ಚುನಾವಣೆಗೆ ನಿಲ್ಲುವ ಹಕ್ಕನ್ನು ಕಸಿಯಬೇಕು. ಹಾಗೇ ಈ ಅಭ್ಯರ್ಥಿಗಳು ಬೇರೆ ಕ್ಷೇತ್ರಗಳಲ್ಲೂ ತಿರಸ್ಕರಿಸಲ್ಪಟ್ಟರೆ, ಅವರನ್ನು ಚುನಾವಣೆಯಿಂದಲೇ ಹೊರಗಿಡಬೇಕು. ಇಷ್ಟಿಲ್ಲದೇ “ತಿರಸ್ಕರಿಸುವ” ಹಕ್ಕಿಗೆ ಅರ್ಥವೇ ಇಲ್ಲ.

  ಅದು ಸರಿ, ಜೆ.ಡಿ.ಎಸ್, ಕೆ.ಜೆ.ಪಿ ಇವೆಲ್ಲಾ ಪ್ರಾದೇಶಿಕ ಪಕ್ಷಗಳು ಅಂತ ಹ್ಯಾಗಿ ತೀರ‍್ಮಾನಿಸಿದಿರಿ ಸ್ವಾಮಿ? ಮೊನ್ನೆಮೊನ್ನೆಯ ವರೆಗೂ ಜೆ.ಡಿ.ಎಸ್ ರಾಷ್ಟ್ರೀಯ ಪಕ್ಷ ಅಂತ ಹೇಳಿಕೊಳ್ತಿತ್ತು… ಅದರ “ಹಿರಿಯ”ರು ಪ್ರಧಾನಿಯೂ ಆಗಿದ್ರು, ಹೋಗ್ಲಿ, ಇವು ಪ್ರಾದೇಶಿಕ ಪಕ್ಷಗಳು ಅಂತ್ಲೇ ಇಟ್ಕೊಳ್ಳೋಣ. ಇವುಗಳಿಂದ ನೀವು ಹೇಳೋ ಕನ್ನಡದ ಕೆಲಸ ಆಗುತ್ತೆ ಅಂತೀರಾ? ನಿಜಕ್ಕೂ? ಇವುಗಳಲ್ಲಿರೋ ಜನ ಈಗಾಗಲೇ ಕರ್ನಾಟಕಕ್ಕೆ ಮಾಡಿರೋ ಉಪಕಾರ ನೋಡಿದ ಮೇಲೂ? ನಂಗೇನೋ ಯಾವುದನ್ನ ನಂಬಬೇಕೋ, ಯಾರನ್ನ ನಂಬಬೇಕೋ ಗೊತ್ತಾಗ್ತಾನೇ ಇಲ್ಲ 🙂

  • // ಒಳ್ಳೆಯ ವಿಶ್ಲೇಷಣೆ… //
   ನನ್ನಿ.

   // ಜೆ.ಡಿ.ಎಸ್, ಕೆ.ಜೆ.ಪಿ ಇವೆಲ್ಲಾ ಪ್ರಾದೇಶಿಕ ಪಕ್ಷಗಳು ಅಂತ ಹ್ಯಾಗಿ ತೀರ‍್ಮಾನಿಸಿದಿರಿ //
   ಕಾವೇರಿ…ಹಯ್ಕಮಾಂಡ್ ಇಲ್ಲದಿರುವಿಕೆ/ಬೆಂಗಳೂರಿನಲ್ಲಿರುವಿಕೆ…

   // ಇವುಗಳಿಂದ ನೀವು ಹೇಳೋ ಕನ್ನಡದ ಕೆಲಸ ಆಗುತ್ತೆ ಅಂತೀರಾ? ನಿಜಕ್ಕೂ? //
   ಆಗೇ ಆಗುತ್ತದೆ ಎನ್ನುತ್ತಿಲ್ಲ. ಆಗುವುದಾದರೆ ಇವುಗಳಿಂದಾಗುತ್ತದೆ. ರಾಶ್ಟ್ರೀಯ ಪಕ್ಶಗಳಿಂದಲ್ಲ. ಆಳ್ಮೆಯಲ್ಲಿ ರಾಜಿ ಮಾಡಿಕೊಳ್ಳದೆ ಬೇರೆ ದಾರಿಯಿಲ್ಲ. ಎಲ್ಲಿ ಆದಶ್ಟು ಕಡಿಮೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂಬುದಶ್ಟೇ ಕೇಳ್ವಿ.

Trackbacks

 1. ರಾಜ್ಯ ರಾಜಕೀಯ: ಹಿಂದು, ಇಂದು, ಮುಂದು | ಹೊನಲು

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s