ಗೆಲ್ಲುವವರನ್ನು ಹಿಂದುಳಿಸಲು ನಿಯಮ

UPSC

ಒಕ್ಕೂಟ ಸರ್‍ಕಾರವು ನಡೆಸುವ ಅಯ್.ಎ.ಎಸ್ ಪರೀಕ್ಶೆ ಎಂದೇ ಹೆಸರುವಾಸಿಯಾಗಿರುವ ಯುಪಿಎಸ್ಸಿ (UPSC) ಪರೀಕ್ಶೆಯ  ರಿಸಲ್ಟುಗಳು ಹೊರಬಿದ್ದಿವೆ. ಕರ್‍ನಾಟಕದಿಂದಲೂ ಹಲವಾರು ಮಂದಿ ಈ ಪರೀಕ್ಶೆಯನ್ನು ಎದುರಿಸಿ ಪಾಸಾಗಿದ್ದಾರೆ. ಈ ರೀತಿಯ ಸಾದನೆ ಮಾಡಿರುವ ಕೆಲ ಅಬ್ಯರ್‍ತಿಗಳ ವಿವರಗಳು ಸುದ್ದಿಹಾಳೆಗಳಲ್ಲಿ ಮೂಡಿ ಬಂದಿತ್ತು. ಇವರುಗಳಲ್ಲಿ ಹಲವಾರು ಮಂದಿ ಹಳ್ಳಿಗಳಿಂದ ಬೆಳೆದು ಬಂದಿರುವವರು ಇದ್ದಾರೆ. ಅಂತಹ ಮೂವರ ಬಗೆಗಿನ ವರದಿ ಹೊಂದಿರುವ ಚಿತ್ರವನ್ನು ಈ ಅಂಕಣದೊಂದಿಗೆ ಲಗತ್ತಿಸಲಾಗಿದೆ.

ಕೆಲ ತಿಂಗಳುಗಳ ಹಿಂದೆ ಯುಪಿಎಸ್ಸಿಯು ಮಾಡಲು ಬಯಸಿದ್ದ ಕೆಲವು ಬದಲಾವಣೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಇದನ್ನು ನೋಡಬೇಕಾಗಿದೆ. ಯುಪಿಎಸ್ಸಿ ಮಾಡಬಯಸಿದ್ದ ಬದಲಾವಣೆಗಳು, ಹಿಂದಿ ಅರಿಯದ, ಕನ್ನಡವನ್ನು ಪರಿಸರದ ನುಡಿಯನ್ನಾಗಿ ಹೊಂದಿರುವ ಹಳ್ಳಿಯ ಬಾಗದ ಅಬ್ಯರ್‍ತಿಗಳಿಗೆ ಮಾರಕವಾಗುವಂತಿದ್ದವು. ಕನ್ನಡಿಗರಿಗೆ ಕನ್ನಡವನ್ನು ಒಂದು ವಿಶಯವನ್ನಾಗಿ ತೆಗೆದುಕೊಳ್ಳಲು ಬೇಶರತ್ತಾದ ಅಯ್ಕೆ ಇಲ್ಲದಿರುವುದು, ಕನ್ನಡದಲ್ಲೇ ಯುಪಿಎಸ್‍ಇ ಪರೀಕ್ಶೆ ಬರೆಯಲು ಬೇಶರತ್ತಾದ ಆಯ್ಕೆ ಇಲ್ಲದಿರುವುದು, ಇಂಗ್ಲಿಶ್ ಬಾಶೆಯಲ್ಲಿ ಪಡೆದುಕೊಂಡ ಅಂಕಗಳನ್ನೂ ಸಹ ರ‍್ಯಾಂಕಿಗಾಗಿ ಲೆಕ್ಕಕ್ಕೆ ತೆಗೆದುಕೊಳ್ಳುವುದು ಇವೆಲ್ಲವೂ ಕರ‍್ನಾಟಕದ ಮೂಲೆ ಮೂಲೆಗಳಲ್ಲಿ ಚಿಗುರೊಡೆಯುತ್ತಿರುವ ಪ್ರತಿಬೆಗಳು ಅಯ್.ಎ.ಎಸ್ ಪರೀಕ್ಶೆ ಎದುರಿಸಲಾರದಂತೆ ಮಾಡಿಹಾಕುತ್ತಿತ್ತು. ಹಿಂದಿ ಬಾಶಿಕರಿಗೆ ಈ ಯಾವುದೇ ಶರತ್ತುಗಳು ಇಲ್ಲದಿರುವುದು,ಯುಪಿಎಸ್ಸಿಯ ಹಿಂದಿಯೇತರ ಬಾಶಿಕರ ವಿರೋದಿ ನಿಲುವನ್ನು ತೋರಿಸುತ್ತಿತ್ತು. ಕೆಲವು ಕನ್ನಡಪರ ಸಂಗಟನೆಗಳನ್ನು ಹೊರತುಪಡಿಸಿ, ಬೇರೆ ಯಾವ ಕನ್ನಡಿಗ ಸಂಸದರೂ ಸಹ ಈ ಬಗ್ಗೆ ಸೊಲ್ಲೆತ್ತಲ್ಲಿಲ್ಲ. ಆದರೆ, ತಮಿಳುನಾಡು ಮತ್ತು ಮಹಾರಾಶ್ಟ್ರ ರಾಜ್ಯಗಳ ರಾಜಕಾರಾಣಿಗಳು ಹೋರಾಡಿದ್ದರಿಂದ ಯುಪಿಎಸ್ಸಿಯು ಈ ಬದಲಾವಣೆಗಳನ್ನು ಕಯ್‍ಬಿಟ್ಟಿತು.

ಯುಪಿಎಸ್ಸಿಯು ತರಬಯಸಿದ್ದ ಬದಲಾವಣೆಗಳು ಜಾರಿಗೆ ಬಂದಿದ್ದಿದ್ದರೆ, ಈ ಬಾರಿ ಅಯ್.ಎ.ಎಸ್. (IAS) ಪರೀಕ್ಶೆಯನ್ನು ಪಾಸು ಮಾಡಿರುವ ಹಿಂದಿಯೇತರ ಅಬ್ಯರ್‍ತಿಗಳಲ್ಲಿ ಹಲವರು ಅವಕಾಶವಂಚಿತರಾಗುತ್ತಿದ್ದರು, ಇಲ್ಲವೇ ಕಳಪೆ ರ‍್ಯಾಂಕುಗಳಿಗೆ ಸಮಾದಾನ ಪಡಬೇಕಿತ್ತು ಎಂಬುದು ದಿಟ. ಸರಿಯಾದ ಸಮಯದಲ್ಲಿ ಎಚ್ಚೆತ್ತು ಹಿಂದಿಯೇತರ ಅಬ್ಯರ್‍ತಿಗಳ ಪಾಲಿಗೆ ಮಾರಕವಾಗಬಹುದಾಗಿದ್ದ ಯುಪಿಎಸ್ಸಿಯ ಹೊಸ ನಿಯಮಗಳನ್ನು ಜಾರಿಗೆ ಬಾರದಂತೆ ತಡೆಯಲು ಹೋರಾಟ ಮಾಡಿದ ಎಲ್ಲರನ್ನೂ ಈ ಸಂದರ್‍ಬದಲ್ಲಿ ನೆನೆಸಿಕೊಳ್ಳಬೇಕು. ಇನ್ನು ಮುಂದೆಯೂ ಸಹ ಇಂತಹ ಅನ್ಯಾಯಗಳು ನಡೆದಾಗ ಅದನ್ನು ವಿರೋದಿಸುವ, ನ್ಯಾಯವಾಗಿ ನಮಗೆ ದಕ್ಕಬೇಕಾದುದನ್ನು ಪಡೆದುಕೊಳ್ಳುವ ಮನಸ್ಸು ಪ್ರತಿಯೊಬ್ಬ ಕನ್ನಡಿಗನಲ್ಲೂ ಮೂಡಲಿ.

(ಚಿತ್ರ: ಪ್ರಜಾವಾಣಿ ಮತ್ತು ವಿಜಯ ಕರ‍್ನಾಟಕ ಸುದ್ದಿಹಾಳೆಗಳಲ್ಲಿ ಮೂಡಿ ಬಂದಿದ್ದ ಸುದ್ದಿ ತುಣುಕುಗಳು)

ಗಿರೀಶ್ ಕಾರ‍್ಗದ್ದೆ

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಲೇಖನ ಉತ್ತಮವಾಗಿದೆ.

ಅನಿಸಿಕೆ ಬರೆಯಿರಿ: