ರಾಜ್ಯ ರಾಜಕೀಯ: ಹಿಂದು, ಇಂದು, ಮುಂದು

ಕಿರಣ್ ಬಾಟ್ನಿ.

ಈ ಬಾರಿಯ ಚುನಾವಣೆಯಲ್ಲಿ ‘ಸ್ಪಶ್ಟ ಬಹುಮತ’ ಪಡೆದಿದೆ ಎನ್ನಲಾದ ಕಾಂಗ್ರೆಸ್ಸಿನವರು ತಾವು ಗೆದ್ದಿರುವ 121 ಸೀಟುಗಳಿಗೆ ಕಾರಣ ಏನೆಂದು ಕೊಡುತ್ತಾರೆ ಕೇಳಿಸಿಕೊಂಡಿದ್ದೀರಾ? ಬಿಜೆಪಿಯವರ ಬ್ರಶ್ಟಾಚಾರದಿಂದ ಬೇಸೆತ್ತ ಕನ್ನಡಿಗರು ತಮ್ಮ ಎಲ್ಲಾ ನಂಬಿಕೆಯನ್ನೂ ಕಾಂಗ್ರೆಸ್ಸಿನಲ್ಲಿ ಇಟ್ಟಿದ್ದಾರೆ ಎನ್ನುತ್ತಾರೆ. ಬಿಜೆಪಿಯವರ ಬ್ರಶ್ಟಾಚಾರದಿಂದ ಕೆಲವರು ಕನ್ನಡಿಗರು ಬೇಸಿತ್ತಿದ್ದಾರೆ ಎಂಬುದು ನಿಜ; ಆದರೆ ಆ ಕಾರಣದಿಂದ ಎದ್ದೆನೋ ಬಿದ್ದೆನೋ ಎಂದು ಇವರಿಗೆ ವೋಟು ಹಾಕುತ್ತಿದ್ದವರಲ್ಲಿ ಬಹುಪಾಲು ಜನರು ಕಾಂಗ್ರೆಸ್ಸಿಗೆ ಹೋಗಿ ವೋಟು ಹಾಕಿದ್ದಾರೆ ಎಂಬುದು ಹದಿನಾರಾಣೆ ಸುಳ್ಳು. ಕಳೆದ ವಿದಾನಸಬಾ ಚುನಾವಣೆಗೂ ಈ ಬಾರಿಯದಕ್ಕೂ ಕಾಂಗ್ರೆಸ್ಸಿನ ಮಟ್ಟಿಗೆ ಏನು ವ್ಯತ್ಯಾಸಗಳಾಗಿವೆ ಎಂಬ ಅಂಕಿಅಂಶವನ್ನು ಒಮ್ಮೆ ಹತ್ತಿರದಿಂದ ನೋಡೋಣ:

cong

ಮೇಲಿನ ತಿಟ್ಟದಲ್ಲಿ ಮೊದಲೆರಡು ಕಂಬಗಳು 2008 ನೇ ಇಸವಿಯವು, ಮತ್ತು ಕಡೆಯೆರಡು 2013 ನವು. ಇದರಿಂದ ತಿಳಿದು ಬರುವುದೇನೆಂದರೆ, 2008ರಲ್ಲಿ ಕಾಂಗ್ರೆಸ್ಸು ಪಡೆದ ಶೇಕಡ ವೋಟುಗಳಶ್ಟೇ (ಹೆಚ್ಚು ಕಡಿಮೆ) ಶೇಕಡ ಸೀಟುಗಳನ್ನೂ ಪಡೆದುಕೊಂಡಿತ್ತು. ನಿಜಕ್ಕೂ ‘ಸಿಕ್ಕಿದವರಿಗೆ ಸೀರುಂಡೆ’ ಪದ್ದತಿಯಿಂದ ಕಾಂಗ್ರೆಸ್ಸಿಗೆ ಕಳೆದ ಬಾರಿ ಅಂತಹ ಸೀರುಂಡೆ ಹೊಡೆದಿರಲಿಲ್ಲ. ಆದರೆ ಈ ಬಾರಿ ಬರೀ 2.46% (ತಿಟ್ಟದಲ್ಲಿ 2% ಎಂದು ತೋರಿಸಿದೆ) ಹೆಚ್ಚು ಶೇಕಡ ವೋಟುಗಳನ್ನು ಪಡೆದಿದ್ದರೂ ಶೇಕಡ ಸೀಟುಗಳು 19% ಹೆಚ್ಚಿವೆ. ಇದು ಕಾಂಗ್ರೆಸ್ಸಿನವರು ಕೊಚ್ಚಿಕೊಳ್ಳುವಂತೆ ಕನ್ನಡಿಗರು ತಮ್ಮ ತಲೆಗಳನ್ನು ಕಾಂಗ್ರೆಸ್ಸಿಗೆ ಎರ್ರಾಬಿರ್ರಿ ಒಪ್ಪಿಸಿರುವುದರ ಗುರುತೂ ಅಲ್ಲ, ಕಾಂಗ್ರೆಸ್ಸಿನಲ್ಲಿ ಬ್ರಶ್ಟಾಚಾರವೇ ಇಲ್ಲ ಎಂದು ತೀರ‍್ಪು ಕೊಟ್ಟಿರುವುದೂ ಅಲ್ಲ.

ಇದು ತೋರಿಸುವುದು ಇಶ್ಟೇ: ‘ಸಿಕ್ಕಿದವರಿಗೆ ಸೀರುಂಡೆ’ ಪದ್ದತಿಯಿಂದ ಈ ಬಾರಿ ಕಾಂಗ್ರೆಸ್ಸಿಗೆ ಸೀರುಂಡೆ ಹೊಡೆದಿದೆ, ಅಶ್ಟೇ. ಕಾಂಗ್ರೆಸ್ಸಿಗೆ ಬಹುಮತ ಸಿಕ್ಕಿರುವುದು ವೋಟಿನಲ್ಲಲ್ಲ, ಸೀಟಿನಲ್ಲಿ ಮಾತ್ರ. ಶೇಕಡ ವೋಟುಗಳಿಗೂ ಶೇಕಡ ಸೀಟುಗಳಿಗೂ ನಡುವೆ ಹೀಗೆ ಏರುಪೇರು ಇರುವಂತಹ ಅದ್ಬುತವಾದ ಏರ‍್ಪಾಡಿಗೆ ಈ ಬಾರಿ ಕಾಂಗ್ರೆಸ್ಸಿನವರು ರುಣಿಗಳಾಗಬೇಕು. ಶೇಕಡ ವೋಟು ಗಳಿಕೆಯಲ್ಲಿ ಹೆಚ್ಚು-ಕಡಿಮೆ ಯಾವ ಹೆಚ್ಚಳವೂ ಆಗಿಲ್ಲದಿದ್ದರೂ ಸೀಟುಗಳಿಕೆಯಲ್ಲಿ ‘ಸ್ಪಶ್ಟ ಬಹುಮತ’ ಬಂದಿರುವುದರ ಹಿಂದೆ ಕಾಂಗ್ರೆಸ್ಸಿನ ಯಾವ ಬೆವರುಸುರಿಕೆಯೂ ಇಲ್ಲ. ಇವರ ಗೆಲುವಿನ ಮಾಡುಗರು ಇವರಲ್ಲ, ಇವರೆದುರು ನಿಂತಿದ್ದ ಬೇರೆ ಬದಿಗಳು ಒಡೆದು ಚೂರಾಗಿರುವುದರಿಂದ ಇವರು ಗೆದ್ದಿದ್ದಾರೆ, ಅಶ್ಟೇ.

ಇನ್ನು ಬಿಜೆಪಿಗೆ ಬರೋಣ. ಈ ಆಳ್ಮೆಬದಿಯವರು ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 14% ವೋಟು ಕಳೆದುಕೊಂಡಿದ್ದಾರೆ. ಇದರಿಂದ ಇವರಿಗೆ ‘ತಿರುಗು ಸೀರುಂಡೆ’ ಹೊಡೆದಂತಾಗಿ 31% ಸೀಟುಗನ್ನು ಕಳೆದುಕೊಂಡಿದ್ದಾರೆ. ಕಾಂಗ್ರೆಸ್ಸಿನವರು ಹೇಳಿಕೊಳ್ಳುವಂತೆ ಇವರು ಕಳೆದುಕೊಂಡ 14% ವೋಟುಗಳೆಲ್ಲ ಅವರ ಕಯ್ಗೇನೂ ಹೋಗಿಲ್ಲ. ಮೇಲೆ ತೋರಿಸಿದಂತೆ ಕಾಂಗ್ರೆಸ್ಸಿಗೆ ಬರೀ 2.46% ವೋಟುಗಳ ಗಳಿಕೆ ಮಾತ್ರ ಆಗಿರುವುದು. ನಿಜಕ್ಕೂ ಮಿಕ್ಕ 11.54% ವೋಟುಗಳು ಇತರ ಬದಿಗಳು ಮತ್ತು ಬದಿಯೇತರರಿಗೆ ಹೋಗಿವೆ.

bjp

ಇನ್ನು ಜೆಡಿಎಸ್ ಬದಿಗೆ ಬಂದರೆ ತಿಳಿದು ಬರುವುದೇನೆಂದರೆ, ಇವರಿಗೆ ಕಳೆದ ಬಾರಿ ತಿರುಗು ಸೀರುಂಡೆ ಹೊಡೆದಿದ್ದು, ಈ ಬಾರಿ ಅದು ಹೆಚ್ಚು-ಕಡಿಮೆ ಇಲ್ಲವಾಗಿದೆ; ಎಂದರೆ, ಶೇಕಡ ವೋಟುಗಳು ಮತ್ತು ಸೀಟುಗಳು ಹೆಚ್ಚು-ಕಡಿಮೆ ಒಂದೇ ಎನ್ನುವ ಪಲಿತಾಂಶ ಈ ಬದಿಗೆ ಸಿಕ್ಕಿದೆ. ಆದ್ದರಿಂದ ಜೆಡಿಎಸ್ಸಿನವರು ಬೇಜಾರು ಮಾಡಿಕೊಳ್ಳುವಂತದ್ದು ಹೆಚ್ಚೇನೂ ಇಲ್ಲ. ಆದರೆ ಜೆಡಿಎಸ್ ನವರು ಗೆಲ್ಲಬೇಕಾದರೆ ಇವರಿಗೂ ಸೀರುಂಡೆ ಹೊಡೆಯಬೇಕು.

ಬಿಜೆಪಿಯವರು ಕಳೆದುಕೊಂಡ 14% ವೋಟುಗಳಲ್ಲಿ ಎಲ್ಲವೂ ಜೆಡಿಎಸ್ಗೆ ಬಂದುಬಿಟ್ಟಿದೆ ಎನಿಸುವಂತೆ ಜೆಡಿಎಸ್ ನವರು ಮಾತನಾಡುತ್ತಾರೆ, ಆದರೆ ಅದೂ ತಪ್ಪು. ಏಕೆಂದರೆ ಇವರಿಗೆ ಕಳೆದ ಬಾರಿಗಿಂತ 1% ಮಾತ್ರ ಹೆಚ್ಚು ವೋಟುಗಳು ಸಿಕ್ಕಿರುವುದು. ಈ 1% ಹೆಚ್ಚು ವೋಟುಗಳಿಂದ 5% ಹೆಚ್ಚು ಸೀಟುಗಳು ಸಿಕ್ಕಿರುವುದು ಸೀರುಂಡೆ ಹೊಡೆದಂತಲ್ಲ; ಸೀರುಂಡೆ ಹೊಡೆಯುವುದು ಎಂದರೆ ಶೇಕಡ ವೋಟುಗಳಿಗಿಂತ ಹೆಚ್ಚು-ಬಹಳ ಹೆಚ್ಚು ಶೇಕಡ ಸೀಟುಗಳನ್ನು ಪಡೆಯುವುದು. ಇದು ಈ ಬಾರಿ ಜೆಡಿಎಸ್ಗೆ ಆಗಿಲ್ಲ, ಹಿಂದೆ ಹೊಡೆದಿದ್ದ ತಿರುಗು ಸೀರುಂಡೆ ಈಗ ಹೆಚ್ಚು-ಕಡಿಮೆ ಹೋಗಿದೆ, ಅಶ್ಟೇ.

jds

ಇತರರು (ಎಂದರೆ ಬದಿಯೇತರರು ಮತ್ತು ಲೋಕಸತ್ತಾ ಮುಂತಾದ ಬದಿಗಳು) ಕಳೆದ ಬಾರಿಗಿಂತ ಈ ಬಾರಿ 1% ಹೆಚ್ಚು ವೋಟುಗಳನ್ನು ಪಡೆದುಕೊಂಡಿದ್ದಾರೆ, ಆದರೆ ಈ 1% ಹೆಚ್ಚಳದಿಂದ 3% ಹೆಚ್ಚು ಸೀಟುಗಳು ಸಿಕ್ಕಿವೆ. ಆದರೆ ಇವರು ಇನ್ನೂ ತಿರುಗು ಸೀರುಂಡೆಯಲ್ಲೇ ಕೊಳೆಯುತ್ತಿದ್ದಾರೆ, ಏಕೆಂದರೆ ಇವರು ಪಡೆದುಕೊಂಡಿರುವ ಶೇಕಡ ವೋಟುಗಳಿಗಿಂತ ಇನ್ನೂ ತೀರಾ ಕಡಿಮೆ ಶೇಕಡ ಸೀಟುಗಳನ್ನೇ ಪಡೆದಿದ್ದಾರೆ. ಇದಕ್ಕೆ ಮುಕ್ಯವಾದ ಕಾರಣ ಇಲ್ಲಿ ಪಟುಗಳ ಸಂಕ್ಯೆ ಬಹಳ ಹೆಚ್ಚಿರುವುದೇ ಆಗಿದೆ.

oth

ಬಿಜೆಪಿಯವರು ಕಳೆದುಕೊಂಡ 14% ವೋಟುಗಳಲ್ಲಿ 2.46% ಅನ್ನು ಕಾಂಗ್ರೆಸ್ಸು, 1% ಅನ್ನು ಜೆಡಿಎಸ್ಸು ಮತ್ತು 1% ಅನ್ನು ಇತರರು ಕಬಳಿಸಿಕೊಂಡಿದ್ದಾರೆ ಎಂದು ತೋರಿಸಿದ್ದಾಯಿತು. ಹಾಗಾದರೆ ಮಿಕ್ಕ ವೋಟುಗಳೆಲ್ಲ ಎಲ್ಲಿಗೆ ಹೋದವು? ಎಲ್ಲವೂ ಯಡಿಯೂರಪ್ಪನವರ ಕೆಜೆಪಿ ಬದಿಗೆ ಹೋಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಕೆಳಗಿನ ತಿಟ್ಟವನ್ನು ನೋಡಿ. 2008ರಲ್ಲಿ ಇಲ್ಲದಿದ್ದ ಈ ಆಳ್ಮೆಬದಿ 2013ರಲ್ಲಿ ಸಡನ್ನಾಗಿ ಕಾಣಿಸಿಕೊಂಡು 10% ವೋಟುಗಳನ್ನು ಕಬಳಿಸಿಕೊಂಡಿದೆ. ಆದರೆ ಈ 10% ವೋಟುಗಳಿಗೆ ಸಿಗಬೇಕು ಎನ್ನಬಹುದಾದ 10% ಸೀಟುಗಳ ಬದಲಾಗಿ ಇದಕ್ಕೆ ಬರೀ 3% ಸೀಟುಗಳು ದೊರಕಿವೆ. ಎಂದರೆ ಈ ಬದಿಗೂ ಕೂಡ ತಿರುಗು ಸೀರುಂಡೆ ಹೊಡೆದಿದೆ. ಹೊಸದಾಗಿ ಚುನಾವಣೆಯಲ್ಲಿ ಪಾಲ್ಗೊಳ್ಳುವ ಆಳ್ಮೆಬದಿಗಳನ್ನು ‘ಸಿಕ್ಕಿದವರಿಗೆ ಸೀರುಂಡೆ’ ಪದ್ದತಿ ಹೇಗೆ ಹಿನ್ನಡೆಸುತ್ತದೆ ಎಂದು ಇದರಿಂದ ತಿಳಿದುಬರುತ್ತದೆ. ಅಲ್ಲದೆ, ಬ್ರಶ್ಟಾಚಾರದ ಅತಿ ದೊಡ್ಡ ಆರೋಪದಿಂದ ಬಿಜೆಪಿಯನ್ನು ಬಿಟ್ಟ ಯಡಿಯೂರಪ್ಪನವರ ಬದಿಯೇ ಬಿಜೆಪಿ ಕಳೆದುಕೊಂಡ ವೋಟುಗಳಲ್ಲಿ ಬಹುಪಾಲನ್ನು (10%) ಗಳಿಸಿರುವುದರಿಂದ, ಬಿಜೆಪಿಯ ನಶ್ಟಕ್ಕೆ ಕಾರಣ ಅದರ ಬ್ರಶ್ಟಾಚಾರವಲ್ಲ, ಯಡಿಯೂರಪ್ಪನವರನ್ನು ಕಳೆದುಕೊಂಡು ಕೆಜೆಪಿಯನ್ನು ಹುಟ್ಟಿಹಾಕಿದ್ದು ಎಂದಾಗುತ್ತದೆ.

kjp

ಮತ್ತೊಂದೇನೆಂದರೆ, ಮೇಲಿನ ಎಲ್ಲ ಬದಿಗಳಿಗೂ ಶೇಕಡ ವೋಟಿನಶ್ಟೇ ಶೇಕಡ ಸೀಟು ಸಿಕ್ಕಿದ್ದಿದ್ದರೆ ಈಗ ಬಂದಿರುವ ಪಲಿತಾಂಶ ಬರುತ್ತಿರಲಿಲ್ಲ. ಕಾಂಗ್ರೆಸ್ಸಿಗೆ 121 ಸೀಟುಗಳ ಬದಲು 81, ಜೆಡಿಎಸ್ ಮತ್ತು ಬಿಜೆಪಿ ಎರಡಕ್ಕೂ 40 ಸೀಟುಗಳ ಬದಲು 44, ಕೆಜೆಪಿಗೆ 3 ಸೀಟುಗಳ ಬದಲು 22, ಹಾಗೂ ಇತರರಿಗೆ 6 ಸೀಟುಗಳ ಬದಲು 29 ಸೀಟುಗಳು ಸಿಕ್ಕಿರುತ್ತಿದ್ದವು (ಈ ಇತರರೆಲ್ಲ ಸೇರಿಸಿ ಒಂದು ಆಳ್ಮೆಬದಿಯಾಗಿದ್ದಿದ್ದರೆ). ಹೀಗಾಗಿದ್ದಿದ್ದರೆ ಆಯಾ ಬದಿಯ ಸಿದ್ದಾಂತವನ್ನು ಕರ‍್ನಾಟಕದಲ್ಲಿ ಶೇಕಡ ಎಶ್ಟು ಜನ ಒಟ್ಟಾರೆಯಾಗಿ ಒಪ್ಪಿರುವರೋ ಅದಕ್ಕೆ ಸರಿಯಾಗಿ ವಿದಾನಸಬೆಗೆ ಎಮ್ಮೆಲ್ಲೆಗಳನ್ನು ಆಯಾ ಬದಿಗಳು ಕಳುಹಿಸಿರುತ್ತಿದ್ದವು.

ಹೀಗಾಗುವುದು ಸರಿ ಎಂದು ಒಪ್ಪುವುದಾದರೆ, ‘ಸಿಕ್ಕಿದವರಿಗೆ ಸೀರುಂಡೆ’ ಪದ್ದತಿಯಿಂದಾಗಿ ಇದು ಆಗದೆ ಹೋಗಿದೆ. ನಿಜಕ್ಕೂ ಬಂದಿರುವ ಪಲಿತಾಂಶದಿಂದ ಇತರರು ಮತ್ತು ಕೆಜೆಪಿಗಳಿಗೆ ವೋಟು ಹಾಕಿದವರಿಗೆ ಬೇಜಾರು ಬಂದರೆ ಸೋಜಿಗವೇನಲ್ಲ; ಇವುಗಳಿಗೆ ‘ಸಿಕ್ಕಿದವರಿಗೆ ಸೀರುಂಡೆ’ ಪದ್ದತಿಯಿಂದ ಬಹಳ ದೊಡ್ಡ ಪೆಟ್ಟು ಬಿದ್ದಿದೆ. ಈ ಬದಿಗಳ ಮತ್ತು ಇವುಗಳಿಗೆ ವೋಟು ಹಾಕಿದವರ ಬೇಜಾರು ಮುಂದಿನ ಚುನಾವಣೆಯ ಮೇಲೆ ಯಾವ ಪ್ರಬಾವ ಬೀರಲಿವೆ ಎಂದು ಕಾದು ನೋಡಬೇಕಿದೆ.

ಜೆಡಿಎಸ್ ಮತ್ತು ಬಿಜೆಪಿಗಳು ಬಹುಮತ ಗಳಿಸದಿದ್ದರೂ ಇವುಗಳಿಗೆ ವೋಟು ಹಾಕಿದವರಿಗೆ ಅಶ್ಟೇನೂ ಬೇಜಾರಾಗಬೇಕಿಲ್ಲ, ಏಕೆಂದರೆ ಈಗಿನ 40 ಸೀಟುಗಳು ಹೆಚ್ಚು-ಕಡಿಮೆ ಆಯಾ ಬದಿಗಳ ಶೇಕಡ ವೋಟಿನಶ್ಟೇ ಆಗಿದೆ; ತಿರುಗು ಸೀರುಂಡೆಯಂತೂ ಈ ಬಾರಿ ಹೊಡೆದಿಲ್ಲ! ಆದರೆ, ಕಾಂಗ್ರೆಸ್ಸು ಮತ್ತು ಅದಕ್ಕೆ ವೋಟು ಹಾಕಿದವರ ಸೊಕ್ಕು ಹೆಚ್ಚುವ ಸಾದ್ಯತೆ ಬಹಳ ಇದೆ, ಏಕೆಂದರೆ ಈ ಬಾರಿಯ ಸೀರುಂಡೆಯಿಂದ ಅವರಿಗೆ ಸಿಗಬೇಕಾದ ಸೀಟುಗಳಿಗಿಂತ 40 ಹೆಚ್ಚು ಸೀಟುಗಳು ಸಿಕ್ಕಿವೆ. ಈ ಸೊಕ್ಕು ಮುಂದಿನ ಚುನಾವಣೆಯಲ್ಲಿ ಯಾವ ಪ್ರಬಾವ ಬೀರಲಿದೆ ಎಂದು ಕಾದು ನೋಡಬೇಕಿದೆ.

ಮೇಲಿನ ಅಂಕಿಅಂಶಗಳು ಮತ್ತು ಸೀಳುನೋಟದಿಂದ ‘ಸಿಕ್ಕಿದವರಿಗೆ ಸೀರುಂಡೆ’ ಪದ್ದತಿ ವಿಚಿತ್ರವಾಗಿ ಕೆಲಸ ಮಾಡುತ್ತದೆ ಎಂದು ಸ್ಪಶ್ಟವಾಗುತ್ತದೆ. ಈ ಪದ್ದತಿಯಿಂದಾಗಿ ಕೊಂಚ ಗೆಲುವಿನ ಕಡೆಗೆ ವಾಲಿರುವ ಆಳ್ಮೆಬದಿಗಳಿಗೆ ಸೀರುಂಡೆ ಹೊಡೆಯುತ್ತದೆ, ಮತ್ತು ಕೊಂಚ ಸೋಲಿನ ಕಡೆಗೆ ವಾಲಿರುವ ಬದಿಗಳಿಗೆ ತಿರುಗು  ಸೀರುಂಡೆ ಹೊಡೆಯುತ್ತದೆ. ಹಾಗೆಯೇ, ಒಡೆದು ಆಳುವ ಕಲೆಯನ್ನು ಪಳಗಿಸಿಕೊಂಡ ಬದಿಗಳಿಗೆ ಬಹಳಾ ಸುಲಬವಾಗಿ ಸೀರುಂಡೆ ಹೊಡೆಯುತ್ತದೆ. ಈ ಪದ್ದತಿಯ ಈ ಹುಳುಕುಗಳಿಂದ ಕರ‍್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿನಂತಹ ಹಳೆಯ ಕುಳಗಳಲ್ಲಿ ಒಂದಕ್ಕೆ ಯಾವಾಗಲೂ ಸೀರುಂಡೆ ಹೊಡೆಯುವ ಸಾದ್ಯತೆ ಬಹಳ ಹೆಚ್ಚಿದೆ; ಹೊಸ ಆಳ್ಮೆಬದಿಗಳಿಗೆ ತಿರುಗು ಸೀರುಂಡೆ ಹೊಡೆಯುವುದಂತೂ ಕಂಡಿತ ಎಂಬಂತಿದೆ. ಹೀಗಾಗುವುದರಿಂದ ಹೊಸ ಆಳ್ಮೆಬದಿಗಳು ನೆಲೆನಿಲ್ಲಲು ಹರಸಾಹಸಾವನ್ನೇ ಮಾಡಬೇಕಾಗುತ್ತದೆ.

ಕನ್ನಡ-ಕನ್ನಡಿಗ-ಕರ‍್ನಾಟಕ ಕೇಂದ್ರಿತ ಆಳ್ಮೆಬದಿಗಳು ಈಗತಾನೇ ತಲೆಯೆತ್ತುತ್ತಿರುವುದರಿಂದ ಇವುಗಳಿಗೆ ಇಂದಿನ ಏರ‍್ಪಾಡು ಸಾಕಶ್ಟು ತೊಂದರೆಯುಂಟುಮಾಡುತ್ತದೆ. ಬ್ರಿಟಿಶರು ಹೇಗೆ ಬಹಳ ಹಿಂಜರಿಕೆಯಿಂದ ತಮ್ಮ ಆಳ್ವಿಕೆಯನ್ನು ‘ಬಾರತೀಯರಿಗೆ’ ಬಿಟ್ಟುಕೊಟ್ಟರೋ ಅದಕ್ಕಿಂತ ಹೆಚ್ಚು ಹಿಂಜರಿಕೆಯಿಂದಲೇ ಕಾಂಗ್ರೆಸ್ ಮತ್ತು ಬಿಜೆಪಿಗಳು ತಮ್ಮ ಆಳ್ವಿಕೆಯನ್ನು ಕನ್ನಡದ ನಾಡಬದಿಗಳಿಗೆ ಬಿಟ್ಟುಕೊಡಬಲ್ಲರು ಎಂದು ಊಹಿಸಬಹುದು. ಇಂದಿನ ‘ಸಿಕ್ಕಿದವರಿಗೆ ಸೀರುಂಡೆ’ ಪದ್ದತಿ ಮತ್ತು ಒಟ್ಟಾರೆಯಾಗಿ ರಾಶ್ಟ್ರೀಯ ಪಕ್ಶಗಳು ನಾಡಬದಿಗಳಿಗಿಂತ ಎಲ್ಲದರಲ್ಲೂ ಒಂದು ಕಯ್ ಮೇಲು ಎಂಬ ನಂಬಿಕೆಗಳಿರುವುದರಿಂದ ಕಾಂಗ್ರೆಸ್ ಇಲ್ಲವೇ ಬಿಜೆಪಿಗಳಲ್ಲಿ ಒಂದಕ್ಕೆ ವೋಟು ಹಾಕಿ ತಮ್ಮ ಆಳ್ಮೆಯನ್ನು ಹೆರವರ ಕಯ್ಗೆ ಬಿಟ್ಟುಕೊಡುವಂತೆ ಕನ್ನಡಿಗರ ಮೇಲೆ ಒತ್ತಡ ಬೇರೆ ಇದೆ.

ಜೆಡಿಎಸ್, ಕೆಜೆಪಿ ಮುಂತಾದ ಆಳ್ಮೆಬದಿಗಳು ಏನಾದರೂ ಅದ್ಬುತವನ್ನು ಮಾಡದೆ ಹೋದರೆ ಕರ‍್ನಾಟಕ ಒಮ್ಮೆ ಕಾಂಗ್ರೆಸ್ಸಿನವರ ಕಯ್ಯಲ್ಲಿ, ಮತ್ತೊಮ್ಮೆ ಬಿಜೆಪಿಯವರ ಕಯ್ಯಲ್ಲಿ ಚೆಂಡಿನಂತೆ ಅಡ್ಡಾಡುತ್ತ ಹೆರರಾಳ್ವಿಕೆಯಲ್ಲೇ ಸೊರಗಿಹೋಗುವ ಎಲ್ಲ ಗುರುತುಗಳೂ ಕಾಣುತ್ತಿವೆ. ಒಳ್ಳೆಯ ಸುದ್ದಿಯೇನೆಂದರೆ ಆ ಅದ್ಬುತವನ್ನು ಮಾಡುವ ಅಳವು ಜೆಡಿಎಸ್ ಮತ್ತು ಕೆಜೆಪಿ ಎರಡಕ್ಕೂ ಇದೆ: ನಾಡಪರವಾಗಿ ಗಟ್ಟಿಯಾಗಿ ನಿಂತರೆ ಸಾಕು. ರಾಶ್ಟ್ರೀಯ ಪಕ್ಶಗಳು ನಾಡ ಕಾಳಜಿಯನ್ನು ಕಡೆಗಣಿಸಿ ‘ಬಾರತ ಬಾರತ’ ಎಂದು ಅರ‍್ತವಿಲ್ಲದೆ ಕೂಗಿಕೊಳ್ಳುತ್ತಿರುವಾಗ ಜೆಡಿಎಸ್ ಮತ್ತು ಕೆಜೆಪಿಗಳು ಕನ್ನಡ-ಕನ್ನಡಿಗ-ಕರ‍್ನಾಟಕಗಳ ಒಟ್ಟಾರೆ ಏಳಿಗೆ ಮತ್ತು ಹಿತಾಸಕ್ತಿಯನ್ನೇ ಗುರಿಯಾಗಿಟ್ಟುಕೊಂಡು ದುಡಿದರೆ ಇವುಗಳು ರಾಶ್ಟ್ರೀಯ ಪಕ್ಶಗಳನ್ನು ಹಿಂದಕ್ಕೆ ನೂಕಿ ಮುಂಬರುವುದು ಕಂಡಿತ. ನಿಜಕ್ಕೂ ಈ ಬದಿಗಳು ಈ ಹಿರಿಯಮ್ಮುಗೆಯನ್ನು ಎಶ್ಟು ಚೆನ್ನಾಗಿ ನಿಬಾಯಿಸಬಲ್ಲವು ಎಂದು ಕಾದು ನೋಡಬೇಕಿದೆ.

(ಮೇಲಿನ ತಿಟ್ಟಗಳಲ್ಲಿ ಶೇಕಡ ಅಂಕಿಗಳನ್ನು ತೋರಿಸುವಾಗ ಇಡಿಯಂಕಿಗಳನ್ನು ಮಾತ್ರ ತೋರಿಸಿದೆ, ಆದರೆ ನಿಜವಾದ ಅಂಕಿಗಳು ಅರೆಯಂಕಿಗಳೇ ಆಗಿವೆ. ಈ ವ್ಯತ್ಯಾಸ ಇಲ್ಲಿ ಮುಕ್ಯವಲ್ಲ. ಹಾಗೆಯೇ, ಮೇಲಿನ ಸೀಳುನೋಟದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಕೆಜೆಪಿಗಳಿಗೆ ತಮ್ಮದೇ ಆದ ಸಿದ್ದಾಂತಗಳಿವೆ, ಮತ್ತು ಆ ಸಿದ್ದಾಂತಗಳನ್ನು ಒಪ್ಪಿ ಜನರು ವೋಟು ಹಾಕಿದ್ದಾರೆ ಎಂದು ನಂಬಲಾಗಿದೆ; ಚುನಾವಣೆಯನ್ನು ಈ ಬೇರೆ ಬೇರೆ ಸಿದ್ದಾಂತಗಳ ನಡುವಿನ ನಾಡಮಟ್ಟದ ಪಯ್ಪೋಟಿಯೆಂದು ಕೂಡ ಎಣಿಸಲಾಗಿದೆ.)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ತುಂಬಾ ಒಳ್ಳೆಯ ಬರಹ. ಸೊಗಸಾಗಿದೆ ಕಿರಣ್!

  2. ಕಳೆದ ಬಾರಿ ಕಾಂಗ್ರೆಸ್ ಬೀಜೇಪಿಗಿಂತಲೂ ಹೆಚ್ಚು ಶೇಕಡಾವಾರು ಮತಗಳನ್ನ ಗಳಿಸಿತ್ತು. ಆದರೂ ಕಾಂಗ್ರೆಸ್ಸಿಗೆ ಬೀಜೇಪಿಗಿಂತಲೂ 30 ಸೀಟು ಕಡಿಮೆ ಬಂದಿದ್ದವು! ‘ಸಿಕ್ಕವರಿಗೆ ಸೀರುಂಡೆ’ ಆಟವೇ ಮುಂದುವರಿಯುವುದಾದರೆ ದೊಡ್ಡವೆರಡು ಆಳ್ಮೆಬದಿಗಳು ಕನ್ನಡಿಗರದ್ದಾಗುವಂತಾದರೂ ಆಗಬೇಕು.

girigowda2003 ಗೆ ಅನಿಸಿಕೆ ನೀಡಿ Cancel reply

%d bloggers like this: