ಶೇರು ಮಾರುಕಟ್ಟೆಯಾಟ ಬೇಸ್ಬಾಲಿನಂತಿರಬೇಕೋ, ಪುಟ್ಬಾಲಿನಂತಿರಬೇಕೋ?
ಮೊದಲಿಗೆ ನಾನು ಪ್ರಿಯಾಂಕ್ ಕತ್ತಲಗಿರಿ ಅವರ ಹೊನಲಿನ ಅಂಕಣವನ್ನು ನೋಡಿದಾಗ ಬಂಡವಾಳಶಾಹಿಯ ಆಚರಣೆಯ ರೀತಿಯನ್ನೂ ಅಮೇರಿಕಾದ ಪುಟ್ಬಾಲಿನ ಆಡಳಿತದ ರೀತಿಯನ್ನೂ ತಾಳೆಹಾಕಿ ನೋಡುತ್ತಿದ್ದಾರೆ ಅಂದುಕೊಂಡೆ. ಆದರೆ, ಓದಿದ ಮೇಲೆ ತಿಳಿದಿದ್ದು ಬಂಡವಾಳಶಾಹಿಯನ್ನು ಸರಕಾರಗಳು ಅಂಕೆಯಲ್ಲಿಡುವ ರೀತಿಯನ್ನೂ ಪುಟ್ಬಾಲಿನಲ್ಲಿ ಆಟಗಾರರು ಜೂಜು ಆಡದಂತೆ ಅಂಕೆಯಲ್ಲಿಡುವ ರೀತಿಯನ್ನೂ ತಾಳೆ ಹಾಕಿದ್ದಾರೆಂದು ಗೊತ್ತಾಯಿತು.
ದಿಟ. ಪುಟ್ಬಾಲ್ ಆಟಗಾರರು ಜೂಜು ಆಡುವುದು ಓಡುವ ಕುದುರೆಯೇ ಜೂಜು ಆಡಿದಂತೆ. ಜೂಜಾಡುವುದರಿಂದ ಆಟಗಾರರಿಗೆ ಆಟದ ಮೇಲೆ ಗಮನ ಇಡಲು ಆಗದು ಮತ್ತು ಆಟಗಾರರ ಮೇಲೆ ಪಣವಿಡುವವರಿಗೆ ಮೋಸ ಮಾಡಿತಂತೆಯೂ ಆಗುತ್ತದೆ. ಇದರಿಂದ ಆಟವೇ ಸೊರಗುತ್ತದೆ. ಬಂಡವಾಳಶಾಹಿಗಳನ್ನು ಸರಕಾರಗಳು ಅಂಕೆಯಲ್ಲಿಡಬೇಕೆ ಎಂಬುದು ಬಿಸಿ ಚರ್‍ಚೆಯ ವಿಶಯ. ಸೇರುವೆಗಳ (corporations) ಒಡೆಯರು ಮತ್ತು ಕೆಲಸಗಾರರು ಶೇರುಮಾರುಕಟ್ಟೆಯ ಮಾರಾಟದಲ್ಲಿ ತೊಡಗಿರುವುದರಿಂದ ಒಳ-ಮಾರಾಟವನ್ನು (inside trading) ಹತ್ತಿಕ್ಕುವುದು ಆಗದ ಕೆಲಸ. ಸೇರುವೆಗಳು ಲಾಬದಲ್ಲಿ ನಡೆಯುವಾಗ ಶೇರುಗಳನ್ನು ಕೊಂಡುಕೊಳ್ಳುವುದೂ, ನಡೆಯದಾಗ ಮಾರುವುದೂ ಅವರಿಗೆ ಸುಲಬ.
ಇದರ ನಶ್ಟದ ಹೊರೆ ಬೀಳುವುದೇ ಹೊರಗಿನ ಶೇರು ಮಾರಾಟಗಾರರ ಮೇಲೆ. ಹೆಚ್ಚೆಣಿಕೆಯ ಹಣಕಾಸರಿಮೆಗಾರರು ಮಾರುಕಟ್ಟೆಗಳು ತನ್ನಿಂತಾವೇ ಸರಿಪಡಿಸಿಕೊಳ್ಳುತ್ತವೆ ಎಂದೇ ಹೇಳುತ್ತಿದ್ದರು. ಆದರೆ, ಬಂಡವಾಳಶಾಹಿಗಳ ಮೋಸದಾಟ ಅತಿರೇಕಕ್ಕೆ ಹೋಗುತ್ತಿದೆ. ಸರಕಾರಗಳು ಅವರನ್ನು ಅಂಕೆಯಲ್ಲಿಡದೆ ಹೋದರೆ ಇಡೀ ನೆಲದ ಮಾರುಕಟ್ಟೆಯ ಏರ್‍ಪಾಟೇ ಕುಸಿದುಹೋಗುವ ಆತಂಕ ದಿಟವಾಗುತ್ತಿದೆ. ತರುವಾಯದಲ್ಲಿ ಹೆಚ್ಚು ಹೆಚ್ಚು ಹಣಕಾಸರಿಮೆಗಾರರು ಮಾರುಕಟ್ಟೆಯನ್ನು ಅಂಕೆಯಲ್ಲಿಡುವ ಮಾತಾಡುತ್ತಿದ್ದಾರೆ. ನೋಬೆಲ್ ಗೆದ್ದಿರುವ ಅಮರ್‍ತ್ಯ ಸೇನ್ ಅವರ ಕಾಳಜಿ ಬಂಡವಾಳಶಾಹಿಗಳಿಂದ ಬಡವರನ್ನು ಕಾಪಾಡುವುದಾಗಿದ್ದರೆ ಹೆಚ್ಚಿನ ಹಣಕಾಸರಿಮೆಗಾರರ ಕಾಳಜಿ ಬಂಡವಾಳಶಾಹಿಗಳಿಂದ ಮಾರುಕಟ್ಟೆಯನ್ನು ಕಾಪಾಡುವುದೇ ಆಗಿದೆ!
ಆದರೆ, ನನಗನ್ನಿಸಿದ ಹಾಗೆ ಸೇರುವೆಯಲ್ಲಿರುವವರು (ಅದರಲ್ಲೂ ಕೆಲಸಗಾರರು) ತಮ್ಮ ತಮ್ಮ ಸೇರುವೆಗಳ ಶೇರುಗಳನ್ನು ಕೊಳ್ಳುವುದು ಮತ್ತು ಮಾರಾಟ ಮಾಡುವುದರಲ್ಲಿ ಒಳಿತೂ ಇದೆ. ಅದು ‘ಎಲ್ಲರ-ಒಡೆತನದ’ ಆಶಯವನ್ನು ನೆರವೇರಿಸುತ್ತದೆ! ಹವ್ದು. ನುಡಿಯರಿಗ ನೋಮ್ ಚಾಮ್ಸ್ಕಿ ಹೇಳುವಂತೆ ಆದುನಿಕ ಬಂಡವಾಳಶಾಹಿಯು ‘ಜಮೀನ್ದಾರ ಪದ್ದತಿಯ’ ಹೊಸ ಅವತಾರ! ಬಂಡವಾಳಶಾಹಿಯು ಹೊಸ ಜಮೀನ್ದಾರಿ ಪದ್ದತಿಯಾಗದ ಹಾಗೆ ತಡೆಯಬೇಕೆಂದರೆ ಕೆಲಸಗಾರರೇ ಒಡೆಯರಾಗುವಂತೆ ಮಾಡಬೇಕು. ಕೆಲಸಗಾರರು ತಮ್ಮ ಸೇರುವೆಗಳ ಶೇರು ಕೊಳ್ಳುವುದರಿಂದ ಅದು ಸಾದ್ಯ. ಸ್ವತಂತ್ರಿಗಳ ಇಂದಿನ ಕಾಲದಲ್ಲೂ ಸಂಬಳಕ್ಕಾಗಿ ಒಡೆಯನಿಗೆ ದುಡಿಯುವುದು ಅಂದರೆ ನೋವಿನ ಸಂಗತಿ. ಮಿಗಿಲಾಗಿ, ಕೆಲಸಗಾರರು ಶೇರು ಮಾರಾಟ ಮಾಡುವುದನ್ನು ತಪ್ಪಿಸುವುದರಿಂದ ಒಳ-ಮಾರಾಟದ ಪಿಡುಗು ಇನ್ನೊಂದು ರೀತಿಯಲ್ಲಿ ಬಂದೇ ಬರುತ್ತದೆ.
ಏಕೆಂದರೆ ಕೆಲಸಗಾರರಿಗೆ ತಮ್ಮ ಸೇರುವೆಗಳ ಒಳಗುಟ್ಟು ಗೊತ್ತಿದ್ದೇ ಇರುತ್ತದೆ. ಆ ಗುಟ್ಟನ್ನು ಅವರು ಹೊರಗಿನ ಶೇರು ಮಾರಾಟಗಾರರಿಗೆ ಮಾರಿಕೊಳ್ಳಬಹುದು. ಕೆಲಸಗಾರರೂ, ಹೊರಗಿನವರೂ ಶೇರುಗಳನ್ನು ಕೊಳ್ಳುವುದಕ್ಕೆ ಅವಕಾಶ ಇರುವುದರಿಂದಾಗಿ ಸೇರುವೆಗಳ (corporations) ಮತ್ತು ಸಹಕಾರಗಳ (co-operatives) ನಡುವಿನ ಬೇರ್‍ಮೆ ಮಬ್ಬಾಗುತ್ತಿರುವುದಂತೂ ದಿಟ. ಇದು ಒಳ್ಳೆಯ ಬೆಳವಣಿಗೆಯೇ. ಇಂತಾ ಏರ್‍ಪಾಟಿನಿಂದ ಸೇರುವೆಗಳು ಸಲುಹುವ ಹೊಸಮಾರ್‍ಪುಗಳನ್ನೂ (innovations) ಸಹಕಾರಗಳು ಕೊಡಮಾಡುವ ಸ್ವಾತಂತ್ರವನ್ನೂ ಕಾಯ್ದುಕೊಳ್ಳಬಹುದು. ಆದರೆ, ಮಾರುಕಟ್ಟೆಯ ಏರ್‍ಪಾಟನ್ನು ಸರಕಾರಗಳು ಅಂಕೆಯಲ್ಲಿಟ್ಟು ಅಚ್ಚುಕಟ್ಟು ಮಾಡಬೇಕು.
ಅಮೇರಿಕಾದ ಮಂದಿಮೆಚ್ಚುವ ಆಟಗಳೆರಡರಲ್ಲಿ ನಾನು ಮೇಲೆ ತಿಳಿಸಿದ ಇನ್ನೊಂದು ಹೋಲಿಕೆಯೂ ಕಂಡುಬರುತ್ತಿದೆ. ಆಡಳಿತದಲ್ಲಿ ಪುಟ್ಬಾಲಿನದು ಸಹಕಾರದ ಮಾದರಿಯೂ, ಬೇಸ್ಬಾಲಿನದು ಸೇರುವೆಯ ಮಾದರಿಯೂ ಆಗಿದೆ. ಪುಟ್ಬಾಲಿನ 32 ತಂಡಗಳೂ ಆದಾಯವನ್ನು ಹಂಚಿಕೊಳ್ಳುತ್ತವೆ. ಹೊಸ ಆಟಗಾರರನ್ನು ಆಯ್ದುಕೊಳ್ಳುವಾಗ ಕಳೆದ ಬಾರಿ ಚಾಂಪಿಯನ್ ಆಗಿದ್ದ ತಂಡ ಸಾಲಿನ ಕೊನೆಯಲ್ಲಿ ಇರುತ್ತದೆ. ಎಲ್ಲರಿಗಿಂತ ಕೆಟ್ಟದಾಗಿ ಆಡಿದ ತಂಡಕ್ಕೆ ಮೊದಲ ಆಯ್ಕೆ! ಇದು ಬಂಡವಾಳಶಾಹಿಗಳು ತೆಗಳುವಂತೆ ‘ಸೋತವರಿಗೆ ಬಹುಮಾನ’! ಆದರೆ, ಇಂತಾ ಬಹುಮಾನಕ್ಕಾಗಿ ಯಾರೂ ಸೋಲುವುದಿಲ್ಲ. ಇಂತಾ ಏರ್‍ಪಾಟಿನಿಂದಾಗಿ 32 ತಂಡಗಳೂ ಸಮಬಲದವಾಗಿರುತ್ತವೆ.
ಆಟ ತುಂಬಾ ಪಯ್ಪೋಟಿಯಿಂದ ಕೂಡಿರುತ್ತದೆ. ಬೇಸ್ಬಾಲ್ ಆಡಳಿತ ಹಾಗಲ್ಲ. ಅಲ್ಲಿ ಶ್ರೀಮಂತ ತಂಡಗಳಿವೆ, ಬಡವ ತಂಡಗಳಿವೆ. 32 ತಂಡಗಳಲ್ಲಿ ಅತಿ ಶ್ರೀಮಂತವಾದ 3 ಅತವಾ 4 ತಂಡಗಳೇ ಹೆಚ್ಚಾಗಿ ಗೆಲ್ಲುತ್ತವೆ. ಆಟದಲ್ಲಿ ಪಯ್ಪೋಟಿ ಇರುವುದಿಲ್ಲ. ಪುಟ್ಬಾಲ್ ಜನಪ್ರಿಯವಾಗುತ್ತಿದೆ, ಬೇಸ್ಬಾಲ್ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಸಹಕಾರ ಗೆಲ್ಲುತ್ತಿದೆ, ಬಂಡವಾಳಶಾಹಿ ಬೆಂಬಲಿಗರನ್ನು ಕಳೆದುಕೊಳ್ಳುತ್ತಿದೆ, ಆಟದಲ್ಲಿ! ಬಾರತದಲ್ಲಿ ಮಿತಿಮೀರುತ್ತಿರುವ ಬಡವ ಬಲ್ಲಿದರ ನಡುವಿನ ಕಂದಕವನ್ನು ಕಡಿಮೆ ಮಾಡಲು ಮಾರುಕಟ್ಟೆಗಳನ್ನು ಅಂಕೆಯಲ್ಲಿಡುವ ಜೊತೆ ನಾವು ಸಹಕಾರದ ತತ್ವಗಳನ್ನೂ ಅಳವಡಿಸಿಕೊಳ್ಳಬೇಕು.
(ಚಿತ್ರ: www.competenetwork.com)
ಇತ್ತೀಚಿನ ಅನಿಸಿಕೆಗಳು