ಬೆಳಕಿನಿಂದ ಹಾರುವ ಬಾನೋಡ

ಪ್ರಶಾಂತ ಸೊರಟೂರ.

2015 ರಲ್ಲಿ ಹೀಗೊಂದು ಚಳಕವು ತನ್ನ ಮೇಲ್ಮೆ ತೋರಲಿದೆ. ಮೊಟ್ಟ ಮೊದಲ ಬಾರಿಗೆ ಬರೀ ನೇಸರನ ಬೆಳಕಿನಿಂದ ಹಾರುವ ಬಾನೋಡ ಜಗತ್ತನ್ನು ಸುತ್ತಲಿದೆ.

Picture1

ಈ ಚಳಕಕ್ಕೆ ಕಯ್ ಹಾಕಿ, ಮೊದಲ ಗೆಲುವಿನ ಹೆಜ್ಜೆ ಇಟ್ಟವರು ಸ್ವಿಟ್ಜರ್-ಲ್ಯಾಂಡಿನ ಬರ‍್ಟರ‍್ಯಾಂಡ್ ಪಿಕಾರ‍್ಡ್ ಮತ್ತು ಅವರ ತಂಡ. ನೇಸರ ಬೆಳಕು (sunlight) ಬಳಸಿ ವಿಮಾನ ಓಡಿಸುವ ಮೊಗಸು 1970 ರಿಂದ ನಡೆಯುತ್ತಿದ್ದರೂ ಇಲ್ಲಿಯವರೆಗೆ ಅದರಲ್ಲಿ ಗೆಲುವು ಸಿಕ್ಕಿರಲಿಲ್ಲ. ನೇಸರ ಕಸುವು ಬಳಸಿ ವಿಮಾನವನ್ನು ಹಾರಿಸಲು ಎದುರಾಗುವ ದೊಡ್ಡ ತೊಡಕೆಂದರೆ ಅದರ ತೂಕ. ಹಗಲಿನಲ್ಲಿ ನೇಸರ ಬೆಳಕಿನ ಕಸುವನ್ನು ಹೀರಿಕೊಂಡು ಹಾರುವುದರೊಂದಿಗೆ ಅದೇ ಕಸುವಿನಲ್ಲಿ ಇರುಳಿನಲ್ಲಿಯೂ ವಿಮಾನ ಹಾರಬೇಕಾದರೆ ದೊಡ್ಡದಾದ ಬ್ಯಾಟರಿ ಬೇಕಾಗುತ್ತದೆ. ಬ್ಯಾಟರಿ ಬಾರವಾಗಿರುವುದರ ಜೊತೆಗೆ ಉರುವಲಿಗೆ ಹೋಲಿಸಿದಾಗ ಇಂತಿಶ್ಟು ತೂಕಕ್ಕೆ ಕಡಿಮೆ ಕಸುವು ಹೊಮ್ಮಿಸುತ್ತದೆ ಅಂದರೆ ಉರುವಲಿನಿಂದ ನಡೆಯುವ ವಿಮಾನ ಸಾಗುವ ದೂರದಶ್ಟೇ ಸಾಗಲು ಬ್ಯಾಟರಿಯಿಂದ ಹಾರುವ ವಿಮಾನವು ಹೆಚ್ಚಿನ ತೂಕ ಹೊರಬೇಕಾಗುತ್ತದೆ, ಹೆಚ್ಚಿನ ಕಸುವು ತೆರಬೇಕಾಗುತ್ತದೆ. ಪಿಕಾರ‍್ಡ ಮತ್ತು ಅವರ ತಂಡ ಈ ನಿಟ್ಟಿನಲ್ಲಿ ಹಲವು ಹೊಸ ಬಗೆಯ ಹೊಳಹು ಬಳಸಿ ವಿಮಾನದ ತೂಕವನ್ನು ಇಳಿಸುವಲ್ಲಿ ಗೆಲುವು ಕಂಡಿದ್ದಾರೆ.

ಪಿಕಾರ‍್ಡ ಅವರ ಬಾನೋಡದ ಬಗ್ಗೆ ಇನ್ನಶ್ಟು ತಿಳಿಯುವ ಮುನ್ನ ಅವರ ಬಾನೋಡದಲ್ಲಿ ಅಳವಡಿಸಿರುವ  ’ನೇಸರ ಬಟ್ಟಲು’ಗಳ (solar cell) ಚಳಕವನ್ನು ಅರಿತುಕೊಳ್ಳೋಣ. ನೇಸರ ಬಟ್ಟಲುಗಳನ್ನು ಸಿಲಿಕಾನನಂತಹ ಅರೆಯೀಸುಕಗಳಿಂದ (semiconductor) ತಯಾರಿಸಲಾಗುತ್ತದೆ. ನೇಸರ (ಸೂರ‍್ಯನ) ಬೆಳಕಿನಲ್ಲಿರುವ ಪುಟಾಣಿ ಬೆಳಕಿಗಳನ್ನು (photons) ಸಿಲಿಕಾನ್ ವಸ್ತುಗಳ ಮೇಲೆ ಹಾಯಿಸಿದಾಗ ಅದರಲ್ಲಿ ಇಲೆಕ್ಟ್ರಾನಗಳ ಹರಿವು ಉಂಟಾಗಿ ಮಿಂಚು (current) ಹರಿಯ ತೊಡಗುತ್ತದೆ. ಹೀಗೆ ಉಂಟು ಮಾಡಿದ ಮಿಂಚಿನಿಂದ ಬೇರೊಂದು ಸಲಕರಣೆ ನಡೆಸಬಹುದು ಇಲ್ಲವೇ ಮಿಂಚನ್ನು ಬ್ಯಾಟರಿಯಲ್ಲಿ ಕೂಡಿಡಬಹುದು.  (ಕೆಳಗಿನ ಚಿತ್ರ ನೋಡಿ)

NBPicture2

ಬ್ಯಾಟರಿಯಿಂದ ನಡೆಯುವ ವಿಮಾನಕ್ಕೆ ಎದುರಾಗುವ ತೂಕದ ತೊಡಕನ್ನು ನೀಗಿಸಲು, ಪಿಕಾರ‍್ಡ ಮತ್ತು ಅವರ ತಂಡ ವಿಮಾನದ ರೆಕ್ಕೆಗಳನ್ನು ತುಂಬಾ ಹಗುರವಾದ ಕಾರ‍್ಬನ್ ಪಯಬರನಿಂದ ಮಾಡಿದ್ದಾರೆ ಜೊತೆಗೆ ವಿಮಾನದ ಬಾಗಗಳನ್ನು ಜೋಡಿಸಲು ಹಗುರವಾದ ಆದರೆ ತುಂಬಾ ಗಟ್ಟಿಮುಟ್ಟಾದ ಪ್ಲಾಸ್ಟಿಕ್ ತಿರುಪುಗಳನ್ನು (screws) ಬಳಸಿದ್ದಾರೆ. ವಿಮಾನದ ಹೆಚ್ಚಿನ ಬಾಗ ಕಾರ‍್ಬನ್ ಪಯಬರನಿಂದ ಮಾಡಿರುವುದರಿಂದ ವಿಮಾನದ ತೂಕವು ಸಾಮಾನ್ಯ ವಿಮಾನದ ತೂಕದ ಬರೀ 1% ರಶ್ಟಾಗಿದೆ. ರೆಕ್ಕೆಗಳನ್ನು ಉದ್ದವಾಗಿಸಿರುವುದರಿಂದ ವಿಮಾನಕ್ಕೆ ಎದುರಾಗುವ ’ಗಾಳಿ ಎಳೆತ’ (air drag) ಕಡಿಮೆಯಾಗಿದೆ. ರೆಕ್ಕೆಗಳ ಮೇಲ್ಮಯಲ್ಲಿ 12000 ನೇಸರ ಬಟ್ಟಲುಗಳನ್ನು (solar cell) ಅಳವಡಿಸಲಾಗಿದ್ದು, ಅವು ಸರಾಸರಿಯಾಗಿ 24 ಗಂಟೆಯವರೆಗೆ 50 kW ಕಸುವನ್ನು ಹೊಮ್ಮಿಸಬಲ್ಲವು. ನೇಸರ ಬಟ್ಟಲುಗಳಿಂದ ಉಂಟಾದ ಮಿಂಚನ್ನು (current) ಬ್ಯಾಟರಿಯಲ್ಲಿ ಕೂಡಿಟ್ಟು, ಆ ಬ್ಯಾಟರಿಯಿಂದ ಮಿಂಚೋಡುಕವನ್ನು (electric motor) ಮತ್ತು ಅದಕ್ಕೆ ಹೊಂದಿಸಿದ ತಳ್ಳುಕವನ್ನು (propeller) ತಿರುಗಿಸಲು ಬಳಸಲಾಗುತ್ತದೆ.

ಪಿಕಾರ‍್ಡ್ ಅವರಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡಲು ಹುರಿದುಂಬಿಸಿದ ಹಿನ್ನೆಲೆಯೂ ತುಂಬಾ ಕುತೂಹಲಕಾರಿಯಾಗಿದೆ. 1999 ರಲ್ಲಿ ತಮ್ಮ ಒಡನಾಡಿ ಬ್ರಾಯಿನ್ ಜೋನ್ಸ್ ಅವರೊಡನೆ ಗಾಳಿಚೆಂಡಿನಲ್ಲಿ (air balloon) ತೇಲುತ್ತಾ ಈಜಿಪ್ತ ಮರಳುಗಾಡಿನಲ್ಲಿ ಇಳಿಯುವುದರಲ್ಲಿ ಗೆಲುವು ಕಂಡರೂ, ಹಾರಾಡುವ ಕೊನೆಯ ಹಂತದಲ್ಲಿ ಗಾಳಿಚೆಂಡಿನ ಪ್ರೋಪೇನ್ ಉರುವಲು ಮುಗಿದುಹೋಗಿ ಗೆಲುವಿನ ಅಂಚಿನಲ್ಲಿ ಸೋಲಿನ, ಒಂದು ಹಂತಕ್ಕೆ ಸಾವಿನ ಅನುಬವವಾಗಿತ್ತಂತೆ. ಆದರೂ ಗಾಳಿ ಬೀಸುವಿಕೆ ಅವರು ಸಾಗುತ್ತಿದ್ದ ದಿಕ್ಕಿನೆಡೆಗೆ ಇದ್ದಿದ್ದರಿಂದ ಮೆಲ್ಲಗೆ ತೇಲುತ್ತಾ ನೆಲಕ್ಕೆ ಇಳಿಯಲು ಸಾದ್ಯವಾಯಿತು. ಅಂದೇ ಪಿಕಾರ‍್ಡ್ ಅವರು “ಉರುವಲಿಲ್ಲದೇ ಹಾರುವ ಬಾನೋಡ”ವನ್ನು ಹುಟ್ಟುಹಾಕಲು ತೀರ‍್ಮಾನಿಸಿದರಂತೆ. ಅವರ ಅಂದಿನ ತೀರ‍್ಮಾನ ಇಂದು ನೇಸರದಿಂದ ಹಾರುವ ಬಾನೋಡವಾಗಿ ಹೊರಹೊಮ್ಮಿದೆ.

ಸುದ್ದಿಸೆಲೆ: http://www.popsci.com/technology/article/2013-04/sun-shot?src=SOC&dom=fb

– ಪ್ರಶಾಂತ ಸೊರಟೂರ

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: