ಉಗುರಿಗಿಂತ ಚಿಕ್ಕದೀ ಮೀನು

chikka-meenu

ಬ್ರೆಜಿಲ್ ದೇಶದ ಹುಳಿ ತುಂಬಿದ ರಿಯೊ ನೆಗ್ರೊ ನದಿಯಲ್ಲಿ ಸಿಕ್ಕಂತಹ ಈ ಮೀನು, ಜಗತ್ತಿನಲ್ಲಿ ಇಲ್ಲಿಯವರೆಗೆ ದೊರೆತ ಎಲ್ಲ ಮೀನುಗಳಿಗಿಂತ ಚಿಕ್ಕದು. ಇದರ ಅಳತೆ ಬರೀ 7 ಮಿ.ಮೀ. ಆಗಿದ್ದು ನಮ್ಮ ಉಗುರಿಗಿಂತ ಚಿಕ್ಕದಾಗಿದೆ. ಇಲ್ಲಿಯವರೆಗೆ ಎಲ್ಲಕ್ಕಿಂತ ಚಿಕ್ಕ ಮೀನು ಅನಿಸಿಕೊಂಡಿದ್ದ 7.9 ಮಿ.ಮೀ. ಉದ್ದದ ಪಿ. ಪ್ರೊಜೆನೆಟಿಕ ಮೀನನ್ನು ಇದು ಹಿಂದಿಕ್ಕಿದೆ. 26 ಮಿ.ಮೀ. ಅಳತೆಗಿಂತ ಚಿಕ್ಕದಾಗಿದ್ದರೆ ಅಂತಹ ಮೀನುಗಳನ್ನು ಚಿಕ್ಕ ಮೀನುಗಳ ಗುಂಪಿಗೆ ಸೇರಿಸಲಾಗುತ್ತದೆ.

ಲಂಡನ್ನಿನ ಮೀನರಿಗ ರಾಲ್ಪ್ ಮತ್ತು ಜಿಯೊರ‍್ಜರವರು ನದಿಯಲ್ಲಿ ಬಲೆ ಬೀಸಿ ಮೀನು ಮತ್ತು ಬೇರೆ ನೀರು ಉಸುರಿಗಳನ್ನು (ಜೀವಿಗಳನ್ನು) ಹುಡುಕುತ್ತಿದ್ದಾಗ ನೀಲಿಯಾಗಿ ಹೊಳೆಯುತ್ತಿದ್ದ ಈ ಮೀನುಗಳು ಕಂಡಿವೆ. ಕೂಡಲೇ  ಅವುಗಳ ತಿಟ್ಟ (picture) ಸೆರೆಹಿಡಿಯಲು ಬೇರೊಂದು ತೊಟ್ಟಿಗೆ ಹಾಕಲು ಮುಂದಾದ ಮೀನರಿಗರಿಗೆ ನಿರಾಸೆಯಾಯಿತಂತೆ, ಯಾಕಂದ್ರೆ ತಿಟ್ಟ ಸೆರೆಹಿಡಿಯುವುದರೊಳಗೆ ನವಿರಾದ ಆ ಪುಟಾಣಿ ಮೀನು ತನ್ನ ಕೊನೆ ಉಸಿರೆಳೆದಿತ್ತು. ಪುಟಾಣಿ ಮೀನು ಸಾವನ್ನಪ್ಪಿದಾಗ ಅದರ ಮಯ್ ಹಾಲಿನ ಬಣ್ಣ ಬೆರೆತ, ತಿಳಿ ನೇರಳೆ ಬಣ್ಣಕ್ಕೆ ತಿರುಗಿದ್ದು  ಈ ಮೀನುಗಳ ಇನ್ನೊಂದು ಕುತೂಹಲಕಾರಿ ವಿಶಯವಾಗಿತ್ತು.

ಈ ಇರುಳ್ಮೀನುಗಳು ನೋಡಲು ತೆಳುವಾದ ಮಯ್ ಹೊಂದಿದ್ದು ಹೊಟ್ಟೆ ಮತ್ತು ಬಾಲ ನೀಲಿ ಬಣ್ಣದ್ದಾಗಿದೆ. ಹೊಟ್ಟೆಯ ಒಳಬಾಗ, ಗುಂಡಿಗೆ ಮತ್ತು ಕರುಳು ಬರಿಗಣ್ಣಿಗೆ ಕಾಣುವಂತಿವೆ. ಈ ಮೀನುಗಳಿಗೆ ಎರಡು ಸಾಲುಗಳಲ್ಲಿರುವ ಒಟ್ಟು ನಾಲ್ಕು ಹಲ್ಲುಗಳಿದ್ದು, ಹಲ್ಲುಗಳ ತುದಿ ಕಿರೀಟದಂತಿವೆ. ಇವುಗಳ ಹಲ್ಲು, ರೆಕ್ಕೆ ಆಕಾರವು ಕೆರಾಸಿಪಾರ‍್ಮಿಸ್ ಜಾತಿಯ ಮೀನುಗಳಿಗೆ ಹೋಲುವುದರಿಂದ ಇವುಗಳನ್ನು ಕೆರಾಸಿಪಾರ‍್ಮಿಸ್ ಜಾತಿಗೆ ಹತ್ತಿರದ ನಂಟಿರುವ ಮೀನು ಎಂದು ಮೀನರಿಗರು ಗುರುತಿಸಿದ್ದಾರೆ. ಈ ಪುಟಾಣಿ ಇರುಳ್ಮೀನು ದೊರೆತದ್ದು ಉಸುರಿಗಳ ಬೇರ‍್ಮೆಗೆ ಹೊಸದೊಂದು ಸೇರ‍್ಪಡೆಯಾದಂತಾಗಿದೆ, ನಮ್ಮ ನೆಲದ ಹಲತನಕ್ಕೆ ಇನ್ನೊಂದು ಕೊಂಡಿ ದೊರೆತಂತಾಗಿದೆ.

ಸುಜಯೀಂದ್ರ ವೆಂ. ರಾ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಒಂದು ಒಳ್ಳೆಯ ಬರಹ ಇದು. ಹೀಗೆ ನಿಮ್ಮ ಬರಹಗಳಿಗೆ ನಾನು ಕಾಯುತ್ತಿರುವೆ.

ಅನಿಸಿಕೆ ಬರೆಯಿರಿ: