ಕಲಿಕೆಯಲ್ಲಿ ಕರ‍್ನಾಟಕವು ಹಿಂದೆ ಬಿದ್ದಿದೆ
ಕರ‍್ನಾಟಕ ರಾಜ್ಯ ಶಿಕ್ಶಣ ಇಲಾಕೆಯವರು ನಡೆಸುವ ಹತ್ತನೇ ತರಗತಿ ಪರೀಕ್ಶೆಯ ರಿಸಲ್ಟು ಇತ್ತೀಚೆಗಶ್ಟೇ ಹೊರಬಂದಿತ್ತು. ಸುಮಾರು ಎಂಟು ಲಕ್ಶಕ್ಕೂ ಮೇಲ್ಪಟ್ಟು ಮಂದಿ ಈ ಹತ್ತನೇ ತರಗತಿ ಪರೀಕ್ಶೆಯನ್ನು ತೆಗೆದುಕೊಂಡಿದ್ದರು ಎಂಬುದನ್ನು ಸುದ್ದಿಹಾಳೆಗಳಲ್ಲಿ ನೋಡಿದಾಗ, ಬೇರೆ ಬೇರೆ ರಾಜ್ಯಗಳಲ್ಲಿ ಎಶ್ಟು ಮಂದಿ ಹತ್ತನೇ ತರಗತಿಯ ಪರೀಕ್ಶೆಗೆ ಕೂತುಕೊಳ್ಳುತ್ತಾರೆ ಎಂಬ ಪ್ರಶ್ನೆಯೊಂದು ಹುಟ್ಟಿತ್ತು. ಹತ್ತನೇ ತರಗತಿಯನ್ನು ಮಕ್ಕಳ ಓದಿನ ಹಾದಿಯಲ್ಲಿ ಒಂದು ಗಡಿ ಎಂದು ನೋಡಬಹುದಾದ್ದರಿಂದ, ಹೆಚ್ಚೆಚ್ಚು ಮಂದಿ ಈ ಪರೀಕ್ಶೆಯನ್ನು ತೆಗೆದುಕೊಳ್ಳುತ್ತಿದ್ದರೆ, ಆ ನಾಡಿನ ಕಲಿಕೆಯೇರ‍್ಪಾಡು ಹೆಚ್ಚು ಮಕ್ಕಳನ್ನು ಸೆಳೆಯುವಲ್ಲಿ ಗೆದ್ದಿದೆ ಎಂದು ಹೇಳಬಹುದು.
ಬೇರೆ ಬೇರೆ ರಾಜ್ಯಗಳ ಚಿತ್ರಣ
ನಮ್ಮ ಸುತ್ತಲ ನಾಲ್ಕು ನಾಡುಗಳಲ್ಲಿ ಎಶ್ಟೆಶ್ಟು ಮಂದಿ ಹತ್ತನೇ ತರಗತಿಯ ಪರೀಕ್ಶೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹುಡುಕಿದಾಗ ಸಿಕ್ಕ ಮಾಹಿತಿಯನ್ನು ಕಲೆಹಾಕಿ ಈ ಗ್ರಾಪ್ ಮಾಡಲಾಗಿದೆ. ಕೇರಳ ರಾಜ್ಯದಲ್ಲಿ ಕರ‍್ನಾಟಕಕ್ಕಿಂತಲೂ ಕಮ್ಮಿ ಜನರು ಹತ್ತನೇ ತರಗತಿಯ ಪರೀಕ್ಶೆಗೆ ಕೂತುಕೊಳ್ಳುತ್ತಿದ್ದಾರೆ. ತಮಿಳುನಾಡು, ಆಂದ್ರಪ್ರದೇಶ ಮತ್ತು ಮಹಾರಾಶ್ಟ್ರಗಳಲ್ಲಿ ಕರ‍್ನಾಟಕಕ್ಕಿಂತ ಹೆಚ್ಚಿನ ಮಂದಿ ಹತ್ತನೇ ತರಗತಿಯ ಪರೀಕ್ಶೆ ಎದುರಿಸುತ್ತಿದ್ದಾರೆ.
ರಾಜ್ಯಗಳ ಮಂದಿಯೆಣಿಕೆ
ರಾಜ್ಯಗಳ ಮಂದಿಯೆಣಿಕೆ (population) ಹೆಚ್ಚಿದ್ದರೆ, ತಾನಾಗೇ, ಹತ್ತನೇ ತರಗತಿಯ ಪರೀಕ್ಶೆಯನ್ನು ತೆಗೆದುಕೊಳ್ಳುವವರ ಎಣಿಕೆಯೂ (count) ಹೆಚ್ಚಿರುತ್ತದೆ. ಅಯ್ದೂ ರಾಜ್ಯಗಳ ಮಂದಿಯೆಣಿಕೆಯನ್ನು ಹೋಲಿಸಿ ನೋಡುವ ಈ ಕೆಳಗಿನ ಗ್ರಾಪ್ ನೋಡಿದಾಗ, ಕೇರಳ ರಾಜ್ಯದ ಮಂದಿಯೆಣಿಕೆ ಕಮ್ಮಿಯಿದ್ದೂ, ಮಹಾರಾಶ್ಟ್ರದ ಮಂದಿಯೆಣಿಕೆ ಜಾಸ್ತಿಯಿರುವುದೂ ಕಂಡುಬರುತ್ತದೆ.
ಕಲಿಕೆಯೇರ‍್ಪಾಡಿನ ಸೆಳೆತ ಅಳೆಯುವಿಕೆ
ಹತ್ತನೇ ತರಗತಿಯ ಪರೀಕ್ಶೆಯನ್ನು ತೆಗೆದುಕೊಳ್ಳುವವರ ಎಣಿಕೆಯೊಂದನ್ನೇ ನೋಡಿ ಆಯಾ ರಾಜ್ಯದ ಕಲಿಕೆಯೇರ‍್ಪಾಡಿನ ಸೆಳೆತವನ್ನು ಅಳೆಯಲಾಗುವುದಿಲ್ಲ. ಯಾಕೆಂದರೆ, ಮಂದಿಯೆಣಿಕೆ ಹೆಚ್ಚಿರುವ ರಾಜ್ಯಗಳಲ್ಲಿ ಹೆಚ್ಚು ಮಂದಿ ಹತ್ತನೇ ತರಗತಿಯ ಪರೀಕ್ಶೆ ತೆಗೆದುಕೊಳ್ಳುತ್ತಾರೆ. ಆದ್ದರಿಂದ, ಒಂದೊಂದು ರಾಜ್ಯದ ಮಂದಿಯೆಣಿಕೆಯ ಎಶ್ಟು ಶೇಕಡಾ (%) ಜನರು ಹತ್ತನೇ ತರಗತಿಯ ಪರೀಕ್ಶೆ ಎದುರಿಸಿದರು ಎಂಬುದನ್ನು ನೋಡಿದಾಗ, ಆಯಾ ರಾಜ್ಯದ ಕಲಿಕೆಯೇರ‍್ಪಾಡು ಎಶ್ಟು ಪರಿಣಾಮಕಾರಿ ಎಂಬುದು ತಿಳಿದುಬರುತ್ತದೆ.
ಹಾಗೆ ತಾಳೆ ಹಾಕಿದ ಈ ಮೇಲಿನ ಗ್ರಾಪ್ ನೋಡಿದಾಗ, ನಮ್ಮ ಕರ‍್ನಾಟಕವು ಕಲಿಕೆ ವಿಶಯದಲ್ಲಿ ತನ್ನ ಸುತ್ತಲಿನ ನಾಲ್ಕೂ ರಾಜ್ಯಗಳಿಗಿಂತ ಹಿಂದೆ ಬಿದ್ದಿರುವುದು ಕಂಡುಬರುತ್ತದೆ. ಹತ್ತನೇ ತರಗತಿಗಿಂತಾ ಮುಂಚೆಯೇ ಶಾಲೆ ಬಿಟ್ಟುಬಿಡುವವರ ಎಣಿಕೆ ಕರ‍್ನಾಟಕದಲ್ಲೇ ಹೆಚ್ಚು ಎಂಬುದನ್ನು ಈ ಮೂಲಕ ನಾವು ಕಂಡುಕೊಳ್ಳಬಹುದು.
ಕರ‍್ನಾಟಕವು ಕಲಿಕೆಯಲ್ಲಿ ತನ್ನ ಸುತ್ತಮುತ್ತಲ ರಾಜ್ಯಗಳಿಗಿಂತಾ ಹಿಂದೆ ಬೀಳಲು ಕಾರಣಗಳೇನು? ತಮ್ಮ ಜನರು ಶಾಲೆ ಬಿಡದಿರುವಂತೆ ಬೇರೆ ರಾಜ್ಯಗಳು ಏನು ಮಾಡಿವೆ? ಅವುಗಳಿಂದ ಕರ‍್ನಾಟಕವು ಕಲಿಯಬಹುದಾದುದೇನು? ಈ ಎಲ್ಲಾ ಪ್ರಶ್ನೆಗಳಿಗೆ ನನ್ನ ಬಳಿ ಸದ್ಯಕ್ಕೆ ಉತ್ತರವಿಲ್ಲ, ಉತ್ತರಗಳ ಹುಡುಕಾಟದಲ್ಲಿದ್ದೇನೆ. ಈ ಪ್ರಶ್ನೆಗಳಿಗೆ ತಮಗೇನೆನ್ನಿಸುತ್ತದೆಯೋ ಅದನ್ನು ಕಾಮೆಂಟಿನ ರೂಪದಲ್ಲಿ ಇಲ್ಲಿ ಬರೆಯಿರಿ, ನಮ್ಮ ನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳೋಣ.
ಮಾಹಿತಿ ಸೆಲೆ: wikipedia.org, ಇಂಡಿಯಾ ಟುಡೇ ಡಾಟ್ ಕಾಮ್, ಟಯ್ಮ್ಸ್ ಆಪ್ ಇಂಡಿಯಾ
ಇತ್ತೀಚಿನ ಅನಿಸಿಕೆಗಳು