ಗುಡಿಗಳನ್ನು ನಡೆಸಲು ನೆರವಾಗುವ ಸಾಪ್ಟ್ ವೇರ್

horanaadu

ಕನ್ನಡದ ಸಾಪ್ಟ್ ವೇರುಗಳ ಡೆವಲಪ್‍ಮೆಂಟ್‍ಅನ್ನೇ ಜೀವನೋಪಾಯವಾಗಿ ಆಯ್ಕೆ ಮಾಡಿಕೊಂಡು ಕಂಪೆನಿ ತೆರೆದಾಗ ಮೊದಲು ಯಾವ ರಂಗವನ್ನು ಮಾರುಕಟ್ಟೆ ಗುರಿಯಾಗಿಸಿಕೊಂಡು ಕೆಲಸ ಮಾಡಬೇಕೆಂಬ ತಿಳುವಳಿಕೆ ನಮ್ಮಲ್ಲಿ ಇರಲಿಲ್ಲ. ಕನ್ನಡದ ಮಟ್ಟಿಗೆ ಕಂಪ್ಯೂಟರ್‍ ತಂತ್ರಗ್ನಾನ ಎಂದರೆ ಪಾಂಟುಗಳು ಮತ್ತು ಡಿ.ಟಿ.ಪಿ.ಗಾಗಿ ಕಟ್ಟಿಕೊಂಡ ಕೆಲವು ಎಡಿಟರುಗಳು ಮಾತ್ರವೇ ಎಂದು ಎಲ್ಲರ ತಲೆಯಲ್ಲಿ ಉಳಿದಿತ್ತು. ಹೆಚ್ಚೆಂದರೆ ಕನ್ನಡದ ಲಿಪಿಯಲ್ಲಿ ಕಾಣುವಂತೆ ಮಿಂದಾಣಗಳನ್ನು (website) ಕಟ್ಟಬಹುದಾಗಿದ್ದೇ ಕನ್ನಡದಲ್ಲಿ ಇದುವರೆಗೆ ಬಂದ ತಂತ್ರಗ್ನಾನವೆನಿಸಿತ್ತು.

ಜನರು ಬಳಸುವಂತಹ ಅಪ್ಲಿಕೇಶನುಗಳನ್ನು ಕನ್ನಡದಲ್ಲಿ ತಯಾರು ಮಾಡಬೇಕೆಂಬುದು ನಮ್ಮ ಗುರಿಯಾಗಿದ್ದಿತು. ಬಿಲ್ಲಿಂಗ್, ಅಂಕಪತ್ರಗಳು, ಲೆಕ್ಕಾಚಾರಗಳು, ಡೇಟಾಬೇಸಿಗೆ ಒರಗಿಕೊಂಡ ಸಾಪ್ಟ್ ವೇರುಗಳು ಇಂಗ್ಲೀಶ್‍ನಲ್ಲಿಯೇ ಇದ್ದವು. ಸಾಮಾನ್ಯ ಮಂದಿಯ ಬಳಕೆಗೆ ಕನ್ನಡದಲ್ಲೇ ಕಟ್ಟಿದಂತಹ ಸಾಪ್ಟ್ ವೇರುಗಳ ಅವಶ್ಯಕತೆ ಇದ್ದಿತಾದರೂ ಅದಕ್ಕೆ ದೊಡ್ಡ ಮಾರುಕಟ್ಟೆ ಇಲ್ಲ. ಮಾರುಕಟ್ಟೆಗಳ ಸವಾಲುಗಳ ಕಾರಣದಿಂದ ಯಾವ ಕಂಪೆನಿಗಳೂ ಇತ್ತ ತಲೆ ಹಾಕಿರಲಿಲ್ಲ.

ಇಂತಹ ತಡೆಗಳು ಮುಂದಿರುವಾಗ ಯಾವ ರಂಗಕ್ಕೆ ಮೊದಲು ಕನ್ನಡದಲ್ಲಿ ಅಪ್ಲಿಕೇಶನ್ ಅನ್ನು ಮಾಡಬಹುದು ಎಂಬ ಕೇಳ್ವಿಯನ್ನು ಮುಂದಿಟ್ಟುಕಂಡು ಮಾರುಕಟ್ಟೆಯ ತಡಕಾಟ ಜಾಲಾಟವನ್ನು ಕಯ್ಗೊಂಡಾಗ ನಮಗೆ ಹೊಳೆದದ್ದು “ಗುಡಿ ಮತ್ತು ಮಟಗಳ ಮೇಲ್ವಿಚಾರಣೆ ಮತ್ತು ನಡೆಸುವಿಕೆ”!

ಗುಡಿ ಮಟಗಳನ್ನು ಆರಿಸಿಕೊಳ್ಳಲು ದೊಡ್ಡ ಕಾರಣವೆಂದರೆ ಎಂದರೆ ನಿಬಿಡವಾದ ಕನ್ನಡದ ಬಳಕೆ. ಗುಡಿಗಳ ಪೂಜೆಗೆ, ಸರಕು ಹೊಣೆಗಾರಿಕೆಗೆ, ಬಳಸುವ ವಸ್ತುಗಳಿಗೆ ಕನ್ನಡವೇ ಬಳಕೆಯಾಗುತ್ತದೆ. ಹೆಚ್ಚಿನ ಪುರೋಹಿತರು ಇಂಗ್ಲೀಶ್ ಬಲ್ಲವರಲ್ಲ. ಆರತಿಯ ಚೀಟಿ ಕನ್ನಡದಲ್ಲಿದ್ದರೆ ಓದಲು ಅನುಕೂಲ. ಗೋತ್ರ, ನಕ್ಶತ್ರ, ಪಂಚಾಂಗ ದಿನಗಳನ್ನು ಇಂಗ್ಲೀಶ್ ನಲ್ಲಿ ಬರೆಯುವುದೂ ಓದುವುದೂ ದೊಡ್ಡ ತೊಡಕು.

ಜನಬಳಕೆಗೆ ಸುಗಮವಾಗಬಹುದಾದ ಹಾಗೂ ಕನ್ನಡದಲ್ಲೇ ಅಪ್ಲಿಕೇಶನುಗಳು ಬರಲು ನಾಂದಿಯಾಗಬಹುದಾದ ಇಂತಹ ಒಂದು ಸಾಪ್ಟ್ ವೇರನ್ನು ಕಟ್ಟಲು ಮೊದಲು ಮಾಡಿದೆವು, ಈ ಮೊಗಸಿಗೆ ಒತ್ತಾಸೆಯಾಗಿ ಹೊರನಾಡಿನ ಗುಡಿಯ ರಾಗವೇಂದ್ರ ನಾವಡರು ಗುಡಿಯೊಂದರ ನಿರ್‍ವಹಣೆಗೆ ಬೇಕಾಗಬಹುದಾದ ಸಾಪ್ಟವೇರ್‍ ಬೇಡಿಕೆಗಳನ್ನು ನಮಗೆ ಒದಗಿಸುತ್ತಾ ಹೋದರು. ಅವರೆಣಿಕೆಯಂತೆ ಆರು ತಿಂಗಳ ಪರಿಶ್ರಮದಲ್ಲಿ ಸಂಪೂರ್‍ಣವಾಗಿ ಕನ್ನಡದಲ್ಲೇ ಬಳಸಬಹುದಾದ ‘ಸೇವಾ’ ಸಾಪ್ಟ್ ವೇರ್‍ ತಯಾರಾಯಿತು.

“ಸೇವಾ”, ಸಾಪ್ಟ್ ವೇರ್‍ ಜಗತ್ತಿನ ಮಟ್ಟಿಗೆ ಹೇಳುವುದಾದರೆ ಚಿಕ್ಕದಾದ ಅಪ್ಲಿಕೇಶನ್ ಆಗಿದ್ದರೂ ಕನ್ನಡದ ಮಟ್ಟಿಗೆ ಇದು ಹೊಸ ಮತ್ತು ದೊಡ್ಡ ಹೆಜ್ಜೆ. ಪಾಂಟ್ ಕಟ್ಟುವಿಕೆಯೊಂದೇ ಕನ್ನಡದಲ್ಲಿ ಬೆಳೆಯಬಹುದಾದ ತಂತ್ರಗ್ನಾನ ಎಂದು ಅಂದುಕೊಂಡವರಿಗೆ ಇದು ಹೊಸ ಸಾದ್ಯತೆಯನ್ನು ತೆರೆದಿದೆ. ಕನ್ನಡವೊಂದನ್ನೇ ಓದು ಮತ್ತು ಆಡುನುಡಿಯಾಗಿ ಬಲ್ಲವರಿಗೆ ಎಣುಕವನ್ನು ಬಳಸಲು ದೊಡ್ಡ ಅಡ್ಡಿಯಾಗಿದ್ದ ಇಂಗ್ಲೀಶನ್ನು ಇನ್ನು ಬದಿಗೆ ಸರಿಸಬಹುದು. ಎಣುಕವನ್ನು ಪೂರ್‍ಣವಾಗಿ ಕನ್ನಡದಲ್ಲೇ ಬಳಸಬಹುದು ಎಂಬ ಸಾದ್ಯತೆಗೆ ಸೇವಾ ಸಾಪ್ಟ್ ವೇರ್‍ ಅಡಿಪಾಯ ಒದಗಿಸಿದೆ ಎನ್ನಲು ಅಡ್ಡಿಯಿಲ್ಲ.  ನಾವು ಮಾಡಿರುವುದು ಒಂದು ಚಿಕ್ಕ ಅಪ್ಲಿಕೇಶನ್ ಅಶ್ಟೇ.

ಈಗ ಬಳಕೆಯಲ್ಲಿರುವ ಪ್ರತಿಯೊಂದು ಸಾಪ್ಟ್ ವೇರನ್ನೂ ಕನ್ನಡದಲ್ಲಿ ಕಟ್ಟಿ ಎಣುಕವನ್ನು ಬಳಸಲು ಕನ್ನಡಿಗರಿಗೆ ಅನುಕೂಲ ಮಾಡಿಕೊಡಬಹುದು. ಜೊತೆಗೆ ಕನ್ನಡದ್ದೇ ಆದ ಆಪರೇಟಿಂಗ್ ಸಿಸ್ಟಮ್ ಅನ್ನು ಬೆಳೆಸುವ ಅಗತ್ಯ ಇದೆ. ಲಿನಕ್ಸ್ ಅನ್ನು ಕನ್ನಡಕ್ಕೆ ತರುವ ಆಳವಾದ ಮೊಗಸುಗಳು ಕನ್ನಡದಲ್ಲಿ ನಡೆಯುತ್ತಿರುವುದು ನಲಿವು ತರುವ ವಿಚಾರ. ಇದಲ್ಲದೇ ಓ.ಸಿ.ಆರ್‍. (optical character recognition) ಅನ್ನು ಕನ್ನಡದಲ್ಲಿ ಅಳವಡಿಸುವ ಮೊಗಸುಗಳು ನಡೆದು ನೂರಕ್ಕೆ ಎಪ್ಪತ್ತರಶ್ಟು ಯಶಸ್ವಿಯೂ ಆಗಿವೆ. ಓ.ಸಿ.ಆರ್‍.ಅನ್ನು ಕನ್ನಡಕ್ಕೆ ಅಳವಡಿಸಿಕೊಂಡಲ್ಲಿ ಎಣುಕವು ಬಳಕೆಗೆ ಬರುವ ಮುಂಚೆ ಮಸಿಯೊತ್ತಿದ ಕಡತಗಳನ್ನು ಸುಲಬವಾಗಿ ಎಣುಕದೊಳಕ್ಕೆ ಕೂಡಿಸಿಟ್ಟುಕೊಳ್ಳಬಹುದು. ಇದರಿಂದ ಹಳೆಯ ದಾಕಲೆಗಳನ್ನು ಉಳಿಸಿಕೊಂಡಂತಾಗುವುದಲ್ಲದೇ ಹಾಳೆಗಳ ಬಳಕೆಯನ್ನು ತಗ್ಗಿಸಬಹುದು.

ಶ್ರೀಹರ‍್ಶ ಸಾಲಿಮಟ

(ಚಿತ್ರ: team-bhp.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: