ಕನ್ನಡಿಗರು ತಯಾರಿಸುತ್ತಿದ್ದ ಉಕ್ಕು

ರಗುನಂದನ್.

ಇಂಡಿಯಾದಲ್ಲಿಯೇ ಅತಿ ಹೆಚ್ಚು (41%) ಕಬ್ಬಿಣ ಅದಿರಿನ ಗಣಿಗಳು ಕರ್‍ನಾಟಕದಲ್ಲಿವೆ. ಬಳ್ಳಾರಿ ಮತ್ತು ಹೊಸಪೇಟೆಗಳಲ್ಲಿ ಹೆಮಟಯ್ಟ್ ಅದಿರು ಹೆಚ್ಚಾಗಿ ದೊರೆತರೆ ಕುದುರೆಮುಕದಲ್ಲಿ ಮಾಗ್ನಟಯ್ಟ್ ಅದಿರು ಹೆಚ್ಚಾಗಿ ದೊರೆಯುತ್ತದೆ.

ಬ್ರಿಟೀಶರ ಕಾಲದಿಂದಲೂ ಬಳ್ಳಾರಿಯಲ್ಲಿ ಕಬ್ಬಿಣಕ್ಕಾಗಿ ಗಣಿಗಾರಿಕೆ ನಡೆಯುತ್ತಿರುವುದು ಹೆಚ್ಚಿನ ಮಂದಿಗೆ ಗೊತ್ತಿರುವಂತದ್ದೆ . ಇದಕ್ಕೂ ಮುಂಚೆ ಇಲ್ಲಿ ಗಣಿಗಾರಿಕೆ ನಡೆಯುತ್ತಿತ್ತೆ? ಕಬ್ಬಿಣದ ಅದಿರನ್ನು ಅಗೆದು ಅದರಿಂದ ಉಕ್ಕನ್ನು ತಯಾರಿಸುತ್ತಿದ್ದರೆ? ಒಂದು ಮೇಲ್ಮಟ್ಟದ ವಸ್ತುವಾದ ಉಕ್ಕನ್ನು ತಯಾರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರೇ ಕನ್ನಡಿಗರು? “ಸ್ಟೀಲ್” ಎಂಬ ಇಂಗ್ಲಿಶ್ ಪದಕ್ಕೆ ಉಕ್ಕು ಎಂಬ ಅಚ್ಚಕನ್ನಡ ಪದ ಬಂದದ್ದಾದರೂ ಹೇಗೆ?

ಮೊದಲು ಕಬ್ಬಿಣಕ್ಕೂ(iron) ಉಕ್ಕಿಗೂ(steel) ಏನು ವ್ಯತ್ಯಾಸ ಎಂಬುದನ್ನು ತಿಳಿದುಕೊಳ್ಳೋಣ
ಅದಿರುಗಳಾದ ಮಾಗ್ನಟಯ್ಟ್ ಮತ್ತು ಹೆಮಟಯ್ಟ್ ಗಳನ್ನು ಅಗೆದ ಮೇಲೆ ಅವುಗಳನ್ನು ಚೊಕ್ಕಗೊಳಿಸಲಾಗುತ್ತದೆ. ಕಬ್ಬಿಣದ ಜೊತೆ ಇರುವ ಆಕ್ಸಯ್ಡ್(oxide) ಅನ್ನು ತೆಗೆದುಹಾಕಿದರೆ ಅಚ್ಚಕಬ್ಬಿಣ ಸಿಗುತ್ತದೆ. ಅಚ್ಚಕಬ್ಬಿಣವನ್ನು ಹಾಗೆಯೇ ಬಳಸಲು ಆಗದು. ಅದಕ್ಕೆ ಕೊಂಚ ಕರಿಯನ್ನು(carbon) ಸೇರಿಸಲಾಗುತ್ತದೆ. ಎಶ್ಟು ಕರಿಯನ್ನು ಹೊಂದಿದೆ ಎನ್ನುವುದರ ಮೇಲೆ ಅದನ್ನು ಉಕ್ಕು ಇಲ್ಲವೇ ಕಬ್ಬಿಣ ಎಂದು ವಿಂಗಡಿಸಬಹುದು. ನೂರ್‍ಕೆ 2 ಕ್ಕಿಂತ ಕಮ್ಮಿ ಇದ್ದರೆ ಉಕ್ಕು ಮತ್ತು 2-6.67% ಇದ್ದರೆ ಕಬ್ಬಿಣ ಎಂದು ಕರೆಯುತ್ತಾರೆ.

6.67% ಗಿಂತ ಹೆಚ್ಚು ಕರಿಯನ್ನು ಬಳಸಿದರೆ ಕಬ್ಬಿಣವು ಗಡಸಾಗಿ(brittle) ಒಡೆದು ಹೋಗುವ ಸಾದ್ಯತೆ ಇರುತ್ತದೆ. ಕಬ್ಬಿಣಕ್ಕೆ ಮತ್ತು ಉಕ್ಕಿಗೆ ತಮ್ಮದೇ ಆದ ವಿಶಿಶ್ಟತೆಗಳಿದ್ದು ಅವುಗಳನ್ನು ಬೇರೆ ಬೇರೆ ಕೆಲಸಗಳಲ್ಲಿ ಬಳಸಲಾಗುತ್ತದೆ.

ಉಕ್ಕು ಮತ್ತು ಕಬ್ಬಿಣದ ನಡುವಿನ ಎಡೆಯನ್ನು ತೋರುವ ಚಿತ್ರ

ಉಕ್ಕು ಮತ್ತು ಕಬ್ಬಿಣದ ನಡುವಿನ ಎಡೆಯನ್ನು ತೋರುವ ಚಿತ್ರ

ಹೆಚ್ಚು ಕರಿಯನ್ನು ಹೊಂದಿರುವ ಕಾರಣ ಕಬ್ಬಿಣವು ಗಟ್ಟಿಯಾಗಿ,ಬಿರುಸಾಗಿ ಮತ್ತು ಗಡಸಾಗಿಯೂ ಇರುತ್ತದೆ(hard,strong and brittle). ಆದರೆ ಕಡಿಮೆ ಕರಿಯನ್ನು ಹೊಂದಿರುವ ಉಕ್ಕು ಕಬ್ಬಿಣಕ್ಕಿಂತ ಕೊಂಚ ಕಡಿಮೆಯೇ ಗಟ್ಟಿಯಾಗಿ, ಸುಳುವಾಗಿ ಬಾಗುವಂತೆ(ductile)ಯೂ ಮತ್ತೆ ಬಲವಾಗಿಯೂ(tough) ಇರುತ್ತದೆ. ಕಬ್ಬಿಣವನ್ನು ಊದು ಕುಲುಮೆಯಲ್ಲಿ (blast furnace) ತಯಾರಿಸಲಾಗುತ್ತದೆ. ಆಮೇಲೆ ದೊರೆತ ಕಬ್ಬಿಣದಲ್ಲಿ ಕರಿಯನ್ನು 2% ಗಿಂತ ಕಡಿಮೆ ಮಾಡಿ ಬೇರೆ ಬಗೆಯ ಕುಲುಮೆಗಳಲ್ಲಿ ಉಕ್ಕನ್ನು ತಯಾರಿಸಲಾಗುತ್ತದೆ.

ಮೇಲೆ ಹೇಳಿದ ತಯಾರಿಕೆಯ ಬಗೆಯೂ ಹೆಚ್ಚು ಕಡಿಮೆ ಯೂರೋಪಿನವರಿಂದ ಕಲಿತದ್ದು. ಅವರು ನೆಲೆಗೊಳಿಸಿದ ಕುಲುಮೆಗಳಲ್ಲಿ ಈ ಬಗೆಯ ತಯಾರಿಕೆಯನ್ನು ಬಳಸುತ್ತಿದ್ದರು.
ಆದರೆ ಇದಕ್ಕೂ ಮುಂಚೆ ಇಂಡಿಯಾದಲ್ಲಿ ಉಕ್ಕನ್ನು ತಯಾರಿಸುವ ಕಲೆ ನಮ್ಮ ಮಂದಿಗೆ ತಿಳಿದಿತ್ತು ಎಂಬುದಕ್ಕೆ ಸಾಕಶ್ಟು ಸಾಕ್ಶಿಗಳು ಸಿಗುತ್ತವೆ. ಆ ಉಕ್ಕು ಬರಿ ನಮ್ಮ ನೆಲದಲ್ಲದೆ ಹೊರ ನಾಡುಗಳಿಗೂ ಕಳುಹಿಸಲಾಗುತ್ತಿತ್ತು ಎಂಬುದನ್ನು ಹಿನ್ನಡವಳಿ ಅರಿಗರು ತಿಳಿಸಿಕೊಟ್ಟಿದ್ದಾರೆ. ದೆಹಲಿಯಲ್ಲಿರುವ ತುಕ್ಕು ಹಿಡಿಯದ ಕಬ್ಬಿಣದ ಕಂಬದ ಬಗ್ಗೆ ಹೆಚ್ಚಿನ ಮಂದಿಗೆ ತಿಳಿದೇ ಇರುತ್ತದೆ. ಟಿಪ್ಪು ಸುಲ್ತಾನನ ಕತ್ತಿಯ ಬಗ್ಗೆಯೂ ನಾವು ಕೇಳಿರುತ್ತೇವೆ. ಹಾಗಾಗಿ ನಮ್ಮ ಮಂದಿಗೆ ಉಕ್ಕನ್ನು ತಯಾರಿಸುವ ಕಲೆ ಚೆನ್ನಾಗಿ ಕರಗತ ಮಾಡಿಕೊಂಡಿದ್ದರು ಎಂಬುದನ್ನು ತಿಳಿಯಬಹುದು.

ಏನಿದು wootz steel ?
Wootz steel ಎಂಬ ಉಕ್ಕಿನ ಬಗ್ಗೆ ಇಂಡಿಯಾ ಅರಿಮೆ ಕಲಿಕೂಟದ (Indian Institute of Science, Bengaluru) ಶಾರದಾ ಶ್ರೀನಿವಾಸನ್ ಮತ್ತು ಶ್ರೀನಿವಾಸ ರಂಗನಾತನ್ ಎಂಬುವರು ಹೆಚ್ಚಿನ ಅರಕೆ ಮಾಡಿ ಒಂದು ಹೊತ್ತಗೆಯನ್ನು ಹೊರತಂದಿದ್ದಾರೆ. ಯೂರೋಪಿಯನ್ನರು 17ನೇ ನೂರೇಡಿನ ಹೊತ್ತಿನಲ್ಲಿ ತೆಂಕಣ ಇಂಡಿಯಾದಲ್ಲಿ ಕೋವೆಯ ಹೊಲಬಿನಿಂದ (crucible process) ಉಂಟುಮಾಡುತ್ತಿದ್ದ ಉಕ್ಕಿನ ಬಗ್ಗೆ ತಮ್ಮ ಬರಹಗಳಲ್ಲಿ ಬರೆದಿದ್ದಾರೆ. ’ಉಕ್ಕು’ ಎಂಬ ಪದ ಅವರ ಬಾಯಿಯಲ್ಲಿ Wootz ಎಂದು ಮಾರ್‍ಪಾಟಾಗಿದೆ. ಬ್ರಿಟೀಶರ ಆಳ್ವಿಕೆ ಮತ್ತು ಹಿಡಿತ ಹೆಚ್ಚಾದಾಗ ಈ ಬಗೆಯ ಉಕ್ಕನ್ನು ಉಂಟುಮಾಡುವ ಹೊಲಬು ಬರು-ಬರುತ್ತಾ ಕಡಿಮೆಯಾಗಿ ಆಮೇಲೆ ಪೂರ್‍ತಿಯಾಗಿ ನಿಂತುಹೋಯಿತು. ನಂತರ ಅವರ ಬಗೆಯ ತಯಾರಿಕೆಯನ್ನೇ ನಾವು ಪಡೆದು ಈಗ ಅದೇ ರೀತಿಯಲ್ಲಿ ಉಕ್ಕನ್ನು ತಯಾರಿಸುತ್ತಿದ್ದೇವೆ.

ಮೊದಲನೇ ಮತ್ತು ಎರಡನೇ ಮಿಲೇನಿಯಮಿನಲ್ಲಿ ಡಮಾಸ್ಕಸ್ ಕತ್ತಿಗಳು ಪ್ರಪಂಚದಲ್ಲಿ ಹೆಸರುವಾಸಿಯಾಗಿದ್ದವು. ಅವುಗಳ ತಯಾರಿಕೆಗೂ ತೆಂಕಣ ಇಂಡಿಯಾದ Wootz steel ಅನ್ನೇ ಬಳಸುತ್ತಿದ್ದರು ಎಂದು ಅರಿಗರು ಅನಿಸಿಕೆ ಪಡುತ್ತಾರೆ. 17, 18 ಮತ್ತು 19 ನೇ ನೂರೇಡಿನಲ್ಲಿ ತೆಂಕಣ ಇಂಡಿಯಾವನ್ನು ಸುತ್ತಾಡಿದ ಕೆಲವು ಯೂರೋಪಿಯನ್ನರು ಈ ಉಕ್ಕಿನ ಉಂಟುಮಾಡುವಿಕೆ ಬಗ್ಗೆ ಬರೆದಿದ್ದಾರೆ. ಬುಚಾನನ್ ಎಂಬುವರು 1800ರಲ್ಲಿ ಚನ್ನಪಟ್ಟಣದಲ್ಲಿ ತಾವು ನೋಡಿದ ಕುಲುಮೆಗಳ ಬಗ್ಗೆ ಬರೆದಿದ್ದಾರೆ.

ಈ ಉಕ್ಕನ್ನು ಉಂಟುಮಾಡಲು ಬಳಸುತ್ತಿದ್ದ ಹೊಲಬು ಯಾವುದು?
ಮುಂಚೆ ಹೇಳಿದಂತೆ ಈ ಬಗೆಯ ಉಕ್ಕನ್ನು ಕೋವೆಯ ಹೊಲಬಿನಿಂದ (crucible process) ಉಂಟುಮಾಡಲಾಗುತ್ತಿತ್ತು. ’ಕೋವೆ’ ಎಂದರೇನು? ಕೆಳಗಿನ ಚಿತ್ರವನ್ನು ನೋಡಿರಿ. (ಒಳಗೆ ಕೆಂಪಾಗಿ ಬಟ್ಟಲಿನಂತೆ ಕಾಣುತ್ತಿರುವುದೇ ಕೋವೆ).

ಸಾಮಾನ್ಯವಾಗಿ ಈ ಕೋವೆಯನ್ನು ಜೇಡಿನಿಂದ ಮಾಡಲಾಗುತ್ತದೆ. ತುಂಬಾ ಎತ್ತರದ ಬಿಸಿಮಟ್ಟವನ್ನು ತಡೆದುಕೊಳ್ಳುವ ಕಾರಣ ಇದನ್ನು ಜೇಡಿನಿಂದ ಮಾಡಲಾಗುತ್ತದೆ. ಈ ಕೋವೆಯಲ್ಲಿ ಕಬ್ಬಿಣದ ಅದಿರನ್ನು ಕರಗಿಸಲಾಗುತ್ತದೆ. ಅದು ಒಂದು ಬಿಸಿಮಟ್ಟವನ್ನು ಏರಿದ ಮೇಲೆ ಕಬ್ಬಿಣದೆರಕವಾಗಿ(molten iron) ಮಾರ್‍ಪಾಟುಗುತ್ತದೆ. ಕೊನೆಯಲ್ಲಿ ಉಳಿದ ಎರಕವು ಉಕ್ಕುತ್ತದೆ (boils) ಆದ್ದರಿಂದ ’ಉಕ್ಕು’ ಎಂಬ ಪದ ಬಂದಿದೆ ಎಂದು ಶ್ರೀನಿವಾಸನ್ ಮತ್ತು ರಂಗನಾತನ್ ತಮ್ಮ ಅರಕೆಹಾಳೆಯಲ್ಲಿ (research paper) ತಿಳಿಸುತ್ತಾರೆ.

ಗುಲ್ಬರ‍್ಗದಲ್ಲಿ ದೊರಕಿದ ಕೆಲವು ಬಳಸಿದ ಕೋವೆಗಳು (ಕ್ರುಪೆ: ಸಿ. ಎಸ್. ಸ್ಮಿತ್)

ಗುಲ್ಬರ‍್ಗದಲ್ಲಿ ದೊರಕಿದ ಕೆಲವು ಬಳಸಿದ ಕೋವೆಗಳು (ಕ್ರುಪೆ: ಸಿ. ಎಸ್. ಸ್ಮಿತ್)

Wootz Steel – ಇದರ ವಿಶೇಶತೆ ಏನು ?
ಉಕ್ಕಿನಲ್ಲಿ ಬೇಕಾದಶ್ಟು ಬಗೆಗಳಿವೆ. ಈ wootz steel ಕಡು ಹೆಚ್ಚು ಕರಿ ಉಕ್ಕು (Ultra High Carbon Steel) ಎಂಬ ಬಗೆಗೆ ಸೇರುತ್ತದೆ. ಇದರಲ್ಲಿ 1-2% ಕರಿ ಇರುತ್ತದೆ. ಈಗ ಹೊಚ್ಚಹೊಸ ಜಲ್ಲಿಯರಿಮೆ(Modern metallurgy)ಯ ನೆಲೆಯಲ್ಲಿ ನೋಡಿದರೆ ಇದನ್ನು ಒಂದು ಮುಂದುವರೆದ ವಸ್ತುವೆಂದು(Advanced Material) ಪರಿಗಣಿಸಬಹುದು. ಜಲ್ಲಿಯರಿಮೆಯಲ್ಲಿ ಜಲ್ಲಿ(ಲೋಹ)ಯನ್ನು ಚೆನ್ನಾಗಿ ಉಜ್ಜಿ ನುಣುಪಾಗಿ ಕನ್ನಡಿಯಂತೆ ಮಾಡಿ ಅದನ್ನು ಸೀರುತೋರ್‍ಪುಕ(microscope)ದಲ್ಲಿ ನೋಡುವುದು ವಾಡಿಕೆ. ಹಾಗೆ ನೋಡಿದಾಗ ಅದರ ಕೆಲವು ಪರಿಚೆಗಳು ಚೆನ್ನಾಗಿ ತಿಳಿಯುತ್ತದೆ.

ಕೊನೆ ಹನಿ – ಕನ್ನಡ ಬೀಡು ಚಿನ್ನದ ಬೀಡೊಂದೆ ಅಲ್ಲದೇ ಕಬ್ಬಿಣದ ಬೀಡು ಕೂಡ ಆಗಿದೆ. ಕರ್‍ನಾಟಕದಲ್ಲಿ ಇಲ್ಲದಿರುವುದು ಏನು ಇಲ್ಲ. ನಮ್ಮ ನೆಲ ನೀರು ಮತ್ತು ಅದಿರು ಸಂಪತ್ತನ್ನು ನಮ್ಮ ಮಂದಿಯ ಮತ್ತು ನಾಡಿನ ಏಳಿಗೆಗೆ ಬಳಸಿಕೊಳ್ಳುವ ಜಾಣ್ಮೆಯನ್ನು ಮುಂದಿನ ತಲೆಮಾರಿಗೆ ತಿಳಿಸಿಕೊಡಬೇಕಿದೆ. ಬಡಗ ಕರ್‍ನಾಟಕದ ಗುಲ್ಬರ್‍ಗದಲ್ಲಿ ಉಕ್ಕನ್ನು ತಯಾರಿಸುವುದಕ್ಕೆ ಬಳಸಲಾದ ಕೆಲವು ಕೋವೆಗಳ ಚಿತ್ರ ಕೆಳಗೆ ಕೊಡಲಾಗಿದೆ.

ಮಾಹಿತಿ ಸೆಲೆ: Wootz Steel : An advanced material of the ancient world. Sharada Srinivasan and Srinivasa Ranganathan. Iron and Steel Heritage of India, ATM 97, pp 69-82.

ನಿಮಗೆ ಹಿಡಿಸಬಹುದಾದ ಬರಹಗಳು

10 Responses

  1. Sandeep Kn says:

    ರಗುನಂದನ್, ಬರಹ ತುಂಬಾ ಚೆನ್ನಾಗಿದೆ. ಉಕ್ಕಿನ ಬಗ್ಗೆ ತಿಳಿವನ್ನು ನೀಡಿರುವುದಲ್ಲದೇ, ಮೊದಲಿಂದಲೂ ಉಕ್ಕಿನ ಉತ್ಪಾದನೆಯಲ್ಲಿ ಕರ್‍ನಾಟಕ ಹೇಗೆ ಮೇಲುಗಯ್ ಸಾದಿಸಿದೆ ಎಂಬುದನ್ನು ಚೆನ್ನಾಗಿ ವಿವರಿಸಿದ್ದೀರಿ.

    ಇನ್ನೊಂದು ವಿಶಯ.ಉಕ್ಕು ಕರ್‍ನಾಟಕ ಮತ್ತು ಇತರೆ ತೆಂಕಣ ನಾಡುಗಳಿಂದ ಹೊರ ದೇಶಗಳಿಗೆ ಎತ್ತುಮತಿಯಾಗುತ್ತಿದ್ದರಿಂದ ಇಲ್ಲಿ ಬಳಸುತ್ತಿದ್ದ ಪದವೂ ಜೊತೆಯಲ್ಲೇ ಎತ್ತುಮತಿಯಾಯಿತು. ಉರ್ಕು, ಉಕ್ಕು, ಉಕ್ ಪದಗಳು ಪಡುವಣದ ನಾಡುಗಳಿಗೆ ಹೋದಾಗ ಊಕ್ (wook), wootz ಆಯ್ತು. Wootz ಪದದ ಹುಟ್ಟು ಕನ್ನಡ ಮತ್ತು ಇತರೆ ದ್ರಾವಿಡ ನುಡಿಗಳ ‘ಉಕ್ಕು’ ಇಂದಲೇ ಆಗಿದೆ.

  2. Rohith Rao says:

    ರಗುನಂದನ್, ನಿಮ್ಮ ಅಂಕಣ ಸಕ್ಕತಾಗಿದೆ. ಕಬ್ಬಿಣದ ಮನುಶ್ಯನಿಗೂ ಉಕ್ಕಿನ ಮನುಶ್ಯನಿಗೂ ಕೆಲವೇ ಕಾರ‍್ಬನ್ (?) ಶೇಕಡದ ವ್ಯತ್ಯಾಸ ಎಂಬ ನಗೆಹನಿ ಸೇರಿಸುವ ಹಂಬಲ ಹುಟ್ಟಿಸಿತು 😉

    ಅಂದ ಹಾಗೆ, cast iron ಮತ್ತು pig iron ಅಂತ ಹೇಳುವುದು ಕೇಳಿದ್ದೇನೆ. ಇವುಗಳು ಇಲ್ಲಿ ನೀವು ವಿವರಿಸಿರುವ ಕಬ್ಬಿಣಗಳಿಂದ ಬಿನ್ನವೇ, ಸ್ವಲ್ಪ ತಿಳಿಸುವಿರಾ?

  3. ಈ ಬರಹ ತುಂಬಾ ಚೆನ್ನಾಗಿದೆ. ಕಬಿಣ್ಣ ಹಾಗೂ ಉಕ್ಕಿಗೂ ಇರುವ ಬೇರ‍್ಮೆಯನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ. ನನ್ನ ತಿಳಿವಳಿಕೆ ಅಂತ ಹೆಚ್ಚಾಯಿತು ಇದ್ದನ್ನು ಓದಿದ ಮೇಲೆ.

  4. Anand Enguru says:

    ರಗುನಂದನ್,

    ಬರಹ ಚೆನ್ನಾಗಿದೆ. ಮಾಹಿತಿಯಲ್ಲಿ ತುಸು ತಪ್ಪಿದೆ ಎನ್ನಿಸುತ್ತದೆ. ಕಬ್ಬಿಣದಲ್ಲಿ ಕರಿಯ ಅಂಶ ಇರುವುದಿಲ್ಲ. ಅದನ್ನು ಸೇರಿಸುವ ಮೂಲಕ ಉಕ್ಕು (steel) ಮತ್ತು ಎರಕಕಬ್ಬಿಣವನ್ನು (cast iron) ತಯಾರಿಸುತ್ತಾರೆ. ಉಕ್ಕಿನಲ್ಲಿ ಕರಿ ಎಷ್ಟಿದೆ ಎನ್ನುವುದರ ಮೇರೆಗೆ ಮೂರು ಬಗೆಯಾಗಿ ಗುಂಪಿಸಲಾಗಿದೆ.

    ೧) ಕಮ್ಮಿಕರಿಉಕ್ಕು ಮತ್ತು ಕಿರುಕರಿಉಕ್ಕು –> ಇದರಲ್ಲಿ ಕರಿ ನೂರಕ್ಕೆ ಕೇವಲ ೦.೦೫ರಿಂದ ೦.೩ವರೆಗೂ, ೦.೩ರಿಂದ ೦.೬ರ ವರೆಗೂ ಇರುತ್ತದೆ. ಇದನ್ನು ದೊಡ್ಡ ಬಾಗಗಳಿಗೆ, ಆಟೋಮೋಟಿವ್ ತಯಾರಿಕೆಯಲ್ಲಿ ಬಳಸುತ್ತಾರೆ.

    ೨) ನಡುಕರಿ ಉಕ್ಕು –> ಇದರಲ್ಲಿ ಕರಿಯು ನೂರಕ್ಕೆ ೦.೬ರಿಂದ ೧.೦ರವರೆಗೆ ಇರುತ್ತದೆ. ಚಿಮ್ಮುಸುರುಳಿಗಳ ತಯಾರಿಕೆಗೆ ಇದನ್ನು ಬಳಸುತ್ತಾರೆ.

    ೩) ಹೆಚ್ಚುಕರಿ ಉಕ್ಕು –> ಇದರಲ್ಲಿ ಕರಿಯು ನೂರಕ್ಕೆ ೧.೦ರಿಂದ ೨.೦ರವರೆಗೆ ಇರುತ್ತದೆ. ಇದನ್ನು ಕತ್ತಿಯಂತಹ ಕತ್ತರಿಸುವ, ತುಂಡರಿಸುವ ವಸ್ತುಗಳನ್ನು ತಯಾರಿಸಲು ಬಳಸುತ್ತಾರೆ.

    ಇನ್ನು ನೂರಕ್ಕೆ ಎರಡಕ್ಕಿಂತ ಹೆಚ್ಚಿಗೆ ಕರಿಯನ್ನು ಸೇರಿಸಿದ ಕಬ್ಬಿಣವನ್ನು ಉಕ್ಕು ಎನ್ನದೆ ಎರಕ ಕಬ್ಬಿಣ ಎನ್ನುತ್ತಾರೆ. ಇದು ಅತ್ಯಂತ ಒಡಕಿನ ಗುಣವನ್ನು ಹೊಂದಿದೆ.ಇದರಲ್ಲಿ ಕರಿಯು ನೂರಕ್ಕೆ ೨.೦ರಿಂದ ೪.೫ರಷ್ಟು ಇರುತ್ತದೆ.

    ಮಾಹಿತಿ ಮೂಲ: http://en.wikipedia.org/wiki/Carbon_steel ಮತ್ತು http://en.wikipedia.org/wiki/Cast_iron

    ಹಾಗಾಗಿ ನೀವು ಕೊಟ್ಟಿರುವ ನಕ್ಶೆಯೂ ತಪ್ಪಾಗಿದೆ ಎನ್ನಿಸುತ್ತದೆ. ಮತ್ತೊಮ್ಮೆ ಮಾಹಿತಿಯನ್ನು ಪರೀಕ್ಶೆ ಮಾಡಿಕೊಳ್ಳಿ.

    ಆನಂದ್

  5. Raghu Nandan says:

    pig iron ಅಂದರೆ ಮೊದಲು ತೆಗೆಯುವ ಕಬ್ಬಿಣ. ಒಂದು ರೀತಿ crude form ಅಂತ ಹೇಳಬಹುದು. ಆಮೇಲೆ ನಮಗೆ ಬೇಕಾದಶ್ಟು ಕಾರ‍್ಬನ್ ಅನ್ನು ಬಳಸಿ ಮತ್ತೆ ಕರಗಿಸಿ ತೆಗೆಯುವುದೇ cast iron. pig iron ಇನ ಬಳಕೆ ಕಡಿಮೆ. ಹೆಚ್ಚಿನ ಬಳಕೆ ಇರುವುದು cast iron ಇಂದ.

  6. ರಗುನಂದನ್,
    ನಿಮ್ಮ ಅಂಕಣ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹೀಗೇ ಬರೆಯುತ್ತಿರಿ. ಬಹಳಶ್ಟು ಕನ್ನಡದ್ದೇ ಪದಗಳನ್ನೇ ಬಳಸಿದ್ದೀರಾ. ಅಂಕಣ ಸುಳುವಾಗಿ ಓದಿಸಿಕೊಂಡು ಹೋಗುತ್ತದೆ. ಕನ್ನಡಿಗರೇ ಕಟ್ಟಿದ ಚಳಕ ಇದಾದುರಿಂದ ಏನಾಯಿತು ನೋಡಿ! ಕನ್ನಡದ್ದೇ ಪದಗಳಿವೆ. ಕನ್ನಡಿಗರಿಗೂ ಚೆನ್ನಾಗಿ ವಿವರಿಸಬಹುದು. ಇದೇ ನಮ್ಮತನಕ್ಕೂ, ಪಡೆದುಕೊಳ್ಳುವುದಕ್ಕೂ ನಡುವೆ ಇರುವ ಬೇರ್ಮೆ. ಕನ್ನಡದ ಅರಿಮೆಗಾರರು ಕನ್ನಡವನ್ನೇ ಬಳಸಿ ಅರಕೆ ಮತ್ತು ಏಳಿಗೆಯನ್ನು ಮಾಡಿದಲ್ಲಿ ಅರಿಮೆ ಮತ್ತು ಚಳಕದ ಪದಗಳು ಕನ್ನಡಿಗರ ಮನೆಮಾತಾಗುವುದಲ್ಲಿ ಎರಡು ಮಾತಿಲ್ಲ. ನಿಮ್ಮ ಬರವಣಿಗೆಯೂ ಮೊನಚಾಗಿದೆ. ನಮ್ಮೂರ ಬಳಿಯ ಚನ್ನಪಟ್ಟಣದಲ್ಲೂ ಚಳಕದ ಬಳಕೆಯಿತ್ತು ಅನ್ನುವುದ ತಿಳಿದು ನಲಿವಾಯಿತು. ನಾನು ಚಿಕ್ಕವನಿದ್ದಾಗ ಕುಡ್ಲು, ಗುದ್ದಲಿಗಳನ್ನ ಮೊನಚು ಮಾಡಿಸಲು ಆಚಾರಿಗಳ ಹತ್ತಿರ ಹೋಗಿ ಕುಲುಮೆಗೆ ಗಾಳಿ ಒತ್ತುತ್ತಾ ಇರುತ್ತಿದ್ದೆ. ಅದೆಲ್ಲಾ ನೆನಪಿಗೆ ಬಂತು.

  7. ybharath77 says:

    ದಿಟವಾಗಲೂ ಒಳ್ಳೇ ಬರಹ ರಗುನಂದನ್,

    ಕರ್ +ಪೊನ್ = ಕರಿ ಚಿನ್ನ = ಕಪ್ಪು ಚಿನ್ನ…. ಅಂದರೆ ಚಿನ್ನದಶ್ಟೆ ಕಬ್ಬಿಣಕ್ಕೂ ಬೆಲೆ ಇತ್ತು. ಉಳುಮೆಗೆ ಬೇಕಾಗುವ ನೇಗಿಲು, ಗುದ್ದಲಿ, ಎಲೆಕೊಂಟು, ಹಾರೆ -ಹೀಗೆ ಅನೇಕ ವಸ್ತುಗಳನ್ನು ಮಾಡಲು ಕಬ್ಬಿಣ ಬೇಕೇ ಬೇಕು.

    ಜನಪದದಲ್ಲೂ ಇದರ ಬಗ್ಗೆ ದಾಕಲೆಗಳಿವೆ.

    ಮಂಟೇಸ್ವಾಮಿ ಕತೆಯಲ್ಲಿ ಬರುವಂತೆ ಒಂದು ಕಾಲದಲ್ಲಿ ಹಲಗೂರು (ಚನ್ನಪಟ್ಟಣದ ಹತ್ತಿರ) ‘ಪಾಂಚಾಲ’ರು ಎಂಬುವರು ಇದ್ದರು. ಇವರು ಉಳುಮೆಗೆ ಬೇಕಾದ ಕಬ್ಬಿಣದಿಂದ ಮಾಡಲಾಗುವ ವಸ್ತುಗಳನ್ನು ದೊಡ್ಡ ಮಟ್ಟದಲ್ಲಿ ತಯಾರಿಸುತ್ತಿದ್ದರು ಎಂಬ ಉಲ್ಲೇಕ ಅದರಲ್ಲಿದೆ.

  8. Raghu Nandan says:

    ಆನಂದ್ ರವರೇ, ನೀವು ಹೇಳುವುದು ಸರಿ. ಆದರೆ ನಾನು ಪದಗಳು ಗೊಂದಲವಾಗಬಹುದು ಎಂಬ ಕಾರಣಕ್ಕೆ cast iron ಗೆ ಕಬ್ಬಿಣ ಎಂದು ಹೇಳಿದ್ದೇನೆ. ಅದಕ್ಕೆ ಒಂದು ಕಡೆ ಅಚ್ಚಕಬ್ಬಿಣ ಎಂದು ಬಳಸಿದ್ದೇನೆ. ಆಗ ನೀವು ಹೇಳುವಂತೆ ಅದರಲ್ಲಿ ಕರಿ(carbon) ಇರುವುದಿಲ್ಲ. ಹವ್ದು ನೂರಕ್ಕೆ ೨ ಕ್ಕಿಂತ ಹೆಚ್ಚಿದರೆ ಅದು ಉಕ್ಕು ಆಗುವುದಿಲ್ಲ. ಅದನ್ನೇ ನಾನು ಹೇಳಿರುವುದು. ನಾವು ಬಳಸುವ ಕಬ್ಬಿಣ ಅಚ್ಚಕಬ್ಬಿಣ ಆಗಿರುವುದಿಲ್ಲ, ಅದು ನೀವು ಹೇಳಿದಂತೆ cast iron ಆಗಿರುತ್ತದೆ. ಆದರೆ ಕನ್ನಡದಲ್ಲಿ ಅದನ್ನು ಕಬ್ಬಿಣ ಎಂದೇ ಕರೆಯುತ್ತೇವೆ. ಅದರಲ್ಲಿ ಕೊಂಚವಾದರೂ ಕರಿ ಇದ್ದೇ ಇರುತ್ತದೆ.

  9. Raghu Nandan says:

    ನಕ್ಶೆಯ ಚಿತ್ರ ಇಲ್ಲಿಂದ ತೆಗೆದದ್ದು. http://www.portal.gsi.gov.in/images/GSIimages/IronOre_4.gif

  10. neelanjana says:

    ಪೊನ್ ಎಂದರೆ ಚಿನ್ನವೆಂದು ಸಾಮಾನ್ಯವಾಗಿ ತಿಳಿಯುವುದಾದರೂ ಅದು ಮೊದಲು ಯಾವುದೇ ಗೂ ಕರೆಯಬಲ್ಲ ಹೆಸರಾಗಿತ್ತೆಂದು ತೋರುತ್ತೆ. ಹಾಗಾಗಿ ಕರಿಯ ಪೊನ್ -> ಕರ್ಪೊನ್ -> ಕರ್ಬೊನ್ -> ಕಬ್ಬಿಣ. ಹಾಗಾಗಿ ಕಬ್ಬಿಣಕ್ಕೂ ಚಿನ್ನಕ್ಕೂ ಒಂದೇ ಬೆಲೆಯೇ ಇತ್ತು ಅಂತ ಹೇಳುವುದರಲ್ಲಿ ತೊಡಕಿದೆ.

    ಇದೇ ರೀತಿ ಕನ್ನಡವನ್ನು ಬಿಟ್ಟು ಬೇರೆ ನುಡಿಗಳಲ್ಲೂ ಆಗಿರುವುದು ಕಂಡುಬರುತ್ತೆ. ಹಿರಣ್ಯವೆಂಬ ಪದಕ್ಕೆ ಸಂಸ್ಕೃತದಲ್ಲೂ ಮೊದಲು ಬರೀ ಲೋಹವೆಂಬ ಅರ್ಥವೇ ಇದ್ದು ( ಮೊದಮೊದಲು ಮನುಷ್ಯನಿಗೆ ಗೊತ್ತಾದ ಲೋಹವು ಚಿನ್ನವೇ ತಾನೆ), ಆಮೇಲೆ ಬಳಕೆಗೆ ಬಂದ ಲೋಹಗಳಿಗೆ ‘ರಜತಂ ಹಿರಣ್ಯಂ’ – “ಬಿಳಿಯ ಲೋಹ” = ಬೆಳ್ಳಿ, “ತಾಮ್ರಂ ಹಿರಣ್ಯಂ” – “ಕೆಂಚು ಲೋಹ” ಹೀಗೆ ಕರೆಯುತ್ತಿದ್ದಿದ್ದೂ, ಬಳಿಕ ಹಿರಣ್ಯವೆಂಬುದು ಚಿನ್ನವನ್ನು ಮಾತ್ರ ತೋರುವುದೂ ಮೊದಲಾಗಿ, ರಜತ ಎಂದರೆ ಬೆಳ್ಳಿ, ತಾಮ್ರವೆಂದರೆ copper ಎಂಬ ಅರ್ಥವೂ ತೊಡಗಿದ್ದನ್ನೂ ನಾವು ಗಮನಿಸಬಹುದು.

ಅನಿಸಿಕೆ ಬರೆಯಿರಿ: