ಹೆಸರುಬೇಳೆ ಉಸಲಿ
ಏನೇನು ಬೇಕು?
- ಅಕ್ಕಿ – 1/4 ಕೆ.ಜಿ
- ಹೆಸರು ಬೇಳೆ – 100 ಗ್ರಾಮ್
- ಹುರುಳಿ ಕಾಯಿ – 100 ಗ್ರಾಮ್
- ಕ್ಯಾರೆಟ್ – 1
- ಆಲುಗೆಡ್ಡೆ – 1
- ನಿಂಬೆಹಣ್ಣು – 1
- ಹಸಿಮೆಣಸಿನಕಾಯಿ- ನಾಲ್ಕು
- ಈರುಳ್ಳಿ – ದಪ್ಪ ಗಾತ್ರದ ಒಂದು
- ಎಣ್ಣೆ – 4 ಚಮಚ
- ಕಾಯಿ ತುರಿ – 1 ಓಳು
- ಸಾಸಿವೆ, ಜೀರಿಗೆ, ಕಡಲೆಬೇಳೆ ಮತ್ತು ಕಾಳು ಮೆಣಸು – ಒಂದೊಂದು ಚಮಚ
- ಕೊತ್ತಂಬರಿ ಮತ್ತು ಕರಿಬೇವು
- ಉಪ್ಪು – ರುಚಿಗೆ ತಕ್ಕಶ್ಟು
ಹೇಗೆ ಮಾಡುವುದು?
- ಈರುಳ್ಳಿ, ಹುರುಳಿಕಾಯಿ ಮತ್ತು ಕ್ಯಾರೆಟ್ಟನ್ನು ಸಣ್ಣದಾಗಿ ಹೆಚ್ಚಿಕೊಳ್ಳುವುದು.
- ಬಾಣಲೆಯಲ್ಲಿ ಮೊದಲು ಅಕ್ಕಿ ಆಮೇಲೆ ಹೆಸರುಬೇಳೆಯನ್ನು ಎಣ್ಣೆ ಹಾಕದೆ ಹುರಿದುಕೊಳ್ಳಬೇಕು.
- ಹುರಿದ ಹೆಸರುಬೇಳೆ ಮತ್ತು ಹೆಚ್ಚಿದ ತರಕಾರಿಗಳನ್ನು ನೀರಿನಲ್ಲಿ ಬೇಯಿಸಿಕೊಳ್ಳಬೇಕು.
- ಎಣ್ಣೆ, ಸಾಸಿವೆ, ಜೀರಿಗೆ, ಕಡಲೆಬೇಳೆ, ಕಾಳುಮೆಣಸು, ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಕರಿಬೇವನ್ನು ಕ್ರಮವಾಗಿ ಹಾಕಿ ಒಗ್ಗರಣೆಯನ್ನು ಮಾಡಿಕೊಳ್ಳುವುದು.
- ಒಗ್ಗರಣೆ ಆದ ಮೇಲೆ ನೀರಿನಲ್ಲಿ ಬೆಂದಿರುವ ತರಕಾರಿಗಳನ್ನು ಹಾಕಿ ಅಕ್ಕಿಯ ಎರಡರಶ್ಟು ನೀರನ್ನು ಹಾಕಬೇಕು.
- ಕುದಿ ಬಂದ ಮೇಲೆ ಅಕ್ಕಿ ಹಾಕಿ ಕಯ್ಯಾಡುತ್ತಿರಬೇಕು. ಆಮೇಲೆ ಕಾಯಿತುರಿಯನ್ನು ಹಾಕಿ ಕಯ್ಯಾಡುತ್ತಿರಬೇಕು.
- ಅಕ್ಕಿ ಬೆಂದ ಮೇಲೆ ಉಪ್ಪು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕಯ್ಯಾಡಬೇಕು.
- ಒಲೆಯನ್ನು ಆರಿಸಿ ನಿಂಬೆಹಣ್ಣನ್ನು ಹಿಂಡಿ, ಕೊತ್ತಂಬರಿ ಸೊಪ್ಪಿನಿಂದ ಸಿಂಗರಿಸಬೇಕು.
ಈ ತಿಂಡಿ ಹದುಳಕ್ಕೆ ಒಳ್ಳೆಯದು ಯಾಕಂದರೆ ಹೆಸರುಬೇಳೆ ಮಯ್ಯಿಗೆ ತಂಪನ್ನೀಯುತ್ತದೆ. ಇದನ್ನು ಬೆಳಗಿನ ತಿಂಡಿಯಾಗಿ ಇಲ್ಲವೆ ಸಂಜೆಯ ತಿಂಡಿಯಾಗಿಯೂ ಬಳಸಬಹುದು. ಮೊಸರಿನೊಂದಿಗೆ ಇದನ್ನು ತಿಂದರೆ ಇದರ ರುಚಿ ಇಮ್ಮಡಿಯಾಗುತ್ತದೆ.
ಕೊಸರು : ಬೆಳಿಗ್ಗೆ ಈ ತಿಂಡಿಯನ್ನು ಮಾಡಿದರೆ ಸಂಜೆಯಾದರೂ ಇದು ತನ್ನ ರುಚಿಯನ್ನು ಬಿಟ್ಟುಕೊಡುವುದಿಲ್ಲ. ಸಂಜೆಗೆ ಇನ್ನೂ ರುಚಿ ಚೆನ್ನಾಗಿದೆ ಅಂತ ಅನ್ನಿಸುವುದುಂಟು.
(ಚಿತ್ರ: ಬರತ್ ಕುಮಾರ್)
ಇತ್ತೀಚಿನ ಅನಿಸಿಕೆಗಳು