ನೆನೆಯತಕ್ಕ ನಾಲ್ವಡಿ

ಸಂದೀಪ್ ಕಂಬಿ.

Nalvadi_Krishnaraja_Wodeyar_1881-1940

ಕಳೆದ ವಾರ ಜೂನ್ 4ರಂದು ಮಯ್ಸೂರಿನ ಹಿಂದಿನ ಮಹಾರಾಜರಾದ ಶ್ರೀ ನಾಲ್ವಡಿ ಕ್ರಿಶ್ಣರಾಜ ಒಡೆಯರ 129ನೇ ಹುಟ್ಟುಹಬ್ಬವಿತ್ತು. ಇದರ ಸಲುವಾಗಿ ಮಯ್ಸೂರಲ್ಲಿ, ಬೆಂಗಳೂರಲ್ಲಿ ಒಂದೆರಡು ಕಡೆ ಹಮ್ಮುಗೆಗಳಿದ್ದವು ಎಂಬ ಸುದ್ದಿಯನ್ನು ಯಾವುದೋ ಮೂಲೆಯಲ್ಲಿ ವರದಿ ಮಾಡಿದ್ದನ್ನು ಬಿಟ್ಟರೆ, ಸುದ್ದಿಹಾಳೆಗಳಲ್ಲಿ ದೊಡ್ಡ ಸುದ್ದಿಯಾಗಲೀ ಬರಹಗಳಾಗಲೀ ಬಂದುದು ಕಾಣಲಿಲ್ಲ.

ಇನ್ನು ಇವರ ಬಗ್ಗೆ ನಾವು ತಿಳಿದುಕೊಂಡು ಹೆಮ್ಮೆಪಡುವುದಾಗಲೀ ಮತ್ತು ನಮ್ಮ ಮಕ್ಕಳಿಗೆ ತಿಳಿಸಿಕೊಡುವುದಾಗಲೀ ನಾವು ಎಂದೂ ಮಾಡಿಲ್ಲ. ಕೆಲವು ಬೆರಳೆಣಿಕೆಯಶ್ಟು ಮಂದಿ ಬಿಟ್ಟರೆ ನಮ್ಮ ತಲೆಮಾರಿನವರಲ್ಲಿ ಹೆಚ್ಚು ಜನ ಇವರ ಹೆಸರನ್ನು ಕೇಳಿರುವುದೂ ಅನುಮಾನ. “ಅದರಲ್ಲೇನಿದೆ? ಅವರೇನು ಗಾಂದಿ, ನೆಹರೂರವರುಗಳಂತೆ ರಾಶ್ಟ್ರೀಯ ನಾಯಕರೇ? ಅವರ ಆಳ್ವಿಕೆಯಲ್ಲಿ ಏನೋ ಕೊಂಚ ಒಳ್ಳೆಯ ಆಡಳಿತ ನೀಡಿರಬಹುದು.

ಅದಕ್ಕೆ ಸಣ್ಣದಾಗಾದರೂ ಅವರ ಹುಟ್ಟುಹಬ್ಬ ಆಚರಿಸಿದ್ದೇವಲ್ಲವೇ? ಆಶ್ಟು ಸಾಲದೇ?” ಎಂದು ನೀವು ಕೇಳಬಹುದು. ಇರಲಿ, ಈ ಕೇಳ್ವಿ ಸರಿಯೋ ತಪ್ಪೋ ಎಂದು ತೀರ್‍ಮಾನಿಸುವ ಮೊದಲು ಒಮ್ಮೆ ಕ್ರಿಶ್ಣರಾಜ ಒಡೆಯರ ಜನಸೇವೆ ಮತ್ತು ಸಾದನೆಗಳತ್ತ ಕಣ್ಣುಹಾಯಿಸೋಣ.

1902ರಲ್ಲಿ ಸಿಂಹಾಸನವನ್ನು ಏರಿದ ಇವರು 1940ರವರೆಗೂ, 38 ವರ್‍ಶಗಳ ಕಾಲ ಮಯ್ಸೂರನ್ನು ಆಳಿದರು. ಅಂದಿನ ಬ್ರಿಟೀಶ್ ಆಳ್ವಿಕೆಯ ಬಾರತದಲ್ಲಿ ಸುಮಾರು 500ಕ್ಕೂ ಮೇಲ್ಪಟ್ಟು ಅರಸಾಳ್ವಿಕೆಯ ರಾಜ್ಯಗಳಿದ್ದವು. ಅವುಗಳಲ್ಲಿ ಮಯ್ಸೂರು ಒಂದು ಸಣ್ಣ ರಾಜ್ಯವಶ್ಟೇ.

ಇತರೆ ರಾಜ್ಯಗಳ ಅರಸುಗಳು ಸಾಮಾನ್ಯವಾಗಿ ಆಡಳಿತವನ್ನು ತಾವು ನೇಮಿಸಿದ ದಿವಾನರಿಗೋ, ಪ್ರದಾನ ಮಂತ್ರಿಗಳಿಗೋ ವಹಿಸಿ, ತಮಗೂ ರಾಜ್ಯದ ಮಂದಿಯ ತೊಂದರೆಗಳಿಗೂ, ಬೇಕು-ಬೇಡಗಳಿಗೂ ಯಾವುದೇ ನಂಟಿಲ್ಲವೆಂಬಂತೆ ಮೋಜು ಮಸ್ತಿಯಲ್ಲಿ ಮುಳುಗಿರುತ್ತಿದ್ದರು. ಆದರೆ ಕ್ರಿಶ್ಣರಾಜ ಒಡೆಯರು ಇದಕ್ಕೆ ಹೊರತೆಂಬಂತೆ, ಮಯ್ಸೂರಿನ ಆಡಳಿತವನ್ನು ತೀರಾ ಕಾಳಜಿಯಿಂದ ನಡೆಸಿ, ನಾಡಿನ ಏಳಿಗೆಗಾಗಿ ಹಗಲಿರುಳೂ ದುಡಿದರು. ಸರ್ ಎಂ. ವಿಶ್ವೇಶ್ವರಯ್ಯನವರು ಮತ್ತು ಮಿರ್‍ಜಾ ಇಸ್ಮಾಯಿಲ್‍ರಂತಹವರುಗಳು ಮಯ್ಸೂರಿನ ದಿವಾನರುಗಳಾಗಿ ಒಡೆಯರ ಜೊತೆ ದುಡಿದುದರಿಂದ ಮಯ್ಸೂರು ಬಾರತದ ಬೇರೆ ಯಾವುದೇ ರಾಜ್ಯ (ಬ್ರಿಟೀಶ್ ಆಳ್ವಿಕೆಯ ಪ್ರದೇಶಗಳನ್ನೂ ಒಳಗೊಂಡು) ಸಾದಿಸದ ಏಳಿಗೆಯನ್ನು ಸಾದಿಸಿತು.

ಇವರು ಆಳ್ವಿಕೆಯನ್ನು ವಹಿಸಿಕೊಂಡ ಬಳಿಕ ಮಯ್ಸೂರು ಕಯ್ಗಾರಿಕೆ, ಕಲಿಕೆ, ಕಲೆ, ಮತ್ತು ಒಕ್ಕಲುತನದಲ್ಲಿ ಮುಂದುವರೆಯುತ್ತ ಜಗತ್ತೇ ಗಮನ ಸೆಳೆಯುವ ಏಳಿಗೆಯನ್ನು ಸಾದಿಸಿತು. 20ನೇ ನೂರ್‍ಮಾನದ ಕೊನೆಯಲ್ಲಿ ಮಾಹಿತಿ ಚಳಕದಲ್ಲಿ (information technology) ಕರ್‍ನಾಟಕದ ಮೇಲು ಪಡೆಪಿಗೆ, ಕಲಿಕೆಯ ತಳಪಾಯವನ್ನು ಒಡೆಯರ ಆಳ್ವಿಕೆಯಲ್ಲಿ ಹಾಕಲಾಯಿತು ಎನ್ನಲಾಗುತ್ತದೆ.

ಒಡೆಯರು ಬನಾರಸ್ ಹಿಂದೂ ಯೂನಿವರ್‍ಸಿಟಿ ಮತ್ತು ಮಯ್ಸೂರು ಯೂನಿವರ್‍ಸಿಟಿಯ ಮೊದಲ ಚಾನ್ಸೆಲರ್‍ ಆಗಿದ್ದರು. ಮಯ್ಸೂರು ಯೂನಿವರ್‍ಸಿಟಿಯು ಬಾರತದ ರಾಜ್ಯವೊಂದು ತೊಡಗಿಸಿದ ಮೊದಲ ಯೂನಿವರ್‍ಸಿಟಿಯಾಗಿತ್ತು. ಇಂದು ಅರಿಮೆಯ ಕಲಿಕೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಪ್ ಸಯನ್ಸ್ ತೊಡಗಿಸಲು 1911ರಲ್ಲಿ ಇವರು 371 ಎಕರೆ ನೆಲವನ್ನು ದಾನವಾಗಿ ನೀಡಿದ್ದರು. ಇವರ ಆಳ್ವಿಕೆಯಲ್ಲಿ ಶಿವನಸಮುದ್ರದ ನೀರ್‍ಮಿಂಚು ಬಲದ ನಿಲ್ಮನೆಯನ್ನು (hydro electirc power station) ತೊಡಗಿಸಲಾಯಿತು ಮತ್ತು ಇದು ಬಾರತದಲ್ಲೇ ಎರಡನೇ ನೀರ್‍ಮಿಂಚು ನಿಲ್ಮನೆಯಾಗಿತ್ತು. ಇಲ್ಲಿ ಉಂಟುಮಾಡಿದ ಮಿಂಚು ಬಲವನ್ನು (electric power) ಕೋಲಾರದ ಚಿನ್ನದ ಗಣಿಗೆ ಬಳಸಲಾಯಿತು. ಬಳಿಕ ಮಯ್ಸೂರು ಮತ್ತು ಬೆಂಗಳೂರು ಪಟ್ಟಣಗಳಿಗೂ ಹರಿಸಲಾಯಿತು.

ಇವರ ಇನ್ನೊಂದು ಗಮನ ಸೆಳೆಯುವ ದೊಡ್ಡ ಸಾದನೆಯೆಂದರೆ ಕನ್ನಂಬಾಡಿ ಕಟ್ಟೆಯನ್ನು ಕಟ್ಟಿಸಿದ್ದು. ಮಂಡ್ಯದಲ್ಲಿ ಇರುವುದು ಹೆಚ್ಚು ಕಡಿಮೆ ಎಲ್ಲಾ ಬರಡು ನೆಲವೇ. ನೀರಿನ ಕೊರತೆಯ ಜೊತೆ ಆಗಿಂದಾಗ್ಗೆ ಬರ ಬರುವುದೂ ಇಲ್ಲಿ ಸಾಮಾನ್ಯವಾಗಿತ್ತು.  ಹದಿನಾರನೇ ನೂರ್‍ಮಾನದಲ್ಲಿ ಒಂದೇ ಸಮನೆ ಏಳು ವರ್‍ಶಗಳ ಕಾಲ ಮಳೆ ಬಾರದೇ ದೊಡ್ಡ ಬರವುಂಟಾಗಿತ್ತಂತೆ. ಇದಕ್ಕೆ ‘ಸುಣ್ಣದಕ್ಕಿ ಬರ’ ಎಂಬ ಹೆಸರೂ ಇದೆ. ಇಲ್ಲಿ ರಾಗಿ ಮತ್ತು ಇತರೆ ಕಡಿಮೆ ನೀರು ಹೀರುವ ಬೆಳೆಗಳನ್ನು ಮಾತ್ರ ಬೆಳೆಯಲಾಗುತ್ತಿತ್ತು, ಮತ್ತು ಇಲ್ಲಿನ ಮಂದಿ ಕಡುಬಡವರಾಗಿದ್ದರು.

ಆದರೆ ಇಂದು ಮಂಡ್ಯ ಪಲವತ್ತಾದ ನೆಲವುಳ್ಳ ನೀರಾವರಿ ಪ್ರದೇಶವಾಗಿ ‘ಬತ್ತದ ಕಣಜ’, ‘ಸಕ್ಕರೆ ನಾಡು’ ಎಂದೆಲ್ಲ ಹೆಸರುವಾಸಿಯಾಗಿದೆ. ಹಣಕಾಸಿನ ವಿಚಾರದಲ್ಲಿ ಸಾಕಶ್ಟು ಮುಂದುವರೆದಿದೆ. ಇದಕ್ಕೆ ಕಾರಣ 1924ರಲ್ಲಿ ಕಟ್ಟಿಸಿದ ಈ ಕನ್ನಂಬಾಡಿ ಕಟ್ಟೆಯೇ. ಅದಲ್ಲದೇ ಇದು ಇಂದು ಮಯ್ಸೂರು ಮತ್ತು ಬೆಂಗಳೂರು ಪಟ್ಟಣಗಳ ಕುಡಿಯುವ ನೀರಿನ ಅಗತ್ಯಗಳನ್ನೂ ಪೂರಯ್ಸುತ್ತಿದೆ. ಈ ಅಣೆಕಟ್ಟನ್ನು ಕಟ್ಟಲು ಹಣ ಸಾಲದೇ ಬಂದಾಗ ಅರಮನೆಯಲ್ಲಿನ ಚಿನ್ನ, ಒಡವೆಗಳನ್ನೂ ಮಾರಲು ಹಿಂಜರಿಯಲಿಲ್ಲವಂತೆ ಕ್ರಿಶ್ಣರಾಜ ಒಡೆಯರು. ಹಾಗಾಗಿ ಅವರಿಗೆ ಗವ್ರವ ಸೂಚಿಸಲೆಂದೇ ಈ ಅಣೆಕಟ್ಟಿಗೆ ಮುಂದೆ ‘ಕ್ರಿಶ್ಣರಾಜ ಸಾಗರ’ ಎಂಬ ಹೆಸರನ್ನು ಇಡಲಾಯಿತು.

ಪಾಲ್ ಬ್ರಂಟನ್ ಎಂಬ ಅರಿವಿನರಿಗನು (philosopher), ಒಡೆಯರನ್ನು, ಪ್ಲೇಟೋನ ‘ರಿಪಬ್ಲಿಕ್’ನಲ್ಲಿ ಹೇಳಲಾದ ‘ಅರಿವಿನರಿಗ-ದೊರೆ’ (philospoher-king) ಎಂಬ ಹೊಳಹಿನ ಜೀವಂತ ಎತ್ತುಗೆ ಎಂದು ಬಗೆದನು. ಲಾರ್‍ಡ್ ಸ್ಯಾಮ್ಯುಯೆಲ್ ಅವರು ದೊರೆಗಳನ್ನು ಅಶೋಕ ಚಕ್ರವರ್‍ತಿಗೆ ಹೋಲಿಸಿದರು. ಮಹಾತ್ಮಾ ಗಾಂದಿಯವರು ಇವರ ಹತ್ತಿರದ ಗೆಳೆಯರಾಗಿದ್ದರಲ್ಲದೇ, ಇವರನ್ನು ರಾಜರ್‍ಶಿ ಎಂದು ಕರೆದರು. ಒಡೆಯರ ಆಡಳಿತವನ್ನು ರಾಮ ರಾಜ್ಯ ಎಂದೂ ಬಣ್ಣಿಸಲಾಗುತ್ತಿತ್ತು. ಲಾರ್‍ಡ್ ಸ್ಯಾಂಕಿಯವರು ದುಂಡು ಮೇಜಿನ ಕೂಟವೊಂದರಲ್ಲಿ (Round Table Conference) ಮಯ್ಸೂರಶ್ಟು ಚೆನ್ನಾಗಿ ಆಡಳಿತ ನಡೆಸುವ ರಾಜ್ಯವೇ ಪ್ರಪಂಚದಲ್ಲಿ ಮತ್ತೊಂದಿಲ್ಲ ಎಂದು ಹೇಳಿದ್ದರು.

ಅಮೇರಿಕಾದ ಬರಹಗಾರ ಜಾನ್ ಗಂತರ್‍, ಪಂಡಿತ್ ಮದನ್ ಮೋಹನ್ ಮಾಲವಿಯ, ಲಾರ್‍ಡ್ ವೆಲ್ಲಿಂಗ್ಟನ್ ಮುಂತಾದವರು ಒಡೆಯರ ವ್ಯಕ್ತಿತ್ವವನ್ನೂ, ಆಳ್ವಿಕೆಯನ್ನೂ ಮೆಚ್ಚಿ ಹೊಗಳಿದರು. ಬಾರತವು ಬ್ರಿಟೀಶರಿಂದ ಬಿಡುಗಡೆ ಪಡೆದಾಗ ಎಲ್ಲವಕ್ಕೂ ಮುಂದುವರೆದ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತಂತೆ ನಮ್ಮ ಮಯ್ಸೂರು ರಾಜ್ಯ. ಇದಕ್ಕೆ ಕ್ರಿಶ್ಣರಾಜ ಒಡೆಯರ ಆಳ್ವಿಕೆ ಮುಕ್ಯ ಕಾರಣ ಎಂದು ಹೇಳಿದರೆ ತಪ್ಪಾಗಲಾರದು.

ಇಂತಹ ನಮ್ಮ ಒಬ್ಬ ದೊಡ್ಡ ನಾಯಕರನ್ನೂ ಮತ್ತು ಅವರ ಗಳಿಕೆಗಳನ್ನೂ ನಾವು ನೆನೆಯದೇ ಮರೆತರೆ ಅದು ಅವರು ನಮಗಾಗಿ ಮಾಡಿದ ತ್ಯಾಗ-ದುಡಿಮೆಗಳಿಗೆ ಮಾಡುವ ಅವಮಾನ ಮಾತ್ರವಲ್ಲ, ಅವರಿಂದ ಕಲಿಯುವ ಮತ್ತು ಸ್ಪೂರ್‍ತಿ ಪಡೆದು ಅವರಂತೆಯೇ ಸಾದನೆ ಮಾಡಲು ಇಂದಿನ ತಲೆಮಾರಿಗೆ ಹುರಿದುಂಬಿಸುವ ಒಂದು ಅವಕಾಶವನ್ನು ಕಿತ್ತೆಸೆದಂತೆ. ನಾವು ಕನ್ನಡಿಗರು ಇಂದು ಕ್ರಿಶ್ಣರಾಜ ಒಡೆಯರನ್ನು ಹೆಮ್ಮೆಯಿಂದ ನೆನೆದು ಅವರಿಗೆ ಗವ್ರವ ಸೂಚಿಸುವುದಲ್ಲದೇ, ಅಶ್ಟೇ ಹೆಮ್ಮೆಯಿಂದ ನಮ್ಮ ಮಕ್ಕಳಿಗೂ ಇವರ ಬಗ್ಗೆ ತಿಳಿಸಿಕೊಟ್ಟು ಅರಿವು ಮೂಡಿಸುವ ಅಗತ್ಯವಿದೆ.

ಮಾಹಿತಿ ಸೆಲೆ: ವಿಕಿಪೀಡಿಯ

ಚಿತ್ರ: ವಿಕಿಪೀಡಿಯCategories: ನಡೆ-ನುಡಿ

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , ,

3 replies

  1. thumba chennagi thilisiddira. Nimage olleyadagali. Deshiya, videshiyara barahagalinda navau ivathu namma hiriyara hiridada kelasagala bagge thilidukollabekiruvudu novina sangathi. adaru, nimmanthavara Ee reethiya kelasa namage nalivannu untu maaduthade. Naavu idannu namma makkaligu saha thilisuthevenud oppanda madikollutheve.

Trackbacks

  1. ಒಡೆಯರ ನೆನಸೋಣ | ಹೊನಲು
  2. ತಮ್ಮ ಹಳಮೆ ತಿಳಿಯದವರನ್ನು ಅಡಿಯಾಳಾಗಿಸಿಕೊಳ್ಳುವುದು ಸುಲಬ | ಹೊನಲು

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s