ಚುನಾವಣೆಯ ಏರ‍್ಪಾಡಿನಲ್ಲಿ ಸುದಾರಣೆ: ಏಕೆ? ಹೇಗೆ?

– ಸಿದ್ದರಾಜು ಬೋರೇಗವ್ಡ

melmane-kelamane

ಕರ್‍ನಾಟಕ ವಿದಾನಸಬೆಯ ಚುನಾವಣೆ ಇತ್ತೀಚಿಗೆ ತಾನೇ ಮುಗಿದಿದೆ. ಹೊಸ ಮುಕ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ‘ಸಂವಿದಾನದ’ ಹೆಸರಲ್ಲಿ ಆಣೆ ಮಾಡಿ ಆಡಳಿತದ ಚುಕ್ಕಾಣಿ ಹಿಡಿದಾಗಿದೆ.  ಆದರೆ, ಚುನಾವಣೆಯಲ್ಲಿ ಕಾಂಗ್ರೆಸ್ ಕರ್‍ನಾಟಕದಾದ್ಯಂತ ಕೇವಲ ನೂರರಲ್ಲಿ 37 ಮಂದಿಯ ಮತಗಳನ್ನು ಮಾತ್ರ ಗಳಿಸಿದೆ. ಅಂದರೆ, ಕಾಂಗ್ರೆಸ್ ಪಕ್ಶದ ಪರವಾಗಿ ಬಿದ್ದಿರುವ ಮತಗಳಿಗಿಂತ ಹೆಚ್ಚೂಕಡಿಮೆ ಎರಡು ಪಟ್ಟು ಹೆಚ್ಚು ಮತಗಳು ಅದರ ವಿರುದ್ದ ಬಿದ್ದಿವೆ! ಈ ಸುದ್ದಿ ಚುನಾವಣೆ ಸುದಾರಣೆಯ ಆಗಲೇಬೇಕೆಂದು ಕೂಗಿ ಹೇಳುತ್ತಿದೆ! ನೂರರಲ್ಲಿ ಅಯ್ವತ್ತಕ್ಕಿಂತ ಹೆಚ್ಚು ಶಾಸಕರು ಆರಿಸಿ ಬಂದ ಆಳ್ಮೆಬದಿ ಆಡಳಿತ ನಡೆಸುತ್ತದೆ ಎಂಬುದು ನಮಗೆಲ್ಲಾ ತಿಳಿದಿರುವ ವಿಶಯ. ಈ ವಿಶಯವಾಗಿ ಮುಂದುವರಿಯುವ ಮೊದಲು ಆಳ್ವಿಕೆ, ಆಡಳಿತ ಮತ್ತು ಆಳ್ಮೆ ಇವುಗಳ ನಡುವೆ ಬೇರ್‍ಮೆ ಏನೆಂದು ನೆನೆಯಬೇಕು.

“ಆಳ್ವಿಕೆ” (government/ಸರಕಾರ) ಅಂದರೆ ಮಂದಿಯನ್ನು ಆಳಲು ಕಟ್ಟಿಕೊಂಡ ಒಟ್ಟಾರೆ ಏರ್‍ಪಾಟು. ಹಿಂದೆ ರಾಜಾಳ್ವಿಕೆ, ದರ್‍ಮದಾಳ್ವಿಕೆಗಳು ಇದ್ದವು. ಇಂದಿನ ಕಾಲದ ನಾವು ಮಂದಿಯಾಳ್ವಿಕೆಯನ್ನು ಕಟ್ಟಿಕೊಂಡಿದ್ದೇವೆ. ಮಂದಿಯಾಳ್ವಿಕೆಗೆ ಮೂರು ಕಯ್ಗಳಿವೆ: ಕಟ್ಟಲೆ, ಮೊರೆ, ಆಡಳಿತಗಳೇ ಆ ಮೂರು ಕಯ್ಗಳು. ಇವುಗಳಲ್ಲಿ ಕಟ್ಟಳೆ ಮತ್ತು ಆಡಳಿತವು ಮಂದಿಯಿಂದ ನೇರವಾಗಿ ಆಯ್ಕೆಯಾದ ಪ್ರತಿನಿದಿಗಳ ಹಿಡಿತದಲ್ಲಿರುತ್ತದೆ. ಮೊರೆ (Judiciary) ಏರ್‍ಪಾಟಿನಲ್ಲಿ ಇರುವವರು, ಅದರಲ್ಲೂ ಮೇಲ್ಮಟ್ಟದಲ್ಲಿರುವವರು ಆಡಳಿತ ನಡೆಸುವವರಿಂದಲೇ ನೇಮಕಗೊಂಡವರಾಗಿರುತ್ತಾರೆ.

“ಆಡಳಿತ” (executive/administration/ಕಾರ್‍ಯಾಂಗ) ಅಂದರೆ ಮೇಲೆ ತಿಳಿಸಿರುವಂತೆ ಆಳ್ವಿಕೆಯ ಮೂರು ಕಯ್ಗಳಲ್ಲಿ ಒಂದು. ಇದು ಆಳ್ವಿಕೆಯನ್ನು ಆಚರಣೆಗೆ ತಂದು ಮಂದಿಗೆ ತಲುಪಿಸುವ ಕಯ್ಯಿ. ಇದರಲ್ಲಿ ಹಲವಾರು ಬಾಗಗಳಿದ್ದು ಒಂದೊಂದು ಬಾಗಗಳನ್ನು ಮಂತ್ರಾಲಯಗಳು ಮೇಲುಸ್ತುವಾರಿ ವಹಿಸುತ್ತವೆ. ಚುನಾವಣೆ ಗೆದ್ದ ಆಳ್ಮೆಬದಿಯ ಶಾಸಕರೊಬ್ಬರು ಮಂತ್ರಿಯಾಗಿ ಈ ಒಂದೊಂದು ಬಾಗಗಳಿಗೂ ಚುಕ್ಕಾಣಿ ಹಿಡಿಯುತ್ತಾರೆ.  ಅವುಗಳಲ್ಲೂ ಟಿಸಿಲೊಡೆದ ಏರ್‍ಪಾಟಿದೆ. ಇದರಲ್ಲಿ ನೇಮಕಗೊಂಡ ಕೆಲಸಗಾರರು ಆಳ್ವಿಕೆಯನ್ನು ಮಂದಿಗೆ ತಲುಪಿಸುವ  ‘ಸೇವೆ’ ಮಾಡುತ್ತಾರೆ. ಮಂದಿಯ ಪ್ರತಿನಿದಿಯಾದ ಮಂತ್ರಿಯು ಇವುಗಳ ಮೇಲುಸ್ತುವಾರಿಯಾಗುವುದರಿಂದ ಆಡಳಿತವು ಮಂದಿಯದ್ದೇ ಆಗುತ್ತದೆ.

ಇನ್ನು “ಮೊರೆ”ಯು (judiciary/ನ್ಯಾಯಾಂಗ) ಸ್ವತಂತ್ರವಾಗಿ ಕೆಲಸಮಾಡಿ ಕಟ್ಟಳೆಯನ್ನು ಕಾಯುತ್ತದೆ. ಸರಕಾರ ನಡೆಸುವವರೇ ಆಗಲಿ ಮಂದಿಯೇ ಆಗಲಿ ಕಟ್ಟಳೆಯನ್ನು ಮುರಿಯುವಂತಿಲ್ಲ. “ಕಟ್ಟಳೆ” (legislative/ಶಾಸಕಾಂಗ) ಒಂದರ್‍ತದಲ್ಲಿ ಇದು ಆಳ್ವಿಕೆಯ ಎಲ್ಲಾ ಕಯ್ಗಗಳಿಗಿಂತ ಹೆಚ್ಚು ಅದಿರಾದ ಕಯ್ಯಿ! ಕಟ್ಟಳೆಗಳು ಸರಕಾರಗಳು ನಡೆಯುವ ದಿಕ್ಕನ್ನೇ ತೀರ್‍ಮಾನಿಸುತ್ತವೆ. ಆದ್ದರಿಂದಲೇ ಕಟ್ಟಳೆಯನ್ನು ಕಟ್ಟುವ ಪೂರ್‍ತಿ ಹೊಣೆ ಮಂದಿಯಿಂದ ನೇರವಾಗಿ ಆಯ್ಕೆಯಾದ ಪ್ರತಿನಿದಿ ಶಾಸಕರ ಕಯ್ಯಲ್ಲಿ ಮಾತ್ರ ಇದೆ. “ಆಳ್ಮೆ” (politics/ರಾಜಕೀಯ) ಪದಬಳಕೆಯು ಮಂದಿಯಾಳ್ವಿಕೆಯಲ್ಲಿ ಚುನಾವಣೆಯ ಹುರಿಯಾಳುಗಳ, ಚುನಾವಣೆಗಳು ಆಡಳಿತ, ಕಟ್ಟಳೆ ಮತ್ತು ಮೊರೆಯನ್ನು ತೀರ್‍ಮಾನಿಸುವ ಒಟ್ಟಾರೆ ಚಟುವಟಿಕೆಗಳನ್ನು ಹಿಡಿದಿಡುತ್ತದೆ.

ಕನ್ನಡಿಗರು ಒಂದೇ ನಾಡಿನಡಿ ಒಗ್ಗಟ್ಟಾದಾಗಿನಿಂದಲೂ ನಮ್ಮ ಒಟ್ಟಾರೆ ಗಮನ ಕೇವಲ ‘ಆಡಳಿತ’ದ ಕಡೆಗೆ ಮಾತ್ರ ಇದೆ. ಹಣವನ್ನು ಬಳಸುವ ಅದಿಕಾರವು ಆಡಳಿತದಲ್ಲೇ ಹೆಚ್ಚಾಗಿ ಬರುವುದರಿಂದ ಹೀಗಾಗಿರಬಹುದು. ಒಮ್ಮೆಮ್ಮೆ ನಮ್ಮ ಗಮನ ‘ಮೊರೆ’ಯ ಕಡೆಗೆ ಹರಿದರೂ ‘ಕಟ್ಟಳೆ’ಯು ನಮ್ಮ ಗಮನಕ್ಕೆ ಬರುವುದೇ ಇಲ್ಲ! ನೂರಕ್ಕೆ 50ಕ್ಕೂ ಹೆಚ್ಚು ಶಾಸಕರನ್ನು ಹೊಂದುವ ಆಳ್ಮೆಬದಿಗೆ ಆಳ್ವಿಕೆಯ ಎಲ್ಲಾ ಕಯ್ಗಳ ಬಲವೂ, ಹಿಡಿತವೂ ಸಿಗುವುದರಿಂದ ಚುನಾವಣೆ ಸುದಾರಣೆಯು ಆಗಲೇಬೇಕಾದುದು. ಇಲ್ಲಿನವರೆಗೂ ಶಾಸಕರು ನಮ್ಮ ಕಾಲಕ್ಕೆ ಬೇಕಾದ ಕಟ್ಟಳೆಗಳನ್ನು ರಚಿಸಲು ಸೋಮಾರಿತನ ತೋರಿಸುತ್ತಿದ್ದರು.

ಆದರೆ, ರಚಿಸಿದಾಗಲೆಲ್ಲಾ ಮಂದಿಯ ಒಳಿತಿನ ಮೇಲೆ ನಿಗಾ ಇಡಲಾಗುತ್ತಿತ್ತು. ಯಾವುದೇ ಲಾಬಿಗಳು ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಂಡಿರಲಿಲ್ಲ. ಇನ್ನು ಮುಂದೆ ಹೀಗಿರುವುದಿಲ್ಲ. ಬಂಡವಾಳಶಾಹಿಗಳು ‘ಆಳ್ಮೆ ಆಚರಣೆ ಸಮಿತಿ’ (Political Action Committee – PAC) ಗಳನ್ನು ಕಟ್ಟಲು ಆರಂಬಿಸಿದ್ದಾರೆ.  ಇವುಗಳ ಸಿದ್ದಾಂತಗಳನ್ನು ಯಾವ ಯಾವ ಹುರಿಯಾಳುಗಳು ಒಪ್ಪುವರೋ ಅವರಿಗೆ ಚುನಾವಣೆಯ ವೆಚ್ಚಕ್ಕಾಗಿ ಹಣವನ್ನು ಒದಗಿಸುತ್ತಾರೆ. ಕಳೆದ ಚುನಾವಣೆಯಲ್ಲಿ ತೊಡಗಿಕೊಂಡಿದ್ದ BPAC (ಬೀಪ್ಯಾಕ್) ಎಂಬಂತಹ ಸಮಿತಿಯೊಂದು ಬೆಂಗಳೂರನ್ನು ಕರ್‍ನಾಟಕದಿಂದ ಆದಶ್ಟೂ ಬೇರ್‍ಪಡಿಸುವ ಅಜೆಂಡಾ ಹೊಂದಿರುವಂತೆ ತೋರುತ್ತದೆ. ಅದು ಎಲ್ಲಾ ಆಳ್ಮೆಬದಿಗಳ ಒಟ್ಟು 14 ಮಂದಿ ಹುರಿಯಾಳುಗಳನ್ನು ತಲಾ 5 ಲಕ್ಶ ರೂ ಹಣ ಕೊಟ್ಟು ಬೆಂಬಲಿಸಿತ್ತು. ಹಲವರು ಗೆದ್ದು ಕೆಲವರು ಮಂತ್ರಿಯೂ ಆಗಿದ್ದಾರೆ. ಕ್ರಿಶ್ಣ ಬಯ್ರೇಗವ್ಡ ಅದರಲ್ಲಿ ಪ್ರಮುಕರು.

BPAC ನಂತಹ ಸಮಿತಿಗಳು ಆಟವಾಡುವುದೇ ಕಟ್ಟಳೆಗಳನ್ನು ರಚಿಸುವಲ್ಲಿ. ಬೆಂಬಲ ಪಡೆದು ಗೆದ್ದುಬಂದ ಶಾಸಕರ ಮತ್ತು ಮಂತ್ರಿಗಳ ಚುಕ್ಕಾಣಿಯನ್ನು ಹಿಡಿದ ಇವರುಗಳು ಬರುವ ದಿನಗಳಲ್ಲಿ ಕಟ್ಟಳೆಯ ರಚನೆಯನ್ನು ನಿಯಂತ್ರಿಸದೇ ಇರುವುದಿಲ್ಲ. ಇಲ್ಲಿ ಶಾಸಕರಲ್ಲಿರುವ ಸೋಮಾರಿತನವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಮುಗಿದೇಹೋಯಿತು. BPAC ನವರ ಹತ್ತಿರ ಕಟ್ಟಳೆಗಳನ್ನೇ ಬರೆಯುವ ಎಲ್ಲಾ ಸವ್ಲಬ್ಯವೂ ಇರುತ್ತದೆ. ಶಾಸಕರು ಇದನ್ನು ಒಪ್ಪಿ, ವಿದಾನ ಸಬೆಯಲ್ಲಿ ಅಂಗೀಕರಿಸಿ ಟಸ್ಸೆ ಒತ್ತಿದರೆ ಆಯಿತು! ನೂರಕ್ಕೆ 37 ಮಂದಿಯ ಮತ ಪಡೆದ ಆಳ್ಮೆಬದಿಯು ಶಾಸಕರ ಎಣಿಕೆಯಲ್ಲಿ ಬಹುಮತ ಹೊಂದಿದೆ ಅನ್ನುವುದನ್ನು ಲೆಕ್ಕ ಹಾಕಿದಾಗ ಮುಂದಿನ ದಿನಗಳಲ್ಲಿ ಕಟ್ಟಳೆಯ ಹಿಡಿತ ಕೆಲವೇ ಕೆಲವರ ಕಯ್ಗೆ ರವಾನೆಯಾಗುವ ಆತಂಕ ಕಾಡದೇ ಇರದು.

ಮೇಲ್ಮನೆ (Legislative Council): ಇನ್ನು ಕರ್‍ನಾಟಕದಲ್ಲಿರುವ ಮೇಲ್ಮನೆಯ ಪಾಡನ್ನಂತೂ ಹೇಳತೀರದು. ಬಾರತದಲ್ಲಿ ಮೇಲ್ಮನೆಗಳಿರುವ ಕೇವಲ ಆರೇ ಆರು ರಾಜ್ಯಗಳಲ್ಲಿ ಕರ್‍ನಾಟಕವೂ ಒಂದು. ಬುದ್ದಿವಂತರೂ ಮತ್ತು ಆಳ್ವಿಕೆಯಲ್ಲಿ ಅನುಬವವಿದ್ದ ಹಿರಿಯರೂ ಕಾಯ್ದೆಗಳನ್ನು ಚರ್‍ಚಿಸಲು ಮತ್ತು ಕಟ್ಟುವ ಹೊಣೆಗಾರಿಕೆಯೊಂದಿಗೆ ಮೇಲ್ಮನೆಯು 1907ರಲ್ಲೇ ಮಯ್ಸೂರಿನಲ್ಲಿ ಆರಂಬವಾಯಿತು.

ದಿವಾನರನ್ನೂ ಒಳಗೊಂಡಿದ್ದ ಮೇಲ್ಮನೆಯಲ್ಲಿ ಮೊದಮೊದಲು 10 ರಿಂದ 15 ಮಂದಿ ಮಾತ್ರ ಇರುತ್ತಿದ್ದರು. ಅವರೆಲ್ಲಾ ಆಳ್ವಿಕೆಯಿಂದಲೇ ನೇಮಕವಾಗುತ್ತಿದ್ದರು. ಮೇಲ್ಮನೆಯ ಶಾಸಕರ ಎಣಿಕೆ ಹೆಚ್ಚುತ್ತಾ ಹೊಗಿ ನಮ್ಮ ಕಾಲದಲ್ಲಿ ಅದು 75ಕ್ಕೆ ಬಂದು ನಿಂತಿದೆ. ಕರ್‍ನಾಟಕದ ಮೇಲ್ಮನೆಯಲ್ಲಿ ಒಟ್ಟು 75 ಶಾಸಕರು (Member of Legislative Council – MLC) ಇದ್ದಾರೆ. ಅವರಲ್ಲಿ 25 ಮಂದಿಯನ್ನು ಕೆಳಮನೆಯ ಶಾಸಕರೂ (MLAಗಳು), 25 ಮಂದಿಯನ್ನು ನಗರಗಳ ಸಬೆ, ಪಂಚಾಯಿತಿ ಮುಂತಾದ ಸ್ತಳೀಯ ಸಂಸ್ತೆಗಳ ಪ್ರತಿನಿದಿಗಳೂ, 7 ಮಂದಿಯನ್ನು ಪದವೀದರರೂ, 7 ಮಂದಿಯನ್ನು ಶಿಕ್ಶಕರೂ ಆಯ್ಕೆ ಮಾಡುತ್ತಾರೆ.

ಮಿಕ್ಕ 11 ಮಂದಿಯನ್ನು ರಾಜ್ಯಪಾಲರು ನೇಮಿಸುತ್ತಾರೆ.  ಮೇಲ್ಮನೆಯ ಶಾಸಕರು ಕಾಯ್ದೆಯನ್ನು ಮಂಡಿಸುವ ಮತ್ತು ಚರ್‍ಚಿಸುವ ಅದಿಕಾರ ಹೊಂದಿರುತ್ತಾರೆ. ಕೆಳಮನೆಯಲ್ಲಿ ಒಪ್ಪಿ ತೀರ್‍ಮಾನವಾದ ಕಾಯ್ದೆಗಳನ್ನು ಮೇಲ್ಮನೆಯು ಬದಲಾವಣೆಗಳನ್ನು ಸೂಚಿಸಿ ಕೆಳಮನೆಗೆ ಹಿಂತಿರುಗಿಸಬಹುದು ಇಲ್ಲಾ ಅನುಮೋದನೆಯಾಗದಂತೆ ತಿಂಗಳುಗಳವರೆಗೆ ತಡೆಹಿಡಿಯಬಹುದು. ಮೇಲ್ಮನೆಯ ಶಾಸಕರು ಹಲವಾರು ಕಮಿಟಿಗಳಲ್ಲಿ ಕೆಸಲ ಮಾಡುತ್ತಾರೆ.

ಅವರು ಮಂತ್ರಿಯೂ ಆಗಬಹುದು! ಮೇಲೆ ತಿಳಿಸಿದ ಶಾಸಕರಲ್ಲಿ 25 ಮಂದಿಯ ಆಯ್ಕೆ/ನೇಮಕಗಳು ಮಂದಿಯಾಳ್ಕೆಯ ಆಶಯಗಳಿಗೆ ವಿರುದ್ದವಾಗಿವೆ. ತಲಾ 7 ಶಾಸಕರನ್ನು ಪದವೀದರರೂ ಶಿಕ್ಶಕರೂ ಆಯ್ಕೆ ಮಾಡುವುದರಿಂದಾಗಿ ‘ಆಳಿಗೊಂದು ಓಟು’ ಎಂಬ ಆಶಯಕ್ಕೆ ತೊಂದರೆಯಾಗಿದೆ. ಇನ್ನು ರಾಜ್ಯಪಾಲರು 11 ಶಾಸಕರನ್ನು ನೇಮಿಸುವ ಪರಿಪಾಟ ಗಣ್ಯರಾಳ್ಕೆಗೆ ಎಡೆಮಾಡಿಕೊಡುತ್ತದೆ.

ಪರಿಹಾರವೇನು?
ಮೇಲ್ಮನೆಯ ಹೊಣೆಗಾರಿಕೆ ಮತ್ತು ಕೆಲಸಗಳನ್ನು ಗಮನಿಸಿದರೆ ಅದೊಂದು ಬಿಳಿಯಾನೆ ಎಂದುರಲ್ಲಿ ಎರಡುಮಾತಿಲ್ಲ. ಆದ್ದರಿಂದ ಮೇಲ್ಮನೆಯನ್ನು ಸಾರಾಸಗಟವಾಗಿ ಮುಚ್ಚಬಹುದು. ಆದರೆ, ಬೇರೆ ಬೇರೆ ಅರಿಮೆ ಮಾಳಗಳಲ್ಲಿ ಸಾದನೆಗಯ್ದವರು ಸರಿಯಾದ ಚುನಾವಣೆಯ ಮೂಲಕ ಆಯ್ಕೆಯಾಗಿ ಬರುವಂತಾದರೆ ಒಳ್ಳೆಯದೇ. ಕಟ್ಟಳೆಗಳನ್ನು ಕಟ್ಟುವಲ್ಲಿ ಮತ್ತು ಅವನ್ನು ಬಿರುಸಾಗಿ ಚರ್‍ಚಿಸಲು ಅವರ ಬಳಕೆಯಾಗಬಹುದು. ಆದರೆ ಅವರು ಮಂದಿಯಿಂದ ನೇರವಾಗಿ ಆಯ್ಕೆಯಾಗುವಂತಾಗಬೇಕು. ಹಾಗಾಗಿ, ಚುನಾವಣೆಯ ಸುದಾರಣೆಯನ್ನು ಮೊದಲು ಮೇಲ್ಮನೆಯಿಂದಲೇ ಆರಂಬಿಸಬಹುದು. ಮೇಲ್ಮನೆಯು ಅಶ್ಟೇನೂ ಮುಕ್ಯವಾದುದಲ್ಲ.

ಹಾಗಾಗಿ ಹೊಸ ಏರ್‍ಪಾಟುಗಳನ್ನು ಪರೀಕ್ಶಿಸಲು ಅದನ್ನು ಬಳಸಿಕೊಳ್ಳಬಹುದು. ಕೆಳಮನೆಯ ಶಾಸಕರು ಆಯ್ಕೆಯಾಗಿ ಬರುವ ಚುನಾವಣೆಯ ಏರ್‍ಪಾಟನ್ನು ಸದ್ಯಕ್ಕೆ ಇಂದಿನಂತೆಯೇ ಇಟ್ಟುಕೊಳ್ಳಬಹುದು. ಆದರೆ, ಮೇಲ್ಮನೆಯ ಶಾಸಕರನ್ನ ಆಳ್ಮೆಬದಿಗಳಿಗೆ ಬೀಳುವ ಶೇಕಡಾವಾರು ಮತಗಳ ಆದಾರದ ಮೇಲೆ ಆರಿಸಬಹುದು. ಅಂದರೆ, ಕಣದಲ್ಲಿ ಇರುವ ಪ್ರತಿಯೊಂದು ಆಳ್ಮೆಬದಿಯೂ 75 ಹುರಿಯಾಳುಗಳ ಪಟ್ಟಿಯನ್ನು ಚುನಾವಣೆಗೆ ಮುಂಚೆಯೇ ಬಿಡುಗಡೆ ಮಾಡಬೇಕು. 1 ರಿಂದ 75 ರವರೆಗಿನ ಹುರಿಯಾಳುಗಳ ಪಟ್ಟಿಯು ಮೊದಲ್ತನದ ಆದಾರದ ಮೇಲಿರಬೇಕು. ಅಂದರೆ ಕಣದಲ್ಲಿ ಮೂರು ಪಕ್ಶಗಳಿದ್ದಲ್ಲಿ, ಮೂರಕ್ಕೂ ತಲಾ 33 ಶೇಕಡಾವಾರು ಮತಗಳು ಬಿದ್ದಲ್ಲಿ, ಆಯಾ ಆಳ್ಮೆಬದಿಯ 75 ಮಂದಿಯ ಪಟ್ಟಿಯಲ್ಲಿ ಮೊದಲ 25 ಹುರಿಯಾಳುಗಳನ್ನು ಶಾಸಕರಾಗಿ ಆಯ್ಕೆಯಾದಂತೆ ಪರಿಗಣಿಸಬಹುದು.

ಮೇಲ್ಮನೆಯು ‘ತಡೆಯಿಲ್ಲದ ಮನೆ’. ಅಂದರೆ, ಹೆಚ್ಚುಕಡಿಮೆ ಎರಡು ವರ್‍ಶಗಳಿಗೊಮ್ಮೆ ಮೂರರ ಒಂದರಶ್ಟು ಶಾಸಕರು ಮೇಲ್ಮನೆಯಿಂದ ಹೊರನಡೆದು ಹೊಸ ಶಾಸಕರು ಸೇರಿಕೊಳ್ಳುತ್ತಾರೆ. ಮೇಲ್ಮನೆಯನ್ನು ಹೀಗಿರುವಂತೆ ‘ತಡೆಯಿಲ್ಲದ ಮನೆ’ಯಾಗೇ ಮುಂದುವರಿಸಬೇಕು ಎಂದಲ್ಲಿ 75 ಶಾಸಕರ ಆಯ್ಕೆಯನ್ನು ‘ಕರ್‍ನಾಟಕದಾದ್ಯಂತ ನಡೆವ’ ಬೇರೆ ಬೇರೆ ಚುನಾವಣೆಗಳಿಗೆ ವಿಂಗಡಿಸಬಹುದು. ಅದು ವಿದಾನಸಬೆಯ ಚುನಾವಣೆಯಾಗಿರಬಹುದು ಇಲ್ಲಾ ಲೋಕಸಬೆಯ ಚುನಾವಣೆಯಾಗಿರಬಹುದು ಇಲ್ಲಾ ನಗರಸಬೆ, ಪಂಚಾಯಿತಿ, ಬೋರ್‍ಡು, ಸಹಕಾರಗಳ ಚುನಾವಣೆಯಾಗಿರಬಹುದು. ಹೀಗೆ ಮಾಡುವುದರಿಂದ ಮೇಲ್ಮನೆಯ ಶಾಸಕರು ದಿಟವಾದ ಜನಪ್ರತಿನಿದಿಗಳಾಗಿರುತ್ತಾರೆ. ಇನ್ನು, BPAC ನಂತಹ ಸಮಿತಿಯವರು ಹುಟ್ಟುಹಾಕುತ್ತಿರುವ ಕಪಿಮುಶ್ಟಿಯಿಂದ ಜನಪ್ರತಿನಿದಿಗಳನ್ನು ಹೊರಗಿಡುವ ಬಗ್ಗೆಯೂ ಪರಿಹಾರ ಕಂಡುಕೊಳ್ಳಬೇಕು.

(ಚಿತ್ರ: http://kla.kar.nic.in/gov.asp)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: