ಕಡ್ಡಿಪುಡಿ: ಲಾಂಗುಗಳ ನಡುವೆ ಕಲೆಗಾರಿಕೆಯ ಗೆಲುವು

ಪ್ರಶಾಂತ್ ಇಗ್ನೇಶಿಯಸ್

kaddi-pudi_13430283196

ಕಡ್ಡಿ ಪುಡಿ ಚಿತ್ರದ ಮೊತ್ತಮೊದಲ ಸ್ಟಿಲ್ಸ್ ನೋಡಿದಾಗಿನಿಂದಲೂ ಸೂರಿ ಮತ್ತೆ ಪಾರ್‍ಮ್ ಗೆ ಬರುತ್ತಿದ್ದಾರೆ ಅನಿಸುತ್ತಿತ್ತು. ಚಿತ್ರ ನೋಡಿದ ಮೇಲೆ ಕಾತ್ರಿಯಾಯಿತು. ಸೂರಿ ಮತ್ತೆ ತಮ್ಮ ದುನಿಯಾ ಪಾರ್‍ಮ್ ಗೆ ಮರಳಿದ್ದಾರೆ, ಅದೂ ಬರ್‍ಜರಿಯಾಗಿ.

ಕಡ್ಡಿಪುಡಿ ಶುರುವಾದಾಗಿನಿಂದಲೂ ಸೂರಿ ಬೇಕಿದ್ದಕ್ಕಿಂತ ಹೆಚ್ಚೇ ಮವ್ನ ವಹಿಸಿದ್ದರೂ, ಹೆಸರು ಹಾಗೂ ಶಿವಣ್ಣನ ಕಾಂಬಿನೇಶನಿಂದಲೇ ಒಂದು ರೀತಿಯ ನಿರೀಕ್ಶೆ ಚಿತ್ರದ ಬಗ್ಗೆ ಇತ್ತು. ಶಿವಣ್ಣ ಹಾಗೂ  ಸೂರಿಯವರ ಹಿಂದಿನ ಸೋಲು ಕೂಡ ಕಡ್ಡಿಪುಡಿಯ ಮೇಲಿನ ಬರವಸೆಗೆ ತೊಡಕಾಗಲಿಲ್ಲ. ನೋಡುಗರು ಮವ್ನವಾಗಿಯೇ ಚಿತ್ರದ ಬಗ್ಗೆ ಕಾತುರ ನಿರೀಕ್ಶೆಗಳನ್ನು ಇಟ್ಟುಕೊಂಡಂತೆ ಅನಿಸುತ್ತಿತ್ತು. ಬದುಕಿನ ಕರಾಳ ಮುಕವನ್ನು ತೋರಿಸುತ್ತಾ, ಕತ್ತಲ ಬದುಕಿನ ಬೇರೆಬೇರೆ ಮಜಲುಗಳತ್ತ ಬೆಳಕು ಚೆಲ್ಲುತ್ತಾ ಒಂದು ನವಿರಾದ ಪ್ರೇಮ ಕತೆಯನ್ನು ಹೇಳುತ್ತಾ ’ದುನಿಯಾ’ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸೂರಿಯವರನ್ನು ಕನ್ನಡ ಚಿತ್ರ ನೋಡುಗರು ಅಂದಿನಿಂದಲೂ ಬರವಸೆ ಹಾಗೂ ಆಸೆಯ ಕಣ್ಣುಗಳಿಂದಲೇ ಗಮನಿಸುತ್ತಾ ಬಂದಿದ್ದಾರೆ. ದುನಿಯಾ, ಜಾಕಿಗಳಲ್ಲಿ ಸಿಕ್ಕ ಬರ್‍ಜರಿ ಗೆಲುವಿನ ಮಟ್ಟ ಇನ್ನಿತರ ಚಿತ್ರಗಳಲ್ಲಿ ತಾಕದಿದ್ದರೂ ಕನ್ನಡ ಚಿತ್ರ ನೋಡುಗ ಸೂರಿಯನ್ನು ಪೂರ್‍ತಿ ಮರೆಯಲಿಲ್ಲ ತೊರೆಯಲಿಲ್ಲ ಜರಿಯಲಿಲ್ಲ. ಸೂರಿ ಕೂಡ ಗೆಲುವಿಗೆ ಹಿಗ್ಗದೇ, ಸೋಲಿಗೆ ಕುಗ್ಗದೇ ಸಮಚಿತ್ತ ಕಾಪಾಡಿಕೊಂಡು ಬಂದವರು.

ಈಗ ಕಡ್ಡಿಪುಡಿ ಬಿಡುಗಡೆಯಾಗಿದೆ. ಬಾಕ್ಸ್ ಆಪೀಸ್ ರಿಪೋರ್‍ಟ್ ಕೂಡ ಚೆನ್ನಾಗಿದೆ. ಚಿತ್ರ ನಿಜಕ್ಕೂ ಕುಶಿ ಕೊಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇಂತಾ ಚಿತ್ರಗಳಿಂದ ದೂರವೇ ಉಳಿಯುವ ಪ್ಯಾಮಲಿ ಕ್ರವ್ಡ್ ಚಿತ್ರವನ್ನು ಅಪ್ಪಿಕೊಂಡಿದೆ ಒಪ್ಪಿಕೊಂಡಿದೆ. ಶಿವಣ್ಣ ಮತ್ತು ರಾದಿಕಾ ಪಂಡಿತ್ ಜೋಡಿ ಮೋಡಿ ಮಾಡುವಲ್ಲಿ ಗೆದ್ದಿದೆ. ಒಬ್ಬ ಒಳ್ಳೆಯ ವ್ಯಕ್ತಿ ರವ್ಡಿಯಾಗುವ ಇಲ್ಲವೇ ರವ್ಡಿ ಒಳ್ಳೆಯವನಾಗುವ ಕತೆಗಳಿಗೆ, ಚಿತ್ರಗಳಿಗೆ ನಮ್ಮಲ್ಲಿ ಬರವಿಲ್ಲ. ಅದೇ ತರನಾದ ಕತೆಯನ್ನು ಮೊನಚಾದ ಚಿತ್ರಕತೆ ಹಾಗೂ ಮನದಲ್ಲಿ ಉಳಿಯುವಂತ ಪಾತ್ರಗಳಿಂದ ಹೊಸತೊಂದು ಬಗೆಯಲ್ಲಿ ತೆರೆಯ ಮೇಲೆ ತಂದಿದ್ದಾರೆ ಸೂರಿ. ಅಶ್ಟಕ್ಕೂ ಚಿತ್ರದಲ್ಲಿ ಏನಿದೆ ಎಂದು ಹುಡುಕುತ್ತಾ ಹೊರಟಾಗ ಸಿಗುವುದು ಆ ಬಾವನೆಗಳ ತಿಕ್ಕಾಟವೇ. ಕತೆಯು ಬೂಗತ ಜಗತ್ತಿನದ್ದಾದರೂ ಇಲ್ಲಿ ಬಾವನೆಗಳೇ ಕೇಂದ್ರಬಿಂದು.

ಬದುಕಿನ ಒಂದು ಬಾಗವೇ ಎಂಬಶ್ಟು ಸಹಜವಾಗಿ ಪಾತಕ ಲೋಕದಲ್ಲಿ ತೊಡಗಿಸಿಕೊಂಡಿರುವ ಹ್ರುದಯವಂತಿಕೆಯುಳ್ಳ ವ್ಯಕ್ತಿಯೊಬ್ಬ ಎಲ್ಲವನ್ನೂ ಬಿಟ್ಟು ಹೊಸ ಬದುಕೊಂದನ್ನು ಅರಸಿ ಹೊರಟಾಗ ಎದುರಿಸುವ ಕಶ್ಟ, ದುಕ್ಕ, ಸವಾಲು, ತೊಳಲಾಟ ಹಾಗೂ ಇಕ್ಕಟ್ಟಿನ ಪರಿಸ್ತಿತಿಗಳ ಜೊತೆಗೆ ಅದನ್ನು ಅವನು ಹೇಗೆ ನಿಬಾಯಿಸುತ್ತಾನೆ ಎಂಬುದೇ ಚಿತ್ರದ ಕತಾವಸ್ತು. ಕೊನೆಯಲ್ಲಿ ಕೆಲವೊಂದು ಪ್ರಶ್ನೆಗಳನ್ನು ಹಾಗೇ ಉಳಿಸಿಟ್ಟು ಮತ್ತಶ್ಟು ಕುತೂಹಲ ಕೆರಳಿಸುತ್ತಾರೆ ಸೂರಿ. ಚಿತ್ರದ ತಿರುಳು ಇಶ್ಟೇ ಆದರೂ ಅದನ್ನು ತೆರೆಯ ಮೇಲೆ ಅದ್ಬುತವಾಗಿ ತೆರೆದಿಡುವಲ್ಲಿ ಸೂರಿ ಗೆದ್ದಿದ್ದಾರೆ ಎಂದು ಹೇಳಬಹುದು. ತೆರೆಯ ಮೇಲಿನ ನಟರಿಂದ ಹಿಡಿದು ತಾಂತ್ರಿಕ ವರ್‍ಗದವರೂ ಸೇರಿದಂತೆ, ಇಡೀ ಚಿತ್ರತಂಡವೇ ಚಿತ್ರದಲ್ಲಿ ಪೂರ‍್ತಿಯಾಗಿ ತೊಡಗಿಕೊಂಡಿರುವುದು ಚಿತ್ರದಲ್ಲಿ ಎದ್ದು ಕಾಣುತ್ತದೆ. ಇದಕ್ಕೆ ಸಾಕ್ಶಿ ಎಂಬಂತೆ ಚಿತ್ರದ ಮುಂದಾಳು ಪಾತ್ರದಾರಿಯೇನೋ ಎಂಬಶ್ಟು ಗಾಡವಾಗಿ ಕಾಡುವುದು ಹರಿಕ್ರಿಶ್ಣರ ಹಿನ್ನೆಲೆ ಸಂಗೀತ. ಚಿತ್ರ ನೋಡಿ ಹೊರ ಬಂದ ಮೇಲೂ ಚಿತ್ರದ ಗುಂಗಿನಲ್ಲೇ ಇರುವಂತೆ ಮಾಡುತ್ತದೆ ಹಿನ್ನೆಲೆ ಸಂಗೀತ.

ಇನ್ನೂ ನಟನೆಗೆ ಬಂದರೆ ಎಲ್ಲರೂ ಜಿದ್ದಿಗೆ ಬಿದ್ದಂತೆ ನಟಿಸಿದ್ದಾರೆ. ಅನಂತ್ ನಾಗ್ ಮತ್ತೊಮ್ಮೆ ಯಾವುದೇ ಪಾತ್ರವಾದರೂ ತಾನು ಮೇರು ನಟನೇ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವಿನಾಶ್ ಎಂದಿನಂತೆ ತಮ್ಮ ಪಾತ್ರದಲ್ಲಿ ಲೀಲಾಜಾಲ. ಇಂತಹ ಪಾತ್ರಗಳಲ್ಲಿ ಪಳಗಿಹೋಗಿರುವ ರಂಗಾಯಣ ರಗು ಈ ಚಿತ್ರದ ನಟನೆಯಲ್ಲಿ ತೋರಿರುವ ಸಂಯಯಮಕ್ಕೆ ಸೂರಿಗೆ ಅಬಿನಂದನೆ ಸಲ್ಲಬೇಕು. ರಾಜೇಶ್, ಶರತ್ ಲೋಹಿತಾಶ್ವ, ರೇಣುಕಾ ಪ್ರಸಾದ್, ಗಿರಿಜಾ ಲೋಕೇಶ್, ಚಂದ್ರು ಎಲ್ಲರೂ ಪಾತ್ರವೇ ಆಗಿ ಹೋಗಿದ್ದಾರೆ. ಪಾತ್ರಕ್ಕೆ ಬೇಕಾದ ಹೊಸ ಮುಕಗಳನ್ನು ತಂದು ಎದೆ ಜಲ್ಲೆನ್ನೆಸುವಂತೆ ತೆರೆಯ ಮೇಲೆ ತಂದಿಡುವುದರಲ್ಲಿ ಸೂರಿ ಪಳಗಿದ ಕಯ್. ಕಡ್ಡಿಪುಡಿಯಲ್ಲೂ ಅಂತಹ ಮರಿ ಪುಡಿ ರವ್ಡಿಗಳ ಪಾತ್ರಗಳು ನೆನಪುಳಿಯುತ್ತದೆ. ಅಂಜಿಕೆ ಹುಟ್ಟಿಸುತ್ತದೆ.

ಇನ್ನೂ ಪ್ರಮುಕ ಪಾತ್ರದಲ್ಲಿರುವ ಶಿವಣ್ಣ ಹಾಗೂ ರಾದಿಕಾ ಪಂಡಿತ್ ಪಾತ್ರಗಳನ್ನು ಆವರಿಸಿಕೊಂಡಿದ್ದಾರೆ. ಶಿವಣ್ಣನ ಅಬಿನಯ ಎಂದಿನಂತೆ ಉತ್ತಮವಾಗಿದ್ದರೆ ಅದಕ್ಕೆ ತಕ್ಕುದಾದ ಅಬಿನಯ ರಾದಿಕಾ ಪಂಡಿತ್‍ರದು. ಎಂತಹ ಪಾತ್ರಕ್ಕೂ ತಾನು ಸಿದ್ದ ಎನ್ನುವುದನ್ನು ಸಾಬೀತು ಪಡಿಸುತ್ತಲೇ ಬಂದಿರುವ ರಾದಿಕಾ, ಈ ಚಿತ್ರದಲ್ಲಿ ಬಾವನೆಗಳನ್ನು ಹೊರತಂದಿರುವ ಪರಿ ಅದ್ಬುತ. ಶಿವಣ್ಣ ಹಾಗೂ ರಾದಿಕಾ ನಡುವಿನ ದ್ರುಶ್ಯಗಳು ನಿಜಕ್ಕೂ ಚಿತ್ರದ ಹಯ್ಲಯ್ಟ್. ಒಂದು ಹಾಡು ಹಾಗೂ ಮತ್ತೊಂದು ದ್ರುಶ್ಯದಲ್ಲಿ ಬಂದು ಹೋಗುವ ಅಯ್ಂದ್ರಿತಾರದು ಸಣ್ಣ ಅವಕಾಶ. ನಾಯಕನ ಒಳ್ಳೆಯ ಮನಸ್ಸನ್ನು ಎತ್ತಿ ತೋರಿಸಲೆಂದೇ ಆ ಪಾತ್ರ ಕಟ್ಟಿದಂತಿದ್ದೂ, ಅದು ಅಶ್ಟೇನೂ ಪರಿಣಾಮಕಾರಿಯಾಗಿಲ್ಲ.

ಲಾಂಗ್ ಗಳ ಅತಿ ಬಳಕೆಯ ಬಗ್ಗೆ ಮಾತುಗಳು ಏಳಬಹುದಾದರೂ ಚಿತ್ರದ ಸಾಹಸ ದ್ರುಶ್ಯಗಳು ಪೂರಕವಾಗಿದ್ದು, ಉತ್ತಮವಾಗಿ ಮೂಡಿ ಬಂದಿದೆ. ಚಿತ್ರದ ಹಾಡುಗಳು ಚೆನ್ನಾಗಿದ್ದೂ ಚಿತ್ರದಲ್ಲಿ ಉತ್ತಮವಾಗಿ ಬಳಕೆಯಾಗಿದೆ. ಬುಡು ಬುಡಕೆ ಹಾಡು ಬಿಟ್ಟರೆ ಬೇರೆ ಹಾಡುಗಳು ಬಂದು ಹೋಗುವುದೇ ಗೊತ್ತಾಗದಶ್ಟು ಸರಾಗವಾಗಿ ಚಿತ್ರದ ಓಟದ ಜೊತೆಗೆ ಬೆರೆತುಕೊಂಡಿದೆ. ಶಿವಣ್ಣ ಲಾಂಗ್ ಹಿಡಿದು ಜನತುಂಬಿದ ರಸ್ತೆಯಲ್ಲಿ ದಾರಿ ಕಳೆದುಹೋದವನಂತೆ ನಡೆದುಕೊಂಡು ಬರುವುದು, ರಾದಿಕಾ ಪಂಡಿತ್ ತನ್ನ ಮನೆಯಲ್ಲಿ ಶಿವಣ್ಣನನ್ನು ಚೇಡಿಸುವುದು, ಅವಿನಾಶ್ ರವ್ಡಿಗಳ ರವ್ಂಡ್ ಅಪ್ ಮಾಡಿಸುವುದು, ರಂಗಾಯಣ ರಗು ಹಾಗೂ ಗೆಳೆಯರು ಮನೆಯ ರೂಮನ್ನು ಸಿಂಗಾರ ಮಾಡುವುದು, ಹೀಗೆ ನೆನಪಿನಲ್ಲಿ ಉಳಿಯುವಂತ ಹಲವಾರು ದ್ರುಶ್ಯಗಳನ್ನು ಚಿತ್ರದಲ್ಲಿ ಸೂರಿ ಮೂಡಿಸಿದ್ದಾರೆ. ಕನ್ನಡ ಚಿತ್ರರಂಗದ ಅಶ್ಟೂ ಪ್ರತಿಬಾನ್ವಿತರ ಸಂಗಮವಾಗಿರುವಾಗ, ತೊಡಗಿಸಿಕೊಂಡಿರುವಾಗ ಬೂಗತ ಲೋಕಕ್ಕೆ ಹೊರತಾದ ಕತೆಯ ಬಗ್ಗೆ ಮನಸ್ಸು ಮಾಡಬಹುದಿತ್ತೇನೋ ಎಂಬ ಆಸೆ ಮಿಂಚಿ ಮರೆಯಾಗುತ್ತದೆ.

ಆದರೂ, ವಾಸ್ತವವನ್ನು ತೋರಿಸುವಾಗಲೂ ಅತಿರೇಕಕ್ಕೆ ಹೋಗದ ಸಂಯಮದಲ್ಲಿ, ಮಾಸ್ ಕತೆಯನ್ನೇ ಕ್ಲಾಸಿಗೂ ಇಶ್ಟವಾಗುವ ರೀತಿಯಲ್ಲಿ, ಹಳೆಯದನ್ನೆ ಹೊಸತಾಗಿ ತೋರಿಸುವ ಕಸುಬುದಾರಿಕೆಯಲ್ಲಿ, ಲಾಂಗ್ ಗಳ ಹೊಳಪಿನ ನಡುವೆಯೂ ಬಾವನೆಗಳ ತಿಕ್ಕಾಟವೇ ಮೇಲುಗಯ್ ಪಡೆಯುವ ಕಲೆಗಾರಿಕೆಯಲ್ಲಿ ಕಡ್ಡಿಪುಡಿ ಗೆಲ್ಲುತ್ತದೆ. ಇಶ್ಟವಾಗುತ್ತದೆ.

(ಚಿತ್ರ: gallery.oneindia.in)

4 ಅನಿಸಿಕೆಗಳು

  1. ನಾಗೇಂದ್ರ ಅವರೇ,
    ನಿಮ್ಮ ಪ್ರಶ್ನೆಗಳಿಗೆ ಉತ್ತರ ಈ ಎರಡು ಕೊಂಡಿಗಳಲ್ಲಿದೆ. ಬಿಡುವಾದಾಗ ಓದಿರಿ.
    1. https://honalu.net/%E0%B2%8E%E0%B2%B2%E0%B3%8D%E0%B2%B2%E0%B2%B0%E0%B2%95%E0%B2%A8%E0%B3%8D%E0%B2%A8%E0%B2%A1/
    2. https://honalu.net/2013/06/21/%E0%B2%8E%E0%B2%B2%E0%B3%8D%E0%B2%B2%E0%B2%B0%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6-%E0%B2%95%E0%B2%9F%E0%B3%8D%E0%B2%9F%E0%B2%B2%E0%B3%86%E0%B2%97%E0%B2%B3%E0%B3%81/

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: