ತಾಯ್ನುಡಿಯ ಮಹತ್ವ ಗೊತ್ತಿಲ್ಲದ ನಾ.ಮೂ.

ಪ್ರಿಯಾಂಕ್ ಕತ್ತಲಗಿರಿ.

024_murthy

ಇನ್ಪೋಸಿಸ್ ಕಂಪನಿಯನ್ನು ಕಟ್ಟಿ ಬೆಳೆಸಿದ್ದ ಎನ್. ಆರ್. ನಾರಾಯಣ ಮೂರ‍್ತಿಯವರು ಮೊನ್ನೆ ಒಂದು ಕಾರ‍್ಯಕ್ರಮದಲ್ಲಿ ಮಾತನಾಡುತ್ತಾ, “ರಸ್ತೆ, ನೀರು ಮತ್ತು ಇಂಗ್ಲೀಶ್ ಮಾದ್ಯಮ ಶಾಲೆಗಳಿದ್ದರೆ ಉದ್ದಿಮೆಗಳು ಬೆಳೆಯುತ್ತವೆ” ಎಂದು ಹೇಳಿರುವುದು ಸುದ್ದಿಹಾಳೆಗಳಲ್ಲಿ ಮೂಡಿ ಬಂದಿದೆ. ತಮ್ಮ ಮೊದಲ ಹಂತದ ಕಲಿಕೆಯನ್ನು ಕನ್ನಡ ಮಾದ್ಯಮದಲ್ಲೇ ನಡೆಸಿದ್ದ ಶ್ರೀ ನಾರಾಯಣ ಮೂರ‍್ತಿಯವರು, ಈ ಮುಂಚೆಯೂ ಹಲವು ಬಾರಿ ಇಂಗ್ಲೀಶ್ ಮಾದ್ಯಮ ಶಾಲೆಗಳೊಂದೇ ಏಳಿಗೆಗೆ ಹಾದಿ ಎಂಬರ‍್ತದಲ್ಲಿ ಮಾತನಾಡಿದ್ದಿದೆ.

ಅಯ್.ಟಿ. ಕಂಪನಿಗಳ ಬೇಡಿಕೆಗಳೇ ಇವು

ಬೆಂಗಳೂರಿನಲ್ಲಿ ಸಾಕಶ್ಟು ಮಟ್ಟದಲ್ಲಿ ಬೆಳೆದು ನಿಂತಿರುವ ಅಯ್.ಟಿ. ಕಂಪನಿಗಳ ಹಲದಿನಗಳ ಬೇಡಿಕೆಯೇ ಇವು. ಒಳ್ಳೆಯ ರಸ್ತೆ ಮತ್ತು ನೀರಿನ ಏರ‍್ಪಾಡು ಉದ್ದಿಮೆಗಳ ಬೆಳವಣಿಗೆಗೆ ಒಳಿತು ಮಾಡಬಲ್ಲವು ಎಂಬುದು ದಿಟ. ಸುಳುವಾಗಿ ಓಡಾಡಲು ಒಳ್ಳೆಯ ರಸ್ತೆಗಳಿಲ್ಲದಿದ್ದರೆ, ನೀರಿನ ಏರ‍್ಪಾಡು ಸರಿಯಾಗಿಲ್ಲದಿದ್ದರೆ ಅವು ಉದ್ದಿಮೆಗಳ ಬೆಳವಣಿಗೆಗೆ ತೊಡಕಾಗುತ್ತವೆ.

ಇಂಗ್ಲೀಶ್ ಮಾದ್ಯಮ ಶಾಲೆಗಳು ಬೇಕು ಎಂಬ ಬೇಡಿಕೆಯು ಅಯ್.ಟಿ. ಕಂಪನಿಗಳಿಗೆ ಮುಂಬರುವ ದಿನಗಳಲ್ಲಿ ದುಡಿಮೆಗಾರರನ್ನು ಬೆಳೆಸಿಕೊಡುವ ಬೇಡಿಕೆಯೇ ಆಗಿದೆ. ಈ ಕಂಪನಿಗಳಲ್ಲಿ ಕೆಲಸ ಮಾಡಲು ಇವತ್ತಿನ ದಿನ ಇಂಗ್ಲೀಶಿನ ಅರಿವು ಬೇಕಾಗಿರುವುದರಿಂದ, ಇಂಗ್ಲೀಶ್ ಮಾದ್ಯಮ ಶಾಲೆಗಳೊಂದೇ ಜನರಲ್ಲಿ ಇಂಗ್ಲೀಶಿನ ಅರಿವು ಮೂಡಿಸಬಲ್ಲವು ಎಂಬ ನಂಬಿಕೆ ಮೂರ‍್ತಿಯವರದು.

ಇಂಗ್ಲೀಶಿನ ಅರಿವೊಂದೇ ಸಾಕಾ?

ಬೆಂಗಳೂರಿನಲ್ಲಿರುವ ಅಯ್.ಟಿ. ಕಂಪನಿಗಳಲ್ಲಿ ನಡೆಯುತ್ತಿರುವ ಕೆಲಸಗಳನ್ನು ಮೂರು ಬಗೆಯವಾಗಿ ನೋಡಬಹುದು. ಒಂದನೆಯದು, ಬೇರೆ ಬೇರೆ ಉದ್ದಿಮೆಗಳನ್ನು ನಡೆಸುತ್ತಿರುವ ಕಂಪನಿಗಳಿಗೆ ಅವರ ದಿನದಿನದ ಕೆಲಸಗಳನ್ನು ಸರಾಗವಾಗಿ ನಡೆಸಿಕೊಳ್ಳಲು ಆಗುವಂತೆ ನೆರವಾಗುವುದು.

ಎತ್ತುಗೆಗೆ, ಸುಮಾರು ಅರವತ್ತು ಸಾವಿರ ಕೆಲಸಗಾರರನ್ನು ಹೊಂದಿರುವ ಹಲನಾಡಿನ ಕಂಪನಿಯೊಂದಕ್ಕೆ, ಆ ಕೆಲಸಗಾರರ ಸಂಬಳಕ್ಕೆ ಸಂಬಂದಪಟ್ಟಂತೆ ಅವರವರಿರುವ ನಾಡಿಗೆ ತಕ್ಕಂತೆ ತೆರಿಗೆ ಲೆಕ್ಕಾಚಾರ ಮಾಡಿಕೊಡುವುದು. ಇದೊಂದು ಸೇವೆಯಾದ್ದರಿಂದ, ಅಯ್.ಟಿ. ಮೂಲಕ ನೀಡಲಾಗುವ ಸೇವೆ ಎಂದು ಇದನ್ನು ಕರೆಯಲಾಗುತ್ತದೆ.

ಎರಡನೆಯದು, ಕರೆಕೇಂದ್ರಗಳು (call centre). ಇಲ್ಲಿ ನಡೆಯುವ ಕೆಲಸಗಳು ಹೆಚ್ಚಾಗಿ ಕೊಳ್ಳುಗರೊಡನೆ ನೇರವಾಗಿ ಪೋನಿನಲ್ಲಿ ಮಾತನಾಡಿ ಕೊಳ್ಳುಗರೆದುರಿಸುತ್ತಿರುವ ತೊಂದರೆಗಳನ್ನು ನಿವಾರಿಸುವಲ್ಲಿ ನೆರವಾಗುವುದೇ ಆಗಿರುತ್ತದೆ. ಮೂರನೆಯದು, ಸಾಪ್ಟ್ ವೇರಿನಲ್ಲಿ ಬಗೆಬಗೆಯ ಉತ್ಪನ್ನಗಳನ್ನು ಕಟ್ಟುವ ಕೆಲಸ. ಇದನ್ನು ಎಂಜಿನಿಯರುಗಳು ಸೇರಿ ಮಾಡುತ್ತಾರೆ. ಎತ್ತುಗೆಗೆ, ಅಲೆಯುಲಿ (mobile phone) ಒಂದನ್ನು ಕಟ್ಟುವ ಕೆಲಸ.

ಬೆಂಗಳೂರಿನಲ್ಲಿರುವ ಕಂಪನಿಗಳಲ್ಲಿ ಈ ಮೂರು ಬಗೆಯ ಕೆಲಸಗಳನ್ನು ಮಾಡಲೂ ಇಂಗ್ಲೀಶಿನ ಅರಿವಿರಬೇಕು. ಆದರೆ, ಬರೀ ಇಂಗ್ಲೀಶಿನ ಅರಿವೊಂದೇ ಇದ್ದರೆ ಸಾಕಾಗುವುದಿಲ್ಲ. ಹಾಗೆ ಸಾಕಾಗುವುದಾಗಿದ್ದರೆ, ಕೆಲಸಕ್ಕೆ ಸೇರಿಸಿಕೊಳ್ಳುವ ಮುಂಚೆ, ಕೆಲಸಕ್ಕೆ ಸೇರಬಯಸುವವರನ್ನು ಸಂದರ‍್ಶನ ಮಾಡುವ ಪರಿಪಾಟವೇ ಬೆಳೆಯುತ್ತಿರಲಿಲ್ಲ.

ವಿಶಯದ ಅರಿವು ಚೆನ್ನಾಗಿ ಮೂಡುವುದೇ ತಾಯ್ನುಡಿಯಲ್ಲಿ ಕಲಿಕೆ ನಡೆದಾಗ

ನಾಡಿನ ಎಲ್ಲಾ ಮಂದಿಯ ಕಲಿಕೆ ಚೆನ್ನಾಗಿ ನಡೆಯಬೇಕು ಎಂದರೆ ಅಂತಹ ಕಲಿಕೆಯೇರ‍್ಪಾಡು ಹೇಗಿರಬೇಕು ಎಂಬ ಬಗ್ಗೆ ಹಲವಾರು ಸಂಶೋದನೆಗಳು ಈಗಾಗಲೇ ನಡೆದಿವೆ. ಈ ಎಲ್ಲಾ ಸಂಶೋದನೆಗಳೂ ಸಾರುವ ಒಂದೇ ದಿಟವೆಂದರೆ, ಮೊದಲ ಹಂತದ ಕಲಿಕೆ ತಾಯ್ನುಡಿಯಲ್ಲಿದ್ದಾಗ ಮಾತ್ರ ಕಲಿಕೆ ಚೆನ್ನಾಗಿ ಸಾಗುತ್ತದೆ ಎಂಬುದು. ಕೆರೋಲ್ ಬೆನ್ಸನ್ ಎಂಬುವರು ಬರೆದಿರುವ ಈ ಅರಕೆ ಹಾಳೆಯಲ್ಲಿ, ಮಕ್ಕಳ ಪರಿಸರದಲ್ಲಿಲ್ಲದ ನುಡಿಯಲ್ಲಿ ಕಲಿಸುವುದನ್ನು, ಈಜು ಕಲಿಸದೇ ಮಕ್ಕಳನ್ನು ನೀರಿನಲ್ಲಿ ಹಿಡಿದಿಟ್ಟಂತೆ (analogous to holding learners under water without teaching them how to swim) ಎಂದು ಬಗೆದಿದ್ದಾರೆ.

ವಿಶಯದ ಅರಿವು ಮಕ್ಕಳಲ್ಲಿ ಚೆನ್ನಾಗಿ ಮೂಡಿತೆಂದರೆ, ಅವರ ಕಲಿಕೆಗೆ ಗಟ್ಟಿ ಅಡಿಪಾಯ ಬಿದ್ದಂತೆ. ಮುಂದಿನ ದಿನಗಳಲ್ಲಿ ಅವರು ದೊಡ್ಡ ದೊಡ್ಡ ವಿಶಯಗಳನ್ನೂ ಅರಗಿಸಿಕೊಳ್ಳಬಲ್ಲರು. ಕಲಿಕೆಯ ಬಗೆಗಿನ ಈ ಅರಿಮೆಯನ್ನು ಚೆನ್ನಾಗಿ ಮಯ್ಗೂಡಿಸಿಕೊಂಡ ನಾಡುಗಳು, ತಮ್ಮ ತಮ್ಮ ಕಲಿಕೆಯೇರ‍್ಪಾಡನ್ನು ತಮ್ಮ ತಮ್ಮ ನುಡಿಗಳಲ್ಲೇ ಕಟ್ಟಿಕೊಂಡಿವೆ. ಮತ್ತು ಅವೆಲ್ಲಾ ನಾಡುಗಳೂ ಬಡತನವನ್ನು ತೊಡೆದು ಹಾಕಿ, ಎಲ್ಲರಿಗೂ ಸಮಾನ ಅವಕಾಶ ಒದಗಿಸಿರುವ ಮುಂದುವರೆದ ನಾಡುಗಳು ಎನಿಸಿಕೊಂಡಿವೆ. ಎತ್ತುಗೆಗೆ ಜಪಾನು, ಜರ‍್ಮನಿ, ಪ್ರಾನ್ಸ್, ಇಂಗ್ಲೆಂಡು, ತೆಂಕಣ ಕೊರಿಯಾ. ಇವೆಲ್ಲಾ ನಾಡುಗಳೂ, ನಾರಾಯಣ ಮೂರ‍್ತಿಯವರು ಹೇಳುತ್ತಿರುವ ದಾರಿಯಲ್ಲಿ ಸಾಗದೆಯೇ ಬಡತನವನ್ನು ತೊಡೆದು ಹಾಕಿವೆ.

ಹಾಗಾದರೆ ಇಂಗ್ಲೀಶ್ ಮಾದ್ಯಮದಲ್ಲಿ ಓದುವವರೆಲ್ಲಾ ದಡ್ಡರಾ?

ತಾಯ್ನುಡಿಯಲ್ಲಿ ಕಲಿಕೆ ನಡೆಸುವುದೇ ಮೇಲು ಎಂಬ ವಯ್ಗ್ನಾನಿಕ ವಿಶಯವನ್ನು ಮುಂದಿಟ್ಟಾಗ, ಹಲವರಲ್ಲಿ ಈ ಕೇಳ್ವಿ ಮೂಡುವುದುಂಟು. ಇಂಗ್ಲೀಶ್ ಮಾದ್ಯಮದಲ್ಲಿ ಓದಿ ಒಳ್ಳೆಯ ಗಳಿಕೆ ಪಡೆಯುತ್ತಿರುವ ಹಲವರು ಕಣ್ಣಮುಂದೆಯೇ ಇರುವಾಗ, ಬೇರೊಂದು ನುಡಿಯಲ್ಲಿ ಕಲಿಕೆ ನಡೆಸುವುದು ಮಕ್ಕಳ ಜಾಣತನದ ಬೆಳವಣಿಗೆಗೆ ಅಡ್ಡಗಾಲು ಎಂಬ ಮಾತಿನ ಮೇಲೆ ಹಲವರಿಗೆ ನಂಬಿಕೆ ಬರುವುದಿಲ್ಲ. ಹಾಗಾಗಿಯೇ ಇವತ್ತಿಗೂ ಹೆಚ್ಚು ಪೀಸು ತೆತ್ತಿಯೂ ತಮ್ಮ ಮಕ್ಕಳನ್ನು ಇಂಗ್ಲೀಶ್ ಮಾದ್ಯಮ ಶಾಲೆಗಳಲ್ಲೋದಿಸಲು ತಂದೆ-ತಾಯಂದಿರು ಮುಗಿಬೀಳುತ್ತಿರುವುದು.

ಇಂಗ್ಲೀಶ್ ಮಾದ್ಯಮದಲ್ಲಿ ಓದಲು ತೊಡಗುವವರಲ್ಲೂ ಒಂದಶ್ಟು ಮಂದಿ ಅದಕ್ಕೆ ಹೊಂದಿಕೊಂಡು ಕಲಿಯುತ್ತಾ ಸಾಗಬಲ್ಲರು. ಆದರೆ, ಹಾಗೆ ಕಲಿಯಬಲ್ಲವರ ಎಣಿಕೆ ಎಂದಿಗೂ ಸ್ವಲ್ಪಮಾತ್ರವಾಗಿರುತ್ತದೆ. ಹಾಗಾಗಿ, ಇಂಗ್ಲೀಶ್ ಮಾದ್ಯಮದಲ್ಲೇ ಎಲ್ಲರೂ ಕಲಿಯತೊಡಗಿದರೂ, ಅದೊಂದು ಎಲೀಟ್ (elite) ಗುಂಪನ್ನು ತಯಾರಿಸಬಲ್ಲುದೇ ಹೊರತು, ಎಲ್ಲರಿಗೂ ಒಳ್ಳೆಯ ಕಲಿಕೆ ಒದಗಿಸುವಲ್ಲಿ ಸೋಲುತ್ತದೆ. ಇಂತಹ ಎಲೀಟ್ ಗುಂಪಿನಶ್ಟು ಜನರಿಗೆ ಮಾತ್ರ ಕೆಲಸ ಕೊಡಲು ಅಯ್.ಟಿ. ಕಂಪನಿಗಳಿಗೆ ಆಗುತ್ತದೆ, ಅವಕ್ಕೆ ಅಶ್ಟು ಜನರಿಗೆ ಮಾತ್ರ ಕೆಲಸ ಕೊಡಬಲ್ಲ ಶಕ್ತಿಯಿರುವುದು.

ಒಂದು ಕೋಟಿ ಹತ್ತಿರ ಮಂದಿಯೆಣಿಕೆ ಹೊಂದಿರುವ ಬೆಂಗಳೂರಿನಲ್ಲಿ, ಒಂದು ಅಂದಾಜಿನಂತೆ ಅಯ್ದು ಲಕ್ಶ ಜನರು ಅಯ್.ಟಿ. ಕಂಪನಿಗಳಲ್ಲಿ ದುಡಿಯುತ್ತಿದ್ದಾರೆ. ಈ ಅಂಕಿ-ಅಂಶ ನೋಡಿದಾಗ ಒಂದು ಊರಿನ 5% ಮಂದಿಗೆ ಮಾತ್ರ ಕೆಲಸ ಕೊಡಬಲ್ಲಶ್ಟು ದೊಡ್ಡವು ಈ ಕಂಪನಿಗಳು ಎಂಬುದರ ಅರಿವಾಗುತ್ತದೆ. ಮಿಕ್ಕವರು ಒಳ್ಳೆಯ ಕಲಿಕೆಯಿಂದ ವಂಚಿತರಾಗಿಯೇ ಉಳಿದು ತಮ್ಮ ಬದುಕು ಸಾಗಿಸಬೇಕಾಗುತ್ತದೆ.

ನಾರಾಯಣ ಮೂರ‍್ತಿಯವರು ಹೇಳುವುದು, ಈ ಎಲೀಟ್ ಗುಂಪಿನ ಜನರೇ ಉಳಿದವರೆಲ್ಲರನ್ನು ಬಡತನದಿಂದ ಮೇಲೆತ್ತುತ್ತಾರೆ ಎಂದು. 5% ಮಂದಿ ಚೆನ್ನಾಗಿ ದುಡಿಮೆ ನಡೆಸಿದರೆ, ಅವರ ಬೇಕುಗಳನ್ನು ಪೂರಯ್ಸಲು ಇನ್ನಶ್ಟು ಉದ್ದಿಮೆಗಳು ಹುಟ್ಟುವ ಮೂಲಕ ಇನ್ನೂ ಹೆಚ್ಚಿನವರಿಗೆ ದುಡಿಮೆ ದಕ್ಕುತ್ತದೆ ಎಂಬುದು ಮೇಲ್ನೋಟಕ್ಕೆ ಕಾಣುವ ದಿಟ. ಆದರೆ, ಹೀಗೆ ಒಂದೆರಡು ಬಗೆಯ ಉದ್ದಿಮೆಗಳನ್ನು ಮಾತ್ರ ನೆಚ್ಚಿಕೊಂಡು ಬಡತನ ಹೋಗಲಾಡಿಸಿದ ನಾಡುಗಳು ಯಾವುದಾದರೂ ಇವೆಯಾ ಎಂದು ಹುಡುಕಿದರೆ, ಒಂದೂ ಸಿಗುವುದಿಲ್ಲ.

ಕಣ್ಣಿಗೆ ಬಿದ್ದರೂ ಅವು ಹಾಂಗ್ ಕಾಂಗ್ ಅತವಾ ಸಿಂಗಾಪುರದಂತಹ ಊರುಗಳಾಗಿರುತ್ತವೆಯೇ ಹೊರತು ಕರ‍್ನಾಟಕದಂತಹ ಹಬ್ಬಿನಿಂತ ನಾಡುಗಳ್ಯಾವುವೂ ಇಲ್ಲ. ಎಲ್ಲರಿಗೂ ಜನರ ನುಡಿಯಲ್ಲೇ ಒಳ್ಳೆಯ ಕಲಿಕೆ ನೀಡುವ ಮೂಲಕ ಬಡತನವನ್ನು ಹೋಗಲಾಡಿಸಿದ ನಾಡುಗಳನ್ನು ಹುಡುಕಿದರೆ, ಹಲವಾರು ನಾಡುಗಳು ಸಿಕ್ಕಿಬಿಡುತ್ತವೆ.

ಬಂದೆರಗಬಹುದಾದ ಗಂಡಾಂತರ

ಮೇಲೆ ಮಾತನಾಡಿದಂತೆ ಮೂರು ಬಗೆಯ ಕೆಲಸಗಳು ಇವತ್ತಿನ ಅಯ್.ಟಿ. ಕಂಪನಿಗಳಲ್ಲಿ ದಂಡಿಯಾಗಿ ಕಾಣಸಿಗುತ್ತವೆ. ಇವುಗಳಲ್ಲಿ ಮೊದಲೆರಡು ಬಗೆಯವು ಚಳಕದರಿಮೆ (technology) ಬೆಳೆದಂತೆ, ಆವಿಯಾಗಿ ಹೋಗಬಹುದು. ಒಳ್ಳೆಯ ಚಳಕದಿಂದ ತಯಾರಿಸಿದ ರೋಬಾಟುಗಳು ಬಂದರೆ, ಬಿಪಿಒ ಕೆಲಸಗಳನ್ನೂ ಮತ್ತು ಕರೆಕೇಂದ್ರದ ಕೆಲಸಗಳನ್ನೂ ಅವೇ ಮಾಡಬಲ್ಲವು. ಈ ಒಂದು ಸುದ್ದಿಯಂತೆ, ಈಗಾಗಲೇ ಅಂತಹದೊಂದು ಬೆಳವಣಿಗೆ ರೂಪುಗೊಳ್ಳುತ್ತಿದೆ. ಹಾಗಾಗಿದ್ದೇ ಆದಲ್ಲಿ, ಇಂಗ್ಲೀಶನ್ನು ಮಾತನಾಡಬಲ್ಲ ಎಲೀಟ್ ಗುಂಪು ಕೂಡ ಕೆಲಸ ಕಳೆದುಕೊಳ್ಳುತ್ತದೆ. ಆಗ ದೊಡ್ಡ ಪೆಟ್ಟು ಬೀಳುವುದು ಬಡತನ ಹೋಗಲಾಡಿಸುವ ಕೆಲಸಕ್ಕೇನೆ.

ನಾವು ನಡೆಯಬೇಕಿರುವುದು ಮೂರ‍್ತಿಯವರು ಹೇಳುತ್ತಿರುವ ದಾರಿಯಲ್ಲಲ್ಲ. ಜಗತ್ತಿನ ಹಲವರು ನಡೆಸಿದ ಸಂಶೋದನೆಗಳು ಸಾರುತ್ತಿರುವ ದಿಟವೇ ನಮಗೆ ದಾರಿದೀಪವಾಗಬೇಕಿದೆ.

ಚಿತ್ರ: images.businessweek.com

ನಿಮಗೆ ಹಿಡಿಸಬಹುದಾದ ಬರಹಗಳು

6 Responses

 1. Abdul Rehman says:

  ಇದು ಸರಿ, ಕರ್ನಾಟಕದಲ್ಲಿ ಹುಟ್ಟಿ ಬೆಳೆದ ಕಂಪೆನಿಯೆಂಬುದೊಂದನ್ನು ಬಿಟ್ಟರೆ, Infosys ತಯಾರಿಸಿರುವ ಕನ್ನಡ ಸಾಫ಼್ಟ್’ವೇರ್’ಗಳು ಪ್ರಮುಖವಾಗಿ ಯಾವುವೂ ಇಲ್ಲವೆಂದು ನನ್ನ ಭಾವನೆ.

 2. Priyank-OLLE baraha.My 2 cents:
  1. A lot of NRN’s thinking was influenced by a few bitter experiences in Communist East Europe and the red tapism of the initial socialist mode India. English speaking markets like USA/UK came as a breath of fresh air to the early Infosys team and in the initial days were the only markets. These guys have got fixated unfortunately not just to the idealogies from these countries but also to the language. Explains why we are struggling in bigger markets like Germany/France/Japan while other IT majors have zoomed ahead with better Glocal approach.
  2. Till the Infosys employee strength touched 1500-2000, most of the recruits were from within Karnataka and I believe there was no fascination to recruit from other states. However once mass recruitments started in the late 90’s and early 2000, our supply of Engineers ( 30000 out of the 45000 seats) was smaller compared to TN and AP which overnight ramped up the number of colleges and seats there. KA and MH missed the bus. This meant a lot of Senior folks who would be interacting with NRN after 1995 were non Kannadigas. Many times this could have triggered a question if our Supply was the problem ?
  3.As an optimist, I still believe NRN has got a lot of fondness for KA, but his thought process is incorrect. We need strong people who can convince and put him on the right track instead of themselves getting swayed by his media savvy outbursts. This should happen through personal interactions and not by people who idolise him but those who know him for what he is good at and what he shouldn’t be getting into.
  4.NRN like many others may be venturing into the Education sector shortly-Can we push for Model Kannada Schools here that can reach out to the larger public?????????????????

 3. ನೀವು ಹೇಳಿದ್ದು ನಿಜ. ಬರಿದೇ ಇಂಗ್ಲಿಷ್ ಮಾಧ್ಯಮಕ್ಕೆ ಮಣೆ ಹಾಕುತ್ತಾ ಹೊರಟು ಅಗಾಧವಾದ ಕನ್ನಡ ಸಾಹಿತ್ಯವನ್ನು ಓದುವವರೇ ಇಲ್ಲವಾಗಿದೆ. ಬೆಂಗಳೂರಿನಲ್ಲಿ ಇವತ್ತಿನ ಕನ್ನಡದ ಪರಿಸ್ಠಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ನಾರಾಯಣ ಮೂರ್ತಿ ಒಬ್ಬ ಉದ್ಯಮಿಯೇ ಹೊರತು ಅವರು ಕನ್ನಡಕ್ಕಾಗಿ ಏನೂ ಮಾಡಿಲ್ಲ ಎಂಬುದು ನನ್ನ ಅನಿಸಿಕೆ. ನಿಜವಾಗಿ ಹೇಳಬೇಕೆಂದರೆ ಅವರು ಕನ್ನಡವನ್ನೂ ಕೂಡ ಸರಿಯಾಗಿ ಮಾತನಾಡುವುದಿಲ್ಲ. ಅರ್ಧ ಹಿಂದಿ ಇನ್ನರ್ಧ ಇಂಗ್ಲಿಷ್ accent ನಲ್ಲಿ ಮಾತನಾಡುತ್ತಾರೆ. ಬೆಳಗಾವಿಯ ಸಮ್ಮೇಳನದ ವಿಡಿಯೊ ನೋಡಿದರೆ ಅವರ ಕನ್ನಡ ಭಾಷೆಯ ಮೇಲಿನ ಹಿಡಿತ ಗೊತ್ತಾಗುತ್ತದೆ. ಅವರಿಗೆ ಮಾತೃಭಾಷೆ ಆ ಮಟ್ಟಿಗೆ ಮರೆತು ಹೋಗಿದೆಯಾ?!! ಕನ್ನಡಿಗರಿಗೆ ನಮ್ಮ ಭಾಷೆಯ ಮೇಲೆ ಅಭಿಮಾನ ಕಡಿಮೆ. ನಾವೇ ಬೇರೆ ಭಾಷೆಯಲ್ಲಿ ಮಾತಾಡಿಬಿಡುತ್ತೇವೆ. ಅದೇ ತಮಿಳರು, ಮಲಯಾಳಿಗಳು ಹಾಗಲ್ಲ. ಬೆಂಗಳೂರಿನಲ್ಲಿ ಹುಟ್ಟಿಬೆಳೆದು, ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಲ್ಲೇ ನೆಲೆಸಿರುವ ಎಷ್ಟೊ ಜನ ಮಲಯಾಳಿಗಳು ಇವತ್ತಿಗೂ ಕನ್ನಡವನ್ನು ಮಾತನಾಡುವುದಿಲ್ಲ! ಅದೇ ಚನ್ನೈನಲ್ಲೋ, ಕೊಚಿನ್ ನಲ್ಲೋ ಒಂದು ವರ್ಷ ಇರಬೇಕೆಂದರೆ ಅಲ್ಲಿನ ಭಾಷೆ ಕಲಿಯುವುದು ಅನಿವಾರ್ಯವಾಗುತ್ತದೆ. ಇದೆಲ್ಲದರ ಮೇಲೆ ನಾವು ಇಂಗ್ಲಿಷ್ ಗೆ ಮಣೆ ಹಾಕುತ್ತೇವೆ!

 4. vmjoshi says:

  N R Narayan Murthy is a born business man. He speaks what he requires to run an IT business. When he says something about the language of instruction in schools, we must understand he wants English speaking guys to work in his company. There is nothing wrong in his views, as a business man.

  Why do everone expect NRN to speak in the way of a Kannada protagonist? There is no dearth for such guys. Leave NRN to express his views freely, Dont bother much.

 5. ybharath77 says:

  Vmjoshi,
  N R Narayan Murthy is just not just a business man but fundamentally an engineer and he needs to think scientifically. He must prove to linguists, socioloigists and educationists wrong if he has a valid point about medium of instruction in education instead just talking about his business requirements.

 6. prasannare says:

  ಕನ್ನಡದ ನೆಲ, ಜನ, ನೀರು ಹೀಗೆ ಎಲ್ಲಾ ಸವಲತ್ತುಗಳು ಬೇಕು ಇಂಥಾ ಜನಕ್ಕೆ. ಇವರಿಗೆ ಸಂಸ್ಕೃತಿ ಎಂದರೆ ಬರೀ ಇಂಗ್ಲಿಷ್ ಮತ್ತು ಫೋನ್ ಕರೆ ಮಾಡಿ ಕೆಲಸ ಮಾಡಿಸಿ ಕೊಳ್ಳುವ ಉತ್ತರದ ರಾಜಕಾರಣಿಗಳ ಹಿಂದಿ. ಇಂಥ ಆಷಾಡಭೂತಿ ವ್ಯಾಪಾರಿಗಳಿಂದ ಸಂಸ್ಕೃತಿ ಬೆಳೆಯುತ್ತೆ, ಭಾಷೆ ಉಳಿಯುತ್ತೆ ಅನ್ನೋದೆಲ್ಲ ಭ್ರಮೆ ಅಷ್ಟೇ.

ಅನಿಸಿಕೆ ಬರೆಯಿರಿ:

%d bloggers like this: