ಬೆಳಕಿನ ಎಳೆಗಳು

– ಬರತ್ ಕುಮಾರ್.

ನಮಗೆಲ್ಲರಿಗೂ ಗೊತ್ತಿರುವ ಹಾಗೆ ಅತಿ ಹೆಚ್ಚು ತಿಳಿಹವನ್ನು ಕೊಂಡೊಯ್ಯುವುದುಬೆಳಕಿನ ಎಳೆಗಳ ಹೆಗ್ಗಳಿಕೆ. ಇದರಿಂದಾಗಿಯೇ ಎಳೆಗಳು ಗೆಂಟರುಹಿನ ಚಳಕದಲ್ಲಿ ಕ್ರಾಂತಿಯನ್ನು ಉಂಟು ಮಾಡಿದೆ. ಏಕೆಂದರೆ ತಿಳಿಹವನ್ನು ಬೆಳಕನ್ನಾಗಿ ಮಾರ‍್ಪಡಿಸಿದ ಮೇಲೆ ಅದನ್ನು ಈ ಎಳೆಗಳ ಮೂಲಕ ಕಳಿಸುವುದು ಅಡಿಮಟ್ಟದಲ್ಲಿ ತಾಮ್ರದ ತಂತಿಗಳಲ್ಲಿ ಬಳಸುವ ಚಳಕಕ್ಕಿಂತ ಬೇರೆಯಾಗಿದೆ ಯಾಕಂದರೆ ತಾಮ್ರದ ತಂತಿಗಳಲ್ಲಿ ತಿಳಿಹವನ್ನು ಮಿಂಚಿನ ಗುರುತುಗಳಾಗಿ ಮಾರ್‍ಪಡಿಸಿ ಕಳಿಸಲಾಗುತ್ತದೆ. ಬೆಳಕು ಒಂದು ಮಿನ್ಸೆಳೆತದ ಅಲೆಯೂ ಹವ್ದು , ಕಣವೂ ಹವ್ದು (wave theory-particle theory ಓದಿ) ಎಂದು ತೋರಿಸಿಕೊಡಲಾಗಿದೆ. ಇಲ್ಲಿ ಬೆಳಕು ಎಂಬುದು ಒಂದು ಅಲೆ ಎಂಬ ಅರಿವನ್ನು ಬಳಸಿಕೊಳ್ಳಲಾಗಿದೆ.

fibre-optic

ಬೆಳಕು ಹೇಗೆ ಎಳೆಯೊಳಗೆ ಹರಿಯುತ್ತದೆ?

ಬೆಳಕು ಎಳೆಯೊಳಗೆ ಹರಿಯುವುದು ಅದರ ತುಂಬು ಒಳಗಿನ ಮಾರ್‍ವೊಳೆಪು ಎಂಬ ನಡವಳಿಕೆಯ ಮೇಲೆ ನಿಂತಿದೆ. ತು.ಒ.ಮಾ. – ಇದು ಬೆಳಕಿನ ಡೊಂಕಾಗುವಿಕೆಯ ಒಂದು ವಿಶೇಶವಾದ ಆಗುಹ . ಇದನ್ನು ಗಮನದಲ್ಲಿಟ್ಟುಕೊಂಡು ಬೆಳಕಿನ ಎಳೆಗಳನ್ನು ತಯಾರಿಸಲಾಗುತ್ತದೆ. ಎಳೆಯ ಒಂದು ತುದಿಯಲ್ಲಿ ಬೆಳಕಿನ ಮೂಲವನ್ನು ಒಂದು ಗೊತ್ತಾದ ಕೋನದಲ್ಲಿ ಇಟ್ಟರೆ, ಆ ಮೂಲದಿಂದ ಬರುವ ಬೆಳಕಿನ ಕದಿರುಗಳು ಒಂದು ಗೊತ್ತಾದ ಕೋನದಲ್ಲಿ ಎಳೆಯ ಒಳಗೋಡೆಗೆ ಬಡಿದರೆ ಅದು ಮಾರ್‍ವೊಳೆದು ಮತ್ತದೇ ಒಳಗೋಡೆಗೆ ಅದೇ ಗೊತ್ತಾದ ಕೋನದಲ್ಲಿ ಬಡಿದರೆ ಮತ್ತೆ ಮಾರ್‍ವೊಳೆಯುತ್ತದೆ.ಹೀಗೆ ಈ ಎಸಕ ಎಡೆಬಿಡದೆ ನಡೆಯುತ್ತಾ ಬೆಳಕಿನ ಕದಿರು ಎಳೆಯ ಮತ್ತೊಂದು ತುದಿಯನ್ನು ಮುಟ್ಟುತ್ತದೆ.

ನಮಗೆ ಗೊತ್ತಿರುವ ಹಾಗೆ ಬಿಳಿ ಬೆಳಕಿನಲ್ಲಿ ಎಲ್ಲ ಬಣ್ಣದ ಬೆಳಕು ಅಡಕವಾಗಿದೆ (ನ್ಯೂಟನ್ ನ ಹೆಸರುವಾಸಿ ಪ್ರಿಸಮ್ ಪ್ರಯೋಗವನ್ನು ನೆನಪಿಸಿಕೊಳ್ಳಿ) ಆದ್ದರಿಂದ ನಾವು ಮಾಹಿತಿಯನ್ನು ಬೇರೆ ಬೇರೆ ಬಣ್ಣದ ಬೆಳಕನ್ನಾಗಿ ಮಾರ್‍ಪಡಿಸಿ ಅವುಗಳೆಲ್ಲವನ್ನು ಒಂದೇ ಎಳೆಯಲ್ಲಿ ಸಮಾಂತರವಾಗಿ ಕಳಿಸಬಹುದು. ಪ್ರತಿ ಬಣ್ಣವು ತನ್ನದೆ ಆದ ಅಲೆಯಗಲವನ್ನು ಹೊಂದಿರುತ್ತವೆ.ಇದರಿಂದ ಪ್ರತಿ ಬಣ್ಣದಿಂದ ಮಾಹಿತಿಯನ್ನು ತೆಗೆಯುವುದು ಕಶ್ಟದ ಕೆಲಸವೇನಲ್ಲ. ಅವುಗಳ ಅಲೆಯಗಲದ ಮೇಲೆ ಯಾವ ಮಾಹಿತಿ, ಯಾವ ಬಣ್ಣದ ಮೂಲಕ ಕಳಿಸಲಾಯಿತು ಎಂಬುದನ್ನು ನಿಕ್ಕಿಯಾಗಿ ಗುರುತಿಸಬಹುದು.

ಬೆಳಕು v/s ಮಿಂಚು

ಬೆಳಕಿನ ಮೂಲಕ ಮಾಹಿತಿಯನ್ನು ಕಳಿಸುವುದರಿಂದ ಹಲವು ಬಳಕೆಗಳಿವೆ:-
೧) ತಾಮ್ರದ ತಂತಿಯಲ್ಲಿ ಮಿಂಚಿನ ಮೂಲಕ ಕಳಿಸುವುದಕ್ಕಿಂತ ಹೆಚ್ಚು ಪಟ್ಟು ತಿಳಿಹವನ್ನು ಬೆಳಕಿನ ಎಳೆಗಳಲ್ಲಿ ಕಳುಹಿಸಬಹುದು (ಹೇಗೆ ಎಂದು ಮೇಲೆ ತಿಳಿಸಲಾಗಿದೆ)
೨) ತಿಳಿಹವು ಬೆಳಕಿನ ರೂಪದಲ್ಲಿರುವುದರಿಂದ ಎಣಿಸದ ಇಲ್ಲವೆ ಎದುರುನೋಡದ ಮಿನ್ಸೆಳೆ ಬೀರಿಕೆಯ ಅಡಚಣೆಗೆ ಒಳಪಡುವುದಿಲ್ಲ. ಇದರಿಂದ ತಿಳಿಹದ ಸರಿಮೆಗೆ ಕುಂದುಂಟಾಗುವುದಿಲ್ಲ. ಆದರೆ ತಾಮ್ರದ ತಂತಿಯಲ್ಲಿ ಹರಿಯುವ ತಿಳಿಹ ಮಿ.ಬೀ.ಅ. ನಿಂದ ಪ್ರಬಾವಿತಗೊಂಡು ತಿಳಿಹದ ಸರಿಮೆ ಹಾಳಾಗಬಹುದು.

ಪದ ಪಟ್ಟಿ

ಬೆಳಕಿನ ಎಳೆ = optic fibre
ತುಂಬು ಒಳಗಿನ ಮಾರ್‍ವೊಳೆಪು = total internal reflection
ಅಲೆಯಗಲ = wavelength
ಸರಿಮೆ  = integrity
ಮಿನ್ಸೆಳೆ ಅಡಚಣೆ = electromagnetic interference

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: