ಚೀನಾದಲ್ಲಿ ಲಿಪಿ ಸುದಾರಣೆ
ಚಯ್ನೀಸ್ ನುಡಿಯನ್ನು ಬರೆಯಲು ಎರಡು ಬಗೆಯ ಲಿಪಿಗಳನ್ನು ಬಳಸಲಾಗುತ್ತಿದೆ. ಚೀನಾ ದೇಶ ಮತ್ತು ಸಿಂಗಾಪುರದಲ್ಲಿ ಬಳಸಲಾಗುವ ಲಿಪಿಯನ್ನು ಸರಳವಾಗಿಸಿದ ಚಯ್ನೀಸ್ ಲಿಪಿ (simplified Chinese script) ಎಂದು ಕರೆಯಲಾಗುತ್ತದೆ. ಹಾಂಗ್ ಕಾಂಗ್, ಮಕಾವ್ ಮತ್ತು ತಯ್ವಾನಿನಲ್ಲಿ ಬಳಸಲಾಗುತ್ತಿರುವ ಲಿಪಿಯು ತಲೆತಲಾಂತರದ ಚಯ್ನೀಸ್ ಲಿಪಿ (traditional Chinese script)ಎಂದು ಕರೆಯಲಾಗುತ್ತದೆ.
ಯಾಕೆ ಈ ಎರಡು ಬಗೆ?
ಸುಮಾರು ಅಯ್ದನೇ ಶತಮಾನದಲ್ಲಿ ಹಾನ್ ಮನೆತನದವರು ಚೀನಾ ಮೇಲೆ ಆಡಳಿತ ನಡೆಸುತ್ತಿದ್ದಾಗ ಬರವಣಿಗೆಗಾಗಿ ಬಳಕೆಗೆ ಬಂದಿದ್ದ ಚಯ್ನೀಸ್ ಲಿಪಿಯು ಮುಂದೆ ಹಲವೆಡೆಗಳಲ್ಲಿ ಬಳಸಲ್ಪಡುತ್ತಿತ್ತು. ಆಮೇಲಾಮೇಲೆ, ಚಯ್ನೀಸ್ ನುಡಿಯನ್ನು ಬರೆಯುವುದು ಈ ಲಿಪಿಯಲ್ಲೇ ಎಂಬಂತ ರೂಡಿ ಬೆಳೆದುಬಿಟ್ಟಿತ್ತು. ಚಯ್ನೀಸ್ ಲಿಪಿಯು ಗೆರೆಗಳಿಂದ ಕೂಡಿರುವುದಾದ್ದರಿಂದ, ಕೆಲವೊಂದು ಪದಗಳನ್ನು ಬರೆಯಲು 18ರಿಂದಾ 20ಗೆರೆಗಳನ್ನು ಎಳೆಯಬೇಕು ಎಂಬಂತೆ ಲಿಪಿ ಮಾರ‍್ಪುಗೊಳ್ಳುತ್ತಾ ಸಾಗಿತ್ತು. ಎತ್ತುಗೆಗೆ, “邊” ಈ ಒಂದು ಬರಿಗೆಯಲ್ಲಿ ಸುಮಾರು 18 ಗೆರೆಗಳಿವೆ.
ಚೀನಾದ ಹಿನ್ನೆಲೆಯಲ್ಲಿ (history) ಮುಕ್ಯವಾದ ಚಳುವಳಿಯೆಂದು ಬಣ್ಣಿಸಲಾಗುವ ಮೇ ನಾಲ್ಕರ ಚಳುವಳಿಯ ಬಳಿಕ, 1919ರಲ್ಲಿ ಚೀನಾ ದೇಶವನ್ನು ಏಳಿಗೆ ಹೊಂದಿದ ನಾಡಾಗಿ ಮಾಡಬೇಕಾದ ಹಾದಿಗಳ ಬಗ್ಗೆ ಸಾಕಶ್ಟು ಚರ‍್ಚೆಗಳು ಹುಟ್ಟುಕೊಂಡವು ಎನ್ನಲಾಗುತ್ತದೆ. ಅವಾಗಾಗಲೇ ಕೆಲವರಲ್ಲಿ ಚಯ್ನೀಸ್ ಲಿಪಿಯನ್ನು ಕಲಿಯಲು ಇರುವ ತೊಡಕುಗಳ ಬಗ್ಗೆ ಅನಿಸಿಕೆಗಳು ಮೂಡಿದ್ದವು. ಈ ಅನಿಸಿಕೆಗಳಿಗೆ ಹೆಚ್ಚಿನ ಬೆಂಬಲ 1919ರ ಬಳಿಕ ದೊರೆಯತೊಡಗಿತು. ಪು ಸಿನಿಯಾನ್ ಎಂಬ ಹೆಸರಿನ ನಾಯಕ ಮೇ ನಾಲ್ಕರ ಚಳುವಳಿಯ ಮುಂದಾಳಾಗಿದ್ದವರು. ಪು ಸಿನಿಯಾನ್ ಅವರು ಚಯ್ನೀಸ್ ಲಿಪಿಯಲ್ಲಿ ಮಾಡಬೇಕಾದ ಸುದಾರಣೆಗಳ ಬಗ್ಗೆ ಮಾತನಾಡತೊಡಗಿದರು. ಚಯ್ನೀಸ್ ಲಿಪಿಯು ತುಂಬಾ ಸಿಕ್ಕಲು ಸಿಕ್ಕಲಾಗಿದ್ದು ಅದನ್ನು ಹೊಸದಾಗಿ ಕಲಿಯುವುದು ದೊಡ್ಡ ತ್ರಾಸವಾಗಿದೆ, ಇದನ್ನು ಸರಳಗೊಳಿಸುವ ಮೂಲಕ ಹೆಚ್ಚು ಜನರಿಗೆ ಬರಿಗೆಗಳ ಪರಿಚಯ ಮಾಡಿಸಬಹುದು ಎಂಬ ಆಲೋಚನೆ ಹಬ್ಬತೊಡಗಿತು. ಆಗಿಂದ ಶುರುವಾದ ಸರಗೊಳಿಸುವ ಕೆಲಸವು, 1964ರಲ್ಲಿ ಚೀನಾ ಜನರ ರಿಪಬ್ಲಿಕ್ ಸರಕಾರವು ಸರಳಗೊಳಿಸಿದ ಲಿಪಿಯನ್ನೇ ಬಳಸುವುದಾಗಿ ಹೇಳುವುದರೊಂದಿಗೆ ಒಂದು ಹಂತ ತಲುಪಿತು. 2009ರಲ್ಲಿ ಚೀನಾ ಜನರ ರಿಪಬ್ಲಿಕ್ ಸರಕಾರವು ಇನ್ನೂ ಕೆಲವು ಬರಿಗೆಗಳನ್ನು ಸರಳಗೊಳಿಸಿ ಸುತ್ತೋಲೆ ಹೊರಡಿಸಿದೆ. 1964ರಿಂದೀಚೆಗೆ, ಚೀನಾದಲ್ಲಿ ಎಲ್ಲಾ ವಲಯಗಳಲ್ಲೂ ಸರಳವಾಗಿಸಿದ ಲಿಪಿಯನ್ನೇ ಬಳಸಲಾಗುತ್ತಿದೆ.
ಸರಳವಾಗಿಸಿದ ಚಯ್ನೀಸ್ ಲಿಪಿಯ ಹುಟ್ಟಿನ ಕತೆ ಇದಾದರೆ, ಚಯ್ನೀಸ್ ನುಡಿಯವರು ಹೆಚ್ಚಿನ ಎಣಿಕೆಯಲ್ಲಿರುವ ತಯ್ವಾನ್, ಹಾಂಗ್ ಕಾಂಗ್ ಮತ್ತು ಮಕಾವ್‍ಗಳಲ್ಲಿ ತಲೆತಲಾಂತರದ ಚಯ್ನೀಸ್ ಲಿಪಿಯನ್ನೇ ಇವತ್ತಿಗೂ ಬಳಸಲಾಗುತ್ತಿದೆ.
ಲಿಪಿ ಬದಲಾವಣೆಯ ಬಳಿಕ ಚೀನಾಗೆ ದಕ್ಕಿದ ಲಾಬವೇನು?
ಚೀನಾ ದೇಶದಲ್ಲಿ ಲಿಪಿ ಬದಲಾವಣೆ ಮಾಡಿಕೊಂಡ ಬಳಿಕ, ಬರಿಗೆ ಬಲ್ಲವರ ಎಣಿಕೆ (literacy rate) ಹೆಚ್ಚಾಗಿದೆ. ಸರಳವಾಗಿಸಿದ ಲಿಪಿಯು ಕಡಿಮೆ ಗೆರೆಗಳನ್ನು ಹೊಂದಿದ್ದು, ತಲೆತಲಾಂತರದ ಲಿಪಿಯನ್ನು ಕಲಿಯುವುದಕ್ಕಿಂತಾ ಸುಲಬವಾಗಿ ಕಲಿಯಬಹುದಾಗಿದೆ. ಇದೇ ಕಾರಣದಿಂದ, ಬರಿಗೆ ಬಲ್ಲವರ ಎಣಿಕೆ ಹೆಚ್ಚಾಗಿದೆ. ಬರಿಗೆ ಬಲ್ಲವರ ಎಣಿಕೆ ಹೆಚ್ಚಾದಂತೆ ಯಾವುದೇ ಸಮುದಾಯವು ಕಲಿಕೆಯಲ್ಲಿ ಮುಂದೆ ಸಾಗುತ್ತದೆ. ಹೆಚ್ಚೆಚ್ಚು ಮಂದಿ ಒಳ್ಳೆಯ ಕಲಿಕೆ ಪಡೆದುಕೊಂಡು ದುಡಿಮೆಗೆ ಇಳಿಯುತ್ತಿರುವುದು ಚೀನಾ ದೇಶಕ್ಕೆ ದೊಡ್ಡ ಮಟ್ಟಿನ ಬಲವೊಂದನ್ನು ತಂದುಕೊಟ್ಟಿದೆ. ಚಯ್ನೀಸ್ ನುಡಿಯೂ ಕೂಡ ಚಳಕದರಿಮೆ (technology), ಮಿಂಬಲೆ (internet), ಉನ್ನತ ಕಲಿಕೆ (higher education) ಹೀಗೆ ಹಲವು ವಲಯಗಳಲ್ಲಿ ಬಳಕೆಯಾಗುತ್ತಿದೆ.
ಮಾಹಿತಿ ಸೆಲೆ: ವಿಕಿಪೀಡಿಯಾ
(ಚಿತ್ರ: www.bbc.co.uk)
ಹಳೆಯ ಚೈನೀಸ್ ನುಡಿಯನ್ನು ಬಳಸುತ್ತಿರುವ ತೈವಾನ್ ನ ಸಾಕ್ಷರತಾ ಪ್ರಮಾಣ ಸುಮಾರು 96 ಪ್ರತಿಶತ. ಅವರ ಹ್ಯೂಮನ್ ಡೆವಲಪ್ ಮೆಂಟ್ ಇಂಡೆಕ್ಸ್ ಮತ್ತು ತಲಾ ಆದಾಯ ಎರಡೂ ಸಾಕಷ್ಟು ಹೆಚ್ಚಾಗಿಯೇ ಇವೆ. ಚೀನಾದಲ್ಲಿ ಹೊಸ ಚೀನೀ ಬರಿಗೆಯಿಂದ ಅನುಕೂಲವಾಗಿರಬಹುದು. ಆದರೆ ತೈವಾನ್ ಗೆ ಹಳೆಯ ಚೈನೀಸ್ ನುಡಿಯಿಂದ ತೊಂದರೆಯಾಗಿದೆ ಅನಿಸುವುದಿಲ್ಲ.
ಮಹೇಶ್ ಅವರೇ,
ಈ ಒಂದು ವಾದವು ಚಯ್ನೀಸ್ ನುಡಿ ಬರೆಯಲು ಬಳಸಾಗುವ ಲಿಪಿ ಸುದಾರಣೆ ಬೇಕು/ಬೇಡ ಎನ್ನುವವರ ನಡುವೆಯೂ ನಡೆಯುತ್ತಿದೆ.
ಚೀನಾಗೆ ಹೋಲಿಸಿದರೆ, ತಯ್ವಾನಿನ ಮಂದಿಯೆಣಿಕೆ ತುಂಬಾ ಕಮ್ಮಿ. ಹಾಗಾಗಿ, ಚೀನಾದಂತಹ ದೊಡ್ಡ ದೇಶಕ್ಕೆ, ಅಲ್ಲಿರುವ ಮಂದಿಗೆ, ಕಲಿಕೆಯನ್ನು ತಲುಪಿಸಲು ಲಿಪಿ ಸುದಾರಣೆ ನೆರವು ನೀಡಿದೆ ಎಂಬುದು ತಳ್ಳಿಹಾಕುವಂತಹ ವಾದವಲ್ಲ.
ಮಹೇಶ್ ಅವರೇ:
ಚಯ್ನಾ ಮತ್ತು ತಾಯ್ವಾನ್ ಎರಡರಲ್ಲೂ ಚಯ್ನೀಸು ಲಿಪಿ (ಹಳೆಯದಾದರೂ ಸರಿ, ಹೊಸದಾದರೂ ಸರಿ) ಕಶ್ಟವೆಂದು ಜನರು ಅರಿತುಕೊಂಡು ಅದಕ್ಕೆ ತಕ್ಕ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಎಡೆಬಿಡದೆ ಮಾಡುತ್ತಿದ್ದಾರೆ. ಈ ಪ್ರಯತ್ನಗಳು ನಡೆದಿವೆ ಎಂಬುದನ್ನು ಗಮನಿಸಬೇಕಾದುದು ಮುಕ್ಯ.
ನೀವು ಹೇಳುವಂತೆ ಹಳೆಯ ಚಯ್ನೀಸು ಬರಿಗೆಗಳನ್ನು ತಾಯ್ವಾನಿನಲ್ಲಿ ಬಳಸುತ್ತಿರುವುದು ನಿಜವಾದರೂ ಚಯ್ನಾನಲ್ಲಿ ಮಕ್ಕಳಿಗೆ ಬರವಣಿಗೆ ಹೇಳಿಕೊಡುವುದಕ್ಕೆಂದು 1910ರಲ್ಲಿ ಕಂಡುಹಿಡಿಯಲಾದ ಜುಯಿನ್ ಪುಹಾವೊ (Zhuyin fuhao) ಎಂಬ ಹೆಸರಿನ ಉಲಿಬರಿಗೆಯನ್ನು ಇನ್ನೂ ಬಳಸಲಾಗುತ್ತಿದೆ. ಆಮೇಲೆ ಚಯ್ನಾದಲ್ಲಿ ಇದರ ಬದಲಾಗಿ ಪಿನ್ಯಿನ್ (pinyin) ಎಂಬುದನ್ನು ಜಾರಿಗೆ ತರಲಾಯಿತು.
ಒಟ್ಟಿನಲ್ಲಿ ಚಯ್ನೀಸು ಬರಿಗೆಗಳು ಅವರಿಗೇ ಕಶ್ಟವಾದವು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದನ್ನೇ ಬಳಸುತ್ತಿದ್ದ ಕೊರಿಯಾ ದೇಶದವರು ಹಾಂಗುಲ್ (Hangul) ಎಂಬ ಉಲಿಬರಿಗೆಯನ್ನು ಕಂಡುಹಿಡಿದುಕೊಂಡರು ಎಂಬುದನೂ ಗಮನಿಸಿ.
ಮತ್ತೊಂದೇನೆಂದರೆ, ತಾಯ್ವಾನು ಅಮೇರಿಕವು ’ಇಟ್ಟುಕೊಂಡಿರುವ’ ಒಂದು ದೇಶ. ಕರ‍್ನಾಟಕದಲ್ಲೂ ಅಮೇರಿಕದ ಬಾನೋಡಗಳನ್ನು ಮತ್ತು ಗನ್ನುಗಳನ್ನು ತಂದು ನಿಲ್ಲಿಸುವ ಏರ‍್ಪಾಡು ಮಾಡಿಕೊಂಡರೆ ಕನ್ನಡದ ಲಿಪಿಯಲ್ಲಿ ಮಹಾಪ್ರಾಣಗಳೇಕೆ, ಹಿಂದಿದ್ದ ಱ-ಕಾರ ೞ-ಕಾರಗಳನ್ನು ಹಿಂತಿರುಗಿಸಿದರೂ ನಮ್ಮ HDI ಮುಗಿಲು ಮುಟ್ಟುತ್ತದೆ!
ತನ್ನ ನುಡಿಯಲ್ಲಿ ಜ್ಞಾನದ ಕೊರತೆಯುಂಟಾದಾಗ ಅಥವಾ ತನ್ನ ನುಡಿಯಲ್ಲಿ ಈಗ ಇರುವ ಜ್ಞಾನ ಎಲ್ಲರನ್ನೂ ತಲುಪಲು ವಿಫಲವಾಗುತ್ತಿದ್ದಾಗ, ಅದರಿಂದ ತೊಂದರೆಗೊಳಪಟ್ಟಾಗ, ನುಡಿ ಸುಧಾರಣೆಯ ಪ್ರಯತ್ನ ಖಂಡಿತವಾಗಿಯೂ ಮಾಡಲೇ ಬೇಕಾದಂತಹ ವಿಷಯ. ನುಡಿ ಸುಧಾರಣೆಯ ಮೂಲಕ ಜ್ಞಾನ ಸಂಗ್ರಹ ಮತ್ತು ಪ್ರಸರಣ ಹೆಚ್ಚಾಗಿ ಆಗಬೇಕು ಎನ್ನುವುದು ಮೂಲ ಉದ್ದೇಶ. ಹೊನಲು ತಾಣದಲ್ಲಿ ಕೇವಲ ನುಡಿ ಸುಧಾರಣೆಯಷ್ಟೇ ಆಗಿಲ್ಲ, ಕನ್ನಡದಲ್ಲಿ ಇನ್ನೂ ಇಲ್ಲದ ಹೊಸ ಹೊಸ ಮತ್ತು ಗಹನವಾದ ವಿಷಯಗಳನ್ನು ಸರಳವಾದ ನುಡಿಯಲ್ಲಿ ವಿವರಿಸುವ ಪ್ರಯತ್ನ ನಡೆಯುತ್ತಿದೆ. ಇದು ಅತ್ಯಂತ ಅಭಿನಂದನೀಯ ಮತ್ತು ಪ್ರಶಂಸಾರ್ಹ.
ಕಿರಣ್ ಬಾಟ್ನಿಯವರೇ, ತೈವಾನ್ ಅಮೆರಿಕವು ಇಟ್ಟುಕೊಂಡಿರುವ ದೇಶ? ಕನ್ನಡ ಬಲ್ಲ ತೈವಾನಿಗರು ಇಲ್ಲವೆಂಬುದು ನಮ್ಮ ಪುಣ್ಯ ! ತೈವಾನಿಗರು ಹಳೆಯ ಚೈನೀಸ್ ನುಡಿಯನ್ನು ಬಳಸಿದರೂ ತಮ್ಮ ನುಡಿಯಲ್ಲಿ ಸಾಕಷ್ಟು ಜ್ಞಾನಸಂಗ್ರಹ ಮಾಡಿದ್ದಾರೆಂಬುದು ಸತ್ಯ. ಅಮೆರಿಕದ ಗನ್ನುಗಳನ್ನು ಮತ್ತು ಬಾನೋಡಗಳನ್ನು ಇಟ್ಟುಕೊಂಡರೆ HDI ಮುಗಿಲು ಮುಟ್ಟುತ್ತದೆ ಎನ್ನುವುದನ್ನು ಒಪ್ಪಲು ಅಸಾಧ್ಯ ತೈವಾನಿಗರ HDI ಹೆಚ್ಚಿದ್ದರೆ ಅದರ ಹಿಂದೆ ಅವರ ಶ್ರಮ ಖಂಡಿತವಾಗಿಯೂ ಇದೆ.
ಹೊನಲಿನ ಬಗ್ಗೆ ನಿಮ್ಮ ಅನಿಸಿಕೆಗಾಗಿ ನನ್ನಿ. ನೀವೂ ಬರವಣಿಗೆ ಮಾಡಿ, ಬನ್ನಿ.
ತಾಯ್ವಾನಿನ ಬಗ್ಗೆ ನಾನು ಹೇಳಿರುವುದನ್ನು ಇಂಗ್ಲಿಶಿನಲ್ಲೂ ಹೇಳಲು ತಯಾರಿದ್ದೇನೆ. ಅಲ್ಲದೆ, ಇದನ್ನು ಹಿಂದೆ ಹಲವರು ಹೇಳಿರುವುದುಂಟು. ಎತ್ತುಗೆಗೆ:
(1)
It must be immediately recognized that without massive U.S. military and economic supports, such progress would not have been possible. The development in Taiwan “depended heavily on capital from abroad. The U.S. economic aid of more than $1 billion equalled 43% of the gross investment during the decade and accounted for nearly 90% of the flow of external capital and donations.” U.S. military aid freed local resources from otherwise intolerably heavier defense expenditures.
– David W. Chang, “U.S. Aid and Economic Progress in Taiwan”, Asian Survey, Vol. 5, No. 3, Mar., 1965.
(2)
See, one of the interesting features of the 1980s is that to a large extent the United States had to carry out its foreign interventions through the medium of mercenary states. There’s a whole network of U.S. mercenary states. Israel is the major one, but it also includes Taiwan, South Africa, South Korea, the states that are involved in the World Anti-Communist League and the various military groups that unite the Western Hemisphere, Saudi Arabia to fund it, Panama—Noriega was right in the center of the thing.
– Peter R. Mitchell and John Schoeffel (eds.), “Understanding Power: The Indispensable Chomsky”, p. 4, The New Press, New York, 2002.
ಇನ್ನು ಅಮೆರಿಕದ ಗನ್ನುಗಳನ್ನು ಮತ್ತು ಬಾನೋಡಗಳನ್ನು ಬರಮಾಡಿಕೊಂಡರೆ ಕರ‍್ನಾಟಕದ HDI ಮುಗಿಲು ಮುಟ್ಟುತ್ತದೋ ಇಲ್ಲವೋ ಎಂಬುದರ ಬಗ್ಗೆಯೂ ನನಗೆ ಸಂದೇಹವಿಲ್ಲ. ಆದರೆ ಹಾಗೆ ಮುಗಿಲು ಮುಟ್ಟುವುದು ಒಳ್ಳೆಯದಲ್ಲ, ಏಕೆಂದರೆ ಹಾಗೆ ಮುಟ್ಟಿದ ಮುಗಿಲು ಕನ್ನಡಿಯೊಳಗಿನ ಗಂಟು ಮಾತ್ರ. ಅದಕ್ಕಿಂತ ಮಿಗಿಲಾಗಿ ನಮ್ಮ ಸ್ವಾತಂತ್ರ್ಯವನ್ನು ಯಾವುದೇ ಕಾರಣಕ್ಕೂ ನಾನು ಕಳೆದುಕೊಳ್ಳುವುದನ್ನು ಒಪ್ಪಲಾರೆ.