ಕೂಳು ಕಾಯ್ದೆಯೂ ಮಂದಿಯಾಳ್ವಿಕೆಯನ್ನು ಕಡೆಗಣಿಸುವಂತಿಲ್ಲ
– ಚೇತನ್ ಜೀರಾಳ್.
ಹಿಂದಿನ ಬರಹದಲ್ಲಿ ಕೂಳು ಬದ್ರತಾ ಕಾಯ್ದೆಯನ್ನು ಜಾರಿಗೆ ತರಲು ಹೊರಟಲ್ಲಿ ರಾಜ್ಯಗಳ ಮತ್ತು ಕೇಂದ್ರದ ಮೇಲೆ ಬೀಳುವ ದುಡ್ಡಿನ ಹೊರೆ, ಬಾರತದ ಹಣಕಾಸಿನ ಏರ್‍ಪಾಡಿನ ಮೇಲೆ ಆಗುವ ಪರಿಣಾಮಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ಮಂದಿಯಾಳ್ವಿಕೆಯಯನ್ನು ಕಡೆಗಣಿಸಿ, ಹಿಂಬಾಗಿಲ ಮೂಲಕ ಕಾಯ್ದೆಯನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರಕಾರದ ನಡೆಯ ಬಗ್ಗೆ ತಿಳಿದುಕೊಳ್ಳೋಣ.
ಈ ಯೋಜನೆಯನ್ನು ಜಾರಿಗೆ ತರಬೇಕೋ, ಬೇಡವೋ ಅನ್ನುವುದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್‍ಕಾರಕ್ಕೆ ಬಿಟ್ಟ ವಿಶಯ. ಆದರೆ ಇದರ ಜಾರಿಯಿಂದಾಗುವ ಹಣದ ಕೊರತೆಯನ್ನು ತುಂಬಲು ಅದು ಕಯ್ಗೊಳ್ಳಬೇಕಿರುವ ಕ್ರಮಗಳ ಕುರಿತು ಯೋಚಿಸಿದೆಯೇ? ಗೊತ್ತಿಲ್ಲ. ಒಂದು ಸರ್‍ಕಾರ ತಾನು ಜಾರಿ ಮಾಡುವ ಇಂತಹ ಉಚಿತ ಯೋಜನೆಗಳಿಂದ ಆಗುವ ನಶ್ಟವನ್ನು ಹೇಗೆ ತುಂಬುತ್ತವೆ ಅನ್ನುವುದರ ಬಗ್ಗೆ ಎದುರು ಪಕ್ಶಗಳಿಗೆ ಹಾಗೂ ಜನರಿಗೆ ತಿಳಿಸಬೇಕಿರುವುದು ಒಳ್ಳೆಯ ನಡೆ. ತಮ್ಮ ಪ್ರಣಾಳಿಕೆಯಲ್ಲಿ ಇಂತಹ ಒಂದು ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿಕೊಂಡಿದ್ದರಿಂದ ಮತ್ತು ಮುಂದೆ ಬರಲಿರುವ ಲೋಕಸಬೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತರುವ ಸಾಹಸಕ್ಕೆ ಕಾಂಗ್ರೆಸ್ ಪಕ್ಶ ಕಯ್ ಹಾಕಿದೆ ಅನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ ಈ ಯೋಜನೆಯನ್ನು ಜಾರಿಗೆ ತರಲು ಹಿಡಿದಿರುವ ಹಾದಿಯ ಬಗ್ಗೆ ನಾವು ಯೋಚಿಸಬೇಕಾಗಿದೆ.
ಹವ್ದು, ಈ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್‍ಕಾರ ಆರ್‍ಟಿಕಲ್ 123 ರ ಅಡಿಯಲ್ಲಿ ರಾಶ್ಟ್ರಪತಿಗಳ ಅಂಕಿತಕ್ಕೆ (Ordinance) ಕಳುಹಿಸಿದೆ. ರಾಶ್ಟ್ರಪತಿಗಳು ಈ ಕಟ್ಟಲೆಗೆ ಒಪ್ಪಿಗೆ ನೀಡಿದ್ದಾರೆ ಅನ್ನುತ್ತವೆ ಸುದ್ದಿ ಹಾಳೆಗಳು. ಈ ಕಟ್ಟಲೆಯನ್ನು ಮುಕ್ಯವಾಗಿ ಲೋಕಸಬೆ ಹಾಗೂ ರಾಜ್ಯಸಬೆಗಳ ಅದಿವೇಶನ ನಡೆಯದೇ ಇರುವ ಸಮಯದಲ್ಲಿ, ರಾಶ್ಟ್ರಪತಿಗಳಿಗೆ ಆ ಸಮಯದಲ್ಲಿ (Emergency) ತಗೆದುಕೊಳ್ಳಲೇ ಬೇಕಾದ ಅತಿ ಮುಕ್ಯ ನಿರ್‍ದಾರವಾಗಿದ್ದರೆ ಮಾತ್ರ ಕಟ್ಟಲೆಯೊಂದನ್ನು ಜಾರಿಗೊಳಿಸಬಹುದು. ಹೀಗೆ ಜಾರಿಗೊಳಿಸಿ ಅಂತ ಕೇಳಿಕೊಳ್ಳುವುದು ಸಹ ಮಂತ್ರಿಗಳ ಕೂಟ (Council of Ministers). ರಾಶ್ಟ್ರಪತಿಗಳು ಜಾರಿಗೊಳಿಸಿದ ಈ ಕಟ್ಟಲೆಯನ್ನು ಎರಡು ಮನೆಗಳಲ್ಲಿ ಅದಿವೇಶನ ಶುರುವಾದ 6 ವಾರಗಳೊಳಗೆ ಒಪ್ಪಬೇಕು. ಇಲ್ಲವಾದಲ್ಲಿ ಈ ಕಟ್ಟಲೆ ಮುರಿದು ಬೀಳುತ್ತದೆ. ರಾಜ್ಯಗಳ ರಾಜ್ಯಪಾಲರಿಗೂ ಸಹ ರಾಜ್ಯದ ಎರಡೂ ಮನೆಗಳು ಅದಿವೇಶನದಲ್ಲಿ ಇಲ್ಲದ ಸಮಯದಲ್ಲಿ ಕಟ್ಟಲೆಗಳನ್ನು ಜಾರಿ ಮಾಡುವ ಅದಿಕಾರವಿದೆ. ರಾಜ್ಯಪಾಲರಿಗೆ ಇರುವ ಅದಿಕಾರದ ಬಗ್ಗೆ ಆರ್‍ಟಿಕಲ್ 213 ರಲ್ಲಿ ಹೇಳಲಾಗಿದೆ.
ಈ ಹಿಂದೆ ಆರ‍್ಟಿಕಲ್ 123ರ ಒಂದು ಅಂಶದಲ್ಲಿ ಈ ರೀತಿಯಾಗಿ ಜಾರಿಯಾಗುವ ಕಟ್ಟಲೆಗಳನ್ನು ಯಾವುದೇ ಆದಾರದ ಮೇಲೆ ನ್ಯಾಯಾಲಯಗಳಲ್ಲಿ ಪ್ರಶ್ನಿಸುವ ಹಾಗಿಲ್ಲ ಎಂದಿತ್ತು. ಆದರೆ 1970 ರಲ್ಲಿ ಸುಪ್ರೀಂ ಕೋರ್‍ಟ್ ನೀಡಿದ ಒಂದು ತೀರ್‍ಪಿನ ಆದಾರದ ಮೇಲೆ ಇದನ್ನು ಸಂವಿದಾನದಿಂದ ಕಯ್ಬಿಡಲಾಯಿತು. ಹೀಗಿದ್ದರೂ ಸಹ, ರಾಶ್ಟ್ರಪತಿಗಳು ಅಂಕಿತ ಹಾಕುವ ಇಂತಹ ಕಟ್ಟಲೆಗಳ ಹಿಂದೆ ಕೇಂದ್ರ ಸರ್‍ಕಾರದ ಒತ್ತಾಯ ಕೆಲಸ ಮಾಡಿಯೇ ಇರುತ್ತದೆ. ಇದಕ್ಕೆ ಮುಕ್ಯ ಕಾರಣ, ರಾಶ್ಟ್ರಪತಿಗಳ ಮುಂದೆ ಬರುವ ಇಂತಹ ಕೋರಿಕೆಗಳನ್ನು ಕೂಡಲೇ ಜಾರಿಗೆ ತರಬೇಕೆಂಬ ನಿಯಮವೇನಿಲ್ಲ, ಅವರು ಅದನ್ನು ಜಾರಿ ಮಾಡಲು ಎಶ್ಟು ಸಮಯ ಬೇಕಾದರೂ ತೆಗೆದುಕೊಳ್ಳಬಹುದು. ಹೆಚ್ಚಾಗಿ ರಾಶ್ಟ್ರಪತಿಗಳು ಇಂತಹ ವಿಚಾರದಲ್ಲಿ ಮಂತ್ರಿಗಳ ಕೂಟದ ಸಲಹೆಯನ್ನು ಪಡೆಯುತ್ತಾರೆ. ಈಗ ಕೂಳು ಬದ್ರತಾ ಯೋಜನೆ ಜಾರಿಗೆ ತರುವುದು ಕಾಂಗ್ರೆಸ್ ಪಕ್ಶದ ಕನಸು, ಇನ್ನು ಅಯ್ದು ತಿಂಗಳಲ್ಲಿ ಬರುತ್ತಿರುವ ಅಯ್ದು ರಾಜ್ಯಗಳ ವಿದಾನಸಬೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರಲು ಹೊರಟಿದೆ. ಹಾಗಾಗಿಯೇ ಮಂತ್ರಿಗಳ ಕೂಟ ಈ ಕಾಯ್ದೆಯನ್ನು ಆದಶ್ಟು ಬೇಗ ಜಾರಿಗೆ ತರಲು ರಾಶ್ಟ್ರಪತಿಗಳ ಕಟ್ಟಲೆ ಮೂಲಕ ಜಾರಿಗೆ ತಂದಿದೆ. ಜಾರಿಗೆ ಬಂದ ಮೇಲೆ ಇದನ್ನು ಅನುಶ್ಟಾನ ಮಾಡಲು ಸಮಯ ಬೇಕಾಗಿರುವುದರಿಂದ ಎರಡು ಮನೆಗಳಲ್ಲಿ ಚರ್‍ಚೆ ನಡೆಸದೆ ಹಿಂಬಾಗಿಲ ಮೂಲಕ ಹೀಗೆ ಮಾಡಲಾಗಿದೆ.
ಹೀಗೆ ಮಾಡಿರುವುದು ಮಂದಿಯಾಳ್ವಿಕೆಗೆ ಮಾಡುತ್ತಿರುವ ದೊಡ್ಡ ಅವಮಾನ. ಯಾವುದೇ ತುರ್‍ತು ಪರಿಸ್ತಿತಿ ಇಲ್ಲದ ಸಮಯದಲ್ಲಿ ಹಿಂಬಾಗಿಲ ಮೂಲಕ ಸರ್‍ಕಾರ ತನಗೆ ಬೇಕಾಗಿದ್ದನ್ನು ಪಡೆಯಲು ಹೊರಟಿದೆ. ಈ ಕಾಯ್ದೆಯನ್ನು ಜಾರಿಗೆ ತರಲೇಬೇಕು ಅನ್ನುವ ಉದ್ದೇಶ ಸರ್‍ಕಾರಕ್ಕೆ ಇದ್ದಿದ್ದರೆ ಅದು ವಿಶೇಶ ಅದಿವೇಶನವೊಂದನ್ನು ಕರೆಯಬಹುದಾಗಿತ್ತು. ಅಲ್ಲಿ ಸರ್‍ಕಾರ, ಎದಿರು ಪಕ್ಶಗಳ ನಡುವೆ ಈ ಕಾಯ್ದೆಯ ಒಳಿತು ಕೆಡಕುಗಳ ಬಗ್ಗೆ ಮಾತುಕತೆಯಾದ ನಂತರ ಬೇಕಿರುವ ಮಾರ್‍ಪಾಡುಗಳನ್ನು ಮಾಡಿ ಈ ಕಾಯ್ದೆಯನ್ನು ಜಾರಿಗೆ ತರಬೇಕಿತ್ತು. ಇದು ಮಂದಿಯಾಳ್ವಿಕೆಯಲ್ಲಿ ಸರಿಯಾದ ದಾರಿ. ಈ ಹಿಂದೆ ಕೂಡ ಸರ್‍ಕಾರ ಇದನ್ನು ಎರಡು ಮನೆಗಳಲ್ಲಿ ಇಡುವ ಕೆಲಸ ಮಾಡಿತ್ತು, ಆದರೆ ಸರ್‍ಕಾರದ ಹಗರಣಗಳ ಬಗ್ಗೆ ಮಾತುಕತೆಯಲ್ಲಿ ಅದಿವೇಶನವೇ ಮುಗಿದು ಹೋದದ್ದರಿಂದ ಈ ಕಾಯ್ದೆಯ ಬಗ್ಗೆ ಮಾತುಕತೆ ನಡೆಯಲಿಲ್ಲ. ಒಂದು ವಿಶಯದ ಬಗ್ಗೆ ಎರಡು ಮನೆಗಳಲ್ಲಿ ಚರ್‍ಚೆ ನಡೆಯುವುದರಿಂದ ಆಗುವ ಒಳಿತಿನ ಬಗ್ಗೆ ಇತ್ತೀಚಿಗೆ ನಡೆದ ಒಂದು ಎತ್ತುಗೆಯನ್ನು ನೋಡೋಣ. ಕೇಂದ್ರ ಸರ್‍ಕಾರ ಯು.ಪಿ.ಎಸ್.ಸಿ ಪರೀಕ್ಶೆಯಲ್ಲಿ ಇನ್ನು ಮುಂದೆ ಪ್ರಾದೇಶಿಕ ಬಾಶೆಗಳಲ್ಲಿ ಬರೆಯುವ ಬದಲು ಕೇವಲ ಇಂಗ್ಲಿಶ್ ಮತ್ತು ಹಿಂದಿ ಬಾಶೆಗಳಲ್ಲಿ ಮಾತ್ರ ಬರೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಒಂದು ಕಾಯ್ದೆಯನ್ನು ಜಾರಿಗೆ ತರಲು ಎರಡು ಮನೆಗಳ ಮುಂದೆ ಇಟ್ಟಿತು. ಆದರೆ ಇದರಿಂದ ಹಲಬಾಶೆಗಳನ್ನು ಹೊಂದಿರುವ ಬಾರತ ದೇಶದ ಜನರಿಗೆ ತೊಂದರೆಯಾಗುತ್ತದೆ ಎಂದು ಹಲ ಪಕ್ಶಗಳು ಸರ್‍ಕಾರದ ಈ ಕಾಯ್ದೆಗೆ ವಿರೋದ ಮಾಡಿದ್ದರಿಂದ ಸರ್‍ಕಾರ ಈ ತಿದ್ದುಪಡಿಯನ್ನು ಹಿಂಪಡೆಯಿತು. ಇದು ಮಂದಿಯಾಳ್ವಿಕೆಯಲ್ಲಿ ಅಗಬೇಕಾಗಿರುವ ನಡಾವಳಿ. ಜನರಿಗೆ ಆಗುವ ಒಳಿತು ಕೆಡಕುಗಳ ಬಗ್ಗೆ ಮಾತುಕತೆಯಾದ ಮೇಲೆ ಒಂದು ಕಾಯ್ದೆ ಜಾರಿಗೆ ಬರಬೇಕು. ಇದು ಸರಿಯಾದ ದಾರಿ ಕೂಡ ಹವ್ದು.
ಆದರೆ ಸರ್‍ಕಾರ ಆರಿಸಿಕೊಂಡಿರುವ ದಾರಿಯ ಬಗ್ಗೆ ಹಲವಾರು ಎದಿರು ಪಕ್ಶದ ನಾಯಕರು ದ್ವನಿ ಎತ್ತಿದ್ದಾರೆ. ಯು.ಪಿ.ಎ ಸರ್‍ಕಾರದ ಕೆಲವು ಪಕ್ಶಗಳೇ ಇದರ ಬಗ್ಗೆ ಸಿಟ್ಟಾಗಿವೆ ಅನ್ನುತ್ತವೆ ಸುದ್ದಿಹಾಳೆಗಳು. ಬೇಡದ ಸಮಯದಲ್ಲಿ ಕಟ್ಟಲೆಯನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್‍ಕಾರ ತನ್ನ ಅದಿಕಾರದ ಕೆಟ್ಟ ಉಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪ ಮಾಡಲಾಗಿದೆ. ಈ ಕಟ್ಟಲೆಯನ್ನು ಜಾರಿಗೆ ತರುವುದನ್ನು ನಿಲ್ಲಿಸಬೇಕು ಎಂದು ಪಿ.ಅಯ್.ಎಲ್ (PIL) ಒಂದನ್ನು ಸುಪ್ರೀಂ ಕೋರ‍್ಟಿನಲ್ಲಿ ಹೂಡಲಾಗಿದೆ.
ಈ ಕಾಯ್ದೆಗೆ ರಾಶ್ಟ್ರಪತಿಗಳ ಅಂಕಿತ ಬಿದ್ದು ಜಾರಿಗೆ ಬಂದರೆ, ಜನರಿಗೆ ಇದರ ಸವಲತ್ತು ಸಿಗುವ ಹಾಗೆ ಮಾಡಿ ನಂತರ ಅದಿವೇಶನ ಕರೆದರೆ ಅತವಾ ಚುನಾವಣೆಯನ್ನು ತಂದರೆ, ಎದುರು ಪಕ್ಶಗಳಿಗೂ ಸಹ ಈ ಕಾಯ್ದೆಯನ್ನು ಹಿಂದೆಗೆಯುವಂತೆ ಹೇಳಲು ಶಕ್ತಿ ಇರುವುದಿಲ್ಲ. ಕಾರಣ, ಮುಂಬರುತ್ತಿರುವ ಚುನಾವಣೆಗಳಲ್ಲಿ ಜನರಿಗೆ ಸಿಗುತ್ತಿರುವ ಲಾಬವನ್ನು ಬೇರೆ ಪಕ್ಶಗಳು ತಡೆಯಲು ಪ್ರಯತ್ನಿಸಿದವು ಅನ್ನುವ ಅಪವಾದವನ್ನು ಕಾಂಗ್ರೆಸ್ ಮಾಡಲು ತೊಡಗುತ್ತದೆ ಮತ್ತು ಇದರಿಂದ ಹೆಚ್ಚಿನ ಓಟುಗಳನ್ನು ಗೆಲ್ಲುತ್ತದೆ. ಈ ಕಾಯ್ದೆಯನ್ನು ಈಗ ಜಾರಿಗೆ ತರುತ್ತಿರುವುದು ಹೆಚ್ಚಾಗಿ ಮುಂದಿನ ಚುನಾವಣೆಯಲ್ಲಿ ಓಟುಗಳನ್ನು ಪಡೆಯಲು ಮಾಡುತ್ತಿರುವ ದೊಂಬರಾಟ.
ಮಂದಿಯಾಳ್ವಿಕೆಯ ಬುನಾದಿಗೆ ದಕ್ಕೆ ತರುವಂತಹ ಇಂತಹ ಕಟ್ಟಲೆಗಳನ್ನು ನಾವು ಇನ್ನೂ ಮುಂದುವರಿಸಬೇಕೆ ಎನ್ನುವುದನ್ನು ಯೋಚಿಸಬೇಕಾಗಿದೆ. ಕೇಂದ್ರ ಸರ್‍ಕಾರದ ಇಂತಹ ನಡೆಗಳು ಸಂವಿದಾನದಲ್ಲಿ ಇರುವ ಕೊರತೆಗಳನ್ನು ಎತ್ತಿ ತೋರಿಸುತ್ತಿವೆ. ಇಂತಹ ಹಲವಾರು ಕಟ್ಟಲೆಗಳನ್ನು ನಾವು ತಗೆದು ಹಾಕಿ, ನಿಜವಾದ ಮಂದಿಯಾಳ್ವಿಕೆಯ ಕಡೆಗೆ ನಡೆಯಬೇಕಾಗಿದೆ. ಇದಕ್ಕಾಗಿ ರಾಜ್ಯಗಳಿಗೆ ಹೆಚ್ಚಿನ ಹಣಕಾಸಿನ ಅದಿಕಾರ, ಆಯಾ ರಾಜ್ಯಕ್ಕೆ ಬೇಕಾಗಿರುವ ಕಟ್ಟಲೆಗಳನ್ನು ಮಾಡಿಕೊಳ್ಳಲು ಅದಿಕಾರ, ಕೇಂದ್ರ ಮಾಡುವ ಯೋಜನೆಗಳನ್ನು ಒಪ್ಪಿಕೊಳ್ಳುವ ಅತವಾ ಬೇಡವೆನ್ನುವ ಅದಿಕಾರ ಹೀಗೆ ಹಲವಾರು ವಿಶಯಗಳಲ್ಲಿ ಬದಲಾವಣೆಗಳು ಆಗಬೇಕಾಗಿದೆ ಎಂದನಿಸುತ್ತದೆ. ನೀವೇನಂತೀರಿ?
(ಚಿತ್ರ: http://fciweb.nic.in)
ಇತ್ತೀಚಿನ ಅನಿಸಿಕೆಗಳು