ಗೂಗಲ್ + ಟೊಯೊಟಾ + ಜಿಎಂ = ತಾನೇ ಓಡುವ ಕಾರು!

– ಜಯತೀರ‍್ತ ನಾಡಗವ್ಡ

lexusgooglecar

ನಿಮಗೆ ಕಾರು ಓಡಿಸಲು ಬರುವುದಿಲ್ಲವೆ? ಕಾರುಗಳ ಓಡಿಸುವಿಕೆ ಕಲಿಯಲು ಹೊತ್ತಿಲ್ಲವೇ? ಹಾಗಿದ್ರೆ ಚಿಂತೆ ಬೇಡ. ನಿಮಗೆಂದೇ ಇಲ್ಲಿದೆ ಓಡಿಸುಗರಿಲ್ಲದ ತನ್ನಿಂದ ತಾನೆ ಓಡುವ ಕಾರು (autonomous car). ತಾನಾಗೇ ಓಡುವ ಕಾರು ಇದ್ರೆ ಯಾರಿಗೆ ಬೇಡ? ಹವ್ದು ಕಣ್ರಿ, ಮುಂದಿನ ದಿನಗಳ ಮುಂಚೂಣಿಯ ಹತ್ತು ಹೊಳಹುಗಳಲ್ಲಿ ಒಂದಾದ ಈ ಕಾರು ಈಗ ದಿಟವಾಗುತ್ತಿದೆ.

ಜಗತ್ತಿನ ಮೂಂಚೂಣಿ ಕಾರು ಕಂಪನಿಗಳಲ್ಲೊಂದಾದ ಜನರಲ್ ಮೋಟರ‍್ಸ್ 1956ರ ಮೋಟೊರಮ ಶೋದಲ್ಲಿ ಓಡಿಸುಗರಿಲ್ಲದ ಕಾರುಗಳ ಒಂದು ಹೊಳಹು ಎಲ್ಲರ ಮುಂದಿಟ್ಟಿತ್ತು. ಅದಾಗಿ ಸರಿ ಸುಮಾರು 60 ವರುಶಗಳ ಬಳಿಕ ಆ ಕನಸು ನನಸಾಗುವಂತ ಬೆಳವಣಿಗೆಗಳಾಗಿವೆ.

ಜಗತ್ತಿನ ಮಿಂಬಲೆ ಹುಡುಕುದಾಣದ ದೊರೆಯಾದ ಗೂಗಲ್ – ಜಗತ್ತಿನ ನಂ.1 ಕಾರು ತಯಾರಕ ಟೊಯೊಟಾ ಮತ್ತು ಜನರಲ್ ಮೋಟಾರ‍್ಸ್ ಜತೆಗೂಡಿ ಇದೀಗ ತಂತಾನೇ ಓಡುವ ಕಾರುಗಳನ್ನ ಬೀದಿಗಿಳಿಸಲು ಪಣತೊಟ್ಟಿದೆ. ಈ ಕಾರುಗಳಿಗೆ ಒಪ್ಪಿಗ್ ಕೋರಿ ಸ್ತಳೀಯ ಆಳ್ವಿಗರ ಮೇಲೆ ಗೂಗಲ್ ಲಾಬಿ  ಕೂಡಾ ನಡೆಸಿದೆಯಂತೆ.

ಹೇಗಿರುತ್ತೆ ಈ ಕಾರು ಎಂಬ ಕುತೂಹಲವೆ? ಗೂಗಲ್-ಟೊಯೊಟಾ ಬೆಳೆಸಿದ ಕಾರು ಸಾಮಾನ್ಯ ಕಾರಿನಂತೆ ಇದ್ದು ಮೇಲ್ಚಾವಣಿಯಲ್ಲಿ ಲಿಡಾರ್‍’ ಹೆಸರಿನ ರಡಾರ್‍ ಮಾದರಿಯ ಒಂದು ತಿಳಿಕ (sensor) ಈ ಕಾರಿನ ಮುಕ್ಯ ಅಂಗವಾಗಿದೆ. ಗೂಗಲ್ ಮತ್ತು ವೆಲೊಡಯ್ನ ಲಿಡಾರ್‍ ಹೆಸರಿನ ಸಂಸ್ತೆ ಒಡಗೂಡಿ ಈ ವಿಶೇಶ ತಿಳಿಕವನ್ನು ಮಾಡಿವೆ.ಲಿಡಾರ್‍ ತಿಳಿಕ 360 ಡಿಗ್ರಿ ಹರವಿನಲ್ಲಿ (range) ತನ್ನ ಸುತ್ತಲಿರುವ ಕಾರು-ಬಂಡಿಗಳಲ್ಲದೆ ನಡುವೆ ಇರುವ ಅಡೆತಡೆಗಳನ್ನು ಕೂಡ ಸೆರೆಹಿಡಿದು ಕದರಿಸಬಲ್ಲ (image scan) ಬಲಹೊಂದಿದೆ.

ಟೊಯೊಟಾ ಬ್ರಾಂಡಿನಲ್ಲೊಂದಾದ  ಲೆಕ್ಸಸ್ ಎಲ್-ಎಸ್460 ಮಾದರಿ ಬಂಡಿ ದಾರಿಹೋಕರ ಗುರುತಿಸಬಲ್ಲ (pedestrian detection) ಅತಿ ಚಿಕ್ಕ ಮಿಲಿಮೀಟರ್‍ ಅಲೆಯಗಲ ಅಳೆಯಬಲ್ಲ ಅಲೆಗಾವಲನ್ನು, ಹೆಚ್ಚು-ಹುರುಳಿಕೆಯ ತಿಟ್ಟಕದ (high definition camera) ಮೂಲಕ ಮುಂದಿರುವ ದಾರಿಯ ಅಡೆ-ತಡೆ ತೋರುವ ಏರ‍್ಪಾಟು ಒಳಗೊಂಡಿರುತ್ತದೆ. ಹಾಗೆನೇ, ಜನರಲ್ ಮೋಟರ‍್ಸ್ ತನ್ನ ಕ್ಯಾಡಿಲಕ್ ಕಾರುಗಳಲ್ಲಿ ಈ ಹೊಸ ಹೊಳಹಿನ ಅರಕೆ ನಡೆಸುತ್ತಿದ್ದು, ಮೊದಲ-ಮಾದರಿಗಳನ್ನು (prototype) ಈಗಾಗಲೇ ತೋರ‍್ಪಡಿಸಿದೆ. ಜನರಲ್ ಮೋಟರ‍್ಸನ ಈ ಬಂಡಿ 6 ಅರೆಗಾವಲಿನ ಸಾಲು (an array of six radars) ಒಂದು ತಿಟ್ಟಕ ಅಳವಡಿಸಿಕೊಂಡಿದ್ದು ತನ್ನ ವೇಗವನ್ನು ಇಶ್ಟಕ್ಕೆ ತಕ್ಕಂತೆ ಹಿಡಿತದಲ್ಲಿಟ್ಟುಕೊಳ್ಳಬಲ್ಲದು.

ಜಪಾನಿನ ಟೋಯೋಟಾ,ಅಮೆರಿಕದಾ ಜನರಲ್ ಮೋಟರ‍್ಸನಂತಹ ಬಂಡಿ ತಯಾರಕರ ಈ ಪಣಕ್ಕೆ ಬಂಡಿ ತಯಾರಕರ ಕಣಜದಂತಿರುವ ಜರ‍್ಮನಿ ಹಿಂದೆ ಬೀಳೊದು ಸಾದ್ಯವೆ? ಇಲ್ಲವೆ ಇಲ್ಲ. ಜರ‍್ಮನಿಯ ಜಗದವಿಕ್ಯಾತ ಮಾರಾಳಿಗ (supplier) ಕಾಂಟಿನೆಂಟಲ್ ಪಾಲುಗಾರಿಕೆಯಲ್ಲಿ ಅವ್ಡಿ ಕಂಪನಿಯು ಈ ಉಕ್ಕಾಳಿನ (robotic) ಕಾರನ್ನು ಸಿದ್ದಪಡಿಸಲು ತೊಡೆತಟ್ಟಿ ನಿಂತಿದೆ. ಅವ್ಡಿಯ ಈ ಬಂಡಿ  ನಾಲ್ಕು ಮೂಲೆಗಳಲ್ಲಿ ಕಿರಿ-ಎಲ್ಲೆಯ (short-range) ಹಾಗೂ ಮುಂದುಗಡೆ ಹಿರಿ-ಎಲ್ಲೆಯ ಅಲೆಗಾವಲು ಬಳಸುತ್ತದೆ. ಇನ್ನೊಂದು ಮುಕ್ಯ ಸಂಗತಿಯೆಂದರೆ ಈ ಕಾರಿನಲ್ಲಿ ಸಾಲು ತಿಳಿಕದ (lane sensing) ಮೂಲಕ ನೀವು ಓಣಿ ದಾಟುವಲ್ಲಿ ತಪ್ಪೆಸಗುವುದು ಅಸಾದ್ಯವೆ ಸರಿ.

ಮುಂದಿನ ದಿನಗಳಲ್ಲಿ ಕಿಕ್ಕಿರಿದು ತುಂಬಿದ ಟ್ರಾಪಿಕ್ ಜಾಮನಿಂದ ಕೂಡಿದ ದಾರಿಯಲ್ಲಿ 40 ಮಯ್ಲಿ ಪ್ರತಿಗಂಟೆಯ ರಬಸದಲ್ಲಿರುವ ಕಾರುಬಂಡಿಯನ್ನು ಈ ಉಕ್ಕಾಳಿನ ನವಿರೆಣಿಯ ಮೂಲಕ ಹಿಡಿತಕ್ಕೆ ತರಲು ಸಾದ್ಯವೆಂದು ಅವ್ಡಿಯ ಹಿರಿಯ ಅರಕೆಗಾರ‍್ತಿಯೊಬ್ಬರು ಬೀಗುಮಾನದಿ ಹೇಳಿಕೊಂಡಿದ್ದಾರೆ.

ಇನ್ನೇಕೆ ತಡ, ಕೊಳ್ಳಲು ಸಿದ್ದರೆ? ತನ್ನೆಡೆಯ ಕಾರುಗಳ ಬೆಲೆ ವಿಶಯಕ್ಕೆ ಬರ‍್ತಿನಿ. ಕಾರು-ಬಂಡಿಯ ಸಾಮಾನ್ಯ ಬೆಲೆಗಿಂತ ಹತ್ತು ಪಟ್ಟು ದುಬಾರಿ. ನೀವು ಮಾಮೂಲಿ ಕಾರಿಗೆ 5 ಲಕ್ಶ ಕೊಡುವಿರೆಂದರೆ, ತನ್ನಿಡಿತದ ಈ ಬಂಡಿಗೆ ಸುಮಾರು 55 ಲಕ್ಶ ತೆರಬೇಕಾಗುತ್ತದೆ. ವೆಲೊಡಾಯ್ನ ಕೂಟದ ಲಿಡಾರ್‍ ಅರಿವಿಕದ ಬೆಲೆ 70,000 ಸಾವಿರ ಡಾಲರ್‍ ಅಂದರೆ ಸುಮಾರು 42 ಲಕ್ಶ ರೂಪಾಯಿಗಳಿಗಿಂತ ಹೆಚ್ಚು.

ಅರಿವಿಕಗಳ ಈ ಬೆಲೆಯೆ ಉಕ್ಕಾಳಿನ-ಕಾರ್‍ ಬಳಕೆಗೆ ಒಂದು ತೊಡರುಗಾಲಾಗಿದ್ದರೆ, ಯಾರ ನೆರವಿಲ್ಲದ ತನ್ನಶ್ಟಕ್ಕೆ ತಾನು ಓಡುವ ಕಾರಿಗೆ ರಸ್ತೆ-ಒಪ್ಪಿಗೆ ಕೊಡಲು ಸಾರಿಗೆ ಏರ‍್ಪಾಟುಗಳು ಹಿಂದೇಟು ಹಾಕಿವೆ. ಇದಕ್ಕೆ ಬಲವಾದ ಕಾರಣ ಕೇಡುಹ (accident) ಇಲ್ಲವೇ ಗುದ್ದರಿಸಿದಾಗ (collision) ಹೊಣೆ ಬಂಡಿ ಒಡೆಯನದೊ? ಬಂಡಿ ತಯಾರಕರದೊ? ಎಂಬುದು. ಈ ಕೇಳ್ವಿಗೆ  ಹೇಳ್ವಿ ಹುಡುಕುವಲ್ಲಿ ನಿರಾಶೆಯಿಂದ ಮುಂದುವರೆದ ನಾಡಿನ ಸರ‍್ಕಾರಗಳು ಸುಮ್ಮನಾಗಿವೆ. ಅದರೂ ಹೇಗೋ ಮಾಡಿ ಅಮೆರಿಕೆಯ ನೆವಾಡ ನಾಡಿನ ಸಾರಿಗೆ ಪ್ರಬುಗಳ ಒಪ್ಪಿಗೆ ಪಡೆಯುವಲ್ಲಿ ಗೆಲುವು ಕಂಡಿರುವ ಗೂಗಲ್ ಈ ಗೆಲುವನ್ನೆ ಮುಂದುವರೆಸುವತ್ತ ದಾಪುಗಾಲಿರಿಸಿದೆ. ಇದಕ್ಕೆ ಬಾಶ್,ಡೆನ್ಸೊ,ಕಾಂಟಿನೆಂಟಲ್ ನಂತ ಕಾರು ಬಿಡಿಬಾಗ ಮಾರಾಳಿಗಳು ಕಯ್ ಜೋಡಿಸಿವೆ.

ಮಿಂಬಲೆಯ ಗುರು ಗೂಗಲ್, ಮುಂಬೊತ್ತಿನ ದಿನಗಳಲ್ಲಿ ನಿಮ್ಮ ನಾಲ್ಗಾಲಿ (four wheeler) ಎಂಜೀನ್ ಗುರು ಆದರೂ ಅಚ್ಚರಿಪಡಬೇಕಿಲ್ಲ.Categories: ಅರಿಮೆ

ಟ್ಯಾಗ್ ಗಳು:, , , , , , , , , , , , , , , , , , , , , , , , ,

2 replies

Trackbacks

  1. ತನ್ನಿಡತದ ಕಾರಿಗೆ ಕಯ್ ಹಾಕಿದ ಎಲೊನ್ ಮಸ್ಕ್! | ಹೊನಲು
  2. ಓಡಿಸುಗನಿಲ್ಲದ ಗೂಗಲ್ ಕಾರು | ಹೊನಲು

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s