ಕನ್ನಡಿಗನ ಏಳಿಗೆಗೆ ಕನ್ನಡವೇ ಅಡ್ಡಿಯೆಂಬುದು ಸುಳ್ಳು

ಸಿದ್ದರಾಜು ಬೋರೇಗವ್ಡ

Road-Ahead

ಕನ್ನಡಿಗರಿಗಾಗಿ ಕೊಡಮಾಡಲಾಗಿರುವ ಹಾದಿಯಲ್ಲಿ ಕನ್ನಡಿಗರಿಗೆ ಮುಂದೇನು ಕಾದಿದೆ ಎಂದು ಕೇಳಿಕೊಂಡಾಗ ಸಂತಸ ಪಡುವಂತದ್ದೇನೂ ಕಾಣದು. ಕನ್ನಡಿಗರ ಹಣಕಾಸಿನ ಮಾತೇ ಆಗಲಿ, ಕೂಡಣದ ಏಳಿಗೆಯೇ ಆಗಲಿ, ಕನ್ನಡಿಗರ ಮಯ್-ಒಳವಿನ ಹದುಳದ ಮಾತೇ ಆಗಲಿ, ನಲಿವಿನ ಇಲ್ಲವೇ ನಲಿವನ್ನು ಹಂಚಿಕೊಳ್ಳುವ ಮಾತೇ ಆಗಿಲಿ, ಕನ್ನಡಿಗರ ಆಳ್ಕೆಯ ಮಾತೇ ಆಗಲಿ, ಕನ್ನಡಿಗರ ಈಳಿಗೆಯ ಮಾತೇ ಆಗಲಿ… ಕನ್ನಡಿಗರು ತಮ್ಮಾಯ್ಕೆಯದೇ ಅಂದುಕೊಂಡಿರುವ ಆದರೆ ನಿಜಕ್ಕೂ ಹೆರವರು ಹಾಕಿಕೊಟ್ಟ ಹಾದಿಯಲ್ಲಿ ಎಶ್ಟು ಮುಂದೆ ನೋಡಿದರೂ ಬೆಳಕೇನೂ ಕಾಣದು.

ಕನ್ನಡಿಗರಿಂದು ನಡೆಯುತ್ತಿರುವ ಹಾದಿಯಲ್ಲಿ ಕನ್ನಡಿಗರ ಹಣಕಾಸಿನ ಏಳಿಗೆಗೆ ಕನ್ನಡತನವೇ ಅಡ್ಡಿಯೆಂಬ ನಂಬಿಕೆ ಬೆಳಸಲಾಗುತ್ತಿದೆ. ಕನ್ನಡಿಗರನ್ನು ಇವತ್ತಿನ ಬೇಡಿಕೆಗಳಿಗೆ ಅಣಿಗೊಳಿಸದೇ ಬಂಡವಾಳವನ್ನೂ, ಬಂಡವಾಳಿಗಳನ್ನೂ ಬರಮಾಡಿಕೊಳ್ಳಲಾಗುತ್ತಿದೆ. ಕಸುವಿಲ್ಲದ ಹೆಚ್ಚೆಣಿಕೆಯ ಕನ್ನಡಿಗರು ಇವರ ಅಡಿಯಾಳುಗಳಾಗಿ ದುಡಿಯುವುದನ್ನೇ ಏಳಿಗೆಯೆಂದು ಬಿಂಬಿಸಲಾಗುತ್ತಿದೆ. ಕನ್ನಡಿಗರಲ್ಲಿ ಹೆಚ್ಚುತ್ತಿರುವ ರೋಗ-ರುಜಿನುಗಳಿಗೆ ಮದ್ದು ದೊರಕಿಸಿಕೊಡುವುದಿರಲಿ ಅವುಗಳ ಎಣಿಕೆ, ಲೆಕ್ಕ ಇಡುವುದೇ ದೊಡ್ದ ಮಾತಾಗಿದೆ.

ಕನ್ನಡಿಗರು ನಲಿವಂಚಿಕೊಳ್ಳಲು ಕಂಡುಕೊಂಡಿದ್ದ ಹಾಡು, ಕುಣಿತ, ಆಟಗಳು ಹಾಳುಬಿದ್ದು ಬೇರೆಯವರ ಹಾಡು, ಕುಣಿತ, ಆಟಗಳನ್ನು ನೋಡುವುದೊಂದೇ ಪಾಡು ಬಂದೊದಗಿದೆ. ಕನ್ನಡಿಗರ ಆಳ್ಕೆ ದೂರದವರಾರದೋ ಹಿಡಿತದಲ್ಲಿದೆ. ಕನ್ನಡಿಗರು ಅವರನ್ನು ಮೆಚ್ಚಿಸುವುದೇ ನಮ್ಮ ಕಾಯಕವೆಂದು ಬಗೆದಿದ್ದಾರೆ.

ನಾನು ಹುಟ್ಟಿದ ವರ್‍ಶ ತಮಿಳುನಾಡಿನಲ್ಲಿ ಸಾವಿರಕ್ಕೆ ನೂರ ನಾಲ್ಕು (104/1000), ತೆಂಕಣ ಕೊರಿಯಾದಲ್ಲಿ ತೊಂಬತ್ತು (90/1000), ಕರ್‍ನಾಟಕದಲ್ಲಿ ಎಪ್ಪತ್ತೆಂಟು (78/1000) ಮಕ್ಕಳು ಒಂದು ವರ್‍ಶ ತುಂಬುವ ಮುಂಚೆ ಸಾಯುತ್ತಿದ್ದವು. ಮೂವತ್ತೊಂದು ವರ್‍ಶದ ತರುವಾಯ ತಮಿಳು ನಾಡಿನಲ್ಲಿ ಮೂವತ್ತೇಳು (37/1000), ತೆಂಕಣ ಕೊರಿಯಾದಲ್ಲಿ ಅಯ್ದು (5/1000), ಕರ್‍ನಾಟಕದಲ್ಲಿ ನಲವತ್ತೆಂಟು (48/1000) ಮಕ್ಕಳು ಸಾಯುತ್ತವೆ. ವೆತ್ಯಾಸ ತಾಯ್ನುಡಿಯ ಬಳಕೆ ಮತ್ತು ತಮ್ಮಾಳ್ಕೆ ಎಂದು ಊಹಿಸಬಹುದು. ಸಾವಿರಕ್ಕೆ ಅಯ್ವತ್ತು ಕನ್ನಡಿಗರ ಮಕ್ಕಳು ಒಂದು ವರುಶ ತುಂಬುವುದಕ್ಕೆ ಮುಂಚೆಯೇ ಸಾಯುತ್ತಿರುವುದರ ಸಲುವು ಕನ್ನಡಿಗರಲ್ಲಿ ತಾಯ್ನುಡಿಯ ಬಗ್ಗೆ ಒಲವಿಲ್ಲದಿರುವುದು ಮತ್ತು ತಮ್ಮಾಳ್ಕೆ ಕಟ್ಟಿಕೊಳ್ಳದೇ ಸ್ವತಂತ್ರರೆಂಬ ಬ್ರಮೆಯಲ್ಲಿರುವುದು.

ಕನ್ನಡಿಗರು ಇಂದು ನಡೆಯುತ್ತಿರುವ ಹಾದಿಯಲ್ಲಿ ತುಸು ನಿಂತು ಯೋಚಿಸಿದರೆ ಹೇಗೆ? ಒಂದೇ ನುಡಿಯಾಡುವ ಆರು ಕೋಟಿ ಮಂದಿ ಸೇರಿ ಏನೇನು ಮಾಡಬಹುದು ಎಂದು ಯೋಚಿಸಿದಾಗ ಗೊತ್ತಾಗುವುದೇನು?

ಏನು ಸಾದಿಸಬಹುದು ಎಂಬುದಕ್ಕೆ ಎಲ್ಲೆಯುಂಟೇ? ಮೊದಲಾಗಿ, ಅಯ್ದು ಕೋಟಿಯಲ್ಲಿ ಒಬ್ಬರೂ ಹಸಿದಿರದಂತೆ ನೋಡಿಕೊಳ್ಳಬಹುದು. ನಮ್ಮ ಸಾವಿರ ಮಕ್ಕಳಲ್ಲಿ 50 ಮಕ್ಕಳು ಒಂದು ವರುಶದ ಹುಟ್ಟುಹಬ್ಬ ನೋಡುವ ಮುನ್ನವೇ ಸಾಯದಂತೆ ತಡೆಯಬಹುದು. ಕನ್ನಡಿಗರನ್ನು ಹದುಳವಾಗಿಸಿ ಹೆಚ್ಚು ಬಾಳಿಸಬಹುದು. ಕನ್ನಡಿಗರ ಮನರಂಜನೆ ಕನ್ನಡಿಗರದ್ದಾಗಿಸಬಹುದು. ಕನ್ನಡಿಗರನ್ನು ಸಿರಿವಂತರನ್ನಾಗಿಸಬಹುದು. ಒಂದು ಮಿತಿಯಲ್ಲಿರುವ ಇದೆಲ್ಲವನ್ನೂ ನುಡಿ ಬಳಸಿ ಗೆಲುವಾಗಿ ನಾಡು ಕಟ್ಟಿಕೊಂಡವರನ್ನು ನೋಡಿಯೇ ಕಲಿತು ಸಾದಿಸಬಹುದು!

ಇನ್ನು ಗುರಿಗೆ ಮಿತಿಯೇಕೆ? ತಾಯ್ನುಡಿ ಬಳಸಿದಲ್ಲಿ ಕನ್ನಡಿಗರು ಇಡೀ ಜಗತ್ತಿಗೇ ಮಾದರಿಯಾಗಿ ಬದುಕಬಹುದು. ಇಡೀ ಜಗತ್ತಿನ ಮಂದಿಗೆ ಬದುಕುವದನ್ನು ಕಲಿಸಬಹುದು! ಇದೆಲ್ಲವೂ ಸಾದ್ಯವಾಗಬೇಕಾದರೆ ಮೊದಲು ನಾವು ತಾಯ್ನುಡಿಯನ್ನು ಚೆನ್ನಾಗಿ ಬಳಸುವುದನ್ನು ಕಲಿಯಬೇಕು, ತಾಯ್ನುಡಿಯನ್ನು ಗೆಲ್ಲಿಸುವುದನ್ನು ಕಲಿಯಬೇಕು. ಇದಕ್ಕಾಗಿ ಹುರುಪಿನಿಂದ ದುಡಿವ ಕನ್ನಡದ ಮಕ್ಕಳು ಒಂದಾಗಿ ದುಡಿಯಬೇಕು. ಇದಕ್ಕಾಗಿಯೇ ಎಲ್ಲರಕನ್ನಡ ಬೇಕಾಗಿರುವುದು.

(ಚಿತ್ರ: http://www.randykinnick.com)

ನಿಮಗೆ ಹಿಡಿಸಬಹುದಾದ ಬರಹಗಳು

3 Responses

 1. ಸುಮ್ನಿರಿ ಸಾರ್ ನೀವು. ಸಂಸ್ಕೃತದ ಮತ್ತು ಬೇರೆ ಭಾಷೆಗಳ ದಬ್ಬಾಳಿಕೆ ಕನ್ನಡದ ಮೇಲೆ ಆಗ್ತಾ ಇದೆ, ನಾವು ಅಚ್ಚ ಕನ್ನಡ, ಸ್ವಚ್ಛ ಕನ್ನಡವನ್ನು ವಾಪಸ್ಸು ತರ್ತೀವಿ ಅಂತಾ ಹೊಸಾ ಭಾಷೇನೇ ಹುಟ್ಟು ಹಾಕ್ತಾ ಇದೀರ. ಈ ಕೆಳಗಿನ (ನಿಮ್ಮ ಲೇಖನದ್ದೇ) ಸಾಲುಗಳನ್ನ ಯಾವುದೇ ಕನ್ನಡದ ಪಂಡಿತರಿಗಾಗಲಿ, ಹೞಿ ಹಿರಿಯರಿಗಾಗಲಿ, ಪಾಮರರಿಗಾಗಲಿ, ಕನ್ನಡ ವಿದ್ವಾನ್-ಗಳಿಗಾಗಲೀ ತೋರಿಸಿ, ಯಾವುದೇ ವಿವರಣೆಯಿಲ್ಲದೇ ಅರ್ಥಮಾಡಿಸಿಬಿಡಿ ನೋಡೋಣ?

  “ನಾನು ಹುಟ್ಟಿದ ವರ್‍ಶ ತಮಿಳುನಾಡಿನಲ್ಲಿ ಸಾವಿರಕ್ಕೆ ನೂರ ನಾಲ್ಕು, ತೆಂಕಣ ಕೊರಿಯಾದಲ್ಲಿ ತೊಂಬತ್ತು, ಕರ್‍ನಾಟಕದಲ್ಲಿ ಎಪ್ಪತ್ತೆಂಟು ಮಕ್ಕಳು ಒಂದು ವರ್‍ಶ ತುಂಬುವ ಮುಂಚೆ ಸಾಯುತ್ತಿದ್ದವು. ಮೂವತ್ತೊಂದು ವರ್‍ಶದ ತರುವಾಯ ತಮಿಳು ನಾಡಿನಲ್ಲಿ ಮೂವತ್ತೇಳು, ತೆಂಕಣ ಕೊರಿಯಾದಲ್ಲಿ ಅಯ್ದು, ಕರ್‍ನಾಟಕದಲ್ಲಿ ನಲವತ್ತೆಂಟು ಮಕ್ಕಳು ಸಾಯುತ್ತವೆ. ವೆತ್ಯಾಸ ತಾಯ್ನುಡಿಯ ಬಳಕೆ ಮತ್ತು ತಮ್ಮಾಳ್ಕೆ ಎಂದು ಊಹಿಸಬಹುದು. ಸಾವಿರಕ್ಕೆ ಅಯ್ವತ್ತು ಕನ್ನಡಿಗರ ಮಕ್ಕಳು ಒಂದು ವರುಶ ತುಂಬುವುದಕ್ಕೆ ಮುಂಚೆಯೇ ಸಾಯುತ್ತಿರುವುದರ ಸಲುವು ಕನ್ನಡಿಗರಲ್ಲಿ ತಾಯ್ನುಡಿಯ ಬಗ್ಗೆ ಒಲವಿಲ್ಲದಿರುವುದು ಮತ್ತು ತಮ್ಮಾಳ್ಕೆ ಕಟ್ಟಿಕೊಳ್ಳದೇ ಸ್ವತಂತ್ರರೆಂಬ ಬ್ರಮೆಯಲ್ಲಿರುವುದು.”

  ನೂರಾರು (ಸಾವಿರಾರು ಅಂದ್ರೆ ಮತ್ತೆ ತಪ್ಪು ಹುಡುಕ್ತೀರ) ವರ್ಷಗಳಿಂದ ನಡೆದ ಹಾದಿ ತಪ್ಪು ಅಂತಾ ಹೊಸಾ ದಾರಿ ಹಾಕಿಕೊಡ್ತಾ ಇರೋದು ಮೆಚ್ಚಬೇಕಾದ ವಿಷಯವೇ ಆದ್ರೂ, ನಾವು ಹಾಕಿಕೊಡ್ತಾ ಇರೋ ಹಾದೀಲಿ ನಮ್ಮದೂಂತ ಇರ್ಲಿ ಅಂತಾ ನಿಮ್ಮದೇ ಹೊಸಾ ಭಾಷೆ, ಬರಣಿಗೆ, ಪದ, ಪದಾರ್ಥಗಳನ್ನ ನಮ್ಮ (ಹಾದಿಗರ) ಮೇಲೆ ಹೇರ್ತಾ ಇದೀರ. ಅಂದ ಮೇಲೆ ಅವರಿಗೂ ನಿಮಗೂ ಏನು ವ್ಯತ್ಯಾಸ? ಭಾಷೆ ಶುದ್ಧಿ ಮಾಡೋದು ಬಿಡಿ, ಭಾಷೆಯಲ್ಲಿಲ್ಲದ, ಅತ್ಯವಶ್ಯಕವಾದ ಹೊಸ ಜಗತ್ತಿನ ಪದ ಪದಾರ್ಥಗಳನ್ನ ಎರವಲು ಹೇಗೆ ತರೋದು ಅನ್ನೊದರ ಬಗ್ಗೆ ಚಿಂತನೆ ಮಾಡಿ.

 2. ಪಂಡಿತರಿಗೂ ಪಾಮರರಿಗೂ ಹಳೆಯವರಿಗೂ ಹೊಸಬರಿಗೂ ಶಿವಕುಮಾರರಿಗೂ ಶಿವನಿಗೂ ಯಾರಿಗೂ ಅರ‍್ತವಾಗದ ಬರವಣಿಗೆಯ ಬಗ್ಗೆ ನೀವ್ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ? ಬಿಟ್ಟಾಕಿ, ಏನೋ ಒದರಿಕೊಳ್ಳುತ್ತಿದ್ದಾರೆ ಇವರು ಎಂದು! ನಾವು ಮಾಡುವುದನ್ನು ಮಾಡುತ್ತೇವೆ! ಅದನ್ನು ನಿಮ್ಮ ಮೇಲೆ ಹೇರಿದ್ದೇವೆ ಎಂದು ನಿಮಗೇಕೆ ಅನ್ನಿಸಿದೆ?

 3. ಶಿವಕುಮಾರ ಅವರೇ,
  1981 ರಲ್ಲಿ ಒಂದು ವರ್ಶ ತುಂಬುವುದಕ್ಕೆ ಮುಂಚೆ ಸಾಯುವ ಮಕ್ಕಳ ಎಣಿಕೆ ಹೀಗಿತ್ತು. ಕರ್ನಾಟಕದಲ್ಲಿ ಸಾವಿರಕ್ಕೆ 78, ಕೊರಿಯಾದಲ್ಲಿ ಸಾವಿರಕ್ಕೆ 15, ತಮಿಳು ನಾಡಿನಲ್ಲಿ ಸಾವಿರಕ್ಕೆ 104.
  2012 ರಲ್ಲಿ ಹೀಗಿದೆ: ಕರ್ನಾಟಕದಲ್ಲಿ ಸಾವಿರಕ್ಕೆ 48, ಕೊರಿಯಾದಲ್ಲಿ ಸಾವಿರಕ್ಕೆ 5, ತಮಿಳುನಾಡಿನಲ್ಲಿ ಸಾವಿರಕ್ಕೆ 37.
  ಕಳೆದ ಮೂವತ್ತೊಂದು ವರ್ಶಗಳಲ್ಲಿ ಕರ್ನಾಟಕಕ್ಕಿಂತ ತಮಿಳುನಾಡು, ತಮಿಳುನಾಡಿಗಿಂತ ಕೊರಿಯಾ ಹೆಚ್ಚು ಸುದಾರಿಸಿರುವುದನ್ನು ನೋಡಬಹುದು. ತಮಿಳು ನಾಡಿನಲ್ಲಿ ನಾಡ ಪರ ಪಕ್ಶಗಳು ಇರುವುದೂ, ಸ್ವತಂತ್ರಿಗಳಾದ ಕೊರಿಯಾದವರು ನಾಡು ಕಟ್ಟುವಲ್ಲಿ ತಾಯ್ನುಡಿ ಬಳಸಿರುವುದೂ ಇದಕ್ಕೆ ಕಾರಣ ಅನ್ನುವುದು ನನ್ನ ಅನಿಸಿಕೆ.
  ಮೇಲಿನ ನನ್ನ ಅಂಕಣದಲ್ಲಿ ತಿದ್ದುಪಡಿ: ಕೊರಿಯಾದಲ್ಲಿ ಒಂದು ವರ್ಶದೊಳಗಿನ ಮಕ್ಕಳ ಸಾವಿನ ಎಣಿಕೆ 90/1000 ಇದ್ದಿದ್ದು 1960 ರಲ್ಲಿ. 1981 ರಲ್ಲಿ ಆ ಎಣಿಕೆಯನ್ನ 15/1000 ಕ್ಕೆ ಇಳಿಸಿದ್ದರು. 1960ರಲ್ಲಿನ ಕರ್ನಾಟಕ ಮತ್ತು ತಮಿಳು ನಾಡುಗಳ ಎಣಿಕೆ ಲಬ್ಯವಿಲ್ಲ.
  ಹೆಚ್ಚಿನ ವಿವರಗಳಿಗೆ ಇಲ್ಲಿಗೆ ಹೋಗಿ: http://tinyurl.com/mbrxuwm
  ನಿಮಗಿದು ಈಗ ಅರ್ತವಾಗಿದ್ದಲ್ಲಿ ಈ ಅಂಕಿ-ಅಂಶದ ಬಗ್ಗೆ ನಿಮ್ಮ ಅನಿಸಿಕೆ ಏನು?

ಅನಿಸಿಕೆ ಬರೆಯಿರಿ: