ಡಚ್ಚರು ಮತ್ತು ಯಹೂದಿಗಳಿಂದ ಕಲಿಯಬೇಕಾದುದೇನು?
ಮೂಲ: ಮಹಾತ್ಮ ಗಾಂದಿ
ಎಲ್ಲರಕನ್ನಡಕ್ಕೆ: ಸಿದ್ದರಾಜು ಬೋರೇಗವ್ಡ
ಡಾ. ಮೆಹ್ತಾರವರು ತೋರುತ್ತಿರುವ ಒಲವು ಇಂಗ್ಲಿಶ್ನಲ್ಲಿ ಕಲಿತ ಬಾರತೀಯರಿಗೆ ತಲುಪುತ್ತದೆ ಎಂದುಕೊಳ್ಳುತ್ತೇನೆ. ಕೆಳಗಿನ ಸಾಲುಗಳನ್ನು ಅವರು ಮದ್ರಾಸಿನ ವೇದಾಂತ ಕೇಸರಿ ಪತ್ರಿಕೆಗೆ ಬರೆದಿದ್ದಾರೆ. ಈ ಸಾಲುಗಳು ಅಚ್ಚಾಗಿ ಬಾರತದ ತುಂಬೆಲ್ಲಾ ಹರಡುತ್ತಿವೆ.
ತಾಯ್ನುಡಿಯನ್ನು ಕಲಿಕೆಯ ಒಯ್ಯುಗೆಯಾಗಿ (Medium of Instruction) ಬಳಸುವ ಮಾತು ಇಡೀ ಬಾರತದ ಮಟ್ಟಿಗೇ ಅರಿದಾದುದು. ತಾಯ್ನುಡಿಯನ್ನು ಕಡೆಗಾಣುವುದೆಂದರೆ ನಮ್ಮನ್ನು ನಾವೇ ಕೊಂದುಕೊಳ್ಳುವುದಕ್ಕೆ ಸಮ. ಬಾರತದಲ್ಲಿ ಹೊಟ್ಟಿನ (public) ಮತ್ತು ನಾಡೊಲವಿನ (patriotic) ಕೆಲಸಗಳನ್ನು ಇಂಗ್ಲಿಶ್ನಲ್ಲಿ ಕಲಿತವರು ಮಾತ್ರವೇ ಮಾಡುತ್ತಿರುವುದರಿಂದ ಇಂಗ್ಲಿಶನ್ನೇ ಕಲಿಕೆಯ ಒಯ್ಯುಗೆಯಾಗಿ ಮುಂದುವರಿಸಬೇಕು ಅನ್ನುವವರು ಇದ್ದಾರೆ. ಅಶ್ಟಾದರೂ ಅಲ್ಲದಿದ್ದಲ್ಲಿ ಇವರ ವಾದ ಕೇಡಿನದಾಗಿರುತ್ತಿತ್ತು. ಏಕೆಂದರೆ, ಬಾರತದಲ್ಲಿ ಇಂದು ಕಲಿಕೆಯನ್ನು ಇಂಗ್ಲಿಶಿನಲ್ಲಿ ಮಾತ್ರ ಕೊಡಮಾಡಲಾಗುತ್ತಿದೆ. ಆದರೆ, ದಿಟವೇನೆಂದರೆ, ಇಂಗ್ಲಿಶಿನಲ್ಲಿರುವ ಕಲಿಕೆಗೆ ನಾವು ಸವೆಸುತ್ತಿರುವ ವೇಳೆಯನ್ನು ಗಮನಿಸಿದರೆ ಅದರಿಂದ ಅಶ್ಟು ಒಳಿತೇನೂ ಆಗುತ್ತಿಲ್ಲ. ನಾವು ಕಲಿಕೆಯನ್ನು ಎಲ್ಲರಿಗೂ ತಲುಪಿಸಲು ಆಗುತ್ತಿಲ್ಲ.
ನಾನು ಡಾ. ಮೆಹ್ತಾ ಅವರ ಚಿಂತನೆಯನ್ನು ಮುಂದಾಲೋಚಿಸಲಾರೆ. ಅವರು ಈ ವಿಶಯದಲ್ಲಿ ತರಾತುರಿಯಲ್ಲಿದ್ದಾರೆ. ಅವರು ಮಮ್ಮಲ ಮರುಗಿ ಬರೆಯುತ್ತಾರೆ. ಅವರು ವಿಶಯದ ಬಗ್ಗೆ ಒಳಿತು ಕೆಡುಕುಗಳನ್ನು ಅಳೆದು ತೂಗಿ ನೋಡಿದ್ದಾರೆ. ಬಹಳ ಆದಾರಗಳನ್ನು ಒಟ್ಟುಮಾಡಿದ್ದಾರೆ.
ಈ ವಿಶಯದ ಮೇಲೆ ಹೊಸದಾಗಿ ಸೇರ್‍ಪಡೆಯಾಗಿ ಮಾತನಾಡಿರುವವರು ಅಂದರೆ ಮಾನ್ಯ ವಯ್ಸ್ರಾಯ್ (Viceroy) ಅವರು. ಮಾನ್ಯ ವಯ್ಸ್ರಾಯ್ ಅವರು ತಮ್ಮ ಮುಂದಿರುವ ತೊಡಕಿಗೆ ಯಾವುದೇ ಪರಿಹಾರವನ್ನು ಕೊಡಮಾಡಿಲ್ಲವಾದರೂ ನಮ್ಮ ಕಲಿಮನೆಗಳಲ್ಲಿ ತಾಯ್ನುಡಿಯನ್ನು ಒಯ್ಯುಗೆಯಾಗಿ ಬಳಸುವುದು ಆಗಲೇಬೇಕಾದ ಕೆಲಸ ಎಂದು ಮನಗಂಡಿದ್ದಾರೆ. ಇಡೀ ನೆಲದ ತುಂಬಾ ಹರಡಿರುವ ನಡುವಣ ಮತ್ತು ಮೂಡಣ ಯೂರೋಪಿನ ಮೂಲದ ಯಹೂದಿಗಳು ತಮ್ಮ-ತಮ್ಮ ನಡುವಿನ ಮಾತುಕತೆಗಾಗಿ ಒಂದೇ ನುಡಿಯ ಬೇಡಿಕೆ ಇದೆಯೆಂದು ಅರಿತಿದ್ದಾರೆ. ಅದಕ್ಕಾಗಿ ಯಡ್ಡಿಶ್ ಎಂಬ ತಮ್ಮ ಒಳನುಡಿಯನ್ನು ನುಡಿಯ ಮಟ್ಟಕ್ಕೆ ಏರಿಸಿದ್ದಾರೆ. ಇಡೀ ನೆಲದ ನುಡಿಗಳಲ್ಲಿ ಬರೆದಿಡಲಾಗಿರುವ ಒಳ್ಳೊಳ್ಳೇ ಹೊತ್ತಗೆಗಳನ್ನು ಯಡ್ಡಿಶ್ಗೆ ನುಡಿಮಾರಿದ್ದಾರೆ. ಹಲವೆಡೆಗಳಲ್ಲಿ ಚದುರಿಹೋಗಿ ಹಲನುಡಿಗಳ ಪರಿಣಿತಿಯನ್ನು ಪಡೆದಿದ್ದರೂ, ಯಹೂದಿಗಳಿಗೆ ತಮ್ಮ ತಮ್ಮ ಆತ್ಮಗಳನ್ನು ಸಂತಯ್ಸಲಾಗಿರಲಿಲ್ಲ. ಅಂತೆಯೇ, ಕಲಿತ ಯಹೂದಿಗಳು ಸುಮ್ಮನೆಯೂ ಕೂರಲಿಲ್ಲ. ತಮ್ಮದಲ್ಲದ ನುಡಿಗಳನ್ನು ಕಲಿತ ಮೇಲಶ್ಟೇ ಗವ್ರವ ಎನ್ನುವ ಪರಿಸರವನ್ನು ಬದಲಿಸಿದರು. ಯಹೂದಿ ಮಕ್ಕಳು ತಮ್ಮ ತಾಯಂದರಿಂದ ಕಲಿಯುತ್ತಿದ್ದ ಒಂದು ಒಳನುಡಿಯನ್ನು ಸಿರಿವಂತಗೊಳಿಸಿದರು. ಇಡೀ ನೆಲದ ಒಳ್ಳೊಳ್ಳೇ ಹೊಳಹುಗಳನ್ನು ತಮ್ಮ ಯಡ್ಡಿಶ್ ನುಡಿಯಲ್ಲಿ ಆಡಿದರು. ಇದೊಂದು ಅಚ್ಚರಿ ತರಿಸುವಂತಾ ಕೆಲಸ. ಇದನ್ನು ನಮ್ಮ ಪೀಳಿಗೆಯವರೇ ಮಾಡಿದ್ದಾರೆ. ವೆಬ್‍ಸ್ಟರ್ ನಿಗಂಟು ಯಡ್ಡಿಶ್ ನುಡಿಯನ್ನು ‘ಹಲ ನುಡಿಯಾಡುವ ಯಹೂದಿಗಳ ಕೀಸರ (Jargon)’ ಎಂದೇ ಹೇಳುತ್ತದೆ. ಆದರಿಂದು, ಯಡ್ಡಿಶ್ ಅನ್ನು ಒಂದು ತಾಯ್ನುಡಿ ಎಂದು ಕರೆಯದಿದ್ದರೆ ಅಪಮಾನವೆಂದೇ ಯಹೂದಿಗಳು ಬಗೆಯುತ್ತಾರೆ. ಒಂದು ಕೀಸರವನ್ನು ಒಂದೇ ಪೀಳಿಗೆಯಲ್ಲಿ ಸಿರಿವಂತ ನುಡಿಯಾಗಿ ಬೆಳೆಸುವುದು ಯಹೂದಿ ಪಂಡಿತರಿಗೆ ಸಾದ್ಯವಾಯಿತು ಅನ್ನುವುದಾದರೆ, ನಮಗದಿನ್ನೂ ಸುಳುವಾದ ಕೆಲಸ. ಏಕೆಂದರೆ, ನಮ್ಮ ತಾಯ್ನುಡಿಗಳು ಈಗಾಗಲೇ ಸಾಗುವಳಿಗೊಂಡು ಬೆಳೆದಿರುವ ನುಡಿಗಳು.
ತೆಂಕಣ ಆಪ್ರಿಕಾದ ಅನುಬವವೂ ನಮಗೆ ಇದೇ ಪಾಟವನ್ನು ಕಲಿಸುತ್ತದೆ. ಅಲ್ಲಿ ಡಚ್ಚಿನ ಒಳನುಡಿಯಾದ ಟಾಲ್ ಮತ್ತು ಇಂಗ್ಲಿಶಿನ ನಡುವೆ ಪಯ್ಪೋಟಿ ಇತ್ತು. ಬೋರ್ (Boer) ತಾಯಂದಿರು ಮತ್ತು ಬೋರ್ ತಂದೆಯರು ತಮ್ಮ ಬೆಳೆವ ಮಕ್ಕಳಿಗೆ ಟಾಲ್ ನುಡಿಯಲ್ಲಿ ಮಾತಾಡಿಸಿ ಬೆಳೆಸಿದ್ದರು. ಅವರ ಮಕ್ಕಳು ಶಾಲೆಗಳಲ್ಲಿ ಇಂಗ್ಲಿಶ್ನಲ್ಲಿ ಕಲಿಯುವುದನ್ನು ಅವರು ಒಪ್ಪಲಿಲ್ಲ. ಅಲ್ಲಿ ಇಂಗ್ಲಿಶ್ ಪರವಾದ ವಾದ ಬಲವಾಗಿತ್ತು. ಇಂಗ್ಲಿಶ್ ಪರವಾಗಿ ವಾದಿಸುವವರು ಚಾಣಾಕ್ಶರಾಗಿದ್ದರು. ಕೊನೆಗೆ, ಇಂಗ್ಲಿಶ್ ನುಡಿಯು ಬೋರ್ ನಾಡೊಲವಿನ ಮುಂದೆ ಮಣಿಯಬೇಕಾಯಿತು. ಇಲ್ಲಿ ನೆನೆಯಬೇಕಾದ ಇನ್ನೊಂದು ವಿಶಯವೆಂದರೆ, ಅವರು ಡಚ್ ನುಡಿಯನ್ನೂ ಬೇಡವೆಂದಿದ್ದರು. ಹಾಗಾಗಿ, ಯುರೋಪಿನ ಡಚ್ ಬರಹದ ನುಡಿಗೆ ಒಗ್ಗಿಕೊಂಡಿದ್ದ ಕಲಿಸುಗರು ಸುಳುವಾದ ಟಾಲ್ ನುಡಿಯಲ್ಲಿ ಕಲಿಸುವುದನ್ನು ಆರಂಬಿಸಬೇಕಾಯಿತು! ಹಾಗಾಗಿಯೇ, ಕೆಲವೇ ಕೆಲವು ವರ್‍ಶಗಳ ಹಿಂದೆ ಸ್ವಾಬಿಮಾನಿ ಹಳ್ಳಿಗರ ಮಾತಿನ ನುಡಿ ಮಾತ್ರವಾಗಿದ್ದ ಟಾಲ್ ನುಡಿಯಲ್ಲಿ ಇಂದು ಒಳ್ಳೊಳ್ಳೆ ಗುಣಮಟ್ಟದ ನಲ್ಬರಹವು ಬೆಳೆಯುತ್ತಿದೆ.
ನಮ್ಮ ತಾಯಂದಿರು ಆಡುವ ನುಡಿಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುವುದು ನಮ್ಮ ಮೇಲೆಯೇ ನಂಬಿಕೆಯನ್ನು ಕಳೆದುಕೊಳ್ಳುತ್ತಿರುವುದರ ಕುರುಹು. ಅದು ನಮ್ಮೊಳಗಿನ ಕೊಳಕನ್ನು ಎತ್ತಿ ತೋರಿಸುವ ಕುರುಹು. ನಮ್ಮ ತಾಯಂದಿರು ಆಡುವ ನುಡಿಯನ್ನು ನಾವು ಗವ್ರವಿಸದೇ ಹೋದಲ್ಲಿ ನಮಗೆ ಸ್ವಾತಂತ್ರವನ್ನು ತಟ್ಟೆಯಲ್ಲಿಟ್ಟುಕೊಟ್ಟರೂ ನಮ್ಮ ನಾಡೆಂದೂ ಸ್ವತಂತ್ರವಾಗುವುದಿಲ್ಲ.
ಇತ್ತೀಚಿನ ಅನಿಸಿಕೆಗಳು