ಮನಸ್ಸಿದ್ದರೆ ಮುಗಿಲು (ಕಯ್ ಅಶ್ಟೇನು ಮುಕ್ಯವಲ್ಲ)!

– ಪ್ರೇಮ ಯಶವಂತ

ಇಲ್ಲೊಬ್ಬರು ಹುಟ್ಟುವಾಗಲೇ ತಮ್ಮ ಎರಡು ಕಯ್ಗಳನ್ನು ಕಳೆದುಕೊಂಡರೂ 130 ಗಂಟೆಗಳ ಕಾಲ ಬಾನೋಡ (aeroplane) ಹಾರಿಸಿ ಗಿನ್ನೆಸ್ ದಾಕಲೆ ಮಾಡಿದ್ದಾರೆ! ’ಕಯ್ಗಳಿಲ್ಲದಿದ್ದರೆ ಊಟ ಮಾಡಲೂ ಆಗೋಲ್ಲಾ ಅಂತದರಲ್ಲಿ ಬಾನೋಡ ಓಡಿಸುವುದೇ ?! ಇನ್ನು ದಾಕಲೆಯನ್ನು ಹುಟ್ಟುಹಾಕುವುದಂತೂ ದೂರದ ಮಾತು’ ಇದನ್ನು ಕೇಳಿದ ಯಾರಿಗಾದರೂ ಹೀಗೆ ಅನಿಸದೇ ಇರದು. ಆದರೆ ಇದು ಸಾದ್ಯ ಎಂದು ಒಬ್ಬರು ತೋರಿಸಿಕೊಟ್ಟಿದ್ದಾರೆ, ಅವರೇ ಕಯ್ಗಳಿಲ್ಲದಿದ್ದರೂ ಮುಗಿಲಲ್ಲಿ ಹಾರಾಟ ನಡೆಸಿದ ದಿಟ್ಟ ಹೆಣ್ಣು ಜೆಸ್ಸಿಕಾ ಕಾಕ್ಸ್ (Jessica Cox).

jessica-cox-1

ಹಿರಿಮೆ ಮುಟ್ಟುವ ಇಂತಹ ಹಾದಿಯಲ್ಲಿ ಜೆಸ್ಸಿಕಾ ಹಲವು ಬಗೆಯ ಏರಿಳಿತಗಳನ್ನು ಕಂಡವರು. ಹುಟ್ಟಿನಿಂದಲೇ ಹೆಳವರಾಗಿದ್ದ (handicap) ಇವರು ಒಡಲಿನ ಕೊರತೆಯ ಜೊತೆಗೆ ಅದಕ್ಕೆ ಅಂಟಿಕೊಂಡ ಮಾನಸಿಕ ತೊಳಲಾಟವನ್ನೂ ಅನುಬವಿಸಬೇಕಾಯಿತು. ಜೆಸ್ಸಿಕಾ ಬಡಗಣ (north) ಅಮೇರಿಕಾದ ಆರಿಜೋನಾದಲ್ಲಿ ಸಿಯಾರ ವಿಸ್ತಾ ಎಂಬಲ್ಲಿ 1982  ಪೆಬ್ರವರಿ 2 ರಂದು ಹುಟ್ಟಿದರು. ಹೊರಗಿನ ಮಂದಿಗೆ  ಇವರು ಹೆಳವರಂತೆ ಕಂಡರೂ, ಅವರ ತಂದೆಗೆ ಹಾಗೆಂದೂ ಅನಿಸಲಿಲ್ಲ.

ಆರಂಬದಲ್ಲಿ ಇವರ ಅಮ್ಮ ಮಾತ್ರ ಮಾನಸಿಕವಾಗಿ ತುಸು ಕುಗ್ಗಿದ್ದರು. ಎರಡು ಕಯ್ಗಳಿಲ್ಲದೆ ಬದುಕು ಕಟ್ಟಿಕೊಳ್ಳುವುದರಲ್ಲಿ ಮಗಳು ಪಡಬಹುದಾದ ಕಶ್ಟಗಳನ್ನು ನೆನೆದು ತಳಮಳಗೊಳ್ಳುತ್ತಿದ್ದರು. ನಂತರದ ದಿನಗಳಲ್ಲಿ, ಅವರು ಮಗಳ ಆರಯ್ಕೆಯತ್ತ ಹೆಚ್ಚೆಚು ಗಮನಹರಿಸ ತೊಡಗಿದರು. ಅವಳಲ್ಲಿ ಹೆಚ್ಚು ನಂಬಿಕೆಯನ್ನು ತುಂಬಿದರು. ಅಪ್ಪ ಜೆಸ್ಸಿಕಾಳ ಊರುಗೋಲಾದರು.

Picture1

ಜೆಸ್ಸಿಕಾರವರು ತಮ್ಮ ಚಿಕ್ಕಂದಿನ ದಿನಗಳನ್ನು ತುಸು ಅಂಜಿಕೆ, ಮುಜುಗರದಿಂದಲೇ ಕಳೆದರು. ಎಲ್ಲರಂತೆ ತಮ್ಮ ಕೆಲಸಗಳನ್ನು ’ನಾನೇ’ ಯಾಕೇ ಮಾಡಿಕೊಳ್ಳಬಾರದು ? ನನಗೇಕೇ ತನ್ಪರಿಜಲ್ಲದ (artificial) ಕಯ್ಗಳು? ಕಯ್ಗಳು ಇಲ್ಲದಿದ್ದರೇ ಏನಂತೇ, ನನ್ನ ಕಾಲ್ಗಳಿಲ್ಲವೇ ಅನ್ನುವ ದಿಟ್ಟ ವಿಚಾರಗಳು ಜೆಸ್ಸಿಕಾ ಅವರಲ್ಲಿ ಮೂಡ ತೊಡಗಿದವು. ಅಲ್ಲಿಯವರೆಗೆ ಮಾಡಿದ (artificial) ಕಯ್ಗಳನ್ನು ಬಳಸುತ್ತಿದ್ದ ಜೆಸಿಕ, ಅವುಗಳ ಬದಲಾಗಿ ತಮ್ಮ ಕಾಲುಗಳನ್ನೇ ಎಲ್ಲ ಕೆಲಸಕ್ಕೂ ಬಳಸ ತೊಡಗಿದರು. ಇದು ಅವರ ಬಾಳಿನ ದಿಕ್ಕನ್ನೇ ಬದಲಾಯಿಸಿತು. ನಂತರ ಕುಣಿತ, ಮಣಿಯುವಾಟ (gymnastics) ಮತ್ತು ಇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ಎಲ್ಲರಿಂದಲೂ, ಎಲ್ಲದರಲ್ಲೂ ’ಸಯ್’ ಎನಿಸಿಕೊಂಡರು.

Picture2

ಆರಿಜೋನಾದ  ಕಲಿಕೆವೀಡಿನಲ್ಲಿ (university)  ಒಳಗಿನರಿಮೆಯ (psychology) ವಿಶಯದಲ್ಲಿ ಬಿರುದು ಪಡೆದಿರುವ ಜೆಸಿಕ, ಕಾಳಗದ ಕಲೆಯಲ್ಲೂ ಪಳಗಿ ಅಮೇರಿಕನ್  ಟೇಕ್ವಾಂಡೋ ಕೂಟದಿಂದ ಎರಡು ಕಪ್ಪುಪಟ್ಟಿಗಳನ್ನೂ (black-belt) ಪಡೆದಿದ್ದಾರೆ. ಅಶ್ಟೆ ಏಕೆ ಅವರು ಇತರ ಹೆಂಗಳೆಯರಿಗೆ ಸರಿಸಾಟಿಯಾಗಿ, ತಮ್ಮ ಕಾಲುಗಳಿಂದಲೇ ಸಿಂಗಾರ ಮಾಡಿಕೊಳ್ಳುತ್ತಾರೆ, ಎಲ್ಲರಂತೆ ಗಾಡಿಗೆ ಉರುವಲು (petrol) ತುಂಬಿಸುತ್ತಾರೆ. ಈಜು, ಮೇಲ್ನೀರಾಟದಂತಹ (wakeboarding)  ಆಟಗಳನ್ನೂ ಇವರು ಆಡುವುದುಂಟು. ತಮ್ಮ ಕಾಲುಗಳಿಂದ  ಕೆಲಸಗಳನ್ನು ಮಾಡುವ ಇವರ ಬಗೆ ಎಲ್ಲರನ್ನೂ ಬೆರಗುಗೊಳಿಸುವಂತದು!

ಈಗ ಜೆಸ್ಸಿಕಾರವರು  ’ಜೆಸ್ಸಿಕಾ  ಕಾಕ್ಸ್ ಮೋಟಿವೇಶ್ನಲ್ ಸರ್‍ವಿಸಸ್’ ಎಂಬಲ್ಲಿ  ಹುರಿದುಂಬಿಸುವ ಮಾತುಗಾರ‍್ತಿಯಾಗಿ (motivational speaker) ಕೆಲಸ ಮಾಡುತ್ತಿದ್ದಾರೆ . ಇವರು  ತಮ್ಮ ಎದೆಗಾರಿಕೆಯ ಗೆಯ್ಮೆ ಹಾಗು ಮಾತುಗಳಿಂದ ವಿಶ್ವದೆಲ್ಲೆಡೆ ಮನೆಮಾತಾಗಿದ್ದಾರೆ. ಕಯ್ಯಿ ಇರುವವರ ಕಯ್ಲಾಗದ ಕೆಲಸಗಳನ್ನೂ  ಜೆಸ್ಸಿಕಾ ತಮ್ಮ ಕಾಲುಗಳಿಂದ ಮಾಡಿ ತೋರಿಸಿದ್ದಾರೆ. ’ಒಟ್ಟಾರೆ ಹೇಳುವುದಾದರೆ ಆಡು ಮುಟ್ಟದ ಸೊಪ್ಪಿಲ್ಲ, ಜೆಸ್ಸಿಕಾ ಮಾಡದ ಗೆಯ್ಮೆಗಳಿಲ್ಲ.’

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *