ಕಲಿಕೆಯಲ್ಲಿ ಎಸ್ಟೋನಿಯಾಗಿಂತಲೂ ನಾವು ಹಿಂದೆ! ಎಶ್ಟು ಅನ್ಯಾಯ!
ಎಸ್ಟೋನಿಯಾ ಎಂಬ ಪುಟ್ಟ ನಾಡು 1991ರವರೆಗೂ ಯು.ಎಸ್.ಎಸ್.ಆರ್. ಆಡಳಿತದಡಿ ಇದ್ದಿತ್ತು. ಯು.ಎಸ್.ಎಸ್.ಆರ್ನ ಅಡಿಯಿದ್ದಾಗ ಎಸ್ಟೋನಿಯಾಗೆ ತನ್ನದೇ ಆದ ಒಂದು ಉದ್ದಿಮೆಯೇರ್ಪಾಡು (industrial system) ಕಟ್ಟಿಕೊಳ್ಳಲು ಸಾದ್ಯವಾಗಿರಲಿಲ್ಲ, ತನ್ನದೇ ಆದ ಹಣಕಾಸು ಏರ್ಪಾಡು (financial system) ಕಟ್ಟಿಕೊಳ್ಳಲು ಸಾದ್ಯವಾಗಿರಲಿಲ್ಲ. ಅಲ್ಲಿಯ ಜನರು ತಮ್ಮದೇ ಆದ ಎಸ್ಟೋನಿಯನ್ ನುಡಿ ಹೊಂದಿದ್ದರೂ, ಕಲಿಕೆಯೇರ್ಪಾಡಿನಲ್ಲಿ ಕಲಿಕೆ ಮಾದ್ಯಮವಾಗಿ ರಶ್ಯನ್ ನುಡಿಯನ್ನೇ ಬಳಸಲಾಗುತ್ತಿತ್ತು. ಯು.ಎಸ್.ಎಸ್.ಆರ್ನಲ್ಲಿ ಬೇರೆ ಬೇರೆ ನುಡಿಯಾಡುತ್ತಿದ್ದ ಜನರಿದ್ದರೂ ರಶ್ಯನ್ ನುಡಿಗೆ ಹಲನಾಡಿನಲ್ಲಿ ಒಪ್ಪಲಾದ ನುಡಿ ಎಂಬ ಪಟ್ಟ ಕೊಟ್ಟು ಮಿಕ್ಕ ನುಡಿಯಾಡುಗರ ಮೇಲೆ ರಶ್ಯನ್ ನುಡಿಯನ್ನು ಹೇರಲಾಗುತ್ತಿತ್ತು.
ಸ್ವಾತಂತ್ರ ತಂದುಕೊಟ್ಟ ಬದಲಾವಣೆ
ಯು.ಎಸ್.ಎಸ್.ಆರ್ನಿಂದ ಬಿಡುಗಡೆ ಹೊಂದಿದ ಮೇಲೆ, ಎಸ್ಟೋನಿಯಾ ತನ್ನದೇ ಆದ ತೆರಿಗೆ ನೀತಿ, ತೆರೆದ ಮಾರುಕಟ್ಟೆ ನೀತಿಗಳನ್ನು ತನ್ನದಾಗಿಸಿಕೊಂಡಿತು. ಮೊದಲ ಹಂತದ ಕಲಿಕೆಯಿಂದ ಹಿಡಿದು, ಡಿಗ್ರಿವರೆಗೂ ಎಸ್ಟೋನಿಯಾ ನುಡಿಯಲ್ಲಿಯೇ ಕಲಿಯಬಹುದಾದಂತಹ ಏರ್ಪಾಡನ್ನು ಕಟ್ಟಿತು. ಯು.ಎಸ್.ಎಸ್.ಆರ್ನ ಕಬ್ಬಿಣ ಮುಶ್ಟಿಯಲ್ಲಿದ್ದಾಗ ಮಾಡಿಕೊಳ್ಳಲಾಗದಂತಹ ಏರ್ಪಾಡುಗಳನ್ನು, ಮಾಡಿಕೊಂಡ ಬಳಿಕ ಎಸ್ಟೋನಿಯಾದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು.
ಚಳಕದರಿಮೆಯ ಬಳಕೆಗೆ ಹೆಸರುವಾಸಿಯಾದ ಎಸ್ಟೋನಿಯಾ
1991ರಲ್ಲಿ ಚಳಕದರಿಮೆಯ (technology) ಬಳಕೆಯಲ್ಲಿ ತುಂಬಾ ಹಿಂದಿದ್ದ ಎಸ್ಟೋನಿಯಾ, ಇವತ್ತಿನ ದಿನ ಜಗತ್ತೇ ಬೆರಗಾಗಿ ನೋಡುವ ಮಟ್ಟಿಗೆ ಚಳಕದರಿಮೆಯನ್ನು ಬಳಸತೊಡಗಿದೆ. ಜೊತೆ ಜೊತೆಗೇ, ಚಳಕದರಿಮೆಗೆ ಸಾಕಶ್ಟು ಕೊಡುಗೆಗಳನ್ನೂ ನೀಡುತ್ತಿದೆ. ಸ್ಕಯ್ಪ್ (skype), ಹಾಟ್ಮೇಲ್ (hotmail), ಕಾಜಾ (kazaa) ಮುಂತಾದ ಮಂದಿಮೆಚ್ಚಿದ ಚಳಕಗಳನ್ನು ಬೆಳೆಸಿದ್ದುದರ ಹಿಂದೆ ಎಸ್ಟೋನಿಯಾ ಮಂದಿಯಿದ್ದಾರೆ. ಚಳಕದರಿಮೆಯ ಸುತ್ತ ಕಂಪನಿಗಳನ್ನು ಹುಟ್ಟುಹಾಕುವಲ್ಲಿ ಇವತ್ತು ಎಸ್ಟೋನಿಯಾ ಮಂದಿ ತುಂಬಾ ಮುಂದಿದ್ದಾರೆ. ಟಲ್ಲೀನ್ನ್ ಊರಿನಲ್ಲಿ ಎಸ್ಟೋನಿಯಾದವರೇ ಹುಟ್ಟು ಹಾಕಿರುವ ಸುಮಾರು 150 ಚಳಕದರಿಮೆ ಕಂಪನಿಗಳಿವೆ. ಎಸ್ಟೋನಿಯಾದ ಮಂದಿಯೆಣಿಕೆ ಸುಮಾರು 12 ಲಕ್ಶ ಮಾತ್ರ ಎಂಬುದನ್ನು ಗಮನಿಸಿದಾಗ, ಅವರ ಸಾದನೆಯ ಹೆಚ್ಚುಗಾರಿಕೆ ಅರಿವಾಗುತ್ತದೆ.
2007ರಲ್ಲಿ ಚುನಾವಣೆಯನ್ನು ಮಿಂಬಲೆ (internet) ಮೂಲಕ ನಡೆಸಲಾಗಿದೆ. ಮಿಂಬಲೆ ಮೂಲಕ ಚುನಾವಣೆ ನಡೆಸಿದ ಮೊದಲ ನಾಡು ಎಂಬ ಹೆಗ್ಗಳಿಕೆಯೂ ಎಸ್ಟೋನಿಯಾದ್ದು. ತಮ್ಮ ತಮ್ಮ ಗಾಡಿಗಳನ್ನು ನಿಲ್ಲಿಸಿ ಅದಕ್ಕೆ ತಗಲುವ ಹಣವನ್ನು (parking fees) ಅಲೆಯುಲಿ (mobile phone) ಮೂಲಕವೇ ಕಟ್ಟಬಹುದಾದಂತಹ ಏರ್ಪಾಡನ್ನು ಎಸ್ಟೋನಿಯ ಕಟ್ಟಿಕೊಂಡಿದೆ. ಮಿಂಬಲೆಯು ಎಲ್ಲರಿಗೂ ಎಟಕುವಂತೆ ಮಾಡಲು, ಬ್ರಾಡ್ಬ್ಯಾಂಡನ್ನು ಮೂಲಬೂತ ಹಕ್ಕೆಂದು ಕರೆಯಲಾಗಿದೆ. ಹಲವು ಮುಂದುವರೆದ ನಾಡುಗಳೇ ಕಟ್ಟಿಕೊಳ್ಳಲಾರದಂತಹ ಏರ್ಪಾಡನ್ನು ಎಸ್ಟೋನಿಯ ಈಗಾಗಲೇ ಕಟ್ಟಿಕೊಂಡಿದೆ.
ತಾಯ್ನುಡಿಯಲ್ಲಿ ಕಲಿಕೆ ಎಂಬ ಬೇರು
 ಎಸ್ಟೋನಿಯಾದ ಮಂದಿ ಇಶ್ಟೆಲ್ಲಾ ಏಳಿಗೆ ಕಾಣಲು ಅಲ್ಲಿಯ ಉದ್ದಿಮೆ ನೀತಿ ಒಂದು ಕಾರಣವೆಂದರೆ, ಇನ್ನೊಂದು ದೊಡ್ಡ ಕಾರಣ ಅಲ್ಲಿಯ ಕಲಿಕೆಯೇರ್ಪಾಡು. 2011ರ ಎಣಿಕೆಯಂತೆ ಎಸ್ಟೋನಿಯಾದಲ್ಲಿ ಸುಮಾರು 463 ಎಸ್ಟೋನಿಯನ್ ಮಾದ್ಯಮ ಶಾಲೆಗಳಿವೆ, 62 ರಶ್ಯನ್ ಮಾದ್ಯಮ ಶಾಲೆಗಳಿವೆ. ಎಸ್ಟೋನಿಯಾದಲ್ಲಿರುವ ರಶ್ಯನ್ ನುಡಿಯಾಡುವ ಮಂದಿ ಹೆಚ್ಚಾಗಿ ರಶ್ಯನ್ ಮಾದ್ಯಮ ಶಾಲೆಗಳಲ್ಲಿ ಕಲಿಯುತ್ತಾರೆ. ಉನ್ನತ ಕಲಿಕೆಯಲ್ಲಿ 90.2%ನಶ್ಟು ಎಸ್ಟೋನಿಯನ್ ಮಾದ್ಯಮದಲ್ಲಿ ನಡೆಯುತ್ತದೆ, 7.8%ನಶ್ಟು ರಶ್ಯನ್ ಮಾದ್ಯಮದಲ್ಲಿ ನಡೆಯುತ್ತಲಿದ್ದು, ಮಿಕ್ಕ 1.85%ನಶ್ಟು ಇಂಗ್ಲೀಶ್ ಮಾದ್ಯಮದಲ್ಲಿ ನಡೆಯುತ್ತದೆ. ಹೊರನಾಡಿನಿಂದ ಎಸ್ಟೋನಿಯಾಗೆ ಉನ್ನತ ಕಲಿಕೆ ನಡೆಸಲು ಬರುವವರು ಹೆಚ್ಚಾಗಿ ಇಂಗ್ಲೀಶ್ ಮಾದ್ಯಮವನ್ನು ಆಯ್ದುಕೊಳ್ಳುತ್ತಾರಂತೆ.

ಎಲ್ಲಾ ಹಂತದ ಕಲಿಕೆಯೂ ತಾಯ್ನುಡಿಯಲ್ಲೇ ಸಿಗುವಂತೆ ಮಾಡುವ ಮೂಲಕ, ಸರಿಯಾದ ಉದ್ದಿಮೆ ನೀತಿ ಮತ್ತು ಮಾರುಕಟ್ಟೆ ನೀತಿ ಹೊಂದುವ ಮೂಲಕ, ಎಸ್ಟೋನಿಯಾದ ಮಂದಿ ಸುಮಾರು 20 ವರುಶಗಳಲ್ಲಿ ಜಗತ್ತಿನಲ್ಲೇ ಬೆಳಗುವಂತೆ ಬೆಳೆದು ನಿಂತಿದ್ದಾರೆ.
ಮಾಹಿತಿ ಸೆಲೆ: ದಿ ಎಕನಾಮಿಸ್ಟ್, ವಿಕಿಪೀಡಿಯಾ
(ಚಿತ್ರ: www.foxnews.com, www.facebook.com)

ಇತ್ತೀಚಿನ ಅನಿಸಿಕೆಗಳು