ಹೊಗೆ ಕಳ್ಳಾಟದಲ್ಲಿ ‘ಹೊಗೆ’ ಹಾಕಿಸಿಕೊಂಡ ಜಿ.ಎಂ.!

– ಜಯತೀರ‍್ತ ನಾಡಗವ್ಡ

GM_tavera

ಅಟೋಮೊಬಾಯ್ಲ್ ಕಯ್ಗಾರಿಕೆಯಲ್ಲಿ ಎಲ್ಲಿ ಕೇಳಿದರೂ ಇದೇ ಗುಸು ಗುಸು ಸುದ್ದಿ. ಕೆಲಸದೆಡೆಯ (office) ಕಾಪಿ ಬಿಡುವುಲ್ಲೂ ಅದೇ, ಊಟಕ್ಕೆ ಕುಳಿತಾಗಲೂ ಅದೇ, ಡೆಟ್ರಾಯಿಟ್ನಲ್ಲಿ ಇರುವ ನನ್ನ ಗೆಳೆಯರು ಕರೆ ಮಾಡಿ ಕೇಳಿದ್ದು ಇದೇ ವಿಶಯವನ್ನೇ! ಜನರಲ್ ಮೋಟಾರ‍್ಸನವರ ’ತವೆರಾ’ (Tavera) ಬಂಡಿ ಸುದ್ದಿ ಕೇಳಿದಿಯಾ ಅಂತಾನೇ ಎಲ್ಲೆಡೆ ಮಾತು.  ಅಮೆರಿಕೆಯ ಮೂರ‍್ಮುತ್ತುಗಳಲ್ಲೊಂದಾದ (Big-3 of Auto industry)  ಜನರಲ್ ಮೋಟಾರ‍್ಸ್ ಬಾರತದಲ್ಲಿ ತಯಾರಿಸಿದ ’ತವೆರಾ’ ತರಲೆ ಅಟೊಮೊಬಾಯ್ಲ್ ಕಯ್ಗಾರಿಕೆಯಲ್ಲಿರುವ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಜಗತ್ತಿನಲ್ಲಿ ಈವೊತ್ತಿನ ಕಾರು ಬಂಡಿಗಳ ಪ್ರಮುಕ ಮಾರುಕಟ್ಟೆ ಎನ್ನಿಸಿರುವ ಬಾರತದಲ್ಲಿ ಜನರಲ್ ಮೋಟರ‍್ಸ್ ಬಂಡಿಗಳು ಅಶ್ಟೇನೂ ಹೆಸರುವಾಸಿಯಾಗಿಲ್ಲದಿದ್ದರೂ ತವೆರಾ ’ಹಲಬಳಕೆಯ ನಾಲ್ಗಾಲಿ ಬಂಡಿ’ (multi utility vehicle) ಇದರ ಹೊರತಾಗಿದ್ದು ಮಂದಿ ಮೆಚ್ಚುಗೆ ಪಡೆದು ಜನರಲ್ ಮೋಟರ‍್ಸನ ಗೆಲ್ಲುವ ಕುದುರೆಯಾಗಿತ್ತು. ಟಾಟಾ ಸುಮೋ, ಟೊಯೋಟಾ ಕ್ವಾಲಿಸನಂತಹ  ಹಲಬಳಕೆಯ ಮಂದಿ ಸಾಗಿಸುವ ದೊಡ್ಡ ಕಾರುಗಳನ್ನು ಪಯ್ಪೋಟಿಯಲ್ಲಿ ಬದಿಗೊತ್ತಿದ್ದ ತವೆರಾ, ಅದರ ಬಿಣಿಗೆಯಲ್ಲೇ (engine) ಎಡವಟ್ಟು ನಡೆದಿರುವುದು ಈಗ ಬೆಳಕಿಗೆ ಬಂದಿದೆ.

ಯಾವುದೇ ಒಂದು ಕಾರು, ಬಸ್ಸು, ಟ್ರಕ್ಕು, ಬಯ್ಕು ರಸ್ತೆಗೆ ಇಳಿಯಬೇಕೆಂದರೆ ಅವುಗಳು ಉಗುಳುವ ಕೆಡುಗಾಳಿಯು (pollutants) ಒಂದು ಮಿತಿಯಲ್ಲಿರಬೇಕು. ಕೆಡುಗಾಳಿಯಿಂದ ಮಂದಿಯ ಹದುಳದ (health) ಮೇಲೆ ಉಂಟಾಗುವ ತೊಂದರೆಗಳನ್ನು ಕಡಿಮೆ ಮಾಡುವುದು ಇದರ ಗುರಿ. ಕೆಡುಗಾಳಿಯನ್ನು ಒರೆಗೆಹಚ್ಚಿ ಎಲ್ಲ ಮಾದರಿಯ ಬಂಡಿಗಳಿಗೆ ಸರಕಾರದದಿಂದ ಒಪ್ಪಿಗೆಯೋಲೆ ದೊರೆತ ಮೇಲೆಯೇ ಬಂಡಿಗಳು ಹೊರಬರಬೇಕು. ಮೊದಲ ಸಲ ರಸ್ತೆಗೆ ಇಳಿಸಲು ಒಪ್ಪಿಗೆಪಡೆದ ಮೇಲೂ ವರುಶಕ್ಕೊಮ್ಮೆಯಂತೆ ಸರಕಾರ ನಡೆಸುವ ’ಸರಕು ಒರೆಗೆಹಚ್ಚುವಿಕೆ’ಯಲ್ಲಿ (confirmation of production-COP) ಬಂಡಿಗಳು ತೇರ‍್ಗಡೆಯಾಗಬೇಕು.

ಆದರೆ ’ತವೇರಾ’ ಬಂಡಿ ಹೊರಸೂಸುವ ಕೆಡುಗಾಳಿ ಸರ‍್ಕಾರ ಹಾಕಿರುವ ಮಿತಿಗಿಂತ ಹೆಚ್ಚಿದ್ದು, ಜನರಲ್ ಮೋಟಾರ‍್ಸನ ಹಿರಿಯ ಹುದ್ದೆಯಲ್ಲಿರುವ ಕೆಲವರು ಕಾರಿನ ಕೆಡುಗಾಳಿ ಕಡಿಮೆ ಇದೆ ಎಂದು ತೋರಿಸಲು ಕಳ್ಳ ದಾರಿ ಹಿಡಿದಿದ್ದು ಬೆಳಕಿಗೆ ಬಂದಿದೆ. ಅವರು ತವೇರಾ ಕಾರು ಉಗುಳುವ ಕೆಡುಗಾಳಿಯ ಪ್ರಮಾಣ ಹೆಚ್ಚಿದ್ದರು ಅದನ್ನು ಬೇಕಂತಲೇ ತಿರುಚಿ ಮಾರಾಟಕ್ಕೆ ಅಣಿಗೊಳಿಸಿದ್ದರೆನ್ನಲಾಗಿದೆ.

ಇದರ ನೇರ ಪರಿಣಾಮವಾಗಿ ಈಗಾಗಲೇ ಮಾರಾಟವಾಗಿದ್ದ ಸುಮಾರು 1,14,000 ತವೆರಾ ಬಂಡಿಗಳನ್ನು ಹಿಂತರಿಸಿ ಎಲ್ಲ ಬಂಡಿಗಳನ್ನು ಹಣಪಡೆಯದೆ ಸರಿಪಡಿಸಿ ಕೊಡುವುದಾಗಿ ಜಿಎಮ್ ಹೇಳಿದೆ. ಬಾರತ ಆಟೊ ಕಯ್ಗಾರಿಕೆಯಲ್ಲಿ ಇದು ಎಲ್ಲಕ್ಕಿಂತ ದೊಡ್ಡ ಹಿಂಪಡೆತವಾಗಿದ್ದು (recall) ಜಿಎಮ್ ನ ಮಾರುಕಟ್ಟೆ ಪಾಲಿಗೆ ಬಾರಿ ಹೊಡೆತವಾಗಿದೆ. ಚಿಕ್ಕ ಪುಟ್ಟ ಬಿಡಿಬಾಗಗಳನ್ನು ಸರಿಪಡಿಸಲು ಮಾರಾಟವಾಗಿದ್ದ ಬಂಡಿಗಳನ್ನು ಹಿಂಪಡೆದ ಕೆಲವು ಸಂಗತಿಗಳು ಈ ಹಿಂದೆ ನಡೆದಿದ್ದು ಬಿಟ್ಟರೆ ಈ ಬಾರಿ ಗಾತ್ರದ ಹಿಂಪಡೆತ ನಮ್ಮ ದೇಶಕ್ಕೆ ಹೊಸದೇ ಸರಿ. ಈ ವಿಶಯದಲ್ಲಿ ಎಲ್ಲಕ್ಕಿಂತ ಮಿಗಿಲಾಗಿ ಜಿ.ಎಮ್.ನ ಹೆಸರಿಗೆ ಕಳ್ಳಾಟದ ಮಸಿ ಹತ್ತಿದಂತಾಗಿದೆ.

ಬಾರತದಲ್ಲಿ ತಯಾರಾಗುವ ಬಂಡಿಗಳು ಮುಟ್ಟಬೇಕಾದ ಬಾರತ ಸ್ಟೇಜ್-3 (BS-III) ಮತ್ತು  ಸ್ಟೇಜ್-4 (BS-IV) ಮಟ್ಟವನ್ನು ಈ ತವೆರಾ ಬಂಡಿಗಳು ಮೀರಿವೆ ಎಂದು ತಿಳಿದು ಬಂದಿದೆ.  2 ಮತ್ತು 2.5 ಲೀಟರ್  ಅಳತೆಯ ಬಿಣಿಗೆ ಹೊಂದಿರುವ ತವೆರಾ ಸೂಸುವ ಕೆಡುಗಾಳಿ ಹೆಚ್ಚಿದೆ. ಈ ಬಂಡಿಯ ಅರಕೆಮಾಡುವ (research) ಹೊತ್ತಿನಲ್ಲಿ ಇದೇಕೆ ಅರಿಯದೆ ಹೋಯಿತು ಎಂಬ ಕೇಳ್ವಿಗೆ ಹೇಳ್ವಿ ಕಂಡುಕೊಳ್ಳುವಲ್ಲಿ ಜನರಲ್ ಮೋಟರ‍್ಸನ ಬಾರತದ ಕವಲು ಮತ್ತು ಅಮೇರಿಕಾದಲ್ಲಿರುವ ಅದರ ಹಿರಿನೆಲೆಗಳು ಹೆಣಗಾಡುತ್ತಿವೆ. ಬಾರತದ ತನ್ನ ಕಚೇರಿಯಲ್ಲಿ ಈಗ ಒಳ ತನಿಕೆ (internal investigation) ಮಾಡಹೊರಟಿರುವ ಜಿಎಮ್, ತವೆರಾ ಬಂಡಿಗಳ ತಯಾರಿಕೆಯನ್ನು ಈಗ ನಿಲ್ಲಿಸಿದೆ.

2005 ರಿಂದ 2013 ರಲ್ಲಿ ತಯಾರಿಸಿ ಮಾರಿದ ಎಲ್ಲ ತವೆರಾಗಳನ್ನು ತಮ್ಮ ಮಾರಾಳಿಗಳ (dealer) ಮೂಲಕ ಹಿಂಪಡೆದು ಆಗಿರುವ ತಪ್ಪನ್ನು ಸರಿಪಡಿಸುತ್ತೇವೆಂದು ಕೂಟದ ಹೇಳಿಕೆ ಹೊರಬಿದ್ದಿದೆ. ಅದು ಅಲ್ಲದೆ ಇದೇ ವರ‍್ಶ ಬಿಡುಗಡೆಗೊಂಡಿರುವ ಸೆಡಾನ್ ಮಾದರಿಯ ಸೆಯ್ಲ್ (SAIL) ಕಾರಿನಲ್ಲಿ ಈ ರೀತಿ ತಪ್ಪೆಸಗಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಇದು ದಿಟವಾದಲ್ಲಿ ಜಿಎಮ್ ಗೆ ಬಾರತ ಹೊರೆಯಾಗುವ ಸಾದ್ಯತೆ ಇದೆ. ಸೆಯ್ಲ್ ಕಾರನ್ನು ಜಿಎಮ್ ತನ್ನ ಚೀನಾದ ಪಾಲುದಾರ ಸೆಯ್ಕ್ (SAIC) ಜೊತೆ ಸೆರಿ ಬಾರತದ ಮಾರುಕಟ್ಟೆಗೆ ಬೆಳವಣಿಗೆಗೊಳಿಸಿತ್ತು.

ಈ ಪ್ರಕರಣ ಜನರಲ್ ಮೋಟರ‍್ಸ್ ಕೂಟದಲ್ಲಿನ ಹಿರಿಯ ತಲೆಗಳನ್ನು ಉರುಳಿಸುವಂತೆ ಮಾಡಿದೆ. ತವೆರಾ ಹಮ್ಮುಗೆಯ ’ಬಿಣಿಗೆಯರಿಗರ ಕಿರು ಮೇಲುಗ’ (engineering vice president) ಲಾವರ‍್ನ ಸುಲಾ, ’ಹಣಕಾಸಿನ ಮೇಲುಗ’ (CFO) ಅನಿಲ್ ಮಹರೊತಾ ಸಮೇತವಾಗಿ ಹಿರಿಯ ತಲೆಗಳನ್ನು ಈಗಾಗಲೇ ಮನೆಗಟ್ಟಿದ್ದು,ಕೆಲವು ಸುದ್ದಿ ಸೆಲೆಗಳು ಹೇಳುವಂತೆ ಜಿಎಮ್ 20 ಕ್ಕೂ ಹೆಚ್ಚು ಹಿರಿಯಾಳುಗಳನ್ನು ಹೊರದಬ್ಬಲಿದೆಯಂತೆ.

ಈ ಬಗೆಯ ’ಹೊಗೆಯ ಕೊಳ್ಳಾಟ-ಕಳ್ಳಾಟ’ ಬರೀ ಜನರಲ್ ಮೋಟರ‍್ಸ ಕೂಟಕ್ಕೆ ಅಂಟಿರುವ ರೋಗ ಅನ್ನಲಾಗದು. ಈಗ ಕಂಡುಬಂದಿರುವುದು ಕಡಲ್ಗಡ್ಡೆಯ ತುದಿಯಶ್ಟೇ ! ಆಳದಲ್ಲಿರುವ ಮಂಜು ಇದಕ್ಕಿಂತ ಹಲವುಪಟ್ಟು. ಬಾರತದ ಕಾರು ಮಾಡುವ ಹಲವು ಕೂಟಗಳು, ಸರಕಾರದ್ದೇ ಹಲವು ಅದಿಕಾರಗಳೊಡನೇ ಇಂತ ಕಳ್ಳಾಟದಲ್ಲಿ ಮೊದಲಿನಿಂದಲೂ ಪಾಲ್ಗೊಂಡಿವೆ ಅನ್ನುವುದು ಅಟೋಮೊಬಾಯ್ಲ್ ನೆಲದಲ್ಲಿ ಕೇಳಿಬರುತ್ತಿರುವ ಸುದ್ದಿ.

ಇದರಾಚೆಗೆ ’ಊರು ಕೊಳ್ಳೆಹೊಡೆದು ಹೊದ್ಮೇಲೆ ಕೋಟೆ ಬಾಗಿಲು ಮುಚ್ಚಿದ್ರು!’ ಅನ್ನೊ ಗಾದೆಗೆ ತಕ್ಕಂತೆ ಕೇಂದ್ರ ಸರ‍್ಕಾರ ತನ್ನಡಿಯಲ್ಲಿರುವ ’ದಾರಿ ಮತ್ತು ಹೆದ್ದಾರಿ ಸಾಗಾಣಿಕೆ’ ಕವಲಿನ ಮುಂದಾಳತ್ವದಲ್ಲಿ ಇದೀಗ ತನಿಕೆಗೆ  ಮುಂದಾಗಿದೆ.

ತಿಟ್ಟಸೆಲೆ: online.wsj.comCategories: ಅರಿಮೆ

ಟ್ಯಾಗ್ ಗಳು:, , , , , , , , , , , , , , , , , , , , , , , , , , , , ,

1 reply

Trackbacks

  1. ಇಂದಿನಿಂದ ’ಬಂಡಿಗಳ ಸಂತೆ’ | ಹೊನಲು

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s