ಬಿಪಿಒ ಕೆಲಸಗಾರರನ್ನು ಹೊರದಬ್ಬಲಿರುವ ಚೂಟಿ ಎಣ್ಣುಕಗಳು

ರತೀಶ ರತ್ನಾಕರ

AI-lowres

ಮಾನವನ ಬದುಕಿನ ಮೇಲೆ ಅರಿಮೆಯ ಬೆಳವಣಿಗೆಯು ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತಲೇ ಇದೆ. ತನ್ನ ದಿನ ನಿತ್ಯದ ಕೆಲಸಗಳನ್ನು ಸುಲಬಗೊಳಿಸುವ ಗುರಿಯನ್ನು ಹೊತ್ತು ಹಲವು ಚಳಕದರಿಮೆಗಳು ಮತ್ತು ಹೊಸ ಅರಕೆಗಳು ದಿನ ಬೆಳಗಾದರೆ ಹೊರಬರುತ್ತಿವೆ. ಇಂತಹ ಹೊಸ ಚಳಕದರಿಮೆಗಳಲ್ಲಿ ಒಂದಾದ, ಅಯ್‍ಪಿ ಸಾಪ್ಟ್ (IPsoft) ಕಂಪನಿ ಸಿದ್ದಗೊಳಿಸಿರುವ, ಚೂಟಿ ಎಣ್ಣುಕವು ಹಲವು ಬಿಪಿಒ (BPO) ಕೆಲಸಗಾರರು ಮಾಡುವ ಕೆಲಸವನ್ನು ಸುಲಬವಾಗಿ ಮಾಡುವ ಕಸುವನ್ನು ಹೊಂದಿದೆ. ಕರೆ ಕೇಂದ್ರಗಳಲ್ಲಿ ಇನ್ನು ಮುಂದೆ ಕೆಲಸಗಾರರ ಬದಲಾಗಿ ಈ ಚೂಟಿ ಎಣ್ಣುಕಗಳು ಈಗಿರುವಂತೆಯೇ ಗ್ರಾಹಕ ಸೇವೆಯನ್ನು ನೀಡಲಿವೆ. ಈ ಚಳಕದರಿಮೆಯಿಂದ ಕಂಪನಿಗಳಿಗೆ ಹೆಚ್ಚು ಹೆಚ್ಚು ಕೆಲಸಗಾರರನ್ನು ನಿಬಾಯಿಸುವ ತಲೆನೋವು ದೂರಾಗಲಿದೆ ಅಲ್ಲದೇ ಸುಮಾರು 30% ಹಣ ಉಳಿತಾಯ ಕೂಡ ಆಗಲಿದೆ ಎಂದು ದಿ ಎಕನಾಮಿಕ್ ಟಯ್‍ಮ್ಸ್ ತನ್ನ ಇತ್ತೀಚಿನ ಒಂದು ವರದಿಯಲ್ಲಿ ತಿಳಿಸಿದೆ.
ಎಲ್ಲಾ ಬಿಪಿಒ ಕಂಪನಿಗಳು ಆದಶ್ಟು ಬೇಗ ಈ ಚೂಟಿ ಎಣ್ಣುಕಗಳ ಮೊರೆ ಹೋಗಬಹುದು.

ಇಂತಹ ಹೊಸ ಅರಕೆಯ ಬಗ್ಗೆ ತಿಳಿದಾಗ ಅರಿಮೆಯ ಬೆಳವಣಿಗೆಯ ಕುರಿತು ನಲಿವಾಗುತ್ತದೆ, ಆದರೆ, ಈಗಾಗಲೇ ನಮ್ಮ ರಾಜ್ಯದಲ್ಲಿ ಹಲವು ಮಂದಿ ಬಿಪಿಒ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಳಕದರಿಮೆ ಹೊರಬಂದ ಮೇಲೆ ಬಿಪಿಒ ಕಂಪನಿಗಳಿಗೆ ಇವತ್ತಿನಶ್ಟು ಕೆಲಸಗಾರರ ಅವಶ್ಯಕತೆಯಿರುವುದಿಲ್ಲ. ಆಗ ಲಕ್ಶಗಟ್ಟಲೆ ಜನರು ಕೆಲಸ ಕಳೆದುಕೊಳ್ಳಬಹುದು. ಕೇವಲ ಇಂಗ್ಲೀಶನ್ನು ನೆಚ್ಚಿಕೊಂಡು ಕೆಲಸ ಮಾಡುತ್ತಿದ್ದ ಈ ಕೆಲಸಗಾರರು, ಕೆಲಸ ಕಳೆದುಕೊಂಡು ಹೊರಬಂದ ಮೇಲೆ ಬೇರಾವುದೇ ಚಳಕದ ಕೆಲಸಗಳನ್ನು ಮಾಡಲು ಬೇಕಾಗಿರುವ ‘ಕಾಗ್ನೀಟಿವ್ ಚಳಕಗಳ’ ಕೊರತೆಯಿಂದ ಕಶ್ಟಪಡಲಿದ್ದಾರೆ.

‘ಕಾಗ್ನೀಟಿವ್ ಚಳಕ’ಗಳ ಬೆಳವಣಿಗೆಗೆ ತಾಯ್ನುಡಿಯ ಕಲಿಕೆಯು ಅನಿವಾರ್‍ಯವಾಗಿದೆ. ಆದರೆ ಈಗಿರುವ ಕಲಿಕೆಯೇರ‍್ಪಾಡಿನಲ್ಲಿ ಕೇವಲ ಇಂಗ್ಲೀಶ್ ಕಲಿಕೆಗೆ ಮಾತ್ರ ಒತ್ತುಕೊಡಲಾಗಿದೆ. ಕೇವಲ ಇಂಗ್ಲೀಶ್ ಗೊತ್ತಿರುವ ಆದಾರದ ಮೇಲೆ ಕೆಲಸ ಗಿಟ್ಟಿಸಿಕೊಂಡ ಮಂದಿಯು ಮೇಲೆ ತಿಳಿಸಿದ ಹೊಸ ಚಳಕದರಿಮೆ ಬಂದಾಗ ಕೆಲಸ ಕಳೆದುಕೊಂಡು ತೊಂದರೆಗೊಳಗಾಗುತ್ತಾರೆ. ಇದಕ್ಕೆಲ್ಲಾ ಮುಕ್ಯವಾದ ಕಾರಣ ಈಗಿರುವ ಕಲಿಕೆಯೇರ‍್ಪಾಡೇ ಆಗಿದೆ. ಸರಕಾರವು ಒಂದು ಒಳ್ಳೆಯ ಕಲಿಕೆಯೇರ‍್ಪಾಡನ್ನು ಕಟ್ಟುವುದರ ಬದಲು ಸರಕಾರಿ ಸ್ಕೂಲಿನಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲೀಶ್ ಕಲಿಸುವ ಅವಸರದಲ್ಲಿದೆ. ಕರ‍್ನಾಟಕದಲ್ಲಿ ಒಂದನೇ ತರಗತಿಯಿಂದ ಹಿಡಿದು ಉನ್ನತ ಮಟ್ಟದ ಕಲಿಕೆಯವರೆಗೂ ಕನ್ನಡದಲ್ಲೇ ಕಲಿಕೆ ಸಿಗುವ ಹಾಗೆ ಮಾಡುವಲ್ಲಿ ಸೋತಿದೆ.

ಒಂದು ಅರಕೆಯಲ್ಲಿ (ತೇಜಸ್ವಿನಿ ನಿರಂಜನರವರ “Indian Languages in Indian Higher Education”) ಹೇಳಿರುವಂತೆ ದೇಶದಲ್ಲಿ ಸುಮಾರು 40% ಮಕ್ಕಳು ತಮ್ಮ ತಾಯ್ನುಡಿಯಲ್ಲಿ ಉನ್ನತ ಕಲಿಕೆ ಸಿಗದೇ, ಕೇವಲ ಇಂಗ್ಲೀಶಿನಲ್ಲಿ ಸಿಗುತ್ತಿರುವುದರಿಂದ ತಮ್ಮ ಕಲಿಕೆಯಲ್ಲಿ ಸೋಲುತ್ತಿದ್ದಾರೆ. ತಾಯ್ನುಡಿಯಲ್ಲಿ ಇಲ್ಲದ ಕಲಿಕೆಯೇರ‍್ಪಾಡಿನಿಂದ ಬೆಳೆಯುವ ಸಿರಿಯನ್ನು ಮೊಳಕೆಯಲ್ಲೇ ಚಿವುಟಿದಂತಾಗುತ್ತಿದೆ. ಇದನ್ನು ಸರಿಪಡಿಸಲು, ಇಂಗ್ಲೀಶಿನ ಹಿಂದೆ ಬೀಳದೇ ತಾಯ್ನುಡಿಯಲ್ಲಿಯೇ ಗುಣಮಟ್ಟದ ಕಲಿಕೆಯೇರ‍್ಪಾಡನ್ನು ಕಟ್ಟಬೇಕು ಎಂದು ಈ ಅರಕೆ ಹೇಳುತ್ತದೆ.

ಸದ್ಯಕ್ಕೆ ನಮ್ಮಲ್ಲಿ ಹಲನಾಡಿನ ಕಂಪನಿಗಳಲ್ಲಿ ಅವರು ತೋರಿಸಿಕೊಟ್ಟ ಕೆಲಸವನ್ನು ಹೆಚ್ಚಾಗಿ ಮಾಡುತ್ತಿದ್ದೇವೆ, ಹೊಸದಾದ ಚಳಕದರಿಮೆ ಹಾಗು ಅರಕೆಗಳನ್ನು ಮಾಡುವುದರಲ್ಲಿ ನಮ್ಮ ಪಾಲು ತುಂಬಾ ಕಡಿಮೆಯಿದೆ. ಈಗ ಮಾಡುತ್ತಿರುವ ಬಿಪಿಒ ಕೆಲಸದ ಜಾಗಗಳಲ್ಲಿ ಮುಂದೆ ಯಂತ್ರಗಳು ಹೆಚ್ಚಾಗಿ ಬರಬಹುದು. ಆಗ ಆ ಯಂತ್ರಗಳ ಮೇಲುಸ್ತುವಾರಿಗೆ ಬೆರಳೆಣಿಕೆಯ ಮಂದಿ ಸಾಕಾಗುತ್ತಾರೆ ಮತ್ತು ಹೊರನಾಡಿನ ಕಂಪನಿಗಳು ಬೆಂಗಳೂರಿಗೆ ಬಂದು ಕವಲನ್ನು (branch) ತೆರೆಯುವುದು ಕಮ್ಮಿಯಾಗಬಹುದು. ಆಗ ಕೆಲಸ ಕಳೆದುಕೊಳ್ಳುವವರ ಎಣಿಕೆ ಮತ್ತಶ್ಟು ಏರಲಿದೆ. ತಾಯ್ನುಡಿಯಲ್ಲಿ ಗುಣಮಟ್ಟದ ಕಲಿಕೆಯನ್ನು ದೊರಕಿಸಿಕೊಟ್ಟರೆ ಕಲಿಯುವವರಲ್ಲಿ ‘ಕಾಗ್ನಿಟಿವ್ ಚಳಕ’ಗಳ ಬೆಳವಣಿಗೆ ಆಗಿ ಹೊಸ ಹೊಸ ಅರಕೆಗಳು ಮತ್ತು ಚಳಕದರಿಮೆಗಳನ್ನು ಕಂಡುಹಿಡಿಯುವಲ್ಲಿ ನೆರವಾಗುತ್ತದೆ.

ಅರಿಮೆಯು ನಿಂತ ನೀರಾಗಿರುವುದಿಲ್ಲ, ಅದರ ಬೆಳವಣಿಗೆಯು ನಮ್ಮ ಕೆಲಸದ ಮತ್ತು ಬದುಕಿನ ಮೇಲೆ ಪರಿಣಾಮ ಬೀರುತ್ತಲೇ ಇರುತ್ತದೆ. ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೇಕಾದರೆ ನಮ್ಮ ಅಡಿಪಾಯ ಗಟ್ಟಿಯಾಗಿರಬೇಕಾಗುತ್ತದೆ. ಈ ಅಡಿಪಾಯವನ್ನು ಗಟ್ಟಿಗೊಳಿಸುವುದು ನಮ್ಮ ಕಲಿಕೆ ಮತ್ತು ಆ ಕಲಿಕೆಯು ತಾಯ್ನುಡಿಯಲ್ಲಿ ಇದ್ದಾಗ ಮಾತ್ರ ಅದು ಪರಿಣಾಮಕಾರಿ. ಈ ನಿಟ್ಟಿನಲ್ಲಿ ಸರಕಾರವು ಚಿಂತಿಸಿ ಒಂದು ಒಳ್ಳೆಯ ಕಲಿಕೆಯೇರ‍್ಪಾಡನ್ನು ನಾಡಿನ ಮಕ್ಕಳಿಗೆ ಕಟ್ಟಿಕೊಡಬೇಕಾಗಿದೆ.

(ಚಿತ್ರ: ideasevolved.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: