ಉದ್ದಿಮೆಯಲ್ಲಿ ಮುಂದಿರುವ ಮಹಾರಾಶ್ಟ್ರದಲ್ಲಿ ಮರಾಟಿಗರಿಗೆ 80%ರಶ್ಟು ಮೀಸಲಾತಿ!

– ಜಯತೀರ‍್ತ ನಾಡಗವ್ಡ.

pic

ದೇಶದಲ್ಲಿ ಹೆಚ್ಚಿನ ಕಯ್ಗಾರಿಕೆಗಳನ್ನು ಹೊಂದಿರುವ ನಾಡುಗಳಲ್ಲಿ ಒಂದು ಎನ್ನಿಸಿರುವ ನೆರೆಯ ಮಹಾರಾಶ್ಟ್ರದ ಏರ್‍ಪಾಡು ಹೇಗಿದೆ ಎಂಬುದರ ಬಗ್ಗೆ ನನ್ನ ಸ್ವಂತ ಅನುಬವದ ಬರಹ.

ಮರಾಟಿಗರ ಹೆಚ್ಚಿನ ಜನರ ಕಲಿಕೆಯ ನುಡಿ ಮರಾಟಿ. ಇದರ ಪರಿಣಾಮವಾಗಿ ಚಿಕ್ಕಮಕ್ಕಳಿಂದ ಹಿಡಿದು ಇಳಿವಯಸ್ಸಿನ ನಾಗರಿಕರು ವ್ಯವಹರಿಸುವುದು ತಮ್ಮ ತಾಯ್ನುಡಿಯಲ್ಲಿ. ಅಲೆಯುಲಿ ನಂಬರುಗಳಾಗಿರಲಿ ಇಲ್ಲವೇ ಬೇರಾವುದೇ ರಸ್ತೆ-ಬೀದಿ ಅಂಕಿಗಳಾಗಲಿ ಜನರು ಬಾಯಲ್ಲಿ ಉಲಿಯುವುದು ಮರಾಟಿ ಅಂಕಿಗಳನ್ನೇ! ಕಯ್ಗಾರಿಕೆಗಳ ವಿಶಯಕ್ಕೆ ಬಂದಲ್ಲಿ ಮಹಾರಾಶ್ಟ್ರ ಯಾವತ್ತಿಗೂ ಮೊದಲ ಸ್ತಾನ ಕಾಯ್ದುಕೊಂಡು ಬಂದಿದೆ. ಹೆಸರಾಂತ ಉದ್ದಿಮೆಗಳಾದ ಟಾಟಾ ಮೋಟಾರ್‍ಸ್, ಬಜಾಜ್, ಪೋರ್‍ಸ್ ಮೋಟಾರ್‍ಸ್, ಮಹೀಂದ್ರಾ, ಕಿರ್‍ಲೋಸ್ಕರ್, ಜನರಲ್ ಮೋಟಾರ್‍ಸ್, ವೋಕ್ಸ್-ವ್ಯಾಗನ್, ಜನರಲ್ ಎಲೆಕ್ಟ್ರಿಕ್, ಜಾನ್ ಡೀಯರ್ ಸೇರಿದಂತೆ ಹತ್ತಾರು ದೇಶ-ವಿದೇಶದ ಕೂಟಗಳು ಇಲ್ಲಿ ನೆಲೆಗೊಂಡಿವೆ. ಹೆಚ್ಚು ಹೊಸ ಹೊಸ ಕೂಟಗಳು ನೆಲೆಗೊಳ್ಳುತ್ತಲೂ ಇವೆ.

ಇದೇ ಕಾರಣಕ್ಕೆ ಇರಬೇಕು ಹೆಚ್ಚಿನ ಮರಾಟಿಗರು ಕೆಲಸ ಗಿಟ್ಟಿಸಿಕೊಂಡು ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಯಾವುದೇ ತರಹದ ಕೆಲಸಗಳಿರಲಿ, ಚಿಕ್ಕ ಪುಟ್ಟ ಕೂಲಿಯಾಳುಗಳಿಂದ ಹಿಡಿದು ಸಂಸ್ತೆಯ ಮೇಲಾಳುಗಳ ಸಮೇತ ಮರಾಟಿಗರದೇ ಸಿಂಹಪಾಲು. ಇಂತಹ ಒಂದು ಏರ್‍ಪಾಡು ಮರಾಟಿಗರು ಹೆಚ್ಚಿನ ಸ್ವಂತ ಉದ್ದಿಮೆಗಳನ್ನು ಕಟ್ಟಿಕೊಂಡು ಮುಂದುವರೆಸಲು ಕೂಡ ನೆರವಾಗಿದೆ. ಇವರಲ್ಲಿ ಯಾರೊಬ್ಬರೂ ತಾಯ್ನುಡಿಯಲ್ಲಿ ಉಲಿಯಲು ಹಿಂಜರಿಕೆ ತೋರುವುದಿಲ್ಲ. ಬಹಳಶ್ಟು ಕಂಪನಿಗಳ ದಿನ ನಿತ್ಯದ ಕೆಲಸ ಕಾರ್‍ಯಗಳಿಗೆ ಮರಾಟಿಯೇ ಮಾದ್ಯಮವಾಗಿದೆ. ಕೆಲಸದೆಡೆಯ ಕೂಡುಹಗಳಿರಲಿ, ಮಾತುಕತೆಗಳಿರಲಿ, ಸಬೆ ಸಮಾರಂಬಗಳೇ ಆಗಿರಲಿ ಮರಾಟಿಯು ಬಳಕೆಯಲ್ಲಿ ಇದ್ದೇ ಇರುತ್ತದೆ. ಇದರ ನೇರ ಲಾಬ ನಾಡ ಮಕ್ಕಳಿಗೆ ಆಗಿದ್ದು ತಾಯ್ನುಡಿಯಲ್ಲಿ ಹೊಸ ಹೊಸ ಸಂಗತಿ, ಚಳಕದರಿಮೆಗಳ ತಿಳುವಳಿಕೆ ಮಾಡಿಕೊಂಡು ಬೆಳವಣಿಗೆಯ ದಾರಿಯತ್ತ ದಾಪುಗಾಲು ಇರಿಸಿದ್ದಾರೆ.

ನಾಡ ಮಕ್ಕಳಿಗಾಗಿ ಆಳ್ವಿಕೆ ಮತ್ತು ಕೆಲಸಗಳು ಕಯ್ಗೂಡಿದರೆ ಆಗುವುದು ಇದೆ

ನಾಡಿನ ಪ್ರತಿಯೊಂದು ಜಿಲ್ಲೆಯಲ್ಲೂ ಒಂದು ಒಳ್ಳೆಯ ಕಯ್ಗಾರಿಕೆ ಸ್ತಾಪಿಸಲು ಸ್ತಳೀಯ ಸರಕಾರಗಳು ಈ ಹಿಂದಿನಿಂದಲೂ ಕಯ್ ಜೋಡಿಸಿವೆ. ಕರ್‍ನಾಟಕದ ಗಡಿಯಲ್ಲಿರುವ ಕೊಲ್ಲಾಪುರ, ಸಾಂಗಲಿ, ಮೀರಜ್, ಸೊಲ್ಲಾಪುರ ನಗರಗಳಾಗಿರಲಿ ಅಹ್ಮದ್ ನಗರ, ಸತಾರಾ, ನಾಸಿಕ್, ಅವ್ರಂಗಾಬಾದ್, ನಾಗಪುರ, ಅಮರಾವತಿ, ಕಲ್ಯಾಣ, ರಾಯಗಡ, ಜಾಲ್ನಾ, ರತ್ನಗಿರಿ ಮುಂತಾದ ಒಳನಾಡಿನ ಊರುಗಳಾಗಿರಲಿ ಹೀಗೆ ಹೆಚ್ಚು ಕಮ್ಮಿ ಪ್ರತಿಯೊಂದು ಜಿಲ್ಲೆಗೂ ಎಮ್.ಆಯ್.ಡಿ.ಸಿ ಹೆಸರಿನಲ್ಲಿ ಜಾಗ ನೀಡಿ ಸರ್‍ಕಾರಗಳು ಉದ್ದಿಮೆಗಳನ್ನು ಸೆಳೆದು ತರುವಲ್ಲಿ ಗೆಲುವು ಕಂಡಿವೆ. ಅದಲ್ಲದೆ ಮಹಾರಾಶ್ಟ್ರ ಸರ್‍ಕಾರ ಶೇಕಡ 80ರಶ್ಟು ಕೆಲಸಗಳನ್ನು ಅಲ್ಲಿನವರಿಗೆ ಮೀಸಲಿಟ್ಟಿದ್ದು, ಇದು ಮರಾಟಿ ಬಾಶೆ ಕಾಪಾಡಲು ಹಾಗೂ ಮರಾಟಿಗರ ಏಳಿಗೆಗೆ ಅನುವಾಗಿದೆ.

ಪ್ರತಿಯೊಂದು ಕಯ್ಗಾರಿಕೆಯ ಕಾರ್‍ಮಿಕರ ಒಕ್ಕೂಟಗಳೊಂದಿಗೆ ಸ್ತಳೀಯ ಪಕ್ಶಗಳಾದ ಶಿವಸೇನೆ, ಮಹಾರಾಶ್ಟ್ರ ನವನಿರ್‍ಮಾಣ ಸೇನೆ, ಮತ್ತು ರಾಶ್ಟ್ರವಾದಿ ಕಾಂಗ್ರೆಸ್ ಪಕ್ಶಗಳು ಗುರುತಿಸಿಕೊಂಡಿದ್ದು, ಮರಾಟಿ ಕಾರ್‍ಮಿಕರ ಹತ್ತು ಹಲವಾರು ಸಮಸ್ಯೆಗಳಿಗೆ ದನಿ ಸೇರಿಸಿ ಹೋರಾಡಲು ಟೊಂಕಕಟ್ಟಿ ನಿಂತಿವೆ. ಅಲ್ಲದೆ ಹೇರಳ ಸಂಕ್ಯೆಯಲ್ಲಿರುವ ಕಯ್ಗಾರಿಕೆಗಳಿಗೆ ಬೇಕಾಗುವ ಕಚ್ಚಾ ಸರಕು, ಕರೆಂಟು, ನೀರು ಹಾಗೂ ರಯ್ಲು, ಬಾನೋಡ ಮುಂತಾದ ಸಾರಿಗೆ ಸಂಪರ್‍ಕ ನೀಡುವಂತೆ ಇವೇ ಪಕ್ಶಗಳು ಒತ್ತು ನೀಡಿವೆ. ಮುಂಗಡಲೆಕ್ಕದ ಸಮಯದಲ್ಲಿ ಮಹಾರಾಶ್ಟ್ರಕ್ಕೆ ಬಹಳಶ್ಟು ಸವ್ಕರ್‍ಯ ನೀಡುವಂತೆ ಒತ್ತಡ ತರಲು ಶಿವಸೇನೆ, ರಾಶ್ಟ್ರವಾದಿ ಕಾಂಗ್ರೆಸ್ ತಾಮುಂದು ನಾಮುಂದು ಎಂದು ಎದ್ದು ನಿಂತಿವೆ. ಇದು ಮಹಾರಾಶ್ಟ್ರದ ರಾಜಕೀಯದ ದಿಕ್ಕನ್ನು ಬದಲಿಸಿದ್ದು, ರಾಶ್ಟ್ರೀಯ ಪಕ್ಶಗಳು ಕೂಡ ಮರಾಟಿಗರ ಮನವೊಲಿಸಲು ಮರಾಟಿ “ಟ್ರಂಪ್ ಕಾರ್‍ಡ್” ಹಿಡಿಯಲು ಹಿಂದೆ ಬಿದ್ದಿಲ್ಲ. ಪ್ರತಿಯೊಬ್ಬ ಮರಾಟಿಗನ ಆತ್ಮ ವಿಶ್ವಾಸ ಹೆಚ್ಚಿಸಿ ಅವನು ಅಳುಕಿಲ್ಲದೆ ತನ್ನ ನಾಡಿನಲ್ಲಿ ನೆಮ್ಮದಿಯ ದುಡಿಮೆ ಗೆಯ್ಯಲು ಇವುಗಳೇ ಪೂರಕ.

ಕಳೆದ ಹತ್ತು ವರುಶಗಳಲ್ಲಿ ಕಯ್ಗಾರಿಕೆಗಳ ಬಿರುಸಿನ ಬೆಳವಣಿಗೆಯಿಂದ ಹೊರನಾಡಿಗರು ಪುಣೆ, ಅವ್ರಂಗಾಬಾದ್, ನಾಸಿಕ್, ನಾಗಪುರ, ಕೊಲ್ಲಾಪುರದಂತಹ ಊರುಗಳಿಗೆ ಲಗ್ಗೆ ಇಟ್ಟಿದ್ದರೂ ಕೂಡ ಇಲ್ಲಿನ ಮರಾಟಿ ವಾತಾವರಣ ಇವರನ್ನು ಮರಾಟಿ ಕಲಿತು ಸ್ತಳೀಯರೊಂದಿಗೆ ಮುಕ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡಿದ್ದು ಇತರೆ ರಾಜ್ಯಗಳಿಗೆ ಮಾದರಿಯೇ ಸರಿ. ಮೇಲಿನ ಎತ್ತುಗೆಗಳಲ್ಲಿ ಕೇವಲ ತಾನೋಡ-ಬಿಣಿಗೆ (auto-motive) ಕಯ್ಗಾರಿಕೆಗಳ ಪ್ರಮುಕ ಕೂಟಗಳಶ್ಟೆ ಹೆಸರಿಸಲಾಗಿದೆ, ಆದರೆ ಇದೇ ತೆರನಾದ ವಾತಾವರಣ ಅಯ್ಟಿ-ಬಿಟಿ, ಹಣಕಾಸು ಸಂಗ ಸಂಸ್ತೆ, ಮಾತ್ರೆ-ಅವ್ಶದಿಗಳ ಉದ್ದಿಮೆ, ಬಟ್ಟೆ-ಬರೆಗಳ ತಯಾರಿಕೆ ಹೀಗೆ ಎಲ್ಲೆಡೆಯೂ ಇದೆ.

ಹೊರರಾಜ್ಯಗಳಿಂದ ಪುಣೆ, ನಾಸಿಕ್ ನಂತಹ ಊರುಗಳಿಗೆ ಬಂದಿಳಿದವರಿಗೆ ಆಟೋ ಓಡಿಸುಗರು ಸ್ವಾಗತಿಸಿ ಕರೆಯುವುದು ಮರಾಟಿಯಲ್ಲಿಯೇ ಎಂದು ಬೇರೆ ಹೇಳಬೇಕಿಲ್ಲ! ಒಟ್ಟಿನಲ್ಲಿ ಮಹಾರಾಶ್ಟ್ರದಲ್ಲಿ ಮರಾಟಿ ಬಾಶೆ, ಮರಾಟಿಗರಿಗೆ ಒಳ್ಳೆಯ ಏರ್‍ಪಾಡನ್ನು ಕಟ್ಟಿ ದೇಶದ ಇತರ ನಾಡುಗಳಿಗೆ ಮಾದರಿಯಾಗಿ ನಿಂತಿದೆ. ಹಿಂದಿ ನುಡಿಯನ್ನಪ್ಪಿಕೊಂಡಂತಿರುವ ಮುಂಬಯ್ ಊರೊಂದು ಮಾತ್ರ ಇದಕ್ಕೆ ವಿರುದ್ದವಾಗಿದೆ.

(ಚಿತ್ರ ಸೆಲೆ: smechamberofindia.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: