ಬಾರತ ಒಕ್ಕೂಟ ನಿಜವಾದ ಒಪ್ಪುಕೂಟವಾಗಬೇಕು
– ಚೇತನ್ ಜೀರಾಳ್.
ಇನ್ನೇನು 2013ರ ಕೊನೆ ಅತವಾ 2014ರಲ್ಲಿ ಲೋಕಸಬೆ ಚುನಾವಣೆಗಳು ಬರಲಿವೆ. ಈಗ ರಾಜಕೀಯ ಪಕ್ಶಗಳು ತಮ್ಮ ತಮ್ಮ ಕೆಲಸಗಳನ್ನು ಜನರ ಮುಂದೆ ಇಟ್ಟು ಜನರನ್ನು ಓಲಯ್ಸುವ ಕೆಲಸ ಮಾಡುತ್ತವೆ. ಆಡಳಿತ ಪಕ್ಶವಾಗಿರುವ ಕಾಂಗ್ರೆಸ್ ತನ್ನ ಅಯ್ದು ವರ್‍ಶಗಳ ಆಡಳಿತದಲ್ಲಿ ತಾನು ಮಾಡಿರುವ ‘ಜನಪರ’ ಯೋಜನೆಗಳನ್ನು ಜನರ ಮುಂದಿಡಲು ಪ್ರಯತ್ನ ಮಾಡುತ್ತಿದೆ. ಎದಿರು ಪಕ್ಶವಾಗಿರುವ ಬಿ.ಜೆ.ಪಿ.ಯು, ಕಾಂಗ್ರೆಸ್ ತನ್ನ ಆಡಳಿತದಲ್ಲಿ ಮಾಡಿರುವ ಹಗರಣಗಳು, ತಾನು ಅದಿಕಾರಕ್ಕೆ ಬಂದರೆ ಮಾಡುವ ಕೆಲಸಗಳನ್ನು ಜನರ ಮುಂದಿಡುತ್ತಿದೆ. ಇದು ಪ್ರತಿ ಬಾರಿ ನಡೆಯುವ ಕೆಲಸ. ಆದರೆ ಸಾಮಾಜಿಕ ತಾಣಗಳಾಗಿರುವ ಟ್ವಿಟ್ಟರ್, ಪೇಸ್ಬುಕ್‍ಗಳು ಬಂದ ಮೇಲೆ ಆಯಾ ಪಕ್ಶದ ಹಿಂಬಾಲಕರಿಗೆ ತಮ್ಮ ಪಕ್ಶದ ಬಗ್ಗೆ ಹೇಳಿಕೊಳ್ಳಲು, ಚರ್‍ಚೆ ಮಾಡಲು ಸುಳುವಾಗಿದೆ.
ಹೀಗೆ ಚರ್‍ಚೆಗೆ ಬಂದಿರುವ ಒಂದು ವಿಶಯ ಬಾರತದ ಏಳಿಗೆ. ಒಂದೆಡೆ ಕಾಂಗ್ರೆಸ್‍ನ ಹಿಂಬಾಲಕರು ತಮ್ಮ ಸರಕಾರ ತಗೆದುಕೊಂಡಿರುವ ತೀರ್‍ಮಾನಗಳಿಂದಾಗಿಯೇ ಬಾರತದ ಹಣಕಾಸಿನ ಏರ್‍ಪಾಡಿನಲ್ಲಿ ಬದಲಾವಣೆಗಳು ಬಂದಿದ್ದು, ಅದು ಈಗಲೂ ಮುಂದುವರಿದಿದೆ ಎಂದು ಹೇಳಿದರೆ, ಇನ್ನೊಂದೆಡೆ ಬಿ.ಜೆ.ಪಿ.ಯ ಹಿಂಬಾಲಕರು ಎನ್.ಡಿ.ಎ ಒಕ್ಕೂಟ ಕೇಂದ್ರದಲ್ಲಿ ಸರಕಾರ ನಡೆಸುತ್ತಿದ್ದಾಗ ತಂದ ಬದಲಾವಣೆಗಳಿಂದಾಗಿ ಬಾರತದ ಜಿ.ಡಿ.ಪಿ ಯಲ್ಲಿ ಏರಿಕೆ ಕಂಡು, ಅದು ಮುಂದೆ ಬಂದ ಯು.ಪಿ.ಎ. ಒಕ್ಕೂಟದಲ್ಲೂ ಮುಂದುವರಿಯಿತು ಎಂದು ತಮ್ಮ ತಮ್ಮ ಪಕ್ಶಗಳ ಬಗ್ಗೆ ಹೇಳಿಕೊಳ್ಳುತ್ತಿರುವುದು ಕಾಣಿಸುತ್ತಿದೆ. ಹಾಗಿದ್ದರೆ ಈ ಪಕ್ಶದ ಹಿಂಬಾಲಕರು ಹೇಳುತ್ತಿರುವ ಹಾಗೆ ಯಾರ ಕಾಲದಲ್ಲಿ ಈ ಬದಲಾವಣೆಗಳಾದವು? ಯಾವ ನಿರ್‍ದಾರಗಳಿಂದಾಗಿ ಬಾರತದ ಜಿ.ಡಿ.ಪಿ.ಯಲ್ಲಿ ಏರಿಕೆ ಕಂಡಿತು? ಇದಕ್ಕೆ ಉತ್ತರ ಮುಂದೆ ನೋಡೋಣ.
ಯಾವ ಸರಕಾರ ಏಳಿಗೆ ತಂದೀತು?
ಈ ಕೇಳ್ವಿಗೆ ಉತ್ತರ ರುಚಿರ್ ಶರ್‍ಮಾ ನೀಡುತ್ತಾರೆ. ಅವರು ಹೇಳುವ ಪ್ರಕಾರ “ಬಾರತದಲ್ಲಿ 2003ರಿಂದ 2011ರಲ್ಲಿ ಆದ ಜಿ.ಡಿ.ಪಿ.ಯ ಏರಿಕೆಯಲ್ಲಿ ಬಾರತ ತಗೆದುಕೊಂಡಿರುವ ನಿರ್‍ದಾರಗಳ ಪಾತ್ರವೇನೂ ಇಲ್ಲ. ಇಡೀ ಪ್ರಪಂಚದಲ್ಲಿ ನಡೆಯುತ್ತಿದ್ದ ಬೆಳವಣಿಗೆಯ ಬಿರುಸು ಮತ್ತು ಅದರಿಂದಾಗಿ ಬಾರತಕ್ಕೆ ಹರಿದು ಬಂದ ಬಂಡವಾಳದಿಂದಾಗಿ ಬಾರತದ ಜಿ.ಡಿ.ಪಿ.ಯಲ್ಲಿ ಏರಿಕೆ ಕಂಡಿದೆ. ಹತ್ತು ವರ್‍ಶಗಳ ಹಿಂದೆ ಇದ್ದ ಜಿ.ಡಿ.ಪಿ 5-6%ರಶ್ಟಿತ್ತು. ಅದು 8-9ಕ್ಕೆ ಮುಟ್ಟಲು ಈ ಬಂಡವಾಳದ ಹರಿವು ಕಾರಣ, ಇದರಲ್ಲಿ ಬಾರತದ ಪಾತ್ರ ತುಂಬಾ ಕಡಿಮೆ. ಈಗ ಬೆಳವಣಿಗೆಯ ವೇಗ ಕಡಿಮೆಯಾಗಿದೆ ಹಾಗಾಗಿ ಬರತದ ಜಿ.ಡಿ.ಪಿ. ಮತ್ತೆ 5-6ಕ್ಕೆ ಇಳಿದಿದೆ”. ಇದನ್ನು ಹೇಗೆ ನಂಬುವುದು? ಪ್ರಪಂಚದ ಬೆಳವಣಿಗೆ ದೇಶದ ಬೆಳವಣಿಗೆಗೆ ಹೇಗೆ ನೆರವಾಗುತ್ತದೆ ಎಂದು ನೋಡಿದರೆ ಅಪ್ರಿಕಾ ದೇಶದ ನಮೀಬಿಯಾ, ನಯ್ಜೀರಿಯಾ, ಸಿಯೆರಾ ಲಿಯೋನ್, ಲಯ್ಬೀರಿಯ ಮುಂತಾದ ದೇಶಗಳ ಜಿ.ಡಿ.ಪಿ. 6%ಕ್ಕಿಂತ ಹೆಚ್ಚಿತ್ತು! 2003 -2007 ರಲ್ಲಿ ಪ್ರಪಂಚದ ಜಿ.ಡಿ.ಪಿ 4.8%ರಶ್ಟಿತ್ತು. ಹಾಗಿದ್ದರೆ ಈಗ ನಿಮ್ಮ ಕೇಳ್ವಿಗೆ ಉತ್ತರ ಸಿಕ್ಕಿತು, ಅಲ್ಲವೇ?
ಹಾಗಿದ್ದರೆ ಬಾರತದ ಏಳಿಗೆಗೆ ದಾರಿಯೇನು?
ಮುಕ್ಯವಾಗಿ ನಾವು ಗಮನಿಸುತ್ತಿರುವುದೇನೆಂದರೆ ಬಿ.ಜೆ.ಪಿ ಹಾಗೂ ಕಾಂಗ್ರೆಸ್ ಪಕ್ಶಗಳು ಮೊದಲಿನಿಂದಲೂ ಕೇಂದ್ರೀಕ್ರುತ ವ್ಯವಸ್ತೆಯಲ್ಲಿ ನಂಬಿಕೆ ಇಟ್ಟುಕೊಂಡು ಬಂದಿವೆ. ಕೇಂದ್ರದ ಹಿಡಿತದಲ್ಲಿ ಎಲ್ಲ ರಾಜ್ಯಗಳ ಆಡಳಿತ ಇರಬೇಕೆನ್ನುವ ಬ್ರಿಟೀಶ್ ಆಡಳಿತದ ರೀತಿಯಲ್ಲೇ ನಡೆದುಕೊಳ್ಳುತ್ತ ಬಂದಿವೆ. ಆದರೆ ನಿಜವಾದ ಬೆಳವಣಿಗೆಗೆ ಬೇಕಿರುವುದು ಸ್ವಾಯತ್ತತೆ ಅತವಾ ತನ್ನಾಡಳಿತ. ಒಂದೇ ಕಡೆ ಅದಿಕಾರ ಇರುವುದು ಆಡಳಿತದಲ್ಲಿ ಬ್ರಶ್ಟತೆಯನ್ನು ತರುತ್ತದೆ ಎನ್ನುವುದು ಈಗಿರುವ ನಮ್ಮ ಆಡಳಿತ ವ್ಯವಸ್ತೆಯಿಂದ ಗೊತ್ತಾಗುತ್ತಿದೆ. ಇದು ಬದಲಾಗಬೇಕಾದಲ್ಲಿ ಬಾರತ ಒಕ್ಕೂಟವು, ಒಪ್ಪುಕೂಟದ ವ್ಯವಸ್ತೆಯನ್ನು ಒಪ್ಪಿಕೊಳ್ಳಲೇಬೇಕು, ಅದು ಹೆಸರಿಗೆ ಮಾತ್ರವಾಗಿರದೆ ಆಚರಣೆಯಲ್ಲೂ ಬರಬೇಕಾಗಿದೆ. ಹೆಚ್ಚಿನ ತನ್ನಾಡಳಿತ ವ್ಯವಸ್ತೆಯಲ್ಲಿರುವ ಲೋಪಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡುತ್ತದೆ, ಮತ್ತು ಜನರು ಆಡಳಿತದಲ್ಲಿ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.
ಎತ್ತುಗೆಗೆ ಇಂದು ಉತ್ತರ ಕರ್‍ನಾಟಕದ ಜನರನ್ನು ರಯ್ಲಿನ ಮೂಲಕ ಬೆಂಗಳೂರಿಗೆ ಸೇರಿಸಲು ಹುಬ್ಬಳ್ಳಿ ಕೇಂದ್ರ ಜಾಗ. ಇಂದು ಇರುವ ಜನರ ಓಡಾಟದ ಆದಾರದ ಮೇಲೆ ಬೆಂಗಳೂರು–ಹುಬ್ಬಳ್ಳಿ ರಯ್ಲ್ವೆ ಹಳಿಯನ್ನು ಜೋಡು ಹಳಿಗಳನ್ನಾಗಿ ಮಾಡಬೇಕು ಎಂದು ಹಲವು ವರ್‍ಶಗಳಿಂದ ಕೂಗು ಕೇಳಿ ಬರುತ್ತಲೇ ಇದೆ. ಆದರೆ ಇನ್ನೂ ಜಾರಿಗೆ ಮಾತ್ರ ಬಂದಿಲ್ಲ. ಇನ್ನೊಂದೆಡೆ ಬೆಂಗಳೂರು ಮತ್ತು ಮಯ್ಸೂರಿನ ನಡುವೆಯು ಜೋಡು ಹಳಿಗಳನ್ನು ತರಬೇಕೆಂದು ಹತ್ತು ವರ್‍ಶಗಳಿಂದ ಬೇಡಿಕೆಯಿದೆ. ಆದರೆ ಈ ರಯ್ಲ್ವೆ ಯೋಜನೆಗಳು ಕೇಂದ್ರ ಸರಕಾರದಿಂದ ಮಂಜೂರಾಗಿ ಬರಬೇಕಾಗಿರುವುದರಿಂದ ರಾಜ್ಯಕ್ಕೆ ತನಗೆ ಅವಶ್ಯಕವಿರುವ ಯೋಜನೆಗಳನ್ನು ಮಾಡಲು ಸಹ ಕೇಂದ್ರದಲ್ಲಿ ಲಾಬಿ ಮಾಡಬೇಕಾಗಿರುವ ಪರಿಸ್ತಿತಿ ಇದೆ. ಆದರೆ ನಿಜಕ್ಕೂ ಈ ಅದಿಕಾರ ರಾಜ್ಯ ಸರಕಾರದ ಕಯ್ಯಲ್ಲಿ ಇರಬೇಕಾಗಿತ್ತು ಎನ್ನುವುದು ಸರಿಯಾದದು ಅಲ್ಲವೇ?
ಆಯಾ ರಾಜ್ಯಗಳಿಗೆ ತನ್ನ ರಾಜ್ಯದ ಏಳಿಗೆ ಮಾಡಿಕೊಳ್ಳಲು ಬೇಕಿರುವ ಅದಿಕಾರ ಸಿಗಬೇಕು. ತನ್ನ ರಾಜ್ಯದಲ್ಲಿ ಸಿಗುವ ನಯ್ಸರ್‍ಗಿಕ ಸಂಪನ್ಮೂಲ, ಮಾನವ ಸಂಪನ್ಮೂಲ ಬಳಸಿಕೊಂಡು ಉದ್ದಿಮೆಗಳನ್ನು ಕಟ್ಟಲು ಬೇಕಿರುವ ಅದಿಕಾರ ಆಯಾ ರಾಜ್ಯ ಸರಕಾರಕ್ಕಿರಬೇಕು. ಪ್ರಪಂಚದಲ್ಲಾಗುತ್ತಿರುವ ಬದಲಾವಣೆಗೆ ತಕ್ಕಂತೆ ತನ್ನ ನೀತಿಗಳನ್ನು ಮಾಡಿಕೊಳ್ಳುವ ಅದಿಕಾರ ರಾಜ್ಯಗಳಿಗೆ ಇರಬೇಕು. ತಮ್ಮ ಜನರ ಬೇಕು-ಬೇಡಗಳನ್ನು ನಿರ್‍ದರಿಸುವ ಹಕ್ಕು ರಾಜ್ಯಗಳಿಗಿರಬೇಕು. ಪ್ರತಿಯೊಂದಕ್ಕೂ ಕೇಂದ್ರದ ಮುಂದೆ ಕಯ್ಯೊಡ್ಡುವ ಪರಿಸ್ತಿತಿ ಇಂದು ರಾಜ್ಯಗಳಿಗಿದೆ. ದೆಹಲಿಯಲ್ಲಿ ಕುಳಿತ ಅದಿಕಾರಿಯೊಬ್ಬ ಒಂದು ರಾಜ್ಯದ ನಿರ್‍ದಾರಗಳನ್ನು ತೆಗೆದುಕೊಳುವುದು ಯಾವ ರೀತಿಯ ಒಕ್ಕೂಟ ವ್ಯವಸ್ತೆ? ಇಂತಹ ತಪ್ಪುಗಳು ಸರಿಯಾದ ಪಕ್ಶದಲ್ಲಿ ಮುಂಬರುವ ದಿನಗಳಲ್ಲಿ ಪ್ರಪಂಚದಲ್ಲಿ ಹುಟ್ಟಿಕೊಳ್ಳುವ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಬಾರತ ತನ್ನ ಏಳಿಗೆಯನ್ನು ಕಂಡುಕೊಳ್ಳಲು ಸಾದ್ಯವಿದೆ.
(ಮಾಹಿತಿ ಸೆಲೆ: forbesindia.com)
(ಚಿತ್ರ ಸೆಲೆ: eduportal4u.blogspot.in)
ಇತ್ತೀಚಿನ ಅನಿಸಿಕೆಗಳು