ಚೂಟಿಯುಲಿಯಿಂದ ATM ಬಳಕೆ
– ವಿವೇಕ್ ಶಂಕರ್.
ಹಣದ ಹಿಂಪಡೆತಕ್ಕೆ ನಾವೆಲ್ಲ ಹಣಗೂಡುಗಳಿಗೆ (ATM) ಹೋಗುತ್ತೇವೆ. ಅಲ್ಲಿ ಕಾರ‍್ಡನ್ನು ಬಳಸಿ ನಾವು ದುಡ್ಡನ್ನು ಹಿಂಪಡೆಯುತ್ತೇವೆ. ಆದರೆ ಇತ್ತೀಚೆಗೆ ಕೆಲವು ಹಣಮನೆಯವರು ದುಡ್ಡು ಹಿಂಪಡೆತದ ಬಿರುಸು ಹೆಚ್ಚು ಮಾಡುವುದರ ಸಲುವಾಗಿ ಒಂದು ಹೊಸ ಹೊಳಹು ಮುಂದಿಟ್ಟಿದ್ದಾರೆ. ಅದೇನೆಂದರೆ ಚೂಟಿಯುಲಿಗಳ ನೆರವಿನಿಂದ ದುಡ್ಡನ್ನು ಹಿಂಪಡೆಯುವುದು. ವಿನ್ಟ್ರಸ್ಟ್ (Wintrust), ಬಿ.ಎಂ.ಓ ಹಾರಿಸ್ (BMO Harris) ಹಾಗೂ ಸಿಟಿ ನಾಶನೆಲ್ (City National) ಎಂಬ ಮೂರು ಹಣಮನೆಗಳು ಈ ಏರ‍್ಪಾಟಿನ ಸಲುವಾಗಿ ಕೆಲಸ ಮಾಡುತ್ತಿವೆ.
ಚೂಟಿಯುಲಿಗಳ ಬಳಕೆ ಮಾಡಿದರೆ ದುಡ್ಡಿನ ಹಿಂಪಡೆತ ಬೇಗ ನಡೆಯುತ್ತದೆ. ಕಾರ‍್ಡನ್ನು ಬಳಕೆ ಮಾಡಿ ಮೂವತ್ತರಿಂದ ನಲವತ್ತು ಚಣಗಳಾಗುವ ಈ ಕೆಲಸ ಚೂಟಿಯುಲಿಗಳ ಬಳಕೆಯಿಂದ ಒಂಬತ್ತು ಚಣಗಳಿಗಿಂತಲೂ ಕಡಿಮೆ ಹೊತ್ತಿನಲ್ಲೇ ಮುಗಿಸಬಹುದು. ಹೊತ್ತಿನ ಉಳಿತಾಯ ಒಂದೆಡೆಯಾದರೆ, ಇನ್ನೊಂದೆಡೆ ಇಂತ ನಡವಳಿಗಳಿಗೆ (transactions) ಹೆಚ್ಚು ಕಾಪು ಕೂಡ ಇರುತ್ತದೆ. ಇದರ ಅಕ್ಕುಗಳನ್ನು (advantage) ತಿಳಿದದ್ದಾಯಿತು, ಈಗ ಇದು ಹೇಗೆ ಕೆಲಸ ಮಾಡುತ್ತದೆ ಅಂತ ಒಮ್ಮೆ ನೋಡೋಣ.
ಚೂಟಿಯುಲಿಗಳಲ್ಲಿ ಇದೊಂದು ಬಳಕ (App), ಇದರ ನೆರವಿನಿಂದ ಬಳಕೆದಾರರು ದುಡ್ಡನ್ನು ಹಿಂಪಡೆಯಬಹುದು. ಬಳಕೆದಾರರು ದುಡ್ಡನ್ನು ಹಿಂಪಡೆಯುವ ಕೋರಿಕೆಯನ್ನು ಮುಂಚೆಯೇ ಸಲ್ಲಿಸಬಹುದು ಇಲ್ಲವೇ ಹಣಗೂಡಿಗೆ ಹೋದ ಮೇಲೆ, ಸಾಲಿನಲ್ಲಿ ನಿಂತಾಗ ಕೂಡ ಸಲ್ಲಿಸಬಹುದು. ಇದಾದ ಮೇಲೆ ಅವರು ಒಂದು ಗುರುತನ್ನು(code) ಚೂಟಿಯ ತೆರೆ ಮೇಲೆ ಕಣ್ಣಾಡಿಸಿದ(scan) ಮೇಲೆ ದುಡ್ಡನ್ನು ಹಿಂಪಡೆಯಬಹುದು.
ಈ ಏರ‍್ಪಾಟನ್ನು ಆಗಲೇ ಒರೆಹಚ್ಚಲಾಗಿದೆ. ಇದನ್ನು 2014 ನೆಯ ಕೊನೆಯೊಳಗೆ ಜಾರಿಗೆ ತರಲಾಗುವುದಂತೆ.
(ಒಸಗೆಯ ಸೆಲೆ: popsci)
ಇತ್ತೀಚಿನ ಅನಿಸಿಕೆಗಳು